Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 11

ರಚನೆಗಾರ: ದಾವೀದ.

11 ನಾನು ಯೆಹೋವನನ್ನೇ ಆಶ್ರಯಿಸಿಕೊಂಡಿದ್ದೇನೆ.
    ಹೀಗಿರಲು, “ನಿನ್ನ ಬೆಟ್ಟಕ್ಕೆ ಪಕ್ಷಿಯಂತೆ ಹಾರಿಹೋಗು” ಎಂದು ನೀವು ಹೇಳುವುದೇಕೆ?

ದುಷ್ಟರು ಬೇಟೆಗಾರರಂತಿದ್ದಾರೆ;
    ಅವರು ಕತ್ತಲೆಯಲ್ಲಿ ಅವಿತುಕೊಂಡಿರುವರು;
    ಬಿಲ್ಲುಗಳಿಗೆ ಬಾಣಗಳನ್ನು ಹೂಡಿ ನೀತಿವಂತರ ಹೃದಯಕ್ಕೆ ನೇರವಾಗಿ ಹೊಡೆಯುವರು.
ಅಸ್ತಿವಾರಗಳೇ ನಾಶವಾಗುತ್ತಿದ್ದರೆ
    ನೀತಿವಂತನು ಏನು ಮಾಡಲಾದೀತು?

ಯೆಹೋವನು ತನ್ನ ಪವಿತ್ರ ಆಲಯದಲ್ಲಿದ್ದಾನೆ.
    ಆತನು ಪರಲೋಕದಲ್ಲಿ ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡು
ಮನುಷ್ಯರ ಕಾರ್ಯಗಳನ್ನು ಗಮನಿಸುತ್ತಿದ್ದಾನೆ.
    ಆತನ ಕಣ್ಣುಗಳು ಅವರನ್ನು ಪರಿಶೋಧಿಸುತ್ತಿವೆ.
ಯೆಹೋವನು ನೀತಿವಂತರಿಗಾಗಿ ಹುಡುಕುವನು.
    ಆದರೆ ಆತನು ದುಷ್ಟರನ್ನೂ ಹಿಂಸಕರನ್ನೂ ತಿರಸ್ಕರಿಸುವನು.
ಆತನು ಆ ದುಷ್ಟರ ಮೇಲೆ ಬೆಂಕಿಗಂಧಕಗಳ ಮಳೆಯನ್ನು ಸುರಿಸುವನು.
    ಅವರಿಗೆ ಸಿಕ್ಕುವುದೆಂದರೆ ಕಾದ ಉರಿಗಾಳಿಯೊಂದೇ.
ಯಾಕೆಂದರೆ ಯೆಹೋವನು ನೀತಿಸ್ವರೂಪನಾಗಿದ್ದಾನೆ; ಆತನು ನ್ಯಾಯವನ್ನು ಪ್ರೀತಿಸುತ್ತಾನೆ.
    ನೀತಿವಂತರು ಆತನ ಮುಖವನ್ನು ನೋಡುವರು.

1 ರಾಜರುಗಳು 6:15-38

15 ದೇವಾಲಯದ ಒಳಗಿನ ಗೋಡೆಗಳಿಗೆ ದೇವದಾರು ಮರದ ಹಲಗೆಗಳನ್ನು ನೆಲದಿಂದ ಮಾಳಿಗೆಯವರೆಗೆ ಹೊದಿಸಿದ್ದರು. ಕಲ್ಲಿನ ನೆಲಕ್ಕೆ ತುರಾಯಿ ಮರದ ಹಲಗೆಗಳನ್ನು ಹಾಸಿದ್ದರು. 16 ದೇವಾಲಯದ ಹಿಂಭಾಗದಲ್ಲಿ ಅವರು ಮೂವತ್ತು ಅಡಿ ಉದ್ದವಾಗಿರುವ ಒಂದು ಕೊಠಡಿಯನ್ನು ನಿರ್ಮಿಸಿದ್ದರು. ಈ ಕೊಠಡಿಯ ಗೋಡೆಗಳಿಗೂ ದೇವದಾರು ಮರದ ಹಲಗೆಗಳನ್ನು ನೆಲದಿಂದ ಮಾಳಿಗೆಯವರೆಗೆ ಹೊದಿಸಿದ್ದರು. ಈ ಕೊಠಡಿಯನ್ನು ಮಹಾ ಪವಿತ್ರಸ್ಥಳವೆಂದು ಕರೆದರು. 17 ಈ ಮಹಾ ಪವಿತ್ರಸ್ಥಳದ ಎದುರಿನಲ್ಲಿ ದೇವಾಲಯದ ಮುಖ್ಯ ಭಾಗವಿದೆ. ಈ ಕೊಠಡಿಯ ಉದ್ದ ಅರವತ್ತು ಅಡಿ. 18 ಈ ಕೊಠಡಿಯ ಗೋಡೆಗಳಿಗೆ ದೇವದಾರು ಮರದ ಹೊದಿಕೆಗಳನ್ನು ಹೊದಿಸಲಾಗಿದ್ದು ಈ ಗೋಡೆಗಳಲ್ಲಿದ್ದ ಯಾವುದೇ ಕಲ್ಲುಗಳು ಕಂಡುಬರುತ್ತಿರಲಿಲ್ಲ. ಈ ದೇವದಾರು ಮರದ ಹಲಗೆಗಳ ಮೇಲೆ ಹೂಗಳ ಮತ್ತು ಬಳ್ಳಿಗಳ ಚಿತ್ರಗಳನ್ನು ಕೆತ್ತಲಾಗಿತ್ತು.

