Revised Common Lectionary (Semicontinuous)
ರಚನೆಗಾರ: ದಾವೀದ.
55 ದೇವರೇ, ನನ್ನ ಪ್ರಾರ್ಥನೆಯನ್ನು ಕೇಳು.
ನನ್ನ ವಿಜ್ಞಾಪನೆಗೆ ಕಿವಿಗೊಡು.
2 ನನ್ನ ಮೊರೆಯನ್ನು ಆಲಿಸಿ ಸದುತ್ತರವನ್ನು ದಯಪಾಲಿಸು.
ನಾನು ನಿನ್ನೊಂದಿಗೆ ಮಾತಾಡುವೆನು; ನನಗಾಗಿರುವ ದುಃಖವನ್ನು ನಿನ್ನ ಮುಂದೆ ತೋಡಿಕೊಳ್ಳುವೆನು.
3 ನನ್ನ ವೈರಿಗಳು ನನ್ನ ಬಗ್ಗೆ ಕೆಟ್ಟದ್ದನ್ನೇ ಹೇಳಿದರು. ಆ ದುಷ್ಟರು ನನ್ನ ಮೇಲೆ ಅಬ್ಬರಿಸಿದರು.
ನನ್ನ ವೈರಿಗಳು ಕೋಪದಿಂದ ನನ್ನ ಮೇಲೆ ಆಕ್ರಮಣ ಮಾಡಿದರು.
ಅವರು ನನ್ನ ಮೇಲೆ ಆಪತ್ತುಗಳನ್ನು ಬರಮಾಡಿದರು.
4 ನನ್ನ ಹೃದಯ ಬಡಿತವು ಮಿತಿಮೀರಿದೆ;
ಮರಣ ಭಯವು ನನ್ನನ್ನು ಆವರಿಸಿಕೊಂಡಿದೆ.
5 ನಾನು ಭಯದಿಂದ ನಡುಗುತ್ತಿದ್ದೇನೆ.
ನಾನು ದಿಗಿಲುಗೊಂಡಿದ್ದೇನೆ.
6 ಆಹಾ, ನನಗೆ ಪಾರಿವಾಳದಂತೆ ರೆಕ್ಕೆಗಳಿದ್ದರೆ,
ನಾನು ಹಾರಿಹೋಗಿ ಆಶ್ರಯ ಸೇರಿಕೊಳ್ಳುತ್ತಿದ್ದೆನು.
7 ನಾನು ಅರಣ್ಯದಲ್ಲಿ ಬಹು ದೂರಕ್ಕೆ ಹಾರಿಹೋಗುತ್ತಿದ್ದೆನು.
8 ನಾನು ಓಡಿಹೋಗಿ
ಹಾನಿಕರವಾದ ಈ ಬಿರುಗಾಳಿಯಿಂದ ತಪ್ಪಿಸಿಕೊಳ್ಳುತ್ತಿದ್ದೆನು.
9 ನನ್ನ ಒಡೆಯನೇ, ಅವರ ಸುಳ್ಳುಗಳನ್ನು ನಿಲ್ಲಿಸು.
ಈ ಪಟ್ಟಣದಲ್ಲಿ ಹಿಂಸೆಕಲಹಗಳು ಕಾಣುತ್ತಿವೆ.
10 ಹಗಲಿರುಳು, ಈ ನಗರದಲ್ಲೆಲ್ಲಾ ಅಪರಾಧ
ಮತ್ತು ಬಲಾತ್ಕಾರಗಳು ತುಂಬಿಕೊಂಡಿವೆ.
11 ಬೀದಿಗಳಲ್ಲಿ ಅಪರಾಧಗಳು ಅತಿಯಾಗಿವೆ.
ಜನರು ಎಲ್ಲೆಲ್ಲಿಯೂ ಸುಳ್ಳು ಹೇಳಿ ಮೋಸಮಾಡುತ್ತಿದ್ದಾರೆ.
