Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 50:16-23

16 ದೇವರು ದುಷ್ಟರಿಗೆ ಹೀಗೆನ್ನುವನು:
    “ನೀವು ನನ್ನ ಕಟ್ಟಳೆಗಳ ಕುರಿತು ಮಾತಾಡುವಿರಿ;
    ನನ್ನ ಒಡಂಬಡಿಕೆಯ ಕುರಿತು ಮಾತಾಡುವಿರಿ.
17 ಹೀಗಿರಲು ನೀವು ನನ್ನ ಸುಶಿಕ್ಷಣವನ್ನು ದ್ವೇಷಿಸುವುದೇಕೆ?
    ನಾನು ಹೇಳುವುದನ್ನು ನೀವು ತುಚ್ಛೀಕರಿಸುವುದೇಕೆ?
18 ನೀವು ಕಳ್ಳನನ್ನು ಕಂಡು ಅವನೊಂದಿಗೆ ಸೇರಿಕೊಳ್ಳಲು ಓಡಿಹೋಗುವಿರಿ;
    ವ್ಯಭಿಚಾರಿಗಳ ಒಡನಾಟ ಮಾಡುವಿರಿ.
19 ನಿಮ್ಮ ಬಾಯಿಂದ ಕೇಡನ್ನು ಕಲ್ಪಿಸುವಿರಿ.
    ನಿಮ್ಮ ನಾಲಿಗೆಯಿಂದ ಮೋಸವನ್ನು ನೇಯುವಿರಿ.
20 ಬೇರೆಯವರ ಮೇಲೆಯೂ ನಿಮ್ಮ ಸಹೋದರರ ಮೇಲೆಯೂ
    ಕೆಟ್ಟದ್ದನ್ನು ಹೇಳುತ್ತಲೇ ಇರುತ್ತೀರಿ.
21 ನೀವು ಹೀಗೆ ಮಾಡಿದರೂ ನಾನು ಮೌನವಾಗಿದ್ದೆನು.
    ಆದ್ದರಿಂದ ನಾನೂ ನಿಮ್ಮಂಥವನೆಂದು ನೀವು ಆಲೋಚಿಸಿಕೊಂಡಿರಿ.
ಈಗಲಾದರೋ ನಾನು ಮೌನವಾಗಿರುವುದಿಲ್ಲ!
    ಎಲ್ಲವನ್ನು ನಿಮಗೆ ವಿವರಿಸಿ ನಿಮ್ಮ ಮುಂದೆಯೇ ನಿಮ್ಮನ್ನು ಟೀಕಿಸುವೆನು!
22 ದೇವರನ್ನು ಮರೆತುಬಿಟ್ಟವರೇ,
    ಇದನ್ನು ಗಮನಕ್ಕೆ ತಂದುಕೊಳ್ಳಿರಿ.
ಇಲ್ಲವಾದರೆ ನಿಮ್ಮನ್ನು ತುಂಡುತಂಡು ಮಾಡುವೆನು;
    ಯಾರೂ ನಿಮ್ಮನ್ನು ರಕ್ಷಿಸಲಾರರು!
23 ನನಗೆ ಕೃತಜ್ಞತಾಯಜ್ಞವನ್ನು ಅರ್ಪಿಸುವವನೇ ನನ್ನನ್ನು ಸನ್ಮಾನಿಸುವವನು.
    ಆದರೆ ನೀತಿವಂತನಾಗಿ ಜೀವಿಸುವವನಿಗೆ ನನ್ನ ರಕ್ಷಣಾಶಕ್ತಿಯನ್ನು ತೋರಿಸುವೆನು.”

2 ಸಮುವೇಲನು 13:20-36

20 ತಾಮಾರಳ ಸೋದರನಾದ ಅಬ್ಷಾಲೋಮನು ತಾಮಾರಳಿಗೆ, “ನಿನ್ನ ಸೋದರನಾದ ಅಮ್ನೋನನು ನಿನ್ನನ್ನು ಕೆಡಿಸಿ ಬಿಟ್ಟನಲ್ಲವೇ? ಅಮ್ನೋನನು ನಿನ್ನ ಸೋದರ. ತಂಗಿಯೇ, ಈಗ ಸದ್ಯಕ್ಕೆ ಸುಮ್ಮನಿರು. ಇದರಿಂದ ನೀನು ಹೆಚ್ಚು ಗಲಿಬಿಲಿಯಾಗದಿರು” ಎಂದು ಹೇಳಿದನು. ತಾಮಾರಳು ಏನನ್ನೂ ಹೇಳಲಿಲ್ಲ. ಅವಳು ಅಬ್ಷಾಲೋಮನ ಮನೆಯಲ್ಲಿ ವಾಸಿಸಲು ಹೋದಳು.

