Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 124

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ದಾವೀದ.

124 ಯೆಹೋವನು ನಮ್ಮ ಕಡೆ ಇಲ್ಲದಿದ್ದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?
    ಇಸ್ರೇಲರೇ, ನನಗೆ ಉತ್ತರಹೇಳಿ.
ವೈರಿಗಳು ನಮ್ಮ ಮೇಲೆ ಆಕ್ರಮಣ ಮಾಡಿದಾಗ
    ಯೆಹೋವನು ನಮ್ಮ ಕಡೆ ಇಲ್ಲದಿದ್ದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?
ಶತ್ರುಗಳು ನಮ್ಮಮೇಲೆ ಕೋಪಗೊಂಡಾಗಲೆಲ್ಲಾ
    ನಮ್ಮನ್ನು ಜೀವಂತವಾಗಿ ನುಂಗಿಬಿಡುತ್ತಿದ್ದರು.
ಶತ್ರುಸೈನ್ಯಗಳು ನಮ್ಮನ್ನು ಕೊಚ್ಚಿಕೊಂಡು ಹೋಗುವ
    ಪ್ರವಾಹದಂತೆಯೂ ಮುಳುಗಿಸುವ ನದಿಯಂತೆಯೂ ಆಗಿರುತ್ತಿದ್ದರು.
ಆ ಗರ್ವಿಷ್ಠರು ನಮ್ಮ ಪಾಲಿಗೆ ಬಾಯಿಯವರೆಗೂ
    ಮೇಲೇರಿ ಮುಳುಗಿಸುವ ನೀರಿನಂತಾಗುತ್ತಿದ್ದರು.

ಯೆಹೋವನಿಗೆ ಸ್ತೋತ್ರವಾಗಲಿ!
    ನಮ್ಮ ಶತ್ರುಗಳು ನಮ್ಮನ್ನು ಹಿಡಿದು ಕೊಲ್ಲಲು ಆತನು ಅವಕಾಶ ಕೊಡಲಿಲ್ಲ.

ನಾವು ಬಲೆಯಿಂದ ತಪ್ಪಿಸಿಕೊಂಡ ಪಕ್ಷಿಯಂತಿದ್ದೇವೆ.
    ಬಲೆಯು ಹರಿದುಹೋದದ್ದರಿಂದ ನಾವು ತಪ್ಪಿಸಿಕೊಂಡೆವು.
ನಮಗೆ ಸಹಾಯವು ಯೆಹೋವನಿಂದಲೇ ಬಂದಿತು.
    ಭೂಮ್ಯಾಕಾಶಗಳನ್ನು ಸೃಷ್ಟಿಮಾಡಿದವನು ಆತನೇ.

ಎಸ್ತೇರಳು 3

ಯೆಹೂದ್ಯರನ್ನು ನಿರ್ಮೂಲ ಮಾಡಲು ಹಾಮಾನನ ಸಂಚು

ಇದಾದ ಬಳಿಕ ರಾಜನಾದ ಅಹಷ್ವೇರೋಷನು ಹಾಮಾನನನ್ನು ಗೌರವಿಸಿದನು. ಹಾಮಾನನು ಹಮ್ಮೆದಾತನೆಂಬವನ ಮಗನು. ಇವನು ಅಗಾಗನ ವಂಶಕ್ಕೆ ಸೇರಿದವನಾಗಿದ್ದನು. ಅರಸನು ಹಾಮಾನನನ್ನು ಉನ್ನತಸ್ಥಾನಕ್ಕೆ ನೇಮಿಸಿ ಬೇರೆ ಅಧಿಕಾರಿಗಳಿಗಿಂತ ವಿಶೇಷವಾದ ಗೌರವವನ್ನು ಕೊಡಿಸಿದನು. ರಾಜ್ಯದ ಎಲ್ಲಾ ಅಧಿಕಾರಿಗಳೂ ಅರಮನೆಯ ಹೆಬ್ಬಾಗಿಲ ಬಳಿಯಲ್ಲಿದ್ದವರೆಲ್ಲರೂ ಅವನಿಗೆ ಅಡ್ಡಬೀಳುತ್ತಿದ್ದರು. ಇದು ರಾಜಾಜ್ಞೆಯಾಗಿತ್ತು. ಆದರೆ ಮೊರ್ದೆಕೈ ಮಾತ್ರ ಅವನಿಗೆ ಅಡ್ಡಬೀಳಲೂ ಇಲ್ಲ ಗೌರವಿಸಲೂ ಇಲ್ಲ. ಅರಮನೆಯ ಹೆಬ್ಬಾಗಿಲ ಬಳಿಯಲ್ಲಿದ್ದ ಅಧಿಕಾರಿಗಳು, “ಮೊರ್ದೆಕೈ, ಅರಸನ ಆಜ್ಞೆಯ ಪ್ರಕಾರ ಹಾಮಾನನಿಗೆ ನೀನು ಏಕೆ ಬಗ್ಗಿ ನಮಸ್ಕರಿಸುವುದಿಲ್ಲ?” ಎಂದು ಪ್ರಶ್ನಿಸಿದರು.

