Revised Common Lectionary (Semicontinuous)
ಯೋಗ್ಯಳಾದ ಹೆಂಡತಿ
10 ಒಳ್ಳೆಯ ಹೆಂಡತಿಯನ್ನು ಪಡೆದುಕೊಳ್ಳುವುದು ತುಂಬಾ ಕಷ್ಟ.
ಆಭರಣಕ್ಕಿಂತಲೂ ಹೆಚ್ಚು ಬೆಲೆಬಾಳುವಳು.
11 ಗಂಡನ ನಂಬಿಕೆಗೆ ಆಕೆ ಪಾತ್ರಳು.
ಗಂಡ ಬಡವನಾಗುವುದೇ ಇಲ್ಲ.
12 ಒಳ್ಳೆಯ ಹೆಂಡತಿ ತನ್ನ ಗಂಡನಿಗೆ ತನ್ನ ಜೀವಮಾನವೆಲ್ಲಾ ಒಳ್ಳೆಯದನ್ನು ಮಾಡುವಳು.
ಅವನಿಗೆಂದಿಗೂ ತೊಂದರೆ ಮಾಡುವುದಿಲ್ಲ.
13 ಅವಳು ಬಟ್ಟೆ ತಯಾರಿಸಲು ಉಣ್ಣೆಯನ್ನು
ಸೆಣಬಿನ ನಾರನ್ನು ಯಾವಾಗಲೂ ಶೇಖರಿಸುವಳು.
14 ವ್ಯಾಪಾರದ ಹಡಗುಗಳಂತೆ ದೂರದಿಂದ ಬೇಕಾದ ಆಹಾರವನ್ನು
ದೂರದಿಂದ ಮನೆಗೆ ತರುವಳು.
15 ಇನ್ನೂ ಕತ್ತಲಿರುವಾಗಲೇ ಆಕೆ ಎದ್ದೇಳುವಳು.
ತನ್ನ ಕುಟುಂಬದವರಿಗೂ ತನ್ನ ಸೇವಕಿಯರಿಗೂ ಊಟ ಕೊಡುವಳು.
16 ಆಕೆ ಜಮೀನನ್ನು ಕೊಂಡುಕೊಳ್ಳುವಳು;
ಗಳಿಸಿದ ಹಣವನ್ನು ದ್ರಾಕ್ಷಿತೋಟಕ್ಕೆ ಉಪಯೋಗಿಸುವಳು.
17 ಆಕೆ ತುಂಬ ಕಷ್ಟಪಟ್ಟು ಕೆಲಸಮಾಡುವಳು.
ಬಲವಾಗಿದ್ದಾಳೆ; ತನ್ನ ಕೆಲಸಗಳನ್ನೆಲ್ಲಾ ಮಾಡಲು ಶಕ್ತಳಾಗಿದ್ದಾಳೆ.
18 ಆಕೆ ತಾನು ತಯಾರಿಸಿದ ವಸ್ತುಗಳನ್ನು ಒಳ್ಳೆಯ ಲಾಭಕ್ಕೆ ಮಾರುವಳು.
ಬಹುಹೊತ್ತಿನವರೆಗೂ ಆಕೆ ಕೆಲಸ ಮಾಡುವಳು.
19 ಆಕೆ ತಾನೇ ದಾರವನ್ನು ತಯಾರಿಸುವಳು;
ಬಟ್ಟೆಯನ್ನು ನೇಯುವಳು.
20 ಆಕೆ ಯಾವಾಗಲೂ ಬಡವರಿಗೆ ಕೊಡುವಳು;
ಕೊರತೆಯಲ್ಲಿರುವ ಜನರಿಗೆ ಸಹಾಯ ಮಾಡುವಳು.
21 ಹಿಮ ಸುರಿಯುವಾಗ, ಆಕೆ ತನ್ನ ಕುಟುಂಬದ ಬಗ್ಗೆ ಚಿಂತಿಸಬೇಕಿಲ್ಲ;
ಆಕೆ ಅವರೆಲ್ಲರಿಗೆ ಬೆಚ್ಚಗಿರುವ ಬಟ್ಟೆಗಳನ್ನು ಕೊಟ್ಟಿದ್ದಾಳೆ.
