Revised Common Lectionary (Semicontinuous)
111 ಯೆಹೋವನಿಗೆ ಸ್ತೋತ್ರವಾಗಲಿ!
ನೀತಿವಂತರ ಸಭೆಯಲ್ಲಿ ನಾನು ಪೂರ್ಣಹೃದಯದಿಂದ
ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡುವೆನು.
2 ಯೆಹೋವನು ಮಹತ್ಕಾರ್ಯಗಳನ್ನು ಮಾಡುವನು.
ಜನರು ಅವುಗಳಲ್ಲಿ ಸಂತೋಷಿಸುತ್ತಾ ಅವುಗಳನ್ನೇ ಧ್ಯಾನಿಸುವರು.
3 ಆತನು ಮಹತ್ವವಾದ ಮತ್ತು ಅದ್ಭುತವಾದ ಕಾರ್ಯಗಳನ್ನು ಮಾಡುವನು.
ಆತನ ನೀತಿಯು ಶಾಶ್ವತವಾದದ್ದು.
4 ದೇವರು ಅಮೋಘವಾದ ಕಾರ್ಯಗಳನ್ನು ಮಾಡುವುದರಿಂದ
ಆತನ ದಯೆಯನ್ನೂ ಕೃಪೆಯನ್ನೂ ಜ್ಞಾಪಿಸಿಕೊಳ್ಳುತ್ತೇವೆ.
5 ಆತನು ತನ್ನ ಭಕ್ತರಿಗೆ ಆಹಾರವನ್ನು ಒದಗಿಸುವನು;
ಆತನು ತನ್ನ ಒಡಂಬಡಿಕೆಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವನು.
6 ಆತನು ಅನ್ಯಜನಾಂಗಗಳ ದೇಶವನ್ನು
ತನ್ನ ಜನರಿಗೆ ಕೊಡುವುದರ ಮೂಲಕ ಪ್ರಬಲವಾದ ಕಾರ್ಯಗಳನ್ನು ಮಾಡಿದ್ದಾನೆ.
7 ಆತನ ಪ್ರತಿಯೊಂದು ಕಾರ್ಯವು ಒಳ್ಳೆಯದೂ ನ್ಯಾಯವಾದದ್ದೂ ಆಗಿದೆ.
ಆತನ ಆಜ್ಞೆಗಳೆಲ್ಲಾ ನಂಬಿಕೆಗೆ ಯೋಗ್ಯವಾಗಿವೆ.
8 ದೇವರ ಆಜ್ಞೆಗಳು ಶಾಶ್ವತವಾಗಿವೆ.
ಅವು ಯಥಾರ್ಥವಾಗಿಯೂ ಮತ್ತು ಶುದ್ಧವಾಗಿಯೂ ಇವೆ.
9 ಆತನು ತನ್ನ ಜನರನ್ನು ರಕ್ಷಿಸಿ ಅವರೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡಿದ್ದಾನೆ.
ಆತನ ಹೆಸರು ಅದ್ಭುತವಾಗಿಯೂ ಪರಿಶುದ್ಧವಾಗಿಯೂ ಇದೆ.
10 ಯೆಹೋವನ ಮೇಲಿರುವ ಭಯಭಕ್ತಿಗಳಿಂದಲೇ ಜ್ಞಾನವು ಆರಂಭವಾಗುತ್ತದೆ.
ಆತನಲ್ಲಿ ಭಯಭಕ್ತಿಯುಳ್ಳವರು ಜ್ಞಾನಪೂರ್ಣರಾಗಿದ್ದಾರೆ.
ಆತನಿಗೆ ಸದಾಕಾಲ ಸ್ತೋತ್ರವಾಗಲಿ.