ಪ್ರತಿದಿನ ಆ ಅಧಿಕಾರಿಗಳು ಮೊರ್ದೆಕೈಗೆ ಹೇಳಿದರೂ ಅವನು ಹಾಮಾನನಿಗೆ ಅಡ್ಡಬೀಳಲೂ ಇಲ್ಲ, ಗೌರವಿಸಲೂ ಇಲ್ಲ. ಈ ವಿಷಯವನ್ನು ಅಧಿಕಾರಿಗಳು ಹಾಮಾನನಿಗೆ ತಿಳಿಸಿದರು. ಮೊರ್ದೆಕೈಗೆ ಹಾಮಾನನು ಮಾಡುವದನ್ನು ನೋಡಲು ಕಾದಿದ್ದರು. ಮೊರ್ದೆಕೈ ಅವರಿಗೆ ತಾನು ಯೆಹೂದ್ಯನೆಂದು ತಿಳಿಸಿದ್ದನು. ಮೊರ್ದೆಕೈ ತನಗೆ ಅಡ್ಡಬೀಳದಿರುವುದರಿಂದ ಮತ್ತು ಗೌರವಿಸದಿರುವುದರಿಂದ ಹಾಮಾನನು ಬಹಳ ಕೋಪಗೊಂಡನು. ಮೊರ್ದೆಕೈ ಯೆಹೂದ್ಯ ಜನಾಂಗಕ್ಕೆ ಸೇರಿದವನೆಂದು ಹಾಮಾನನಿಗೆ ತಿಳಿದುಬಂತು. ಕೇವಲ ಮೊರ್ದೆಕೈಯನ್ನು ಮಾತ್ರವೇ ಕೊಲ್ಲದೆ ಅಹಷ್ವೇರೋಷನ ಸಾಮ್ರಾಜ್ಯದಲ್ಲಿರುವ ಎಲ್ಲಾ ಯೆಹೂದ್ಯರನ್ನು ಕೊಲ್ಲುವ ಉಪಾಯವನ್ನು ಹೂಡಿದನು.

ಅಹಷ್ವೇರೋಷನ ಆಳ್ವಿಕೆಯ ಹನ್ನೆರಡನೆಯ ವರ್ಷದ ಮೊದಲನೆ ತಿಂಗಳಾದ ನೀಸಾನ್ ತಿಂಗಳಲ್ಲಿ ಒಂದು ನಿರ್ದಿಷ್ಟ ದಿವಸಕ್ಕಾಗಿ ಹಾಮಾನನು ಚೀಟು ಹಾಕಿದನು. ಆಗ ಹನ್ನೆರಡನೆ ತಿಂಗಳಾದ ಅದಾರ್ ಮಾಸವು ಆರಿಸಲ್ಪಟ್ಟಿತು. (ಆ ದಿವಸಗಳಲ್ಲಿ ಚೀಟು ಹಾಕುವದಕ್ಕೆ “ಪೂರ್” ಎಂದು ಅನ್ನುತ್ತಿದ್ದರು.) ಹಾಮಾನನು ಅರಸನಾದ ಅಹಷ್ವೇರೋಷನ ಬಳಿಗೆ ಬಂದು, “ಅರಸನೇ, ನಿನ್ನ ಸಾಮ್ರಾಜ್ಯದ ಎಲ್ಲಾ ಸಂಸ್ಥಾನಗಳಲ್ಲಿ ಒಂದು ಜನಾಂಗದವರು ಹಬ್ಬಿರುತ್ತಾರೆ. ಇವರು ಇತರ ಎಲ್ಲಾ ಜನರಿಂದ ಪ್ರತ್ಯೇಕವಾಗಿ ಇರುತ್ತಾರೆ. ಅವರ ನೀತಿರೀತಿಗಳೆಲ್ಲಾ ಬೇರೆ ಜನರಿಗಿಂತ ವಿಭಿನ್ನವಾಗಿರುತ್ತದೆ. ಅವರು ರಾಜನ ಕಟ್ಟಳೆಗೆ ವಿಧೇಯರಾಗುವುದಿಲ್ಲ. ನಿನ್ನ ರಾಜ್ಯದಲ್ಲಿ ಅವರು ಹೀಗೆಯೇ ಇರುವದು ಒಳ್ಳೆಯದಲ್ಲ.