12 ನನಗೆ ಅವಮಾನ ಮಾಡುವವನು
ವೈರಿಯಾಗಿದ್ದಿದ್ದರೆ ತಾಳಿಕೊಳ್ಳಬಹುದಿತ್ತು.
ನನ್ನ ಮೇಲೆ ಆಕ್ರಮಣ ಮಾಡುವವರು ನನ್ನ ಶತ್ರುವಾಗಿದ್ದಿದ್ದರೆ
ಅಡಗಿಕೊಳ್ಳಬಹುದಿತ್ತು.
13 ಆದರೆ ನನಗೆ ಕೇಡುಮಾಡುತ್ತಿರುವವನು ನನ್ನ ಸಂಗಡಿಗನಾದ ನೀನೇ;
ನನ್ನ ಸಹೋದ್ಯೋಗಿಯೂ ನನ್ನ ಸ್ನೇಹಿತನೂ ಆದ ನೀನೇ.
14 ನಾವು ಜನಸಮೂಹದ ನಡುವೆ ದೇವಾಲಯಕ್ಕೆ ಹೋಗುವಾಗ,
ಗುಟ್ಟಾದ ವಿಷಯಗಳನ್ನು ಮಾತಾಡುತ್ತಿದ್ದೆವಲ್ಲಾ!
15 ನನ್ನ ಶತ್ರುಗಳಿಗೆ ಮರಣವು ಇದ್ದಕ್ಕಿದ್ದಂತೆ ಬರಲಿ!
ಭೂಮಿಯು ಬಾಯ್ದೆರೆದು ಅವರನ್ನು ಜೀವಂತವಾಗಿ ನುಂಗಿಬಿಡಲಿ!
ಯಾಕೆಂದರೆ ಅವರು ಒಟ್ಟಾಗಿ ಸೇರಿ ಅಂಥಾ ಭಯಂಕರವಾದವುಗಳನ್ನು ಆಲೋಚಿಸುವರು.
ಯೋಬನಿಗೆ ಎಲೀಫಜನ ಉತ್ತರ
15 ಬಳಿಕ ತೇಮಾನಿನ ಎಲೀಫಜನು ಯೋಬನಿಗೆ ಉತ್ತರಿಸಿದನು:
2 “ಯೋಬನೇ, ನೀನು ನಿಜವಾಗಿಯೂ ಜ್ಞಾನಿಯಾಗಿದ್ದರೆ,
ಬರಿದಾದ ನಿನ್ನ ವೈಯಕ್ತಿಕ ಮಾತುಗಳಿಂದ ಉತ್ತರಿಸುವುದಿಲ್ಲ.
ಜ್ಞಾನಿಯು ಬಿಸಿಗಾಳಿಯಂತೆ ಉತ್ತರಿಸುವನೇ?
3 ಜ್ಞಾನಿಯು ನಿಷ್ಪ್ರಯೋಜಕವಾದ ಮಾತುಗಳಿಂದ ವಾದಿಸುತ್ತಾನೆಂದು
ಭಾವಿಸಿಕೊಂಡಿರುವೆಯಾ?
4 ನೀನು ನಿನ್ನ ಮಾರ್ಗದಲ್ಲಿ ಹೋಗುವುದಾದರೆ,
ದೇವರಲ್ಲಿ ಯಾರೂ ಭಯಭಕ್ತಿಯಿಡುವುದಿಲ್ಲ; ಆತನಿಗೆ ಯಾರೂ ಪ್ರಾರ್ಥಿಸುವುದಿಲ್ಲ.
5 ನಿನ್ನ ಪಾಪವೇ ನಿನ್ನ ಮಾತುಗಳಿಗೆ ಪ್ರೇರಕವಾಗಿವೆ.
ನೀನು ಮೋಸಕರವಾದ ಮಾತುಗಳನ್ನು ಬಳಸುತ್ತಿರುವೆ.
