Revised Common Lectionary (Semicontinuous)
ಗುಹೆಯಲ್ಲಿ ಸೌಲನಿಂದ ಪಾರಾದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ
57 ದೇವರೇ, ನನ್ನನ್ನು ಕರುಣಿಸು, ನನ್ನನ್ನು ಕನಿಕರಿಸು.
ನನ್ನ ಆತ್ಮವು ನಿನ್ನನ್ನೇ ಆಶ್ರಯಿಸಿಕೊಂಡಿದೆ.
ಆಪತ್ತು ಕೊನೆಗೊಳ್ಳುವ ತನಕ ಸಂರಕ್ಷಣೆಗಾಗಿ
ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವೆನು.
2 ಸಹಾಯಕ್ಕಾಗಿ ಮಹೋನ್ನತನಾದ ದೇವರಿಗೆ ಮೊರೆಯಿಡುವೆನು.
ಆತನು ಕೊರತೆಗಳನ್ನೆಲ್ಲಾ ನೀಗಿಸುವನು.
3 ಆತನು ಪರಲೋಕದಿಂದ ನನಗೆ ಸಹಾಯಮಾಡಿ,
ನನ್ನನ್ನು ಕಾಡಿಸುವವರನ್ನು ಸೋಲಿಸುವನು.
ದೇವರು ತನ್ನ ಪ್ರೀತಿಯನ್ನೂ
ನಂಬಿಗಸ್ತಿಕೆಯನ್ನೂ ತೋರ್ಪಡಿಸುವನು.
4 ನನ್ನ ಪ್ರಾಣವು ಅಪಾಯದಲ್ಲಿದೆ.
ನನ್ನ ಶತ್ರುಗಳು ನನ್ನನ್ನು ಮುತ್ತಿಕೊಂಡಿದ್ದಾರೆ.
ಅವರು ಸಿಂಹಗಳಂತಿದ್ದಾರೆ.
ಅವರ ಹಲ್ಲುಗಳು ಬಾಣಗಳಂತಿವೆ;
ಅವರ ನಾಲಿಗೆಗಳು ಹರಿತವಾದ ಖಡ್ಗಗಳಂತಿವೆ.
5 ದೇವರೇ, ಪರಲೋಕದಲ್ಲಿ ನಿನ್ನ ಪ್ರಭಾವವು ಮೆರೆಯಲಿ.
ನಿನ್ನ ಮಹಿಮೆಯು ಭೂಮಂಡಲವನ್ನೆಲ್ಲಾ ಆವರಿಸಿಕೊಳ್ಳಲಿ.
6 ನನ್ನನ್ನು ಬಂಧಿಸಲು
ನನ್ನ ವೈರಿಗಳು ನನಗೆ ಬಲೆಯೊಡ್ಡಿದ್ದಾರೆ.
ನನ್ನನ್ನು ಬೀಳಿಸಲು ಕುಣಿ ತೋಡಿದರು.
ಆದರೆ ಅವರೇ ಅದರಲ್ಲಿ ಬಿದ್ದುಹೋದರು.
7 ದೇವರೇ, ನನ್ನ ಹೃದಯವು ಸ್ಥಿರವಾಗಿದೆ; ನನ್ನ ಹೃದಯವು ದೃಢವಾಗಿದೆ.
ನಾನು ವಾದ್ಯ ಬಾರಿಸುತ್ತಾ ಹಾಡುವೆನು.
8 ನನ್ನ ಮನವೇ, ಎಚ್ಚರಗೊಳ್ಳು!
ಹಾರ್ಪ್ ಮತ್ತು ಲೈರ್ ವಾದ್ಯಗಳೇ, ಎಚ್ಚರಗೊಳ್ಳಿರಿ.
ಸಂಕೀರ್ತನೆಯಿಂದ ಸೂರ್ಯೋದಯವನ್ನು ಎದುರುಗೊಳ್ಳೋಣ.
9 ನನ್ನ ಒಡೆಯನೇ, ಜನಾಂಗಗಳ ನಡುವೆ ನಿನ್ನನ್ನು ಕೊಂಡಾಡುವೆನು.
ಎಲ್ಲಾ ದೇಶಗಳಲ್ಲಿ ನಿನಗೆ ಸ್ತುತಿಗೀತೆಗಳನ್ನು ಹಾಡುವೆನು.
