Revised Common Lectionary (Semicontinuous)
ಮೊದಲನೆ ಭಾಗ
(ಕೀರ್ತನೆಗಳು 1–41)
1 ಯಾವನು ದುಷ್ಟರ ಮಾರ್ಗವನ್ನು ಅನುಸರಿಸದೆ,
ಪಾಪಿಗಳಂತೆ ಜೀವಿಸದೆ,
ದೇವರಿಗೆ ಅವಿಧೇಯರಾದ ಜನರೊಂದಿಗೆ ಸೇರದೆ ಇರುವನೋ
ಅವನೇ ಭಾಗ್ಯವಂತನು.
2 ನೀತಿವಂತನಾದ ಅವನು ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಿಸುತ್ತಾ
ಅದನ್ನೇ ಹಗಲಿರುಳು ಧ್ಯಾನಿಸುವನು.
3 ಅವನು ನೀರಿನ ಕಾಲುವೆಗಳ ಬಳಿಯಲ್ಲಿ
ಹುಲುಸಾಗಿ ಬೆಳೆದಿರುವ ಮರದಂತಿರುವನು.
ಆ ಮರವು ತಕ್ಕಕಾಲದಲ್ಲಿ ಫಲಿಸುವುದು;
ಬಾಡದ ಎಲೆಗಳಿಂದ ಯಾವಾಗಲೂ ತುಂಬಿರುವುದು;
ಅಂತೆಯೇ ಅವನ ಕಾರ್ಯಗಳೆಲ್ಲಾ ಸಫಲವಾಗುವವು.
4 ದುಷ್ಟರಾದರೋ ಹಾಗಲ್ಲ!
ಅವರು ಗಾಳಿ ಬಡಿದುಕೊಂಡು ಹೋಗುವ ಹೊಟ್ಟಿನಂತಿರುವರು.
5 ನ್ಯಾಯತೀರ್ಪಿನ ಕಾಲ ಬಂದಾಗ ದುಷ್ಟರಿಗೆ ಅಪರಾಧಿಗಳೆಂದು ತೀರ್ಪಾಗುವುದು.
ಪಾಪಿಗಳಿಗೆ ನೀತಿವಂತರ ಮಧ್ಯದಲ್ಲಿ ಸ್ಥಳವಿರುವುದಿಲ್ಲ.
6 ಯೆಹೋವನು ನೀತಿವಂತರನ್ನು ಸಂರಕ್ಷಿಸುವನು;
ದುಷ್ಟರನ್ನಾದರೋ ನಾಶಪಡಿಸುವನು.
1 ದಾವೀದನ ಮಗನೂ ಜೆರುಸಲೇಮಿನಲ್ಲಿ ಆಳುತ್ತಿದ್ದ ರಾಜನೂ ಆಗಿದ್ದ ಪ್ರಸಂಗಿಯ ಮಾತುಗಳು. ಪ್ರಸಂಗಿಯು ಹೇಳುವುದೇನೆಂದರೆ, 2 ವ್ಯರ್ಥವೇ ವ್ಯರ್ಥ, ವ್ಯರ್ಥವೇ ವ್ಯರ್ಥ, ಸಮಸ್ತವೂ ವ್ಯರ್ಥ! 3 ಈ ಲೋಕದಲ್ಲಿ ಮನುಷ್ಯರು ಪಡುವ ಪ್ರಯಾಸದಿಂದ ಅವರಿಗೇನು ಲಾಭ?
ಪ್ರಕೃತಿಯಲ್ಲಿ ಬದಲೇನೂ ಇಲ್ಲ
4 ಒಂದು ತಲೆಮಾರು ಹೋಗಿ ಮತ್ತೊಂದು ತಲೆಮಾರು ಬರುವುದು. ಆದರೆ ಭೂಮಿ ಎಂದೆಂದಿಗೂ ಮುಂದುವರಿಯುವುದು. 5 ಸೂರ್ಯನು ಏರುವನು ಮತ್ತು ಇಳಿಯುವನು; ಬಳಿಕ ಅದೇ ಸ್ಥಳದಲ್ಲಿ ಮತ್ತೆ ಏರಲು ಅವಸರಪಡುವನು.