“ರಾಜನೇ, ನೀನು ಸಮ್ಮತಿಸುವದಾದರೆ ನನ್ನ ಸಲಹೆ ಏನೆಂದರೆ, ಆ ಜನರನ್ನು ನಿರ್ಮೂಲ ಮಾಡಲು ಅಪ್ಪಣೆ ಕೊಡು. ನಾನು ಹತ್ತು ಸಾವಿರ ಬೆಳ್ಳಿನಾಣ್ಯಗಳನ್ನು ರಾಜ ಖಜಾನೆಯಲ್ಲಿ ಹಾಕುವೆನು. ಆ ಹಣವನ್ನು ಆ ಕಾರ್ಯ ಮಾಡುವ ಜನರ ಸಂಬಳಕ್ಕಾಗಿ ವಿನಿಯೋಗಿಸಬಹುದು” ಎಂದು ಹೇಳಿದನು.

10 ಆಗ ಅರಸನು ತನ್ನ ಮುದ್ರೆಯುಂಗುರವನ್ನು ಬೆರಳಿನಿಂದ ತೆಗೆದು ಹಾಮಾನನಿಗೆ ಕೊಟ್ಟನು. ಹಾಮಾನನು ಅಗಾಗನ ವಂಶದವನಾದ ಹಮ್ಮೆದಾತನ ಮಗನು. ಈ ಹಾಮಾನನು ಯೆಹೂದ್ಯರ ಕಡುವೈರಿಯಾಗಿದ್ದನು. 11 ಅರಸನು ಹಾಮಾನನಿಗೆ, “ನಿನ್ನ ಹಣವು ನಿನ್ನ ಹತ್ರವೇ ಇರಲಿ. ಆ ಜನರನ್ನು ನಿನಗೆ ಇಷ್ಟಬಂದ ಹಾಗೆ ಮಾಡಬಹುದು” ಅಂದನು.

12 ಮೊದಲನೆ ತಿಂಗಳಿನ ಹದಿಮೂರನೇ ದಿವಸದಂದು ರಾಜಲೇಖಕರನ್ನು ಕರೆಯಿಸಿ ಹಾಮಾನನ ಆಜ್ಞೆಯನ್ನು ಆಯಾಭಾಷೆಗಳಲ್ಲಿ ಬರೆಯಿಸಿದನು. ರಾಜನ ಸಂಸ್ಥಾನಾಧಿಕಾರಿಗಳಿಗೆ, ರಾಜ್ಯಪಾಲರಿಗೆ ಮತ್ತು ವಿವಿಧ ಜನಾಂಗದ ಅಧಿಕಾರಿಗಳಿಗೆ ಅರಸನಾದ ಅಹಷ್ವೇರೋಷನ ಹೆಸರಿನಲ್ಲಿ ಬರೆದು ಅದಕ್ಕೆ ರಾಜನ ಮುದ್ರೆಯನ್ನೊತ್ತಲಾಯಿತು.

