Revised Common Lectionary (Semicontinuous)
ಯೋಬನ ಉತ್ತರ
23 ಆಗ ಯೋಬನು ಹೀಗೆಂದನು:
2 “ನಾನಿನ್ನೂ ಸಂಕಟದಲ್ಲಿರುವುದರಿಂದ
ಈ ಹೊತ್ತು ಸಹ ನಾನು ದೂರು ಹೇಳುವೆನು.
3 ಆಹಾ, ದೇವರ ದರ್ಶನವು ನನಗೆ ಎಲ್ಲಿ ಆಗುವುದು?
ಆತನ ಬಳಿಗೆ ನಾನು ಹೇಗೆ ಹೋಗಬೇಕು? ನನಗೆ ಗೊತ್ತಾಗಿದ್ದರೆ ಎಷ್ಟೋ ಮೇಲು!
4 ಆಗ ನಾನು ದೇವರಿಗೆ ನನ್ನ ವ್ಯಾಜ್ಯದ ಬಗ್ಗೆ ವಿವರಿಸುತ್ತಿದ್ದೆನು;
ನಾನು ನಿರಪರಾಧಿಯೆಂದು ನಿರೂಪಿಸಲು ನನ್ನ ಬಾಯನ್ನು ವಾದಗಳಿಂದ ತುಂಬಿಸಿಕೊಳ್ಳುತ್ತಿದ್ದೆನು.
5 ದೇವರ ಪ್ರತ್ಯುತ್ತರವನ್ನು ನಾನು ಕೇಳಬಯಸುವೆ.
ಆತನ ಉತ್ತರಗಳನ್ನು ಅರ್ಥಮಾಡಿಕೊಳ್ಳಬಯಸುವೆ.
6 ದೇವರು ತನ್ನ ಮಹಾಶಕ್ತಿಯನ್ನು ನನಗೆ ವಿರೋಧವಾಗಿ ಬಳಸುವನೇ? ಇಲ್ಲ,
ಆತನು ನನಗೆ ಕಿವಿಗೊಡುವನು!
7 ನಾನು ಯಥಾರ್ಥನಾಗಿರುವೆ. ದೇವರು ನನ್ನ ವಿಷಯವನ್ನು ಕೇಳುವನು;
ನನ್ನ ನ್ಯಾಯಾಧಿಪತಿಯು ನನ್ನನ್ನು ಬಿಡುಗಡೆ ಮಾಡುವನು.
8 “ಆದರೆ, ನಾನು ಪೂರ್ವಕ್ಕೆ ಹೋದರೂ ದೇವರು ಅಲ್ಲಿಲ್ಲ.
ನಾನು ಪಶ್ಚಿಮಕ್ಕೆ ಹೋದರೂ ದೇವರು ಅಲ್ಲಿಯೂ ನನಗೆ ಕಾಣುವುದಿಲ್ಲ.
9 ದೇವರು ಉತ್ತರದಿಕ್ಕಿನಲ್ಲಿ ಕಾರ್ಯನಿರತನಾಗಿರುವಾಗಲೂ ನನಗೆ ಕಾಣುವುದಿಲ್ಲ.
ದೇವರು ದಕ್ಷಿಣ ದಿಕ್ಕಿಗೆ ತಿರುಗಿಕೊಂಡಾಗಲೂ ನನಗೆ ಕಾಣುವುದಿಲ್ಲ.
16 ನನ್ನ ಹೃದಯವನ್ನು ಕುಂದಿಸಿದವನೂ ದೇವರೇ.
ನನ್ನನ್ನು ಭಯಭ್ರಾಂತನನ್ನಾಗಿ ಮಾಡಿದವನೂ ಸರ್ವಶಕ್ತನಾದ ದೇವರೇ.
17 ಕಪ್ಪು ಮೋಡವು ನನ್ನ ಮುಖವನ್ನು ಕವಿದುಕೊಳ್ಳುವಂತೆ ಆಪತ್ತುಗಳು ನನಗೆ ಸಂಭವಿಸಿದವು.
ಆದರೆ ಕಾರ್ಗತ್ತಲೆಯೂ ನನ್ನನ್ನು ಮೌನಗೊಳಿಸಲಾರದು.
ರಚನೆಗಾರ: ದಾವೀದ.
22 ನನ್ನ ದೇವರೇ, ನನ್ನ ದೇವರೇ! ಯಾಕೆ ನನ್ನನ್ನು ತೊರೆದಿರುವೆ?