1 ಆ ಕಾಲದಲ್ಲಿ ರಾಜನಾದ ದಾವೀದನು ಬಹಳ ಮುದುಕನಾಗಿದ್ದನು. ಅವನ ದೇಹವು ಬೆಚ್ಚಗಾಗುತ್ತಲೇ ಇರಲಿಲ್ಲ. ಅವನ ಸೇವಕರು ಅವನಿಗೆ ಕಂಬಳಿಗಳನ್ನು ಹೊದಿಸಿದರೂ ಅವನ ದೇಹವು ತಣ್ಣಗೇ ಇರುತ್ತಿತ್ತು. 2 ಆದ್ದರಿಂದ ಅವನ ಸೇವಕರು ಅವನಿಗೆ, “ನಾವು ನಿನ್ನ ಆರೈಕೆಗಾಗಿ ಒಬ್ಬ ಯುವಕನ್ನಿಕೆಯನ್ನು ಹುಡುಕುವೆವು. ಅವಳು ನಿನ್ನನ್ನು ಒತ್ತರಿಸಿಕೊಂಡು ಮಲಗಿ ಬೆಚ್ಚಗಿಡುತ್ತಾಳೆ” ಎಂದು ಹೇಳಿದರು. 3 ಆದ್ದರಿಂದ ರಾಜನ ಸೇವಕರು ಇಸ್ರೇಲಿನ ಎಲ್ಲ ಕಡೆಗಳಲ್ಲೂ ಯುವತಿಯೊಬ್ಬಳನ್ನು ಹುಡುಕಲಾರಂಭಿಸಿದರು. ಅವರು ರಾಜನನ್ನು ಬೆಚ್ಚಗಿಡಲು ಒಬ್ಬ ಸುಂದರ ಹುಡುಗಿಯನ್ನು ಹುಡುಕಲಾರಂಭಿಸಿದರು. ಅವರಿಗೆ ಅಬೀಷಗ್ ಎಂಬ ಹೆಸರಿನ ಯುವತಿಯು ಸಿಕ್ಕಿದಳು. ಅವಳು ಶೂನೇಮ್ ನಗರದವಳು. ಅವರು ಆ ಯುವತಿಯನ್ನು ರಾಜನ ಬಳಿಗೆ ಕರೆದುಕೊಂಡು ಬಂದರು. 4 ಆ ಯುವತಿಯು ಬಹಳ ಸೌಂದರ್ಯವತಿಯಾಗಿದ್ದಳು. ಅವಳು ರಾಜನ ಆರೈಕೆಯನ್ನು ಮಾಡಿದಳು ಮತ್ತು ಅವನ ಸೇವೆಯನ್ನೂ ಮಾಡಿದಳು. ರಾಜನಾದ ದಾವೀದನು ಅವಳನ್ನು ಕೂಡಲಿಲ್ಲ.
5 ರಾಜನಾದ ದಾವೀದನ ಮಗನಾದ ಅದೋನೀಯನು ಬಹಳ ಗರ್ವಿಷ್ಠನಾದನು. ಅವನು, “ನಾನೇ ರಾಜನಾಗುತ್ತೇನೆ” ಎಂದು ಹೇಳಿಕೊಂಡನು. (ಅದೋನೀಯನ ತಾಯಿಯ ಹೆಸರು ಹಗ್ಗೀತ.) ಅದೋನೀಯನು ರಾಜನಾಗಬೇಕೆಂಬುದಾಗಿ ಬಹಳ ಆಸೆಪಟ್ಟನು. ಆದ್ದರಿಂದ ಅವನು ತನಗಾಗಿ ಒಂದು ರಥವನ್ನು, ಕುದುರೆಗಳನ್ನು ಮತ್ತು ರಥದ ಮುಂದೆ ಓಡುವಂತಹ ಐವತ್ತು ಜನರನ್ನು ಪಡೆದನು. 6 ರಾಜನಾದ ದಾವೀದನು ತನ್ನ ಮಗನಾದ ಅದೋನೀಯನನ್ನು ಎಂದೂ ತಿದ್ದಲಿಲ್ಲ. ದಾವೀದನು, “ನೀನು ಹೀಗೇಕೆ ಮಾಡುತ್ತಿರುವೆ?” ಎಂದು ಅವನನ್ನು ಒಂದು ಸಾರಿಯಾದರೂ ಕೇಳಲಿಲ್ಲ. ಅದೋನೀಯನು ಅಬ್ಷಾಲೋಮನ ಬಳಿಕ ಹುಟ್ಟಿದ ಮಗ. ಅದೋನೀಯನು ಬಹಳ ಸುಂದರನಾಗಿದ್ದನು.
