Revised Common Lectionary (Semicontinuous)
ರಚನೆಗಾರ: ದಾವೀದ.
11 ನಾನು ಯೆಹೋವನನ್ನೇ ಆಶ್ರಯಿಸಿಕೊಂಡಿದ್ದೇನೆ.
ಹೀಗಿರಲು, “ನಿನ್ನ ಬೆಟ್ಟಕ್ಕೆ ಪಕ್ಷಿಯಂತೆ ಹಾರಿಹೋಗು” ಎಂದು ನೀವು ಹೇಳುವುದೇಕೆ?
2 ದುಷ್ಟರು ಬೇಟೆಗಾರರಂತಿದ್ದಾರೆ;
ಅವರು ಕತ್ತಲೆಯಲ್ಲಿ ಅವಿತುಕೊಂಡಿರುವರು;
ಬಿಲ್ಲುಗಳಿಗೆ ಬಾಣಗಳನ್ನು ಹೂಡಿ ನೀತಿವಂತರ ಹೃದಯಕ್ಕೆ ನೇರವಾಗಿ ಹೊಡೆಯುವರು.
3 ಅಸ್ತಿವಾರಗಳೇ ನಾಶವಾಗುತ್ತಿದ್ದರೆ
ನೀತಿವಂತನು ಏನು ಮಾಡಲಾದೀತು?
4 ಯೆಹೋವನು ತನ್ನ ಪವಿತ್ರ ಆಲಯದಲ್ಲಿದ್ದಾನೆ.
ಆತನು ಪರಲೋಕದಲ್ಲಿ ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡು
ಮನುಷ್ಯರ ಕಾರ್ಯಗಳನ್ನು ಗಮನಿಸುತ್ತಿದ್ದಾನೆ.
ಆತನ ಕಣ್ಣುಗಳು ಅವರನ್ನು ಪರಿಶೋಧಿಸುತ್ತಿವೆ.
5 ಯೆಹೋವನು ನೀತಿವಂತರಿಗಾಗಿ ಹುಡುಕುವನು.
ಆದರೆ ಆತನು ದುಷ್ಟರನ್ನೂ ಹಿಂಸಕರನ್ನೂ ತಿರಸ್ಕರಿಸುವನು.
6 ಆತನು ಆ ದುಷ್ಟರ ಮೇಲೆ ಬೆಂಕಿಗಂಧಕಗಳ ಮಳೆಯನ್ನು ಸುರಿಸುವನು.
ಅವರಿಗೆ ಸಿಕ್ಕುವುದೆಂದರೆ ಕಾದ ಉರಿಗಾಳಿಯೊಂದೇ.
7 ಯಾಕೆಂದರೆ ಯೆಹೋವನು ನೀತಿಸ್ವರೂಪನಾಗಿದ್ದಾನೆ; ಆತನು ನ್ಯಾಯವನ್ನು ಪ್ರೀತಿಸುತ್ತಾನೆ.
ನೀತಿವಂತರು ಆತನ ಮುಖವನ್ನು ನೋಡುವರು.
ಸೊಲೊಮೋನನು ದೇವಾಲಯವನ್ನು ನಿರ್ಮಿಸಿದನು
6 ಇಸ್ರೇಲಿನ ಜನರು ಈಜಿಪ್ಟನ್ನು ಬಿಟ್ಟ ನಾನೂರ ಎಂಭತ್ತನೆಯ ವರ್ಷದಲ್ಲಿ ಅಂದರೆ ರಾಜನಾದ ಸೊಲೊಮೋನನು ಇಸ್ರೇಲನ್ನು ಆಳಲಾರಂಭಿಸಿದ ನಾಲ್ಕನೆಯ ವರ್ಷದಲ್ಲಿ ದೇವಾಲಯದ ನಿರ್ಮಾಣವು ಆರಂಭಗೊಂಡಿತು. ಅದು ವರ್ಷದ ಎರಡನೆಯ ತಿಂಗಳಾದ ಜೀವ್ (ವೈಶಾಖ) ತಿಂಗಳಲ್ಲಿ ಆರಂಭಗೊಂಡಿತು. 2 ದೇವಾಲಯವು ತೊಂಭತ್ತು ಅಡ್ಡಿ ಉದ್ದ, ಮೂವತ್ತು ಅಡಿ ಅಗಲ ಮತ್ತು ನಲವತ್ತೈದು ಅಡಿ ಎತ್ತರವಾಗಿತ್ತು. 