Revised Common Lectionary (Semicontinuous)
ಜ್ಞಾನವೆಂಬಾಕೆ
20 ಜ್ಞಾನವು ಬೀದಿಗಳಲ್ಲಿ ಕೂಗುವ ಸ್ತ್ರೀಯಂತಿದೆ. ಆಕೆಯು ಬಹಿರಂಗ ಸ್ಥಳಗಳಲ್ಲಿ ಕೂಗಿ ಕರೆಯುತ್ತಾಳೆ. 21 ಆಕೆಯು ಜನಸಂದಣಿಯ ರಸ್ತೆಚೌಕಗಳಲ್ಲಿ ಕರೆಯುತ್ತಾಳೆ. ಪಟ್ಟಣದ ಬಾಗಿಲುಗಳ ಬಳಿಯಲ್ಲಿ ಆಕೆಯು ಜನರೊಂದಿಗೆ ಮಾತಾಡುತ್ತಾಳೆ:
22 “ನೀವು ಮೂಢಜನರು. ಇನ್ನೆಷ್ಟುಕಾಲ ನೀವು ನಿಮ್ಮ ಮೂಢತನದಲ್ಲಿ ಆನಂದಿಸುವಿರಿ? ಇನ್ನೆಷ್ಟುಕಾಲ ನೀವು ವಿವೇಕವನ್ನು ಹಾಸ್ಯಮಾಡಬೇಕೆಂದಿದ್ದೀರಿ? ಇನ್ನೆಷ್ಟುಕಾಲ ನೀವು ಜ್ಞಾನವನ್ನು ದ್ವೇಷ ಮಾಡಬೇಕೆಂದಿದ್ದೀರಿ? 23 ನೀವು ನನ್ನ ಗದರಿಕೆಗೆ ಕಿವಿಗೊಟ್ಟರೆ, ನನ್ನ ಮನಸ್ಸಿನಲ್ಲಿರುವುದನ್ನೆಲ್ಲ ತಿಳಿಸುವೆನು; ನನ್ನ ಆಲೋಚನೆಗಳನ್ನು ನಿಮಗೆ ಗೊತ್ತುಪಡಿಸುವೆನು.
24 “ಆದರೆ ನೀವು ನನಗೆ ಗಮನಕೊಡಲಿಲ್ಲ. ನಾನು ಸಹಾಯಮಾಡಲು ಪ್ರಯತ್ನಿಸಿದೆ. ನಾನು ಕೈಚಾಚಿದೆ; ಆದರೆ ನೀವು ನನ್ನ ಸಹಾಯವನ್ನು ತೆಗೆದುಕೊಳ್ಳದೆ ತಿರಸ್ಕರಿಸಿದಿರಿ. 25 ನೀವು ನನಗೆ ಮುಖ ತಿರುವಿಕೊಂಡಿರಿ; ನನ್ನ ಸಲಹೆಗಳನ್ನೆಲ್ಲ ಕಡೆಗಣಿಸಿದಿರಿ; ನನ್ನ ತಿದ್ದುಪಾಟನ್ನು ತಿರಸ್ಕರಿಸಿದಿರಿ. 26 ಆದ್ದರಿಂದ ನಿಮ್ಮ ಕಷ್ಟದಲ್ಲಿ ನಾನು ನಗುವೆನು; ಅಪಾಯವು ನಿಮಗೆ ಬಡಿಯುವಾಗ ನಿಮ್ಮನ್ನು ಗೇಲಿ ಮಾಡುವೆನು. 27 ಮಹಾ ಸಂಕಷ್ಟವು ಕೆಟ್ಟ ಬಿರುಗಾಳಿಯಂತೆ ನಿಮಗೆ ಬರುವುದು. ತೊಂದರೆಗಳು ಬಲವಾದ ಗಾಳಿಯಂತೆ ನಿಮಗೆ ಬಡಿಯುವುದು. ನಿಮ್ಮ ಕಷ್ಟಗಳು ಮತ್ತು ದುಃಖಗಳು ನಿಮ್ಮ ಮೇಲೆ ಬಹು ಭಾರವಾಗಿರುತ್ತವೆ.