7 ಅದೋನೀಯನು ಚೆರೂಯಳ ಮಗನಾದ ಯೋವಾಬ ಮತ್ತು ಯಾಜಕನಾದ ಎಬ್ಯಾತಾರನೊಂದಿಗೆ ಮಾತನಾಡಿದನು. ತಾನು ರಾಜನಾಗಬೇಕೆಂಬ ಅದೋನೀಯನ ಯೋಜನೆಗೆ ಅವರು ಬೆಂಬಲ ನೀಡಿದರು. 8 ಆದರೆ ಅದೋನೀಯನ ಕಾರ್ಯವನ್ನು ಒಪ್ಪದ ಅನೇಕರು ದಾವೀದನಿಗೆ ನಂಬಿಗಸ್ತರಾಗಿದ್ದರು. ಇವರು ಯಾರೆಂದರೆ: ಯಾಜಕನಾದ ಚಾದೋಕ, ಯೆಹೋಯಾದಾವನ ಮಗನಾದ ಬೆನಾಯ, ಪ್ರವಾದಿಯಾದ ನಾತಾನ್, ಶಿಮ್ಮೀ, ರೇಗೀ ಮತ್ತು ರಾಜನಾದ ದಾವೀದನ ವಿಶೇಷ ಅಂಗರಕ್ಷಕರು. ಇವರಲ್ಲಿ ಯಾರೂ ಅದೋನೀಯನ ಸಂಗಡ ಸೇರಲಿಲ್ಲ.
9 ಒಂದು ದಿನ, ಅದೋನೀಯನು ಎನ್‌ರೋಗೆಲಿನ ಹತ್ತಿರದ ಚೋಹೆಲೆತ್ ಎಂಬ ಬಂಡೆಯ ಬಳಿ ಕೆಲವು ಕುರಿಗಳನ್ನು, ಹಸುಗಳನ್ನು ಮತ್ತು ಕೊಬ್ಬಿದ ಕರುಗಳನ್ನು ಸಮಾಧಾನಯಜ್ಞವಾಗಿ ಅರ್ಪಿಸಿದನು. ಅದೋನೀಯನು ತನ್ನ ಸಹೋದರರನ್ನು (ರಾಜನ ಇತರ ಗಂಡುಮಕ್ಕಳನ್ನು) ಮತ್ತು ಯೆಹೂದದ ಅಧಿಕಾರಿಗಳನ್ನು ಆಹ್ವಾನಿಸಿದನು. 10 ಆದರೆ ಅದೋನೀಯನು ಪ್ರವಾದಿಯಾದ ನಾತಾನನನ್ನಾಗಲಿ ಬೆನಾಯನನ್ನಾಗಲಿ ಅವನ ತಂದೆಯ ವಿಶೇಷ ಅಂಗರಕ್ಷಕರನ್ನಾಗಲಿ ಅವನ ಸೋದರ ಸೊಲೊಮೋನನನ್ನಾಗಲಿ ಆಹ್ವಾನಿಸಲಿಲ್ಲ.
