Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 84

ರಚನೆಗಾರರು: ಕೋರಹೀಯರು.

84 ಸೇನಾಧೀಶ್ವರನಾದ ಯೆಹೋವನೇ, ನಿನ್ನ ಆಲಯವು ಎಷ್ಟೋ ರಮ್ಯವಾಗಿದೆ.
ಯೆಹೋವನೇ, ನಿನ್ನ ಆಲಯದೊಳಗೆ ಪ್ರವೇಶಿಸಲು ಕಾತುರಗೊಂಡಿರುವೆ.
ನನ್ನ ಅಂಗಾಂಗಗಳೆಲ್ಲಾ ಚೈತನ್ಯಸ್ವರೂಪನಾದ ದೇವರೊಂದಿಗೆ ಇರಲು ಬಯಸುತ್ತಿವೆ.
ಸೇನಾಧೀಶ್ವರನಾದ ಯೆಹೋವನೇ, ನನ್ನ ರಾಜನೇ,
    ನನ್ನ ದೇವರೇ, ಗುಬ್ಬಚ್ಚಿಗಳಿಗೂ ಪಾರಿವಾಳಗಳಿಗೂ ನಿನ್ನ ಆಲಯದಲ್ಲಿ ಗೂಡುಗಳಿವೆ.
ನಿನ್ನ ಯಜ್ಞವೇದಿಕೆಯ ಸಮೀಪದಲ್ಲಿಯೇ
    ಗೂಡು ಕಟ್ಟಿಕೊಂಡು ಮರಿ ಮಾಡುತ್ತವೆ.
ನಿನ್ನ ಆಲಯದಲ್ಲಿ ವಾಸಿಸುವವರು ಭಾಗ್ಯವಂತರೇ ಸರಿ!
    ಅವರು ನಿನ್ನನ್ನು ನಿತ್ಯವೂ ಸ್ತುತಿಸುತ್ತಿರುವರು.
ನಿನ್ನ ಶಕ್ತಿಯನ್ನೇ ಆಶ್ರಯಿಸಿಕೊಂಡು ಚೀಯೋನ್ ಪರ್ವತಕ್ಕೆ
    ಯಾತ್ರಿಕರಾಗಿ ಬರಲು ಬಯಸುವವರು ಎಷ್ಟೋ ಭಾಗ್ಯವಂತರು.
ಒರತೆಯನ್ನಾಗಿ ಮಾಡಿರುವ ಬಾಕಾ ಕಣಿವೆಯ ಮೂಲಕ ಅವರು ಪ್ರಯಾಣಮಾಡುವರು.
    ಮುಂಗಾರು ಮಳೆಯು ಅದನ್ನು ನೀರಿನ ತೊರೆಗಳಿಂದ ಸಮೃದ್ಧಿಗೊಳಿಸುವುದು.
ಜನರು ದೇವರನ್ನು ಸಂದರ್ಶಿಸಲು
    ಊರಿಂದ ಊರಿಗೆ ಪ್ರಯಾಣ ಮಾಡುತ್ತಾ ಚೀಯೋನಿಗೆ ಬರುವರು.

ಸೇನಾಧೀಶ್ವರ ಯೆಹೋವ ದೇವರೇ, ನನ್ನ ಪ್ರಾರ್ಥನೆಗೆ ಕಿವಿಗೊಡು.
    ಯಾಕೋಬನ ದೇವರೇ, ನನ್ನ ಮೊರೆಯನ್ನು ಕೇಳು.

