Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 45:1-2

ರಚನೆಗಾರರು: ಕೋರಹೀಯರು.

45 ಒಂದು ದಿವ್ಯ ವಿಷಯವನ್ನು ಹೇಳಲು
    ನನ್ನ ಹೃದಯವು ತವಕಪಡುತ್ತದೆ;
ನನ್ನ ರಾಜನನ್ನು ಕುರಿತು ಸುಂದರವಾದ ಗೀತೆಯೊಂದನ್ನು ರಚಿಸುವೆ.
    ನನ್ನ ನಾಲಿಗೆಯು ಕವಿಯ ಲೇಖನಿಯಂತೆ ಸಿದ್ಧವಾಗಿದೆ.
ನೀನು ಎಲ್ಲರಿಗಿಂತಲೂ ಅತಿಸುಂದರನಾಗಿರುವೆ.
    ನಿನ್ನ ಮಾತುಗಳು ಮನೋಹರವಾಗಿವೆ.
    ದೇವರ ಆಶೀರ್ವಾದವು ನಿನ್ನ ಮೇಲೆ ಸದಾಕಾಲವಿರುವುದು.

ಕೀರ್ತನೆಗಳು 45:6-9

ದೇವರೇ,[a] ನಿನ್ನ ಸಿಂಹಾಸನವು ಶಾಶ್ವತವಾದದ್ದು.
    ಒಳ್ಳೆಯತನವು ನಿನ್ನ ರಾಜದಂಡವಾಗಿದೆ.
ನೀನು ನೀತಿಯನ್ನು ಪ್ರೀತಿಸುವೆ; ದುಷ್ಟತನವನ್ನು ದ್ವೇಷಿಸುವೆ.
    ಆದ್ದರಿಂದ ನಿನ್ನ ದೇವರಾಗಿರುವಾತನು
    ನಿನ್ನನ್ನು ನಿನ್ನ ಸ್ನೇಹಿತರಿಗೆ ರಾಜನನ್ನಾಗಿ ಆರಿಸಿಕೊಂಡಿದ್ದಾನೆ.[b]
ನಿನ್ನ ಬಟ್ಟೆಗಳು ಪರಿಮಳದ್ರವ್ಯಗಳಾದ ಗೋಲರಸ, ಅಗರು ಮತ್ತು ಚಂದನಗಳಿಂದ ಕೂಡಿವೆ.
    ಗಜದಂತದಿಂದ ಶೃಂಗರಿಸಿರುವ ಅರಮನೆಗಳಲ್ಲಿ ನಿನ್ನನ್ನು ಸಂತೋಷಪಡಿಸಲು ವಾದ್ಯಗಳನ್ನು ನುಡಿಸುವರು.
ನಿನ್ನ ಸ್ತ್ರೀಪರಿವಾರದಲ್ಲಿರುವವರು ರಾಜಕುಮಾರಿಯರೇ,
    ನಿನ್ನ ಪಟ್ಟದರಾಣಿಯು ಓಫೀರ್ ದೇಶದ ಬಂಗಾರದಿಂದ ಮಾಡಿದ ಕಿರೀಟವನ್ನು ಧರಿಸಿಕೊಂಡು ನಿನ್ನ ಬಲಗಡೆಯಲ್ಲಿ ನಿಂತಿರುವಳು.

ಪರಮ ಗೀತ 1

ಸೊಲೊಮೋನನ ಮನೋಹರವಾದ ಗೀತೆ

ಪ್ರಿಯತಮೆ ಪ್ರಿಯಕರನಿಗೆ

ನಿನ್ನ ಬಾಯಿಂದ ನನ್ನನ್ನು ಮುದ್ದಾಡು,
    ನಿನ್ನ ಪ್ರೀತಿ ದ್ರಾಕ್ಷಾರಸಕ್ಕಿಂತಲೂ ಉತ್ತಮ.
ನಿನ್ನ ತೈಲವು ಪರಿಮಳಭರಿತವಾಗಿದೆ;
    ನಿನ್ನ ಹೆಸರು ಸುಗಂಧದ್ರವ್ಯದಂತಿದೆ.
    ಆದ್ದರಿಂದ ಯುವತಿಯರು ನಿನ್ನನ್ನು ಪ್ರೀತಿಸುವರು.
ನನ್ನನ್ನು ಕರೆದುಕೊಂಡು ಹೋಗು!
    ನಾವು ಓಡಿಹೋಗೋಣ!

ರಾಜನು ನನ್ನನ್ನು ಅಂತಃಪುರಕ್ಕೆ ಬರಮಾಡಿದ್ದಾನೆ.

ಜೆರುಸಲೇಮಿನ ಸ್ತ್ರೀಯರು

ನಿನ್ನಲ್ಲಿ ಹರ್ಷಿಸಿ ಉಲ್ಲಾಸಿಸುವೆವು.
    ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತಲೂ ಉತ್ತಮ.
    ಯುವತಿಯರು ನಿನ್ನನ್ನು ಹೃದಯಪೂರ್ವಕವಾಗಿ ಪ್ರೀತಿಸುವರು.