22 ಆಕೆ ಹೊದಿಕೆಗಳನ್ನು ತಯಾರಿಸುವಳು.
ಆಕೆಯು ಶ್ರೇಷ್ಠವಾದ ನಾರಗಸೆಯ ದಾರದಿಂದ ಮಾಡಿದ ಬಟ್ಟೆಗಳನ್ನು ಧರಿಸಿಕೊಳ್ಳುವಳು.
23 ಜನರು ಆಕೆಯ ಗಂಡನನ್ನು ಗೌರವಿಸುವರು.
ಅವನು ದೇಶದ ಹಿರಿಯರುಗಳಲ್ಲಿ ಒಬ್ಬನಾಗಿರುವನು.
24 ಆಕೆ ಒಳ್ಳೆಯ ವ್ಯಾಪಾರ ಮಾಡುವಳು;
ಉಡುಪುಗಳನ್ನೂ ನಡುಪಟ್ಟಿಗಳನ್ನೂ ತಯಾರಿಸಿ ಮಾರುವಳು.
25 ಆಕೆಯು ಶಕ್ತಿಯನ್ನೂ ಗಾಂಭೀರ್ಯವನ್ನೂ ಪ್ರದರ್ಶಿಸುವಳು;
ಹರ್ಷದಿಂದ ಭವಿಷ್ಯತ್ತನ್ನು ಎದುರುನೋಡುವಳು.
26 ಆಕೆಯು ಜ್ಞಾನದಿಂದ ಮಾತಾಡುವಳು;
ಪ್ರೀತಿಯಿಂದ ಸದುಪದೇಶ ಮಾಡುವಳು.
27 ಆಕೆಯು ಚಟುವಟಿಕೆಯಿಂದಿದ್ದು
ಗೃಹಕಾರ್ಯಗಳನ್ನೆಲ್ಲಾ ನೋಡಿಕೊಳ್ಳುವಳು.
28 ಮಕ್ಕಳು ಎದ್ದುನಿಂತು ಆಕೆಯನ್ನು ಅಭಿನಂದಿಸುವರು.
ಗಂಡನು ಅವಳನ್ನು ಹೊಗಳುವನು.
29 “ಅನೇಕ ಹೆಂಗಸರು ಮೆಚ್ಚಿಕೆಗೆ ಪಾತ್ರವಾದ ಕಾರ್ಯಗಳನ್ನು ಮಾಡಿದ್ದಾರೆ.
ಆದರೆ ನೀನು ಅವರೆಲ್ಲರಿಗಿಂತಲೂ ಅತ್ಯುತ್ತಮಳು” ಎಂದು ಆಕೆಯ ಗಂಡನು ಹೊಗಳುವನು.
30 ಲಾವಣ್ಯ ನಿನ್ನನ್ನು ಮೋಸಗೊಳಿಸಬಲ್ಲದು; ಸೌಂದರ್ಯ ತಾತ್ಕಾಲಿಕವಾದದ್ದು.
ಆದರೆ ಯೆಹೋವನಲ್ಲಿ ಭಯಭಕ್ತಿಯುಳ್ಳ ಹೆಂಗಸೇ, ಹೊಗಳಿಕೆಗೆ ಪಾತ್ರಳು.
31 ಆಕೆ ತನಗೆ ಯೋಗ್ಯವಾದ ಪ್ರತಿಫಲವನ್ನು ಹೊಂದಬೇಕು.
ಆಕೆಯ ಕಾರ್ಯಗಳಿಗಾಗಿ ಜನರೆಲ್ಲರೂ ಆಕೆಯನ್ನು ಬಹಿರಂಗವಾಗಿ ಸನ್ಮಾನಿಸಬೇಕು.
