Revised Common Lectionary (Semicontinuous)
ರಚನೆಗಾರ: ದಾವೀದ.
101 ಆತನ ಪ್ರೀತಿಯನ್ನೂ ನೀತಿಯನ್ನೂ ಹಾಡಿಹರಸುವೆನು.
ಯೆಹೋವನೇ, ನಿನಗೆ ಗಾಯನ ಮಾಡುವೆನು.
2 ನಾನು ಎಚ್ಚರಿಕೆಯಿಂದ ಪರಿಶುದ್ಧನಾಗಿ ಜೀವಿಸುವೆನು;
ನನ್ನ ಮನೆಯಲ್ಲೂ ಪರಿಶುದ್ಧನಾಗಿರುವೆನು.
ನೀನು ನನ್ನ ಬಳಿಗೆ ಬರುವುದು ಯಾವಾಗ?
3 ನನ್ನ ಎದುರಿನಲ್ಲಿ ಯಾವ ವಿಗ್ರಹಗಳೂ ಇಲ್ಲ.
ನಿನಗೆ ದ್ರೋಹಮಾಡುವವರು ನನಗೆ ಅಸಹ್ಯ.
ನಾನು ಅವರಂತೆ ಮಾಡುವುದಿಲ್ಲ!
4 ನಾನು ನಿನಗೆ ಯಥಾರ್ಥನಾಗಿರುವೆನು;
ದುಷ್ಕೃತ್ಯಗಳನ್ನು ಮಾಡುವುದಿಲ್ಲ.
5 ನೆರೆಯವನ ಕುರಿತು ಗುಟ್ಟಾಗಿ
ಚಾಡಿ ಹೇಳುವವನನ್ನು ನಾನು ತಡೆಯುವೆನು.
ಗರ್ವಪಡುವುದಕ್ಕಾಗಲಿ ತಮ್ಮನ್ನೇ ಉತ್ತಮರೆಂದು ಭಾವಿಸಿಕೊಳ್ಳುವುದಕ್ಕಾಗಲಿ
ನಾನು ಅವರಿಗೆ ಅವಕಾಶ ಕೊಡುವುದಿಲ್ಲ.
6 ನಂಬಿಗಸ್ತರಿಗಾಗಿ ದೇಶದಲ್ಲೆಲ್ಲಾ ಹುಡುಕಿ ನೋಡುತ್ತೇನೆ.
ನನ್ನ ಸೇವೆಗೆ ಅವರನ್ನೇ ನೇಮಿಸಿಕೊಳ್ಳುವೆನು.
ಪರಿಶುದ್ಧರು ಮಾತ್ರ ನನ್ನ ಸೇವಕರಾಗಿರಲು ಸಾಧ್ಯ.
7 ನನ್ನ ಮನೆಯಲ್ಲಿ ವಾಸಿಸುವ ಸುಳ್ಳುಗಾರರಿಗೆ ಅವಕಾಶ ಕೊಡುವುದಿಲ್ಲ.
ನನ್ನ ಸಮೀಪದಲ್ಲಿ ಇರುವುದಕ್ಕೂ ನಾನು ಅವರಿಗೆ ಆಸ್ಪದ ಕೊಡುವುದಿಲ್ಲ.
8 ಈ ದೇಶದಲ್ಲಿರುವ ದುಷ್ಟರನ್ನು ನಾನು ನಾಶಮಾಡುತ್ತೇನೆ.
ಯೆಹೋವನ ಪಟ್ಟಣದಿಂದ ಕೆಡುಕರನ್ನು ಓಡಿಸುತ್ತೇನೆ.