28 “ಇವೆಲ್ಲಾ ನಿಮಗೆ ಸಂಭವಿಸುವಾಗ ನೀವು ಸಹಾಯಕ್ಕಾಗಿ ನನ್ನನ್ನು ಕೇಳುವಿರಿ; ಆದರೆ ನಾನು ನಿಮಗೆ ಸಹಾಯ ಮಾಡುವುದಿಲ್ಲ. ನೀವು ನನಗಾಗಿ ಹುಡುಕುವಿರಿ. ಆದರೆ ನಾನು ನಿಮಗೆ ಸಿಕ್ಕುವುದಿಲ್ಲ. 29 ನಾನು ನಿಮಗೆ ಸಹಾಯ ಮಾಡುವುದಿಲ್ಲ; ಏಕೆಂದರೆ ನೀವೆಂದೂ ನನ್ನ ಜ್ಞಾನವನ್ನು ಬಯಸಲಿಲ್ಲ. ನೀವು ಯೆಹೋವನಲ್ಲಿ ಭಯಭಕ್ತಿಯಿಂದಿರಲು ನಿರ್ಧರಿಸಲಿಲ್ಲ. 30 ನೀವು ನನ್ನ ಗದರಿಕೆಯ ಮಾತುಗಳನ್ನು ತಿರಸ್ಕರಿಸಿದಿರಿ. ನಾನು ನಿಮಗೆ ಸರಿಯಾದ ದಾರಿಯನ್ನು ತೋರಿಸಿದಾಗ ನೀವು ನನಗೆ ಕಿವಿಗೊಡಲಿಲ್ಲ. 31 ಆದ್ದರಿಂದ ನೀವು ನಿಮ್ಮ ದುರ್ನಡತೆಯ ಫಲಗಳನ್ನು ಅನುಭವಿಸುವಿರಿ. ನೀವು ಬೇರೆಯವರಿಗೆ ಮಾಡಿದ ಕುಯುಕ್ತಿಗಳನ್ನೇ ಹೊಂದುವಿರಿ.
32 “ಮೂಢರು ಜ್ಞಾನವನ್ನು ತಿರಸ್ಕರಿಸುವುದರಿಂದ ಸಾವಿಗೀಡಾಗುವರು; ಅವರ ಉದಾಸೀನತೆಯೇ ಅವರನ್ನು ನಾಶಪಡಿಸುವುದು. 33 ಆದರೆ ನನಗೆ ವಿಧೇಯನಾಗುವವನು ಕ್ಷೇಮವಾಗಿಯೂ ಸುಖವಾಗಿಯೂ ಬದುಕುವನು. ಅವನು ಅಪಾಯಕ್ಕೆ ಭಯಪಡುವ ಅವಶ್ಯವಿಲ್ಲ.”
ರಚನೆಗಾರ: ದಾವೀದ.
19 ಆಕಾಶಮಂಡಲವು ದೇವರ ಮಹಿಮೆಯನ್ನು ಪ್ರಕಟಿಸುವುದು.
ಗಗನವು ಆತನ ಕೈಕೆಲಸವನ್ನು ತಿಳಿಸುವುದು.
2 ಪ್ರತಿಯೊಂದು ದಿನವೂ ಅದರ ಕುರಿತು ಹೊಸ ವಿಷಯವನ್ನು ತಿಳಿಸುವುದು.
ಪ್ರತಿಯೊಂದು ರಾತ್ರಿಯೂ ಅದರ ಕುರಿತು ಹೊಸ ಸಂಗತಿಯನ್ನು ಪ್ರಕಟಿಸುವುದು.
3 ಅವುಗಳ ಮಾತಾಗಲಿ
ನುಡಿಗಳಾಗಲಿ ಸ್ವರವಾಗಲಿ ನಮಗೆ ಕೇಳಿಸದು.
4 ಆದರೂ ಅವುಗಳ ಸಂದೇಶವು ಭೂಲೋಕದಲ್ಲೆಲ್ಲಾ ಹರಡುತ್ತದೆ;
ಭೂಮಿಯ ಕಟ್ಟಕಡೆಗಳವರೆಗೂ ವ್ಯಾಪಿಸುತ್ತದೆ.
