Revised Common Lectionary (Semicontinuous)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
125 ಯೆಹೋವನಲ್ಲಿ ಭರವಸವಿಟ್ಟಿರುವವರು ಚೀಯೋನ್ ಪರ್ವತದಂತಿರುವರು.
ಅವರೆಂದಿಗೂ ಕದಲದೆ ಶಾಶ್ವತವಾಗಿರುವರು.
2 ಪರ್ವತಗಳು ಜೆರುಸಲೇಮಿನ ಸುತ್ತಲೂ ಇವೆ.
ಯೆಹೋವನು ತನ್ನ ಜನರ ಸುತ್ತಲೂ ಇರುವನು.
ಆತನು ತನ್ನ ಜನರನ್ನು ಸದಾಕಾಲ ಸಂರಕ್ಷಿಸುವನು.
3 ದುಷ್ಟರು ನೀತಿವಂತರನ್ನು ಶಾಶ್ವತವಾಗಿ ಆಳುವುದಿಲ್ಲ.
ಅವರು ಶಾಶ್ವತವಾಗಿ ಆಳಿದರೆ ನೀತಿವಂತರೂ ದುಷ್ಕೃತ್ಯಗಳನ್ನು ಮಾಡತೊಡಗಬಹುದು.
4 ಯೆಹೋವನೇ, ನೀತಿವಂತರಿಗೂ
ಯಥಾರ್ಥವಂತರಿಗೂ ಉಪಕಾರಮಾಡು.
5 ದುಷ್ಟರು ಕುತಂತ್ರಗಳನ್ನು ಮಾಡುವರು.
ಯೆಹೋವನು ಅವರನ್ನು ದಂಡಿಸುವನು.
ಇಸ್ರೇಲಿನಲ್ಲಿ ಶಾಂತಿ ನೆಲೆಸಿರಲಿ.
ಮುನ್ನುಡಿ
1 ದಾವೀದನ ಮಗನಾದ ಸೊಲೊಮೋನನ ಜ್ಞಾನೋಕ್ತಿಗಳು. ಸೊಲೊಮೋನನು ಇಸ್ರೇಲರ ರಾಜನಾಗಿದ್ದನು. 2 ಜ್ಞಾನವನ್ನು ಮತ್ತು ಶಿಕ್ಷಣವನ್ನು ಪಡೆದುಕೊಳ್ಳುವುದಕ್ಕೂ ಬುದ್ಧಿವಾದವನ್ನು ಗ್ರಹಿಸಿಕೊಳ್ಳುವುದಕ್ಕೂ ಈ ಜ್ಞಾನೋಕ್ತಿಗಳು ಸಹಾಯಕವಾಗಿವೆ. 3 ಈ ಜ್ಞಾನೋಕ್ತಿಗಳು ಯೋಗ್ಯವಾರ್ಗದಲ್ಲಿ ಜೀವಿಸಲು ಅಂದರೆ ಯಥಾರ್ಥವಾಗಿಯೂ ನ್ಯಾಯವಾಗಿಯೂ ಮತ್ತು ಒಳ್ಳೆಯವರಾಗಿಯೂ ಇರಲು ಉಪದೇಶಿಸುತ್ತವೆ. 4 ಈ ಜ್ಞಾನೋಕ್ತಿಗಳು ಸಾಮಾನ್ಯರಿಗೆ ಜಾಣತನವನ್ನು ಯೌವನಸ್ಥರಿಗೆ ಜ್ಞಾನವನ್ನೂ ತಿಳುವಳಿಕೆಯನ್ನೂ ಕೊಡುತ್ತವೆ. 5 ಈ ಜ್ಞಾನೋಕ್ತಿಗಳಿಗೆ ಕಿವಿಗೊಡುವುದರ ಮೂಲಕ ಜ್ಞಾನಿಗಳು ತಮ್ಮ ಪಾಂಡಿತ್ಯವನ್ನೂ ವಿವೇಕಿಗಳು ತಮ್ಮ ಉಚಿತಾಲೋಚನೆಗಳನ್ನೂ ಹೆಚ್ಚಿಸಿಕೊಳ್ಳಲಿ. 6 ಆಗ ಅವರು ಗಾದೆಗಳನ್ನು, ಸಾಮತಿಗಳನ್ನು, ಜ್ಞಾನದ ನುಡಿಗಳನ್ನು ಮತ್ತು ಒಗಟುಗಳನ್ನು ಅರ್ಥಮಾಡಿಕೊಳ್ಳುವರು.