6 ಗಾಳಿಯು ದಕ್ಷಿಣಕ್ಕೆ ಬೀಸುವುದು; ನಂತರ ಉತ್ತರಕ್ಕೆ ತಿರುಗಿಕೊಳ್ಳುವುದು; ಅದು ತಿರುತಿರುಗುತ್ತಾ ಹೋಗಿ ತಿರುತಿರುಗುತ್ತಾ ಬರುವುದು.
7 ನದಿಗಳು ಎಲ್ಲಿಗೆ ಹರಿದುಹೋಗುತ್ತವೋ ಅಲ್ಲಿಗೇ ತಿರಿಗಿ ಹೋಗುವವು. ನದಿಗಳೆಲ್ಲಾ ಸಮುದ್ರಕ್ಕೆ ಹರಿದು ಹೋಗುತ್ತಲೇ ಇರುತ್ತವೆ; ಆದರೂ ಸಮುದ್ರವು ತುಂಬುವುದಿಲ್ಲ.
8 ಮಾತುಗಳಿಂದ ಯಾವುದನ್ನೂ ಸಂಪೂರ್ಣವಾಗಿ ವಿವರಿಸಲು ಸಾಧ್ಯವಿಲ್ಲ; ಆದರೂ ಜನರು ಮಾತಾಡುತ್ತಲೇ ಇರುವರು. ನಮ್ಮ ಕಿವಿಗಳು ಮಾತುಗಳನ್ನು ಕೇಳುತ್ತಲೇ ಇರುತ್ತವೆ; ಆದರೂ ನಮ್ಮ ಕಿವಿಗಳು ತುಂಬುವುದಿಲ್ಲ. ನಮ್ಮ ಕಣ್ಣುಗಳು ನೋಡುತ್ತಲೇ ಇರುತ್ತವೆ; ಆದರೂ ಅವು ತುಂಬುವುದಿಲ್ಲ.
ಲೋಕದಲ್ಲಿ ಹೊಸದೇನೂ ಇಲ್ಲ
9 ಇದ್ದದ್ದೇ ಇರುವುದು; ನಡೆದದ್ದೇ ನಡೆಯುವುದು. ಲೋಕದಲ್ಲಿ ಹೊಸದೇನೂ ಇಲ್ಲ.
10 “ಇಗೋ, ಇದು ಹೊಸದು!” ಎಂದು ಒಬ್ಬನು ಹೇಳಬಹುದು. ಆದರೆ ಅದು ಸಹ ಮೊದಲಿಂದ ಇಲ್ಲಿ ಇದ್ದದ್ದೇ. ನಮಗಿಂತ ಮೊದಲೇ ಅದು ಇಲ್ಲಿತ್ತು.
11 ಬಹುಕಾಲದ ಹಿಂದಿನ ಘಟನೆಗಳನ್ನು ಜನರು ಜ್ಞಾಪಿಸಿಕೊಳ್ಳುವುದಿಲ್ಲ. ಈಗ ನಡೆಯುತ್ತಿರುವ ಸಂಗತಿಗಳನ್ನು ಮುಂದಿನ ಕಾಲದ ಜನರು ಜ್ಞಾಪಿಸಿಕೊಳ್ಳುವುದಿಲ್ಲ. ಹೀಗೆ, ತಮಗಿಂತ ಮುಂಚೆ ಇದ್ದವರು ಮಾಡಿದ್ದನ್ನು ಜನರು ಜ್ಞಾಪಿಸಿಕೊಳ್ಳುವುದಿಲ್ಲ.
ಜ್ಞಾನದಿಂದ ಸಂತೋಷವಾಗುವುದೇ?