10 ಯಾಕೆಂದರೆ ನಿನ್ನ ಪ್ರೀತಿಯು ಮುಗಿಲನ್ನು ಮುಟ್ಟುವಷ್ಟೂ
ನಿನ್ನ ನಂಬಿಗಸ್ತಿಕೆಯು ಆಕಾಶವನ್ನು ನಿಲುಕುವಷ್ಟೂ ದೊಡ್ಡದಾಗಿದೆ.
11 ದೇವರೇ, ಪರಲೋಕದಲ್ಲಿ ನಿನ್ನ ಪ್ರಭಾವವು ಮೆರೆಯಲಿ.
ನಿನ್ನ ಮಹಿಮೆಯು ಭೂಮಂಡಲವನ್ನೆಲ್ಲಾ ಆವರಿಸಿಕೊಳ್ಳಲಿ.
ಯೋವಾಬನು ದಾವೀದನಿಗೆ ವರ್ತಮಾನವನ್ನು ಕಳುಹಿಸಿದನು
19 ಚಾದೋಕನ ಮಗನಾದ ಅಹೀಮಾಚನು ಯೋವಾಬನಿಗೆ, “ಈಗ ಓಡುತ್ತಾಹೋಗಿ ರಾಜನಾದ ದಾವೀದನಿಗೆ ಈ ವರ್ತಮಾನವನ್ನು ತಿಳಿಸುತ್ತೇನೆ. ಯೆಹೋವನು ನಿನ್ನ ಶತ್ರುವನ್ನು ನಾಶಮಾಡಿದನೆಂದು ನಾನು ಅವನಿಗೆ ಹೇಳುತ್ತೇನೆ” ಎಂದನು.
20 ಯೋವಾಬನು ಅಹೀಮಾಚನಿಗೆ, “ಇಲ್ಲ, ದಾವೀದನಿಗೆ ಇಂದು ನೀನು ಈ ವರ್ತಮಾನವನ್ನು ತಿಳಿಸುವಂತಿಲ್ಲ. ನೀನು ಬೇರೊಂದು ದಿನದಲ್ಲಿ ವರ್ತಮಾನವನ್ನು ತಿಳಿಸಬಹುದು, ಏಕೆಂದರೆ ಇಂದು ರಾಜನ ಮಗನು ಸತ್ತಿದ್ದಾನೆ” ಎಂದು ಉತ್ತರಿಸಿದನು.
21 ಆಗ ಯೋವಾಬನು ಇಥಿಯೋಪ್ಯನಾದ ಒಬ್ಬನಿಗೆ, “ಹೋಗು, ನೀನು ನೋಡಿದ ಸಂಗತಿಗಳನ್ನು ರಾಜನಿಗೆ ತಿಳಿಸು” ಎಂದು ಹೇಳಿದನು.
ಇಥಿಯೋಪ್ಯನು ಯೋವಾಬನಿಗೆ ಸಾಷ್ಟಾಂಗನಮಸ್ಕಾರಮಾಡಿ ದಾವೀದನಿಗೆ ಹೇಳಲು ಓಡಿಹೋದನು.
22 ಆದರೆ ಚಾದೋಕನ ಮಗನಾದ ಅಹೀಮಾಚನು ಯೋವಾಬನನ್ನು ಮತ್ತೆ ಬೇಡುತ್ತಾ, “ಏನು ಸಂಭವಿಸುತ್ತದೆಯೊ ಸಂಭವಿಸಲಿ, ಇಥಿಯೋಪ್ಯದವನ ಹಿಂದೆ ಓಡಿಹೋಗಲು ನನಗೆ ಅವಕಾಶಕೊಡು!” ಎಂದನು.
ಯೋವಾಬನು, “ಮಗನೇ, ಈ ವರ್ತಮಾನವನ್ನು ತೆಗೆದುಕೊಂಡು ಹೋಗಲು ನೀನು ಏಕೆ ಇಚ್ಛಿಸುವೆ? ನೀನು ತೆಗೆದುಕೊಂಡು ಹೋಗುವ ವರ್ತಮಾನಕ್ಕೆ ನಿನಗೆ ಯಾವ ಬಹುಮಾನವೂ ಸಿಕ್ಕುವುದಿಲ್ಲ” ಎಂದನು.