7 ಯೆಹೋವನಲ್ಲಿಟ್ಟಿರುವ ಭಯಭಕ್ತಿಯೇ ಜ್ಞಾನದ ಮೂಲ. ಮೂರ್ಖರಾದರೋ ಜ್ಞಾನವನ್ನೂ ಶಿಕ್ಷೆಯನ್ನೂ ದ್ವೇಷಿಸುವರು.
ಸೊಲೊಮೋನನು ತನ್ನ ಮಗನಿಗೆ ಮಾಡಿದ ಉಪದೇಶ
8 ನನ್ನ ಮಗನೇ, ನಿನ್ನ ತಂದೆಯ ಬುದ್ಧಿಮಾತಿಗೆ ಕಿವಿಗೊಡು; ನಿನ್ನ ತಾಯಿಯ ಉಪದೇಶವನ್ನು ಅಲಕ್ಷಿಸಬೇಡ. 9 ನಿನ್ನ ತಂದೆತಾಯಿಗಳ ಮಾತುಗಳು ನಿನ್ನ ತಲೆಗೆ ಸುಂದರವಾದ ಹೂವಿನ ಕಿರೀಟದಂತೆಯೂ ನಿನ್ನ ಕೊರಳಿಗೆ ಸುಂದರವಾದ ಹಾರದಂತೆಯೂ ಇವೆ.
10 ನನ್ನ ಮಗನೇ, ಪಾಪ ಮಾಡಬಯಸುವವರು ನಿನಗೆ ದುಷ್ಪ್ರೇರಣೆ ಮಾಡಿದರೆ ಅವರನ್ನು ಹಿಂಬಾಲಿಸಕೂಡದು. 11 ನಿನಗೆ, “ನಮ್ಮ ಜೊತೆ ಬಾ! ನಾವು ಅಲ್ಲಿ ಅವಿತುಕೊಂಡಿದ್ದು ಯಾರನ್ನಾದರೂ ಕೊಲೆಮಾಡೋಣ; ಕೆಲವು ನಿರಪರಾಧಿಗಳ ಮೇಲೆ ನಿಷ್ಕಾರಣವಾಗಿ ಆಕ್ರಮಣ ಮಾಡಿ 12 ಅವರನ್ನು ಜೀವಂತವಾಗಿ ನುಂಗೋಣ; ಪಾತಾಳವು ನುಂಗುವಂತೆ ಸಂಪೂರ್ಣವಾಗಿ ನುಂಗಿಬಿಡೋಣ. 13 ಬೆಲೆಬಾಳುವ ಎಲ್ಲಾ ಬಗೆಯ ವಸ್ತುಗಳನ್ನು ಕದ್ದು ನಮ್ಮ ಮನೆಗಳಲ್ಲಿ ತುಂಬಿಸಿಕೊಳ್ಳೋಣ. 14 ಅವುಗಳಲ್ಲಿ ನಿನಗೆ ಸಮಪಾಲು ದೊರೆಯುವುದು, ಬಂದು ನಮ್ಮೊಂದಿಗೆ ಸೇರಿಕೊ” ಎಂದು ಆ ಪಾಪಿಗಳು ಹೇಳಬಹುದು.
15 ನನ್ನ ಮಗನೇ, ಅವರ ಜೀವಿತವನ್ನು ಅನುಸರಿಸಬೇಡ. ಅವರ ಜೀವಿತಮಾರ್ಗದಲ್ಲಿ ಮೊದಲನೆ ಹೆಜ್ಜೆಯನ್ನೂ ಇಡಬೇಡ. 16 ಅವರು ಕೇಡುಮಾಡುವುದಕ್ಕೆ ಯಾವಾಗಲೂ ಸಿದ್ಧರಾಗಿದ್ದಾರೆ. ಜನರನ್ನು ಕೊಲ್ಲುವುದಕ್ಕೆ ಯಾವಾಗಲೂ ಆತುರಪಡುತ್ತಾರೆ.
