Revised Common Lectionary (Semicontinuous)
ದಾವೀದನು ಬತ್ಷೆಬೆಳೊಂದಿಗೆ ಪಾಪ ಮಾಡಿದ್ದು
11 ವಸಂತಕಾಲದಲ್ಲಿ, ಎಲ್ಲಾ ರಾಜರೂ ಯುದ್ಧಕ್ಕೆ ಹೊರಡುವ ಸಮಯ ಬಂದಾಗ, ದಾವೀದನು ಯೋವಾಬನನ್ನೂ ಅವನ ಸೇವಕರನ್ನೂ ಮತ್ತು ಇಸ್ರೇಲರೆಲ್ಲರನ್ನೂ ಅಮ್ಮೋನಿಯರೊಂದಿಗೆ ಯುದ್ಧಮಾಡಲು ಕಳುಹಿಸಿದನು. ಯೋವಾಬನ ಸೈನ್ಯವು ರಬ್ಬಕ್ಕೆ ಮುತ್ತಿಗೆ ಹಾಕಿತು.
ಆದರೆ ದಾವೀದನು ಜೆರುಸಲೇಮಿನಲ್ಲಿಯೇ ಉಳಿದುಕೊಂಡನು. 2 ಅವನು ಸಾಯಂಕಾಲ ತನ್ನ ಹಾಸಿಗೆಯಿಂದ ಮೇಲೆದ್ದು ಅರಮನೆಯ ಮಾಳಿಗೆಯ ಮೇಲಕ್ಕೆ ಹೋಗಿ ತಿರುಗಾಡುತ್ತಿದ್ದನು. ದಾವೀದನು ಮಾಳಿಗೆಯ ಮೇಲಿರುವಾಗ, ಒಬ್ಬ ಹೆಂಗಸು ಸ್ನಾನ ಮಾಡುತ್ತಿರುವುದನ್ನು ನೋಡಿದನು. ಅವಳು ಅತ್ಯಂತ ಸುಂದರಳಾಗಿದ್ದಳು. 3 ದಾವೀದನು ತನ್ನ ಸೇವಕರನ್ನು ಕರೆದು ಅವಳು ಯಾರೆಂದು ಕೇಳಿದನು. ಒಬ್ಬ ಸೇವಕನು, “ಅವಳು ಎಲೀಯಾಮನ ಮಗಳಾದ ಬತ್ಷೆಬೆಳು. ಹಿತ್ತಿಯನಾದ ಊರೀಯನ ಹೆಂಡತಿ” ಎಂದು ಉತ್ತರಿಸಿದನು.
4 ದಾವೀದನು ತನಗಾಗಿ ಬತ್ಷೆಬೆಳನ್ನು ಕರೆತರಲು ಸಂದೇಶಕರನ್ನು ಕಳುಹಿಸಿದನು. ಅವಳು ದಾವೀದನ ಬಳಿಗೆ ಬಂದಾಗ ಅವನು ಅವಳೊಡನೆ ಲೈಂಗಿಕ ಸಂಬಂಧವನ್ನು ಹೊಂದಿದನು. ತನ್ನ ಮಾಸಿಕ ಮುಟ್ಟು ನಿಂತಮೇಲೆ ತನ್ನನ್ನು ಶುದ್ಧಪಡಿಸಿಕೊಳ್ಳಲು ಆಕೆ ಸ್ನಾನಮಾಡಿಕೊಂಡ ಮೇಲೆ ಇದು ಸಂಭವಿಸಿತು.[a] 5 ಬಳಿಕ ಬತ್ಷೆಬೆ ಗರ್ಭಿಣಿಯಾದಳು. ಅವಳು ದಾವೀದನಿಗೆ, “ನಾನು ಗರ್ಭಿಣಿಯಾಗಿದ್ದೇನೆ” ಎಂದು ಹೇಳಿ ಕಳುಹಿಸಿದಳು.
ದಾವೀದನು ತನ್ನ ಪಾಪವನ್ನು ಮುಚ್ಚಿಡಲು ಪ್ರಯತ್ನಿಸುವನು
6 ದಾವೀದನು ಯೋವಾಬನಿಗೆ, “ಹಿತ್ತಿಯನಾದ ಊರೀಯನನ್ನು ನನ್ನ ಬಳಿಗೆ ಕಳುಹಿಸು” ಎಂಬ ಸಂದೇಶವನ್ನು ಕಳುಹಿಸಿದನು.
