Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 73:1-20

ಮೂರನೆ ಭಾಗ

(ಕೀರ್ತನೆಗಳು 73–89)

ಸ್ತುತಿಗೀತೆ. ರಚನೆಗಾರ: ಆಸಾಫ.

73 ದೇವರು ಇಸ್ರೇಲಿಗೆ ಒಳ್ಳೆಯವನೇ ನಿಜ!
    ಶುದ್ಧ ಹೃದಯವುಳ್ಳವರಿಗೆ ದೇವರು ಒಳ್ಳೆಯವನೇ ಸರಿ!
ಆದರೆ ನನ್ನ ಕಾಲುಗಳು ಜಾರಿದವು;
    ನನ್ನ ಹೆಜ್ಜೆಗಳು ತಪ್ಪಿದವು.
ದುಷ್ಟರ ಏಳಿಗೆಯನ್ನು ಕಂಡು
    ಗರ್ವಿಷ್ಠರ ಮೇಲೆ ಅಸೂಯೆಗೊಂಡೆನು.
ಅವರು ಆರೋಗ್ಯವಂತರಾಗಿದ್ದಾರೆ.
    ಜೀವನೋಪಾಯಕ್ಕಾಗಿ ಅವರು ಹೋರಾಡಬೇಕಿಲ್ಲ.[a]
ಆ ಗರ್ವಿಷ್ಠರು ನಮ್ಮಂತೆ ಕಷ್ಟಪಡುವುದಿಲ್ಲ.
    ಅವರಿಗೆ ಬೇರೆಯವರಂತೆ ತೊಂದರೆಗಳಿಲ್ಲ.
ಆದ್ದರಿಂದ ಗರ್ವವು ಅವರಿಗೆ ಆಭರಣವಾಗಿದೆ;
    ದ್ವೇಷವು ಅವರಿಗೆ ಉಡುಪಾಗಿದೆ.
ಅವರ ಕಣ್ಣುಗಳು ಕೊಬ್ಬಿವೆ;
    ಅವರ ಮನಸ್ಸು ದುಷ್ಕಲ್ಪನೆಗಳಿಂದ ತುಂಬಿತುಳುಕುತ್ತದೆ.
ಅವರು ಗೇಲಿಮಾಡುತ್ತಾ ಬೇರೆಯವರ ವಿರುದ್ಧ ಕೆಟ್ಟದ್ದನ್ನೇ ಮಾತಾಡುವರು.
    ಗರ್ವಿಷ್ಠರಾದ ಅವರು ಬೇರೆಯವರ ಮೇಲೆ ಬಲಾತ್ಕಾರ ನಡೆಸಲು ಸಂಚು ಮಾಡುವರು.
ಆ ಗರ್ವಿಷ್ಠರು ತಮ್ಮನ್ನು ದೇವರುಗಳೆಂದು ಭಾವಿಸಿಕೊಂಡಿದ್ದಾರೆ,
    ತಾವೇ ಭೂಮಿಯ ಅಧಿಪತಿಗಳೆಂದು ಆಲೋಚಿಸಿಕೊಂಡಿದ್ದಾರೆ.
10 ಆದ್ದರಿಂದ ದೇವರ ಮಕ್ಕಳೂ ಅವರ ಪಕ್ಷ ಹಿಡಿಯುವರು;
    ಅವರು ಹೇಳಿದಂತೆಯೇ ಮಾಡುವರು.
11 “ನಮ್ಮ ಕಾರ್ಯಗಳು ದೇವರಿಗೆ ಗೊತ್ತಿಲ್ಲ! ಮಹೋನ್ನತನಾದ ದೇವರಿಗೆ ಗೊತ್ತೇ ಇಲ್ಲ!”
    ಎಂದು ಆ ದುಷ್ಟರು ಹೇಳಿಕೊಳ್ಳುವರು.

