Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 51:1-12

ದಾವೀದನು ಬತ್ಷೆಬಳೊಂದಿಗೆ ವ್ಯಭಿಚಾರ ಮಾಡಿದಾಗ ಪ್ರವಾದಿಯಾದ ನಾತಾನನು ದಾವೀದನ ಬಳಿಗೆ ಹೋಗಿ ದೇವರ ನ್ಯಾಯತೀರ್ಪನ್ನು ಹೇಳುತ್ತಾನೆ. ಆಗ ಈ ಕೀರ್ತನೆ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

51 ಪ್ರೀತಿಸ್ವರೂಪನಾದ ದೇವರೇ, ನನಗೆ ಕರುಣೆತೋರು;
    ಕರುಣಾನಿಧಿಯೇ, ನನ್ನ ಪಾಪಗಳನ್ನೆಲ್ಲಾ ಅಳಿಸಿಬಿಡು.
ನನ್ನ ದೋಷವನ್ನು ತೊಳೆದುಬಿಡು.
    ನನ್ನ ಪಾಪವನ್ನು ಪರಿಹರಿಸಿ ನನ್ನನ್ನು ಮತ್ತೆ ಶುದ್ಧೀಕರಿಸು!
ನಾನು ಪಾಪಮಾಡಿದ್ದೇನೆಂದು ನನಗೆ ಗೊತ್ತಿದೆ.
    ಆ ಪಾಪಗಳು ನನ್ನ ಮುಂದೆಯೇ ಇವೆ.
ನಿನ್ನ ದೃಷ್ಟಿಗೆ ಕೆಟ್ಟದ್ದಾಗಿದ್ದನ್ನೇ ಮಾಡಿದ್ದೇನೆ.
    ಹೌದು, ನಾನು ಪಾಪ ಮಾಡಿದ್ದು ನಿನಗೇ.
ನಾನು ತಪ್ಪಿತಸ್ಥನೆಂತಲೂ ನೀನು ನೀತಿವಂತನೆಂತಲೂ
    ಜನರಿಗೆ ಗೊತ್ತಾಗಲೆಂದೇ ಇವುಗಳನ್ನು ಅರಿಕೆಮಾಡಿಕೊಳ್ಳುತ್ತಿದ್ದೇನೆ.
    ನಿನ್ನ ತೀರ್ಪುಗಳು ನ್ಯಾಯಬದ್ಧವಾಗಿವೆ.
ಹುಟ್ಟಿದಂದಿನಿಂದ ನಾನು ಪಾಪಿಯೇ.
    ಮಾತೃಗರ್ಭವನ್ನು ಪ್ರವೇಶಿಸಿದ ದಿನದಿಂದ ನಾನು ದ್ರೋಹಿಯೇ.
ದೇವರೇ, ನಾನು ನಿನಗೆ ನಂಬಿಗಸ್ತನಾಗಿರಬೇಕೆಂಬುದೇ ನಿನ್ನ ಅಪೇಕ್ಷೆ.
    ಆದ್ದರಿಂದ ಸುಜ್ಞಾನದ ರಹಸ್ಯಗಳನ್ನು ನನಗೆ ಉಪದೇಶಿಸು.
ಹಿಸ್ಸೋಪ್ ಗಿಡದ ಬರಲಿನಿಂದ ನನ್ನನ್ನು ತೊಳೆದು ಶುದ್ಧೀಕರಿಸು;
    ನಾನು ಹಿಮಕ್ಕಿಂತಲೂ ಬಿಳುಪಾಗುವ ತನಕ ನನ್ನನ್ನು ತೊಳೆ!
ನನ್ನಲ್ಲಿ ಆನಂದವನ್ನೂ ಉಲ್ಲಾಸವನ್ನೂ ಬರಮಾಡು.
    ನೀನು ಜಜ್ಜಿಹಾಕಿದ ಮೂಳೆಗಳು ಮತ್ತೆ ಉಲ್ಲಾಸಿಸಲಿ!
ನನ್ನ ಪಾಪಗಳನ್ನು ನೋಡಬೇಡ!
    ಅವುಗಳನ್ನೆಲ್ಲ ಅಳಿಸಿಬಿಡು!
10 ದೇವರೇ, ನನ್ನಲ್ಲಿ ಶುದ್ಧ ಹೃದಯವನ್ನು ನಿರ್ಮಿಸು!
    ನನ್ನ ಆತ್ಮವನ್ನು ಮತ್ತೆ ಬಲಗೊಳಿಸಿ ನನ್ನನ್ನು ನೂತನಪಡಿಸು.
11 ನಿನ್ನ ಸನ್ನಿಧಿಯಿಂದ ನನ್ನನ್ನು ತಳ್ಳಿಬಿಡಬೇಡ!
    ನಿನ್ನ ಪವಿತ್ರಾತ್ಮನನ್ನು ನನ್ನಿಂದ ತೆಗೆಯಬೇಡ!
12 ನಿನ್ನ ರಕ್ಷಣೆಯಿಂದುಂಟಾಗುವ ಆನಂದವನ್ನು ನನಗೆ ಮತ್ತೆ ದಯಪಾಲಿಸು!
    ನಿನಗೆ ವಿಧೇಯನಾಗಿರಲು ನನ್ನ ಮನಸ್ಸನ್ನು ದೃಢಪಡಿಸು.