12 ಪ್ರಸಂಗಿಯಾದ ನಾನು ಜೆರುಸಲೇಮಿನಲ್ಲಿ ಇಸ್ರೇಲರಿಗೆ ರಾಜನಾಗಿದ್ದೆನು. 13 ಈ ಜೀವಿತದ ಎಲ್ಲಾ ವಿಷಯಗಳನ್ನು ಜ್ಞಾನದಿಂದ ವಿಮರ್ಶಿಸಿ ಕಲಿತುಕೊಳ್ಳಲು ನಿರ್ಧರಿಸಿದೆನು. ದೇವರು ಮನುಷ್ಯರಿಗೆ ಕೊಟ್ಟಿರುವ ಕೆಲಸವೆಲ್ಲ ಬಹು ಪ್ರಯಾಸವೇ. 14 ಈ ಲೋಕದ ಕೆಲಸಗಳನ್ನೆಲ್ಲ ನೋಡಿದಾಗ ಅವೆಲ್ಲ ಕೇವಲ ವ್ಯರ್ಥವೆಂದು ಕಂಡುಕೊಂಡೆನು. ಅವು ಗಾಳಿಯನ್ನು ಹಿಡಿಯಲು ಪ್ರಯತ್ನಿಸಿದಷ್ಟೇ ವ್ಯರ್ಥವಾಗಿವೆ. 15 ವಕ್ರವಾದದ್ದನ್ನು ನೆಟ್ಟಗೆ ಮಾಡಲು ಸಾಧ್ಯವಿಲ್ಲ. ಇಲ್ಲದ್ದನ್ನು ಲೆಕ್ಕಿಸುವುದಕ್ಕೂ ಸಾಧ್ಯವಿಲ್ಲ.
16 ನಾನು ಮನಸ್ಸಿನಲ್ಲಿ, “ನಾನು ಬಹು ಜ್ಞಾನಿ. ನನಗಿಂತ ಮೊದಲು ಜೆರುಸಲೇಮನ್ನು ಆಳಿದ ಎಲ್ಲಾ ರಾಜರುಗಳಿಗಿಂತ ನಾನು ಜ್ಞಾನಿ. ನಾನು ಜ್ಞಾನವನ್ನೂ ವಿವೇಕವನ್ನೂ ಚೆನ್ನಾಗಿ ತಿಳಿದುಕೊಂಡಿರುವೆ” ಎಂದುಕೊಂಡೆನು.
17 ಜ್ಞಾನವನ್ನಲ್ಲದೆ ಮೂಢತನವನ್ನೂ ಬುದ್ಧಿಹೀನತೆಯನ್ನೂ ಗ್ರಹಿಸಿಕೊಳ್ಳಲು ನಿರ್ಧರಿಸಿದೆನು. ಆದರೆ ಇದು ಸಹ ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥವೆಂದು ಕಲಿತುಕೊಂಡೆನು. 18 ಬಹು ಜ್ಞಾನದಿಂದ ಬಹು ಸಂಕಟ; ಹೆಚ್ಚು ತಿಳುವಳಿಕೆಯಿಂದ ಹೆಚ್ಚು ದುಃಖ.
29 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ನೀವು ಪ್ರವಾದಿಗಳ ಸಮಾಧಿಗಳನ್ನು ಕಟ್ಟುತ್ತೀರಿ. ಒಳ್ಳೆಯವರಾಗಿ ಜೀವಿಸದವರ ಗೋರಿಗಳಿಗೆ ಹೋಗಿ ಗೌರವ ತೋರಿಸುತ್ತೀರಿ. 30 ‘ನಮ್ಮ ಪಿತೃಗಳ ಕಾಲದಲ್ಲಿ ನಾವು ಇದ್ದಿದ್ದರೆ ಈ ಪ್ರವಾದಿಗಳನ್ನು ಕೊಲ್ಲುವುದಕ್ಕೆ ಅವರಿಗೆ ಸಹಾಯ ಮಾಡುತ್ತಿರಲಿಲ್ಲ’ ಎಂದು ಹೇಳುತ್ತೀರಿ. 31 ಆ ಪ್ರವಾದಿಗಳನ್ನು ಕೊಂದವರ ಮಕ್ಕಳು (ಸಂತತಿಯವರು) ನೀವೇ ಎಂಬುದಕ್ಕೆ ಇದೇ ಆಧಾರವಾಗಿದೆ. 32 ನಿಮ್ಮ ಪಿತೃಗಳು ಪ್ರಾರಂಭಿಸಿದ ಆ ಪಾಪವನ್ನು ನೀವು ಪೂರ್ತಿಮಾಡುವಿರಿ!