21 ರಾಜನಾದ ದಾವೀದನಿಗೆ ಈ ವರ್ತಮಾನವು ತಿಳಿದು ಬಹಳ ಕೋಪಗೊಂಡನು. 22 ಅಬ್ಷಾಲೋಮನು ಅಮ್ನೋನನನ್ನು ದ್ವೇಷಿಸಿದನು. ಅಬ್ಷಾಲೋಮನು ಒಳ್ಳೆಯದನ್ನಾಗಲಿ ಕೆಟ್ಟದ್ದನ್ನಾಗಲಿ ಏನನ್ನೂ ಅಮ್ನೋನನಿಗೆ ಹೇಳಲಿಲ್ಲ. ಅಮ್ನೋನನು ತನ್ನ ತಂಗಿಯಾದ ತಾಮಾರಳನ್ನು ಕೆಡಿಸಿದ್ದಕ್ಕಾಗಿ ಅಬ್ಷಾಲೋಮನು ಅಮ್ನೋನನನ್ನು ದ್ವೇಷಿಸಿದನು.

ಅಬ್ಷಾಲೋಮನ ಪ್ರತೀಕಾರ

23 ಎರಡು ವರ್ಷಗಳ ನಂತರ, ಅಬ್ಷಾಲೋಮನ ಕುರಿಗಳ ತುಪ್ಪಟವನ್ನು ಕತ್ತರಿಸುವುದಕ್ಕಾಗಿ ಕೆಲವು ಜನರು ಬಾಳ್‌ಹಾಚೋರಿಗೆ ಬಂದರು. ಇದನ್ನು ಬಂದು ನೋಡುವಂತೆ ರಾಜನ ಮಕ್ಕಳಿಗೆಲ್ಲ ಅಬ್ಷಾಲೋಮನು ಆಹ್ವಾನವನ್ನು ನೀಡಿದನು. 24 ಅಬ್ಷಾಲೋಮನು ರಾಜನ ಬಳಿಗೆ ಹೋಗಿ, “ನನ್ನ ಕುರಿಗಳ ತುಪ್ಪಟವನ್ನು ಕತ್ತರಿಸಲು ಕೆಲವು ಜನರು ಬರುತ್ತಾರೆ. ದಯವಿಟ್ಟು ನೀವು ನಿಮ್ಮ ಸೇವಕರೊಂದಿಗೆ ಬಂದು ಅದನ್ನು ಗಮನಿಸಿ” ಎಂದನು.

25 ರಾಜನಾದ ದಾವೀದನು ಅಬ್ಷಾಲೋಮನಿಗೆ, “ಮಗನೇ, ನಾವೆಲ್ಲ ಬರುವುದಿಲ್ಲ. ಅದು ನಿನಗೆ ಬಹಳ ತೊಂದರೆಯಾಗುತ್ತದೆ” ಎಂದು ಹೇಳಿದನು.

ಅಬ್ಷಾಲೋಮನು ಬೇಡಿಕೊಂಡರೂ ದಾವೀದನು ಹೋಗಲಿಲ್ಲ; ಆದರೆ ದಾವೀದನು ಅವನನ್ನು ಆಶೀರ್ವದಿಸಿದನು.

26 ಅಬ್ಷಾಲೋಮನು, “ನೀನು ಬರಲು ಇಚ್ಛಿಸದಿದ್ದರೆ, ದಯವಿಟ್ಟು ನನ್ನ ಸೋದರನಾದ ಅಮ್ನೋನನನ್ನು ಕಳುಹಿಸು” ಎಂದು ಕೇಳಿದನು.

ರಾಜನಾದ ದಾವೀದನು ಅಬ್ಷಾಲೋಮನಿಗೆ, “ನಿನ್ನ ಜೊತೆಯಲ್ಲಿ ಅವನೇಕೆ ಬರಬೇಕು?” ಎಂದನು.