ಯೋವಾಬನು ಊರೀಯನನ್ನು ದಾವೀದನ ಬಳಿಗೆ ಕಳುಹಿಸಿದನು. 7 ಊರೀಯನು ದಾವೀದನ ಬಳಿಗೆ ಬಂದನು. ದಾವೀದನು ಊರೀಯನ ಜೊತೆಯಲ್ಲಿ ಮಾತನಾಡಿ, ಯೋವಾಬನು ಹೇಗಿದ್ದಾನೆ? ಸೈನಿಕರು ಹೇಗಿದ್ದಾರೆ? ಯುದ್ಧವು ಹೇಗೆ ನಡೆಯುತ್ತಿದೆ? ಎಂದು ಕೇಳಿದನು. 8 ನಂತರ ದಾವೀದನು ಊರೀಯನಿಗೆ, “ಮನೆಗೆ ಹೋಗಿ ವಿಶ್ರಾಂತಿಯನ್ನು ಪಡೆ” ಎಂದನು.
ಊರೀಯನು ರಾಜನ ಮನೆಯನ್ನು ಬಿಟ್ಟುಹೋದನು. ಊರೀಯನಿಗೆ ರಾಜನು ಕೊಡುಗೆಗಳನ್ನು ಸಹ ಕಳುಹಿಸಿದನು. 9 ಆದರೆ ಊರೀಯನು ಮನೆಗೆ ಹೋಗದೆ ಅರಮನೆಯ ಹೊರಬಾಗಿಲಿನಲ್ಲಿ ರಾಜನ ಸೇವಕರೊಂದಿಗೆ ಮಲಗಿದನು. 10 ಸೇವಕರು ದಾವೀದನಿಗೆ, “ಊರಿಯನು ಮನೆಗೆ ಹೋಗಲೇ ಇಲ್ಲ” ಎಂದು ಹೇಳಿದರು.
ಆಗ ದಾವೀದನು, “ನೀನು ದೀರ್ಘ ಪ್ರಯಾಣದಿಂದ ಬಂದಿರುವೆ. ನೀನು ಏಕೆ ಮನೆಗೆ ಹೋಗಲಿಲ್ಲ?” ಎಂದು ಊರೀಯನನ್ನು ಕೇಳಿದನು.
11 ಊರೀಯನು ದಾವೀದನಿಗೆ, “ಪವಿತ್ರ ಪೆಟ್ಟಿಗೆಯೂ ಇಸ್ರೇಲಿನ ಮತ್ತು ಯೆಹೂದದ ಸೈನಿಕರೂ ಗುಡಾರಗಳಲ್ಲಿ ನೆಲೆಸಿದ್ದಾರೆ. ನನ್ನ ಒಡೆಯನಾದ ಯೋವಾಬನು ಮತ್ತು ನನ್ನ ರಾಜನ ಸೇವಕರು ಹೊಲದಲ್ಲಿ ಪಾಳೆಯ ಮಾಡಿಕೊಂಡಿದ್ದಾರೆ. ಆದ್ದರಿಂದ ಅನ್ನಪಾನಗಳನ್ನು ತೆಗೆದುಕೊಳ್ಳುವುದಕ್ಕೂ ಪತ್ನಿಯ ಜೊತೆಯಲ್ಲಿ ಮಲಗುವುದಕ್ಕೂ ನಾನು ಮನೆಗೆ ಹೋಗುವುದು ಸರಿಯಲ್ಲ. ನಿನ್ನಾಣೆ, ನಿನ್ನ ಜೀವದಾಣೆ, ನಾನು ಇಂಥದನ್ನು ಮಾಡುವುದೇ ಇಲ್ಲ.” ಎಂದು ಹೇಳಿದನು.
12 ದಾವೀದನು ಊರೀಯನಿಗೆ, “ಈ ದಿನ ಇಲ್ಲಿಯೇ ಇರು. ನಾಳೆ ನಿನ್ನನ್ನು ಯುದ್ಧಕ್ಕೆ ಕಳುಹಿಸುತ್ತೇನೆ” ಎಂದು ಹೇಳಿದನು.
