Revised Common Lectionary (Semicontinuous)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
130 ಯೆಹೋವನೇ, ಮಹಾ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದ್ದೇನೆ;
ಸಹಾಯಕ್ಕಾಗಿ ನಿನ್ನನ್ನೇ ಕೂಗಿಕೊಳ್ಳುತ್ತಿದ್ದೇನೆ.
2 ನನ್ನ ಒಡೆಯನೇ, ನನಗೆ ಕಿವಿಗೊಡು.
ನನ್ನ ಮೊರೆಯನ್ನು ಆಲಿಸು.
3 ಯೆಹೋವನೇ, ನೀನು ಮನುಷ್ಯರನ್ನು ಅವರೆಲ್ಲರ ಪಾಪಗಳಿಗೆ ತಕ್ಕಂತೆ ದಂಡಿಸಿದರೆ
ಒಬ್ಬನೂ ಜೀವಂತವಾಗಿ ಉಳಿಯಲಾರ.
4 ಯೆಹೋವನೇ, ನಿನ್ನ ಜನರನ್ನು ಕ್ಷಮಿಸು.
ಆಗ, ನಿನ್ನನ್ನು ಆರಾಧಿಸುವುದಕ್ಕೆ ಜನರಿರುವರು.
5 ನಾನು ಯೆಹೋವನ ಸಹಾಯಕ್ಕಾಗಿ ಕಾಯುತ್ತಿದ್ದೇನೆ.
ನನ್ನ ಪ್ರಾಣವು ಆತನಿಗಾಗಿ ಕಾದುಕೊಂಡಿರುವುದು.
ಆತನು ನುಡಿಯನ್ನು ನಂಬಿಕೊಂಡಿದ್ದೇನೆ.
6 ನಾನು ನನ್ನ ಒಡೆಯನಿಗಾಗಿ ಮುಂಜಾನೆಗೋಸ್ಕರ ಎದುರುನೋಡುತ್ತಿರುವ
ಕಾವಲುಗಾರರಂತೆ ನಿರೀಕ್ಷಿಸುತ್ತಿದ್ದೇನೆ.
7 ಇಸ್ರೇಲೇ, ಯೆಹೋವನಲ್ಲಿ ಭರವಸವಿಡು.
ಆತನಲ್ಲಿ ಮಾತ್ರ ನಿಜವಾದ ಪ್ರೀತಿಯಿದೆ.
ಆತನು ನಮ್ಮನ್ನು ಯಾವಾಗಲೂ ರಕ್ಷಿಸುವನು.
8 ಆತನೇ ಇಸ್ರೇಲರ ಎಲ್ಲಾ ಪಾಪಗಳನ್ನು ಕ್ಷಮಿಸುವನು.
25 ಜನರು ಅಬ್ಷಾಲೋಮನನ್ನು, ಅವನ ಸುಂದರ ರೂಪಕ್ಕಾಗಿ ಬಹಳ ಹೊಗಳುತ್ತಿದ್ದರು. ಇಸ್ರೇಲಿನಲ್ಲಿ ಅವನಷ್ಟು ರೂಪವಂತನು ಬೇರೆ ಯಾರೂ ಇರಲಿಲ್ಲ. ಅಬ್ಷಾಲೋಮನ ತಲೆಯಿಂದ ಪಾದಗಳವರೆಗೆ ಯಾವ ಕಳಂಕವೂ ಇರಲಿಲ್ಲ. 26 ಪ್ರತಿ ವರ್ಷಾಂತ್ಯದಲ್ಲಿಯೂ ಅಬ್ಷಾಲೋಮನು ತನ್ನ ತಲೆಕೂದಲನ್ನು ಕತ್ತರಿಸಿ ಅದನ್ನು ತೂಕ ಮಾಡಿಸುತ್ತಿದ್ದನು. ಅವನ ತಲೆಕೂದಲು ಐದು ಪೌಂಡುಗಳಷ್ಟು ಭಾರವಾಗಿರುತ್ತಿತ್ತು. 27 ಅಬ್ಷಾಲೋಮನಿಗೆ ಮೂವರು ಗಂಡುಮಕ್ಕಳು ಮತ್ತು ಒಬ್ಬ ಮಗಳು ಇದ್ದರು. ಮಗಳ ಹೆಸರು ತಾಮಾರ್; ಈಕೆಯು ಬಹು ಸುಂದರಿಯಾಗಿದ್ದಳು.
