Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 39

ರಚನೆಗಾರ: ದಾವೀದ.

39 “ನಾನು ಜಾಗರೂಕನಾಗಿ ಮಾತಾಡುವೆ.
    ನನ್ನ ನಾಲಿಗೆ ನನ್ನನ್ನು ಪಾಪಕ್ಕೆ ಸಿಕ್ಕಿಸದಂತೆ ನೋಡಿಕೊಳ್ಳುವೆ.
    ದುಷ್ಟರ ಮಧ್ಯದಲ್ಲಿ ಬಾಯಿಮುಚ್ಚಿಕೊಂಡಿರುವೆ” ಅಂದುಕೊಂಡೆನು.

ನಾನು ಮೌನವಾಗಿದ್ದೆನು.
    ಒಳ್ಳೆಯದನ್ನೂ ಹೇಳದೆ ಸುಮ್ಮನಿದ್ದೆನು.
    ಆದರೆ ನನ್ನ ವೇದನೆಯು ಹೆಚ್ಚಾಯಿತು.
ನಾನು ಬಹುಕೋಪಗೊಂಡಿದ್ದೆ.
    ಅದರ ಕುರಿತು ಆಲೋಚಿಸಿದಷ್ಟೂ ಕೋಪವು ಅಧಿಕವಾಯಿತು.
    ಆಗ ನಾನು ಬಾಯಿತೆರೆದು,

ಯೆಹೋವನೇ, ನನ್ನ ಗತಿಯನ್ನು ತಿಳಿಸು!
    ನನ್ನ ಈ ಅಲ್ಪ ಜೀವಿತವು ಇನ್ನೆಷ್ಟು ಕಾಲವಿರುವುದು?
    ನಾನೆಷ್ಟು ಕಾಲ ಬದುಕುವೆ?
ನೀನು ನನಗೆ ಕೇವಲ ಅಲ್ಪಾಯುಷ್ಯವನ್ನು ಕೊಟ್ಟಿರುವೆ.
    ನನ್ನ ಅಲ್ಪ ಜೀವಿತವು ನಿನ್ನ ದೃಷ್ಟಿಯಲ್ಲಿ ಗಣನೆಗೂ ಬಾರದು.
ಮನುಷ್ಯನ ಜೀವಿತವು ಕೇವಲ ಮೋಡದಂತೆ ಕ್ಷಣಿಕವಾಗಿದೆ.
    ಯಾವನೂ ಸದಾಕಾಲ ಬದುಕುವುದಿಲ್ಲ!

ನಮ್ಮ ಜೀವಿತವು ಕೇವಲ ಕನ್ನಡಿಯ ಪ್ರತಿಬಿಂಬದಂತಿದೆ.
    ನಾವು ಗಡಿಬಿಡಿಯಿಂದ ಆಸ್ತಿಯನ್ನು ಕೂಡಿಸಿಟ್ಟುಕೊಳ್ಳುತ್ತೇವೆ.
    ನಾವು ಸತ್ತ ಮೇಲೆ ಅವು ಯಾರ ಪಾಲಾಗುವುದೋ ನಮಗೆ ತಿಳಿಯದು.