19 ಸೊಲೊಮೋನನು ದೇವಾಲಯದ ಹಿಂದಿನ ಭಾಗದಲ್ಲಿ ಒಳಗಡೆ ಒಂದು ಕೋಣೆಯನ್ನು ಸಿದ್ಧಪಡಿಸಿದನು. ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಇಡುವುದಕ್ಕಾಗಿಯೇ ಈ ಕೊಠಡಿಯನ್ನು ಸಿದ್ಧಪಡಿಸಲಾಗಿತ್ತು. 20 ಈ ಕೊಠಡಿಯು ಮೂವತ್ತು ಅಡಿ ಉದ್ದ ಮೂವತ್ತು ಅಡಿ ಅಗಲ ಮತ್ತು ಮೂವತ್ತು ಅಡಿ ಎತ್ತರವಾಗಿತ್ತು. 21 ಸೊಲೊಮೋನನು ಶುದ್ಧ ಚಿನ್ನದ ತಗಡನ್ನು ಈ ಕೊಠಡಿಗೆ ಹೊದಿಸಿದನು. ಈ ಕೊಠಡಿಯ ಮುಂದೆ ಧೂಪವೇದಿಕೆಯನ್ನು ಅವನು ನಿರ್ಮಿಸಿದನು. ಅವನು ಆ ವೇದಿಕೆಗೆ ಚಿನ್ನದ ಹೊದಿಕೆಯನ್ನೂ ಅದರ ಸುತ್ತಲೂ ಚಿನ್ನದ ಸರಪಣಿಗಳನ್ನೂ ಜೋಡಿಸಿದನು. ಆ ಕೊಠಡಿಯಲ್ಲಿ ಎರಡು ಕೆರೂಬಿಗಳ ಪ್ರತಿಮೆಗಳಿದ್ದವು. ಆ ಪ್ರತಿಮೆಗಳಿಗೆ ಚಿನ್ನದ ಹೊದಿಕೆಯನ್ನು ಹೊದಿಸಿದ್ದರು. 22 ದೇವಾಲಯಕ್ಕೆಲ್ಲ ಚಿನ್ನದ ಹೊದಿಕೆಯನ್ನು ಹೊದಿಸಿದ್ದರು. ಅಲ್ಲದೆ, ಮಹಾ ಪವಿತ್ರಸ್ಥಳದ ಮುಂದಿನ ಯಜ್ಞವೇದಿಕೆಗೂ ಚಿನ್ನದ ಹೊದಿಕೆಯನ್ನು ಹೊದಿಸಿದ್ದರು.