6 ನೀನು ತಪ್ಪಿತಸ್ಥನೆಂದು ನಾನು ನಿರೂಪಿಸುವ ಅಗತ್ಯವಿಲ್ಲ.
ಯಾಕೆಂದರೆ ನಿನ್ನ ಬಾಯ ಮಾತುಗಳೇ ನಿನ್ನನ್ನು ತಪ್ಪಿತಸ್ಥನೆಂದು ತೋರಿಸುತ್ತವೆ.
ನಿನ್ನ ಸ್ವಂತ ತುಟಿಗಳೇ ನಿನ್ನ ವಿರುದ್ಧವಾಗಿ ಸಾಕ್ಷಿ ಕೊಡುತ್ತವೆ.
7 “ಯೋಬನೇ, ಎಲ್ಲರಿಗಿಂತ ಮೊದಲು ನೀನೇ ಹುಟ್ಟಿರುವುದಾಗಿ ಭಾವಿಸಿಕೊಂಡಿರುವಿಯಾ?
ಬೆಟ್ಟಗಳಿಗಿಂತ ಮೊದಲೇ ನೀನು ಹುಟ್ಟಿದಿಯಾ?
8 ದೇವರ ರಹಸ್ಯ ಯೋಜನೆಗಳನ್ನು ಆಲಿಸಿರುವೆಯಾ?
ನೀನೊಬ್ಬನೇ ಜ್ಞಾನಿಯೆಂದು ಭಾವಿಸಿಕೊಂಡಿರುವಿಯಾ?
9 ಯೋಬನೇ, ನಿನಗೆ ಗೊತ್ತಿರುವುದೆಲ್ಲಾ ನಮಗೂ ಗೊತ್ತಿದೆ.
ನಿನಗೆ ಅರ್ಥವಾಗುವುದೆಲ್ಲಾ ನಮಗೂ ಅರ್ಥವಾಗುತ್ತದೆ.
10 ನಿನ್ನ ತಂದೆಗಿಂತಲೂ ವಯಸ್ಸಾಗಿರುವ,
ಕೂದಲು ಬೆಳ್ಳಗಾಗಿರುವ ವೃದ್ಧನು ನಮ್ಮಲ್ಲಿದ್ದಾನೆ.
11 ದೇವರ ಆಧರಣೆಯ ಮಾತುಗಳೂ ನಮ್ಮ ನಯವಾದ ಮಾತುಗಳೂ
ನಿನಗೆ ಸಾಲುವುದಿಲ್ಲವೇ?
12 ಯೋಬನೇ, ನಿನ್ನ ಆಲೋಚನೆಗಳು ನಿನ್ನನ್ನು ಸೆಳೆದುಕೊಂಡು ಹೋಗುವುದೇಕೆ?
ನಿನ್ನ ಕಣ್ಣುಗಳು ನಮ್ಮ ಮೇಲೆ ಕಿಡಿಕಿಡಿಯಾಗುವುದೇಕೆ?
13 ನೀನು ದೇವರ ಮೇಲೆ ಕೋಪಗೊಂಡು
ನಿನ್ನ ಬಾಯಿಂದ ಅಂತಹ ಮಾತುಗಳನ್ನು ಸುರಿಸುತ್ತಿರುವೆ!
14 “ಮನುಷ್ಯನು ಎಷ್ಟರವನು?
ಅವನು ಪರಿಶುದ್ಧನಾಗಿರಲು ಸಾಧ್ಯವೇ?
ಸ್ತ್ರೀಯಲ್ಲಿ ಹುಟ್ಟಿದವನು ನೀತಿವಂತನಾಗಿರಲು ಸಾಧ್ಯವೇ?
15 ದೇವರು ತನ್ನ ದೂತರುಗಳನ್ನು[a] ಸಹ ನಂಬುವುದಿಲ್ಲ.