ಯೆಹೋವನೇ, ನನಗಿರುವ ನಿರೀಕ್ಷೆ ಯಾವುದು?
    ನನ್ನ ನಿರೀಕ್ಷೆಯು ನೀನೇ.
ನನ್ನ ಎಲ್ಲಾ ಅಪರಾಧಗಳಿಂದ ನನ್ನನ್ನು ಬಿಡಿಸು.
    ಮೂರ್ಖರ ನಿಂದೆಗೆ ನನ್ನನ್ನು ಗುರಿಮಾಡಬೇಡ.
ನಾನು ಬಾಯಿತೆರೆದು ಮಾತಾಡುವುದಿಲ್ಲ.
    ನೀನು ನ್ಯಾಯಕ್ಕೆ ತಕ್ಕಂತೆ ಮಾಡಿರುವೆ.
10 ನನ್ನನ್ನು ಶಿಕ್ಷಿಸುವುದನ್ನು ನಿಲ್ಲಿಸು.
    ಇಲ್ಲವಾದರೆ, ನಾನು ಸತ್ತೇ ಹೋಗುವೆನು.
11 ನೀನು ಅಪರಾಧಗಳಿಗೆ ತಕ್ಕಂತೆ ಜನರನ್ನು ದಂಡಿಸಿ, ನಿನ್ನ ಜೀವಮಾರ್ಗವನ್ನು ಅವರಿಗೆ ಉಪದೇಶಿಸುವೆ.
    ನುಸಿಯು ಬಟ್ಟೆಯನ್ನು ತಿಂದುಬಿಡುವಂತೆ ಜನರಿಗೆ ಇಷ್ಟವಾದವುಗಳನ್ನು ನೀನು ನಾಶಮಾಡುವೆ.
    ಹೌದು, ನಮ್ಮ ಜೀವಿತಗಳು ಬೇಗನೆ ಕಣ್ಮರೆಯಾಗುವ ಒಂದು ಚಿಕ್ಕ ಮೋಡದಂತಿವೆ.

12 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳು!
    ನನ್ನ ಮೊರೆಗೆ ಕಿವಿಗೊಡು!
    ನನ್ನ ಕಣ್ಣೀರನ್ನು ನೋಡು!
ನಾನು ಈ ಜೀವಿತವನ್ನು ಕೇವಲ ಒಬ್ಬ ಪ್ರಯಾಣಿಕನಂತೆ ನಿನ್ನೊಂದಿಗೆ ಸಾಗಿಸುತ್ತಿರುವೆ.
    ನನ್ನ ಎಲ್ಲಾ ಪೂರ್ವಿಕರಂತೆ, ನಾನು ಇಲ್ಲಿ ಕೇವಲ ಸ್ವಲ್ಪಕಾಲ ಜೀವಿಸುವೆನು.
13 ನೀನು ಕೋಪದಿಂದ ನನ್ನ ಕಡೆಗೆ ನೋಡಬೇಡ! ಸಾಯುವುದಕ್ಕಿಂತ ಮೊದಲು ನನಗೆ ಸಂತೋಷವಿರಲಿ.
    ಇನ್ನು ಸ್ವಲ್ಪಕಾಲದಲ್ಲಿ ನಾನು ಇಲ್ಲವಾಗುವೆನು!

ಯೋಬನು 28:12-29:10

12 “ಆದರೆ ಮನುಷ್ಯನು ಜ್ಞಾನವನ್ನು ಕಂಡುಕೊಳ್ಳುವುದೆಲ್ಲಿ?
    ವಿವೇಕವು ದೊರೆಯುವ ಸ್ಥಳವೆಲ್ಲಿ?
13 ಜ್ಞಾನದ ಬೆಲೆಯು ಯಾರಿಗೂ ಗೊತ್ತಿಲ್ಲ.
    ಜನರು ನೆಲವನ್ನು ಅಗೆದು ಜ್ಞಾನವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ.
14 ‘ಜ್ಞಾನವು ನನ್ನೊಂದಿಗಿಲ್ಲ’ ಎಂದು ಆಳವಾದ ಸಾಗರವು ಹೇಳುತ್ತದೆ.
    ‘ಜ್ಞಾನವು ನನ್ನೊಂದಿಗಿಲ್ಲ’ ಎಂದು ಸಮುದ್ರವು ಹೇಳುತ್ತದೆ.
15 ಬಂಗಾರವನ್ನು ಕೊಟ್ಟು ಜ್ಞಾನವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ.
    ಇಡೀ ಲೋಕದ ಬೆಳ್ಳಿಯನ್ನು ಕೊಟ್ಟು ಜ್ಞಾನವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ.
16 ಓಫೀರ್ ದೇಶದ ಬಂಗಾರದಿಂದಾಗಲಿ ಅಮೂಲ್ಯವಾದ ಗೋಮೇಧಕ ರತ್ನದಿಂದಾಗಲಿ
    ಇಂದ್ರನೀಲಮಣಿಗಳಿಂದಾಗಲಿ ಜ್ಞಾನವನ್ನು ಕೊಂಡುಕೊಳ್ಳಲಾಗದು.
17 ಜ್ಞಾನವು ಬಂಗಾರಕ್ಕಿಂತಲೂ ಶ್ರೇಷ್ಠವಾದ ಗಾಜಿಗಿಂತಲೂ ಹೆಚ್ಚು ಬೆಲೆಬಾಳುತ್ತದೆ.
    ಬಂಗಾರದ ಆಭರಣಗಳು ಜ್ಞಾನವನ್ನು ಕೊಂಡುಕೊಳ್ಳಲಾರವು.
18 ಜ್ಞಾನವು ಹವಳಕ್ಕಿಂತಲೂ ಸ್ಪಟಿಕಕ್ಕಿಂತಲೂ ಹೆಚ್ಚು ಬೆಲೆ ಬಾಳುತ್ತದೆ.
    ಜ್ಞಾನವು ಮಾಣಿಕ್ಯಕ್ಕಿಂತಲೂ ಅಮೂಲ್ಯವಾಗಿದೆ.
19 ಇಥಿಯೋಪಿಯಾ ದೇಶದ ಪುಷ್ಯರಾಗವೂ ಜ್ಞಾನದಷ್ಟು ಅಮೂಲ್ಯವಲ್ಲ.
    ಶುದ್ಧಬಂಗಾರವನ್ನು ಕೊಟ್ಟು ಜ್ಞಾನವನ್ನು ಕೊಂಡುಕೊಳ್ಳಲು ಅಸಾಧ್ಯ.