ದೇವಾಲಯದಲ್ಲಿ ಒಡಂಬಡಿಕೆಯ ಪೆಟ್ಟಿಗೆ
8 ರಾಜನಾದ ಸೊಲೊಮೋನನು ಇಸ್ರೇಲಿನ ಹಿರಿಯರೆಲ್ಲರಿಗೆ, ಕುಲಗಳ ಮುಖ್ಯಸ್ಥರಿಗೆ ಮತ್ತು ಇಸ್ರೇಲಿನ ಕುಟುಂಬ ಪ್ರಧಾನರಿಗೆ ಜೆರುಸಲೇಮಿನಲ್ಲಿದ್ದ ತನ್ನ ಬಳಿಗೆ ಬರಬೇಕೆಂದು ತಿಳಿಸಿದನು. ಒಡಂಬಡಿಕೆಯ ಪೆಟ್ಟಿಗೆಯನ್ನು ದಾವೀದ ನಗರದಿಂದ ಆಲಯಕ್ಕೆ ತರುವಾಗ ಅವರು ಸಹ ತನ್ನೊಂದಿಗಿರಬೇಕೆಂಬುದು ಸೊಲೊಮೋನನ ಅಪೇಕ್ಷೆಯಾಗಿತ್ತು. 2 ಆದ್ದರಿಂದ ಇಸ್ರೇಲಿನ ಜನರೆಲ್ಲರೂ ರಾಜನಾದ ಸೊಲೊಮೋನನ ಬಳಿಗೆ ಒಟ್ಟಾಗಿ ಬಂದರು. ಇದು ಏತನೀಮ್ ತಿಂಗಳಿನ (ಆಶ್ವೀಜ) ವಿಶೇಷ ದಿನದಂದು (ಪರ್ಣಶಾಲೆಗಳ ಹಬ್ಬ) ನಡೆಯಿತು. ಇದು ವರ್ಷದ ಏಳನೆಯ ತಿಂಗಳು.
3 ಇಸ್ರೇಲಿನ ಹಿರಿಯರೆಲ್ಲರು ಆ ಸ್ಥಳದಲ್ಲಿ ಒಟ್ಟುಗೂಡಿದರು. ನಂತರ ಯಾಜಕರು ಪವಿತ್ರ ಪೆಟ್ಟಿಗೆಯನ್ನು ತೆಗೆದುಕೊಂಡರು. 4 ಅವರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು, ಅದರೊಂದಿಗೆ ದೇವದರ್ಶನ ಗುಡಾರವನ್ನು ಮತ್ತು ಗುಡಾರದಲ್ಲಿದ್ದ ಪವಿತ್ರ ವಸ್ತುಗಳನ್ನು ಹೊತ್ತುಕೊಂಡರು. ಈ ವಸ್ತುಗಳನ್ನು ಯಾಜಕರು ಹೊತ್ತುಕೊಳ್ಳಲು ಲೇವಿಯರು ಅವರಿಗೆ ಸಹಾಯ ಮಾಡಿದರು. 5 ರಾಜನಾದ ಸೊಲೊಮೋನನು ಮತ್ತು ಇಸ್ರೇಲಿನ ಜನರೆಲ್ಲರೂ ಒಡಂಬಡಿಕೆಯ ಪೆಟ್ಟಿಗೆಯ ಎದುರಿನಲ್ಲಿ ಒಟ್ಟಿಗೆ ಸೇರಿದರು. ಅವರು ಅಸಂಖ್ಯವಾದ ಕುರಿಗಳನ್ನು ಮತ್ತು ದನಗಳನ್ನು ಯಜ್ಞಗಳನ್ನಾಗಿ ಅರ್ಪಿಸಿದರು. 6 ಆಗ ಯಾಜಕರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಅದರ ಸರಿಯಾದ ಸ್ಥಳದಲ್ಲಿ ಇಟ್ಟರು. ಇದು ಆಲಯದ ಮಹಾ ಪವಿತ್ರಸ್ಥಳವಾಗಿತ್ತು. ಒಡಂಬಡಿಕೆಯ ಪೆಟ್ಟಿಗೆಯನ್ನು ಕೆರೂಬಿಗಳ ರೆಕ್ಕೆಗಳ ಅಡಿಯಲ್ಲಿ ಇಟ್ಟರು. 