12 ಆ ಗರ್ವಿಷ್ಠರು ದುಷ್ಟರೇ ಸರಿ!
    ಆದರೂ ಅವರ ಐಶ್ವರ್ಯವು ಹೆಚ್ಚಾಗುತ್ತಲೇ ಇದೆ.
13 ಹೀಗಿರಲು, ನನ್ನ ಹೃದಯವನ್ನು ನಾನೇಕೆ ನಿರ್ಮಲಗೊಳಿಸಿಕೊಳ್ಳಲಿ?
    ನನ್ನ ಕೈಗಳನ್ನು ನಾನೇಕೆ ಸ್ವಚ್ಛಗೊಳಿಸಿಕೊಳ್ಳಲಿ?
14 ದೇವರೇ ದಿನವೆಲ್ಲಾ ನಾನು ಕಷ್ಟಪಡುತ್ತಿರುವೆ.
    ಪ್ರತಿ ಮುಂಜಾನೆಯೂ ನೀನು ನನ್ನನ್ನು ಶಿಕ್ಷಿಸುವೆ.

15 ಇವುಗಳ ಬಗ್ಗೆ ನಾನು ಬೇರೆಯವರಿಗೆ ಹೇಳಬೇಕೆಂದಿದ್ದೆ.
    ಒಂದುವೇಳೆ ಹೇಳಿದ್ದರೆ, ನಿನ್ನ ಜನರಿಗೆ ದ್ರೋಹಿಯಾಗುತ್ತಿದ್ದೆ.
16 ಇವುಗಳನ್ನು ಅರ್ಥಮಾಡಿಕೊಳ್ಳಲು ನಾನು ಬಹಳವಾಗಿ ಪ್ರಯತ್ನಿಸಿದರೂ
    ನಿನ್ನ ಆಲಯಕ್ಕೆ ಹೋಗುವವರೆಗೂ ಕಷ್ಟಕರವಾಗಿತ್ತು.
17 ಆದರೆ ನಿನ್ನ ಆಲಯಕ್ಕೆ ಹೋದಮೇಲೆ
    ನನಗೆ ಅರ್ಥವಾಯಿತು.
18 ನೀನು ಅವರನ್ನು ಅಪಾಯಕರವಾದ ಪರಿಸ್ಥಿತಿಯಲ್ಲಿ ಇಟ್ಟಿರುವೆ.
    ಅವರು ಸುಲಭವಾಗಿ ಬಿದ್ದು ನಾಶವಾಗುವರು.
19 ಇದ್ದಕ್ಕಿದ್ದಂತೆ ಆಪತ್ತು ಬರುವುದು,
    ಆಗ ಆ ಗರ್ವಿಷ್ಠರು ನಾಶವಾಗುವರು.
ಭಯಂಕರವಾದ ಸಂಗತಿಗಳು ಅವರಿಗೆ ಸಂಭವಿಸುತ್ತವೆ;
    ಆಗ ಅವರು ಅಂತ್ಯಗೊಳ್ಳುವರು.
20 ಯೆಹೋವನೇ, ನಾವು ನಿದ್ರೆಯಿಂದ ಎಚ್ಚರಗೊಂಡಾಗ
    ಮರೆತುಬಿಡುವ ಕನಸಿನಂತಿದ್ದಾರೆ ಆ ಜನರು.
ನಾವು ಕನಸಿನಲ್ಲಿ ಕಾಣುವ ರಾಕ್ಷಸರಂತೆ
    ನೀನು ಅವರನ್ನು ಮಾಯಗೊಳಿಸುವೆ.

ಜ್ಞಾನೋಕ್ತಿಗಳು 11

11 ಯೆಹೋವನು ಮೋಸದ ತಕ್ಕಡಿಗಳನ್ನು ದ್ವೇಷಿಸುತ್ತಾನೆ. ನ್ಯಾಯವಾದ ತಕ್ಕಡಿಗಳಾದರೋ ಆತನನ್ನು ಸಂತೋಷಗೊಳಿಸುತ್ತವೆ.

ದುರಾಭಿಮಾನಿಗಳು ನಾಚಿಕೆಗೀಡಾಗುವರು; ದೀನರು ಜ್ಞಾನಿಗಳಾಗಿದ್ದಾರೆ.

ಯಥಾರ್ಥವಂತರಿಗೆ ಸರಳತೆಯು ಮಾರ್ಗದರ್ಶಕ. ಕೆಡುಕರು ತಮ್ಮ ಮೋಸಕೃತ್ಯಗಳ ಮೂಲಕ ತಮ್ಮನ್ನೇ ನಾಶಮಾಡಿಕೊಳ್ಳುತ್ತಾರೆ.