ನನ್ನನ್ನು ರಕ್ಷಿಸದೆ ಯಾಕೆ ಬಹುದೂರವಾಗಿರುವೆ!
ಸಹಾಯಕ್ಕಾಗಿ ನಾನು ಗೋಳಾಡುತ್ತಿದ್ದರೂ ಕೇಳದೆ ಯಾಕೆ ಬಹದೂರವಾಗಿರುವೆ?
2 ನನ್ನ ದೇವರೇ, ಹಗಲಿನಲ್ಲಿ ನಾನು ನಿನ್ನನ್ನು ಕೂಗಿಕೊಂಡೆನು,
ಆದರೂ ನೀನು ನನಗೆ ಉತ್ತರಿಸಲಿಲ್ಲ.
ರಾತ್ರಿಯಲ್ಲೂ ನಿನ್ನನ್ನು ಕೂಗಿಕೊಳ್ಳುತ್ತಲೇ ಇದ್ದೆನು.
3 ದೇವರೇ, ಪರಿಶುದ್ಧನು ನೀನೇ.
ನೀನು ರಾಜನಂತೆ ಕುಳಿತಿರುವೆ.
ಇಸ್ರೇಲರ ಸ್ತುತಿಗಳೇ ನಿನ್ನ ಸಿಂಹಾಸನ.
4 ನಮ್ಮ ಪೂರ್ವಿಕರು ನಿನ್ನಲ್ಲಿ ಭರವಸವಿಟ್ಟಿದ್ದರು.
ಅವರು ನಿನ್ನಲ್ಲಿಯೇ ಭರವಸವಿಟ್ಟಿದ್ದರು, ನೀನು ಅವರನ್ನು ರಕ್ಷಿಸಿದೆ.
5 ನಮ್ಮ ಪೂರ್ವಿಕರು ನಿನ್ನಲ್ಲಿ ಮೊರೆಯಿಟ್ಟಾಗ ಅವರನ್ನು ಶತ್ರುಗಳಿಂದ ಬಿಡಿಸಿದೆ.
ನಿನ್ನಲ್ಲಿ ಭರವಸವಿಟ್ಟಿದ್ದ ಅವರಿಗೆ ನಿರಾಶೆಯಾಗಲಿಲ್ಲ.
6 ಹೀಗಿರಲು, ನಾನು ಹುಳವೇ? ನಾನು ಮನುಷ್ಯನಲ್ಲವೇ?
ನನ್ನ ವಿಷಯದಲ್ಲಿ ಜನರು ನಾಚಿಕೆಪಡುತ್ತಾರೆ; ಅವರು ನನ್ನನ್ನು ತಿರಸ್ಕರಿಸುತ್ತಾರೆ.
7 ನನ್ನನ್ನು ನೋಡಿದವರೆಲ್ಲರೂ ಗೇಲಿಮಾಡುವರು.
ಅವರು ಓರೇ ತುಟಿಮಾಡಿ ತಲೆಯಾಡಿಸುತ್ತಾ,
8 “ಯೆಹೋವನಿಗೆ ಮೊರೆಯಿಡು,
ಆತನು ನಿನ್ನನ್ನು ರಕ್ಷಿಸಬಹುದು.
ಆತನು ನಿನ್ನನ್ನು ಬಹಳವಾಗಿ ಇಷ್ಟಪಡುವುದಾದರೆ ನಿನ್ನನ್ನು ಖಂಡಿತವಾಗಿ ರಕ್ಷಿಸುವನು” ಎಂದು ಹೇಳುತ್ತಾರೆ.
9 ನಾನಂತೂ ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ.
ಹುಟ್ಟಿದ ದಿನದಿಂದಲೂ ನನ್ನನ್ನು ಪರಿಪಾಲಿಸಿದವನು ನೀನೇ.
ನಾನಿನ್ನೂ ತಾಯಿಯ ಗರ್ಭದಲ್ಲಿದ್ದಾಗ ನನಗೆ ಭರವಸೆ ನೀಡಿ ಸಂತೈಸಿದವನು ನೀನೇ.
10 ಹುಟ್ಟಿದ ದಿನದಿಂದಲೂ ನೀನೇ ನನ್ನ ದೇವರಾಗಿರುವೆ.
ತಾಯಿಯ ಗರ್ಭದಿಂದ ಬಂದಂದಿನಿಂದಲೂ ನನ್ನನ್ನು ಪರಿಪಾಲಿಸಿದವನು ನೀನೇ.