33 “ನೀವು ಸರ್ಪಗಳು! ನೀವು ವಿಷಕರವಾದ ಹಾವುಗಳ ಕುಟುಂಬದವರು! ನೀವು ದೇವರಿಂದ ತಪ್ಪಿಸಿಕೊಳ್ಳಲಾರಿರಿ. ನೀವೆಲ್ಲರು ಅಪರಾಧಿಗಳೆಂಬ ತೀರ್ಪುಹೊಂದಿ ನರಕಕ್ಕೆ ಹೋಗುವಿರಿ! 34 ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ಬಳಿಗೆ ಪ್ರವಾದಿಗಳನ್ನೂ ಜ್ಞಾನಿಗಳನ್ನೂ ಉಪದೇಶಕರನ್ನೂ ಕಳುಹಿಸುತ್ತೇನೆ. ನೀವು ಅವರಲ್ಲಿ ಕೆಲವರನ್ನು ಕೊಲ್ಲುವಿರಿ; ಇನ್ನು ಕೆಲವರನ್ನು ಶಿಲುಬೆಗೇರಿಸುವಿರಿ; ಇತರ ಕೆಲವರನ್ನು ನಿಮ್ಮ ಸಭಾಮಂದಿರಗಳಲ್ಲಿ ಹೊಡೆಯುವಿರಿ; ನೀವು ಅವರನ್ನು ಊರಿಂದ ಊರಿಗೆ ಅಟ್ಟಿಬಿಡುವಿರಿ.
35 “ಆದ್ದರಿಂದ ಭೂಮಿಯ ಮೇಲೆ ಕೊಲ್ಲಲ್ಪಟ್ಟ ಎಲ್ಲಾ ಸತ್ಪುರುಷರ ಕೊಲೆಯ ಅಪರಾಧಕ್ಕೆ ನೀವು ಗುರಿಯಾಗುವಿರಿ. ಸತ್ಪುರುಷನಾದ ಹೇಬೆಲನನ್ನು ಮೊದಲುಗೊಂಡು ಬರಕೀಯನ ಮಗನಾದ ಜಕರೀಯನನ್ನು ಕೊಂದದ್ದಕ್ಕೆ ನೀವು ಅಪರಾಧಿಗಳಾಗುವಿರಿ. ಜಕರೀಯನು ದೇವಾಲಯಕ್ಕೂ ಯಜ್ಞವೇದಿಕೆಗೂ ನಡುವೆ ಕೊಲ್ಲಲ್ಪಟ್ಟನು. 36 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಈ ಕಾಲದಲ್ಲಿ ಜೀವಿಸುತ್ತಿರುವ ನಿಮ್ಮ ಮೇಲೆ ಈ ಅಪರಾಧಗಳೆಲ್ಲಾ ಬರುತ್ತವೆ.
ಜೆರುಸಲೇಮಿನ ಜನರಿಗೆ ಯೇಸು ನೀಡಿದ ಎಚ್ಚರಿಕೆ
(ಲೂಕ 13:34-35)
37 “ಜೆರುಸಲೇಮೇ, ಜೆರುಸಲೇಮೇ! ಪ್ರವಾದಿಗಳನ್ನು ಕೊಲ್ಲುವವಳೇ, ದೇವರು ನಿನ್ನ ಬಳಿಗೆ ಕಳುಹಿಸಿದ ಜನರನ್ನು ಕಲ್ಲುಗಳಿಂದ ಕೊಲ್ಲುವವಳೇ, ಅನೇಕ ಸಲ ನಿನ್ನ ಜನರಿಗೆ ನಾನು ಸಹಾಯ ಮಾಡಬೇಕೆಂದಿದ್ದೆನು. ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಸೇರಿಸಿಕೊಳ್ಳುವ ಹಾಗೆ ನಿನ್ನ ಜನರನ್ನು ಸೇರಿಸಿಕೊಳ್ಳಲು ನನಗೆ ಮನಸ್ಸಿತ್ತು. ಆದರೆ ನೀನು ಒಪ್ಪಲಿಲ್ಲ. 38 ಈಗ ನಿನ್ನ ಮನೆಯು ಸಂರ್ಪೂಣವಾಗಿ ಬರಿದಾಗಿಬಿಟ್ಟಿದೆ. 39 ನಾನು ನಿನಗೆ ಹೇಳುವುದೇನೆಂದರೆ, ‘ಪ್ರಭುವಿನ ಹೆಸರಿನಲ್ಲಿ ಬರುವಾತನನ್ನು ದೇವರು ಆಶೀರ್ವದಿಸಲಿ’(A) ಎಂದು ನೀನು ಹೇಳುವ ತನಕ ನನ್ನನ್ನು ನೋಡುವುದೇ ಇಲ್ಲ.”
Kannada Holy Bible: Easy-to-Read Version. All rights reserved. © 1997 Bible League International