ದೇವರು ಜನರಿಗೆ ನ್ಯಾಯತೀರ್ಪು ಮಾಡುವ ದಿನದಲ್ಲಿ, ಹಣದಿಂದ ಯಾವ ಲಾಭವೂ ಇಲ್ಲ. ಆದರೆ ನೀತಿಯು ಜನರನ್ನು ಮರಣದಿಂದ ಕಾಪಾಡುತ್ತದೆ.

ನೀತಿವಂತನು ಯಥಾರ್ಥನಾಗಿದ್ದರೆ ಅವನ ಜೀವನವು ಸರಾಗವಾಗಿರುವುದು. ಆದರೆ ಕೆಡುಕನು ತನ್ನ ಕೆಟ್ಟಕಾರ್ಯಗಳಿಂದ ನಾಶವಾಗುವನು.

ನೀತಿಯು ಯಥಾರ್ಥವಂತರನ್ನು ಕಾಪಾಡುತ್ತದೆ. ಆದರೆ ವಂಚಕರು ತಮ್ಮ ಆಸೆಗಳಿಂದಲೇ ಸಿಕ್ಕಿಬೀಳುವರು.

ದುಷ್ಟನು ಸಾಯುವಾಗ ಅವನ ನಿರೀಕ್ಷೆಗಳೆಲ್ಲಾ ನಾಶವಾಗುತ್ತವೆ. ಅವನ ಅಪೇಕ್ಷೆಗಳೆಲ್ಲಾ ಕೊನೆಗೊಳ್ಳುತ್ತವೆ.

ಶಿಷ್ಟನು ಇಕ್ಕಟ್ಟಿನಿಂದ ಪಾರಾಗುವನು. ಅವನ ಬದಲಾಗಿ ದುಷ್ಟನು ಇಕ್ಕಟ್ಟಿನಲ್ಲಿ ಸಿಕ್ಕಿಬೀಳುವನು.

ಕೆಡುಕರು ತಮ್ಮ ಮಾತಿನಿಂದಲೇ ಬೇರೆಯವರನ್ನು ನಾಶಪಡಿಸುತ್ತಾರೆ. ಸಜ್ಜನರಿಗಾದರೋ ಅವರ ತಿಳುವಳಿಕೆಯೇ ರಕ್ಷಣೆ ನೀಡುವುದು.

10 ಸಜ್ಜನರಿಗೆ ಜಯವಾದರೆ ನಗರಕ್ಕೆಲ್ಲ ಸಂತಸ. ಕೆಡುಕರು ನಾಶವಾದರೆ ಜನರು ಜಯಘೋಷ ಮಾಡುವರು.

11 ಪಟ್ಟಣವು ತನ್ನಲ್ಲಿ ವಾಸವಾಗಿರುವ ಯಥಾರ್ಥವಂತರ ಆಶೀರ್ವಾದದಿಂದ ಏಳಿಗೆ ಹೊಂದುವುದು. ಕೆಡುಕರ ಮಾತುಗಳು ಪಟ್ಟಣವನ್ನು ನಾಶಮಾಡುತ್ತವೆ.

12 ಬುದ್ಧಿಹೀನನು ಇತರರನ್ನು ಹೀನೈಸುತ್ತಾನೆ. ಆದರೆ ಬುದ್ಧಿವಂತನು ಮೌನವಾಗಿರುತ್ತಾನೆ.

13 ಗುಟ್ಟು ರಟ್ಟುಮಾಡುವವನನ್ನು ನಂಬಲಾಗದು. ಆದರೆ ನಂಬಿಗಸ್ತನು ವಿಷಯಗಳನ್ನು ರಹಸ್ಯವಾಗಿಡುವನು.

14 ಜ್ಞಾನದ ಮಾರ್ಗದರ್ಶನವಿಲ್ಲದ ದೇಶವು ಬಿದ್ದುಹೋಗುವುದು. ಆದರೆ ಒಳ್ಳೆಯ ಸಲಹೆಗಾರರನ್ನು ಹೊಂದಿರುವ ದೇಶವು ಕ್ಷೇಮವಾಗಿರುವುದು.