27 ಅಬ್ಷಾಲೋಮನು ದಾವೀದನನ್ನು ಬಹಳವಾಗಿ ಬೇಡಿಕೊಂಡನು. ಕೊನೆಗೆ ದಾವೀದನು ಅಮ್ನೋನನನ್ನು ಮತ್ತು ರಾಜನ ಗಂಡುಮಕ್ಕಳೆಲ್ಲರನ್ನು ಅಬ್ಷಾಲೋಮನ ಜೊತೆಯಲ್ಲಿ ಹೋಗಲು ಹೇಳಿದನು.

ಅಮ್ನೋನನನ್ನು ಕೊಂದುಹಾಕಿದ್ದು

28 ಆಗ ಅಬ್ಷಾಲೋಮನು ತನ್ನ ಸೇವಕರಿಗೆ ಈ ರೀತಿ ಆಜ್ಞೆ ಮಾಡಿದನು: “ಅಮ್ನೋನನನ್ನು ಗಮನಿಸುತ್ತಿರಿ. ಅವನು ಮತ್ತನಾಗಿ ಆನಂದಿಸುತ್ತಿರುವಾಗ ನಾನು ಆಜ್ಞೆಯನ್ನು ಕೊಡುತ್ತೇನೆ. ಆಗ ನೀವು ಅವನ ಮೇಲೆ ಆಕ್ರಮಣಮಾಡಿ ಕೊಲ್ಲಬೇಕು. ನಿಮಗೆ ಶಿಕ್ಷೆಯಾಗುತ್ತದೆ ಎಂಬ ಭಯವಿಲ್ಲದಿರಲಿ, ಯಾಕೆಂದರೆ ನೀವು ನನ್ನ ಆಜ್ಞೆಯನ್ನು ಪಾಲಿಸಿದಿರಷ್ಟೇ, ಆದ್ದರಿಂದ ಶಕ್ತರಾಗಿಯೂ ಧೈರ್ಯವಂತರಾಗಿಯೂ ಇರಿ” ಎಂದನು.

29 ಅಬ್ಷಾಲೋಮನ ಸೇವಕರು ಅವನ ಆಜ್ಞೆಯಂತೆ ಅಮ್ನೋನನನ್ನು ಕೊಂದುಬಿಟ್ಟರು. ಆದರೆ ದಾವೀದನ ಇತರ ಗಂಡುಮಕ್ಕಳೆಲ್ಲರೂ ತಮ್ಮತಮ್ಮ ಹೇಸರಕತ್ತೆಗಳನ್ನೇರಿ ತಪ್ಪಿಸಿಕೊಂಡರು.

ಅಮ್ನೋನನ ಮರಣದ ಸುದ್ದಿಯು ದಾವೀದನಿಗೆ ಮುಟ್ಟಿತು

30 ರಾಜನ ಗಂಡುಮಕ್ಕಳು ತಮ್ಮ ಮಾರ್ಗದಲ್ಲಿ ಬರುತ್ತಿರುವಾಗಲೇ ದಾವೀದನಿಗೆ ಈ ಸುದ್ದಿಯು ತಲುಪಿತು. “ಅಬ್ಷಾಲೋಮನು ರಾಜನ ಮಕ್ಕಳೆಲ್ಲರನ್ನೂ ಕೊಂದುಹಾಕಿದನು; ಒಬ್ಬ ಮಗನನ್ನೂ ಜೀವಂತವಾಗಿ ಬಿಟ್ಟಿಲ್ಲ” ಎಂಬುದೇ ಆ ಸುದ್ದಿ.

31 ರಾಜನಾದ ದಾವೀದನು ಬಟ್ಟೆಗಳನ್ನು ಹರಿದುಕೊಂಡು ನೆಲದ ಮೇಲೆ ಬಿದ್ದನು. ದಾವೀದನ ಸುತ್ತಲೂ ನಿಂತಿದ್ದ ಅವನ ಸೇವಕರೂ ತಮ್ಮತಮ್ಮ ಬಟ್ಟೆಗಳನ್ನು ಹರಿದುಕೊಂಡರು.

