Revised Common Lectionary (Semicontinuous)
ಮೊದಲನೆ ಭಾಗ
(ಕೀರ್ತನೆಗಳು 1–41)
1 ಯಾವನು ದುಷ್ಟರ ಮಾರ್ಗವನ್ನು ಅನುಸರಿಸದೆ,
ಪಾಪಿಗಳಂತೆ ಜೀವಿಸದೆ,
ದೇವರಿಗೆ ಅವಿಧೇಯರಾದ ಜನರೊಂದಿಗೆ ಸೇರದೆ ಇರುವನೋ
ಅವನೇ ಭಾಗ್ಯವಂತನು.
2 ನೀತಿವಂತನಾದ ಅವನು ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಿಸುತ್ತಾ
ಅದನ್ನೇ ಹಗಲಿರುಳು ಧ್ಯಾನಿಸುವನು.
3 ಅವನು ನೀರಿನ ಕಾಲುವೆಗಳ ಬಳಿಯಲ್ಲಿ
ಹುಲುಸಾಗಿ ಬೆಳೆದಿರುವ ಮರದಂತಿರುವನು.
ಆ ಮರವು ತಕ್ಕಕಾಲದಲ್ಲಿ ಫಲಿಸುವುದು;
ಬಾಡದ ಎಲೆಗಳಿಂದ ಯಾವಾಗಲೂ ತುಂಬಿರುವುದು;
ಅಂತೆಯೇ ಅವನ ಕಾರ್ಯಗಳೆಲ್ಲಾ ಸಫಲವಾಗುವವು.
4 ದುಷ್ಟರಾದರೋ ಹಾಗಲ್ಲ!
ಅವರು ಗಾಳಿ ಬಡಿದುಕೊಂಡು ಹೋಗುವ ಹೊಟ್ಟಿನಂತಿರುವರು.
5 ನ್ಯಾಯತೀರ್ಪಿನ ಕಾಲ ಬಂದಾಗ ದುಷ್ಟರಿಗೆ ಅಪರಾಧಿಗಳೆಂದು ತೀರ್ಪಾಗುವುದು.
ಪಾಪಿಗಳಿಗೆ ನೀತಿವಂತರ ಮಧ್ಯದಲ್ಲಿ ಸ್ಥಳವಿರುವುದಿಲ್ಲ.
6 ಯೆಹೋವನು ನೀತಿವಂತರನ್ನು ಸಂರಕ್ಷಿಸುವನು;
ದುಷ್ಟರನ್ನಾದರೋ ನಾಶಪಡಿಸುವನು.
ಯಾಕೆಯ ಮಾಗನಾದ ಅಗೂರನ ಜ್ಞಾನೋಕ್ತಿಗಳು
30 ಮಾಸ್ಸಾದ ಯಾಕೆ ಎಂಬವನ ಮಗನಾದ ಅಗೂರನ ನುಡಿಗಳಿವು. ಇಥಿಯೇಲನಿಗೂ ಉಕ್ಕಾಲನಿಗೂ ಇವನು ನೀಡಿದ ಸಂದೇಶವಿದು:
2 ನಾನು ಬೇರೆಯವರಿಗಿಂತ ದಡ್ಡನಾಗಿರುವೆ. ಸರ್ವಸಾಮಾನ್ಯವಾದ ಬುದ್ಧಿಯೂ ನನಗಿಲ್ಲ. 3 ನಾನು ಜ್ಞಾನವನ್ನು ಕಲಿತವನಲ್ಲ; ಪರಿಶುದ್ಧನಾದ ದೇವರ ಬಗ್ಗೆಯೂ ಗೊತ್ತಿಲ್ಲ. 4 ಎಂದಾದರೂ ಪರಲೋಕಕ್ಕೆ ಏರಿಹೋಗಿ ಇಳಿದುಬಂದವನು ಯಾರು? ಗಾಳಿಯನ್ನು ತನ್ನ ಕೈಯಲ್ಲಿ ಹಿಡಿದವನು ಯಾರು? ತನ್ನ ಉಡುಪಿನಲ್ಲಿ ಸಮುದ್ರವನ್ನು ಮೂಟೆಕಟ್ಟಿದವನು ಯಾರು? ಭೂಮಿಗೆ ಮೇರೆಗಳನ್ನು ಹಾಕಿದವನು ಯಾರು? ಈ ಕಾರ್ಯಗಳನ್ನು ಯಾವನಾದರೂ ಮಾಡಿದ್ದರೆ, ಅವನು ಯಾರು? ಅವನು ಕುಟುಂಬ ಎಲ್ಲಿದೆ?
5 ದೇವರು ಹೇಳುವ ಪ್ರತಿಯೊಂದು ಮಾತೂ ನಂಬಿಕೆಗೆ ಯೋಗ್ಯವಾಗಿದೆ. ತನ್ನ ಬಳಿಗೆ ಬರುವ ಜನರಿಗೆ ದೇವರು ಆಶ್ರಯದುರ್ಗವಾಗಿದ್ದಾನೆ. 6 ಆದ್ದರಿಂದ ದೇವರು ಹೇಳುವ ಸಂಗತಿಗಳಿಗೆ ಏನನ್ನೂ ಸೇರಿಸಬೇಡ. ನೀನು ಬದಲಾಯಿಸಿದರೆ, ಆತನು ನಿನ್ನನ್ನು ಶಿಕ್ಷಿಸುವನು ಮತ್ತು ನಿನ್ನನ್ನು ಸುಳ್ಳುಗಾರನೆಂದು ರುಜುವಾತು ಮಾಡುವನು.