ಮೊದಲನೆ ಭಾಗ
(ಕೀರ್ತನೆಗಳು 1–41)
1 ಯಾವನು ದುಷ್ಟರ ಮಾರ್ಗವನ್ನು ಅನುಸರಿಸದೆ,
ಪಾಪಿಗಳಂತೆ ಜೀವಿಸದೆ,
ದೇವರಿಗೆ ಅವಿಧೇಯರಾದ ಜನರೊಂದಿಗೆ ಸೇರದೆ ಇರುವನೋ
ಅವನೇ ಭಾಗ್ಯವಂತನು.
2 ನೀತಿವಂತನಾದ ಅವನು ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಿಸುತ್ತಾ
ಅದನ್ನೇ ಹಗಲಿರುಳು ಧ್ಯಾನಿಸುವನು.
3 ಅವನು ನೀರಿನ ಕಾಲುವೆಗಳ ಬಳಿಯಲ್ಲಿ
ಹುಲುಸಾಗಿ ಬೆಳೆದಿರುವ ಮರದಂತಿರುವನು.
ಆ ಮರವು ತಕ್ಕಕಾಲದಲ್ಲಿ ಫಲಿಸುವುದು;
ಬಾಡದ ಎಲೆಗಳಿಂದ ಯಾವಾಗಲೂ ತುಂಬಿರುವುದು;
ಅಂತೆಯೇ ಅವನ ಕಾರ್ಯಗಳೆಲ್ಲಾ ಸಫಲವಾಗುವವು.
4 ದುಷ್ಟರಾದರೋ ಹಾಗಲ್ಲ!
ಅವರು ಗಾಳಿ ಬಡಿದುಕೊಂಡು ಹೋಗುವ ಹೊಟ್ಟಿನಂತಿರುವರು.
5 ನ್ಯಾಯತೀರ್ಪಿನ ಕಾಲ ಬಂದಾಗ ದುಷ್ಟರಿಗೆ ಅಪರಾಧಿಗಳೆಂದು ತೀರ್ಪಾಗುವುದು.
ಪಾಪಿಗಳಿಗೆ ನೀತಿವಂತರ ಮಧ್ಯದಲ್ಲಿ ಸ್ಥಳವಿರುವುದಿಲ್ಲ.
6 ಯೆಹೋವನು ನೀತಿವಂತರನ್ನು ಸಂರಕ್ಷಿಸುವನು;
ದುಷ್ಟರನ್ನಾದರೋ ನಾಶಪಡಿಸುವನು.
ನಿಜವಾದ ಜ್ಞಾನ
13 ನಿಮ್ಮಲ್ಲಿ ಜ್ಞಾನವಂತರಾಗಲಿ ಬದ್ಧಿವಂತರಾಗಲಿ ಇದ್ದಾರೋ? ಅಂಥವನು ತನ್ನ ಜ್ಞಾನವನ್ನು ಯೋಗ್ಯವಾಗಿ ಬದುಕುವುದರ ಮೂಲಕ ತೋರ್ಪಡಿಸಲಿ. ಅವನು ಒಳ್ಳೆಯ ಕಾರ್ಯಗಳನ್ನು ದೀನತೆಯಿಂದ ಮಾಡಲಿ. ಜ್ಞಾನಿಯಾದವನು ಕೊಚ್ಚಿಕೊಳ್ಳುವುದಿಲ್ಲ. 14 ನೀವು ಸ್ವಾರ್ಥಿಗಳೂ ತೀಕ್ಷ್ಣವಾದ ಮತ್ಸರವನ್ನು ಹೃದಯದಲ್ಲಿ ಹೊಂದಿರುವವರೂ ಆಗಿದ್ದರೆ, ನೀವು ಕೊಚ್ಚಿಕೊಳ್ಳುವುದರಲ್ಲಿ ಅರ್ಥವೇ ಇಲ್ಲ. ಏಕೆಂದರೆ ಅದು ಕೇವಲ ಸುಳ್ಳಷ್ಟೇ. 15 ಇಂಥ “ಜ್ಞಾನ”ವು ದೇವರಿಂದ ಬರದೆ ಲೋಕದಿಂದ ಬರುತ್ತದೆ. ಅದು ಆತ್ಮ ಸಂಬಂಧವಾದುದಲ್ಲ. ಅದು ದೆವ್ವಗಳಿಂದ ಬಂದುದು. 