11 ನಾತಾನನಿಗೆ ಇದು ತಿಳಿದಾಗ, ಅವನು ಸೊಲೊಮೋನನ ತಾಯಿಯಾದ ಬತ್ಷೆಬೆಳ ಬಳಿಗೆ ಹೋಗಿ, “ಹಗ್ಗೀತಳ ಮಗನಾದ ಅದೋನೀಯನು ಮಾಡುತ್ತಿರುವುದನ್ನು ನೀನು ಕೇಳಿದೆಯಾ? ಅವನು ತನ್ನನ್ನು ತಾನೇ ರಾಜನನ್ನಾಗಿ ಮಾಡಿಕೊಂಡಿದ್ದಾನೆ ಮತ್ತು ನಮ್ಮ ಒಡೆಯನಾದ ರಾಜ ದಾವೀದನಿಗೆ ಇದು ತಿಳಿದಿಲ್ಲ. 12 ನಿನ್ನ ಜೀವ ಮತ್ತು ನಿನ್ನ ಮಗನಾದ ಸೊಲೊಮೋನನ ಜೀವ ಅಪಾಯದಲ್ಲಿರುವಂತಿದೆ. ಆದರೆ ನೀನು ನಿನ್ನನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂಬುದನ್ನು ನಾನು ನಿನಗೆ ತಿಳಿಸುತ್ತೇನೆ. 13 ರಾಜನಾದ ದಾವೀದನ ಬಳಿಗೆ ಹೋಗಿ ಅವನಿಗೆ, ‘ನನ್ನ ಒಡೆಯನಾದ ರಾಜನೇ, ನನ್ನ ಮಗನಾದ ಸೊಲೊಮೋನನು ನಿನ್ನ ನಂತರದ ರಾಜನೆಂದು ನೀನು ನನಗೆ ವಾಗ್ದಾನ ಮಾಡಿದ್ದೆ. ಹೀಗಿರುವಾಗ ಅದೋನೀಯನು ನೂತನ ರಾಜನಾದದ್ದು ಏಕೆ?’ ಎಂದು ಹೇಳು. 14 ನೀನು ಅವನೊಂದಿಗೆ ಮಾತನಾಡುತ್ತಿರುವಾಗ ನಾನು ಒಳಗೆ ಬಂದು ಅದೋನೀಯನ ಬಗ್ಗೆ ನೀನು ಹೇಳಿದ್ದೆಲ್ಲವೂ ನಿಜ ಎಂದು ಹೇಳುತ್ತೇನೆ” ಎಂಬುದಾಗಿ ತಿಳಿಸಿದನು.
15 ಆದ್ದರಿಂದ ಬತ್ಷೆಬೆಳು ರಾಜನನ್ನು ನೋಡಲು ಅವನ ಮಲಗುವ ಕೊಠಡಿಗೆ ಹೋದಳು. ರಾಜನು ಬಹಳ ವೃದ್ಧನಾಗಿದ್ದನು. ಶೂನೇಮಿನ ಯುವತಿಯಾದ ಅಬೀಷಗಳು ಅಲ್ಲಿ ಅವನ ಆರೈಕೆಯನ್ನು ಮಾಡುತ್ತಿದ್ದಳು. 16 ರಾಜನ ಎದುರಿನಲ್ಲಿ ಬತ್ಷೆಬೆಳು ಬಾಗಿ ನಮಸ್ಕರಿಸಿದಳು. ರಾಜನು, “ನಾನು ನಿನಗಾಗಿ ಏನು ಮಾಡಬೇಕು?” ಎಂದು ಕೇಳಿದನು.
17 ಬತ್ಷೆಬೆಳು, “ನನ್ನ ಒಡೆಯನೇ, ನಿನ್ನ ದೇವರಾದ ಯೆಹೋವನ ಆಣೆಯಾಗಿ ನೀನು ನನಗೆ ಒಂದು ವಾಗ್ದಾನವನ್ನು ಮಾಡಿದ್ದೆ. ‘ನನ್ನ ನಂತರ ನಿನ್ನ ಮಗ ಸೊಲೊಮೋನನು ರಾಜನಾಗುವನು. ಸೊಲೊಮೋನನು ನನ್ನ ಸಿಂಹಾಸನದ ಮೇಲೆ ಕುಳಿತು ಆಳುವನು’ ಎಂಬುದೇ ಆ ಪ್ರಮಾಣ. 18 ಆದರೆ ಈಗ ಅದೋನೀಯನು ತನ್ನನ್ನು ರಾಜನಾಗಿ ಮಾಡಿಕೊಳ್ಳುತ್ತಿದ್ದಾನೆ. ಇದು ನಿನಗೆ ತಿಳಿದಿಲ್ಲ. 19 ಅದೋನೀಯನು ಅನೇಕ ಹಸುಗಳನ್ನು, ಕೊಬ್ಬಿದ ಕರುಗಳನ್ನು ಮತ್ತು