ದೇವರೇ, ನಮಗೆ ಗುರಾಣಿಯಾಗಿರುವವನನ್ನು ನೋಡು.
    ನೀನು ಅಭಿಷೇಕಿಸಿದವನಿಗೆ ಕರುಣೆತೋರು.
10 ಬೇರೊಂದು ಸ್ಥಳದಲ್ಲಿ ಸಾವಿರ ದಿನಗಳಿರುವುದಕ್ಕಿಂತಲೂ
    ನಿನ್ನ ಆಲಯದಲ್ಲಿ ಒಂದು ದಿನವಿರುವುದೇ ಉತ್ತಮ.
ದುಷ್ಟರ ಮನೆಯಲ್ಲಿ ವಾಸಿಸುವುದಕ್ಕಿಂತಲೂ
    ನನ್ನ ದೇವರ ಆಲಯದಲ್ಲಿ ದ್ವಾರಪಾಲಕನಾಗಿರುವುದೇ ಉತ್ತಮ.[a]
11 ಯೆಹೋವ ದೇವರು ನಮ್ಮ ಸಂರಕ್ಷಕನೂ ಮಹಿಮಾ ಪೂರ್ಣನಾದ ರಾಜನೂ ಆಗಿದ್ದಾನೆ.[b]
    ಯೆಹೋವನು ನಮಗೆ ದಯೆಯನ್ನೂ ಘನತೆಯನ್ನೂ ಅನುಗ್ರಹಿಸುವನು.
ಆತನು ಎಲ್ಲಾ ಒಳ್ಳೆಯವುಗಳನ್ನು
    ತನ್ನ ಭಕ್ತರಿಗೆ ಕೊಡುವನು.
12 ಸೇನಾಧೀಶ್ವರನಾದ ಯೆಹೋವನೇ, ನಿನ್ನಲ್ಲಿ ಭರವಸವಿಡುವವರು ಭಾಗ್ಯವಂತರೇ ಸರಿ!

1 ರಾಜರುಗಳು 4:20-28

20 ಯೆಹೂದದಲ್ಲಿ ಮತ್ತು ಇಸ್ರೇಲಿನಲ್ಲಿ ಅನೇಕ ಜನರಿದ್ದರು. ಅಲ್ಲಿನ ಜನಸಂಖ್ಯೆಯು ಸಮುದ್ರತೀರದ ಮರಳಿನ ಕಣಗಳಷ್ಟಿತ್ತು. ಜನರು ಸಂತುಷ್ಟರಾಗಿ ಜೀವಿಸುತ್ತಿದ್ದರು. ಅವರು ತಿಂದು ಕುಡಿದು ಸಂತೋಷಿಸುತ್ತಿದ್ದರು.

21 ಸೊಲೊಮೋನನು ಯೂಫ್ರೇಟೀಸ್ ನದಿಯಿಂದ ಮೊದಲುಗೊಂಡು ಫಿಲಿಷ್ಟಿಯರ ದೇಶದವರೆಗಿನ ರಾಜ್ಯಗಳನ್ನೆಲ್ಲ ಆಳುತ್ತಿದ್ದನು. ಅವನ ರಾಜ್ಯಾಧಿಕಾರವು ಈಜಿಪ್ಟಿನ ಗಡಿಯವರೆಗೆ ವಿಸ್ತರಿಸಿತ್ತು. ಈ ದೇಶಗಳು ಸೊಲೊಮೋನನಿಗೆ ಕಪ್ಪಕಾಣಿಕೆಯನ್ನು ಕೊಡುತ್ತ ಅವನ ಜೀವಮಾನ ಪೂರ್ತಿ ಅವರು ಅವನಿಗೆ ಆಧೀನರಾಗಿದ್ದರು.

22-23 ಪ್ರತಿದಿನವೂ ಸೊಲೊಮೋನನಿಗೆ ಮತ್ತು ಅವನ ಪಂಕ್ತಿಯಲ್ಲಿ ಊಟಮಾಡುವವರಿಗೆ ಬೇಕಾದ ಆಹಾರಪದಾರ್ಥಗಳು ಹೀಗಿವೆ: ನೂರೈವತ್ತು ಬುಷೆಲ್ಸ್[a] ಉತ್ತಮವಾದ ಗೋಧಿಯ ಹಿಟ್ಟು; ಮುನ್ನೂರು ಬುಷೆಲ್ಸ್[b] ಹಿಟ್ಟು; ಚೆನ್ನಾಗಿ ಮೇಯಿಸಿದ ಹತ್ತು ಹಸುಗಳು; ಹೊಲಗಳಲ್ಲಿ ಮೇಯಿಸಿದ ಇಪ್ಪತ್ತು ಹಸುಗಳು; ನೂರು ಕುರಿಗಳು; ಇವುಗಳಲ್ಲದೆ ದುಪ್ಪಿ, ಜಿಂಕೆ, ಸಾರಂಗ ಮತ್ತು ಕೊಬ್ಬಿದ ಕೋಳಿಗಳು.

