Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 124

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ದಾವೀದ.

124 ಯೆಹೋವನು ನಮ್ಮ ಕಡೆ ಇಲ್ಲದಿದ್ದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?
    ಇಸ್ರೇಲರೇ, ನನಗೆ ಉತ್ತರಹೇಳಿ.
ವೈರಿಗಳು ನಮ್ಮ ಮೇಲೆ ಆಕ್ರಮಣ ಮಾಡಿದಾಗ
    ಯೆಹೋವನು ನಮ್ಮ ಕಡೆ ಇಲ್ಲದಿದ್ದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?
ಶತ್ರುಗಳು ನಮ್ಮಮೇಲೆ ಕೋಪಗೊಂಡಾಗಲೆಲ್ಲಾ
    ನಮ್ಮನ್ನು ಜೀವಂತವಾಗಿ ನುಂಗಿಬಿಡುತ್ತಿದ್ದರು.
ಶತ್ರುಸೈನ್ಯಗಳು ನಮ್ಮನ್ನು ಕೊಚ್ಚಿಕೊಂಡು ಹೋಗುವ
    ಪ್ರವಾಹದಂತೆಯೂ ಮುಳುಗಿಸುವ ನದಿಯಂತೆಯೂ ಆಗಿರುತ್ತಿದ್ದರು.
ಆ ಗರ್ವಿಷ್ಠರು ನಮ್ಮ ಪಾಲಿಗೆ ಬಾಯಿಯವರೆಗೂ
    ಮೇಲೇರಿ ಮುಳುಗಿಸುವ ನೀರಿನಂತಾಗುತ್ತಿದ್ದರು.

ಯೆಹೋವನಿಗೆ ಸ್ತೋತ್ರವಾಗಲಿ!
    ನಮ್ಮ ಶತ್ರುಗಳು ನಮ್ಮನ್ನು ಹಿಡಿದು ಕೊಲ್ಲಲು ಆತನು ಅವಕಾಶ ಕೊಡಲಿಲ್ಲ.

ನಾವು ಬಲೆಯಿಂದ ತಪ್ಪಿಸಿಕೊಂಡ ಪಕ್ಷಿಯಂತಿದ್ದೇವೆ.
    ಬಲೆಯು ಹರಿದುಹೋದದ್ದರಿಂದ ನಾವು ತಪ್ಪಿಸಿಕೊಂಡೆವು.
ನಮಗೆ ಸಹಾಯವು ಯೆಹೋವನಿಂದಲೇ ಬಂದಿತು.
    ಭೂಮ್ಯಾಕಾಶಗಳನ್ನು ಸೃಷ್ಟಿಮಾಡಿದವನು ಆತನೇ.

ಎಸ್ತೇರಳು 1:1-21

ವಷ್ಟಿ ರಾಣಿಯು ರಾಜಾಜ್ಞೆಯನ್ನು ತಿರಸ್ಕರಿಸಿದ್ದು

ಅಹಷ್ವೇರೋಷನು ರಾಜನಾಗಿದ್ದಾಗ ನಡೆದ ಘಟನೆ. ಹಿಂದೂಸ್ಥಾನದಿಂದ ಇಥಿಯೋಪ್ಯದ ತನಕ ನೂರಿಪ್ಪತ್ತೇಳು ಸಂಸ್ಥಾನಗಳನ್ನು ಅವನು ಆಳುತ್ತಿದ್ದನು. ಅವನ ರಾಜ್ಯದ ರಾಜಧಾನಿ ನಗರವಾಗಿದ್ದ ಶೂಷನ್‌ನಲ್ಲಿಯ ಸಿಂಹಾಸನದಿಂದ ಅರಸನು ರಾಜ್ಯವಾಳುತ್ತಿದ್ದನು.

