Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 37:12-22

12 ದುಷ್ಟರು ನೀತಿವಂತರ ವಿರುದ್ಧ ದುರಾಲೋಚನೆಗಳನ್ನು ಮಾಡುವರು.
    ನೀತಿವಂತರ ಮೇಲೆ ತಮಗಿರುವ ಕೋಪದಿಂದ ಅವರು ಹಲ್ಲುಕಡಿಯುವರು.
13 ಆದರೆ ನಮ್ಮ ಒಡೆಯನು ಆ ದುಷ್ಟರನ್ನು ನೋಡಿ ನಗುವನು.
    ಅವರಿಗೆ ಬರಲಿರುವ ಆಪತ್ತುಗಳು ಆತನಿಗೆ ತಿಳಿದಿವೆ.
14 ಕೆಡುಕರು ಖಡ್ಗಗಳನ್ನು ಕೈಗೆತ್ತಿಕೊಳ್ಳುವರು; ತಮ್ಮ ಬಿಲ್ಲುಗಳಿಗೆ ಬಾಣಗಳನ್ನು ಹೂಡಿ ಗುರಿಯಿಡುವರು.
    ಅವರು ಬಡವರನ್ನೂ ಅಸಹಾಯಕರನ್ನೂ ಒಳ್ಳೆಯವರನ್ನೂ ಯಥಾರ್ಥವಂತರನ್ನೂ ಕೊಲ್ಲಬೇಕೆಂದಿದ್ದಾರೆ.
15 ಆದರೆ ಅವರ ಬಿಲ್ಲುಗಳು ಮುರಿದುಹೋಗುತ್ತವೆ.
    ಅವರ ಖಡ್ಗಗಳು ಅವರ ಹೃದಯಗಳಿಗೇ ನಾಟಿಕೊಳ್ಳುತ್ತವೆ.
16 ದುಷ್ಟನ ಶ್ರೀಮಂತಿಕೆಗಿಂತಲೂ
    ನೀತಿವಂತನ ಬಡತನವೇ ಮೇಲು.
17 ಯಾಕೆಂದರೆ ದುಷ್ಟರು ನಾಶವಾಗುವರು.
    ನೀತಿವಂತರನ್ನಾದರೋ ಯೆಹೋವನು ಪರಿಪಾಲಿಸುವನು.
18 ಯೆಹೋವನು ತನ್ನ ಭಕ್ತರನ್ನು ಅವರ ಜೀವಮಾನ ಪೂರ್ತಿ ಕಾಪಾಡುವನು.
    ಅವರ ಭೂಮಿಯು ಸದಾಕಾಲ ಅವರದೇ ಆಗಿರುವುದು.
19 ಆಪತ್ಕಾಲದಲ್ಲಿ ನೀತಿವಂತರು ನಾಶವಾಗುವುದಿಲ್ಲ.
    ಬರಗಾಲದಲ್ಲಿಯೂ ಅವರಿಗೆ ಕೊರತೆಯಿರುವುದಿಲ್ಲ.
20 ದುಷ್ಟರಾದರೋ ಯೆಹೋವನ ವೈರಿಗಳಾಗಿದ್ದಾರೆ.
    ಅವರು ನಾಶವಾಗುವರು.
ಅವರ ಕಣಿವೆಗಳು ಒಳಗೆ ಸುಟ್ಟುಹೋಗುತ್ತವೆ;
    ಅವರು ಹೊಗೆಯಂತೆ ಇಲ್ಲವಾಗುವರು.
21 ದುಷ್ಟನು ತಾನು ಮಾಡಿದ ಸಾಲವನ್ನು ತೀರಿಸುವುದಿಲ್ಲ.
    ನೀತಿವಂತನಾದರೋ ಬೇರೆಯವರಿಗೆ ಉದಾರವಾಗಿ ಕೊಡುವನು.
22 ನೀತಿವಂತರು ಆಶೀರ್ವದಿಸಿದರೆ, ವಾಗ್ದಾನಮಾಡಲ್ಪಟ್ಟ ಭೂಮಿಯನ್ನು ಜನರು ಪಡೆದುಕೊಳ್ಳುವರು.
    ಆದರೆ ಅವರು ಶಪಿಸಿದರೆ, ಜನರು ನಾಶವಾಗುವರು.