16 ಹೊಟ್ಟೆಕಿಚ್ಚು ಮತ್ತು ಸ್ವಾರ್ಥತೆಗಳು ಎಲ್ಲಿರುವವೋ ಅಲ್ಲಿ ಗಲಿಬಿಲಿಯೂ ಎಲ್ಲಾ ಬಗೆಯ ನೀಚತನಗಳೂ ಇರುತ್ತವೆ. 17 ಆದರೆ ದೇವರಿಂದ ಬರುವ ಜ್ಞಾನವು ಹೀಗಿರುತ್ತದೆ: ಮೊದಲನೆಯದಾಗಿ ಅದು ಪರಿಶುದ್ಧವಾದದ್ದು. ಅದು ಶಾಂತಿದಾಯಕವಾದದ್ದು, ಸಾತ್ವಿಕವಾದದ್ದು ಮತ್ತು ಸುಲಭವಾಗಿ ಮೆಚ್ಚಿಕೊಳ್ಳುವಂಥದ್ದು. ಈ ಜ್ಞಾನವು ತೊಂದರೆಯಲ್ಲಿರುವ ಜನರಿಗೆ ಸಹಾಯ ಮಾಡಲು ಮತ್ತು ಇತರ ಜನರಿಗೆ ಒಳ್ಳೆಯದನ್ನು ಮಾಡಲು ಯಾವಾಗಲೂ ಸಿದ್ಧವಾಗಿರುತ್ತದೆ. ಈ ಜ್ಞಾನವು ಯಾವಾಗಲೂ ನ್ಯಾಯವಾದದ್ದು ಮತ್ತು ಯಥಾರ್ಥವಾದದ್ದು. 18 ಶಾಂತಿ ಸ್ಥಾಪಿಸುವುದಕ್ಕಾಗಿ ಸಮಾಧಾನಕರವಾದ ರೀತಿಯಲ್ಲಿ ಕಾರ್ಯ ಮಾಡುವವರು ಯೋಗ್ಯವಾದ ಬದುಕಿನಿಂದ ಬರುವ ಉತ್ತಮ ಫಲಗಳನ್ನು ಪಡೆಯುತ್ತಾರೆ.
ದೇವರಿಗೆ ನಿಮ್ಮನ್ನು ಒಪ್ಪಿಸಿಕೊಳ್ಳಿ
4 ನಿಮ್ಮ ಹೋರಾಟಗಳು ಮತ್ತು ವಾದವಿವಾದಗಳು ಎಲ್ಲಿಂದ ಬರುತ್ತವೆಯೆಂಬುದು ನಿಮಗೆ ತಿಳಿದಿದೆಯೋ? ನಿಮ್ಮ ಸ್ವಾರ್ಥಪರ ಆಸೆಗಳಿಂದ ನಿಮ್ಮ ಹೋರಾಟಗಳು ಮತ್ತು ವಾದವಿವಾದಗಳು ಬರುತ್ತವೆ. ಅವು ನಿಮ್ಮ ಅಂತರಂಗದಲ್ಲಿ ಯುದ್ಧ ಮಾಡುತ್ತಿವೆ. 2 ನೀವು ಅನೇಕ ವಸ್ತುಗಳಿಗಾಗಿ ಆಶಿಸುತ್ತೀರಿ. ಆದರೆ ಅವುಗಳನ್ನು ಪಡೆಯುವುದರಲ್ಲಿ ವಿಫಲರಾಗುತ್ತೀರಿ. ಆದ್ದರಿಂದ ನೀವು ಕೊಲೆ ಮಾಡುತ್ತೀರಿ ಮತ್ತು ಇತರರ ಬಗ್ಗೆ ಅಸೂಯೆಪಡುತ್ತೀರಿ. ಆದರೆ ನೀವು ಆಸೆಪಟ್ಟದ್ದನ್ನು ಇನ್ನೂ ಪಡೆಯಲಾರದವರಾಗಿರುವಿರಿ. ಆದ್ದರಿಂದ ನೀವು ವಾದವಿವಾದ ಮಾಡುವಿರಿ ಮತ್ತು ಹೊಡೆದಾಡುವಿರಿ. ನೀವು ದೇವರನ್ನು