ಆಕಾಶವು ಸೂರ್ಯನಿಗೆ ಮನೆಯಂತಿದೆ.
5 ಮದುವೆಯ ಮಂಟಪದಿಂದ ಆನಂದದಿಂದ ಬರುವ ಮದುಮಗನಂತೆ ಸೂರ್ಯನು ಮುಂಜಾನೆ ಉದಯಿಸುವನು.
ಕ್ರೀಡಾಪಟುವಿನಂತೆ
ಸೂರ್ಯನು ಆಕಾಶದಲ್ಲಿ ಓಡಲಾರಂಭಿಸುವನು.
6 ಸೂರ್ಯನು ಆಕಾಶದ ಒಂದು ಕಡೆಯಿಂದ ಉದಯಿಸಿ
ಮತ್ತೊಂದು ಕೊನೆಗೆ ಓಡುತ್ತಾಹೋಗುವನು.
ಅವನ ತಾಪಕ್ಕೆ ಯಾವುದೂ ಮರೆಯಾಗಿರಲಾರದು.
7 ಯೆಹೋವನ ಉಪದೇಶಗಳು ನಿಷ್ಕಳಂಕವಾಗಿವೆ.
ಅವು ದೇವಜನರಿಗೆ ಬಲವನ್ನು ಕೊಡುತ್ತವೆ.
ಯೆಹೋವನ ಕಟ್ಟಳೆಯು ಭರವಸೆಗೆ ಯೋಗ್ಯವಾಗಿದೆ.
ಅದು ಮೂಢರನ್ನು ಜ್ಞಾನಿಗಳನ್ನಾಗಿ ಮಾಡುತ್ತದೆ.
8 ಯೆಹೋವನ ನಿಯಮಗಳು ನೀತಿಯ ಕಟ್ಟಳೆಗಳಾಗಿವೆ.
ಅವು ಮನುಸ್ಸನ್ನು ಸಂತೋಷಗೂಳಿಸುತ್ತವೆ.
ಯೆಹೋವನ ಆಜ್ಞೆಗಳು ಒಳ್ಳೆಯ ಆಜ್ಞೆಗಳಾಗಿವೆ.
ಅವು ಕಣ್ಣುಗಳಿಗೆ ಬೆಳಕನ್ನು ನೀಡುತ್ತವೆ.
9 ಯೆಹೋವನಲ್ಲಿಡುವ ಭಯಭಕ್ತಿಯು ಪರಿಶುದ್ಧವಾಗಿದೆ;
ಅದು ಶಾಶ್ವತವಾದದ್ದು.
ಯೆಹೋವನ ವಿಧಿಗಳು ಯಥಾರ್ಥವಾಗಿವೆ;
ಅವು ಯಾವಾಗಲೂ ನ್ಯಾಯಾನುಸಾರವಾಗಿವೆ.
10 ಆತನ ಉಪದೇಶಗಳು ಬಂಗಾರಕ್ಕಿಂತಲೂ ಅಮೂಲ್ಯವಾಗಿವೆ;
ಅಪ್ಪಟವಾದ ಜೇನುತುಪ್ಪಕ್ಕಿಂತಲೂ ಮಧುರವಾಗಿವೆ.
11 ಆತನ ಉಪದೇಶಗಳು ಆತನ ಸೇವಕನನ್ನು ಎಚ್ಚರಿಸುತ್ತವೆ;
ಅವುಗಳನ್ನು ಕೈಕೊಂಡು ನಡೆದರೆ ಒಳ್ಳೆಯದಾಗುವುದು.
12 ಯೆಹೋವನೇ, ಯಾವನೂ ತನ್ನ ತಪ್ಪುಗಳನ್ನೆಲ್ಲಾ ತಿಳಿದುಕೊಳ್ಳುವುದಿಲ್ಲ.
ಆದ್ದರಿಂದ ಗುಪ್ತ ಪಾಪಗಳನ್ನು ಮಾಡಲು ನನ್ನನ್ನು ಬಿಟ್ಟುಬಿಡಬೇಡ.
