Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 26

ರಚನೆಗಾರ: ದಾವೀದ.

26 ಯೆಹೋವನೇ, ನನಗೆ ನ್ಯಾಯವನ್ನು ನಿರ್ಣಯಿಸು; ನನ್ನ ಜೀವಿತ ಶುದ್ಧವಾಗಿತ್ತೆಂದು ನಿರೂಪಿಸು.
    ನಾನು ಯೆಹೋವನಲ್ಲಿಯೇ ಭರವಸವಿಟ್ಟಿದ್ದೆನು.
ಯೆಹೋವನೇ, ನನ್ನನ್ನು ಪರೀಕ್ಷಿಸಿ ತಿಳಿದುಕೊ.
    ನನ್ನ ಹೃದಯವನ್ನೂ ಮನಸ್ಸನ್ನೂ ಸೂಕ್ಷ್ಮವಾಗಿ ಪರಿಶೋಧಿಸು.
ನಿನ್ನ ಶಾಶ್ವತ ಪ್ರೀತಿಯನ್ನು ದೃಷ್ಟಿಯಲ್ಲಿಟ್ಟುಕೊಂಡಿದ್ದೇನೆ.
    ನಿನ್ನ ಸತ್ಯಕ್ಕನುಸಾರವಾಗಿ ಜೀವಿಸುವೆನು.
ಅಯೋಗ್ಯರಾದ ಅವರಲ್ಲಿ ನಾನೂ ಒಬ್ಬನಲ್ಲ.
    ನಾನು ಕಪಟಿಗಳ ಜೊತೆ ಸೇರುವವನಲ್ಲ.
ಆ ದುಷ್ಟ ತಂಡಗಳನ್ನು ನಾನು ದ್ವೇಷಿಸುತ್ತೇನೆ.
    ಮೋಸಗಾರರ ಆ ತಂಡಗಳಿಗೆ ನಾನು ಸೇರುವುದಿಲ್ಲ.

ಯೆಹೋವನೇ, ನಾನು ನಿನ್ನ ಯಜ್ಞವೇದಿಕೆಯ[a] ಸುತ್ತಲೂ ನಡೆಯಲು
    ನನ್ನ ಕೈಗಳನ್ನು ತೊಳೆದುಕೊಳ್ಳುತ್ತೇನೆ.
ನಾನು ನಿನಗೆ ಸ್ತುತಿಗೀತೆಗಳನ್ನು ಹಾಡುವೆನು.
    ನಿನ್ನ ಅದ್ಭುತಕಾರ್ಯಗಳ ಕುರಿತು ಹಾಡುವೆನು.
ಯೆಹೋವನೇ, ನಿನ್ನ ಆಲಯವೂ ನಿನ್ನ ಮಹಿಮಾಗುಡಾರವೂ
    ನನಗೆ ಎಷ್ಟೋ ಪ್ರಿಯವಾಗಿವೆ.

ಆ ಪಾಪಿಗಳ ಗುಂಪಿನಲ್ಲಿ ನನ್ನನ್ನು ಸೇರಿಸಬೇಡ.
    ಆ ಕೊಲೆಗಾರರ ಜೀವದೊಂದಿಗೆ ನನ್ನ ಜೀವವನ್ನು ತೆಗೆಯಬೇಡ.
10 ಅವರು ಜನರನ್ನು ವಂಚಿಸುವರು;
    ಕೆಟ್ಟಕಾರ್ಯಗಳನ್ನು ಮಾಡಲು ಲಂಚ ತೆಗೆದುಕೊಳ್ಳುವರು.
11 ನಾನಾದರೋ ನಿರಪರಾಧಿ.
    ನನಗೆ ಕರುಣೆತೋರಿ ನನ್ನನ್ನು ರಕ್ಷಿಸು.
12 ನಾನು ಎಲ್ಲಾ ಅಪಾಯಗಳಿಂದ ಪಾರಾಗಿದ್ದೇನೆ.
    ಯೆಹೋವನೇ, ನಿನ್ನ ಭಕ್ತರ ಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು.