ಆತನ ದೃಷ್ಟಿಯಲ್ಲಿ ಆಕಾಶಗಳು ಸಹ ಅಶುದ್ಧವಾಗಿವೆ.
16 ಹೀಗಿರಲು ದುಷ್ಟತನವನ್ನು ನೀರಿನಂತೆ ಕುಡಿಯುತ್ತಾ
ಅಸಹ್ಯನೂ ಕೆಟ್ಟವನೂ ಆಗಿರುವ ಮನುಷ್ಯನು
ಎಷ್ಟೋ ಅಶುದ್ಧನಲ್ಲವೇ?
17 “ಯೋಬನೇ, ನನಗೆ ಕಿವಿಗೊಡು, ಆಗ ನಾನು ನಿನಗೆ ಅದನ್ನು ವಿವರಿಸುವೆನು.
ನಾನು ನೋಡಿರುವುದನ್ನೇ ನಿನಗೆ ತಿಳಿಸುವೆನು.
18 ಜ್ಞಾನಿಗಳು ನನಗೆ ತಿಳಿಸಿದ ಸಂಗತಿಗಳನ್ನು ನಾನು ನಿನಗೆ ಹೇಳುವೆನು.
ಆ ಜ್ಞಾನಿಗಳಿಗೆ ಅವರ ಪೂರ್ವಿಕರೇ ಈ ಸಂಗತಿಗಳನ್ನು ತಿಳಿಸಿದ್ದಾರೆ.
ಅವರು ಯಾವ ರಹಸ್ಯಗಳನ್ನೂ ನನಗೆ ಮರೆಮಾಡಲಿಲ್ಲ.
19 ಅವರು ಮಾತ್ರ ತಮ್ಮ ದೇಶದಲ್ಲಿ ವಾಸಿಸಿದರು.
ಅವರ ಮಧ್ಯದಲ್ಲಿ ಯಾವ ವಿದೇಶಿಯನೂ ಹಾದುಹೋಗುತ್ತಿರಲಿಲ್ಲ.
20 ದುಷ್ಟನು ತನ್ನ ಜೀವಮಾನವೆಲ್ಲಾ ಯಾತನೆಯನ್ನು ಅನುಭವಿಸುವನು.
ಕ್ರೂರಿಯು ತನಗೆ ನೇಮಕಗೊಂಡಿರುವ ವರ್ಷಗಳಲ್ಲೆಲ್ಲಾ ಕಷ್ಟಪಡುವನು.
21 ಭೀಕರವಾದ ಶಬ್ದಗಳು ಅವನ ಕಿವಿಗಳಲ್ಲೇ ಇರುತ್ತವೆ.
ತಾನು ಸುರಕ್ಷಿತನಾಗಿರುವುದಾಗಿ ಅವನು ಯೋಚಿಸುವಾಗಲೇ ವೈರಿಯು ಅವನ ಮೇಲೆ ಆಕ್ರಮಣ ಮಾಡುವನು.
22 ದುಷ್ಟನಿಗೆ ಕತ್ತಲೆಯಿಂದ ಪಾರಾಗುತ್ತೇನೆ ಎಂಬ ನಿರೀಕ್ಷೆಯೇ ಇಲ್ಲ.
ಅವನನ್ನು ಕೊಲ್ಲಲು ಕತ್ತಿಯು ಎಲ್ಲೋ ಕಾದುಕೊಂಡಿದೆ.
23 ಅವನು ಅತ್ತಿತ್ತ ಅಲೆದಾಡುವನು; ಅವನ ದೇಹವು ರಣಹದ್ದುಗಳಿಗೆ ಆಹಾರವಾಗುವುದು.
ಮರಣವು[b] ತನಗೆ ಬಹು ಸಮೀಪವಾಗಿರುವುದು ಅವನಿಗೆ ಗೊತ್ತೇ ಇದೆ.
24 ಚಿಂತೆಸಂಕಟಗಳು ಅವನನ್ನು ಭಯಗೊಳಿಸುತ್ತವೆ.