ಯೆಹೋಶುವನು 23

ಯೆಹೋಶುವನಿಂದ ಜನರಿಗೆ ಪ್ರೇರಣೆ

23 ಯೆಹೋವನು ಇಸ್ರೇಲರ ಶತ್ರುಗಳನ್ನು ಸದೆಬಡೆದು ಅವರಿಗೆ ವಿಶ್ರಾಂತಿಯನ್ನು ಕೊಟ್ಟನು. ಯೆಹೋವನು ಇಸ್ರೇಲನ್ನು ಸುರಕ್ಷಿತಗೊಳಿಸಿದನು. ಅನೇಕ ವರ್ಷಗಳು ಕಳೆದವು. ಯೆಹೋಶುವನು ಬಹಳ ಮುದುಕನಾದನು. ಆಗ ಯೆಹೋಶುವನು ಎಲ್ಲಾ ಹಿರಿಯನಾಯಕರನ್ನು, ಕುಟುಂಬದ ಮುಖ್ಯಸ್ಥರನ್ನು, ನ್ಯಾಯಾಧೀಶರನ್ನು ಮತ್ತು ಇಸ್ರೇಲರ ಅಧಿಕಾರಿಗಳನ್ನು ಸಭೆ ಸೇರಿಸಿದನು. ಯೆಹೋಶುವನು ಅವರಿಗೆ, “ನಾನು ಬಹಳ ಮುದುಕನಾಗಿದ್ದೇನೆ. ಯೆಹೋವನು ನಮ್ಮ ಶತ್ರುಗಳಿಗೆ ಏನು ಮಾಡಿದನೆಂಬುದು ನೀವು ನೋಡಿದ್ದೀರಿ. ನಮಗೆ ಸಹಾಯ ಮಾಡುವುದಕ್ಕಾಗಿ ನಮ್ಮ ದೇವರಾದ ಯೆಹೋವನು ನಮಗಾಗಿ ಯುದ್ಧಮಾಡಿದನು. ಪಶ್ಚಿಮದಲ್ಲಿ ಮೆಡಿಟರೇನಿಯನ್ ಸಮುದ್ರವನ್ನು ಮತ್ತು ಜೋರ್ಡನ್ ನದಿಯ ಮಧ್ಯದ ಪ್ರದೇಶವನ್ನು ನೀವು ಸ್ವಾಧೀನಪಡಿಸಿಕೊಳ್ಳಬಹುದೆಂದು ನಾನು ನಿಮಗೆ ತಿಳಿಸಿದ್ದನ್ನು ಸ್ಮರಿಸಿಕೊಳ್ಳಿ. ನಾನು ಆ ಪ್ರದೇಶವನ್ನು ನಿಮಗೆ ಕೊಡುವುದಾಗಿ ವಾಗ್ದಾನ ಮಾಡಿದ್ದೆ. ಆದರೆ ಇಲ್ಲಿಯವರೆಗೂ ಅದು ನಿಮ್ಮ ಅಧೀನಕ್ಕೆ ಬಂದಿಲ್ಲ. ಆದರೆ ನಿಮ್ಮ ದೇವರಾದ ಯೆಹೋವನು ಅಲ್ಲಿಯ ನಿವಾಸಿಗಳನ್ನು ಬಲವಂತದಿಂದ ಹೊರಡಿಸುತ್ತಾನೆ. ಆ ಪ್ರದೇಶವನ್ನು ನೀವು ಪಡೆದುಕೊಳ್ಳುತ್ತೀರಿ. ನಿಮ್ಮ ದೇವರಾದ ಯೆಹೋವನು ನಿಮಗಾಗಿ ಇದನ್ನು ಮಾಡುವುದಾಗಿ ವಾಗ್ದಾನ ಮಾಡಿದ್ದಾನೆ.

