Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 73:21-28

21-22 ನಾನು ಬಹು ಮೂಢನಾಗಿದ್ದೆ.
    ಶ್ರೀಮಂತರ ಕುರಿತಾಗಿಯೂ ದುಷ್ಟರ ಕುರಿತಾಗಿಯೂ ಆಲೋಚಿಸಿ ಗಲಿಬಿಲಿಗೊಂಡೆ.
ದೇವರೇ, ನಾನು ನಿನ್ನ ಮೇಲೆ ಕೋಪಗೊಂಡಿದ್ದೆನು; ಬೇಸರಗೊಂಡಿದ್ದೆನು!
    ನಾನು ಮೂಢ ಪಶುವಿನಂತೆ ವರ್ತಿಸಿದೆನು.
23 ಆದರೂ ನಾನು ಯಾವಾಗಲೂ ನಿನ್ನ ಸಂಗಡವಿದ್ದೇನೆ.
    ನನ್ನ ಕೈಯನ್ನು ಹಿಡಿದುಕೊ.
24 ನನಗೆ ಉಪದೇಶಿಸುತ್ತಾ ನನ್ನನ್ನು ಮುನ್ನಡೆಸು.
    ಬಳಿಕ ನಿನ್ನ ಮಹಿಮೆಗೆ ನನ್ನನ್ನು ಸೇರಿಸಿಕೊ.
25 ಪರಲೋಕದಲ್ಲಿ ನೀನಲ್ಲದೆ ನನಗೆ ಬೇರೆ ಯಾರ ಅಗತ್ಯವಿದೆ?
    ಈ ಲೋಕದಲ್ಲಿ ನಿನ್ನನ್ನಲ್ಲದೆ ಬೇರೆ ಯಾರನ್ನು ಬಯಸಲಿ?
26 ನನ್ನ ಹೃದಯವೂ ದೇಹವೂ ನಾಶವಾಗುತ್ತವೆ;
    ಆದರೆ ಎಂದೆಂದಿಗೂ ನೀನೇ ನನಗೆ ಆಶ್ರಯಸ್ಥಾನವೂ
    ನನ್ನ ದೇವರೂ ಆಗಿರುವೆ.
27 ನಿನ್ನನ್ನು ತೊರೆದುಬಿಟ್ಟವರು ನಾಶವಾಗುವರು.
    ನಿನಗೆ ದ್ರೋಹಮಾಡಿದವರನ್ನೆಲ್ಲ ನೀನು ನಾಶಮಾಡುವೆ.
28 ನನಗಾದರೋ ದೇವರ ಸಮೀಪದಲ್ಲಿರುವುದೇ ಭಾಗ್ಯವಾಗಿದೆ.
    ನನ್ನ ಒಡೆಯನಾದ ಯೆಹೋವನನ್ನು ನನ್ನ ಆಶ್ರಯಸ್ಥಾನವನ್ನಾಗಿ ಮಾಡಿಕೊಂಡಿರುವೆ.
    ದೇವರೇ, ನಿನ್ನ ಎಲ್ಲಾ ಕಾರ್ಯಗಳ ಕುರಿತಾಗಿ ಹೇಳಲು ಬಂದಿರುವೆ.

ಜ್ಞಾನೋಕ್ತಿಗಳು 25

ಸೊಲೊಮೋನನಿಂದ ಮತ್ತಷ್ಟು ಜ್ಞಾನೋಕ್ತಿಗಳು

25 ಇವು ಸಹ ಸೊಲೊಮೋನನು ಹೇಳಿದ ಜ್ಞಾನೋಕ್ತಿಗಳು. ಈ ನುಡಿಗಳನ್ನು ಯೆಹೂದದ ರಾಜನಾಗಿದ್ದ ಹಿಜ್ಕೀಯನ ಸೇವಕರು ನಕಲು ಮಾಡಿದರು:

ವಿಷಯಗಳನ್ನು ರಹಸ್ಯಗೊಳಿಸಿದ್ದರಿಂದ ದೇವರಿಗೆ ಸನ್ಮಾನ; ವಿಷಯಗಳನ್ನು ಕಂಡುಹಿಡಿಯುವುದರಿಂದ ರಾಜನಿಗೆ ಸನ್ಮಾನ.