15 ಬೇರೊಬ್ಬನ ಸಾಲಕ್ಕೆ ನೀನು ಜಾಮೀನಾಗಿದ್ದರೆ ಕಷ್ಟಕ್ಕೀಡಾಗಿರುವೆ; ನೀನು ಜಾಮೀನಾಗಿಲ್ಲದಿದ್ದರೆ ಕ್ಷೇಮವಾಗಿರುವೆ.

16 ದಯೆಯುಳ್ಳ ಸ್ತ್ರೀಯು ಗೌರವವನ್ನು ಪಡೆಯುವಳು. ಬಲಾತ್ಕಾರಿಗಳಾದ ಗಂಡಸರು ಕೇವಲ ಹಣವನ್ನು ಗಳಿಸುವರು.

17 ದಯೆಯುಳ್ಳವನು ತನಗೆ ಲಾಭ ಮಾಡಿಕೊಳ್ಳುವನು. ಕ್ರೂರಿಯು ತನಗೇ ಕೇಡುಮಾಡಿಕೊಳ್ಳುವನು.

18 ಕೆಡುಕನು ತಾತ್ಕಾಲಿಕವಾದ ಲಾಭವನ್ನು ಮಾಡಿಕೊಳ್ಳುತ್ತಾನೆ. ಆದರೆ ನೀತಿವಂತನು ಯೋಗ್ಯವಾದ ಪ್ರತಿಫಲವನ್ನು ಹೊಂದಿಕೊಳ್ಳುವನು.

19 ನೀತಿವಂತನು ನಿಜವಾಗಿಯೂ ಜೀವವನ್ನು ಹೊಂದಿಕೊಳ್ಳುವನು, ಆದರೆ ಕೆಡುಕನನ್ನು ಹಿಂಬಾಲಿಸುತ್ತಾ ಹೋಗುವವನು ಸಾವಿಗೀಡಾಗುವನು.

20 ಕೆಡುಕರು ಯೆಹೋವನಿಗೆ ಅಸಹ್ಯರು. ಆದರೆ ಸನ್ಮಾರ್ಗಿಗಳು ಆತನ ಮೆಚ್ಚಿಕೆಗೆ ಪಾತ್ರರಾಗಿದ್ದಾರೆ.

21 ದುಷ್ಟರಿಗೆ ದಂಡನೆ ಖಂಡಿತ. ಶಿಷ್ಟರಿಗೆ ಬಿಡುಗಡೆ ನಿಶ್ಚಯ.

22 ಅವಿವೇಕಳಿಗೆ ಸೌಂದರ್ಯವು ಹಂದಿಯ ಮೂಗಿನಲ್ಲಿರುವ ಸುಂದರವಾದ ಚಿನ್ನದ ಮೂಗುತಿಯಂತಿರುವುದು.

23 ಒಳ್ಳೆಯವರ ಬಯಕೆ ಅವರನ್ನು ಕ್ಷೇಮಕ್ಕೆ ನಡೆಸುತ್ತದೆ. ಆದರೆ ದುಷ್ಟರ ಆಕಾಂಕ್ಷೆ ಅವರನ್ನು ದಂಡನೆಗೆ ನಡೆಸುತ್ತದೆ.

24 ಉಚಿತವಾಗಿ ಕೊಡುವವನು ಅದಕ್ಕಿಂತಲೂ ಹೆಚ್ಚುಗಳಿಸುವನು. ಆದರೆ ಕೊಡಲೊಲ್ಲದವನು ಬಡವನಾಗುವನು.

25 ಉದಾರಿಯು ಅಭಿವೃದ್ಧಿಯಾಗುವನು. ಬೇರೆಯವರಿಗೆ ಸಹಾಯಮಾಡುವವನು ಸಹಾಯವನ್ನು ಹೊಂದಿಕೊಳ್ಳುವನು.

26 ಧಾನ್ಯವನ್ನು ಮಾರದೆ ಕೂಡಿಟ್ಟುಕೊಳ್ಳುವವನನ್ನು ಜನರು ಶಪಿಸುವರು. ಧಾನ್ಯ ಮಾರುವವನನ್ನು ಜನರು ಆಶೀರ್ವದಿಸುವರು.

27 ಒಳ್ಳೆಯದನ್ನು ಮಾಡುವವನನ್ನು ಜನರು ಗೌರವಿಸುವರು. ಕೇಡನ್ನು ಮಾಡುವವನಿಗೆ ಕೇವಲ ಕೇಡೇ ಆಗುವುದು.