ತನ್ನ ಆಳ್ವಿಕೆಯ ಮೂರನೆ ವರ್ಷದಲ್ಲಿ ರಾಜ್ಯದ ಅಧಿಕಾರಿಗಳಿಗೂ ನಾಯಕರುಗಳಿಗೂ ಒಂದು ಔತಣವನ್ನು ಏರ್ಪಡಿಸಿದನು. ಮೇದ್ಯ. ಪರ್ಶಿಯದ ಎಲ್ಲಾ ಸೈನ್ಯಾಧಿಕಾರಿಗಳೂ ಪ್ರಧಾನರೂ ಔತಣದಲ್ಲಿ ಭಾಗವಹಿಸಿದ್ದರು. ಔತಣ ಸಮಾರಂಭವು ನೂರೆಂಭತ್ತು ದಿವಸಗಳ ತನಕ ಮುಂದುವರೆಯಿತು. ಆ ಸಮಯದಲ್ಲಿ ತನ್ನ ರಾಜ್ಯದ ಸಕಲ ವೈಭವವನ್ನೂ ಅರಮನೆಯ ಐಶ್ವರ್ಯವನ್ನೂ ಅತಿಥಿಗಳಿಗೆ ಪ್ರದರ್ಶಿಸಿದನು. ಆ ನೂರೆಂಭತ್ತು ದಿವಸಗಳು ಕಳೆದ ಬಳಿಕ ಅಹಷ್ವೇರೋಷನು ಮತ್ತೆ ಇನ್ನೊಂದು ಔತಣವನ್ನು ಒಂದು ವಾರದ ತನಕ ಮುಂದುವರಿಸಿದನು. ಇದು ಅರಮನೆಯ ಒಳ ಉದ್ಯಾನವನದಲ್ಲಿ ನಡೆಯಿತು. ಇದಕ್ಕೆ ಶೂಷನ್ ನಗರದಿಂದ ಗಣ್ಯರು, ಸಾಮಾನ್ಯರು ಎಂಬ ಭೇದಭಾವವಿಲ್ಲದೆ ಎಲ್ಲರೂ ಆಮಂತ್ರಿಸಲ್ಪಟ್ಟಿದ್ದರು. ಆ ಒಳ ಉದ್ಯಾನವನವು ಬಿಳಿ ಮತು ನೀಲಿಬಣ್ಣಗಳ ಬಟ್ಟೆಗಳಿಂದ ಶೃಂಗರಿಸಲ್ಪಟ್ಟಿತ್ತು. ಅವುಗಳನ್ನು ಬಿಳಿ ಮತ್ತು ನೇರಳೆ ಬಣ್ಣದ ದಾರಗಳಿಂದ ಬೆಳ್ಳಿಯ ಉಂಗುರಗಳಲ್ಲಿ ಕಟ್ಟಲ್ಪಟ್ಟ ಅಮೃತಶಿಲೆಯ ಕಂಬಗಳಿಗೆ ತೂಗುಹಾಕಿದ್ದರು. ಬೆಲೆಬಾಳುವ ಕಲ್ಲುಗಳಿಂದಲೂ ಮುತ್ತು ಚಿಪ್ಪು, ರತ್ನಶಿಲೆಗಳಿಂದಲೂ ಅಲಂಕೃತವಾದ ನೆಲದ ಮೇಲೆ ಬೆಳ್ಳಿಬಂಗಾರಗಳಿಂದ ಮಾಡಿದ್ದ ಆಸನಗಳನ್ನಿಟ್ಟರು. ಅತಿಥಿಗಳಿಗೆ ಬಂಗಾರದ ಪಾನಪಾತ್ರೆಯಲ್ಲಿ ದ್ರಾಕ್ಷಾರಸವನ್ನು ಕುಡಿಯಲು ಕೊಟ್ಟರು. ಬೇರೆಬೇರೆ ವಿಧದ ಪಾತ್ರೆಗಳನ್ನು ಉಪಯೋಗಿಸಲಾಗಿತ್ತು. ರಾಜನ ಔದಾರ್ಯಕ್ಕೆ ತಕ್ಕಂತೆ ದ್ರಾಕ್ಷಾರಸವು ಧಾರಾಳವಾಗಿ ಹಂಚಲ್ಪಡುತ್ತಿತ್ತು. ತಮ್ಮ ಇಷ್ಟಾನುಸಾರವಾಗಿ ದ್ರಾಕ್ಷಾರಸವನ್ನು ಕುಡಿಯಲು ಅತಿಥಿಗಳಿಗೆ ಕೊಡಬೇಕೆಂದು ಸೇವಕರಿಗೆ ರಾಜಾಜ್ಞೆಯಾಗಿತ್ತು. ರಾಜಸೇವಕರು ಆ ಆಜ್ಞೆಯನ್ನು ಪಾಲಿಸಿದರು.