7 ಯೆಹೋವನೇ, ನಾನು ಸಾಯುವ ಮೊದಲು ನೀನು ನನಗೋಸ್ಕರ ಎರಡು ಕಾರ್ಯಗಳನ್ನು ಮಾಡಬೇಕೆಂದು ನಿನ್ನನ್ನು ಕೇಳಿಕೊಳ್ಳುವೆ. 8 ಸುಳ್ಳುಹೇಳದಂತೆ ನನಗೆ ಸಹಾಯಮಾಡು. ನನ್ನನ್ನು ತುಂಬ ಐಶ್ವರ್ಯವಂತನನ್ನಾಗಿಯೂ ಮಾಡಬೇಡ; ತುಂಬ ಬಡವನನ್ನಾಗಿಯೂ ಮಾಡಬೇಡ; ಅನುದಿನಕ್ಕೆ ಬೇಕಾದವುಗಳನ್ನು ಮಾತ್ರ ಕೊಡು. 9 ನನಗೆ ಹೆಚ್ಚಾಗಿದ್ದರೆ, ನಿನ್ನನ್ನೇ ತಿರಸ್ಕರಿಸಿ, “ನನಗೆ ಯೆಹೋವನ ಅಗತ್ಯವಿಲ್ಲ” ಎಂದು ಹೇಳುವೆನು. ನಾನು ಬಡವನಾಗಿದ್ದರೆ, ಕಳವುಮಾಡಿ ನಿನ್ನ ಹೆಸರಿಗೆ ಅವಮಾನ ಮಾಡುವೆನು.
10 ಸೇವಕನ ಬಗ್ಗೆ ಯಜಮಾನನಿಗೆ ಚಾಡಿ ಹೇಳಬೇಡ. ನೀನು ಹೇಳಿದರೆ, ಅವನು ನಿನ್ನನ್ನು ಶಪಿಸುವನು; ಆ ಶಾಪದಿಂದ ನೀನು ಸಂಕಟಪಡುವೆ.
ಶಿಲುಬೆಗೆರಿಸಲ್ಪಟ್ಟ ಕ್ರಿಸ್ತನ ಕುರಿತಾದ ಸಂದೇಶ
2 ಪ್ರಿಯ ಸಹೋದರ ಸಹೋದರಿಯರೇ, ನಾನು ನಿಮ್ಮ ಬಳಿಗೆ ಬಂದಿದ್ದಾಗ, ನಾನು ನಿಮಗೆ ದೇವರ ಸತ್ಯವನ್ನು ತಿಳಿಸಿದೆನು. ಆದರೆ ನಾನು ನಾಜೂಕಾದ ಪದಗಳನ್ನಾಗಲಿ ಮಹಾ ಜ್ಞಾನವನ್ನಾಗಲಿ ಉಪಯೋಗಿಸಲಿಲ್ಲ. 2 ನಾನು ನಿಮ್ಮೊಂದಿಗಿದ್ದಾಗ ಯೇಸು ಕ್ರಿಸ್ತನ ಮತ್ತು ಆತನ ಶಿಲುಬೆಯ ಮೇಲಿನ ಮರಣವನ್ನೇ ಹೊರತು ಬೇರೆಲ್ಲಾ ವಿಷಯಗಳನ್ನು ಮರೆತುಬಿಡಲು ನಿರ್ಧರಿಸಿದೆನು. 3 ನಾನು ನಿಮ್ಮ ಬಳಿಗೆ ಬಂದಿದ್ದಾಗ ಬಲಹೀನನಾಗಿದ್ದೆನು; ಭಯದಿಂದ ನಡುಗುತ್ತಿದ್ದೆನು. 4 ನನ್ನ ಉಪದೇಶವಾಗಲಿ ಮಾತುಕತೆಯಾಗಲಿ ಜನರನ್ನು ಒತ್ತಾಯಿಸುವಂಥ ಜ್ಞಾನವಾಕ್ಯಗಳನ್ನು ಒಳಗೊಂಡಿರಲಿಲ್ಲ. ಆದರೆ ಪವಿತ್ರಾತ್ಮನು ಕೊಡುವ ಶಕ್ತಿಯೇ ನನ್ನ ಉಪದೇಶಕ್ಕೆ ಆಧಾರವಾಗಿತ್ತು. 5 ನಿಮ್ಮ ನಂಬಿಕೆಯು ಮನುಷ್ಯನ ಜ್ಞಾನದ ಮೇಲೆ ಆಧಾರಗೊಂಡಿರದೆ ದೇವರ ಶಕ್ತಿಯ ಮೇಲೆ ಆಧಾರಗೊಂಡಿರಬೇಕೆಂದು ನಾನು ಹೀಗೆ ಮಾಡಿದೆನು.
Kannada Holy Bible: Easy-to-Read Version. All rights reserved. © 1997 Bible League International