7 ಕೆರೂಬಿಗಳ ರೆಕ್ಕೆಗಳು ಪವಿತ್ರ ಪೆಟ್ಟಿಗೆಯ ಮೇಲೆಲ್ಲಾ ಹರಡಿಕೊಂಡಿದ್ದವು. ಅವು ಪವಿತ್ರ ಪೆಟ್ಟಿಗೆಯನ್ನು ಮತ್ತು ಅದನ್ನು ಹೊರುವ ಕೋಲುಗಳನ್ನು ಮುಚ್ಚಿದವು. 8 ಈ ಹೊರುವ ಕೋಲುಗಳು ಬಹಳ ಉದ್ದವಾಗಿದ್ದವು. ಮಹಾ ಪವಿತ್ರಸ್ಥಳದ ಎದುರಿನ ಪವಿತ್ರಸ್ಥಳದಲ್ಲಿ ನಿಂತುಕೊಳ್ಳುವ ಯಾವ ವ್ಯಕ್ತಿಯೇ ಆಗಲಿ ಈ ಕೋಲುಗಳ ತುದಿಯನ್ನು ಕಾಣಬಹುದಾಗಿತ್ತು. ಆದರೆ ಹೊರಗಿರುವ ಯಾರೂ ಅವುಗಳನ್ನು ನೋಡುವುದಕ್ಕಾಗುವುದಿಲ್ಲ. ಈ ಕೋಲುಗಳು ಇಂದಿಗೂ ಅಲ್ಲಿವೆ. 9 ಪವಿತ್ರ ಪೆಟ್ಟಿಗೆಯಲ್ಲಿರುವ ಒಂದೇ ವಸ್ತುವೆಂದರೆ ಎರಡು ಕಲ್ಲಿನ ಹಲಿಗೆಗಳು. ಮೋಶೆಯು ಹೋರೇಬ್ ಎಂಬ ಸ್ಥಳದಲ್ಲಿ ಪವಿತ್ರ ಪೆಟ್ಟಿಗೆಯಲ್ಲಿಟ್ಟ ಎರಡು ಕಲ್ಲಿನ ಹಲಗೆಗಳೇ. ಇವು ಈಜಿಪ್ಟಿನಿಂದ ಹೊರಬಂದ ಇಸ್ರೇಲಿನ ಜನರೊಂದಿಗೆ ಯೆಹೋವನು ಒಪ್ಪಂದ ಮಾಡಿಕೊಂಡ ಸ್ಥಳವೇ ಹೋರೇಬ್.
10 ಯಾಜಕರು ಪವಿತ್ರ ಪೆಟ್ಟಿಗೆಯನ್ನು ಮಹಾ ಪವಿತ್ರಸ್ಥಳದಲ್ಲಿ ಇಟ್ಟರು. ಯಾಜಕರು ಪವಿತ್ರಸ್ಥಳದಿಂದ ಹೊರಬಂದಾಗ, ಯೆಹೋವನ ಆಲಯವು ಮೋಡದಿಂದ ತುಂಬಿಕೊಂಡಿತು. 11 ಯೆಹೋವನ ತೇಜಸ್ಸು ಆಲಯವನ್ನು ತುಂಬಿಕೊಂಡಿದ್ದರಿಂದ ಯಾಜಕರು ತಮ್ಮ ಕಾರ್ಯವನ್ನು ಮುಂದುವರಿಸಲಾಗಲಿಲ್ಲ. 12 ಆಗ ಸೊಲೊಮೋನನು,
“ಆಕಾಶದಲ್ಲಿ ಸೂರ್ಯನು ಹೊಳೆಯುವಂತೆ ಯೆಹೋವನು ಮಾಡಿದನು.
ತಾನಾದರೋ ಕಪ್ಪಾದ ಮೋಡದಲ್ಲಿ ವಾಸಿಸಲು ನಿರ್ಧರಿಸಿದನು.[a]
13 ನಿಜವಾಗಿಯೂ ಅತ್ಯದ್ಭುತವಾದ ಆಲಯವನ್ನು ನಿನಗಾಗಿ ನಿರ್ಮಿಸಿರುವೆನು.
ಈ ಸ್ಥಳದಲ್ಲಿ ನೀನು ಶಾಶ್ವತವಾಗಿ ನೆಲೆಸಿರಬಹುದು”
ಎಂದು ಪ್ರಾರ್ಥನೆ ಮಾಡಿದನು.