13 ರಾಜಾಜ್ಞೆಯನ್ನು ಹೊತ್ತ ಸಂದೇಶವಾಹಕರು ದೇಶದ ಎಲ್ಲಾ ಕಡೆಗಳಲ್ಲಿ ಹೊತ್ತುಕೊಂಡು ಬಂದರು. ಆ ಪತ್ರದಲ್ಲಿ ಹನ್ನೆರಡನೇ ತಿಂಗಳಿನ ಹದಿಮೂರನೇ ದಿವಸದಂದು ಆಯಾ ಪ್ರಾಂತ್ಯಗಳಲ್ಲಿರುವ ಎಲ್ಲಾ ಯೆಹೂದ್ಯರನ್ನು ಚಿಕ್ಕವರು ದೊಡ್ಡವರು ಎನ್ನದೆ ಕೊಂದು ಅವರ ವಸ್ತುಗಳನ್ನೆಲ್ಲ ಸೂರೆ ಮಾಡಬೇಕೆಂಬದಾಗಿ ಬರೆದಿತ್ತು.

14 ಈ ಪತ್ರದ ಒಂದೊಂದು ಪ್ರತಿಯು ಪ್ರತಿಯೊಂದು ಸಂಸ್ಥಾನದಲ್ಲಿ ರಾಜವಿಧಿಯೆಂದು ಎಲ್ಲಾ ಜನರಲ್ಲಿ ಪ್ರಕಟಿಸಲ್ಪಡಬೇಕು ಅಲ್ಲದೆ ಆ ದಿನಕ್ಕಾಗಿ ಎಲ್ಲಾ ಜನರೂ ಸಿದ್ಧರಾಗಿರಬೇಕೆಂಬುದಾಗಿ ಬರೆದಿತ್ತು. 15 ರಾಜನ ಆಜ್ಞೆಯ ಪ್ರಕಾರ ಸಂದೇಶವಾಹಕರು ದೇಶದೇಶಗಳಿಗೆ ಚದರಿದರು. ರಾಜಧಾನಿಯಾದ ಶೂಷನ್ ನಗರದಲ್ಲೂ ಆ ಸಂದೇಶವನ್ನು ಪ್ರಕಟಿಸಲಾಯಿತು. ಅರಸನೂ ಹಾಮಾನನೂ ಮದ್ಯಪಾನ ಮಾಡಲು ಕುಳಿತರು. ಆದರೆ ರಾಜಧಾನಿಯಲ್ಲಿನ ಜನರು ಗಲಿಬಿಲಿಗೊಂಡಿದ್ದರು.

ಮತ್ತಾಯ 5:13-20

ನೀವು ಉಪ್ಪಿನಂತಿದ್ದೀರಿ, ಬೆಳಕಿನಂತಿದ್ದೀರಿ

(ಮಾರ್ಕ 9:50; ಲೂಕ 14:34-35)

13 “ನೀವು ಭೂಮಿಗೆ ಉಪ್ಪಾಗಿದ್ದೀರಿ. ಆದರೆ ಉಪ್ಪೇ ತನ್ನ ರುಚಿಯನ್ನು ಕಳೆದುಕೊಂಡರೆ ಅದನ್ನು ಮತ್ತೆ ಉಪ್ಪನ್ನಾಗಿ ಮಾಡಲು ಸಾಧ್ಯವಿಲ್ಲ; ಅಂಥ ಉಪ್ಪಿನಿಂದ ಪ್ರಯೋಜನವೇನೂ ಇಲ್ಲ. ಜನರು ಅದನ್ನು ಹೊರಗೆ ಬಿಸಾಡಿ ಅದರ ಮೇಲೆ ನಡೆದಾಡುವರು.