3 ದೇವಾಲಯದ ಮುಂದಿನ ಮಂಟಪವು ಮೂವತ್ತು ಅಡಿ ಉದ್ದ ಮತ್ತು ನಲವತ್ತೈದು ಅಡಿ ಅಗಲವಾಗಿತ್ತು. ಮುಂದಿನ ಮಂಟಪವು ದೇವಾಲಯದ ಮುಖ್ಯಸ್ಥಳದುದ್ದಕ್ಕೂ ವ್ಯಾಪಿಸಿತ್ತು. ಮಂಟಪದ ಉದ್ದವು ದೇವಾಲಯದ ಅಗಲಕ್ಕೆ ಸಮನಾಗಿತ್ತು. 4 ದೇವಾಲಯದಲ್ಲಿ ಕಿರಿದಾದ ಕಿಟಿಕಿಗಳಿದ್ದವು. ಈ ಕಿಟಕಿಗಳು ಹೊರಗಡೆಯಲ್ಲಿ ಕಿರಿದಾಗಿಯೂ ಮತ್ತು ಒಳಗಡೆ ದೊಡ್ಡದಾಗಿಯೂ ಇದ್ದವು. 5 ನಂತರ ಸೊಲೊಮೋನನು ದೇವಾಲಯದ ಗೋಡೆಯ ಸುತ್ತಲೂ ಸಾಲಾಗಿ ಕೊಠಡಿಗಳನ್ನು ನಿರ್ಮಿಸಿದನು. ಈ ಕೊಠಡಿಗಳನ್ನು ಒಂದರ ಮೇಲೆ ಮತ್ತೊಂದನ್ನು ಕಟ್ಟಿಸಿದನು. ಈ ಸಾಲು ಕೊಠಡಿಗಳು ಮೂರು ಅಂತಸ್ತುಗಳನ್ನು ಹೊಂದಿದ್ದವು. 6 ಈ ಕೊಠಡಿಗಳು ದೇವಾಲಯದ ಗೋಡೆಯನ್ನು ಸ್ಪರ್ಶಿಸಿದರೂ, ಅವುಗಳ ತೊಲೆಗಳು ಗೋಡೆಯಲ್ಲಿ ಸೇರಿಕೊಂಡಿರಲಿಲ್ಲ. ಆ ದೇವಾಲಯದ ಗೋಡೆಯ ಮೇಲ್ಭಾಗವು ತೆಳುವಾಗಿತ್ತು. ಆ ಕೊಠಡಿಗಳ ಒಂದು ಕಡೆಯ ಗೋಡೆಯು, ಅದರ ಕೆಳಭಾಗದ ಗೋಡೆಗಿಂತ ತೆಳುವಾಗಿತ್ತು. ಕೆಳ ಅಂತಸ್ತಿನ ಕೊಠಡಿಗಳ ಅಗಲ ಏಳುವರೆ ಅಡಿಗಳು. ಮಧ್ಯದ ಅಂತಸ್ತಿನ ಕೊಠಡಿಗಳ ಅಗಲ ಒಂಭತ್ತು ಅಡಿಗಳು. ಅದರ ಮೇಲಿನ ಕೊಠಡಿಗಳ ಅಗಲ ಹತ್ತೂವರೆ ಅಡಿಗಳು. 7 ಈ ಗೋಡೆಗಳನ್ನು ಕಟ್ಟಲು ಕೆಲಸಗಾರರು ದೊಡ್ಡದೊಡ್ಡ ಕಲ್ಲುಗಳನ್ನು ಬಳಸಿದ್ದರು. ಕಲ್ಲುಗಣಿಯಿಂದ ಕಲ್ಲುಗಳನ್ನು ಹೊರಗೆ ತೆಗೆಯುವಾಗಲೇ ಕೆಲಸಗಾರರು ಈ ಕಲ್ಲುಗಳನ್ನು ಕೆತ್ತಿದ್ದರು. ಆದ್ದರಿಂದ ಸುತ್ತಿಗೆ, ಉಳಿ ಮುಂತಾದ ಕಬ್ಬಿಣದ ಉಪಕರಣಗಳ ಶಬ್ದವು ದೇವಾಲಯದಲ್ಲಿ ಕೇಳಿಸುತ್ತಿರಲಿಲ್ಲ.
8 ಕೆಳಅಂತಸ್ತಿನ ಕೊಠಡಿಗಳ ಪ್ರವೇಶವು ದೇವಾಲಯದ ದಕ್ಷಿಣದ ಕಡೆಗಿತ್ತು. ಎರಡನೆಯ ಅಂತಸ್ತಿನ ಕೊಠಡಿಗಳಿಗೆ ಹೋಗುವ ಮೆಟ್ಟಿಲುಗಳು ಒಳಗಡೆಯಿದ್ದು, ಅಲ್ಲಿಂದ ಮೂರನೆಯ ಅಂತಸ್ತಿನ ಕೊಠಡಿಗಳಿಗೂ ಹೋಗಬಹುದಾಗಿತ್ತು.