28 ಐಶ್ವರ್ಯದ ಮೇಲೆ ಭರವಸೆಯಿಟ್ಟಿರುವವನು ಎಲೆಯಂತೆ ಉದುರಿಹೋಗುವನು. ಆದರೆ ಸಧರ್ಮಿಯು ಚಿಗುರಿದ ಎಲೆಯಂತೆ ಬೆಳೆಯುವನು.

29 ತನ್ನ ಕುಟುಂಬಕ್ಕೆ ತೊಂದರೆ ಕೊಡುವವನಿಗೆ ಆಸ್ತಿಯು ದೊರೆಯುವುದಿಲ್ಲ. ಮೂಢನು ಬಲವಂತಕ್ಕೊಳಗಾಗಿ ಜ್ಞಾನಿಯ ಸೇವೆ ಮಾಡಬೇಕಾಗುವುದು.

30 ನೀತಿವಂತನ ಕಾರ್ಯಗಳು ಜೀವವುಳ್ಳ ಮರಗಳಂತಿವೆ. ಜ್ಞಾನಿಯು ಆತ್ಮಗಳನ್ನು ಗೆದ್ದುಕೊಳ್ಳುವನು.

31 ಶಿಷ್ಟರು ಭೂಮಿಯ ಮೇಲೆ ಪ್ರತಿಫಲವನ್ನು ಹೊಂದುವುದಾದರೆ ಕೆಡುಕರು ಸಹ ತಮಗೆ ಬರತಕ್ಕ ದಂಡನೆಯನ್ನು ಹೊಂದುವುದು ನಿಶ್ಚಯ.

ಇಬ್ರಿಯರಿಗೆ 12:3-13

ಯೇಸುವನ್ನು ಕುರಿತು ಯೋಚಿಸಿರಿ. ಪಾಪಪೂರಿತವಾದ ಜನರು ಆತನ ವಿರುದ್ಧವಾಗಿ ಕೆಟ್ಟದ್ದನ್ನು ಮಾಡುವಾಗ ಆತನು ತಾಳ್ಮೆಯಿಂದ ಇದ್ದನು. ಅದೇ ರೀತಿ ನೀವೂ ತಾಳ್ಮೆಯಿಂದಿರಬೇಕು ಮತ್ತು ಧೈರ್ಯಗೆಡಬಾರದು.

ದೇವರು ತಂದೆಯಂತಿದ್ದಾನೆ

ನೀವು ಪಾಪದ ವಿರುದ್ಧ ಹೋರಾಡುತ್ತಿದ್ದರೂ ನಿಮ್ಮ ಹೋರಾಟಗಳು ನಿಮ್ಮನ್ನು ಸಾವಿನ ಸಮೀಪಕ್ಕೆ ಇನ್ನೂ ತಂದಿಲ್ಲ. ನೀವು ದೇವರ ಮಕ್ಕಳಾಗಿದ್ದೀರಿ. ಆತನು ನಿಮಗೆ ನೆಮ್ಮದಿಯ ಮಾತುಗಳನ್ನು ನುಡಿಯುತ್ತಾನೆ. ನೀವು ಆ ಮಾತುಗಳನ್ನು ಮರೆತಿರುವಿರಿ:

“ಮಗನೇ, ಪ್ರಭುವಿನ ಶಿಕ್ಷೆಯನ್ನು ತಾತ್ಸಾರ ಮಾಡಬೇಡ.
    ಪ್ರಭುವು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ.
ಪ್ರಭುವು ತಾನು ಪ್ರೀತಿಸುವವನನ್ನೇ ದಂಡಿಸುತ್ತಾನೆ;
    ಯಾರನ್ನು ಮಗನೆಂದು ಒಪ್ಪಿಕೊಳ್ಳುವನೋ ಅವನನ್ನು ದಂಡಿಸುತ್ತಾನೆ.”(A)