14 “ನೀವು ಲೋಕಕ್ಕೆ ಬೆಳಕಾಗಿದ್ದೀರಿ. ಗುಡ್ಡದ ಮೇಲೆ ಕಟ್ಟಿದ ಪಟ್ಟಣ ಮರೆಯಾಗಿರಲಾರದು. 15 ಜನರು ದೀಪವನ್ನು ಪಾತ್ರೆಯ ಕೆಳಗೆ ಮುಚ್ಚಿಡುವುದಿಲ್ಲ. ಜನರು ದೀಪವನ್ನು ದೀಪಸ್ತಂಭದ ಮೇಲೆ ಇಡುತ್ತಾರೆ. ಆಗ ಮನೆಯಲ್ಲಿರುವವರಿಗೆಲ್ಲಾ ಬೆಳಕು ಪ್ರಕಾಶಿಸುವುದು. 16 ಅದೇ ರೀತಿಯಲ್ಲಿ ನೀವು ಜನರಿಗೆ ಬೆಳಕಾಗಿರಬೇಕು. ಹೀಗೆ ಅವರು ನಿಮ್ಮ ಸತ್ಕಾರ್ಯಗಳನ್ನು ಕಂಡು ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡಲಿ.

ಪವಿತ್ರ ಗ್ರಂಥಕ್ಕೆ ಅಂತ್ಯವೇ ಇಲ್ಲ

17 “ನಾನು ಮೋಶೆಯ ಧರ್ಮಶಾಸ್ತ್ರವನ್ನಾಗಲಿ ಪ್ರವಾದಿಗಳ ಉಪದೇಶಗಳನ್ನಾಗಲಿ ತೆಗೆದುಹಾಕುವುದಕ್ಕೆ ಬಂದೆನೆಂದು ನೆನೆಸಬೇಡಿರಿ. ನಾನು ಅವುಗಳನ್ನು ನಾಶಮಾಡುವುದಕ್ಕಾಗಿ ಬರದೆ ಅವುಗಳನ್ನು ನೆರವೇರಿಸುವುದಕ್ಕಾಗಿ ಬಂದೆನು. 18 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಆಕಾಶ ಮತ್ತು ಭೂಮಿ ಅಳಿದುಹೋಗುವವರೆಗೂ ಧರ್ಮಶಾಸ್ತ್ರದಿಂದ ಏನೂ ಅಳಿದುಹೋಗುವುದಿಲ್ಲ. ಎಲ್ಲಾ ನೆರವೇರುವ ತನಕ ಧರ್ಮಶಾಸ್ತ್ರದ ಒಂದು ಅಕ್ಷರವಾಗಲಿ ಅಥವಾ ಅದರ ಒಂದು ಚುಕ್ಕೆಯಾಗಲಿ ಅಳಿದುಹೋಗುವುದಿಲ್ಲ.

19 “ಮನುಷ್ಯನು ಪ್ರತಿ ಆಜ್ಞೆಗೂ, ಅಂದರೆ ಸಣ್ಣಸಣ್ಣ ಆಜ್ಞೆಗೂ ವಿಧೇಯನಾಗಿರಬೇಕು. ಒಬ್ಬನು ಯಾವ ಆಜ್ಞೆಗಾದರೂ ಅವಿಧೇಯನಾಗಿ ಜೀವಿಸುತ್ತಾ ಆ ಆಜ್ಞೆಗೆ ಬೇರೆಯವರೂ ಅವಿಧೇಯರಾಗಿರಬೇಕೆಂದು ಬೋಧಿಸಿದರೆ ಅವನು ಪರಲೋಕರಾಜ್ಯದಲ್ಲಿ ಅತ್ಯಲ್ಪನಾಗಿರುವನು. ಆದರೆ ಧರ್ಮಶಾಸ್ತ್ರಕ್ಕೆ ವಿಧೇಯನಾಗಿ ಜೀವಿಸುತ್ತಾ ಧರ್ಮಶಾಸ್ತ್ರಕ್ಕೆ ವಿಧೇಯರಾಗಬೇಕೆಂದು ಬೇರೆಯವರಿಗೂ ಬೋಧಿಸುವವನು ಪರಲೋಕರಾಜ್ಯದಲ್ಲಿ ಪ್ರಮುಖನಾಗಿರುವನು. 20 ಧರ್ಮೋಪದೇಶಕರಿಗಿಂತಲೂ ಫರಿಸಾಯರಿಗಿಂತಲೂ ನೀವು ಉತ್ತಮವಾದದ್ದನ್ನು ಮಾಡಬೇಕು. ಇಲ್ಲವಾದರೆ ನೀವು ಪರಲೋಕರಾಜ್ಯವನ್ನು ಪ್ರವೇಶಿಸಲಾರಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International