32 ಆದರೆ ದಾವೀದನ ಅಣ್ಣನಾದ ಶಿಮ್ಮನ ಮಗ ಯೋನಾದಾಬನು ದಾವೀದನಿಗೆ, “ರಾಜನ ಗಂಡುಮಕ್ಕಳೆಲ್ಲರನ್ನೂ ಕೊಂದುಹಾಕಿದರೆಂದು ಯೋಚಿಸುವುದು ಸರಿಯಲ್ಲ. ಅಮ್ನೋನನು ಮಾತ್ರ ಸತ್ತಿರಬೇಕು. ಅಬ್ಷಾಲೋಮನ ತಂಗಿಯಾದ ತಾಮಾರಳನ್ನು ಅಮ್ನೋನನು ಕೆಡಿಸಿದ್ದಕ್ಕಾಗಿ ಅಬ್ಷಾಲೋಮನು ಆ ದಿನದಿಂದ ಅವನನ್ನು ಕೊಲ್ಲಲು ಸಂಚು ಮಾಡುತ್ತಿದ್ದನು. 33 ರಾಜನಾದ ನನ್ನ ಒಡೆಯನೇ, ರಾಜನ ಮಕ್ಕಳೆಲ್ಲರೂ ಸತ್ತರೆಂದು ಯೋಚಿಸಬೇಡ. ಅಮ್ನೋನನು ಮಾತ್ರ ಸತ್ತುಹೋದನು” ಎಂದನು.

34 ಅಬ್ಷಾಲೋಮನು ಓಡಿಹೋದನು.

ಆ ನಗರದ ಗೋಡೆಯ ಮೇಲೆ ಒಬ್ಬ ಕಾವಲುಗಾರನು ನಿಂತಿದ್ದನು. ಬೆಟ್ಟದ ಬೇರೊಂದು ಕಡೆಯಿಂದ ಅಂದರೆ ಹೋರೋನಿನ ಮಾರ್ಗವಾಗಿ ಅನೇಕ ಜನರು ಬರುತ್ತಿರುವುದನ್ನು ಅವನು ನೋಡಿದನು. 35 ಯೋನಾದಾಬನು ರಾಜನಾದ ದಾವೀದನಿಗೆ, “ನಾನು ಹೇಳಿದ್ದು ಸರಿ. ಅಲ್ಲಿ ನೋಡು, ರಾಜನ ಗಂಡುಮಕ್ಕಳೆಲ್ಲರೂ ಬರುತ್ತಿದ್ದಾರೆ” ಎಂದನು.

36 ಯೋನಾದಾಬನು ಈ ಮಾತುಗಳನ್ನು ಹೇಳಿ ಮುಗಿಸುವಷ್ಟರಲ್ಲಿ ರಾಜನ ಗಂಡುಮಕ್ಕಳೆಲ್ಲರೂ ಬಂದರು. ಅವರು ಗಟ್ಟಿಯಾಗಿ ಅಳುತ್ತಿದ್ದರು. ದಾವೀದನು ಮತ್ತು ಅವನ ಸೇವಕರೆಲ್ಲ ಅಳರಾಂಭಿಸಿದರು. ಅವರೆಲ್ಲರೂ ಮತ್ತಷ್ಟು ಜೋರಾಗಿ ಗೋಳಾಡಿದರು.

ಮಾರ್ಕ 8:1-10

ನಾಲ್ಕು ಸಾವಿರಕ್ಕಿಂತ ಹೆಚ್ಚು ಜನರಿಗೆ ಆಹಾರದಾನ

(ಮತ್ತಾಯ 15:32-39)

ಇನ್ನೊಂದು ಸಮಯದಲ್ಲಿ ಯೇಸುವಿನ ಜೊತೆಯಲ್ಲಿ ಅನೇಕ ಜನರಿದ್ದರು. ಆ ಜನರ ಬಳಿ ಊಟಕ್ಕೆ ಏನೂ ಇರಲಿಲ್ಲ. ಆದ್ದರಿಂದ ಯೇಸು ತನ್ನ ಶಿಷ್ಯರನ್ನು ಕರೆದು, “ನಾನು ಈ ಜನರಿಗಾಗಿ ಕನಿಕರಪಡುತ್ತೇನೆ. ಇವರು ಮೂರು ದಿನಗಳಿಂದ ನನ್ನ ಜೊತೆಯಲ್ಲಿದ್ದಾರೆ. ಇವರ ಬಳಿ ಊಟಕ್ಕೆ ಏನೂ ಇಲ್ಲ. ಇವರು ಏನನ್ನೂ ತಿನ್ನದೆ ಹಸಿವೆಯಲ್ಲಿಯೇ ಹೊರಟರೆ ದಾರಿಯಲ್ಲಿ ಬಳಲಿ ಹೋಗುವರು. ಈ ಜನರಲ್ಲಿ ಕೆಲವರು ಬಹಳ ದೂರದಿಂದ ಬಂದಿದ್ದಾರೆ” ಎಂದು ಹೇಳಿದನು.