23 ಅಹೀಮಾಚನು, “ಏನಾದರೂ ಆಗಲಿ, ನಾನು ಓಡಿಹೋಗುತ್ತೇನೆ” ಎಂದು ಉತ್ತರಿಸಿದನು.
“ಓಡು” ಎಂದು ಯೋವಾಬನು ಅಹೀಮಾಚನಿಗೆ ಹೇಳಿದನು.
ಆಗ ಅಹೀಮಾಚನು ಜೋರ್ಡನ್ ಕಣಿವೆಯ ಮೂಲಕ ಓಡಿಹೋದನು. ಅವನು ಇಥಿಯೋಪ್ಯದವನಿಗಿಂತ ಮೊದಲೇ ಹೋದನು.
ದಾವೀದನು ಸುದ್ದಿಯನ್ನು ಕೇಳಿದ್ದು
24 ದಾವೀದನು ನಗರದ ಎರಡು ಬಾಗಿಲುಗಳ ನಡುವೆ ಕುಳಿತಿದ್ದನು. ಕಾವಲುಗಾರನು ಊರಬಾಗಿಲುಗಳ ಮಾಳಿಗೆಯ ಮೇಲಕ್ಕೆ ಹೋದನು. ಕಾವಲುಗಾರನು ದೃಷ್ಟಿಸಿ ನೋಡಿದಾಗ, ಒಬ್ಬ ಮನುಷ್ಯನು ಒಬ್ಬಂಟಿಗನಾಗಿ ಓಡಿಬರುತ್ತಿರುವುದನ್ನು ನೋಡಿದನು. 25 ರಾಜನಿಗೆ ಹೇಳುವುದಕ್ಕಾಗಿ ಕಾವಲುಗಾರನು ಜೋರಾಗಿ ಕೂಗಿದನು.
ರಾಜನಾದ ದಾವೀದನು, “ಆ ಮನುಷ್ಯನು ಒಬ್ಬಂಟಿಗನಾಗಿದ್ದರೆ ಅವನು ಸುದ್ದಿಯನ್ನು ತರುತ್ತಿದ್ದಾನೆ” ಎಂದನು.
ಆ ಮನುಷ್ಯನು ಓಡುತ್ತಾ ನಗರದ ಹತ್ತಿರಕ್ಕೆ ಬಂದನು. 26 ಅವನ ಹಿಂದೆ ಇನ್ನೊಬ್ಬ ಮನುಷ್ಯನು ಓಡಿಬರುತ್ತಿರುವುದನ್ನು ಕಾವಲುಗಾರನು ನೋಡಿದನು. ಕಾವಲುಗಾರನು ದ್ವಾರಪಾಲಕನನ್ನು ಕರೆದು, “ನೋಡು! ಇನ್ನೊಬ್ಬ ಮನುಷ್ಯನು ಒಬ್ಬಂಟಿಗನಾಗಿ ಓಡುತ್ತಾ ಬರುತ್ತಿದ್ದಾನೆ” ಎಂದನು.
ರಾಜನು, “ಅವನು ಸಹ ಸುದ್ದಿಯನ್ನು ತರುತ್ತಿದ್ದಾನೆ” ಎಂದನು.
27 ಕಾವಲುಗಾರನು, “ಮೊದಲನೆಯ ಮನುಷ್ಯನು ಓಡುತ್ತಿರುವುದು ಚಾದೋಕನ ಮಗನಾದ ಅಹೀಮಾಚನಂತಿದೆಯೆಂದು ನನ್ನ ಭಾವನೆ” ಎಂದು ಹೇಳಿದನು.
ರಾಜನು, “ಅಹೀಮಾಚನು ಒಳ್ಳೆಯ ಮನುಷ್ಯ. ಅವನು ಶುಭಸಮಾಚಾರವನ್ನು ತರುತ್ತಿರಬೇಕು” ಎಂದನು.