20 “ಹೀಗಿರುವಲ್ಲಿ ಜ್ಞಾನವು ಎಲ್ಲಿಂದ ಬರುವುದು?
    ವಿವೇಕವು ಎಲ್ಲಿ ದೊರಕುವುದು?
21 ಜ್ಞಾನವು ಎಲ್ಲಾ ಜೀವಿಗಳಿಗೂ ಮರೆಯಾಗಿದೆ.
    ಆಕಾಶದ ಪಕ್ಷಿಗಳು ಸಹ ಅದನ್ನು ಕಾಣಲಾರವು.
22 ನಾಶಲೋಕವೂ ಮೃತ್ಯುವೂ,
    ‘ನಾವು ಜ್ಞಾನದ ಬಗ್ಗೆ ಸುದ್ದಿಗಳನ್ನು ಮಾತ್ರ ಕೇಳಿದ್ದೇವೆ’ ಎಂದು ಹೇಳುತ್ತವೆ.

23 “ಜ್ಞಾನದ ಮಾರ್ಗವನ್ನು ತಿಳಿದಿರುವವನು ದೇವರೊಬ್ಬನೇ.
    ಅದರ ವಾಸಸ್ಥಳವು ಗೊತ್ತಿರುವುದು ಆತನಿಗೊಬ್ಬನಿಗೇ.
24 ದೇವರು ಭೂಮಿಯ ಕಟ್ಟಕಡೆಯತನಕ ದೃಷ್ಟಿಸಿ
    ಆಕಾಶದ ಕೆಳಗಿರುವ ಪ್ರತಿಯೊಂದನ್ನೂ ನೋಡುವವನಾಗಿದ್ದಾನೆ.
25 ಆತನು ಗಾಳಿಗೆ ಶಕ್ತಿಯನ್ನು ಕೊಟ್ಟಾಗಲೂ
    ಸಾಗರಗಳ ವಿಸ್ತೀರ್ಣವನ್ನು ನಿರ್ಧರಿಸಿದಾಗಲೂ
26 ಮಳೆಯನ್ನೂ ಗುಡುಗುಸಿಡಿಲುಗಳ ಮಳೆಯನ್ನೂ
    ಎಲ್ಲಿಗೆ ಕಳುಹಿಸಬೇಕೆಂದು ನಿರ್ಧರಿಸಿದಾಗಲೂ
27 ಜ್ಞಾನವನ್ನು ಕಂಡುಕೊಂಡನು;
    ಅದರ ಬೆಲೆಯನ್ನು ಪರೀಕ್ಷಿಸಿ ತಿಳಿದುಕೊಂಡನು; ಅದಕ್ಕೆ ತನ್ನ ಒಪ್ಪಿಗೆಯನ್ನು ಸೂಚಿಸಿದನು.
28 ಇದಲ್ಲದೆ ದೇವರು ಮನುಷ್ಯರಿಗೆ,
    ‘ಯೆಹೋವನಲ್ಲಿ ಭಯಭಕ್ತಿಯಿಂದಿರುವುದೇ ಜ್ಞಾನ;
    ದುಷ್ಟತನವನ್ನು ತೊರೆದುಬಿಡುವುದೇ ವಿವೇಕ’ ಎಂದು ಹೇಳಿದನು.”