2 ಸಮುವೇಲನು 11:14-21

ಊರೀಯನನ್ನು ಕೊಲ್ಲಲು ದಾವೀದನ ಉಪಾಯ

14 ಮಾರನೆಯ ದಿನ ಬೆಳಿಗ್ಗೆ ದಾವೀದನು ಯೋವಾಬನಿಗೆ ಒಂದು ಪತ್ರವನ್ನು ಬರೆದನು. ದಾವೀದನು ಆ ಪತ್ರವನ್ನು ಊರೀಯನ ಕೈಯಿಂದ ಕಳುಹಿಸಿಕೊಟ್ಟನು. 15 ದಾವೀದನು ಆ ಪತ್ರದಲ್ಲಿ, “ಯುದ್ಧವು ಹೆಚ್ಚು ಭೀಕರವಾಗಿ ನಡೆಯುವ ಕಡೆ ಊರೀಯನನ್ನು ಮುಂದಿನ ಸಾಲಿನಲ್ಲಿ ನಿಲ್ಲಿಸು. ಅವನನ್ನು ಒಬ್ಬಂಟಿಗನನ್ನಾಗಿ ಬಿಟ್ಟುಬಿಡಿ. ಅವನು ಯುದ್ಧದಲ್ಲಿ ಕೊಲ್ಲಲ್ಪಡಲಿ” ಎಂದು ಬರೆದಿದ್ದನು.

16 ಅಮ್ಮೋನಿಯರಲ್ಲಿ ಅತ್ಯಂತ ಧೈರ್ಯಶಾಲಿಗಳು ಆ ನಗರದಲ್ಲಿ ಎಲ್ಲಿರುವರೆಂಬುದನ್ನು ಯೋವಾಬನು ಗುರುತಿಸಿದನು. ಆ ಸ್ಥಳಕ್ಕೆ ಕಳುಹಿಸಲು ಊರೀಯನನ್ನು ಆರಿಸಿಕೊಂಡನು. 17 ಯೋವಾಬನ ವಿರುದ್ಧ ಹೋರಾಡಲು ಆ ನಗರದ[a] ಜನರು ಹೊರಗೆ ಬಂದು ದಾವೀದನ ಕೆಲವು ಜನರನ್ನು ಕೊಂದರು. ಹಿತ್ತಿಯನಾದ ಊರೀಯನೂ ಅವರಲ್ಲೊಬ್ಬನಾಗಿದ್ದನು.