28 ಅಹೀಮಾಚನು ರಾಜನ ಬಳಿಗೆ ಬಂದು, “ಎಲ್ಲವೂ ಶುಭಕರವಾಗಿದೆ” ಎಂದು ಹೇಳಿ ರಾಜನಿಗೆ ಸಾಷ್ಟಾಂಗನಮಸ್ಕಾರ ಮಾಡಿದನು. ಅಹೀಮಾಚನು, “ನಿನ್ನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ! ರಾಜನಾದ ಒಡೆಯನೇ, ನಿನ್ನ ವಿರುದ್ಧವಾಗಿದ್ದ ಜನರನ್ನು ಯೆಹೋವನು ಸೋಲಿಸಿದ್ದಾನೆ” ಎಂದು ಹೇಳಿದನು.
29 ರಾಜನು, “ಯುವಕನಾದ ಅಬ್ಷಾಲೋಮನು ಕ್ಷೇಮವಾಗಿರುವನೇ?” ಎಂದು ಕೇಳಿದನು.
ಅಹೀಮಾಚನು, “ಯೋವಾಬನು ನನ್ನನ್ನು ಕಳುಹಿಸಿದಾಗ, ನಾನು ಒಂದು ದೊಡ್ಡ ಕೋಲಾಹಲವನ್ನು ನೋಡಿದೆನು. ಆದರೆ ಅದು ಏನೆಂದು ನನಗೆ ಗೊತ್ತಿಲ್ಲ” ಎಂದು ಉತ್ತರಿಸಿದನು.
30 ಆಗ ರಾಜನು, “ಅತ್ತ ಸರಿದು ನಿಲ್ಲು” ಎಂದನು. ಅಹೀಮಾಚನು ಸರಿದು ನಿಂತುಕೊಂಡನು.
31 ಇಥಿಯೋಪ್ಯದವನು ಬಂದನು. ಅವನು, “ನನ್ನ ರಾಜನಾದ ಪ್ರಭುವಿಗೆ ಸುದ್ದಿಯಿದೆ, ನಿನ್ನ ವಿರುದ್ಧವಾಗಿದ್ದ ಜನರನ್ನು ಇಂದು ಯೆಹೋವನು ದಂಡಿಸಿದನು!” ಎಂದು ಹೇಳಿದನು.
32 ರಾಜನು ಅವನಿಗೆ, “ಯುವಕನಾದ ಅಬ್ಷಾಲೋಮನು ಕ್ಷೇಮವಾಗಿರುವನೇ?” ಎಂದು ಕೇಳಿದನು.
ಇಥಿಯೋಪ್ಯದವನು, “ನಿನ್ನ ಶತ್ರುಗಳು ಮತ್ತು ನಿನಗೆ ಕೇಡುಮಾಡಲು ನಿನಗೆ ವಿರುದ್ಧವಾಗಿ ಬಂದ ಜನರೆಲ್ಲರು ಈ ಯುವಕನಂತೆಯೇ ದಂಡಿಸಲ್ಪಡುವರು” ಎಂದು ಉತ್ತರಿಸಿದನು.
33 ಅಬ್ಷಾಲೋಮನು ಸತ್ತಿದ್ದಾನೆಂಬುದು ಆಗ ರಾಜನಿಗೆ ತಿಳಿಯಿತು. ರಾಜನು ಬಹಳ ತಳಮಳಗೊಂಡನು. ಅವನು ನಗರ ದ್ವಾರದಲ್ಲಿದ್ದ ಕೊಠಡಿಗೆ ಹೋಗಿ ಅಲ್ಲಿ ಗೋಳಾಡಿದನು. ಬಳಿಕ ಅಲ್ಲಿಂದ ತನ್ನ ಕೊಠಡಿಗೆ ಹೋಗುತ್ತಾ, “ನನ್ನ ಮಗನೇ, ಅಬ್ಷಾಲೋಮನೇ, ನನ್ನ ಮಗನಾದ ಅಬ್ಷಾಲೋಮನೇ! ನಿನಗೆ ಬದಲಾಗಿ ನಾನು ಸತ್ತಿದ್ದರೆ ಚೆನ್ನಾಗಿತ್ತು. ನನ್ನ ಮಗನಾದ ಅಬ್ಷಾಲೋಮನೇ, ನನ್ನ ಮಗನೇ!” ಎಂದು ಗೋಳಾಡಿದನು.