ಕುರಿಗಳನ್ನು ಸಮಾಧಾನಯಜ್ಞವಾಗಿ ಅರ್ಪಿಸಿದ್ದಾನೆ. ಅವನು ನಿನ್ನ ಎಲ್ಲಾ ಗಂಡುಮಕ್ಕಳನ್ನು ಆಹ್ವಾನಿಸಿದ್ದನು. ಅವನು ಯಾಜಕನಾದ ಎಬ್ಯಾತಾರನನ್ನು ಮತ್ತು ನಿನ್ನ ಸೇನಾಧಿಪತಿಯಾದ ಯೋವಾಬನನ್ನು ಆಹ್ವಾನಿಸಿದ್ದನು. ಆದರೆ ಅವನು ನಿನ್ನ ಸೇವೆಮಾಡುವ ನಿನ್ನ ಮಗನಾದ ಸೊಲೊಮೋನನನ್ನು ಆಹ್ವಾನಿಸಲಿಲ್ಲ. 20 ನನ್ನ ಒಡೆಯನಾದ ರಾಜನೇ, ನಿನ್ನ ನಂತರ ಯಾರು ರಾಜನಾಗಬೇಕೆಂಬ ನಿನ್ನ ತೀರ್ಮಾನಕ್ಕಾಗಿ ಇಸ್ರೇಲರೆಲ್ಲರೂ ಕಾಯುತ್ತಿದ್ದಾರೆ. 21 ನೀನು ಪೂರ್ವಿಕರ ಬಳಿಗೆ ಸೇರಿದ ಮೇಲೆ ಸೊಲೊಮೋನನನ್ನು ಮತ್ತು ನನ್ನನ್ನು ಅಪರಾಧಿಗಳೆಂದು ಜನರೆಲ್ಲರೂ ಹೇಳುವರು” ಎಂದು ಹೇಳಿದಳು.
22 ರಾಜನೊಡನೆ ಬತ್ಷೆಬೆಳು ಮಾತಾಡುತ್ತಿರುವಷ್ಟರಲ್ಲಿ ಪ್ರವಾದಿಯಾದ ನಾತಾನನು ಅವನನ್ನು ನೋಡಲು ಬಂದನು. 23 ಸೇವಕರು ರಾಜನಿಗೆ, “ಪ್ರವಾದಿಯಾದ ನಾತಾನನು ಬಂದಿರುವನು” ಎಂದು ಹೇಳಿದರು. ಆಗ ನಾತಾನನು ಪ್ರವೇಶಿಸಿ, ರಾಜನಿಗೆ ಸಾಷ್ಟಾಂಗನಮಸ್ಕಾರ ಮಾಡಿದನು. 24 ಆಗ ನಾತಾನನು, “ನನ್ನ ರಾಜನೇ, ನನ್ನ ಒಡೆಯನೇ, ನಿನ್ನ ನಂತರ ಅದೋನೀಯನು ನೂತನ ರಾಜನಾಗಿ ಜನರನ್ನು ಆಳಲೆಂದು ನೀನು ತೀರ್ಮಾನಿಸಿ ಪ್ರಕಟಿಸಿರುವೆಯಾ? 25 ಈ ದಿನ ಅವನು ಅನೇಕ ಹೋರಿಗಳನ್ನು ಮತ್ತು ಕುರಿಗಳನ್ನು ಸಮಾಧಾನಯಜ್ಞವಾಗಿ ಅರ್ಪಿಸಿದನು. ಅವನು ನಿನ್ನ ಇತರ ಗಂಡುಮಕ್ಕಳನ್ನು, ಸೇನಾಧಿಪತಿಗಳನ್ನು ಮತ್ತು ಯಾಜಕನಾದ ಎಬ್ಯಾತಾರನನ್ನು ಆಹ್ವಾನಿಸಿದ್ದನು. ಅವರು ಈಗ ಅವನೊಡನೆ ತಿನ್ನುತ್ತಾ ಕುಡಿಯುತ್ತಾ ಇದ್ದಾರೆ. ‘ರಾಜನಾದ ಅದೋನೀಯನು ಚಿರಾಯುವಾಗಿರಲಿ’ ಎಂದು ಅವರು ಹೇಳುತ್ತಿದ್ದಾರೆ. 26 ಆದರೆ ಅವನು ನನ್ನನ್ನಾಗಲಿ ಯಾಜಕನಾದ ಚಾದೋಕನನ್ನಾಗಲಿ ಯೆಹೋಯಾದಾವನ ಮಗನಾದ ಬೆನಾಯನನ್ನಾಗಲಿ ನಿನ್ನ ಮಗನಾದ ಸೊಲೊಮೋನನನ್ನಾಗಲಿ ಆಹ್ವಾನಿಸಲಿಲ್ಲ. 27 ನನ್ನ ಒಡೆಯನಾದ ರಾಜನೇ, ನಮಗೆ ಹೇಳದೆ ಇದನ್ನು ಮಾಡಿದೆಯಾ? ದಯವಿಟ್ಟು ಹೇಳು, ನಿನ್ನ ನಂತರ ರಾಜನಾಗುವವನು ಯಾರು?” ಎಂದು ಕೇಳಿದನು.