13 ನನ್ನ ಇಷ್ಟಾನುಸಾರ ಪಾಪಮಾಡಲು ನನ್ನನ್ನು ಬಿಟ್ಟುಬಿಡಬೇಡ.
ಆ ಪಾಪಗಳು ನನ್ನನ್ನು ಆಳದಿರಲಿ.
ನೀನು ಸಹಾಯಮಾಡಿದರೆ
ನಾನು ಪರಿಶುದ್ಧನಾಗಿಯೂ ಪಾಪದಿಂದ ವಿಮುಕ್ತನಾಗಿಯೂ ಇರಲು ಸಾಧ್ಯ.
14 ನನ್ನ ಮಾತುಗಳೂ ನನ್ನ ಆಲೋಚನೆಗಳೂ ನಿನಗೆ ಮೆಚ್ಚಿಕೆಯಾಗಿರಲಿ.
ಯೆಹೋವನೇ, ನೀನೇ ನನ್ನ ಬಂಡೆಯಾಗಿರುವೆ.[a] ನನ್ನನ್ನು ರಕ್ಷಿಸುವಾತನು ನೀನೇ.
ಹತೋಟಿಮೀರಿ ಮಾತಾಡಬೇಡಿ
3 ನನ್ನ ಸಹೋದರ ಸಹೋದರಿಯರೇ, ನಿಮ್ಮಲ್ಲಿ ಅನೇಕರು ಬೋಧಕರಾಗಬಾರದು. ಏಕೆಂದರೆ ಬೋಧಕರಾದ ನಮಗೆ ಇತರ ಜನರಿಗಿಂತ ಕಠಿಣವಾದ ತೀರ್ಪಾಗುತ್ತದೆ ಎಂಬುದು ನಿಮಗೆ ತಿಳಿದಿದೆ.
2 ನಾವೆಲ್ಲರೂ ಅನೇಕ ವಿಷಯಗಳಲ್ಲಿ ತಪ್ಪುವುದುಂಟು. ಆದರೆ ಮಾತಿನಲ್ಲಿ ಎಂದೂ ತಪ್ಪುಮಾಡಿಲ್ಲದ ವ್ಯಕ್ತಿಯು ಪರಿಪೂರ್ಣನೂ ತನ್ನ ದೇಹವನ್ನು ಸ್ವಾಧೀನದಲ್ಲಿಟ್ಟುಕೊಳ್ಳಲು ಸಮರ್ಥನೂ ಆಗಿದ್ದಾನೆ. 3 ನಾವು ಕುದುರೆಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಅವುಗಳ ಬಾಯಿಗೆ ಕಡಿವಾಣ ಹಾಕುತ್ತೇವಲ್ಲಾ; ಆಗ ಅವುಗಳ ದೇಹವನ್ನೆಲ್ಲಾ ಸ್ವಾಧೀನ ಪಡಿಸಿಕೊಳ್ಳಬಹುದು. 4 ಇದೇ ನಿಯಮ ಹಡಗುಗಳಿಗೂ ಅನ್ವಯಿಸುತ್ತದೆ. ಹಡಗು ಬಹಳ ದೊಡ್ಡದಾಗಿರುತ್ತದೆ ಮತ್ತು ಬಲವಾದ ಗಾಳಿಯು ಅದನ್ನು ತಳ್ಳಿಕೊಂಡು ಹೋಗುತ್ತದೆ. ಆದರೆ ಒಂದು ಸಣ್ಣ ಚುಕ್ಕಾಣಿಯು ಆ ದೊಡ್ಡ ಹಡಗನ್ನು ನಿಯಂತ್ರಿಸುತ್ತದೆ. ಚುಕ್ಕಾಣಿಯನ್ನು ಹತೋಟಿಯಲ್ಲಿ ಇಟ್ಟುಕೊಂಡಿರುವವನು ಹಡಗು ಹೋಗಬೇಕಾದ ಮಾರ್ಗವನ್ನು ತೀರ್ಮಾನಿಸುತ್ತಾನೆ. ಅವನ ಅಪೇಕ್ಷೆಯಂತೇ ಹಡಗು ಹೋಗುತ್ತದೆ. 5 ನಮ್ಮ ನಾಲಿಗೆಯೂ ಅದರಂತೆಯೆ. ಅದು ದೇಹದ ಒಂದು ಸಣ್ಣ ಭಾಗವಾದರೂ, ದೊಡ್ಡ ಕಾರ್ಯಗಳನ್ನು ಕೊಚ್ಚಿಕೊಳ್ಳುತ್ತದೆ.