ಯೋಬನು 7

“ಭೂಲೋಕದಲ್ಲಿ ಮನುಷ್ಯನಿಗೆ ಬಹು ಪ್ರಯಾಸದ ಕೆಲಸವಿದೆ.
    ಅವನ ಜೀವನವು ಕೂಲಿ ಕೆಲಸದವನ ಜೀವನದಂತಿದೆ.
ಮನುಷ್ಯನು ಉರಿಬಿಸಿಲಿನಲ್ಲಿ ಪ್ರಯಾಸಪಟ್ಟು ದುಡಿದ ಮೇಲೆ
    ತಂಪಾದ ನೆರಳನ್ನು ಬಯಸುವ ಗುಲಾಮನಂತಿದ್ದಾನೆ.
    ಮನುಷ್ಯನು, ದಿನದ ಕೂಲಿಗಾಗಿ ಕಾಯುತ್ತಿರುವ ಕೂಲಿಯವನಂತಿದ್ದಾನೆ.
ಜಿಗುಪ್ಸೆಯ ತಿಂಗಳುಗಳನ್ನೂ ಸಂಕಟದ ರಾತ್ರಿಗಳನ್ನೂ
    ನನಗೆ ನೇಮಿಸಲಾಗಿದೆ.
ಮಲಗಿಕೊಳ್ಳುವಾಗ,
    ‘ಯಾವಾಗ ಏಳುವೆನೋ’ ಅಂದುಕೊಳ್ಳುವೆನು.
ರಾತ್ರಿಯು ಬೆಳೆಯುತ್ತಾ ಹೋಗುವುದು;
    ಸೂರ್ಯೋದಯದವರೆಗೂ ಹೊರಳಾಡುವೆನು.
ನನ್ನ ದೇಹವು ಹುಳಗಳಿಂದಲೂ ಧೂಳಿನಿಂದಲೂ ಆವರಿಸಿಕೊಂಡಿದೆ.
    ನನ್ನ ಚರ್ಮವು ಬಿರಿದುಹೋಗಿ ಕೀವು ಸೋರುತ್ತಿರುವ ಕುರುಗಳಿಂದ ತುಂಬಿಹೋಗಿದೆ.

“ನನ್ನ ದಿನಗಳು ಮಗ್ಗದ ಲಾಳಿಗಿಂತಲೂ ವೇಗವಾಗಿ ಹೋಗುತ್ತವೆ.
    ನನ್ನ ಜೀವಿತವು ನಿರೀಕ್ಷೆಯಿಲ್ಲದೆ ಕೊನೆಗೊಳ್ಳುವುದು.
ದೇವರೇ, ನನ್ನ ಜೀವನವು ಕೇವಲ ಉಸಿರೆಂಬುದನ್ನು ನೆನಸಿಕೋ,
    ನನ್ನ ಕಣ್ಣುಗಳು ಮತ್ತೆಂದಿಗೂ ಸುಖವನ್ನು ನೋಡುವುದಿಲ್ಲ.
ನೀನು ನನ್ನನ್ನು ಮತ್ತೆಂದೂ ಕಾಣುವುದಿಲ್ಲ.
    ನೀನು ನನಗಾಗಿ ಹುಡುಕುವೆ, ಆದರೆ ನಾನು ಅಷ್ಟರಲ್ಲೇ ಹೊರಟುಹೋಗಿರುವೆನು.
ಮೋಡವು ಕಣ್ಣಿಗೆ ಕಾಣದೆ ಇಲ್ಲವಾಗುವುದು.
    ಅದೇ ರೀತಿಯಲ್ಲಿ, ಸತ್ತು ಸಮಾಧಿಯಲ್ಲಿ ಹೂಳಲ್ಪಟ್ಟವನು ಹಿಂತಿರುಗಿ ಬರುವುದಿಲ್ಲ.
10 ಅವನು ತನ್ನ ಮನೆಗೆ ಮತ್ತೆಂದಿಗೂ ಹಿಂತಿರುಗಿ ಬರುವುದಿಲ್ಲ.
    ಇನ್ನು ಮೇಲೆ ಅವನ ಸ್ಥಳವು ಅವನನ್ನು ತಿಳಿದಿರುವುದಿಲ್ಲ.

