Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 51:1-12

ದಾವೀದನು ಬತ್ಷೆಬಳೊಂದಿಗೆ ವ್ಯಭಿಚಾರ ಮಾಡಿದಾಗ ಪ್ರವಾದಿಯಾದ ನಾತಾನನು ದಾವೀದನ ಬಳಿಗೆ ಹೋಗಿ ದೇವರ ನ್ಯಾಯತೀರ್ಪನ್ನು ಹೇಳುತ್ತಾನೆ. ಆಗ ಈ ಕೀರ್ತನೆ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

51 ಪ್ರೀತಿಸ್ವರೂಪನಾದ ದೇವರೇ, ನನಗೆ ಕರುಣೆತೋರು;
    ಕರುಣಾನಿಧಿಯೇ, ನನ್ನ ಪಾಪಗಳನ್ನೆಲ್ಲಾ ಅಳಿಸಿಬಿಡು.
ನನ್ನ ದೋಷವನ್ನು ತೊಳೆದುಬಿಡು.
    ನನ್ನ ಪಾಪವನ್ನು ಪರಿಹರಿಸಿ ನನ್ನನ್ನು ಮತ್ತೆ ಶುದ್ಧೀಕರಿಸು!
ನಾನು ಪಾಪಮಾಡಿದ್ದೇನೆಂದು ನನಗೆ ಗೊತ್ತಿದೆ.
    ಆ ಪಾಪಗಳು ನನ್ನ ಮುಂದೆಯೇ ಇವೆ.
ನಿನ್ನ ದೃಷ್ಟಿಗೆ ಕೆಟ್ಟದ್ದಾಗಿದ್ದನ್ನೇ ಮಾಡಿದ್ದೇನೆ.
    ಹೌದು, ನಾನು ಪಾಪ ಮಾಡಿದ್ದು ನಿನಗೇ.
ನಾನು ತಪ್ಪಿತಸ್ಥನೆಂತಲೂ ನೀನು ನೀತಿವಂತನೆಂತಲೂ
    ಜನರಿಗೆ ಗೊತ್ತಾಗಲೆಂದೇ ಇವುಗಳನ್ನು ಅರಿಕೆಮಾಡಿಕೊಳ್ಳುತ್ತಿದ್ದೇನೆ.
    ನಿನ್ನ ತೀರ್ಪುಗಳು ನ್ಯಾಯಬದ್ಧವಾಗಿವೆ.
ಹುಟ್ಟಿದಂದಿನಿಂದ ನಾನು ಪಾಪಿಯೇ.
    ಮಾತೃಗರ್ಭವನ್ನು ಪ್ರವೇಶಿಸಿದ ದಿನದಿಂದ ನಾನು ದ್ರೋಹಿಯೇ.
ದೇವರೇ, ನಾನು ನಿನಗೆ ನಂಬಿಗಸ್ತನಾಗಿರಬೇಕೆಂಬುದೇ ನಿನ್ನ ಅಪೇಕ್ಷೆ.
    ಆದ್ದರಿಂದ ಸುಜ್ಞಾನದ ರಹಸ್ಯಗಳನ್ನು ನನಗೆ ಉಪದೇಶಿಸು.
ಹಿಸ್ಸೋಪ್ ಗಿಡದ ಬರಲಿನಿಂದ ನನ್ನನ್ನು ತೊಳೆದು ಶುದ್ಧೀಕರಿಸು;
    ನಾನು ಹಿಮಕ್ಕಿಂತಲೂ ಬಿಳುಪಾಗುವ ತನಕ ನನ್ನನ್ನು ತೊಳೆ!
ನನ್ನಲ್ಲಿ ಆನಂದವನ್ನೂ ಉಲ್ಲಾಸವನ್ನೂ ಬರಮಾಡು.
    ನೀನು ಜಜ್ಜಿಹಾಕಿದ ಮೂಳೆಗಳು ಮತ್ತೆ ಉಲ್ಲಾಸಿಸಲಿ!
ನನ್ನ ಪಾಪಗಳನ್ನು ನೋಡಬೇಡ!
    ಅವುಗಳನ್ನೆಲ್ಲ ಅಳಿಸಿಬಿಡು!
10 ದೇವರೇ, ನನ್ನಲ್ಲಿ ಶುದ್ಧ ಹೃದಯವನ್ನು ನಿರ್ಮಿಸು!
    ನನ್ನ ಆತ್ಮವನ್ನು ಮತ್ತೆ ಬಲಗೊಳಿಸಿ ನನ್ನನ್ನು ನೂತನಪಡಿಸು.
11 ನಿನ್ನ ಸನ್ನಿಧಿಯಿಂದ ನನ್ನನ್ನು ತಳ್ಳಿಬಿಡಬೇಡ!
    ನಿನ್ನ ಪವಿತ್ರಾತ್ಮನನ್ನು ನನ್ನಿಂದ ತೆಗೆಯಬೇಡ!
12 ನಿನ್ನ ರಕ್ಷಣೆಯಿಂದುಂಟಾಗುವ ಆನಂದವನ್ನು ನನಗೆ ಮತ್ತೆ ದಯಪಾಲಿಸು!
    ನಿನಗೆ ವಿಧೇಯನಾಗಿರಲು ನನ್ನ ಮನಸ್ಸನ್ನು ದೃಢಪಡಿಸು.