28 ಆಗ ರಾಜನಾದ ದಾವೀದನು, “ಒಳಗೆ ಬರಲು ಬತ್ಷೆಬೆಳಿಗೆ ಹೇಳಿ!” ಎಂದು ಹೇಳಿದನು. ಬತ್ಷೆಬೆಳು ರಾಜನ ಎದುರಿಗೆ ಬಂದಳು.
29 ಆಗ ರಾಜನು ಈ ಪ್ರಮಾಣವನ್ನು ಮಾಡಿದನು: “ದೇವರಾದ ಯೆಹೋವನು ನನ್ನನ್ನು ಎಲ್ಲಾ ತೊಂದರೆಗಳಿಂದ ರಕ್ಷಿಸಿದನು. ದೇವರಾಣೆಯಾಗಿಯೂ ನಾನು ನಿನಗೆ ಈ ಪ್ರಮಾಣವನ್ನು ಮಾಡುತ್ತೇನೆ. 30 ಅಂದು ನಾನು ನಿನಗೆ ಮಾಡಿದ ಪ್ರಮಾಣವನ್ನು ಇಂದು ಪೂರೈಸುತ್ತೇನೆ. ಇಸ್ರೇಲಿನ ದೇವರಾದ ಯೆಹೋವನ ಹೆಸರಿನಲ್ಲಿ ನಾನು ನಿನಗೆ ಆ ಪ್ರಮಾಣವನ್ನು ಮಾಡಿದ್ದೆನು. ನನ್ನ ನಂತರ ನಿನ್ನ ಮಗ ಸೊಲೊಮೋನನು ರಾಜನಾಗುವನೆಂದೂ ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವನೆಂದೂ ನಾನು ನಿನಗೆ ಪ್ರಮಾಣ ಮಾಡಿದ್ದೆನು. ನಾನು ನನ್ನ ವಾಗ್ದಾನವನ್ನು ಈಡೇರಿಸುತ್ತೇನೆ” ಎಂದು ಹೇಳಿದನು.
ಯೆಹೂದ್ಯರು ಸ್ತೆಫನನಿಗೆ ವಿರುದ್ಧವಾದರು
8 ಸ್ತೆಫನನು (ಏಳು ಮಂದಿಯಲ್ಲಿ ಒಬ್ಬನು) ದೇವರ ಕೃಪೆಯಿಂದಲೂ ಬಲದಿಂದಲೂ ತುಂಬಿದವನಾಗಿ ಅದ್ಭುತಕಾರ್ಯಗಳನ್ನು ಮತ್ತು ಸೂಚಕಕಾರ್ಯಗಳನ್ನು ಮಾಡುತ್ತಾ ಇದ್ದನು. 9 ಆದರೆ ಕೆಲವು ಯೆಹೂದ್ಯರು ಬಂದು ಅವನೊಂದಿಗೆ ವಾದಿಸಿದರು. ಈ ಯೆಹೂದ್ಯರು ಸಭಾಮಂದಿರಕ್ಕೆ ಸೇರಿದವರು. ಅದಕ್ಕೆ “ಬಿಡುಗಡೆ ಹೊಂದಿದವರ[a] ಸಭಾಮಂದಿರ” ಎಂದು ಕರೆಯುತ್ತಿದ್ದರು. (ಸಿರೇನ್ ಮತ್ತು ಅಲೆಕ್ಸಾಂಡ್ರಿಯದಿಂದ ಬಂದ ಯೆಹೂದ್ಯರಿಗೋಸ್ಕರವಾಗಿಯೂ ಈ ಸಭಾಮಂದಿರವಿತ್ತು.) ಸಿಲಿಸಿಯ ಮತ್ತು ಏಷ್ಯಾದಿಂದ ಬಂದ ಯೆಹೂದ್ಯರೂ ಅವರೊಂದಿಗಿದ್ದರು. ಅವರೆಲ್ಲರೂ ಬಂದು ಅವನೊಂದಿಗೆ ವಾದಮಾಡಿದರು. 