ರಾಜನ ಅರಮನೆಯಲ್ಲಿ ವಷ್ಟಿರಾಣಿಯೂ ಅದೇ ಪ್ರಕಾರ ಸ್ತ್ರೀಯರಿಗೂ ಔತಣವನ್ನು ಮಾಡಿಸಿದ್ದಳು.

10-11 ಔತಣದ ಏಳನೆಯ ದಿವಸದಲ್ಲಿ ರಾಜನು ದ್ರಾಕ್ಷಾರಸ ಕುಡಿದು ಆನಂದಲಹರಿಯಲ್ಲಿದ್ದಾಗ ತನ್ನ ಆಸ್ಥಾನ ಕಂಚುಕಿಯರಾದ ಮೆಹೂಮಾನ್, ಬಿಜತಾ, ಹರ್ಬೋನಾ, ಬಿಗೆತಾ, ಅಬಗೆತಾ, ಜೀತರ್, ಕರ್ಕಸ್ ಎಂಬ ಏಳು ಮಂದಿಗೆ ಹೋಗಿ ವಷ್ಟಿರಾಣಿಯನ್ನು ತನ್ನ ರಾಜಮುಕುಟವನ್ನು ಧರಿಸಿ ಕರೆತರಲು ಆಜ್ಞಾಪಿಸಿದನು. ವಷ್ಟಿರಾಣಿಯು ಅತ್ಯಂತ ಸುಂದರಿಯಾಗಿದ್ದಳು. ಆಕೆಯ ಸೌಂದರ್ಯವನ್ನು ತನ್ನ ರಾಜ್ಯದ ಅಧಿಕಾರಿಗಳಿಗೆ ತೋರಿಸಬೇಕೆಂಬುದು ಅವನ ಅಪೇಕ್ಷೆಯಾಗಿತ್ತು.

12 ಆಸ್ಥಾನಸೇವಕರು ವಷ್ಟಿರಾಣಿಗೆ ರಾಜಾಜ್ಞೆಯನ್ನು ತಿಳಿಸಿದಾಗ ಆಕೆಯು ಬರಲು ನಿರಾಕರಿಸಿದಳು. ಇದರಿಂದ ರಾಜನು ಕೋಪೋದ್ರಿಕ್ತನಾದನು. 13-14 ಕಾನೂನು ಮತ್ತು ದಂಡನೆಗಳ ಬಗ್ಗೆ ಪರಿಣಿತರಾಗಿದ್ದ ಮಂತ್ರಿಗಳ ಸಲಹೆ ಕೇಳುವುದು ರಾಜನ ವಾಡಿಕೆಯಾಗಿತ್ತು. ಅದೇ ಪ್ರಕಾರ ರಾಜನು ತನ್ನ ಸಲಹೆಗಾರರೊಂದಿಗೆ ಈ ವಿಷಯವನ್ನು ಆಲೋಚಿಸಿದನು. ಇವರು ರಾಜನಿಗೆ ನಿಕಟವರ್ತಿಗಳಾಗಿದ್ದರು. ಅವರು ಯಾರೆಂದರೆ ಕರ್ಷೆನಾ, ಶೇತಾರ್, ಅದ್ಮಾತಾ, ತರ್ಷಿಷ್, ಮೆರೆಸ್, ಮರ್ಸೆನಾ, ಮೆಮೂಕಾನ್ ಎಂಬ ಏಳು ಮಂದಿ ಮೇದ್ಯ, ಪಾರಸಿಯ ಪ್ರಮುಖ ಅಧಿಕಾರಿಗಳು. 15 “ಆಸ್ಥಾನ ಸೇವಕರ ಮೂಲಕ ಹೇಳಿ ಕಳುಹಿಸಿದ ರಾಜಾಜ್ಞೆಯನ್ನು ವಷ್ಟಿ ರಾಣಿಯು ನಿರಾಕರಿಸಿದ್ದಾಳೆ. ಇಂಥಾ ತಪ್ಪಿಗೆ ಯಾವ ಶಿಕ್ಷೆಯನ್ನು ವಿಧಿಸಬೇಕು?” ಎಂದು ವಿಚಾರಿಸಿದನು.