18 ಅನಂತರ ಯೋವಾಬನು ತನ್ನ ಸಂದೇಶಕರಲ್ಲಿ ಒಬ್ಬನನ್ನು ಕರೆದು, “ಯುದ್ಧದಲ್ಲಿ ಸಂಭವಿಸಿದ ಎಲ್ಲಾ ವಿವರಗಳನ್ನು ದಾವೀದನಿಗೆ ತಿಳಿಸು. 19 ನೀನು ಹೇಳಿ ಮುಗಿಸಿದ ಮೇಲೆ 20 ರಾಜನು ತಳಮಳಗೊಂಡು, ‘ಯೋವಾಬನ ಸೈನ್ಯವು ಯುದ್ಧಮಾಡುವುದಕ್ಕಾಗಿ ನಗರದ ಹತ್ತಿರಕ್ಕೆ ಏಕೆ ಹೋಯಿತು? ನಗರದ ಗೋಡೆಗಳ ಮೇಲಿರುವ ಜನರು, ಕೆಳಗಿರುವ ಜನರ ಮೇಲೆ ಬಾಣಗಳನ್ನು ಪ್ರಯೋಗಿಸಬಲ್ಲರೆಂಬುದು ಅವನಿಗೆ ಖಂಡಿತವಾಗಿಯೂ ತಿಳಿದಿದೆ. 21 ಯೆರುಬ್ಬೆಷೆತನ ಮಗನಾದ ಅಬೀಮೆಲೆಕನನ್ನು ಯಾರು ಕೊಂದರೆಂಬುದು ನಿಮಗೆ ಗೊತ್ತಿಲ್ಲವೇ? ಅಬೀಮೆಲೆಕನ ಮೇಲೆ ಬೀಸುವ ಕಲ್ಲನ್ನು ನಗರದ ಗೋಡೆಯ ಮೇಲಿನಿಂದ ಎಸೆದವಳು ತೇಬೇಚಿನ ಒಬ್ಬ ಹೆಂಗಸಲ್ಲವೇ? ನೀವು ಗೋಡೆಯ ಹತ್ತಿರಕ್ಕೆ ಏಕೆ ಹೋದಿರಿ?’ ಎಂದು ಹೇಳಬಹುದು. ಆಗ ನೀನು, ‘ಹಿತ್ತಿಯನಾದ ನಿನ್ನ ಸೇವಕ ಊರೀಯನು ಸಹ ಸತ್ತುಹೋದನು’ ಎಂದು ಉತ್ತರಿಸಬೇಕು” ಎಂದು ಹೇಳಿ ಕಳುಹಿಸಿದನು.

ಫಿಲಿಪ್ಪಿಯವರಿಗೆ 4:10-20

ಫಿಲಿಪ್ಪಿ ಕ್ರೈಸ್ತರಿಗೆ ಪೌಲನ ವಂದನೆ

10 ನನ್ನ ಮೇಲೆ ನಿಮಗಿರುವ ಚಿಂತೆಯನ್ನು ನೀವು ಮತ್ತೆ ತೋರಿಸಿದ್ದಕ್ಕಾಗಿ ನಾನು ಪ್ರಭುವಿನಲ್ಲಿ ಬಹು ಸಂತೋಷಪಡುತ್ತೇನೆ. ನೀವು ನನ್ನ ಬಗ್ಗೆ ಚಿಂತಿಸುತ್ತಲೇ ಇದ್ದೀರಿ. ಆದರೆ ಅದನ್ನು ತೋರಿಸಲು ನಿಮಗೆ ಅವಕಾಶವೇ ಇರಲಿಲ್ಲ. 11 ನಾನು ಈ ಮಾತುಗಳನ್ನು ಹೇಳುತ್ತಿರುವುದು ನನಗಿರುವ ಕೊರತೆಯ ದೆಸೆಯಿಂದಲ್ಲ. ನನ್ನಲ್ಲಿರುವಂಥವುಗಳಲ್ಲಿ ಮತ್ತು ನನಗೆ ಸಂಭವಿಸುವ ಪ್ರತಿಯೊಂದರಲ್ಲಿ ತೃಪ್ತನಾಗಿರಲು ನಾನು ಕಲಿತುಕೊಂಡಿದ್ದೇನೆ. 12 ಹಸಿವೆಯಿಂದಿರುವಾಗಲೂ ಸಮೃದ್ಧಿಯುಳ್ಳವನಾಗಿರುವಾಗಲೂ ಹೇಗೆ ಜೀವಿಸಬೇಕೆಂಬುದು ನನಗೆ ತಿಳಿದಿದೆ. ಯಾವ ಸಮಯದಲ್ಲಾಗಲಿ ಯಾವ ಪರಿಸ್ಥಿತಿಯಲ್ಲಾಗಲಿ ಸಂತೋಷದಿಂದಿರುವ ಗುಟ್ಟು ನನಗೆ ತಿಳಿದಿದೆ. ಊಟಕ್ಕೆ ಬೇಕಾದಷ್ಟು ಇರುವಾಗಲೂ ಇಲ್ಲದಿರುವಾಗಲೂ ನನಗೆ ಅಗತ್ಯವಾದವುಗಳನ್ನು ಹೊಂದಿರುವಾಗಲೂ ಹೊಂದಿಲ್ಲದಿರುವಾಗಲೂ ಸಂತೋಷವಾಗಿರಲು ಕಲಿತುಕೊಂಡಿದ್ದೇನೆ. 13 ಕ್ರಿಸ್ತನ ಮೂಲಕ ನಾನು ಎಲ್ಲಾ ಕಾರ್ಯಗಳನ್ನು ಮಾಡಬಲ್ಲೆನು. ಏಕೆಂದರೆ ಆತನು ನನ್ನನ್ನು ಬಲಪಡಿಸುತ್ತಾನೆ.