“ಯೆಹೋವನ ಆಜ್ಞೆಗಳನ್ನೆಲ್ಲಾ ಜಾಗರೂಕತೆಯಿಂದ ಕೈಕೊಂಡು ನಡೆಯಿರಿ. ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವ ಎಲ್ಲವನ್ನು ಪಾಲಿಸಿರಿ. ಆ ಧರ್ಮಶಾಸ್ತ್ರಕ್ಕೆ ವಿಮುಖರಾಗಬೇಡಿ. ಇಸ್ರೇಲರಲ್ಲದ ಕೆಲವು ಜನರು ನಮ್ಮೊಂದಿಗೆ ವಾಸಮಾಡಿಕೊಂಡಿದ್ದಾರೆ. ಅವರು ತಮ್ಮ ದೇವರುಗಳನ್ನೇ ಪೂಜಿಸುತ್ತಾರೆ. ಅವರೊಂದಿಗೆ ಸ್ನೇಹ ಮಾಡಬೇಡಿ. ಅವರ ದೇವರುಗಳ ಸೇವೆಯನ್ನಾಗಲಿ ಪೂಜೆಯನ್ನಾಗಲಿ ಮಾಡಬೇಡಿ. ಆ ದೇವರುಗಳ ಹೆಸರುಗಳ ಮೂಲಕ ಬೇಡಿಕೊಳ್ಳಬೇಡಿ. ಅವುಗಳ ಮೇಲೆ ಪ್ರಮಾಣ ಮಾಡಬೇಡಿ. ಅವುಗಳಿಗೆ ಅಡ್ಡಬಿದ್ದು ಪೂಜಿಸಬೇಡಿ. ನಿಮ್ಮ ದೇವರಾದ ಯೆಹೋವನನ್ನೇ ಅನುಸರಿಸಿಕೊಂಡಿರಿ. ಈವರೆಗೆ ನೀವು ಹೇಗಿದ್ದಿರೋ ಅದೇ ರೀತಿಯಲ್ಲಿ ಮುಂದೆಯೂ ಇರಿ.

“ದೊಡ್ಡದಾದ ಮತ್ತು ಪ್ರಬಲವಾದ ಜನಾಂಗಗಳನ್ನು ಸೋಲಿಸಲು ಯೆಹೋವನು ನಿಮಗೆ ನೆರವಾದನು. ಆತನು ಅವರನ್ನು ತನ್ನ ಬಲವುಳ್ಳ ಹಸ್ತದಿಂದ ಹೊರಗಟ್ಟಿದನು. ನಿಮ್ಮನ್ನು ಸೋಲಿಸಲು ಯಾವ ಜನಾಂಗಕ್ಕೂ ಸಾಧ್ಯವಿಲ್ಲ. 10 ಯೆಹೋವನ ಸಹಾಯದಿಂದ ನಿಮ್ಮಲ್ಲಿ ಒಬ್ಬ ಇಸ್ರೇಲಿಯು ಒಂದು ಸಾವಿರ ಮಂದಿ ಶತ್ರುಗಳನ್ನು ಸೋಲಿಸುವಂತಾಯಿತು; ಏಕೆಂದರೆ ನಿಮ್ಮ ದೇವರಾದ ಯೆಹೋವನು ನಿಮಗಾಗಿ ಯುದ್ಧ ಮಾಡುವುದಾಗಿ ಪ್ರಮಾಣ ಮಾಡಿದ್ದಾನೆ. 11 ಆದ್ದರಿಂದ ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸುವುದರಲ್ಲಿ ಬಹು ಎಚ್ಚರಿಕೆಯಿಂದಿರಿ.