16 ಇತರ ಅಧಿಕಾರಿಗಳು ಆಲಿಸುತ್ತಿದ್ದಾಗ ಮೆಮೂಕಾನ್ ಎದ್ದುನಿಂತು, “ರಾಣಿ ವಷ್ಟಿಯು ತಪ್ಪು ಮಾಡಿದಳು. ಇದು ರಾಜನಿಗೆ ವಿರುದ್ಧವಾಗಿ ಮಾತ್ರವೇ ಅಲ್ಲ, ರಾಜ್ಯದ ಸಕಲ ನಾಯಕರಿಗೂ ಸಂಸ್ಥಾನಗಳ ಎಲ್ಲಾ ಜನರಿಗೂ ವಿರುದ್ಧವಾದದ್ದು. 17 ಹೇಗೆಂದರೆ: ರಾಣಿಯು ಮಾಡಿದ್ದನ್ನು ರಾಜ್ಯದ ಇತರ ಸ್ತ್ರೀಯರು ಕೇಳಿ ತಾವೂ ತಮ್ಮ ಗಂಡಂದಿರಿಗೆ ಅವಿಧೇಯರಾಗುವರು. ಅವರು ತಮ್ಮ ಗಂಡಂದಿರಿಗೆ, ‘ರಾಜ ಅಹಷ್ವೇರೋಷನು ವಷ್ಟಿರಾಣಿಯನ್ನು ಕರೆದುಕೊಂಡು ಬರಬೇಕೆಂದು ಆಜ್ಞಾಪಿಸಿದನು, ಆದರೆ ಆಕೆ ಬರಲಿಲ್ಲ’ ಎಂದು ಹೇಳುವರು.

18 “ಪರ್ಶಿಯ ಮತ್ತು ಮೇದ್ಯ ನಾಯಕರುಗಳ ಹೆಂಡತಿಯರು ಸಹ ವಷ್ಟಿರಾಣಿ ಈ ಹೊತ್ತು ಮಾಡಿದ್ದನ್ನು ಕೇಳಿದ್ದಾರೆ. ಅವರು ಸಹ ವಷ್ಟಿರಾಣಿಯ ನಡತೆಯಿಂದ ಪ್ರೋತ್ಸಾಹಿತರಾಗಿ ರಾಜನ ಮುಖ್ಯ ನಾಯಕರುಗಳೊಡನೆ ಅದೇರೀತಿ ವರ್ತಿಸುವರು. ಇದರಿಂದಾಗಿ ಅಗೌರವವೂ ಕೋಪವೂ ತುಂಬಿಕೊಳ್ಳುತ್ತವೆ.

19 “ಆದ್ದರಿಂದ ರಾಜನು ಒಪ್ಪುವುದಾದರೆ ನನ್ನ ಸಲಹೆ ಏನೆಂದರೆ, ಅರಸನು ಒಂದು ರಾಜಾಜ್ಞೆಯನ್ನು ಹೊರಡಿಸಬೇಕು. ಆ ಆಜ್ಞೆಯು ಪರ್ಶಿಯ ಮತ್ತು ಮೇದ್ಯ ರಾಜಶಾಸನಗಳಲ್ಲಿ ಬರೆಯಲ್ಪಡಬೇಕು. ಪರ್ಶಿಯ ಮತ್ತು ಮೇದ್ಯ ರಾಜಶಾಸನಗಳು ಎಂದಿಗೂ ಬದಲಾಗುವದಿಲ್ಲ. ರಾಜಾಜ್ಞೆಯು ಏನೆಂದರೆ, ಅರಸನಾದ ಅಹಷ್ವೇರೋಷನ ಸನ್ನಿಧಿಗೆ ರಾಣಿಯು ಪ್ರವೇಶಿಸಲೇ ಕೂಡದು. ಮಾತ್ರವಲ್ಲ ರಾಜನು ವಷ್ಟಿ ರಾಣಿಯ ಸ್ಥಾನವನ್ನು ಆಕೆಗಿಂತ ಉತ್ತಮಳಾದ ಇನ್ನೊಬ್ಬಾಕೆಗೆ ಕೊಡಲಿ. 20 ಈ ರಾಜಶಾಸನವು ವಿಶಾಲ ಸಾಮ್ರಾಜ್ಯದ ಎಲ್ಲಾ ಕಡೆಗಳಲ್ಲಿ ಪ್ರಕಟಿಸಲ್ಪಟ್ಟಾಗ ಎಲ್ಲಾ ಹೆಂಡತಿಯರು ತಮ್ಮ ಗಂಡಂದಿರಿಗೆ ಗೌರವವನ್ನು ಸಲ್ಲಿಸುವರು. ಶ್ರೇಷ್ಠರೂ ಕನಿಷ್ಠರೂ ಆದ ಎಲ್ಲಾ ಸ್ತ್ರೀಯರು ತಮ್ಮ ಗಂಡಂದಿರಿಗೆ ಗೌರವವನ್ನು ಸಲ್ಲಿಸುವರು.”