14 ಇಸ್ರೇಲಿನ ಜನರೆಲ್ಲರೂ ಅಲ್ಲಿ ನಿಂತಿದ್ದರು. ರಾಜನಾದ ಸೊಲೊಮೋನನು ಅವರ ಕಡೆಗೆ ತಿರುಗಿ, ಅವರನ್ನು ಆಶೀರ್ವದಿಸಲು ದೇವರನ್ನು ಬೇಡಿದನು. 15 ನಂತರ ರಾಜನಾದ ಸೊಲೊಮೋನನು ಯೆಹೋವನಿಗೆ ದೀರ್ಘ ಪ್ರಾರ್ಥನೆಯನ್ನು ಮಾಡಿದನು. ಅವನ ಪ್ರಾರ್ಥನೆ ಇಂತಿದೆ:
“ಇಸ್ರೇಲಿನ ದೇವರಾದ ಯೆಹೋವನು ಮಹತ್ವ ಪೂರ್ಣನಾಗಿದ್ದಾನೆ. ಯೆಹೋವನು ನನ್ನ ತಂದೆಯಾದ ದಾವೀದನಿಗೆ ತಾನು ಮಾಡಿದ್ದ ವಾಗ್ದಾನಗಳನ್ನು ಸ್ವತಃ ತಾನೇ ನೆರವೇರಿಸಿದ್ದಾನೆ. ಯೆಹೋವನು ನನ್ನ ತಂದೆಗೆ, 16 ‘ನಾನು ನನ್ನ ಜನರಾದ ಇಸ್ರೇಲರನ್ನು ಈಜಿಪ್ಟಿನಿಂದ ಹೊರತಂದೆನು. ಆದರೆ ನನ್ನನ್ನು ಘನಪಡಿಸಿಕೊಳ್ಳುವುದಕ್ಕಾಗಿ ಆಲಯವೊಂದನ್ನು ಕಟ್ಟಲು ಇಸ್ರೇಲಿನ ಕುಲಗಳಿಂದ ನಾನಿನ್ನೂ ಯಾವ ನಗರವನ್ನು ಆರಿಸಿಕೊಂಡಿರಲಿಲ್ಲ. ಇಸ್ರೇಲಿನ ಜನರನ್ನಾಳುವ ನಾಯಕನನ್ನು ನಾನಿನ್ನೂ ಆರಿಸಿಕೊಂಡಿರಲಿಲ್ಲ, ಆದರೆ ನಾನೀಗ ಜೆರುಸಲೇಮನ್ನು ನನಗೆ ಸನ್ಮಾನವನ್ನು ತರುವಂಥ ಸ್ಥಳವನ್ನಾಗಿ ಆರಿಸಿಕೊಂಡಿರುವೆ. ಇಸ್ರೇಲಿನ ನನ್ನ ಜನರನ್ನು ಆಳಲು ದಾವೀದನನ್ನು ನಾನು ಆರಿಸಿಕೊಂಡಿರುವೆ’ ಎಂದು ಹೇಳಿದ್ದನು.
17 “ನನ್ನ ತಂದೆಯಾದ ದಾವೀದನು ಇಸ್ರೇಲಿನ ದೇವರಾದ ಯೆಹೋವನ ಮಹಿಮೆಗಾಗಿ ಒಂದು ಆಲಯವನ್ನು ನಿರ್ಮಿಸಲು ಬಹಳ ಅಪೇಕ್ಷಿಸಿದ್ದನು. 18 ಆದರೆ ಯೆಹೋವನು ನನ್ನ ತಂದೆಗೆ, ‘ನೀನು ನನ್ನ ಮಹಿಮೆಗಾಗಿ ಆಲಯವೊಂದನ್ನು ನಿರ್ಮಿಸಲು ಬಹಳ ಅಪೇಕ್ಷೆಪಟ್ಟಿರುವುದು ನನಗೆ ತಿಳಿದಿದೆ. ನನಗೋಸ್ಕರ ಆಲಯವನ್ನು ಕಟ್ಟಲು ನೀನು ಅಪೇಕ್ಷಿಸಿರುವುದು ಒಳ್ಳೆಯದೇ ಆಗಿದೆ. 19 ಆದರೆ ನನ್ನ ಆಲಯವನ್ನು ನಿರ್ಮಿಸಲು ನಾನು ಆರಿಸಿಕೊಂಡಿರುವ ವ್ಯಕ್ತಿಯು ನೀನಲ್ಲ. ನಿನ್ನ ಮಗನೇ ನನ್ನ ಆಲಯವನ್ನು ನಿರ್ಮಿಸುತ್ತಾನೆ’ ಎಂದು ಹೇಳಿದನು.