ಯೋವಾಬನು ಬಂದು ತನ್ನನ್ನು ನೋಡಬೇಕೆಂದು ಅಬ್ಷಾಲೋಮನು ಒತ್ತಾಯಿಸಿದ್ದು
28 ಅಬ್ಷಾಲೋಮನು ಎರಡು ವರ್ಷಗಳ ಕಾಲ ಜೆರುಸಲೇಮಿನಲ್ಲಿ ಇದ್ದನು. ಆದರೂ ರಾಜನಾದ ದಾವೀದನನ್ನು ಭೇಟಿಯಾಗಲು ಅವನಿಗೆ ಅವಕಾಶ ದೊರಕಲಿಲ್ಲ. 29 ಆದ್ದರಿಂದ ಅಬ್ಷಾಲೋಮನು ಯೋವಾಬನ ಬಳಿಗೆ ಸಂದೇಶಕರನ್ನು ಕಳುಹಿಸಿದನು. ಅಬ್ಷಾಲೋಮನನ್ನು ರಾಜನ ಹತ್ತಿರಕ್ಕೆ ಕಳುಹಿಸಿ ಕೊಡುವಂತೆ ಈ ಸಂದೇಶಕರು ಯೋವಾಬನನ್ನು ಕೇಳಿದರು. ಆದರೆ ಯೋವಾಬನು ಅಬ್ಷಾಲೋಮನ ಬಳಿಗೆ ಬರಲಿಲ್ಲ. ಅಬ್ಷಾಲೋಮನು ಎರಡನೆಯ ಬಾರಿ ಸಂದೇಶವನ್ನು ಕಳುಹಿಸಿದನು. ಆದರೂ ಯೋವಾಬನು ಬರಲಿಲ್ಲ.
30 ಆಗ ಅಬ್ಷಾಲೋಮನು ತನ್ನ ಸೇವಕರಿಗೆ, “ನೋಡಿರಿ, ನನ್ನ ಹೊಲದ ಪಕ್ಕದಲ್ಲಿ ಯೋವಾಬನ ಹೊಲವಿದೆ. ಅವನು ಆ ಹೊಲದಲ್ಲಿ ಜವೆಗೋಧಿಯನ್ನು ಬೆಳೆದಿದ್ದಾನೆ. ಹೋಗಿ ಆ ಜವೆಗೋಧಿಯನ್ನು ಸುಟ್ಟುಬಿಡಿರಿ” ಎಂದು ಹೇಳಿದನು.
ಅಬ್ಷಾಲೋಮನ ಸೇವಕರು ಹೋಗಿ ಯೋವಾಬನ ಹೊಲದಲ್ಲಿ ಬೆಂಕಿಯನ್ನು ಹಚ್ಚಿದರು. 31 ಆಗ ಯೋವಾಬನು ಅಬ್ಷಾಲೋಮನ ಮನೆಗೆ ಬಂದನು. ಯೋವಾಬನು ಅಬ್ಷಾಲೋಮನಿಗೆ, “ನಿನ್ನ ಸೇವಕರು ನನ್ನ ಹೊಲವನ್ನು ಏಕೆ ಸುಟ್ಟರು?” ಎಂದು ಕೇಳಿದನು.