ಅವನನ್ನು ನಾಶಮಾಡಲು ಸಿದ್ಧನಾಗಿರುವ ರಾಜನಂತೆ ಅವು ಅವನ ಮೇಲೆ ಆಕ್ರಮಣ ಮಾಡುತ್ತವೆ.
25 ಯಾಕೆಂದರೆ ದುಷ್ಟನು ದೇವರಿಗೆ ವಿರುದ್ಧವಾಗಿ ತನ್ನ ಕೈಯನ್ನು ಝಳಪಿಸುತ್ತಾನೆ.
ದುಷ್ಟನು ಸರ್ವಶಕ್ತನಾದ ದೇವರ ವಿರುದ್ಧವಾಗಿ ಮಹಾಶೂರನಂತೆ ಆಕ್ರಮಣ ಮಾಡುವನು.
26 ಅವನು ಬಹು ಮೊಂಡನಾಗಿದ್ದಾನೆ.
ದುಷ್ಟನು ಮಹಾಗುರಾಣಿಯನ್ನು ಹಿಡಿದು ದೇವರನ್ನು ಎದುರಿಸಲು ಪ್ರಯತ್ನಿಸುವನು.
27 ದುಷ್ಟನ ಮುಖದಲ್ಲಿ ಕೊಬ್ಬೇರಿದೆ, ಅವನ ಸೊಂಟದಲ್ಲಿ ಬೊಜ್ಜು ಬೆಳೆದುಕೊಂಡಿದೆ.
28 ಪಾಳುಬಿದ್ದಿರುವ ಮನೆಗಳಲ್ಲಿ ದುಷ್ಟನು ವಾಸಿಸುವನು.
ಹಾಳುದಿಬ್ಬಗಳಾಗಬೇಕೆಂಬುದೇ
ಆ ಮನೆಗಳ ಗತಿಯಾಗಿದೆ.
29 ದುಷ್ಟನು ಬಹುಕಾಲದವರೆಗೆ ಐಶ್ವರ್ಯವಂತನಾಗಿರಲು ಸಾಧ್ಯವಿಲ್ಲ.
ಅವನ ಐಶ್ವರ್ಯವು ಶಾಶ್ವತವಲ್ಲ;
ಅವನ ಆಸ್ತಿಗಳು ದೇಶದಲ್ಲಿ ವೃದ್ಧಿಯಾಗುವುದಿಲ್ಲ.
30 ದುಷ್ಟನು ಕತ್ತಲೆಯೊಳಗಿಂದ ತಪ್ಪಿಸಿಕೊಳ್ಳುವುದಿಲ್ಲ.
ಬೆಂಕಿಯಿಂದ ಸುಟ್ಟುಹೋದ ಕೊಂಬೆಗಳನ್ನು ಹೊಂದಿರುವ ಮರದಂತೆ ಅವನಿರುವನು.
ದೇವರ ಉಸಿರು ದುಷ್ಟನನ್ನು ಬಡಿದುಕೊಂಡು ಹೋಗುವುದು.
31 ದುಷ್ಟನು ಅಯೋಗ್ಯವಾದವುಗಳ ಮೇಲೆ ನಂಬಿಕೆಯಿಟ್ಟು, ತನ್ನನ್ನು ತಾನೇ ಮೋಸಮಾಡಿಕೊಳ್ಳದಿರಲಿ.
ಯಾಕೆಂದರೆ ಅದಕ್ಕೆ ಪ್ರತಿಫಲವಾಗಿ ಅವನಿಗೇನೂ ದೊರೆಯುವುದಿಲ್ಲ.