24 ಸೊಲೊಮೋನನು ಯೂಫ್ರೇಟೀಸ್ ನದಿಯ ಪಶ್ಚಿಮದ ಪ್ರದೇಶವನ್ನೆಲ್ಲ ಆಳಿದನು. ಈ ದೇಶವು ತಿಫ್ಸಹುದಿಂದ ಗಾಜದವರೆಗಿತ್ತು. ಸೊಲೊಮೋನನ ರಾಜ್ಯದಲ್ಲೆಲ್ಲಾ ಶಾಂತಿ ನೆಲೆಸಿತ್ತು. 25 ಸೊಲೊಮೋನನ ಆಳ್ವಿಕೆಯಲ್ಲಿ ಯೆಹೂದದ ಮತ್ತು ಇಸ್ರೇಲಿನ ಜನರೆಲ್ಲರೂ ದಾನ್‌ನಿಂದ ಬೇರ್ಷೆಬದವರೆಗೆ ಸುರಕ್ಷಿತವಾಗಿದ್ದರು; ಶಾಂತಿಯಿಂದ ಜೀವಿಸುತ್ತಿದ್ದರು. ಜನರು ತಮ್ಮ ಅಂಜೂರ ಗಿಡಗಳ ಮತ್ತು ದ್ರಾಕ್ಷಾಲತೆಗಳ ನೆರಳಿನಲ್ಲಿ ಸಮಾಧಾನದಿಂದ ಕುಳಿತಿರುತ್ತಿದ್ದರು.

26 ಸೊಲೊಮೋನನು ತನ್ನ ರಥಗಳಿಗೆ ಬೇಕಾಗಿದ್ದ ನಾಲ್ಕು ಸಾವಿರ ಕುದುರೆಗಳಿಗೆ ಬೇಕಾಗುವಷ್ಟು ಸ್ಥಳ ಪಡೆದಿದ್ದನು. ಅವನಲ್ಲಿ ಹನ್ನೆರಡು ಸಾವಿರ ರಾಹುತರಿದ್ದರು. 27 ರಾಜನಾದ ಸೊಲೊಮೋನನಿಗೆ ಪ್ರತಿ ತಿಂಗಳಿಗೆ ಬೇಕಾದ ವಸ್ತುಗಳನ್ನು ಅವನ ಹನ್ನೆರಡು ಮಂದಿ ರಾಜ್ಯಪಾಲರಲ್ಲಿ ಒಬ್ಬರು ಸರದಿಯ ಪ್ರಕಾರ ಕೊಡುತ್ತಿದ್ದರು. ರಾಜನಿಗೂ ಅವನ ಪಂಕ್ತಿಯಲ್ಲಿ ಊಟಮಾಡುವ ಪ್ರತಿಯೊಬ್ಬರಿಗೂ ಆಹಾರಪದಾರ್ಥಗಳು ಯಥೇಚ್ಛವಾಗಿರುತ್ತಿದ್ದವು. 28 ರಾಜನ ರಥಗಳ ಕುದುರೆಗಳಿಗೆ ಮತ್ತು ಸವಾರಿಯ ಕುದುರೆಗಳಿಗೆ ಬೇಕಾದ ಹುಲ್ಲನ್ನು ಮತ್ತು ಬಾರ್ಲಿಯನ್ನು ಈ ರಾಜ್ಯಪಾಲರುಗಳು ಆಯಾಸ್ಥಳಗಳಿಂದ ತಂದುಕೊಡುತ್ತಿದ್ದರು.

1 ಥೆಸಲೋನಿಕದವರಿಗೆ 5:1-11

ಪ್ರಭುವು ಪ್ರತ್ಯಕ್ಷನಾಗುವಾಗ ಸಿದ್ಧರಾಗಿರಿ

ಸಹೋದರ ಸಹೋದರಿಯರೇ, ಈಗ ನಾವು ಕಾಲ ಮತ್ತು ದಿನಗಳ ಬಗ್ಗೆ ನಿಮಗೆ ಬರೆಯುವ ಅವಶ್ಯವಿಲ್ಲ. ಪ್ರಭುವು ಪ್ರತ್ಯಕ್ಷನಾಗುವ ದಿನವು ರಾತ್ರಿಕಾಲದಲ್ಲಿ ಕಳ್ಳನು ಬರುವಂತೆ ಇದ್ದಕ್ಕಿದ್ದಂತೆ ಬರುತ್ತದೆ ಎಂಬುದು ನಿಮಗೆಲ್ಲ ಚೆನ್ನಾಗಿ ತಿಳಿದಿದೆ. “ನಮಗೆ ಶಾಂತಿಯಿದೆ. ನಾವು ಸುರಕ್ಷಿತರಾಗಿದ್ದೇವೆ” ಎಂದು ಜನರು ಹೇಳುವಾಗಲೇ ಅವರಿಗೆ ವಿನಾಶವು ಗರ್ಭಿಣಿಗೆ ಪ್ರಸವವೇದನೆ ಉಂಟಾಗುವಂತೆ ಬರುತ್ತದೆ. ಆ ಜನರು ತಪ್ಪಿಸಿಕೊಳ್ಳಲಾಗುವುದಿಲ್ಲ.