ಒಂದು ಚಿಕ್ಕ ಬೆಂಕಿಯ ಕಿಡಿಯು ದೊಡ್ಡ ಕಾಡ್ಗಿಚ್ಚಿಗೆ ಕಾರಣವಾಗುತ್ತದೆ. 6 ನಾಲಿಗೆಯು ಬೆಂಕಿಯ ಕಿಡಿಯಂತೆ ನಮ್ಮ ದೇಹದ ಭಾಗಗಳಲ್ಲಿ ಅದು ಕೆಟ್ಟ ಲೋಕದಂತಿದೆ. ಹೇಗೆಂದರೆ, ನಾಲಿಗೆಯು ನಮ್ಮ ದೇಹದಲ್ಲೆಲ್ಲಾ ಕೆಟ್ಟತನವನ್ನು ಹರಡುತ್ತದೆ. ನಮ್ಮ ಜೀವಿತದ ಮೇಲೆಲ್ಲಾ ಪ್ರಭಾವ ಬೀರುವ ಬೆಂಕಿಯನ್ನು ಅದು ನರಕದಿಂದ ಪಡೆದು ಹೊತ್ತಿಸುತ್ತದೆ.
7 ಜನರು ಎಲ್ಲಾ ವಿಧವಾದ ಕಾಡುಮೃಗ, ಪಕ್ಷಿ, ಸರ್ಪ, ಮೀನುಗಳನ್ನು ಹತೋಟಿಗೆ ತರುತ್ತಾರೆ. ಜನರು ಈಗಾಗಲೇ ಇವುಗಳನ್ನು ಹತೋಟಿಗೆ ತಂದಿದ್ದಾರೆ. 8 ಆದರೆ ಯಾರೂ ನಾಲಿಗೆಯನ್ನು ಹತೋಟಿಗೆ ತಂದಿಲ್ಲ. ಅದು ಕ್ರೂರವಾದದ್ದೂ ಕೆಟ್ಟದ್ದೂ ಆಗಿದೆ. ಅದು ಮರಣಕರವಾದ ವಿಷವನ್ನು ತುಂಬಿಕೊಂಡಿದೆ. 9 ನಮ್ಮ ಪ್ರಭುವನ್ನು ಮತ್ತು ತಂದೆಯನ್ನು (ದೇವರು) ಸ್ತುತಿಸಲು ನಮ್ಮ ನಾಲಿಗೆಯನ್ನು ಬಳಸುತ್ತೇವೆ; ಆದರೆ ಅದರಿಂದಲೇ ಜನರನ್ನು ಶಪಿಸುತ್ತೇವೆ. ದೇವರು ಆ ಜನರನ್ನೂ ತನ್ನ ಹೋಲಿಕೆಗನುಸಾರವಾಗಿ ಸೃಷ್ಟಿಸಿದ್ದಾನೆ. 10 ಹೊಗಳಿಕೆ ಮತ್ತು ತೆಗಳಿಕೆಗಳೆರಡೂ ಒಂದೇ ಬಾಯಿಂದ ಬರುತ್ತವೆ! ನನ್ನ ಸಹೋದರ ಸಹೋದರಿಯರೇ, ಇದು ಸಂಭವಿಸಲೇಬಾರದು. 11 ಸಿಹಿಯಾದ ನೀರು ಮತ್ತು ಕಹಿಯಾದ ನೀರು ಒಂದೇ ಬುಗ್ಗೆಯಿಂದ ಹರಿಯುತ್ತವೆಯೋ? ಇಲ್ಲ! 12 ನನ್ನ ಸಹೋದರ ಸಹೋದರಿಯರೇ, ಅಂಜೂರದ ಮರವು ಆಲಿವ್ ಕಾಯಿಗಳನ್ನು ಬಿಡುವುದೇ? ಇಲ್ಲ! ದ್ರಾಕ್ಷಿಬಳ್ಳಿಯು ಅಂಜೂರದ ಹಣ್ಣನ್ನು ಬಿಡುವುದೇ? ಇಲ್ಲ! ಉಪ್ಪು ನೀರಿನಿಂದ ತುಂಬಿದ ಬಾವಿಯು ಸಿಹಿ ನೀರನ್ನು ಕೊಡುವುದಿಲ್ಲ.