17 ಪಕ್ಷಿಗಳ ಕಣ್ಣೆದುರಿನಲ್ಲಿ ಬಲೆಹಾಕುವುದರಿಂದ ಪ್ರಯೋಜನವೇನೂ ಇಲ್ಲ. 18 ಅವರಾದರೋ ಬೇರೊಬ್ಬನನ್ನು ಕೊಲ್ಲಲು ಅವಿತುಕೊಂಡು ಕಾಯುತ್ತಾರೆ; ಆದರೆ ಅವರು ತಮ್ಮ ಸಂಚಿನಿಂದ ತಮ್ಮನ್ನೇ ನಾಶಪಡಿಸಿಕೊಳ್ಳುತ್ತಾರೆ. 19 ದುರಾಶೆಯುಳ್ಳವರು ತಾವು ದೋಚಿಕೊಳ್ಳುವ ವಸ್ತುಗಳಿಂದಲೇ ನಾಶವಾಗುವರು.
ಯೆಹೂದ್ಯರು ಸಹ ಪಾಪಿಗಳು
2 “ಇತರ ಜನರಿಗೆ ತೀರ್ಪು ಮಾಡಬಲ್ಲೆವು” ಎಂದು ನಿಮ್ಮ ವಿಷಯದಲ್ಲಿ ಯೋಚಿಸಿಕೊಳ್ಳಬೇಡಿ. ಏಕೆಂದರೆ ನೀವು ಸಹ ಪಾಪಮಾಡಿ ಅಪರಾಧಿಗಳಾಗಿದ್ದೀರಿ. ನೀವೂ ಆ ಜನರಿಗೆ ತೀರ್ಪು ಮಾಡುತ್ತೀರಿ. ಆದರೆ ಅದೇ ಕಾರ್ಯಗಳನ್ನು ನೀವೂ ಮಾಡುತ್ತೀರಿ. ಆದ್ದರಿಂದ ನೀವು ಅವರಿಗೆ ತೀರ್ಪು ಮಾಡುವಾಗ, ನಿಜವಾಗಿಯೂ ನಿಮಗೇ ತೀರ್ಪು ಮಾಡಿಕೊಳ್ಳುವವರಾಗಿದ್ದೀರಿ. 2 ಅಪರಾಧಗಳನ್ನು ಮಾಡುವ ಜನರಿಗೆ ದೇವರು ತೀರ್ಪು ಮಾಡುತ್ತಾನೆ. ಆತನ ತೀರ್ಪು ನ್ಯಾಯವಾದುದೆಂದು ನಮಗೆ ಗೊತ್ತಿದೆ. 3 ಆ ಅಪರಾಧಗಳನ್ನು ಮಾಡುವ ಜನರಿಗೆ ನೀವು ಸಹ ತೀರ್ಪು ಮಾಡುತ್ತೀರಿ. ಆದರೆ ನೀವೇ ಆ ಅಪರಾಧಗಳನ್ನು ಮಾಡುತ್ತೀರಿ. ಹೀಗಿರಲು ದೇವರ ದಂಡನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲವೆಂದು ನಿಮಗೆ ನಿಶ್ಚಯವಾಗಿ ತಿಳಿದಿದೆ. 4 ದೇವರು ನಿಮ್ಮ ವಿಷಯದಲ್ಲಿ ಬಹು ಕನಿಕರ ಉಳ್ಳವನಾಗಿದ್ದಾನೆ; ತಾಳ್ಮೆ ಉಳ್ಳವನಾಗಿದ್ದಾನೆ. ನೀವು ಮಾರ್ಪಾಟಾಗಬೇಕೆಂದು ದೇವರು ನಿಮಗಾಗಿ ಕಾದುಕೊಂಡಿದ್ದಾನೆ. ಆದರೆ ನೀವು ಆತನ ಕರುಣೆಯ ಬಗ್ಗೆ ಆಲೋಚಿಸುವುದೇ ಇಲ್ಲ. ನೀವು ನಿಮ್ಮ ಹೃದಯಗಳನ್ನೂ ಜೀವಿತಗಳನ್ನೂ ಮಾರ್ಪಡಿಸಿಕೊಳ್ಳಬೇಕಾಗುತ್ತದೆಯೆಂದು ದೇವರ ಕನಿಕರವನ್ನು ಅರ್ಥಮಾಡಿಕೊಳ್ಳದೆ ಇದ್ದೀರಿ.