10 ಆದರೆ ವಿವೇಕದಿಂದ ಮಾತಾಡಲು ಪವಿತ್ರಾತ್ಮನು ಅವನಿಗೆ ಸಹಾಯಮಾಡಿದನು. ಸ್ತೆಫನನ ಮಾತುಗಳು ಬಹು ಶಕ್ತಿಯುತವಾಗಿದ್ದ ಕಾರಣ ಅವನೊಂದಿಗೆ ವಾದಿಸಲು ಅವರಿಗೆ ಸಾಧ್ಯವಾಗದೆ,
11 “ಸ್ತೆಫನನು ಮೋಶೆಗೂ ದೇವರಿಗೂ ವಿರುದ್ಧವಾಗಿ ಕೆಟ್ಟ ಸಂಗತಿಗಳನ್ನು ಹೇಳುತ್ತಾನೆ; ಅವನ್ನು ನಾವೇ ಕೇಳಿದ್ದೇವೆ!” ಎಂದು ತಿಳಿಸುವಂತೆ ಕೆಲವರಿಗೆ ಹಣಕೊಟ್ಟರು. 12 ಹೀಗೆ ಈ ಯೆಹೂದ್ಯರು ಜನರನ್ನೂ ಯೆಹೂದ್ಯರ ಹಿರಿಯನಾಯಕರನ್ನೂ ಧರ್ಮೋಪದೇಶಕರನ್ನೂ ಗಲಿಬಿಲಿಗೊಳಿಸಿದರು. ಅವರು ಬಹು ಸಿಟ್ಟಿನಿಂದ ಬಂದು ಸ್ತೆಫನನನ್ನು ಬಂಧಿಸಿ ಯೆಹೂದ್ಯನಾಯಕರ ಸಭೆಗೆ ಕೊಂಡೊಯ್ದರು.
13 ಈ ಯೆಹೂದ್ಯರು ಕೆಲವು ಮಂದಿ ಸುಳ್ಳುಸಾಕ್ಷಿಗಳನ್ನು ಕರೆದುಕೊಂಡು ಬಂದು, “ಈ ಮನುಷ್ಯನು ಈ ಪವಿತ್ರಸ್ಥಳದ (ದೇವಾಲಯದ) ವಿರುದ್ಧವಾಗಿಯೂ ಮೋಶೆಯ ಧರ್ಮಶಾಸ್ತ್ರದ ವಿರುದ್ಧವಾಗಿಯೂ ಕೆಟ್ಟಸಂಗತಿಗಳನ್ನು ಯಾವಾಗಲೂ ಹೇಳುತ್ತಾನೆ. 14 ನಜರೇತಿನ ಯೇಸು ಈ ದೇವಾಲಯವನ್ನು ಕೆಡವಿ ಮೋಶೆಯ ವಿಧಿಗಳನ್ನು ಬದಲಾಯಿಸುತ್ತಾನೆಂದು ಇವನು ಹೇಳುವುದನ್ನು ನಾವು ಕೇಳಿದ್ದೇವೆ” ಎಂದು ಹೇಳಿಸಿದರು. 15 ಸಭೆಯಲ್ಲಿ ಕುಳಿತಿದ್ದವರೆಲ್ಲರೂ ಸ್ತೆಫನನ ಮುಖವನ್ನು ದಿಟ್ಟಿಸಿ ನೋಡಲು ಅವನ ಮುಖವು ದೇವದೂತನ ಮುಖದಂತೆ ಕಂಗೊಳಿಸಿತು.
Kannada Holy Bible: Easy-to-Read Version. All rights reserved. © 1997 Bible League International