11 “ಆದ್ದರಿಂದ ನಾನು ಮೌನವಾಗಿರುವುದಿಲ್ಲ, ನಾನು ಮಾತಾಡುವೆನು!
    ನನ್ನ ಆತ್ಮವು ಸಂಕಟಪಡುತ್ತಿದೆ!
    ನನ್ನ ಮನಸ್ಸು ನೊಂದು ಹೋಗಿರುವುದರಿಂದ ನಾನು ದೂರು ಹೇಳುವೆನು.
12 ದೇವರೇ, ನೀನು ನನ್ನನ್ನು ಕಾಯುವುದೇಕೆ?
    ನಾನೇನು ಸಮುದ್ರವೇ? ಭಯಂಕರವಾದ ಸಮುದ್ರ ಪ್ರಾಣಿಯೇ?
13 ನನ್ನ ಹಾಸಿಗೆಯು ನನ್ನನ್ನು ಸಂತೈಸುತ್ತದೆ;
    ನನ್ನ ಮಂಚವು ನನಗೆ ವಿಶ್ರಾಂತಿಯನ್ನೂ ಉಪಶಮನವನ್ನೂ ಕೊಡುತ್ತದೆ ಎಂದು
    ನಾನು ಆಲೋಚಿಸುವಾಗ,
14 ನೀನು ಕನಸುಗಳಿಂದ ನನ್ನನ್ನು ಹೆದರಿಸುವೆ;
    ದರ್ಶನಗಳಿಂದ ನನ್ನನ್ನು ಭಯಗೊಳಿಸುವೆ.
15 ನಾನು ಬದುಕುವುದಕ್ಕಿಂತ
    ಉಸಿರುಕಟ್ಟಿ ಸಾಯುವುದೇ ಮೇಲು.
16 ನನ್ನ ಜೀವಿತವು ನನಗೆ ಅಸಹ್ಯವಾಗಿದೆ.
    ಶಾಶ್ವತವಾಗಿ ಬದುಕಲು ನನಗೆ ಇಷ್ಟವಿಲ್ಲ.
ನನ್ನನ್ನು ಒಬ್ಬಂಟಿಗನನ್ನಾಗಿ ಬಿಟ್ಟುಬಿಡು!
    ನನ್ನ ಜೀವಿತಕ್ಕೆ ಅರ್ಥವೇ ಇಲ್ಲ!
17 ದೇವರೇ, ಮನುಷ್ಯನು ಎಷ್ಟರವನು?
    ನೀನು ಅವನ ಕಡೆಗೆ ಗಮನ ಕೊಡುವುದೇಕೆ?
18 ನೀನು ಪ್ರತಿ ಮುಂಜಾನೆ ಮನುಷ್ಯನನ್ನು ಪರೀಕ್ಷಿಸುವುದೇಕೆ?
    ಅವನನ್ನು ಪ್ರತಿಗಳಿಗೆಯಲ್ಲೂ ಪರೀಕ್ಷಿಸುವುದೇಕೆ?
19 ದೇವರೇ, ಇನ್ನೆಷ್ಟರವರೆಗೆ ನೀನು ನನ್ನ ಕಡೆಯಿಂದ ದೃಷ್ಟಿಯನ್ನು ತಿರುಗಿಸದೆ ಇರುವೆ?
    ನೀನು ನನ್ನನ್ನು ಕ್ಷಣ ಕಾಲವಾದರೂ ಒಬ್ಬಂಟಿಗನನ್ನಾಗಿ ಬಿಡುವುದಿಲ್ಲ.
20 ಮನುಷ್ಯನನ್ನು ಗಮನಿಸುವವನೇ,
    ನಾನು ಪಾಪ ಮಾಡಿದ್ದರೆ, ಅದರಿಂದ ನಿನಗೇನಾಯಿತು?
ದೇವರೇ, ನೀನು ನನ್ನನ್ನು ಗುರಿಯನ್ನಾಗಿ ಮಾಡಿಕೊಂಡದ್ದೇಕೆ?
    ನಾನು ನಿನಗೆ ಸಮಸ್ಯೆಯಾದೆನೇ?
21 ನೀನು ನನ್ನ ತಪ್ಪುಗಳನ್ನು ಮನ್ನಿಸಬಾರದೇಕೆ?
    ನನ್ನ ಪಾಪಗಳನ್ನು ಕ್ಷಮಿಸಬಾರದೇಕೆ?
ನಾನು ಬೇಗನೆ ಸತ್ತು ಸಮಾಧಿಯಲ್ಲಿರುವೆನು.
    ಆಮೇಲೆ ನೀನು ನನಗಾಗಿ ಹುಡುಕುವೆ, ಆದರೆ ನಾನು ಅಷ್ಟರಲ್ಲೇ ಹೊರಟುಹೋಗಿರುವೆನು.”