11 ಹೀಗಿರಲು, ನನ್ನನ್ನು ತೊರೆಯಬೇಡ!
ಆಪತ್ತು ಸಮೀಪಿಸಿದೆ, ನನಗೆ ಸಹಾಯಮಾಡಲು ಯಾರೂ ಇಲ್ಲ.
12 ಜನರು ನನ್ನನ್ನು ಸುತ್ತುಗಟ್ಟಿದ್ದಾರೆ;
ಅವರು ಬಲಿಷ್ಠವಾದ ಹೋರಿಗಳಂತಿದ್ದಾರೆ.
13 ಪ್ರಾಣಿಯೊಂದನ್ನು ಸೀಳಿಹಾಕುತ್ತಾ ಗರ್ಜಿಸುವ ಸಿಂಹದಂತೆ
ಅವರ ಬಾಯಿಗಳು ಅಗಲವಾಗಿ ತೆರೆದಿವೆ.
14 ನೆಲದ ಮೇಲೆ ಸುರಿದ ನೀರಿನಂತೆ
ನನ್ನ ಬಲವು ಇಲ್ಲವಾಗಿದೆ;
ನನ್ನ ಮೂಳೆಗಳೆಲ್ಲಾ ಸಡಿಲಗೊಂಡಿವೆ;
ಹೃದಯವು ಮೇಣದಂತೆ ಕರಗಿಹೋಗಿದೆ.
15 ನನ್ನ ಶಕ್ತಿಯು ಒಡೆದುಹೋದ ಮಡಿಕೆಯ ಒಣ ತುಂಡಿನಂತಿದೆ.
ನನ್ನ ನಾಲಿಗೆಯು ಬಾಯಿ ಮೇಲ್ಭಾಗಕ್ಕೆ ಅಂಟಿಕೊಳ್ಳುತ್ತಿದೆ.
ನೀನು ನನ್ನನ್ನು ಮಣ್ಣಿಗೆ ಸೇರಿಸಿರುವೆ.
12 ದೇವರ ವಾಕ್ಯವು ಸಜೀವವಾದದ್ದು, ಕಾರ್ಯ ಸಾಧಕವಾದದ್ದು. ಅದು ಅತ್ಯಂತ ಹರಿತವಾದ ಖಡ್ಗಕ್ಕಿಂತಲೂ ಹರಿತವಾಗಿದ್ದು ನಾಟಿಕೊಳ್ಳುತ್ತದೆ. ಆತ್ಮಪ್ರಾಣಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುತ್ತದೆ; ನಮ್ಮ ಹೃದಯದ ಉದ್ದೇಶಗಳನ್ನು ಮತ್ತು ಆಲೋಚನೆಗಳನ್ನು ವಿವೇಚಿಸುತ್ತದೆ. 13 ದೇವರ ದೃಷ್ಟಿಗೆ ಯಾವುದೂ ಮುಚ್ಚುಮರೆಯಾಗಿಲ್ಲ. ಆತನ ಕಣ್ಣೆದುರಿನಲ್ಲಿ ಪ್ರತಿಯೊಂದೂ ತೆರೆಯಲ್ಪಟ್ಟು ಬಟ್ಟಬಯಲಾಗಿವೆ. ನಾವು ನಮ್ಮ ಜೀವಿತದ ಬಗ್ಗೆ ಲೆಕ್ಕ ಒಪ್ಪಿಸಬೇಕಾಗಿರುವುದು ಆತನಿಗೇ.