ಆಕಾಶದ ಎತ್ತರವನ್ನಾಗಲಿ ಭೂಮಿಯ ಆಳವನ್ನಾಗಲಿ ಅಳೆಯಲು ಯಾರಿಗೆ ಸಾಧ್ಯ? ಅಂತೆಯೇ ರಾಜರುಗಳ ಮನಸ್ಸನ್ನು ಯಾರೂ ಅರ್ಥಮಾಡಿಕೊಳ್ಳಲಾರರು.

ನೀನು ಬೆಳ್ಳಿಯಿಂದ ಕಲ್ಮಶವನ್ನು ತೆಗೆದುಹಾಕಿ ಶುದ್ಧಗೊಳಿಸಿದರೆ, ಅಕ್ಕಸಾಲಿಗನು ಅದರಿಂದ ಸುಂದರವಾದ ವಸ್ತುಗಳನ್ನು ಮಾಡಬಲ್ಲನು. ಅಂತೆಯೇ, ರಾಜನಿಂದ ಕೆಟ್ಟ ಆಲೋಚನೆಗಾರರನ್ನು ತೆಗೆದುಹಾಕಿದರೆ, ಒಳ್ಳೆಯತನವು ಅವನ ಆಡಳಿತವನ್ನು ಭದ್ರಗೊಳಿಸುತ್ತದೆ.

ರಾಜನ ಮುಂದೆ ಜಂಬಕೊಚ್ಚಿಕೊಳ್ಳಬೇಡ. ಪ್ರಮುಖರ ಸ್ಥಳದಲ್ಲಿ ನಿಂತುಕೊಳ್ಳಬೇಡ. ಗಣ್ಯರ ಮುಂದೆ ಅವಮಾನಿತನಾಗುವುದಕ್ಕಿಂತ, “ಮೇಲಕ್ಕೆ ಬಾ” ಎಂದು ಹೇಳಿಸಿಕೊಳ್ಳುವುದೇ ಉತ್ತಮ.

ನೀನು ಕಂಡ ಯಾವುದನ್ನಾದರೂ ನ್ಯಾಯಾಧೀಶನಿಗೆ ತಿಳಿಸಲು ಆತುರಪಡಬೇಡ. ನೀನು ತಪ್ಪಿತಸ್ಥನೆಂದು ಬೇರೊಬ್ಬನು ಹೇಳಿದರೆ, ನಿನಗೆ ಅವಮಾನವಾಗುವುದು.

ನೀನು ನಿನ್ನ ನೆರೆಯವನೊಂದಿಗೆ ವಾಗ್ವಾದ ಮಾಡಿದ್ದರೆ, ಗುಟ್ಟಾದ ವಿಷಯಗಳನ್ನು ಬೇರೊಬ್ಬನಿಗೆ ಪ್ರಕಟಿಸಬೇಡ. 10 ಇಲ್ಲವಾದರೆ ಅದನ್ನು ಕೇಳಿದವರೆಲ್ಲರೂ ನಿನ್ನನ್ನು ಖಂಡಿಸುವರು; ಆ ಕೆಟ್ಟ ಹೆಸರು ನಿನ್ನನ್ನೆಂದಿಗೂ ಬಿಟ್ಟುಹೋಗದು.

11 ನೀನು ಸರಿಸಮಯದಲ್ಲಿ ಒಳ್ಳೆಯದನ್ನು ಹೇಳಿದರೆ, ಅದು ಬೆಳ್ಳಿಯ ತಟ್ಟೆಯಲ್ಲಿರುವ ಚಿನ್ನದ ಸೇಬಿನಂತಿರುವುದು. 12 ಜ್ಞಾನಿಯು ನಿನಗೆ ಕೊಡುವ ಎಚ್ಚರಿಕೆಯು ಚಿನ್ನದ ಉಂಗುರಗಳಿಗಿಂತಲೂ ಬಂಗಾರದ ಆಭರಣಗಳಿಗಿಂತಲೂ ಹೆಚ್ಚು ಬೆಲೆ ಬಾಳುತ್ತದೆ.