ವಿಮೋಚನಕಾಂಡ 32:19-26

19 ಮೋಶೆಯು ಪಾಳೆಯದ ಹತ್ತಿರಕ್ಕೆ ಬಂದನು. ಅವನು ಚಿನ್ನದ ಬಸವನನ್ನೂ ಜನರ ನರ್ತನವನ್ನೂ ನೋಡಿ ಬಹುಕೋಪಗೊಂಡು ಕಲ್ಲಿನ ಹಲಿಗೆಗಳನ್ನು ನೆಲದ ಮೇಲೆ ಬಿಸಾಡಿಬಿಟ್ಟನು; ಅವು ಚೂರುಚೂರಾಗಿ ಒಡೆದುಹೋದವು. 20 ಬಳಿಕ ಮೋಶೆಯು ಆ ಬಸವನ ಮೂರ್ತಿಯನ್ನು ಬೆಂಕಿಯಲ್ಲಿ ಕರಗಿಸಿ ಅದರ ಚಿನ್ನವನ್ನು ಧೂಳಿನಂತೆ ಅರೆದು ನೀರಿಗೆ ಹಾಕಿ ಆ ನೀರನ್ನು ಇಸ್ರೇಲರಿಗೆ ಕುಡಿಸಿದನು.

21 ಮೋಶೆಯು ಆರೋನನಿಗೆ, “ಈ ಜನರು ನಿನಗೇನು ಮಾಡಿದರು? ಇಂಥಾ ಕೆಟ್ಟ ಪಾಪವನ್ನು ಮಾಡುವಂತೆ ಯಾಕೆ ಅವರನ್ನು ನಡಿಸಿದೆ?” ಎಂದು ಹೇಳಿದನು.

22 ಆರೋನನು, “ಕೋಪಗೊಳ್ಳಬೇಡ. ಇವರು ಯಾವಾಗಲೂ ಪಾಪಮಾಡಲು ಸಿದ್ಧರಾಗಿರುವುದು ನಿನಗೆ ಗೊತ್ತೇ ಇದೆ. 23 ಅವರು ನನಗೆ, ‘ಮೋಶೆಯು ನಮ್ಮನ್ನು ಈಜಿಪ್ಟಿನಿಂದ ಹೊರಗೆ ನಡೆಸಿದನು. ಆದರೆ ಅವನಿಗೇನಾಯಿತೋ ನಮಗೆ ತಿಳಿಯದು. ಆದ್ದರಿಂದ ನಮ್ಮನ್ನು ಮುನ್ನಡೆಸಲು ದೇವರುಗಳನ್ನು ಮಾಡಿಕೊಡು’ ಎಂದು ಕೇಳಿದರು. 24 ಆದ್ದರಿಂದ ನಾನು ಅವರಿಗೆ, ‘ನಿಮ್ಮಲ್ಲಿ ಚಿನ್ನದ ಆಭರಣಗಳಿದ್ದರೆ ನನಗೆ ಕೊಡಿರಿ’ ಎಂದು ಹೇಳಿದೆನು. ಅವರು ಆಭರಣಗಳನ್ನು ನನಗೆ ತಂದುಕೊಟ್ಟರು. ನಾನು ಅವುಗಳನ್ನು ಬೆಂಕಿಯಲ್ಲಿ ಕರಗಿಸಿ ಈ ಬಸವನ ಮೂರ್ತಿಯನ್ನು ಎರಕಹೊಯ್ದೆನು” ಎಂದು ಉತ್ತರಿಸಿದನು.