14 ಆದರೂ ನಾನು ಕೊರತೆಯಲ್ಲಿದ್ದಾಗ ನೀವು ನನಗೆ ಸಹಾಯ ಮಾಡಿದ್ದು ಒಳ್ಳೆಯದಾಯಿತು. 15 ಇದಲ್ಲದೆ ಫಿಲಿಪ್ಪಿ ಪಟ್ಟಣದವರೇ, ನಾನು ಮೊದಲು ನಿಮ್ಮಲ್ಲಿ ಸುವಾರ್ತೆಯನ್ನು ಸಾರಿ ಮಕೆದೋನಿಯಕ್ಕೆ ಹೊರಟಾಗ, ನಿಮ್ಮ ಸಭೆಯೊಂದೇ ನನಗೆ ಸಹಾಯ ಮಾಡಿದ್ದು ನಿಮಗೆ ಗೊತ್ತಿದೆ. 16 ನಾನು ಥೆಸಲೋನಿಕದಲ್ಲಿದ್ದಾಗ ನನಗೆ ಅಗತ್ಯವಾದವುಗಳನ್ನು ನೀವು ಹಲವಾರು ಸಲ ಕಳುಹಿಸಿಕೊಟ್ಟಿರಿ. 17 ನಿಜವಾಗಿಯೂ, ನಿಮ್ಮಿಂದ ಕೊಡುಗೆಗಳನ್ನು ಪಡೆದುಕೊಳ್ಳಬೇಕೆಂಬುದು ನನ್ನ ಅಪೇಕ್ಷೆಯಲ್ಲ. ಆದರೆ ಕೊಡುವುದರ ಮೂಲಕ ಮುಂದೆ ಹೇರಳವಾಗಿ ದೊರೆಯುವ ಆಶೀರ್ವಾದಗಳನ್ನು ನೀವು ಹೊಂದಿಕೊಳ್ಳಬೇಕೆಂಬುದೇ ನನ್ನ ಅಪೇಕ್ಷೆ. 18 ಎಪಫ್ರೊದೀತನು ನಿಮ್ಮ ಕೊಡುಗೆಯನ್ನು ತಂದು ಕೊಟ್ಟಿದ್ದರಿಂದ ಬೇಕಾದದ್ದೆಲ್ಲ ನನ್ನಲ್ಲಿ ಹೇರಳವಾಗಿದೆ. ನಿಮ್ಮ ಕೊಡುಗೆಯು ದೇವರಿಗೆ ಅರ್ಪಿಸಲ್ಪಟ್ಟ ಪರಿಮಳಭರಿತವಾದ ಯಜ್ಞವಾಗಿದೆ. ಇದು ದೇವರಿಗೆ ಮೆಚ್ಚಿಕೆಯಾದದ್ದೂ ಆಗಿದೆ. 19 ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ಅನುಗುಣವಾಗಿ ನಿಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವನು. 20 ನಮ್ಮ ತಂದೆಯಾದ ದೇವರಿಗೆ ಸದಾಕಾಲ ಮಹಿಮೆಯಾಗಲಿ. ಆಮೆನ್.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International