14 ಪ್ರಿಯ ಸ್ನೇಹಿತರೇ, ಇವುಗಳಿಗಾಗಿಯೇ ನಾವು ಎದುರುನೋಡುತ್ತಿದ್ದೇವೆ. ಆದ್ದರಿಂದ ನೀವು ಪಾಪವಿಲ್ಲದವರಾಗಿರಲು ಮತ್ತು ತಪ್ಪಿಲ್ಲದವರಾಗಿರಲು ನಿಮ್ಮಿಂದ ಸಾಧ್ಯವಾದಷ್ಟು ಪ್ರಯತ್ನಿಸಿರಿ. ದೇವರೊಂದಿಗೆ ಸಮಾಧಾನದಿಂದಿರಲು ಪ್ರಯತ್ನಿಸಿರಿ. 15 ನಾವು ರಕ್ಷಣೆ ಹೊಂದಿಕೊಂಡದ್ದು ನಮ್ಮ ಪ್ರಭುವಿನ ತಾಳ್ಮೆಯಿಂದಲೇ ಎಂಬುದನ್ನು ನೆನಪು ಮಾಡಿಕೊಳ್ಳಿರಿ. ನಮ್ಮ ಪ್ರಿಯ ಸಹೋದರನಾದ ಪೌಲನು ದೇವರಿಂದ ತನಗೆ ದೊರೆತ ಜ್ಞಾನದಿಂದ ನಿಮಗೆ ಪತ್ರ ಬರೆದಾಗ ಇದನ್ನೇ ತಿಳಿಸಿದನು. 16 ಪೌಲನು ತನ್ನ ಎಲ್ಲ ಪತ್ರಗಳಲ್ಲಿಯೂ ಇವುಗಳನ್ನು ಕುರಿತು ಇದೇ ರೀತಿ ಬರೆಯುತ್ತಾನೆ. ಕೆಲವು ಸಂದರ್ಭಗಳಲ್ಲಿ ಪೌಲನ ಪತ್ರಗಳಲ್ಲಿರುವವುಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಕೆಲವರು ಅವುಗಳನ್ನು ಬೇಕೆಂದೇ ತಪ್ಪಾಗಿ ಅರ್ಥೈಸುತ್ತಾರೆ. ಅವರು ಮೂಢರಾಗಿದ್ದಾರೆ ಮತ್ತು ನಂಬಿಕೆಯಲ್ಲಿ ಬಲಹೀನರಾಗಿದ್ದಾರೆ. ಅವರು ಪವಿತ್ರ ಗ್ರಂಥದ ಇತರ ಭಾಗಗಳನ್ನೂ ತಪ್ಪಾಗಿ ವಿವರಿಸುತ್ತಾರೆ. ಹೀಗೆ ಅವರು ತಮ್ಮನ್ನು ತಾವೇ ನಾಶಪಡಿಸಿಕೊಳ್ಳುತ್ತಾರೆ.
17 ಪ್ರಿಯ ಸ್ನೇಹಿತರೇ, ನೀವು ಈಗಾಗಲೇ ಇದರ ಬಗ್ಗೆ ತಿಳಿದಿರುವಿರಿ. ಆದ್ದರಿಂದ ನೀವು ಎಚ್ಚರದಿಂದಿರಿ. ಆ ಕೆಟ್ಟಜನರು ತಾವು ಮಾಡುವ ಕೆಟ್ಟಕಾರ್ಯಗಳಿಂದ ನಿಮ್ಮನ್ನು ದಾರಿತಪ್ಪಿಸದಂತೆ ನೋಡಿಕೊಳ್ಳಿರಿ. ನಿಮ್ಮ ಬಲವಾದ ನಂಬಿಕೆಯನ್ನು ತೊರೆದುಬಿಡದಂತೆ ಎಚ್ಚರಿಕೆಯಾಗಿರಿ. 18 ನಿಮ್ಮ ಪ್ರಭುವಾದ ಮತ್ತು ರಕ್ಷಕನಾದ ಯೇಸು ಕ್ರಿಸ್ತನ ಕೃಪೆಯಲ್ಲಿಯೂ ತಿಳುವಳಿಕೆಯಲ್ಲಿಯೂ ಬೆಳೆಯುತ್ತಲೇ ಇರಿ. ಆತನಿಗೆ ಈಗಲೂ ಎಂದೆಂದಿಗೂ ಮಹಿಮೆಯಾಗಲಿ! ಆಮೆನ್.
Kannada Holy Bible: Easy-to-Read Version. All rights reserved. © 1997 Bible League International