ಲೂಕ 16:14-18

ದೇವರ ಧರ್ಮಶಾಸ್ತ್ರ ಬದಲಾಗಲಾರದು

(ಮತ್ತಾಯ 11:12-13)

14 ಫರಿಸಾಯರು ಈ ಎಲ್ಲಾ ಸಂಗತಿಗಳನ್ನು ಕೇಳುತ್ತಿದ್ದರು. ಫರಿಸಾಯರೆಲ್ಲರು ಹಣದಾಸೆ ಉಳ್ಳವರಾಗಿದ್ದರಿಂದ ಅವರು ಯೇಸುವನ್ನು ಟೀಕಿಸಿದರು. 15 ಯೇಸು ಫರಿಸಾಯರಿಗೆ ಹೀಗೆಂದನು, “ನೀವು ಜನರ ಮುಂದೆ ನಿಮ್ಮನ್ನು ಒಳ್ಳೆಯವರೆಂದು ತೋರಿಸಿಕೊಳ್ಳುತ್ತೀರಿ. ಆದರೆ ನಿಜವಾಗಿಯೂ ನಿಮ್ಮ ಹೃದಯದಲ್ಲಿರುವುದು ದೇವರಿಗೆ ಗೊತ್ತು. ಜನರ ದೃಷ್ಟಿಯಲ್ಲಿ ಅಮೂಲ್ಯವಾದುವುಗಳು ದೇವರ ದೃಷ್ಟಿಯಲ್ಲಿ ಅಸಹ್ಯವಾಗಿವೆ.

16 “ಜನರು ಮೋಶೆಯ ಧರ್ಮಶಾಸ್ತ್ರಕ್ಕೂ ಪ್ರವಾದಿಗಳ ಗ್ರಂಥಗಳಿಗೂ ಅನುಸಾರವಾಗಿ ಜೀವಿಸಬೇಕೆಂಬುದು ದೇವರ ಅಪೇಕ್ಷೆಯಾಗಿತ್ತು. ಸ್ನಾನಿಕನಾದ ಯೋಹಾನನು ಬಂದ ಕಾಲದಿಂದ ದೇವರ ರಾಜ್ಯದ ಸುವಾರ್ತೆಯು ತಿಳಿಸಲ್ಪಡುತ್ತಿದೆ. ಅನೇಕ ಜನರು ದೇವರ ರಾಜ್ಯದೊಳಗೆ ಹೋಗಲು ಬಹಳ ಪ್ರಯಾಸಪಡುತ್ತಿದ್ದಾರೆ. 17 ಧರ್ಮಶಾಸ್ತ್ರದಲ್ಲಿರುವ ಒಂದು ಚುಕ್ಕೆಯು ಬದಲಾಗುವುದಕ್ಕಿಂತಲೂ ಭೂಮ್ಯಾಕಾಶಗಳು ಅಳಿದುಹೋಗುವುದು ಸುಲಭ.

ವಿವಾಹವಿಚ್ಛೇದನ ಮತ್ತು ಪುನರ್ವಿವಾಹ

18 “ತನ್ನ ಪತ್ನಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆ ಆಗುವವನು ವ್ಯಭಿಚಾರ ಮಾಡಿದವನಾಗುತ್ತಾನೆ. ವಿವಾಹವಿಚ್ಛೇದನ ಹೊಂದಿದ ಸ್ತ್ರೀಯನ್ನು ಮದುವೆ ಆಗುವವನು ಸಹ ವ್ಯಭಿಚಾರ ಮಾಡಿದವನಾಗುತ್ತಾನೆ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International