23 ಕೆಲಸಗಾರರು ರೆಕ್ಕೆಗಳಿರುವ ಎರಡು ಕೆರೂಬಿಗಳ ಪ್ರತಿಮೆಗಳನ್ನು ಆಲೀವ್ ಮರದಿಂದ ಮಾಡಿ ಅವುಗಳನ್ನು ಮಹಾಪವಿತ್ರ ಸ್ಥಳದಲ್ಲಿಟ್ಟರು. ಒಂದೊಂದು ಪ್ರತಿಮೆಯು ಹದಿನೈದು ಅಡಿ ಎತ್ತರವಾಗಿತ್ತು. 24-26 ಈ ಎರಡು ಕೆರೂಬಿಗಳು ಅಳತೆಯಲ್ಲಿಯೂ ಆಕಾರದಲ್ಲಿಯೂ ಒಂದೇ ರೀತಿಯಾಗಿದ್ದವು. ಪ್ರತಿಯೊಂದು ಕೆರೂಬಿಗಳಿಗೆ ಎರಡು ರೆಕ್ಕೆಗಳಿದ್ದವು. ಪ್ರತಿಯೊಂದು ರೆಕ್ಕೆಯ ಉದ್ದ ಏಳುವರೆ ಅಡಿಗಳು. ಒಂದು ರೆಕ್ಕೆಯಿಂದ ಮತ್ತೊಂದು ರೆಕ್ಕೆಯ ಕೊನೆಗಿರುವ ಅಂತರ ಹದಿನೈದು ಅಡಿಗಳು. ಪ್ರತಿಯೊಂದು ಕೆರೂಬಿಯ ಎತ್ತರ ಹದಿನೈದು ಅಡಿಗಳು. 27 ಈ ಕೆರೂಬಿಗಳನ್ನು ಮಹಾಪವಿತ್ರ ಸ್ಥಳದಲ್ಲಿಟ್ಟರು. ಅವುಗಳು ಒಂದಕ್ಕೊಂದು ಸಮೀಪದಲ್ಲಿದ್ದವು. ಅವುಗಳ ರೆಕ್ಕೆಗಳು ಕೊಠಡಿಯ ಮಧ್ಯಭಾಗದಲ್ಲಿ ಒಂದನ್ನೊಂದು ತಾಕುತ್ತಿದ್ದವು. ಉಳಿದೆರಡು ರೆಕ್ಕೆಗಳು ಎರಡು ಕಡೆಗಳಲ್ಲಿದ್ದ ಗೋಡೆಗಳನ್ನು ತಾಕುತ್ತಿದ್ದವು. 28 ಈ ಎರಡು ಕೆರೂಬಿಗಳಿಗೆ ಚಿನ್ನದ ತಗಡನ್ನು ಹೊದಿಸಲಾಗಿತ್ತು.

29 ಮುಖ್ಯಕೊಠಡಿಯ ಮತ್ತು ಒಳಕೋಣೆಯ ಗೋಡೆಗಳ ಮೇಲೆ ಕೆರೂಬಿಗಳ, ಖರ್ಜೂರ ವೃಕ್ಷಗಳ ಮತ್ತು ಹೂಗಳ ಚಿತ್ರಗಳನ್ನು ಕೆತ್ತಿದ್ದರು. 30 ಈ ಎರಡು ಕೊಠಡಿಗಳ ನೆಲಕ್ಕೆ ಚಿನ್ನದ ತಗಡನ್ನು ಹಾಸಿದ್ದರು.

31 ಕೆಲಸಗಾರರು ಆಲೀವ್ ಮರದ ಎರಡು ಬಾಗಿಲುಗಳನ್ನು ಮಾಡಿದರು. ಅವರು ಮಹಾಪವಿತ್ರ ಸ್ಥಳದ ಪ್ರವೇಶದ್ವಾರದಲ್ಲಿ ಈ ಎರಡು ಬಾಗಿಲುಗಳನ್ನು ಇಟ್ಟರು. ಬಾಗಿಲಿನ ಚೌಕಟ್ಟನ್ನು ಪಂಚಕೋಣಾಕೃತಿಯಲ್ಲಿ ಮಾಡಿದ್ದರು. 32 ಅವರು ಆಲೀವ್ ಮರದಿಂದ ಎರಡು ಬಾಗಿಲುಗಳನ್ನು ಮಾಡಿದರು. ಕೆಲಸಗಾರರು ಕೆರೂಬಿಗಳ, ಖರ್ಜೂರ ವೃಕ್ಷಗಳ ಮತ್ತು ಹೂಗಳ ಚಿತ್ರಗಳನ್ನು ಬಾಗಿಲುಗಳ ಮೇಲೆ ಕೆತ್ತಿದರು. ನಂತರ ಬಾಗಿಲುಗಳಿಗೆ ಚಿನ್ನವನ್ನು ಹೊದಿಸಿದರು.