13 ನಂಬಿಗಸ್ತನಾದ ಸಂದೇಶಕನಿಂದ ಯಜಮಾನನಿಗೆ ಉಲ್ಲಾಸ. ಅವನು ಸುಗ್ಗೀಕಾಲದ ಬಿಸಿಲಿನ ದಿನಗಳಲ್ಲಿರುವ ತಣ್ಣನೆಯ ಹಿಮದಂತಿರುವನು.

14 ದಾನ ಮಾಡುವುದಾಗಿ ಹೇಳಿಯೂ ಮಾಡದವರು ಮಳೆಯನ್ನು ತಾರದ ಮೋಡಗಳಂತೆಯೂ ಗಾಳಿಯಂತೆಯೂ ಇರುವರು.

15 ತಾಳ್ಮೆಯು ಅಧಿಪತಿಯನ್ನು ಸಹ ಮನವೊಪ್ಪಿಸುವುದು. ನಯವಾದ ಮಾತಿಗೆ ಬಹುಬಲ.

16 ಜೇನುತುಪ್ಪ ಒಳ್ಳೆಯದು. ಆದರೆ ಅತಿಯಾಗಿ ತಿನ್ನಬೇಡ. ಇಲ್ಲವಾದರೆ, ಕಾಯಿಲೆಬೀಳುವೆ. 17 ಅಂತೆಯೇ, ನಿನ್ನ ನೆರೆಯವನ ಮನೆಗೆ ಪದೇಪದೇ ಹೋಗಬೇಡ. ನೀನು ಹೋದರೆ, ಅವನು ನಿನ್ನ ಮೇಲೆ ಬೇಸರಗೊಳ್ಳುವನು.

18 ನೆರೆಯವನ ವಿರುದ್ಧ ಸುಳ್ಳುಸಾಕ್ಷಿ ಹೇಳುವವನು ಅಪಾಯಕಾರಿ. ಅವನು ದೊಣ್ಣೆಯಂತೆಯೂ ಕತ್ತಿಯಂತೆಯೂ ಚೂಪಾದ ಬಾಣದಂತೆಯೂ ಇದ್ದಾನೆ. 19 ಕಷ್ಟಕಾಲಗಳಲ್ಲಿ ಅಪನಂಬಿಗಸ್ತನನ್ನು ಆಶ್ರಯಿಸಿಕೊಳ್ಳುವುದು ಮುರುಕು ಹಲ್ಲಿನಿಂದ ತಿನ್ನುವಂತೆಯೂ ಕುಂಟುಕಾಲಿನಿಂದ ನಡೆಯುವಂತೆಯೂ ಇದೆ.

20 ವ್ಯಸನದಿಂದಿರುವವನಿಗೆ ಸಂತಸದ ಗೀತೆಗಳನ್ನು ಹಾಡಿದರೆ ಚಳಿಯಲ್ಲಿರುವವನ ಬಟ್ಟೆಯನ್ನು ತೆಗೆದುಹಾಕಿದಂತೆಯೂ ಗಾಯದ ಮೇಲೆ ಹುಳಿರಸವನ್ನು ಸುರಿದಂತೆಯೂ ಇರುವುದು.

21 ನಿನ್ನ ವೈರಿ ಹಸಿವೆಗೊಂಡಿದ್ದರೆ, ಅವನಿಗೆ ಊಟಕೊಡು. ನಿನ್ನ ವೈರಿ ಬಾಯಾರಿದ್ದರೆ, ಅವನಿಗೆ ನೀರು ಕೊಡು. 22 ಆಗ, ಉರಿಯುವ ಕೆಂಡಗಳನ್ನು ಅವನ ತಲೆಯ ಮೇಲೆ ಇಟ್ಟಂತಾಗುವುದು. ಯೋಹೋವನು ನಿನಗೆ ಅದರ ಪ್ರತಿಫಲವನ್ನು ಕೊಡುವನು.