ಪ್ರಿಯತಮೆ ಜೆರುಸಲೇಮಿನ ಸ್ತ್ರೀಯರಿಗೆ

ಜೆರುಸಲೇಮಿನ ಸ್ತ್ರೀಯರೇ,
    ನಾನು ಕೇದಾರಿನ ಗುಡಾರಗಳಂತೆ ಕಪ್ಪಾಗಿದ್ದರೂ
    ಸೊಲೊಮೋನನ ಪರದೆಗಳಂತೆ ಸುಂದರಳಾಗಿರುವೆ.

ಸೂರ್ಯನ ತಾಪಕ್ಕೆ ನಾನೆಷ್ಟು ಕಪ್ಪಾಗಿದ್ದೇನೆಂದು ನೋಡಬೇಡಿರಿ.
    ನನ್ನ ಸಹೋದರರು ನನ್ನ ಮೇಲೆ ಕೋಪಗೊಂಡು
ದ್ರಾಕ್ಷಿತೋಟಗಳನ್ನು ನೋಡಿಕೊಳ್ಳಲು ನನ್ನನ್ನು ನೇಮಿಸಿದರು.
    ಆದರೆ ನಾನು ನನ್ನ ತೋಟವನ್ನು ಕಾಯಲಿಲ್ಲ.

ಪ್ರಿಯತಮೆ ಪ್ರಿಯಕರನಿಗೆ

ನನ್ನ ಪ್ರಾಣಪ್ರಿಯನೇ, ನಿನ್ನ ಕುರಿಗಳನ್ನು ಎಲ್ಲಿ ಮೇಯಿಸುವೆ?
    ಮಧ್ಯಾಹ್ನದಲ್ಲಿ ಅವುಗಳನ್ನು ಎಲ್ಲಿ ಮಲಗಿಸುವೆ?
ಮುಸುಕುಹಾಕಿಕೊಂಡು
    ನಿನ್ನ ಸ್ನೇಹಿತರ ಮಂದೆಗಳ ಹತ್ತಿರ ಅಲೆದಾಡುವ ಹುಡುಗಿಯಂತೆ ನಾನೇಕಿರಬೇಕು?

ಪ್ರಿಯಕರನು ಪ್ರಿಯತಮೆಗೆ

ಸ್ತ್ರೀಯರಲ್ಲಿ ಅತ್ಯಂತ ರೂಪವತಿಯೇ,
    ನಿನ್ನ ಪ್ರಿಯನು ಎಲ್ಲಿದ್ದಾನೆಂಬುದು ನಿನಗೆ ಗೊತ್ತಿಲ್ಲದಿದ್ದರೆ,
ಹೋಗು, ಕುರಿಗಳನ್ನು ಹಿಂಬಾಲಿಸು.
    ಕುರುಬರ ಗುಡಾರಗಳ ಬಳಿಯಲ್ಲಿ ನಿನ್ನ ಮೇಕೆಮರಿಗಳನ್ನು ಮೇಯಿಸು.

ನನ್ನ ಪ್ರಿಯೆ, ಫರೋಹನ ರಥಗಳ ಮಧ್ಯದಲ್ಲಿರುವ
    ಹೆಣ್ಣು ಕುದುರೆಗಿಂತಲೂ ನೀನು ಸುಂದರಳಾಗಿರುವೆ.
10 ನಿನ್ನ ಕೆನ್ನೆಗಳು ಅಲಂಕಾರಗಳಿಂದ ಸುಂದರವಾಗಿವೆ.
    ನಿನ್ನ ಕಂಠವು ಹಾರಗಳಿಂದ ಅಂದವಾಗಿದೆ.
11 ಬೆಳ್ಳಿಯ ತಿರುಪಿನಿಂದ ಕೂಡಿದ ಚಿನ್ನದ ಆಭರಣಗಳನ್ನು
    ನಾವು ನಿನಗೋಸ್ಕರ ಮಾಡಿಸುವೆವು.

ಪ್ರಿಯತಮೆ

12 ಓಲಗದ ಮೇಲೆ ಮಲಗಿರುವ ರಾಜನಿಗೆ
    ನನ್ನ ಸುಗಂಧದ್ರವ್ಯದ ಪರಿಮಳವು ಹರಡುವುದು.
13 ನನ್ನ ಪ್ರಿಯನು ರಾತ್ರಿಯೆಲ್ಲಾ ನನ್ನ ಸ್ತನಗಳ ನಡುವೆ ಇರುವ
    ಗೋಲರಸದ ಚೀಲದಂತಿದ್ದಾನೆ.
14 ನನ್ನ ಪ್ರಿಯನು ನನಗೆ ಏನ್ಗೆದಿಯ ತೋಟಗಳ
    ಗೋರಂಟೆಯ ಹೂಗೊಂಚಲು.

ಪ್ರಿಯಕರ

15 ನನ್ನ ಪ್ರಿಯೆ, ನೀನು ರೂಪವತಿ! ನೀನು ಸುಂದರಿ!
    ನಿನ್ನ ಕಣ್ಣುಗಳು ಪಾರಿವಾಳಗಳಂತೆ ಕೋಮಲ.