12 “ಯೆಹೋವನನ್ನೇ ಅನುಸರಿಸಿರಿ. ಇಸ್ರೇಲಿಗೆ ಸೇರಿಲ್ಲದ ಅನ್ಯರೊಂದಿಗೆ ಸ್ನೇಹ ಮಾಡಬೇಡಿ. ಅವರ ಜನರನ್ನು ಮದುವೆಯಾಗಬೇಡಿ. ನೀವು ಅವರೊಂದಿಗೆ ಸ್ನೇಹ ಮಾಡಿದರೆ, 13 ನಿಮ್ಮ ದೇವರಾದ ಯೆಹೋವನು ಶತ್ರುಗಳನ್ನು ಸೋಲಿಸಲು ನಿಮಗೆ ಸಹಾಯ ಮಾಡುವುದಿಲ್ಲ, ಅವರು ನಿಮಗೆ ಉರುಲಿನಂತಾಗುತ್ತಾರೆ. ಹೊಗೆ ಮತ್ತು ಧೂಳು ನಿಮ್ಮ ಕಣ್ಣಿಗೆ ನೋವನ್ನುಂಟು ಮಾಡುವಂತೆ ಅವರು ನಿಮಗೆ ನೋವನ್ನುಂಟು ಮಾಡುತ್ತಾರೆ; ಈ ಒಳ್ಳೆಯ ದೇಶದಿಂದ ನಿಮ್ಮನ್ನು ಬಲಾತ್ಕಾರದಿಂದ ಹೊರಗಟ್ಟಲಾಗುವುದು. ನಿಮ್ಮ ದೇವರಾದ ಯೆಹೋವನು ಈ ದೇಶವನ್ನು ನಿಮಗೆ ಕೊಟ್ಟಿದ್ದಾನೆ. ಆದರೆ ಯೆಹೋವನ ಆಜ್ಞೆಯನ್ನು ಪಾಲಿಸದಿದ್ದಲ್ಲಿ ನೀವು ಇದನ್ನು ಕಳೆದುಕೊಳ್ಳಬೇಕಾಗುತ್ತದೆ.

14 “ನಾನು ಇಹಲೋಕ ಯಾತ್ರೆಯನ್ನು ಮುಗಿಸುವ ಕಾಲಬಂದಂತಿದೆ. ಯೆಹೋವನು ನಿಮಗಾಗಿ ಅನೇಕ ಮಹತ್ಕಾರ್ಯಗಳನ್ನು ಮಾಡಿದ್ದು ನಿಮಗೆ ಗೊತ್ತಿದೆ; ಅದನ್ನು ನೀವು ಮನಃಪೂರ್ವಕವಾಗಿ ನಂಬುತ್ತೀರಿ. ಆತನು ತನ್ನ ಯಾವ ವಾಗ್ದಾನವನ್ನೂ ನೆರವೇರಿಸದೆ ಬಿಟ್ಟಿಲ್ಲ. ಯೆಹೋವನು ನಮಗೆ ಮಾಡಿದ ಪ್ರತಿಯೊಂದು ವಾಗ್ದಾನವನ್ನು ನೆರವೇರಿಸಿದ್ದಾನೆ. 15 ನಿಮ್ಮ ದೇವರಾದ ಯೆಹೋವನು ಮಾಡಿದ ಪ್ರತಿಯೊಂದು ಒಳ್ಳೆಯ ವಾಗ್ದಾನವು ನೆರವೇರಿದೆ. ಅದೇ ರೀತಿಯಲ್ಲಿ ಯೆಹೋವನು ತನ್ನ ಉಳಿದ ವಾಗ್ದಾನವನ್ನು ನೆರವೇರಿಸುವನು. ನೀವು ತಪ್ಪುಗಳನ್ನು ಮಾಡಿದರೆ ನಿಮಗೆ ಕೆಟ್ಟದ್ದಾಗುವುದೆಂದೂ ಆತನು ನಿಮಗೆ ಕೊಟ್ಟ ಈ ಒಳ್ಳೆಯ ದೇಶದಿಂದ ಬಲವಂತವಾಗಿ ಹೊರಗಟ್ಟುವದಾಗಿಯೂ ಆತನು ಹೇಳಿದ್ದಾನೆ. 16 ನಿಮ್ಮ ದೇವರಾದ ಯೆಹೋವನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಪಾಲಿಸದೆ ಬೇರೆ ದೇವರುಗಳ ಸೇವೆಮಾಡಿದರೆ ಈ ದೇಶವನ್ನು ಕಳೆದುಕೊಳ್ಳುವಿರಿ. ನೀವು ಅನ್ಯದೇವರುಗಳನ್ನು ಪೂಜಿಸಬಾರದು. ಇಲ್ಲವಾದರೆ, ಯೆಹೋವನು ನಿಮ್ಮ ಮೇಲೆ ಬಹು ಕೋಪಗೊಂಡು ಆತನು ನಿಮಗೆ ಕೊಟ್ಟ ಈ ಒಳ್ಳೆಯ ದೇಶದಿಂದ ಬಲವಂತವಾಗಿ ಹೊರಡಿಸುವನು,” ಅಂದನು.