ಯೋಬನು ಮುಂದುವರಿಸಿದ ಮಾತು

29 ಯೋಬನು ಮಾತನ್ನು ಮುಂದುವರಿಸಿ ಹೀಗೆಂದನು:

“ನನ್ನ ಜೀವಿತವು ಕೆಲವು ತಿಂಗಳುಗಳ ಮುಂಚೆ ಇದ್ದಂತೆ ಈಗಲೂ ಇದ್ದಿದ್ದರೆ ಎಷ್ಟೋ ಒಳ್ಳೆಯದಿತ್ತು.
    ಆ ದಿನಗಳಲ್ಲಿ ದೇವರು ನನ್ನನ್ನು ಕಾಯುತ್ತಾ ಪರಿಪಾಲಿಸುತ್ತಿದ್ದನು.
ಆ ದಿನಗಳಲ್ಲಿ ದೇವರ ದೀಪವು ನನ್ನ ಮೇಲೆ ಪ್ರಕಾಶಿಸುತ್ತಿದ್ದ ಕಾರಣ
    ನಾನು ಕಾರ್ಗತ್ತಲೆಯಲ್ಲೂ ಸಂಚರಿಸುತ್ತಿದ್ದೆನು.
ಆ ದಿನಗಳು ನನ್ನ ಜೀವಿತದ ಸುಗ್ಗಿಕಾಲವಾಗಿದ್ದವು;
    ಆ ದಿನಗಳಲ್ಲಿ ದೇವರ ಸ್ನೇಹವು ನನ್ನೊಂದಿಗೂ ನನ್ನ ಮನೆಯವರೊಂದಿಗೂ ಇತ್ತು.
ಆ ದಿನಗಳಲ್ಲಿ ಸರ್ವಶಕ್ತನಾದ ದೇವರು ಇನ್ನೂ ನನ್ನೊಂದಿಗಿದ್ದನು;
    ನನ್ನ ಮಕ್ಕಳು ನನ್ನ ಸುತ್ತಲೂ ಇದ್ದರು.
ಆ ದಿನಗಳಲ್ಲಿ ನನ್ನ ಜೀವಿತವು ತುಂಬ ಚೆನ್ನಾಗಿತ್ತು.
    ನನ್ನ ಮಾರ್ಗಗಳು ಕೆನೆಯಿಂದ ತುಂಬಿರುವಂತೆಯೂ
    ಬಂಡೆಗಳು ನನಗಾಗಿ ಆಲೀವ್ ಎಣ್ಣೆಯ ನದಿಗಳನ್ನೇ ಹರಿಸುತ್ತಿರುವಂತೆಯೂ ನನ್ನ ಜೀವಿತವಿತ್ತು.