ಪ್ರಿಯತಮೆ

16 ನನ್ನ ಪ್ರಿಯನೇ, ನೀನು ಬಹು ಸುಂದರ!
    ಹೌದು, ನೀನು ಎಷ್ಟೋ ಮನೋಹರ!
ನಮ್ಮ ಹಾಸಿಗೆ ಎಷ್ಟೋ ಉಲ್ಲಾಸಕರ!
17     ನಮ್ಮ ಮನೆಯ ತೊಲೆಗಳು ದೇವದಾರು ಮರದ ತೊಲೆಗಳು.
    ನಮ್ಮ ಮನೆಯ ಜಂತೆಗಳು ತುರಾಯಿ ಮರದ ಜಂತೆಗಳು.

ಯಾಕೋಬನು 1:1-8

ದೇವರ ಮತ್ತು ಪ್ರಭುವಾದ ಯೇಸು ಕ್ರಿಸ್ತನ ಸೇವಕನಾದ ಯಾಕೋಬನು ಲೋಕದಲ್ಲೆಲ್ಲಾ ಚದರಿಹೋಗಿರುವ (ಇಸ್ರೇಲಿನ) ಹನ್ನೆರಡು ಕುಲದವರಿಗೆ ಬರೆದ ಪತ್ರ. ನಿಮಗೆ ಶುಭವಾಗಲಿ.

ನಂಬಿಕೆ ಮತ್ತು ಜ್ಞಾನ

ನನ್ನ ಸಹೋದರ ಸಹೋದರಿಯರೇ, ನಿಮಗೆ ಅನೇಕ ತೊಂದರೆಗಳು ಬರುತ್ತವೆ. ಆದರೆ ಅವುಗಳು ಬಂದಾಗ ನೀವು ಬಹಳ ಸಂತೋಷಪಡಬೇಕು. ಏಕೆಂದರೆ ಅವುಗಳು ನಿಮ್ಮ ನಂಬಿಕೆಯನ್ನು ಪರಿಶೋಧಿಸಲು ಬಂದಿವೆ ಎಂಬುದು ನಿಮಗೆ ತಿಳಿದದೆ. ಅವು ನಿಮ್ಮಲ್ಲಿ ತಾಳ್ಮೆಯನ್ನು ಉಂಟುಮಾಡುತ್ತವೆ. ತಾಳ್ಮೆಯು ತನ್ನ ಕಾರ್ಯವನ್ನು ಪೂರೈಸಲಿ. ಆಗ ನೀವು ನಿಷ್ಕಳಂಕರೂ ಮತ್ತು ಪರಿಪೂರ್ಣರೂ ಆಗುವಿರಿ ಮತ್ತು ನಿಮಗೆ ಬೇಕಾದುದೆಲ್ಲವೂ ದೊರೆಯುವುದು.

ಆದರೆ ನಿಮ್ಮಲ್ಲಿ ಯಾರಿಗಾದರೂ ಜ್ಞಾನವು ಬೇಕಾಗಿದ್ದರೆ ಅಂಥವರು ದೇವರಲ್ಲಿ ಕೇಳಿಕೊಳ್ಳಲಿ. ದೇವರು ಉದಾರಿಯಾಗಿರುವುದರಿಂದ ಮತ್ತು ಎಲ್ಲಾ ಜನರಿಗೆ ಸಂತೋಷದಿಂದ ಕೊಡುವುದರಿಂದ ನಿಮಗೆ ಜ್ಞಾನವನ್ನು ದಯಪಾಲಿಸುತ್ತಾನೆ. ಆದರೆ ನೀವು ದೇವರನ್ನು ಕೇಳಿಕೊಳ್ಳುವಾಗ ಆತನಲ್ಲಿ ನಿಮಗೆ ನಂಬಿಕೆಯಿರಬೇಕು. ದೇವರ ಬಗ್ಗೆ ಸಂದೇಹಪಡದಿರಿ. ಸಂದೇಹಪಡುವವನು ಸಾಗರದಲ್ಲಿನ ಅಲೆಯಂತಿದ್ದಾನೆ. ಗಾಳಿಯು ಬೀಸಿದಾಗ ಅಲೆಯು ಮೇಲೆದ್ದು ಬೀಳುತ್ತದೆ. ಸಂದೇಹಪಡುವವನು ಆ ಅಲೆಯಂತಿರುವನು. 7-8 ಅವನು ಒಂದೇ ಕಾಲದಲ್ಲಿ ಎರಡು ರೀತಿಯ ಸಂಗತಿಗಳನ್ನು ಯೋಚಿಸುತ್ತಾನೆ. ಅವನು ತಾನು ಮಾಡುವ ಯಾವುದೇ ಕಾರ್ಯದಲ್ಲಾಗಲಿ ಒಂದು ತೀರ್ಮಾನಕ್ಕೆ ಬರಲಾರನು. ಅಂಥವನು ತನಗೆ ಪ್ರಭುವಿನಿಂದ ಏನಾದರೂ ದೊರೆಯುತ್ತದೆ ಎಂದು ಯೋಚಿಸದಿರಲಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International