ದೇವರ ಸನ್ನಿಧಿಗೆ ಬರಲು ಯೇಸುವಿನ ಸಹಾಯ
14 ಪರಲೋಕಕ್ಕೆ ಏರಿಹೋದ ಪ್ರಧಾನ ಯಾಜಕನೊಬ್ಬನು ನಮಗಿದ್ದಾನೆ. ಆತನೇ ದೇವರ ಮಗನಾದ ಯೇಸು. ಆದ್ದರಿಂದ ನಮಗಿರುವ ನಂಬಿಕೆಯಲ್ಲೇ ದೃಢವಾಗಿ ಸಾಗೋಣ. 15 ನಮ್ಮ ಪ್ರಧಾನ ಯಾಜಕನಾಗಿರುವ ಯೇಸು ನಮ್ಮ ದೌರ್ಬಲ್ಯವನ್ನು ಅರ್ಥಮಾಡಿಕೊಳ್ಳಲು ಸಮರ್ಥನಾಗಿದ್ದಾನೆ. ಆತನು ಈ ಲೋಕದಲ್ಲಿ ಜೀವಿಸಿದ್ದಾಗ, ಸರ್ವವಿಷಯಗಳಲ್ಲಿ ನಮ್ಮಂತೆಯೇ ಶೋಧನೆಗೆ ಗುರಿಯಾದರೂ ಪಾಪಮಾಡಲಿಲ್ಲ. 16 ಆದ್ದರಿಂದ ದೇವರ ಕೃಪಾಸಿಂಹಾಸನದ ಬಳಿಗೆ ಸಂಕೋಚಪಡದೆ ಬರೋಣ. ಕೊರತೆಯಲ್ಲಿರುವಾಗ ನಮಗೆ ಬೇಕಾದ ಸಹಾಯಕ್ಕಾಗಿ ಕೃಪೆಯನ್ನೂ ಕರುಣೆಯನ್ನೂ ಅಲ್ಲಿ ಹೊಂದಿಕೊಳ್ಳುವೆವು.
ಯೇಸುವನ್ನು ಹಿಂಬಾಲಿಸಲು ಹಿಂಜರಿದ ಶ್ರೀಮಂತ
(ಮತ್ತಾಯ 19:16-30; ಲೂಕ 18:18-30)
17 ಯೇಸು ಅಲ್ಲಿಂದ ಹೊರಡಬೇಕೆಂದಿದ್ದಾಗ ಒಬ್ಬನು ಓಡಿಬಂದು, ಆತನ ಮುಂದೆ ತನ್ನ ಮೊಣಕಾಲೂರಿ, “ಒಳ್ಳೆಯ ಉಪದೇಶಕನೇ, ನಿತ್ಯಜೀವವನ್ನು ಪಡೆಯಲು ನಾನು ಏನು ಮಾಡಬೇಕು?” ಎಂದು ಕೇಳಿದನು.
18 ಯೇಸು ಅದಕ್ಕೆ, “ನೀನು ನನ್ನನ್ನು ಒಳ್ಳೆಯವನೆಂದು ಕರೆಯುವುದೇಕೆ? ಯಾವ ಮನುಷ್ಯನೂ ಒಳ್ಳೆಯವನಲ್ಲ. ದೇವರು ಮಾತ್ರ ಒಳ್ಳೆಯವನು. 19 ನೀನು ನಿತ್ಯಜೀವ ಹೊಂದಬೇಕಾದರೆ ನಿನಗೆ ತಿಳಿದೇ ಇರುವ ಈ ಆಜ್ಞೆಗಳನ್ನು ಪಾಲಿಸು: ‘ಕೊಲೆ ಮಾಡಬೇಡ, ವ್ಯಭಿಚಾರ ಮಾಡಬೇಡ, ಕದಿಯಬೇಡ, ಸುಳ್ಳು ಹೇಳಬೇಡ, ಮೋಸ ಮಾಡಬೇಡ, ಅಲ್ಲದೆ ನಿನ್ನ ತಂದೆತಾಯಿಯರನ್ನು ಸನ್ಮಾನಿಸು’” ಎಂದು ಉತ್ತರಿಸಿದನು.
20 ಅವನು, “ಉಪದೇಶಕನೇ, ನಾನು ಬಾಲ್ಯದಿಂದಲೂ ಈ ಆಜ್ಞೆಗಳಿಗೆಲ್ಲಾ ವಿಧೇಯನಾಗಿದ್ದೇನೆ” ಎಂದನು.
21 ಯೇಸು ಆ ಮನುಷ್ಯನನ್ನು ಪ್ರೀತಿಯಿಂದ ದೃಷ್ಟಿಸಿನೋಡಿ, “ನೀನು ಮಾಡಬೇಕಾದ ಕಾರ್ಯವೊಂದಿದೆ. ಹೋಗಿ, ನಿನ್ನ ಆಸ್ತಿಯನ್ನೆಲ್ಲಾ ಮಾರಿ, ಬಂದ ಹಣವನ್ನು ಬಡವರಿಗೆ ಕೊಡು. ನಿನಗೆ ಪರಲೋಕದಲ್ಲಿ ಪ್ರತಿಫಲ ಇರುವುದು. ನಂತರ ಬಂದು, ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.