32 ಅಬ್ಷಾಲೋಮನು ಯೋವಾಬನಿಗೆ, “ನಾನು ನಿನಗೆ ಸಂದೇಶವನ್ನು ಕಳುಹಿಸಿ ಇಲ್ಲಿಗೆ ಬರಲು ಹೇಳಿ ಕಳುಹಿಸಿದ್ದೆನು. ರಾಜನ ಬಳಿಗೆ ನಿನ್ನನ್ನು ಕಳುಹಿಸಲು ನಾನು ಅಪೇಕ್ಷಿಸಿದೆನು. ಗೆಷೂರಿನಿಂದ ನನ್ನನ್ನು ಮನೆಗೆ ಕರೆಸಲು ಅವನು ಇಚ್ಛಿಸಿದ್ದು ಏಕೆ ಎಂಬುದನ್ನು ನೀನು ಕೇಳಬೇಕೆಂದು ನಾನು ಅಪೇಕ್ಷಿಸಿದೆನು. ನಾನು ಅವನನ್ನು ನೋಡಲಾಗದಿದ್ದರೆ ಗೆಷೂರಿನಲ್ಲಿ ವಾಸಿಸುವುದೇ ನನಗೆ ಚೆನ್ನಾಗಿರುತ್ತಿತ್ತು. ಈಗ ರಾಜನನ್ನು ನೋಡಲು ನನಗೆ ಅವಕಾಶವನ್ನು ಕೊಡು. ನಾನು ಪಾಪವನ್ನು ಮಾಡಿದ್ದರೆ ಅವನು ನನ್ನನ್ನು ಕೊಂದುಬಿಡಲಿ!” ಎಂದನು.
ರಾಜನಾದ ದಾವೀದನನ್ನು ಅಬ್ಷಾಲೋಮನು ಭೇಟಿಮಾಡಿದ್ದು
33 ಯೋವಾಬನು ರಾಜನ ಬಳಿಗೆ ಅಬ್ಷಾಲೋಮನು ಹೇಳಿದ್ದನ್ನೆಲ್ಲ ತಿಳಿಸಿದನು. ರಾಜನು ಅಬ್ಷಾಲೋಮನನ್ನು ಕರೆಸಿದನು. ಅಬ್ಷಾಲೋಮನು ರಾಜನ ಬಳಿಗೆ ಬಂದನು. ರಾಜನ ಎದುರಿನಲ್ಲಿ ಅಬ್ಷಾಲೋಮನು ಸಾಷ್ಟಾಂಗನಮಸ್ಕಾರ ಮಾಡಿದನು. ರಾಜನು ಅಬ್ಷಾಲೋಮನಿಗೆ ಮುದ್ದಿಟ್ಟನು.
ಒಬ್ಬರಿಗೊಬ್ಬರು ಸಹಾಯ ಮಾಡಿರಿ
6 ಸಹೋದರ ಸಹೋದರಿಯರೇ, ನಿಮ್ಮ ಸಭೆಯಲ್ಲಿ ಯಾವನಾದರೂ ತಪ್ಪು ಮಾಡಿದರೆ, ಆತ್ಮಿಕರಾದ ನೀವು ಅವನ ಬಳಿಗೆ ಹೋಗಿ ಸೌಮ್ಯತೆಯಿಂದ ಅವನನ್ನು ತಿದ್ದಿ ಸರಿಪಡಿಸಬೇಕು. ಆದರೆ ಎಚ್ಚರಿಕೆಯಿಂದಿರಿ! ನೀವು ಸಹ ಶೋಧನೆಗೊಳಗಾಗಿ ಪಾಪಕ್ಕೆ ಬೀಳುವ ಸಾಧ್ಯವಿದೆ. 2 ನಿಮ್ಮ ಭಾರವಾದ ಹೊರೆಗಳನ್ನು ಹೊರಲು ಒಬ್ಬರಿಗೊಬ್ಬರು ಸಹಾಯಮಾಡಿರಿ. ಹೀಗೆ ನೀವು ಕ್ರಿಸ್ತನ ಆಜ್ಞೆಯನ್ನು ನಿಜವಾಗಿಯೂ ಅನುಸರಿಸಿರಿ. 3 ಯಾವನಾದರೂ ತಾನು ಪ್ರಾಮುಖ್ಯನಲ್ಲದಿದ್ದರೂ ತನ್ನನ್ನು ಪ್ರಾಮುಖ್ಯನೆಂದು ಭಾವಿಸಿಕೊಂಡರೆ ಅವನು ತನ್ನನ್ನೇ ಮೋಸಪಡಿಸಿಕೊಳ್ಳುತ್ತಾನೆ. ಒಬ್ಬನು ತನ್ನನ್ನು ಮತ್ತೊಬ್ಬನೊಡನೆ ಹೋಲಿಸಿಕೊಳ್ಳಕೂಡದು. 4 ಪ್ರತಿಯೊಬ್ಬನು ತನ್ನ ನಡತೆಯನ್ನು ತಾನೇ ವಿಮರ್ಶಿಸಿಕೊಳ್ಳಲಿ. ಆಗ ತಾನೇನಾದರೂ ಹೆಚ್ಚಳಪಡುವಂತ ಕಾರ್ಯಗಳನ್ನು ಮಾಡಿದ್ದರೆ ಅವನಿಗೆ ತಿಳಿಯುವುದು. 5 ಪ್ರತಿಯೊಬ್ಬನು ತನ್ನ ಜವಾಬ್ದಾರಿಕೆಯನ್ನು ತಾನೇ ಹೊತ್ತುಕೊಳ್ಳಬೇಕು.