1 ಕೊರಿಂಥದವರಿಗೆ 11:27-34

27 ಹೀಗಿರಲಾಗಿ ಒಬ್ಬನು ಪ್ರಭುವಿನ ರೊಟ್ಟಿಯನ್ನು ತಿನ್ನುವಾಗ, ಪಾತ್ರೆಯಲ್ಲಿ ಕುಡಿಯುವಾಗ ಇವುಗಳ ನಿಜವಾದ ಅರ್ಥವನ್ನು ಕಾರ್ಯಗಳ ಮೂಲಕ ತೋರ್ಪಡಿಸಬೇಕು, ಇಲ್ಲವಾದರೆ ಅವನು ಪ್ರಭುವಿನ ದೇಹಕ್ಕೂ ರಕ್ತಕ್ಕೂ ದೋಷಿಯಾಗುತ್ತಾನೆ. 28 ಪ್ರತಿಯೊಬ್ಬ ವ್ಯಕ್ತಿಯು ರೊಟ್ಟಿಯನ್ನು ತಿನ್ನುವುದಕ್ಕಿಂತಲೂ ಪಾತ್ರೆಯಲ್ಲಿ ಕುಡಿಯುವುದಕ್ಕಿಂತಲೂ ಮುಂಚಿತವಾಗಿ ತನ್ನ ಹೃದಯವನ್ನು ಪರಿಶೀಲಿಸಿಕೊಳ್ಳಬೇಕು. 29 ಯಾವನಾದರೂ ಪ್ರಭುವಿನ ದೇಹವೆಂದು ಗುರುತಿಸದೆ ರೊಟ್ಟಿಯನ್ನು ತಿಂದರೆ ಮತ್ತು ದ್ರಾಕ್ಷಾರಸವನ್ನು ಕುಡಿದರೆ ಅವನು ತಿಂದದ್ದಕ್ಕೂ ಕುಡಿದದ್ದಕ್ಕೂ ದೋಷಿಯೆಂಬ ತೀರ್ಪಿಗೆ ಒಳಗಾಗುತ್ತಾನೆ. 30 ಆದಕಾರಣವೇ, ನಿಮ್ಮ ಸಭೆಯಲ್ಲಿರುವ ಅನೇಕರು ರೋಗಿಗಳೂ ಬಲಹೀನರೂ ಆಗಿದ್ದಾರೆ ಮತ್ತು ಅನೇಕರು ಸತ್ತು ಹೋದರು. 31 ಆದರೆ ನಮ್ಮನ್ನು ನಾವೇ ಪರಿಶೋಧಿಸಿಕೊಂಡರೆ ನ್ಯಾಯತೀರ್ಪಿಗೆ ಒಳಗಾಗುವುದಿಲ್ಲ. 32 ಆದರೆ ಪ್ರಭುವು ನಮಗೆ ತೀರ್ಪು ಮಾಡುವಾಗ, ನಮಗೆ ಸರಿಯಾದ ಮಾರ್ಗವನ್ನು ತೋರಿಸುವುದಕ್ಕಾಗಿಯೂ ಈ ಲೋಕದ ಇತರ ಜನರೊಂದಿಗೆ ನಮಗೆ ಅಪರಾಧಿಗಳೆಂಬ ತೀರ್ಪಾಗದಂತೆಯೂ ಆತನು ನಮ್ಮನ್ನು ಶಿಕ್ಷಿಸುತ್ತಾನೆ.

33 ಆದ್ದರಿಂದ ನನ್ನ ಪ್ರಿಯ ಸಹೋದರ ಸಹೋದರಿಯರೇ, ನೀವು ಊಟ ಮಾಡುವುದಕ್ಕಾಗಿ ಒಟ್ಟಾಗಿ ಸೇರುವಾಗ ಒಬ್ಬರಿಗೊಬ್ಬರು ಕಾದುಕೊಂಡಿರಿ. 34 ಒಬ್ಬ ವ್ಯಕ್ತಿಯು ಹಸಿವೆಗೊಂಡಿದ್ದರೆ, ಅವನು ಮನೆಯಲ್ಲಿ ಊಟಮಾಡಲಿ. ನೀವು ಹೀಗೆ ಮಾಡಿದರೆ, ನಿಮ್ಮ ಸಭಾಕೂಟವು ನಿಮ್ಮ ಮೇಲೆ ನ್ಯಾಯತೀರ್ಪನ್ನು ಬರಮಾಡುವುದಿಲ್ಲ. ಉಳಿದ ವಿಷಯಗಳ ಬಗ್ಗೆ ನೀವು ಏನು ಮಾಡಬೇಕೆಂಬುದನ್ನು ನಾನು ನಿಮ್ಮಲ್ಲಿಗೆ ಬಂದಾಗ ತಿಳಿಸಿಕೊಡುತ್ತೇನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International