“ಆ ದಿನಗಳಲ್ಲಿ ನಾನು ನಗರದ ಹೆಬ್ಬಾಗಿಲಿನ ಬಳಿಗೆ ಹೋಗಿ,
    ಸಾರ್ವಜನಿಕ ಸಭಾಸ್ಥಳದಲ್ಲಿ ಪಟ್ಟಣದ ಹಿರಿಯರೊಂದಿಗೆ ಕುಳಿತುಕೊಳ್ಳುತ್ತಿದ್ದೆನು.
ಅಲ್ಲಿದ್ದ ಜನರೆಲ್ಲರೂ ನನ್ನನ್ನು ಗೌರವಿಸುತ್ತಿದ್ದರು;
    ಯೌವನಸ್ಥರು ನನ್ನನ್ನು ಕಂಡು ಹಿಂದಕ್ಕೆ ಸರಿದು ದಾರಿಮಾಡಿಕೊಡುತ್ತಿದ್ದರು;
    ವೃದ್ಧರು ಗೌರವದಿಂದ ಎದ್ದುನಿಂತುಕೊಳ್ಳುತ್ತಿದ್ದರು.
ಮಾತಾಡುತ್ತಿದ್ದ ಜನನಾಯಕರು
    ತಮ್ಮ ಬಾಯಿ ಮೇಲೆ ಕೈಯಿಟ್ಟುಕೊಂಡು ಮೌನವಾಗುತ್ತಿದ್ದರು.
10 ಪ್ರಮುಖನಾಯಕರುಗಳು ಸಹ ನಾಲಿಗೆಯು ಸಿಕ್ಕಿಕೊಂಡಂತೆ
    ತಮ್ಮ ಧ್ವನಿಯನ್ನು ಕಡಿಮೆಮಾಡುತ್ತಿದ್ದರು.

ಪ್ರಕಟನೆ 8:1-5

ಏಳನೆಯ ಮುದ್ರೆ

ಕುರಿಮರಿಯಾದಾತನು ಏಳನೆಯ ಮುದ್ರೆಯನ್ನು ಒಡೆದನು. ಆಗ ಪರಲೋಕದಲ್ಲಿ ಅರ್ಧ ಗಂಟೆಯ ಕಾಲ ನಿಶ್ಯಬ್ದವಾಯಿತು. ದೇವರ ಎದುರಿನಲ್ಲಿ ಏಳು ದೇವದೂತರು ನಿಂತಿರುವುದನ್ನು ನಾನು ನೋಡಿದೆನು. ಅವರಿಗೆ ಏಳು ತುತೂರಿಗಳನ್ನು ಕೊಡಲಾಯಿತು.

ಮತ್ತೊಬ್ಬ ದೇವದೂತನು ಬಂದು, ಯಜ್ಞವೇದಿಕೆಯ ಬಳಿ ನಿಂತನು. ಈ ದೇವದೂತನು ಧೂಪವಿದ್ದ ಬಂಗಾರದ ಪಾತ್ರೆಯನ್ನು ಹಿಡಿದುಕೊಂಡಿದ್ದನು. ದೇವರ ಪರಿಶುದ್ಧ ಜನರೆಲ್ಲರ ಪ್ರಾರ್ಥನೆಗಳ ಜೊತೆಯಲ್ಲಿ ಅರ್ಪಿಸುವುದಕ್ಕಾಗಿ ಅವನಿಗೆ ಬಹಳ ಧೂಪವನ್ನು ಕೊಡಲಾಯಿತು. ಈ ದೇವದೂತನು ಸಿಂಹಾಸನದ ಎದುರಿನಲ್ಲಿರುವ ಚಿನ್ನದ ಯಜ್ಞವೇದಿಕೆಯ ಮೇಲೆ ಈ ಧೂಪವನ್ನು ಇಟ್ಟನು. ಧೂಪದ ಹೊಗೆಯು ದೇವದೂತನ ಕೈಯಿಂದ ದೇವಜನರ ಪ್ರಾರ್ಥನೆಗಳೊಂದಿಗೆ ದೇವರ ಬಳಿಗೆ ಏರಿಹೋಯಿತು. ಆಗ ದೇವದೂತನು ಧೂಪವಿದ್ದ ಪಾತ್ರೆಯನ್ನು ಯಜ್ಞವೇದಿಕೆಯ ಬೆಂಕಿಯಿಂದ ತುಂಬಿಸಿ ಅದನ್ನು ಭೂಮಿಯ ಮೇಲೆ ಎಸೆದನು. ಆಗ ಮಿಂಚು ಗುಡುಗುಗಳೂ ಮತ್ತಿತರ ಧ್ವನಿಗಳೂ ಭೂಕಂಪಗಳೂ ಉಂಟಾದವು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International