22 ಯೇಸುವಿನ ಈ ಮಾತನ್ನು ಕೇಳಿ ಅವನು ನಿರಾಶೆಯಿಂದ ದುಃಖಗೊಂಡು ಹೊರಟುಹೋದನು. ಬಹಳ ಧನವಂತನಾಗಿದ್ದ ಅವನು ತನ್ನ ಅಪಾರ ಆಸ್ತಿಯನ್ನು ಮಾರಲು ಇಷ್ಟಪಡಲಿಲ್ಲ.
23 ಬಳಿಕ ಯೇಸು ತನ್ನ ಶಿಷ್ಯರ ಕಡೆಗೆ ನೋಡಿ, “ಧನವಂತನು ದೇವರ ರಾಜ್ಯವನ್ನು ಪ್ರವೇಶಿಸುವುದು ಬಹಳ ಕಷ್ಟ” ಎಂದನು.
24 ಯೇಸುವಿನ ಈ ಮಾತನ್ನು ಕೇಳಿ ಶಿಷ್ಯರು ಬೆರಗಾದರು. ಆದರೆ ಯೇಸು ಮತ್ತೆ, “ನನ್ನ ಮಕ್ಕಳೇ, ದೇವರ ರಾಜ್ಯವನ್ನು ಪ್ರವೇಶಿಸುವುದು ಬಹಳ ಕಷ್ಟ! 25 ಶ್ರೀಮಂತರು ದೇವರ ರಾಜ್ಯವನ್ನು ಪ್ರವೇಶಿಸುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನ ಮೂಲಕ ನುಸುಳಿ ಹೋಗುವುದು ಸುಲಭ!” ಎಂದನು.
26 ಶಿಷ್ಯರು ಇನ್ನೂ ಬೆರಗಾಗಿ, ಒಬ್ಬರಿಗೊಬ್ಬರು, “ಹಾಗಾದರೆ ರಕ್ಷಣೆಹೊಂದಲು ಯಾರಿಗೆ ಸಾಧ್ಯ?” ಎಂದು ಮಾತಾಡಿಕೊಂಡರು.
27 ಯೇಸು ಶಿಷ್ಯರ ಕಡೆಗೆ ನೋಡಿ, “ಇದು ಮನುಷ್ಯರಿಗಷ್ಟೇ ಅಸಾಧ್ಯ, ದೇವರಿಗಲ್ಲ” ಎಂದನು.
28 ಪೇತ್ರನು ಯೇಸುವಿಗೆ, “ನಿನ್ನನ್ನು ಹಿಂಬಾಲಿಸಲು ನಾವು ಎಲ್ಲವನ್ನೂ ತ್ಯಜಿಸಿದೆವು!” ಎಂದನು.
29 ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನನಗಾಗಿ ಮತ್ತು ಸುವಾರ್ತೆಗಾಗಿ ತನ್ನ ಮನೆಯನ್ನಾಗಲಿ ಸಹೋದರರನ್ನಾಗಲಿ ಸಹೋದರಿಯರನ್ನಾಗಲಿ ತಾಯಿಯನ್ನಾಗಲಿ ತಂದೆಯನ್ನಾಗಲಿ ಮಕ್ಕಳನ್ನಾಗಲಿ ಭೂಮಿಯನ್ನಾಗಲಿ ತ್ಯಜಿಸಿದ ಪ್ರತಿಯೊಬ್ಬ ವ್ಯಕ್ತಿಯೂ 30 ನೂರರಷ್ಟು ಹೆಚ್ಚಾಗಿ ಪಡೆಯುತ್ತಾನೆ. ಈ ಪ್ರಪಂಚದಲ್ಲಿ ಅವನು ಅನೇಕ ಮನೆಗಳನ್ನು, ಸಹೋದರರನ್ನು, ಸಹೋದರಿಯರನ್ನು, ತಾಯಂದಿರನ್ನು, ಮಕ್ಕಳನ್ನು ಮತ್ತು ಭೂಮಿಯನ್ನು ಹಿಂಸೆಗಳೊಂದಿಗೆ ಪಡೆದುಕೊಳ್ಳುವನು. ಅಲ್ಲದೆ ಬರಲಿರುವ ಲೋಕದಲ್ಲಿ ಅವನು ನಿತ್ಯಜೀವವನ್ನೂ ಹೊಂದಿಕೊಳ್ಳುವನು. 31 ಆದರೆ ಮೊದಲನೆಯವರಲ್ಲಿ ಅನೇಕರು ಕಡೆಯವರಾಗುವರು; ಕಡೆಯವರಲ್ಲಿ ಅನೇಕರು ಮೊದಲಿನವರಾಗುವರು” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International