ಕೇಳಿಕೊಳ್ಳಲಿಲ್ಲ. ಆದ್ದರಿಂದಲೇ, ನೀವು ಆಸೆ ಪಟ್ಟದ್ದು ನಿಮಗೆ ದೊರೆಯಲಿಲ್ಲ. 3 ಮತ್ತು ನೀವು ಕೇಳಿಕೊಂಡಾಗ ನಿಮಗೆ ಅವು ಸಿಗಲಿಲ್ಲ. ಏಕೆಂದರೆ ನಿಮ್ಮ ಉದ್ದೇಶವು ಸರಿಯಾಗಿರಲಿಲ್ಲ. ನೀವು ಅವುಗಳನ್ನು ಕೇವಲ ನಿಮ್ಮ ಸ್ವಂತ ಸುಖಕ್ಕಾಗಿ ಕೇಳಿಕೊಂಡಿರಿ.
7 ಆದ್ದರಿಂದ ದೇವರಿಗೆ ನಿಮ್ಮನ್ನು ಒಪ್ಪಿಸಿಕೊಂಡು ಸೈತಾನನನ್ನು ಎದುರಿಸಿರಿ. ಆಗ ಅವನು ನಿಮ್ಮಿಂದ ದೂರ ಓಡಿಹೋಗುತ್ತಾನೆ. 8 ದೇವರ ಸಮೀಪಕ್ಕೆ ಬನ್ನಿ, ಆಗ ದೇವರು ನಿಮ್ಮ ಸಮೀಪಕ್ಕೆ ಬರುತ್ತಾನೆ. ನೀವು ಪಾಪಿಗಳು, ಆದ್ದರಿಂದ ನಿಮ್ಮ ಜೀವಿತಗಳಿಂದ ಪಾಪಗಳನ್ನು ತೊಳೆದು ಹಾಕಿರಿ. ನೀವು ದೇವರನ್ನು ಮತ್ತು ಈ ಲೋಕವನ್ನು ಏಕಕಾಲದಲ್ಲಿ ಅನುಸರಿಸಲು ಪ್ರಯತ್ನಿಸುತ್ತಿರುವಿರಿ. ನಿಮ್ಮ ಆಲೋಚನೆಗಳನ್ನು ಪರಿಶುದ್ಧಗೊಳಿಸಿರಿ.
ತನ್ನ ಮರಣದ ಬಗ್ಗೆ ಯೇಸುವಿನ ಪ್ರಕಟನೆ
(ಮತ್ತಾಯ 17:22-23; ಲೂಕ 9:43-45)
30 ನಂತರ ಯೇಸು ಮತ್ತು ಆತನ ಶಿಷ್ಯರು ಆ ಸ್ಥಳದಿಂದ ಹೊರಟು ಗಲಿಲಾಯದ ಮೂಲಕ ಪ್ರಯಾಣ ಮಾಡಿದರು. ತಾವು ಎಲ್ಲಿದ್ದೇವೆಂಬುದು ಜನರಿಗೆ ತಿಳಿಯಬಾರದೆಂಬುದು ಯೇಸುವಿನ ಉದ್ದೇಶವಾಗಿತ್ತು. 31 ಏಕೆಂದರೆ ಆತನು ತನ್ನ ಶಿಷ್ಯರಿಗೆ ಏಕಾಂತವಾಗಿ ಉಪದೇಶಿಸಬೇಕೆಂದಿದ್ದನು. ಯೇಸು ಅವರಿಗೆ, “ಮನುಷ್ಯಕುಮಾರನನ್ನು ಜನರ ವಶಕ್ಕೆ ಕೊಡುವರು. ಜನರು ಆತನನ್ನು ಕೊಲ್ಲುವರು. ಕೊಲ್ಲಲ್ಪಟ್ಟ ಮೂರನೆಯ ದಿನದಲ್ಲಿ ಆತನು ಜೀವಂತವಾಗಿ ಎದ್ದುಬರುವನು” ಎಂದು ಹೇಳಿದನು. 32 ಆದರೆ ಯೇಸು ಹೇಳಿದ್ದು ಶಿಷ್ಯರಿಗೆ ಅರ್ಥವಾಗಲಿಲ್ಲ. ಮತ್ತು ಅದರ ಅರ್ಥವನ್ನು ಕೇಳುವುದಕ್ಕೂ ಅವರು ಭಯಪಟ್ಟರು.