23 ಉತ್ತರದಿಕ್ಕಿನಿಂದ ಬೀಸುವ ಗಾಳಿ ಮಳೆಯನ್ನು ತರುವುದು. ಅಂತೆಯೇ ಚಾಡಿಮಾತು ಕೋಪಕ್ಕೆ ಕಾರಣ.

24 ವಾದಿಸುವ ಹೆಂಡತಿಯೊಡನೆ ಮನೆಯಲ್ಲಿ ಇರುವುದಕ್ಕಿಂತ ಮೇಲ್ಛಾವಣಿಗೆಯ ಒಂದು ಮೂಲೆಯಲ್ಲಿ ವಾಸಿಸುವುದೇ ಮೇಲು.

25 ಬಹುದೂರದ ಒಳ್ಳೆಯ ಸುದ್ದಿಯು ಬಾಯಾರಿದವನಿಗೆ ಕೊಟ್ಟ ತಣ್ಣನೆ ನೀರಿನಂತಿರುವುದು.

26 ದುಷ್ಟನು ಒಳ್ಳೆಯವನಿಗೆ ಆಪತ್ತನ್ನು ಬರಮಾಡಿದರೆ, ಅದು ಚಿಲುಮೆಗೆ ಮಣ್ಣುಹಾಕಿದಂತೆಯೂ ಒರತೆಯನ್ನು ಹೊಲಸು ಮಾಡಿದಂತೆಯೂ ಇದೆ.

27 ಜೇನುತುಪ್ಪವನ್ನು ಅತಿಯಾಗಿ ತಿನ್ನುವುದು ಒಳ್ಳೆಯದಲ್ಲ. ಅಂತೆಯೇ, ನಿನಗೋಸ್ಕರ ಅತಿಯಾಗಿ ಸನ್ಮಾನವನ್ನು ಬಯಸಬೇಡ.

28 ತನ್ನನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲಾರದವನು ಕೋಟೆ ಬಿದ್ದುಹೋದ ಪಟ್ಟಣದಂತಿರುವನು.

ಕೊಲೊಸ್ಸೆಯವರಿಗೆ 3:1-11

ಕ್ರಿಸ್ತನಲ್ಲಿ ನಿಮ್ಮ ಹೊಸಜೀವನ

ನೀವು ಕ್ರಿಸ್ತನ ಜೊತೆಯಲ್ಲಿ ಜೀವಂತವಾಗಿ ಎದ್ದುಬಂದಿರುವುದರಿಂದ ಪರಲೋಕದವುಗಳನ್ನು ಪಡೆಯಲು ಪ್ರಯತ್ನಿಸಿರಿ. ಕ್ರಿಸ್ತ ಯೇಸು ಪರಲೋಕದಲ್ಲಿ ದೇವರ ಬಲಗಡೆ ಆಸನಾರೂಢನಾಗಿದ್ದಾನೆ. ಪರಲೋಕದವುಗಳನ್ನು ಮಾತ್ರ ಆಲೋಚಿಸಿ, ಭೂಲೋಕದವುಗಳನ್ನು ಆಲೋಚಿಸಬೇಡಿ. ನಿಮ್ಮ ಹಳೆಯ ಸ್ವಭಾವ ಸತ್ತುಹೋಗಿದೆ, ನಿಮ್ಮ ಹೊಸ ಜೀವವು ಕ್ರಿಸ್ತನೊಂದಿಗೆ ದೇವರಲ್ಲಿದೆ. ಕ್ರಿಸ್ತನೇ ನಿಮ್ಮ ಜೀವ, ಆತನು ಮರಳಿ ಪ್ರತ್ಯಕ್ಷನಾದಾಗ, ನೀವೂ ಆತನ ಪ್ರಭಾವದೊಂದಿಗೆ ಪ್ರತ್ಯಕ್ಷರಾಗುವಿರಿ.