32 ದುಷ್ಟನು ತನ್ನ ಜೀವಿತ ಮುಗಿಯುವುದಕ್ಕಿಂತ ಮೊದಲೇ ಮುದುಕನಾಗುವನು;
ಒಣಗಿಹೋಗಿ ಇನ್ನೆಂದಿಗೂ ಹಸುರಾಗದ ಬಳ್ಳಿಯಂತಾಗುವನು;
33 ಮಾಗುವುದಕ್ಕಿಂತ ಮೊದಲೇ ತನ್ನ ದ್ರಾಕ್ಷಿಯನ್ನು ಕಳೆದುಕೊಳ್ಳುವ ದ್ರಾಕ್ಷಿಬಳ್ಳಿಯಂತಿರುವನು;
ಹೂವುಗಳು ಉದುರಿಹೋದ ಆಲಿವ್ ಮರದಂತಿರುವನು.
34 ಯಾಕೆಂದರೆ ದೇವರಿಲ್ಲದ ಜನರು ಫಲ ಕೊಡಲಾರರು.
ಲಂಚಕೋರರ ಗುಡಾರಗಳು ಬೆಂಕಿಯಿಂದ ಸುಟ್ಟುಹೋಗುತ್ತವೆ.
35 ಅವರು ಗರ್ಭಧರಿಸಿ ಕೆಡುಕನ್ನೇ ಹೆರುವರು.
ಅವರ ಗರ್ಭದಲ್ಲಿರುವ ಮಗುವು ಮೋಸಕರವಾದದ್ದು.”
ಲೈಂಗಿಕ ಪಾಪದ ಕುರಿತು ಯೇಸುವಿನ ಉಪದೇಶ
27 “‘ವ್ಯಭಿಚಾರ ಮಾಡಬೇಡಿರಿ’(A) ಎಂದು ಹೇಳಿದ್ದನ್ನು ನೀವು ಕೇಳಿದ್ದೀರಿ. 28 ಆದರೆ ಒಬ್ಬನು ಪರಸ್ತ್ರೀಯನ್ನು ನೋಡಿ ಅವಳೊಂದಿಗೆ ಲೈಂಗಿಕ ಸಂಪರ್ಕ ಹೊಂದಲು ಬಯಸಿದರೆ, ಅವನು ಆಗಲೇ ತನ್ನ ಮನಸ್ಸಿನಲ್ಲಿ ಅವಳೊಂದಿಗೆ ವ್ಯಭಿಚಾರವನ್ನು ಮಾಡಿದ್ದಾನೆಂದು ನಾನು ನಿಮಗೆ ಹೇಳುತ್ತೇನೆ. 29 ನಿನ್ನ ಬಲಗಣ್ಣು ನಿನ್ನನ್ನು ಪಾಪಕ್ಕೊಳಗಾಗುವಂತೆ ಮಾಡಿದರೆ, ಅದನ್ನು ಕಿತ್ತು ಬಿಸಾಡು. ನಿನ್ನ ಪೂರ್ಣಶರೀರವು ನರಕಕ್ಕೆ ಬೀಳುವುದಕ್ಕಿಂತ ನಿನ್ನ ಶರೀರದ ಒಂದು ಭಾಗವನ್ನು ಕಳೆದುಕೊಳ್ಳುವುದೇ ಮೇಲು. 30 ನಿನ್ನ ಬಲಗೈ ನಿನ್ನನ್ನು ಪಾಪಕ್ಕೊಳಗಾಗುವಂತೆ ಮಾಡಿದರೆ, ಅದನ್ನು ಕತ್ತರಿಸಿ ಬಿಸಾಡು. ನಿನ್ನ ಪೂರ್ಣ ಶರೀರವು ನರಕಕ್ಕೆ ಹೋಗುವುದಕ್ಕಿಂತ ನಿನ್ನ ಶರೀರದ ಒಂದು ಭಾಗವನ್ನು ಕಳೆದುಕೊಳ್ಳುವುದೇ ಮೇಲು.