ಜೀವನವು ಜಮೀನಿನಲ್ಲಿ ಬಿತ್ತುವಂತಿದೆ
6 ದೇವರ ವಾಕ್ಯವನ್ನು ಕಲಿತುಕೊಳ್ಳುವವನು, (ತನಗೆ) ಕಲಿಸುವವನಿಗೆ ತನ್ನಲ್ಲಿರುವ ಎಲ್ಲಾ ಒಳ್ಳೆತನಗಳಲ್ಲಿ ಪಾಲು ಕೊಡತಕ್ಕದ್ದು.
7 ಮೋಸಹೋಗಬೇಡಿರಿ! ನೀವು ದೇವರನ್ನು ವಂಚಿಸಲು ಸಾಧ್ಯವಿಲ್ಲ. ಒಬ್ಬನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯುತ್ತಾನೆ. 8 ಒಬ್ಬನು ತನ್ನ ಶರೀರಭಾವವನ್ನು ತೃಪ್ತಿಪಡಿಸುವುದಕ್ಕಾಗಿ ಪಾಪ ಕಾರ್ಯಗಳನ್ನು ಮಾಡಿದರೆ ಆ ಶರೀರಭಾವವು ಅವನಿಗೆ ನಿತ್ಯನಾಶವನ್ನು ಬರಮಾಡುತ್ತದೆ. ಆದರೆ ಒಬ್ಬನು ಪವಿತ್ರಾತ್ಮನನ್ನು ಮೆಚ್ಚಿಸುವುದಕ್ಕಾಗಿ ಒಳ್ಳೆಯ ಕಾರ್ಯಗಳನ್ನು ಮಾಡುವುದಾಗಿದ್ದರೆ, ಅವನು ಪವಿತ್ರಾತ್ಮನಿಂದ ನಿತ್ಯಜೀವವನ್ನು ಹೊಂದಿಕೊಳ್ಳುವನು. 9 ನಾವು ಒಳ್ಳೆಯ ಕಾರ್ಯ ಮಾಡುವುದರಲ್ಲಿ ಬೇಸರಗೊಳ್ಳಬಾರದು. ತಕ್ಕ ಸಮಯದಲ್ಲಿ ನಾವು ನಿತ್ಯಜೀವವೆಂಬ ಸುಗ್ಗಿಯನ್ನು ಪಡೆಯುವೆವು. ಆದ್ದರಿಂದ ಒಳ್ಳೆಯ ಕಾರ್ಯ ಮಾಡುವುದನ್ನು ನಾವು ಬಿಟ್ಟುಬಿಡಬಾರದು. 10 ಯಾರಿಗಾದರೂ ಒಳ್ಳೆಯದನ್ನು ಮಾಡಲು ಅವಕಾಶವಿರುವಾಗ ನಾವು ಮಾಡಲೇಬೇಕು. ಅದರಲ್ಲೂ ಒಂದೇ ಕುಟುಂಬದವರಂತಿರುವ ವಿಶ್ವಾಸಿಗಳ ಬಗ್ಗೆ ನಾವು ವಿಶೇಷವಾದ ಗಮನ ಕೊಡಬೇಕು.
Kannada Holy Bible: Easy-to-Read Version. All rights reserved. © 1997 Bible League International