25 ಜನರು ಅಂಕೆತಪ್ಪಿ ತಮ್ಮ ಇಷ್ಟಬಂದಂತೆ ಮಾಡುವುದಕ್ಕೆ ಆರೋನನು ಅವರನ್ನು ಬಿಟ್ಟುಬಿಟ್ಟಿರುವುದು ಮೋಶೆಗೆ ತಿಳಿಯಿತು. ಜನರು ಕ್ರಮವಿಲ್ಲದೆ ಸ್ವೇಚ್ಛೆಯಿಂದ ನಡೆಯುತ್ತಿದ್ದರು; ಅವರ ಮೂರ್ಖತನವು ಅವರ ವಿರೋಧಿಗಳಿಗೆ ಎದ್ದುಕಾಣುತ್ತಿತ್ತು! 26 ಆದ್ದರಿಂದ ಪಾಳೆಯದ ದ್ವಾರದಲ್ಲಿ ಮೋಶೆಯು ನಿಂತು, “ಯೆಹೋವನ ಪಕ್ಷದವರು ನನ್ನ ಬಳಿಗೆ ಬರಬೇಕು” ಎಂದು ಹೇಳಿದನು. ಲೇವಿ ಕುಲದವರೆಲ್ಲಾ ಮೋಶೆಯ ಬಳಿಗೆ ಬಂದರು.

1 ಕೊರಿಂಥದವರಿಗೆ 11:17-22

ಪ್ರಭುವಿನ ರಾತ್ರಿಭೋಜನ

17 ಈಗ ನಾನು ನಿಮಗೆ ಹೇಳಲಿರುವ ವಿಷಯದಲ್ಲಿ ನಿಮ್ಮನ್ನು ಹೊಗಳುವುದಿಲ್ಲ. ನಿಮ್ಮ ಸಭಾಕೂಟಗಳು ನಿಮಗೆ ಒಳ್ಳೆಯದನ್ನು ಮಾಡುವುದಕ್ಕಿಂತಲೂ ಹೆಚ್ಚು ಕೇಡುಗಳನ್ನೇ ಮಾಡುತ್ತವೆ. 18 ಮೊದಲನೆಯದಾಗಿ, ನೀವು ಸಭೆಯಾಗಿ ಸೇರಿಬರುವಾಗ ನಿಮ್ಮಲ್ಲಿ ಪಂಗಡಗಳಿರುವುದಾಗಿ ಕೇಳಿದ್ದೇನೆ. ಇದು ನಿಜವೆಂದು ಸ್ವಲ್ಪಮಟ್ಟಿಗೆ ನಂಬುತ್ತೇನೆ. 19 (ನಿಮ್ಮಲ್ಲಿ ಭಿನ್ನಾಭಿಪ್ರಾಯಗಳಿರುವುದು ಸಹಜ. ನಿಮ್ಮಲ್ಲಿ ಯಾರು ನಿಜವಾಗಿಯೂ ಒಳ್ಳೆಯದನ್ನು ಮಾಡುತ್ತಿದ್ದಾರೆ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ.)

20 ನೀವೆಲ್ಲರೂ ಒಟ್ಟಾಗಿ ಸೇರಿದಾಗ ನೀವು ಮಾಡುವಂಥದ್ದು ನಿಜವಾಗಿಯೂ ಪ್ರಭುವಿನ ರಾತ್ರಿಭೋಜನವಲ್ಲ. 21 ಏಕೆಂದರೆ, ನೀವು ಊಟ ಮಾಡುವಾಗ, ಇತರರಿಗೋಸ್ಕರ ಕಾಯದೆ ಪ್ರತಿಯೊಬ್ಬರು ತಮ್ಮಷ್ಟಕ್ಕೆ ತಾವೇ ಊಟ ಮಾಡುತ್ತಾರೆ. ಕೆಲವು ಜನರಲ್ಲಿ ಊಟಮಾಡಲು ಸಾಕಷ್ಟು ಆಹಾರ ಇರುವುದಿಲ್ಲ. ಇನ್ನು ಕೆಲವರಲ್ಲಿ ತಿಂದು, ಕುಡಿದು ಮತ್ತರಾಗುವಷ್ಟು ಆಹಾರವಿರುತ್ತದೆ. 22 ನೀವು ನಿಮ್ಮ ಸ್ವಂತ ಮನೆಗಳಲ್ಲಿ ತಿನ್ನಬಹುದು, ಕುಡಿಯಬಹುದು. ದೇವರ ಸಭೆಯು ಮುಖ್ಯವಾದದ್ದಲ್ಲವೆಂದು ನೀವು ಯೋಚಿಸುವಂತೆ ತೋರುತ್ತದೆ. ನೀವು ಬಡವರನ್ನು ನಾಚಿಕೆಗೆ ಗುರಿಮಾಡುತ್ತೀರಿ. ನಾನು ನಿಮಗೆ ಏನು ಹೇಳಲಿ? ನೀವು ಮಾಡುತ್ತಿರುವ ಈ ಕಾರ್ಯಕ್ಕೋಸ್ಕರ ನಾನು ನಿಮ್ಮನ್ನು ಹೊಗಳಬೇಕೇ? ನಾನು ನಿಮ್ಮನ್ನು ಹೊಗಳುವುದಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International