ಅದಕ್ಕೆ ಶಿಷ್ಯರು, “ಇಲ್ಲಿಗೆ ಯಾವ ಊರೂ ಸಮೀಪದಲ್ಲಿಲ್ಲ. ಈ ಜನರಿಗೆಲ್ಲಾ ಸಾಕಾಗುವಷ್ಟು ರೊಟ್ಟಿಯನ್ನು ನಾವು ಎಲ್ಲಿಂದ ತರಲು ಸಾದ್ಯ?” ಎಂದು ಉತ್ತರಿಸಿದರು.

ಯೇಸು, “ನಿಮ್ಮ ಬಳಿ ಎಷ್ಟು ರೊಟ್ಟಿಗಳಿವೆ?” ಎಂದು ಅವರನ್ನು ಕೇಳಿದನು.

ಅದಕ್ಕೆ ಶಿಷ್ಯರು, “ನಮ್ಮ ಬಳಿ ಏಳು ರೊಟ್ಟಿಗಳಿವೆ” ಎಂದು ಉತ್ತರಿಸಿದರು.

ಯೇಸು ಆ ಜನರಿಗೆ ನೆಲದ ಮೇಲೆ ಕುಳಿತುಕೊಳ್ಳುವಂತೆ ಹೇಳಿದನು. ನಂತರ ಆ ಏಳು ರೊಟ್ಟಿಗಳನ್ನು ತೆಗೆದುಕೊಂಡು, ದೇವರಿಗೆ ಸ್ತೋತ್ರಸಲ್ಲಿಸಿ ಅವುಗಳನ್ನು ಮುರಿದು, ತನ್ನ ಶಿಷ್ಯರಿಗೆ ಕೊಟ್ಟು, ಅವುಗಳನ್ನು ಜನರಿಗೆ ಹಂಚಬೇಕೆಂದು ಹೇಳಿದನು. ಶಿಷ್ಯರು ಹಾಗೆಯೇ ಮಾಡಿದರು. ಶಿಷ್ಯರ ಬಳಿ ಕೆಲವು ಸಣ್ಣ ಮೀನುಗಳೂ ಇದ್ದವು. ಯೇಸು ಆ ಮೀನುಗಳಿಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿ ಅವುಗಳನ್ನೂ ಜನರಿಗೆ ಕೊಡಬೇಕೆಂದು ಶಿಷ್ಯರಿಗೆ ಹೇಳಿದನು.

ಜನರೆಲ್ಲರೂ ಊಟಮಾಡಿ ತೃಪ್ತರಾದರು. ನಂತರ ತಿನ್ನದೆ ಉಳಿದಿದ್ದ ಆಹಾರದ ಚೂರುಗಳನ್ನು ಶಿಷ್ಯರು ಶೇಖರಿಸಿದಾಗ ಏಳು ಬುಟ್ಟಿಗಳು ತುಂಬಿಹೋದವು. ಅಲ್ಲಿ ಊಟ ಮಾಡಿದವರಲ್ಲಿ ಸುಮಾರು ನಾಲ್ಕು ಸಾವಿರ ಗಂಡಸರಿದ್ದರು. ಅವರು ಊಟಮಾಡಿದ ಮೇಲೆ, ಯೇಸು ಅವರನ್ನು ಕಳುಹಿಸಿಕೊಟ್ಟನು. 10 ಬಳಿಕ ಆತನು ತನ್ನ ಶಿಷ್ಯರೊಂದಿಗೆ ದೋಣಿಯನ್ನು ಹತ್ತಿ ದಲ್ಮನೂಥ ಪ್ರದೇಶಕ್ಕೆ ಹೋದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International