33 ಅವರು ಮುಖ್ಯ ಕೊಠಡಿಯ ಪ್ರವೇಶಕ್ಕೂ ಬಾಗಿಲುಗಳನ್ನು ಮಾಡಿದರು. ಅವರು ಚೌಕಾಕಾರದ ಬಾಗಿಲಿನ ಚೌಕಟ್ಟನ್ನು ಆಲೀವ್ ಮರದಿಂದ ಮಾಡಿದರು. 34 ನಂತರ ಅವರು ತುರಾಯಿ ಮರದ ಬಾಗಿಲುಗಳನ್ನು ಮಾಡಿದರು. ಅಲ್ಲಿ ಎರಡು ಬಾಗಿಲುಗಳಿದ್ದು, ಪ್ರತಿಯೊಂದೂ ಮಡಿಸುವಂತಹ ಎರಡು ಭಾಗಗಳನ್ನು ಹೊಂದಿದ್ದವು. 35 ಅವರು ಕೆರೂಬಿಗಳ, ಖರ್ಜೂರವೃಕ್ಷಗಳ ಮತ್ತು ಹೂಗಳ ಚಿತ್ರಗಳನ್ನು ಬಾಗಿಲುಗಳ ಮೇಲೆ ಕೆತ್ತಿದ್ದರು. ಅವರು ಅವುಗಳಿಗೆ ಚಿನ್ನವನ್ನು ಹೊದಿಸಿದರು.

36 ನಂತರ ಅವರು ಒಳಾಂಗಣವನ್ನು ನಿರ್ಮಿಸಿದರು. ಅವರು ಒಳಾಂಗಣದ ಸುತ್ತಲೂ ಗೋಡೆಗಳನ್ನು ನಿರ್ಮಿಸಿದರು. ಪ್ರತಿಯೊಂದು ಗೋಡೆಯು ಕತ್ತರಿಸಿದ ಕಲ್ಲುಗಳ ಮೂರು ಸಾಲುಗಳನ್ನೂ ದೇವದಾರುಮರದ ತೊಲೆಗಳ ಒಂದು ಸಾಲನ್ನೂ ಹೊಂದಿತ್ತು.

37 ಅವರು ವರ್ಷದ ಎರಡನೆಯ ತಿಂಗಳಿನ ಜೀವ್ (ವೈಶಾಖ) ಮಾಸದಲ್ಲಿ ದೇವಾಲಯವನ್ನು ಕಟ್ಟಲಾರಂಭಿಸಿದರು. ಇಸ್ರೇಲನ್ನು ಸೊಲೊಮೋನನು ಆಳಲು ಆರಂಭಿಸಿದ ನಾಲ್ಕನೆಯ ವರ್ಷದಲ್ಲಿ ಇದು ನಡೆಯಿತು. 38 ಈ ದೇವಾಲಯದ ನಿರ್ಮಾಣವು ವರ್ಷದ ಎಂಟನೇ ತಿಂಗಳಾದ ಬುಲ್ (ಕಾರ್ತಿಕ) ತಿಂಗಳಲ್ಲಿ ಮುಗಿಯಿತು. ಅದು ಸೊಲೊಮೋನನ ಆಳ್ವಿಕೆಯ ಹನ್ನೊಂದನೆಯ ವರ್ಷವಾಗಿತ್ತು. ದೇವಾಲಯವನ್ನು ಕಟ್ಟಲು ಏಳು ವರ್ಷ ಹಿಡಿಯಿತು. ದೇವಾಲಯವನ್ನು ಅದರ ನಿಯಮಾನುಸಾರವಾಗಿ ಕಟ್ಟಿದರು.

ಯೋಹಾನ 15:16-25

16 “ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ; ನಾನು ನಿಮ್ಮನ್ನು ಆರಿಸಿಕೊಂಡೆನು. ನೀವು ಹೊರಟುಹೋಗಿ ಫಲಕೊಡಬೇಕು. ಇದೇ ನಾನು ನಿಮಗೆ ಕೊಟ್ಟಿರುವ ಕೆಲಸ. ಈ ಫಲವು ನಿಮ್ಮ ಜೀವನದಲ್ಲಿ ಶಾಶ್ವತವಾಗಿರಲಿ ಎಂಬುದೇ ನನ್ನ ಬಯಕೆ. ಹೀಗಿರಲಾಗಿ, ನೀವು ನನ್ನ ಹೆಸರಿನಲ್ಲಿ ಏನು ಕೇಳಿಕೊಂಡರೂ ತಂದೆಯು ಅದನ್ನು ನಿಮಗೆ ಕೊಡುವನು. 17 ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನನ್ನ ಆಜ್ಞೆ.