21 ಅರಸನೂ ಅವನ ಪ್ರಮುಖ ಅಧಿಕಾರಿಗಳೂ ಈ ಸಲಹೆಯನ್ನು ಕೇಳಿ ಸಂತೋಷಪಟ್ಟರು ಮತ್ತು ಅಹಷ್ವೇರೋಷ ರಾಜನು ಮೆಮೂಕಾನ್ ಹೇಳಿದ ಹಾಗೆ ಮಾಡಿದನು.

ಅಪೊಸ್ತಲರ ಕಾರ್ಯಗಳು 4:13-31

13 ಪೇತ್ರ ಮತ್ತು ಯೋಹಾನರಿಗೆ ವಿಶೇಷವಾದ ಯಾವ ತರಬೇತಿಯಾಗಲಿ ವಿದ್ಯೆಯಾಗಲಿ ಇಲ್ಲವೆಂಬುದು ಯೆಹೂದ್ಯನಾಯಕರಿಗೆ ಗೊತ್ತಿತ್ತು. ಅಲ್ಲದೆ ಅವರು ಹೆದರದೆ ಮಾತಾಡುವುದನ್ನು ಸಹ ನಾಯಕರು ಗಮನಿಸಿದರು. ಆದ್ದರಿಂದ ಆ ನಾಯಕರಿಗೆ ಬಹಳ ಆಶ್ಚರ್ಯವಾಯಿತು. ಪೇತ್ರ ಮತ್ತು ಯೋಹಾನರು ಯೋಸುವಿನೊಂದಿಗೆ ಇದ್ದರೆಂಬುದನ್ನು ಅವರು ಆ ಬಳಿಕ ಗ್ರಹಿಸಿಕೊಂಡರು. 14 ಈ ಇಬ್ಬರು ಅಪೊಸ್ತಲರ ಪಕ್ಕದಲ್ಲೇ ನಿಂತುಕೊಂಡಿದ್ದ ಕುಂಟನನ್ನು ಅವರು ನೋಡಿದರು. ಅವನಿಗೆ ಗುಣವಾಗಿರುವುದನ್ನು ಅವರು ಕಂಡರು. ಆದ್ದರಿಂದ ಅಪೊಸ್ತಲರ ಮಾತಿಗೆ ವಿರುದ್ಧವಾಗಿ ಅವರೇನೂ ಹೇಳಲಾಗಲಿಲ್ಲ.

15 ಯೆಹೂದ್ಯನಾಯಕರು ಅಪೊಸ್ತಲರನ್ನು ಸಭೆಯಿಂದ ಹೊರಗೆ ಕಳುಹಿಸಿ, 16 “ಇವರಿಗೆ ನಾವೇನು ಮಾಡೋಣ? ಇವರು ದೊಡ್ಡ ಅದ್ಭುತಕಾರ್ಯ ಮಾಡಿರುವುದು ಜೆರುಸಲೇಮಿನಲ್ಲಿರುವ ಪ್ರತಿಯೊಬ್ಬರಿಗೂ ಗೊತ್ತಿದೆ. ಈ ಅದ್ಭುತಕಾರ್ಯವು ಸ್ಪಷ್ಟವಾಗಿರುವುದರಿಂದ ಅದನ್ನು ಅಸತ್ಯವೆಂದು ಹೇಳಲಾಗದು. 17 ಆದರೆ ಈ ಮನುಷ್ಯನ (ಯೇಸುವಿನ) ಬಗ್ಗೆ ಜನರಿಗೆ ಹೇಳದಂತೆ ನಾವು ಅವರನ್ನು ಬೆದರಿಸಬೇಕು. ಆಗ ಈ ಸಮಾಚಾರ ಜನರ ಮಧ್ಯದಲ್ಲಿ ಹರಡುವುದಿಲ್ಲ” ಎಂದು ಅವರು ಮಾತಾಡಿಕೊಂಡರು.