20 “ಯೆಹೋವನು ತಾನು ಮಾಡಿದ್ದ ವಾಗ್ದಾನವನ್ನು ಈಡೇರಿಸಿದನು. ನನ್ನ ತಂದೆಯಾದ ದಾವೀದನ ಸ್ಥಾನದಲ್ಲಿ ನಾನೀಗ ರಾಜನಾಗಿದ್ದೇನೆ. ಯೆಹೋವನ ವಾಗ್ದಾನದಂತೆ ಈಗ ನಾನು ಇಸ್ರೇಲಿನ ಜನರನ್ನು ಆಳುತ್ತಿದ್ದೇನೆ. ಇಸ್ರೇಲಿನ ದೇವರಾದ ಯೆಹೋವನಿಗೆ ನಾನು ಆಲಯವನ್ನು ನಿರ್ಮಿಸಿದೆನು. 21 ಯೆಹೋವನ ಪೆಟ್ಟಿಗೆಗಾಗಿ ಆಲಯದಲ್ಲಿ ನಾನೊಂದು ಸ್ಥಳವನ್ನು ಮಾಡಿದ್ದೇನೆ. ಯೆಹೋವನು ನಮ್ಮ ಪೂರ್ವಿಕರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯು ಈ ಪವಿತ್ರಪೆಟ್ಟಿಗೆಯಲ್ಲಿದೆ. ಯೆಹೋವನು ನಮ್ಮ ಪೂರ್ವಿಕರನ್ನು ಈಜಿಪ್ಟಿನಿಂದ ಹೊರತಂದಾಗ ಈ ಒಡಂಬಡಿಕೆಯನ್ನು ಮಾಡಿಕೊಂಡನು” ಎಂದು ಹೇಳಿದನು.
ಯೆಹೂದ್ಯ ನಾಯಕರ ಬಗ್ಗೆ ಯೇಸು ನೀಡಿದ ಎಚ್ಚರಿಕೆ
(ಮತ್ತಾಯ 16:5-12)
14 ಶಿಷ್ಯರು ದೋಣಿಯಲ್ಲಿ ಹೋಗುತ್ತಿದ್ದಾಗ ಅವರ ಬಳಿಯಲ್ಲಿ ಒಂದೇ ಒಂದು ರೊಟ್ಟಿಯಿತ್ತು. ಅವರು ಮರೆತು ಹೆಚ್ಚು ರೊಟ್ಟಿಗಳನ್ನು ತಂದಿರಲಿಲ್ಲ. 15 ಯೇಸು ಅವರಿಗೆ, “ಜಾಗರೂಕರಾಗಿರಿ! ಫರಿಸಾಯರ ಮತ್ತು ಹೆರೋದನ ಹುಳಿಹಿಟ್ಟಿನ ಬಗ್ಗೆ ಎಚ್ಚರವಹಿಸಿರಿ” ಎಂದು ಎಚ್ಚರಿಸಿದನು.
16 ಶಿಷ್ಯರು ಇದರ ಅರ್ಥವನ್ನು ಚರ್ಚಿಸಿ, “ನಮ್ಮ ಬಳಿ ರೊಟ್ಟಿ ಇಲ್ಲದೆ ಇರುವುದರಿಂದ ಆತನು ಹೀಗೆ ಹೇಳಿದನು” ಎಂದು ತಮ್ಮತಮ್ಮೊಳಗೆ ಅಂದುಕೊಂಡರು.