ಆದ್ದರಿಂದ ತಂದೆಯು ನೀಡುವ ದಂಡನೆ ಎಂಬುದಾಗಿ ಅವುಗಳನ್ನು ಸಹಿಸಿಕೊಳ್ಳಿ. ತಂದೆಯು ತನ್ನ ಮಕ್ಕಳನ್ನು ದಂಡಿಸುವಂತೆ ದೇವರು ನಿಮ್ಮನ್ನು ಈ ರೀತಿ ಶಿಕ್ಷಿಸುತ್ತಾನೆ. ಎಲ್ಲಾ ಮಕ್ಕಳು ತಮ್ಮ ತಂದೆಗಳಿಂದ ಶಿಕ್ಷಿಸಲ್ಪಡುತ್ತಾರೆ. ನೀವು ಎಂದೂ ಶಿಕ್ಷಿಸಲ್ಪಡದಿದ್ದರೆ ನಿಮ್ಮ ತಂದೆಗೆ ನೀವು ನಿಜವಾದ ಮಕ್ಕಳಲ್ಲ. ಈ ಲೋಕದಲ್ಲಿ ನಮ್ಮೆಲ್ಲರನ್ನೂ ಶಿಕ್ಷಿಸಿದಂಥ ತಂದೆಗಳು ನಮಗಿದ್ದರು. ನಾವು ಅವರನ್ನು ಗೌರವಿಸಿದೆವು. ಆದ್ದರಿಂದ ನಮ್ಮ ಆತ್ಮಗಳಿಗೆ ತಂದೆಯಾಗಿರುವಾತನಿಂದ ದಂಡನೆಗಳನ್ನು ಸ್ವೀಕರಿಸಿಕೊಳ್ಳುವುದು ಬಹಳ ಮುಖ್ಯವಾದದ್ದು. ನಾವು ಹೀಗೆ ಮಾಡಿದರೆ ಜೀವವನ್ನು ಹೊಂದಿಕೊಳ್ಳುವೆವು. 10 ಈ ಲೋಕದ ನಮ್ಮ ತಂದೆಗಳು ನಮ್ಮನ್ನು ಸ್ವಲ್ಪಕಾಲ ದಂಡಿಸಿದರು. ಅವರು ತಮಗೆ ಉತ್ತಮವೆಂದು ತೋರಿದ ರೀತಿಯಲ್ಲಿ ನಮ್ಮನ್ನು ಶಿಕ್ಷಿಸಿದರು. ಆದರೆ ದೇವರು ನಮಗೆ ಸಹಾಯ ಮಾಡಲು ನಮ್ಮನ್ನು ಶಿಕ್ಷಿಸುತ್ತಾನೆ. ಏಕೆಂದರೆ ನಾವೂ ಆತನಂತೆ ಪರಿಶುದ್ಧರಾಗಬೇಕೆಂಬುದೇ ಆತನ ಉದ್ದೇಶ. 11 ಯಾವುದೇ ದಂಡನೆಯಾಗಲಿ ತತ್ಕಾಲಕ್ಕೆ ಸಂತೋಷಕರವಾಗಿರದೆ ದುಃಖಕರವಾಗಿರುತ್ತದೆ. ಆದರೆ ಆ ತರುವಾಯ ದಂಡನೆಯಿಂದ ನಾವು ಕಲಿತುಕೊಂಡು ಯೋಗ್ಯವಾದ ಜೀವಿತವನ್ನು ಆರಂಭಿಸುವುದರ ಮೂಲಕ ನಮಗೆ ಸಮಾಧಾನ ಉಂಟಾಗುತ್ತದೆ.

ಯೋಗ್ಯ ಮಾರ್ಗದಲ್ಲಿ ಜೀವಿಸಿರಿ

12 ನೀವು ದುರ್ಬಲರಾಗಿದ್ದೀರಿ. ಆದ್ದರಿಂದ ನಿಮ್ಮನ್ನು ಮತ್ತೆ ಬಲಪಡಿಸಿಕೊಳ್ಳಿರಿ. 13 ನೀವು ಯೋಗ್ಯವಾದ ಮಾರ್ಗದಲ್ಲಿ ಜೀವಿಸಿದರೆ ರಕ್ಷಣೆ ಹೊಂದುವಿರಿ ಮತ್ತು ನಿಮ್ಮನ್ನು ನಾಶಗೊಳಿಸಲು ನಿಮ್ಮ ಬಲಹೀನತೆಗಳಿಗೆ ಸಾಧ್ಯವಾಗುವುದಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International