5 ನೀವು ಕಠಿಣರಾಗಿದ್ದೀರಿ ಮತ್ತು ಮೊಂಡರಾಗಿದ್ದೀರಿ. ಮಾರ್ಪಾಟಾಗಲು ನಿಮಗೆ ಇಷ್ಟವಿಲ್ಲ. ಆದ್ದರಿಂದ ನಿಮಗೆ ಬರಲಿರುವ ದಂಡನೆಯನ್ನು ನೀವು ಹೆಚ್ಚುಹೆಚ್ಚು ಮಾಡಿಕೊಳ್ಳುತ್ತಿದ್ದೀರಿ. ದೇವರು ತನ್ನ ಕೋಪವನ್ನು ತೋರಿಸುವ ದಿನದಲ್ಲಿ ನಿಮಗೆ ಆ ದಂಡನೆಯಾಗುವುದು. ಆ ದಿನದಲ್ಲಿ ದೇವರ ನ್ಯಾಯವಾದ ತೀರ್ಪುಗಳನ್ನು ಜನರು ನೋಡುವರು.[a] 6 ದೇವರು ಪ್ರತಿಯೊಬ್ಬರಿಗೂ ಅವರವರು ಮಾಡಿದ ಕಾರ್ಯಗಳಿಗಾಗಿ ಬಹುಮಾನವನ್ನಾಗಲಿ ದಂಡನೆಯನ್ನಾಗಲಿ ಕೊಡುವನು. 7 ಕೆಲವು ಜನರು ಮಹಿಮೆಗಾಗಿ, ಘನತೆಗಾಗಿ ಮತ್ತು ಅಮರತ್ವಕ್ಕಾಗಿ ಯಾವಾಗಲೂ ಸತ್ಕಾರ್ಯಗಳನ್ನು ಮಾಡುತ್ತಾ ಜೀವಿಸುವರು. ದೇವರು ಆ ಜನರಿಗೆ ನಿತ್ಯಜೀವವನ್ನು ಕೊಡುವನು. 8 ಆದರೆ ಉಳಿದ ಜನರು ಸ್ವಾರ್ಥಿಗಳಾಗಿದ್ದು, ಸತ್ಯವನ್ನು ಅನುಸರಿಸದೆ ದುಷ್ಟತ್ವವನ್ನು ಅನುಸರಿಸುವವರಾಗಿದ್ದಾರೆ. ಅವರ ಮೇಲೆ ದೇವರ ದಂಡನೆಯೂ ಕೋಪವೂ ಬರುತ್ತದೆ. 9 ಕೆಟ್ಟದ್ದನ್ನು ನಡೆಸುವ ಪ್ರತಿಯೊಬ್ಬ ವ್ಯಕ್ತಿಗೂ ಅಂದರೆ ಮೊದಲನೆಯದಾಗಿ ಯೆಹೂದ್ಯರಿಗೆ, ಅನಂತರ ಗ್ರೀಕರಿಗೆ ಸಹ ದೇವರು ಕಷ್ಟಸಂಕಟಗಳನ್ನು ಕೊಡುತ್ತಾನೆ. 10 ಆದರೆ ಒಳ್ಳೆಯದನ್ನು ಮಾಡುವ ಪ್ರತಿಯೊಬ್ಬರಿಗೂ ಅಂದರೆ ಮೊದಲನೆಯದಾಗಿ ಯೆಹೂದ್ಯರಿಗೆ, ಅನಂತರ ಗ್ರೀಕರಿಗೆ ಸಹ ದೇವರು ಮಹಿಮೆಯನ್ನು, ಘನತೆಯನ್ನು ಮತ್ತು ಶಾಂತಿಯನ್ನು ಕೊಡುವನು. 11 ದೇವರು ಪಕ್ಷಪಾತ ಮಾಡದೆ ಎಲ್ಲರಿಗೂ ಒಂದೇ ರೀತಿಯಲ್ಲಿ ತೀರ್ಪು ಕೊಡುತ್ತಾನೆ.
Kannada Holy Bible: Easy-to-Read Version. All rights reserved. © 1997 Bible League International