ಯೇಸುವೇ ಕ್ರಿಸ್ತನೆಂದು ಪೇತ್ರನ ಪ್ರಕಟನೆ
(ಮತ್ತಾಯ 16:13-20; ಲೂಕ 9:18-21)
27 ಯೇಸು ಮತ್ತು ಆತನ ಶಿಷ್ಯರು ಫಿಲಿಪ್ಪನ ಸೆಜರೇಯ ಎಂಬ ಪಟ್ಟಣದ ಸಮೀಪದಲ್ಲಿರುವ ಊರುಗಳಿಗೆ ಹೋದರು. ಅವರು ಪ್ರಯಾಣ ಮಾಡುತ್ತಿರುವಾಗ, ಯೇಸು ತನ್ನ ಶಿಷ್ಯರನ್ನು, “ನನ್ನನ್ನು ಜನರು ಯಾರೆಂದು ಹೇಳುತ್ತಾರೆ?” ಎಂದು ಕೇಳಿದನು.
28 ಅದಕ್ಕೆ ಶಿಷ್ಯರು, “ಕೆಲವರು ನಿನ್ನನ್ನು, ‘ಸ್ನಾನಿಕ ಯೋಹಾನ’ ಎಂದು ಹೇಳುತ್ತಾರೆ. ಇನ್ನು ಕೆಲವರು ‘ಎಲೀಯ’ ಎಂದು ಹೇಳುತ್ತಾರೆ. ಇನ್ನು ಕೆಲವು ಜನರು ನಿನ್ನನ್ನು, ‘ಪ್ರವಾದಿಗಳಲ್ಲಿ ಒಬ್ಬನು’ ಎನ್ನುತ್ತಾರೆ” ಎಂದು ಉತ್ತರಿಸಿದರು.
29 ಆಗ ಯೇಸು ಅವರಿಗೆ, “ನೀವು ನನ್ನನ್ನು ಯಾರೆಂದು ಹೇಳುತ್ತೀರಿ?” ಎಂದು ಕೇಳಿದನು.
ಕೂಡಲೇ ಪೇತ್ರನು, “ನೀನು ಬರಬೇಕಾದ ಕ್ರಿಸ್ತನು” ಎಂದು ಉತ್ತರಿಸಿದನು.
30 ಯೇಸು ತನ್ನ ಶಿಷ್ಯರಿಗೆ, “ನಾನು ಯಾರೆಂಬುದನ್ನು ಯಾರಿಗೂ ಹೇಳಬೇಡಿ” ಎಂದು ಹೇಳಿದನು.
ಯೇಸು ತನ್ನ ಮರಣದ ಕುರಿತು ಮುಂತಿಳಿಸಿದ್ದು
(ಮತ್ತಾಯ 16:21-28; ಲೂಕ 9:22-27)
31 ನಂತರ ಯೇಸು ತನ್ನ ಶಿಷ್ಯರಿಗೆ ಉಪದೇಶಿಸುತ್ತಾ “ಮನುಷ್ಯಕುಮಾರನು ಅನೇಕ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಹಿರಿಯ ಯೆಹೂದ್ಯನಾಯಕರು, ಮಹಾಯಾಜಕರು ಮತ್ತು ಧರ್ಮೋಪದೇಶಕರು ಆತನನ್ನು ತಿರಸ್ಕರಿಸಿ ಕೊಲ್ಲುವರು. ಆದರೆ ಮೂರನೆಯ ದಿನದಲ್ಲಿ ಆತನು ಸತ್ತವರೊಳಗಿಂದ ಜೀವಂತವಾಗಿ ಎದ್ದುಬರುತ್ತಾನೆ” ಎಂದು ಹೇಳಿದನು. 32 ಮುಂದೆ ಸಂಭವಿಸುವದೆಲ್ಲವನ್ನು ಯೇಸು ಅವರಿಗೆ ಹೇಳಿದನು. ಆತನು ಯಾವುದನ್ನೂ ರಹಸ್ಯವಾಗಿ ಇಡಲಿಲ್ಲ.