9 ಸೊಲೊಮೋನನು ದೇವಾಲಯದ ನಿರ್ಮಾಣವನ್ನು ಮುಗಿಸಿದನು. ದೇವಾಲಯದೊಳಗಿನ ಪ್ರತಿಯೊಂದು ಭಾಗವನ್ನು ದೇವದಾರು ಮರದ ಹಲಗೆಗಳಿಂದ ಹೊದಿಸಿದನು. 10 ಸೊಲೊಮೋನನು ದೇವಾಲಯದ ಸುತ್ತಲಿನ ಕೊಠಡಿಗಳ ನಿರ್ಮಾಣವನ್ನೂ ಮುಗಿಸಿದನು. ಒಂದೊಂದು ಅಂತಸ್ತು ಏಳೂವರೆ ಅಡಿಗಳಷ್ಟು ಎತ್ತರವಾಗಿತ್ತು. ಈ ಕೊಠಡಿಗಳ ದೇವದಾರು ತೊಲೆಗಳು ದೇವಾಲಯವನ್ನು ಸ್ಪರ್ಶಿಸುತ್ತ್ತಿದ್ದವು.
11-12 ಯೆಹೋವನು ಸೊಲೊಮೋನನಿಗೆ, “ನನ್ನ ಎಲ್ಲಾ ನಿಯಮಗಳಿಗೆ ಮತ್ತು ಆಜ್ಞೆಗಳಿಗೆ ನೀನು ವಿಧೇಯನಾಗಿದ್ದರೆ, ನಿನ್ನ ತಂದೆಯಾದ ದಾವೀದನಿಗೆ ನಾನು ವಾಗ್ದಾನ ಮಾಡಿದವುಗಳನ್ನು ನಿನಗಾಗಿ ಈಡೇರಿಸುತ್ತೇನೆ. 13 ನೀನು ನಿರ್ಮಿಸುತ್ತಿರುವ ಈ ದೇವಾಲಯದಲ್ಲಿ ನಾನು ಇಸ್ರೇಲರೊಂದಿಗೆ ವಾಸಿಸುತ್ತೇನೆ. ನಾನು ಅವರನ್ನು ಎಂದೆಂದಿಗೂ ಬಿಟ್ಟುಹೋಗುವುದಿಲ್ಲ” ಎಂದು ಹೇಳಿದನು.
14 ಸೊಲೊಮೋನನು ದೇವಾಲಯದ ನಿರ್ಮಾಣವನ್ನು ಮುಗಿಸಿದನು.
ವಂದನೆಗಳು
21 ನಮ್ಮ ಪ್ರಿಯ ಸಹೋದರನಾದ ತುಖಿಕನನ್ನು ನಿಮ್ಮ ಬಳಿಗೆ ಕಳುಹಿಸುತ್ತಿದ್ದೇನೆ. ಅವನು ಪ್ರಭುವಿನ ಸೇವೆಯಲ್ಲಿ ನಂಬಿಗಸ್ತನಾದ ಸೇವಕನಾಗಿದ್ದಾನೆ. ಇಲ್ಲಿಯ ಸಂಗತಿಗಳನ್ನೆಲ್ಲಾ ಅವನು ನಿಮಗೆ ತಿಳಿಸುವನು. ನಾನು ಇಲ್ಲಿ ಹೇಗಿದ್ದೇನೆ ಮತ್ತು ಏನು ಮಾಡುತ್ತಿದ್ದೇನೆ ಎಂಬುದು ಆಗ ನಿಮಗೆ ಗೊತ್ತಾಗುವುದು. 22 ನಮ್ಮ ಸ್ಥಿತಿಗತಿಗಳು ನಿಮಗೆ ತಿಳಿದಿರಬೇಕೆಂಬುದು ನನ್ನ ಇಷ್ಟ. ಅಲ್ಲದೆ ಅವನು ನಿಮ್ಮನ್ನು ಪ್ರೋತ್ಸಾಹಿಸುವನು.
23 ತಂದೆಯಾದ ದೇವರಿಂದಲೂ ಪ್ರಭುವಾದ ಯೇಸು ಕ್ರಿಸ್ತನಿಂದಲೂ ನಿಮಗೆ ಶಾಂತಿಯೂ ನಂಬಿಕೆಯಿಂದ ಕೂಡಿದ ಪ್ರೀತಿಯೂ ಉಂಟಾಗಲಿ. 24 ನಮ್ಮ ಪ್ರಭುವಾದ ಯೇಸು ಕ್ರಿಸ್ತನನ್ನು ನಿರಂತರವಾದ ಪ್ರೀತಿಯಿಂದ ಪ್ರೀತಿಸುವ ನಿಮ್ಮೆಲ್ಲರ ಮೇಲೆ ದೇವರ ಕೃಪೆಯಿರಲಿ.
Kannada Holy Bible: Easy-to-Read Version. All rights reserved. © 1997 Bible League International