18 ಆದ್ದರಿಂದ ಯೆಹೂದ್ಯನಾಯಕರು ಪೇತ್ರ ಮತ್ತು ಯೋಹಾನರನ್ನು ಮತ್ತೆ ಒಳಗೆ ಕರೆಸಿ, ಯೇಸುವಿನ ಹೆಸರಿನಲ್ಲಿ ಏನೂ ಹೇಳಬಾರದೆಂದೂ, ಏನೂ ಬೋಧಿಸಬಾರದೆಂದೂ ಎಚ್ಚರಿಕೆ ಕೊಟ್ಟರು. 19 ಆದರೆ ಪೇತ್ರ ಮತ್ತು ಯೋಹಾನ ಅವರಿಗೆ, “ನಾವು ನಿಮಗೆ ವಿಧೇಯರಾಗಬೇಕೇ ಅಥವಾ ದೇವರಿಗೆ ವಿಧೇಯರಾಗಬೇಕೇ? ಇದರಲ್ಲಿ ಯಾವುದು ದೇವರಿಗೆ ಅಪೇಕ್ಷೆಯಾದದು? ನೀವೇ ಹೇಳಿ. 20 ನಾವಂತೂ ಸುಮ್ಮನಿರಲಾರೆವು. ನಾವು ಕಂಡ ಮತ್ತು ಕೇಳಿದ ಸಂಗತಿಗಳ ಬಗ್ಗೆ ಜನರಿಗೆ ಹೇಳಲೇಬೇಕು” ಎಂದು ಉತ್ತರಕೊಟ್ಟರು.

21-22 ಯೆಹೂದ್ಯನಾಯಕರಿಗೆ ಅಪೊಸ್ತಲರನ್ನು ದಂಡಿಸಲು ಯಾವ ಮಾರ್ಗವೂ ತೋಚಲಿಲ್ಲ, ಯಾಕೆಂದರೆ ಸಂಭವಿಸಿದ ಕಾರ್ಯಕ್ಕಾಗಿ ಜನರೆಲ್ಲರೂ ದೇವರನ್ನು ಕೊಂಡಾಡುತ್ತಿದ್ದರು. (ಈ ಸೂಚಕಕಾರ್ಯದಿಂದ ಗುಣಹೊಂದಿದ ವ್ಯಕ್ತಿಗೆ ನಲವತ್ತು ವರ್ಷಕ್ಕಿಂತಲೂ ಹೆಚ್ಚು ವಯಸ್ಸಾಗಿತ್ತು.) ಆದ್ದರಿಂದ ಯೆಹೂದ್ಯನಾಯಕರು ಅಪೊಸ್ತಲರನ್ನು ಮತ್ತೆ ಎಚ್ಚರಿಸಿ ಕಳುಹಿಸಿಬಿಟ್ಟರು.

ಪೇತ್ರ ಮತ್ತು ಯೋಹಾನರು ಹಿಂತಿರುಗಿದರು

23 ಪೇತ್ರ ಮತ್ತು ಯೋಹಾನರು ಯೆಹೂದ್ಯನಾಯಕರ ಸಭೆಯಿಂದ ಹೊರಟು ತಮ್ಮ ಸಮುದಾಯಕ್ಕೆ ಹೋದರು. ಮಹಾಯಾಜಕರು ಮತ್ತು ಯೆಹೂದ್ಯರ ಹಿರಿಯ ನಾಯಕರು ತಮಗೆ ಹೇಳಿದ ಪ್ರತಿಯೊಂದನ್ನು ಅವರು ತಮ್ಮ ಸಮುದಾಯದವರಿಗೆ ತಿಳಿಸಿದರು. 24 ಇದನ್ನು ಕೇಳಿದಾಗ ವಿಶ್ವಾಸಿಗಳು ಏಕಮನಸ್ಸಿನಿಂದ ದೇವರಲ್ಲಿ ಪ್ರಾರ್ಥಿಸಿದರು: ಅವರೆಲ್ಲರಲ್ಲಿ ಒಂದೇ ಮನಸ್ಸಿತ್ತು. “ಒಡೆಯನೇ, ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಮತ್ತು ಲೋಕದಲ್ಲಿರುವ ಪ್ರತಿಯೊಂದನ್ನೂ ನಿರ್ಮಿಸಿದಾತನು ನೀನೇ. 25 ನಮ್ಮ ಪಿತೃವಾದ ದಾವೀದನು ನಿನ್ನ ಸೇವಕನಾಗಿದ್ದನು. ಅವನು ಪವಿತ್ರಾತ್ಮನ ಸಹಾಯದಿಂದ ಈ ಮಾತುಗಳನ್ನು ಬರೆದನು:

‘ಜನಾಂಗಗಳು ಕೂಗಾಡುವುದೇಕೆ?
ಈ ಲೋಕದ ಜನರು ದೇವರಿಗೆ ವಿರೋಧವಾಗಿ ಕಾರ್ಯಗಳನ್ನು ಯೋಚಿಸುತ್ತಿರುವುದೇಕೆ? ಇದರಿಂದ ಪ್ರಯೋಜನವೇನೂ ಇಲ್ಲ!

26 ‘ಭೂಲೋಕದ ರಾಜರು ಹೋರಾಡಲು ಸಿದ್ಧರಾಗಿದ್ದಾರೆ;
    ಪ್ರಭುವಿಗೂ ಆತನ ಕ್ರಿಸ್ತನಿಗೂ ವಿರೋಧವಾಗಿ ಅಧಿಪತಿಗಳೆಲ್ಲರೂ ಒಟ್ಟಾಗಿ ಸೇರಿದ್ದಾರೆ.’(A)

27 ಹೆರೋದರಾಜನು, ಪೊಂತಿಯಸ್ ಪಿಲಾತನು, ಜನಾಂಗಗಳು ಮತ್ತು ಯೆಹೂದ್ಯರು ಈ ಪಟ್ಟಣದಲ್ಲಿ ಒಟ್ಟಾಗಿ ಸೇರಿಕೊಂಡು ಯೇಸುವನ್ನು ವಿರೋಧಿಸಿದಾಗ ಈ ಸಂಗತಿಗಳು ನಿಜವಾಗಿಯೂ ನೆರವೇರಿದವು. ಯೇಸು ನಿನ್ನ ಪವಿತ್ರ ಸೇವಕನಾಗಿದ್ದಾನೆ. ನೀನು ಆತನನ್ನು ಅಭಿಷೇಕಿಸಿದೆ. 28 ಯೇಸುವಿನ ವಿರುದ್ಧ ಒಟ್ಟಾಗಿ ಬಂದ ಈ ಜನರು ನಿನ್ನ ಯೋಜನೆ ನೆರವೇರುವಂತೆ ಮಾಡಿದರು. ನಿನ್ನ ಶಕ್ತಿಯಿಂದಲೂ ನಿನ್ನ ಚಿತ್ತದಿಂದಲೂ ಇದು ನೆರವೇರಿತು. 29 ಪ್ರಭುವೇ, ಈಗ ಅವರು ಹೇಳುತ್ತಿರುವುದನ್ನು ಕೇಳು. ಅವರು ನಮ್ಮನ್ನು ಹೆದರಿಸಲು ಪ್ರಯತ್ನಿಸುತ್ತಿದ್ದಾರೆ! ಪ್ರಭುವೇ ನಾವು ನಿನ್ನ ಸೇವಕರು. ನಿನ್ನ ವಾಕ್ಯವನ್ನು ಭಯವಿಲ್ಲದೆ ಹೇಳಲು ನೀನೇ ಸಹಾಯ ಮಾಡು. 30 ನಿನ್ನ ಕೈಚಾಚಿ ಯೇಸುವಿನ ಹೆಸರಿನ ಮೂಲಕ ರೋಗಿಗಳನ್ನು ಗುಣಪಡಿಸು; ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡು” ಎಂದು ಅವರು ಪ್ರಾರ್ಥಿಸಿದರು.

31 ಹೀಗೆ ವಿಶ್ವಾಸಿಗಳು ಪ್ರಾರ್ಥಿಸುತ್ತಿದ್ದಾಗ, ಅವರು ಸಭೆ ಸೇರಿದ್ದ ಸ್ಥಳವು ನಡುಗಿತು. ಅವರೆಲ್ಲರೂ ಪವಿತ್ರಾತ್ಮಭರಿತರಾದರು ಮತ್ತು ದೇವರ ವಾಕ್ಯವನ್ನು ಭಯವಿಲ್ಲದೆ ಪ್ರಕಟಿಸಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International