ವಿವಾಹ ವಿಚ್ಛೇದನ ಕುರಿತು ಯೇಸುವಿನ ಉಪದೇಶ
(ಮತ್ತಾಯ 19:9; ಮಾರ್ಕ 10:11-12; ಲೂಕ 16:18)
31 “‘ತನ್ನ ಹೆಂಡತಿಯನ್ನು ಬಿಟ್ಟುಬಿಡಬೇಕೆಂದಿರುವವನು, ಅವಳಿಗೆ ವಿವಾಹ ವಿಚ್ಛೇದನ ಪತ್ರವನ್ನು ಕೊಡಲಿ’(B) ಎಂದು ಹೇಳಲ್ಪಟ್ಟಿದೆ. 32 ಆದರೆ ನಾನು ಹೇಳುವುದೇನೆಂದರೆ, ತನ್ನ ಹೆಂಡತಿಯನ್ನು ಬಿಟ್ಟುಬಿಡುವವನೇ ಅವಳು ವ್ಯಭಿಚಾರಿಣಿಯಾಗುವುದಕ್ಕೆ ಕಾರಣನಾಗುತ್ತಾನೆ. ಹೆಂಡತಿಯು ಬೇರೊಬ್ಬ ಪುರುಷನೊಂದಿಗೆ ಲೈಂಗಿಕ ಸಂಬಂಧವಿಟ್ಟುಕೊಂಡಿದ್ದರೆ ಮಾತ್ರ ಅವಳನ್ನು ಗಂಡನು ಬಿಟ್ಟುಬಿಡಬಹುದು. ವಿವಾಹ ವಿಚ್ಛೇದನ ಹೊಂದಿದವಳನ್ನು ಮದುವೆಯಾಗುವವನು ಸಹ ವ್ಯಭಿಚಾರ ಮಾಡಿದವನಾಗುತ್ತಾನೆ.
ಆಣೆ ಇಡುವುದರ ಕುರಿತು ಯೇಸುವಿನ ಉಪದೇಶ
33 “‘ನೀವಿಟ್ಟ ಆಣೆಯನ್ನು ಮೀರಬೇಡಿರಿ. ಪ್ರಭುವಿಗೆ ನೀವಿಟ್ಟ ಆಣೆಗಳನ್ನು ಕೈಗೊಳ್ಳಲೇಬೇಕು’[a] ಎಂದು ನಮ್ಮ ಪೂರ್ವಿಕರಿಗೆ ಹೇಳಿದ್ದನ್ನು ನೀವು ಕೇಳಿದ್ದೀರಿ. 34 ಆದರೆ ನಾನು ಹೇಳುವುದೇನೆಂದರೆ, ಆಣೆ ಇಡಲೇಬೇಡಿ. ಪರಲೋಕದ ಮೇಲೂ ಆಣೆ ಇಡಬೇಡಿ, ಏಕೆಂದರೆ ಪರಲೋಕವು ದೇವರ ಸಿಂಹಾಸನ. 35 ಭೂಮಿಯ ಮೇಲೂ ಆಣೆ ಇಡಬೇಡಿ. ಏಕೆಂದರೆ ಭೂಮಿಯು ದೇವರ ಪಾದಪೀಠ. ಜೆರುಸಲೇಮಿನ ಮೇಲೂ ಆಣೆ ಇಡಬೇಡಿ, ಏಕೆಂದರೆ ಅದು ಆ ಮಹಾರಾಜನ ಪಟ್ಟಣ. 36 ನಿಮ್ಮ ತಲೆಯ ಮೇಲೂ ಆಣೆ ಇಡಬೇಡಿ. ನಿಮ್ಮ ತಲೆಯ ಒಂದು ಕೂದಲನ್ನಾದರೂ ಬೆಳ್ಳಗೆ ಅಥವಾ ಕಪ್ಪಗೆ ಮಾಡಲು ನಿಮ್ಮಿಂದಾಗದು.
Kannada Holy Bible: Easy-to-Read Version. All rights reserved. © 1997 Bible League International