ಆದರೆ ಸಹೋದರ ಸಹೋದರಿಯರೇ, ನೀವು ಕತ್ತಲಿನಲ್ಲಿ (ಪಾಪದಲ್ಲಿ) ವಾಸಿಸುತ್ತಿಲ್ಲ. ಆ ದಿನವು ನಿಮಗೆ ಕಳ್ಳನಂತೆ ಇದ್ದಕ್ಕಿದ್ದಂತೆ ಬರುವುದಿಲ್ಲ. ನೀವೆಲ್ಲರೂ ಬೆಳಕಿಗೆ ಸೇರಿದವರು ಮತ್ತು ಹಗಲಿಗೆ ಸೇರಿದವರು. ನಾವು ರಾತ್ರಿಗಾಗಲಿ ಅಥವಾ ಕತ್ತಲೆಗಾಗಲಿ ಸೇರಿದವರಲ್ಲ. ಆದುದರಿಂದ ನಾವು ಇತರ ಜನರಂತಿರಬಾರದು. ನಾವು ನಿದ್ರೆ ಮಾಡುವುದೇ ಬೇಡ. ನಾವು ಎಚ್ಚರದಿಂದ ಇದ್ದು, ನಮ್ಮನ್ನು ಹತೋಟಿಯಲ್ಲಿ ಇಟ್ಟುಕೊಂಡಿರಬೇಕು. ನಿದ್ದೆ ಮಾಡುವ ಜನರು ರಾತ್ರಿಯಲ್ಲಿ ನಿದ್ರಿಸುತ್ತಾರೆ. ಕುಡಿದು ಅಮಲೇರುವವರು ರಾತ್ರಿಯಲ್ಲಿ ಕುಡಿದು ಅಮಲೇರುತ್ತಾರೆ. ಆದರೆ ನಾವು ಹಗಲಿಗೆ ಸೇರಿದವರಾದ್ದರಿಂದ ನಮ್ಮನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ನಾವು ನಮ್ಮನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಪ್ರೀತಿಯನ್ನೂ ನಂಬಿಕೆಯನ್ನೂ ಧರಿಸಿಕೊಳ್ಳಬೇಕು. ರಕ್ಷಣೆಯ ನಿರೀಕ್ಷೆಯು ನಮಗೆ ಶಿರಸ್ತ್ರಾಣವಾಗಿರಬೇಕು.

ದೇವರು ನಮ್ಮನ್ನು ಆರಿಸಿಕೊಂಡದ್ದು ತನ್ನ ಕೋಪಕ್ಕೆ ಗುರಿಯಾಗಲಿ ಎಂದಲ್ಲ. ಪ್ರಭುವಾದ ಯೇಸು ಕ್ರಿಸ್ತನ ಮೂಲಕ ನಮಗೆ ರಕ್ಷಣೆಯಾಗಲೆಂದೇ ದೇವರು ನಮ್ಮನ್ನು ಆರಿಸಿಕೊಂಡನು. 10 ನಾವು ತನ್ನೊಂದಿಗೆ ಜೀವಿಸಲೆಂದು ಯೇಸು ನಮಗಾಗಿ ಸತ್ತನು. ಯೇಸು ಪ್ರತ್ಯಕ್ಷನಾದಾಗ, ನಾವು ಜೀವಿಸುತ್ತಿರುತ್ತೇವೋ ಇಲ್ಲವೆ ಸತ್ತಿರುತ್ತೇವೋ ಎಂಬುದು ಮುಖ್ಯವಲ್ಲ. 11 ಆದ್ದರಿಂದ ಒಬ್ಬರನ್ನೊಬ್ಬರು ಸಂತೈಸಿ ಬಲಪಡಿಸಿರಿ. ಈಗ ನೀವು ಮಾಡುತ್ತಿರುವುದು ಅದನ್ನೇ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International