ಯಾರು ಅತ್ಯಂತ ದೊಡ್ಡವರು?
(ಮತ್ತಾಯ 18:1-5; ಲೂಕ 9:46-48)
33 ಯೇಸು ಮತ್ತು ಆತನ ಶಿಷ್ಯರು ಕಪೆರ್ನೌಮಿಗೆ ಹೋದರು. ಅವರು ಒಂದು ಮನೆಯೊಳಗಿದ್ದಾಗ ಆತನು ತನ್ನ ಶಿಷ್ಯರಿಗೆ, “ಈ ದಿನ ನೀವು ದಾರಿಯಲ್ಲಿ ವಾದಮಾಡುತ್ತಿದ್ದುದ್ದನ್ನು ಕೇಳಿಸಿಕೊಂಡೆ. ನೀವು ಯಾವುದರ ಬಗ್ಗೆ ವಾದಮಾಡುತ್ತಿದ್ದಿರಿ?” ಎಂದನು. 34 ಆದರೆ ಶಿಷ್ಯರು ಉತ್ತರಿಸಲಿಲ್ಲ. ಏಕೆಂದರೆ ತಮ್ಮಲ್ಲಿ ಎಲ್ಲರಿಗಿಂತಲೂ ದೊಡ್ಡವನು ಯಾರೆಂಬುದರ ಕುರಿತು ಅವರು ವಾಗ್ವಾದ ಮಾಡಿದ್ದರು.
35 ಯೇಸು ಕುಳಿತುಕೊಂಡು, ಹನ್ನೆರಡು ಜನ ಅಪೊಸ್ತಲರನ್ನು ತನ್ನ ಬಳಿಗೆ ಕರೆದು ಅವರಿಗೆ, “ನಿಮ್ಮಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಯಾಗಬೇಕೆಂದು ಬಯಸುವವನು ಉಳಿದ ಎಲ್ಲರನ್ನು ತನಗಿಂತಲೂ ಹೆಚ್ಚು ಪ್ರಮುಖರೆಂದು ಭಾವಿಸಿಕೊಂಡು ಎಲ್ಲರ ಸೇವೆಮಾಡಬೇಕು” ಎಂದು ಹೇಳಿದನು.
36 ನಂತರ ಯೇಸು ಒಂದು ಚಿಕ್ಕ ಮಗುವನ್ನು ಕರೆದು, ಆ ಮಗುವನ್ನು ಶಿಷ್ಯರ ಮುಂದೆ ನಿಲ್ಲಿಸಿ, ಅದನ್ನು ತನ್ನ ಕೈಗಳಲ್ಲಿ ಎತ್ತಿಕೊಂಡು ಅವರಿಗೆ, 37 “ನನ್ನ ಹೆಸರಿನಲ್ಲಿ ಇಂಥ ಮಕ್ಕಳನ್ನು ಸ್ವೀಕರಿಸಿಕೊಳ್ಳುವವನು ನನ್ನನ್ನೇ ಸ್ವೀಕರಿಸಿಕೊಂಡಂತಾಯಿತು. ನನ್ನನ್ನು ಸ್ವೀಕರಿಸಿಕೊಳ್ಳುವವನು, ನನ್ನನ್ನು ಕಳುಹಿಸಿದಾತನನ್ನೇ ಸ್ವೀಕರಿಸಿಕೊಂಡಂತಾಯಿತು” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International