ಯೇಸು ತನ್ನ ಶಿಷ್ಯರಿಗೆ ನೀಡಿದ ಎಚ್ಚರಿಕೆ

18 “ಈ ಲೋಕವು ನಿಮ್ಮನ್ನು ದ್ವೇಷ ಮಾಡಿದರೆ, ಅದು ಮೊದಲು ನನ್ನನ್ನೇ ದ್ವೇಷ ಮಾಡಿದ್ದನ್ನು ನೆನಪಿಗೆ ತಂದುಕೊಳ್ಳಿರಿ. 19 ನೀವು ಈ ಲೋಕಕ್ಕೆ ಸೇರಿದವರಾಗಿದ್ದರೆ, ಈ ಲೋಕವು ತನ್ನ ಸ್ವಂತ ಜನರನ್ನು ಪ್ರೀತಿಸುವಂತೆ ನಿಮ್ಮನ್ನೂ ಪ್ರೀತಿಸುತ್ತಿತ್ತು. ಆದರೆ ನಾನು ನಿಮ್ಮನ್ನು ಈ ಲೋಕದೊಳಗಿಂದ ಆರಿಸಿಕೊಂಡಿದ್ದೇನೆ. ಆದ್ದರಿಂದ ನೀವು ಈ ಲೋಕಕ್ಕೆ ಸೇರಿದವರಲ್ಲ. ಆದಕಾರಣ ಈ ಲೋಕವು ನಿಮ್ಮನ್ನು ದ್ವೇಷಿಸುತ್ತದೆ.

20 “ಸೇವಕನು ತನ್ನ ಒಡೆಯನಿಗಿಂತ ದೊಡ್ಡವನಲ್ಲ ಎಂದು ನಾನು ನಿಮಗೆ ಹೇಳಿದ ಮಾತನ್ನು ಜ್ಞಾಪಿಸಿಕೊಳ್ಳಿ. ಜನರು ನನ್ನನ್ನು ಹಿಂಸಿಸಿದಂತೆ ನಿಮ್ಮನ್ನೂ ಹಿಂಸಿಸುವರು ಮತ್ತು ನನ್ನ ಉಪದೇಶಕ್ಕೆ ವಿಧೇಯರಾದರೆ ನಿಮ್ಮ ಉಪದೇಶಕ್ಕೂ ವಿಧೇಯರಾಗುವರು. 21 ಜನರು ನನ್ನ ದೆಸೆಯಿಂದ ಇದನ್ನೆಲ್ಲಾ ನಿಮಗೆ ಮಾಡುವರು. ನನ್ನನ್ನು ಕಳುಹಿಸಿದಾತನನ್ನು ಅವರು ತಿಳಿದಿಲ್ಲ. 22 ನಾನು ಬಂದು ಈ ಲೋಕದ ಜನರೊಂದಿಗೆ ಮಾತಾಡಿಲ್ಲದಿದ್ದರೆ, ಅವರನ್ನು ಪಾಪದೋಷಿಗಳೆಂದು ಹೇಳಲಾಗುತ್ತಿರಲಿಲ್ಲ. ಆದರೆ ಈಗ ನಾನು ಅವರೊಂದಿಗೆ ಮಾತಾಡಿದ್ದೇನೆ. ಆದ್ದರಿಂದ ತಮ್ಮ ಪಾಪಕ್ಕೆ ಅವರಿಗೆ ಯಾವ ನೆವವೂ ಇಲ್ಲ.

23 “ನನ್ನನ್ನು ದ್ವೇಷಿಸುವವನು ನನ್ನ ತಂದೆಯನ್ನೂ ದ್ವೇಷಿಸುವವನಾಗಿದ್ದಾನೆ. 24 ಬೇರೆ ಯಾವ ವ್ಯಕ್ತಿಯೂ ಹಿಂದೆಂದೂ ಮಾಡಿಲ್ಲದ ಕಾರ್ಯಗಳನ್ನು ಮಾಡಿಲ್ಲದಿದ್ದರೆ, ಅವರನ್ನು ಪಾಪದೋಷಿಗಳೆಂದು ಹೇಳಲಾಗುತ್ತಿರಲಿಲ್ಲ. ಆದರೆ ನಾನು ಮಾಡಿದ ಆ ಕಾರ್ಯಗಳನ್ನು ಅವರು ನೋಡಿದ್ದಾರೆ. ಹೀಗಿದ್ದರೂ ಅವರು ನನ್ನನ್ನೂ ನನ್ನ ತಂದೆಯನ್ನೂ ದ್ವೇಷಿಸುತ್ತಾರೆ. 25 ‘ಅವರು ನನ್ನನ್ನು ನಿಷ್ಕಾರಣವಾಗಿ ದ್ವೇಷಿಸಿದರು’[a] ಎಂದು ಅವರ ಧರ್ಮಶಾಸ್ತ್ರದಲ್ಲಿ ಬರೆದಿರುವ ಮಾತು ನಿಜವಾಗಲೆಂದು ಹೀಗಾಯಿತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International