ಪೇತ್ರನು ಯೇಸುವನ್ನು ಸ್ವಲ್ಪದೂರ ಕರೆದೊಯ್ದು, “ನೀನು ಹಾಗೆಲ್ಲಾ ಹೇಳಕೂಡದು” ಎಂದು ಪ್ರತಿಭಟಿಸಿದನು. 33 ಆದರೆ ಯೇಸು ತನ್ನ ಶಿಷ್ಯರ ಕಡೆಗೆ ನೋಡಿ, ಪೇತ್ರನಿಗೆ, “ಸೈತಾನನೇ, ನನ್ನಿಂದ ತೊಲಗಿಹೋಗು! ನಿನ್ನ ಆಲೋಚನೆ ಮನುಷ್ಯರದೇ ಹೊರತು ದೇವರದಲ್ಲ” ಎಂದು ಗದರಿಸಿದನು.
34 ನಂತರ ಯೇಸು ಜನರನ್ನು ತನ್ನ ಬಳಿಗೆ ಕರೆದನು. ಆತನ ಶಿಷ್ಯರೂ ಅಲ್ಲಿದ್ದರು. ಯೇಸು ಅವರಿಗೆ, “ಯಾವನಿಗಾದರೂ ನನ್ನನ್ನು ಅನುಸರಿಸಲು ಮನಸ್ಸಿದ್ದರೆ, ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಬೇಕು. 35 ತನ್ನ ಪ್ರಾಣವನ್ನು ಕಾಪಾಡಿಕೊಳ್ಳಲು ಇಚ್ಛಿಸುವವನು ಅದನ್ನು ಕಳೆದುಕೊಳ್ಳುತ್ತಾನೆ. ನನಗಾಗಿ ಹಾಗೂ ಸುವಾರ್ತೆಗಾಗಿ ತನ್ನ ಪ್ರಾಣವನ್ನು ಕೊಡುವ ಪ್ರತಿಯೊಬ್ಬನೂ ತನ್ನ ಪ್ರಾಣವನ್ನು ನಿರಂತರವಾಗಿ ಕಾಪಾಡಿಕೊಳ್ಳುತ್ತಾನೆ. 36 ಒಬ್ಬನು ಪ್ರಪಂಚವನ್ನೆಲ್ಲಾ ಸಂಪಾದಿಸಿಕೊಂಡು ತನ್ನ ಆತ್ಮವನ್ನೇ ನಷ್ಟಪಡಿಸಿಕೊಂಡರೆ ಅದರಿಂದ ಅವನಿಗೆ ಪ್ರಯೋಜನವೇನು? 37 ಒಬ್ಬನು ತನ್ನ ಆತ್ಮವನ್ನು ಕೊಂಡುಕೊಳ್ಳಲು ಸಾಧ್ಯವೇ? 38 ವ್ಯಭಿಚಾರಿಣಿಯಂತಿರುವ ಈ ಕೆಟ್ಟ ಸಂತತಿಯವರಲ್ಲಿ ಯಾವನಾದರೂ ನನಗೂ ನನ್ನ ಉಪದೇಶಕ್ಕೂ ನಾಚಿಕೊಂಡರೆ, ಮನುಷ್ಯಕುಮಾರನಾದ ನಾನು ನನ್ನ ತಂದೆಯ ಮಹಿಮೆಯೊಂದಿಗೆ ಪರಿಶುದ್ಧ ದೇವದೂತರ ಸಮೇತವಾಗಿ ಬರುವ ಸಮಯದಲ್ಲಿ ಅವನ ಬಗ್ಗೆ ನಾಚಿಕೆಪಡುವೆನು” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International