ಆದ್ದರಿಂದ ದುಷ್ಕೃತ್ಯಗಳಾದ ಲೈಂಗಿಕ ಪಾಪ, ದುರಾಚಾರ, ಕಾಮಾಭಿಲಾಷೆ, ದುರಾಶೆ ಮತ್ತು ಸ್ವಾರ್ಥತೆಗಳನ್ನು ನಿಮ್ಮ ಜೀವಿತದಿಂದ ತೆಗೆದುಹಾಕಿರಿ. ಸ್ವಾರ್ಥವು ವಿಗ್ರಹಾರಾಧನೆಗೆ ಸಮವಾಗಿದೆ. ಇವು ದೇವರನ್ನು ಕೋಪಗೊಳಿಸುತ್ತವೆ. ಪೂರ್ವಕಾಲದ ನಿಮ್ಮ ದುಷ್ಟಜೀವನದಲ್ಲಿ ಈ ಕಾರ್ಯಗಳನ್ನೆಲ್ಲ ನೀವು ಮಾಡಿರುವಿರಿ.

ಈಗಲಾದರೋ ಕೋಪ, ಕ್ರೋಧ, ಮತ್ಸರ, ಚುಚ್ಚು ಮಾತು ಮತ್ತು ದುರ್ಭಾಷೆಗಳನ್ನು ನಿಮ್ಮ ಜೀವಿತದಿಂದ ತೆಗೆದುಹಾಕಿರಿ. ಒಬ್ಬರಿಗೊಬ್ಬರು ಸುಳ್ಳು ಹೇಳಬೇಡಿ. ಏಕೆಂದರೆ ನೀವು ನಿಮ್ಮ ಹಳೆಯ ಪಾಪಪೂರಿತ ಜೀವನವನ್ನು ಮತ್ತು ನಿಮ್ಮ ಮೊದಲಿನ ಕಾರ್ಯಗಳನ್ನು ಬಿಟ್ಟುಬಿಟ್ಟಿದ್ದೀರಿ. 10 ನೀವು ಹೊಸ ಜೀವನವನ್ನು ಆರಂಭಿಸಿರುವಿರಿ. ಈ ಹೊಸ ಜೀವನದಲ್ಲಿ ನೀವು ನಿಮ್ಮನ್ನು ಸೃಷ್ಟಿಸಿದಾತನ ಹೋಲಿಕೆಯ ಮೇರೆಗೆ ನೂತನರಾಗುತ್ತಿದ್ದೀರಿ. ದೇವರ ಬಗ್ಗೆ ನಿಜವಾದ ತಿಳುವಳಿಕೆಯನ್ನು ಈ ಹೊಸ ಜೀವನ ಕೊಡುತ್ತದೆ. 11 ಈ ಹೊಸ ಜೀವನದಲ್ಲಿ ಗ್ರೀಕರ ಮತ್ತು ಯೆಹೂದ್ಯರ ಮಧ್ಯದಲ್ಲಾಗಲಿ, ಸುನ್ನತಿಯನ್ನು ಮಾಡಿಸಿಕೊಂಡಿರುವ ಮತ್ತು ಮಾಡಿಸಿಕೊಂಡಿಲ್ಲದ ಜನರ ಮಧ್ಯದಲ್ಲಾಗಲಿ ಪರದೇಶದವರ ಅಥವಾ ಅನಾಗರೀಕರ ಮಧ್ಯದಲ್ಲಾಗಲಿ, ಗುಲಾಮರ ಅಥವಾ ಸ್ವತಂತ್ರರಾದ ಜನರ ಮಧ್ಯದಲ್ಲಾಗಲಿ ಯಾವ ಭೇದವೂ ಇಲ್ಲ. ಎಲ್ಲಾ ವಿಶ್ವಾಸಿಗಳಲ್ಲಿಯೂ ಕ್ರಿಸ್ತನಿದ್ದಾನೆ. ಅವರಿಗೆ ಕ್ರಿಸ್ತನೊಬ್ಬನೇ ಅಗತ್ಯ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International