17 ಶಿಷ್ಯರು ಇದರ ಬಗ್ಗೆ ಮಾತಾಡುತ್ತಿರುವುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು ಅವರಿಗೆ, “ರೊಟ್ಟಿ ಇಲ್ಲವೆಂದು ನೀವು ಚರ್ಚಿಸುವುದೇಕೆ? ನಿಮಗಿನ್ನೂ ಕಾಣುವುದಿಲ್ಲವೇ? ನಿಮಗಿನ್ನೂ ಅರ್ಥವಾಗುವುದಿಲ್ಲವೇ? ನಿಮ್ಮ ಹೃದಯಗಳು ಇನ್ನೂ ಕಠಿಣವಾಗಿವೆಯೋ? 18 ನಿಮ್ಮ ಕಣ್ಣುಗಳು ಕುರುಡಾಗಿವೆಯೋ? ನಿಮ್ಮ ಕಿವಿಗಳು ಕಿವುಡಾಗಿವೆಯೋ? ಮೊದಲೊಮ್ಮೆ, ನಮ್ಮ ಬಳಿ ಸಾಕಷ್ಟು ರೊಟ್ಟಿಗಳಿಲ್ಲದಿದ್ದಾಗ, ನಾನು ಏನು ಮಾಡಿದೆನೆಂಬುದನ್ನು ಜ್ಞಾಪಿಸಿಕೊಳ್ಳಿ. 19 ನಾನು ಐದು ಸಾವಿರ ಜನರಿಗಾಗಿ ಐದು ರೊಟ್ಟಿಗಳನ್ನು ಮುರಿದು ನಿಮಗೆ ಕೊಟ್ಟೆ. ಅವರು ಊಟ ಮಾಡಿದ ಮೇಲೆ ತಿನ್ನಲಾರದೆ ಬಿಟ್ಟ ಚೂರುಗಳನ್ನು ಎಷ್ಟು ಬುಟ್ಟಿಗಳಲ್ಲಿ ತುಂಬಿದಿರಿ ಎಂಬುದು ನಿಮಗೆ ನೆನಪಿಲ್ಲವೇ?” ಎಂದು ಹೇಳಿದನು.
ಆ ಶಿಷ್ಯರು, “ನಾವು ಹನ್ನೆರಡು ಬುಟ್ಟಿಗಳಲ್ಲಿ ತುಂಬಿದೆವು” ಎಂದು ಉತ್ತರಿಸಿದರು.
20 “ನಾನು ನಾಲ್ಕು ಸಾವಿರ ಜನರಿಗಾಗಿ ಏಳು ರೊಟ್ಟಿಗಳನ್ನು ಮುರಿದು ಕೊಟ್ಟದ್ದನ್ನು ಜ್ಞಾಪಿಸಿಕೊಳ್ಳಿ. ಅವರು ಊಟ ಮಾಡಿದ ಮೇಲೆ ತಿನ್ನಲಾರದೆ ಬಿಟ್ಟ ಚೂರುಗಳನ್ನು ಎಷ್ಟು ಬುಟ್ಟಿಗಳಲ್ಲಿ ತುಂಬಿದಿರಿ ಎಂಬುದು ನಿಮಗೆ ನೆನಪಿಲ್ಲವೇ?” ಎಂದು ಕೇಳಿದನು.
ಅದಕ್ಕೆ ಶಿಷ್ಯರು, “ನಾವು ಏಳು ಬುಟ್ಟಿಗಳಲ್ಲಿ ತುಂಬಿದೆವು” ಎಂದು ಉತ್ತರಿಸಿದರು.
21 ಆಗ ಯೇಸು ಅವರಿಗೆ, “ನಾನು ಮಾಡಿದ ಈ ಕಾರ್ಯಗಳನ್ನು ನೀವು ಜ್ಞಾಪಕದಲ್ಲಿಟ್ಟುಕೊಂಡಿದ್ದೀರಿ, ಆದರೆ ನೀವಿನ್ನೂ ಅರ್ಥಮಾಡಿಕೊಳ್ಳುವುದಿಲ್ಲವೇ?” ಎಂದು ಕೇಳಿದನು.
Kannada Holy Bible: Easy-to-Read Version. All rights reserved. © 1997 Bible League International