ಊರೀಯನು ಅಂದು ಜೆರುಸಲೇಮಿನಲ್ಲಿಯೇ ಉಳಿದುಕೊಂಡನು. ಅಂದರೆ ಮಾರನೆಯ ದಿನದ ಬೆಳಗಿನವರೆಗೆ ಅಲ್ಲೇ ಇದ್ದನು. 13 ಆಗ ದಾವೀದನು ತನ್ನನ್ನು ಬಂದು ಕಾಣುವಂತೆ ಊರೀಯನಿಗೆ ಹೇಳಿ ಕಳುಹಿಸಿದನು; ಊರೀಯನು ದಾವೀದನೊಂದಿಗೆ ಕುಡಿದು ಊಟ ಮಾಡಿದನು. ದಾವೀದನು ಊರೀಯನನ್ನು ಮತ್ತನನ್ನಾಗಿ ಮಾಡಿದನು. ಆದರೂ ಊರೀಯನು ಮನೆಗೆ ಹೋಗಲಿಲ್ಲ. ಅಂದು ಸಂಜೆ ರಾಜನ ಮನೆಯ ಹೊರಬಾಗಿಲಿನಲ್ಲಿ ಸೇವಕರೊಂದಿಗೆ ಮಲಗಲು ಹೋದನು.
ಊರೀಯನನ್ನು ಕೊಲ್ಲಲು ದಾವೀದನ ಉಪಾಯ
14 ಮಾರನೆಯ ದಿನ ಬೆಳಿಗ್ಗೆ ದಾವೀದನು ಯೋವಾಬನಿಗೆ ಒಂದು ಪತ್ರವನ್ನು ಬರೆದನು. ದಾವೀದನು ಆ ಪತ್ರವನ್ನು ಊರೀಯನ ಕೈಯಿಂದ ಕಳುಹಿಸಿಕೊಟ್ಟನು. 15 ದಾವೀದನು ಆ ಪತ್ರದಲ್ಲಿ, “ಯುದ್ಧವು ಹೆಚ್ಚು ಭೀಕರವಾಗಿ ನಡೆಯುವ ಕಡೆ ಊರೀಯನನ್ನು ಮುಂದಿನ ಸಾಲಿನಲ್ಲಿ ನಿಲ್ಲಿಸು. ಅವನನ್ನು ಒಬ್ಬಂಟಿಗನನ್ನಾಗಿ ಬಿಟ್ಟುಬಿಡಿ. ಅವನು ಯುದ್ಧದಲ್ಲಿ ಕೊಲ್ಲಲ್ಪಡಲಿ” ಎಂದು ಬರೆದಿದ್ದನು.
ರಚನೆಗಾರ: ದಾವೀದ.
14 ಮೂಢರು ತಮ್ಮ ಹೃದಯದಲ್ಲಿ, “ದೇವರಿಲ್ಲ” ಎಂದುಕೊಳ್ಳುವರು.
ಮೂಢರು ಭಯಂಕರವಾದ ಅಸಹ್ಯಕೃತ್ಯಗಳನ್ನು ಮಾಡುವರು.
ಅವರಲ್ಲಿ ಒಳ್ಳೆಯದನ್ನು ಮಾಡುವವರು ಇಲ್ಲವೇ ಇಲ್ಲ.
2 ದೇವರಿಗಾಗಿ ಹುಡುಕುವ ಬುದ್ಧಿವಂತರು ಮನುಷ್ಯರಲ್ಲಿ ಇದ್ದಾರೋ
ಎಂದು ಯೆಹೋವನು ಪರಲೋಕದಿಂದ ಮನುಷ್ಯರನ್ನು ನೋಡುವನು.
3 ಆದರೆ ಪ್ರತಿಯೊಬ್ಬನೂ ದೇವರಿಗೆ ವಿಮುಖನಾಗಿದ್ದಾನೆ.
ಎಲ್ಲರೂ ಕೆಟ್ಟುಹೋಗಿದ್ದಾರೆ.
ಒಳ್ಳೆಯದನ್ನು ಮಾಡುವವನು ಇಲ್ಲ;
ಒಬ್ಬನಾದರೂ ಇಲ್ಲ.
4 ದುಷ್ಟರು ಅರ್ಥಮಾಡಿಕೊಳ್ಳುವುದಿಲ್ಲವೇ?
ಅವರು ನನ್ನ ಜನರನ್ನು ಆಹಾರವನ್ನೋ ಎಂಬಂತೆ ನುಂಗಿಬಿಡುತ್ತಾರೆ.
ಅವರು ಯೆಹೋವನನ್ನು ಆರಾಧಿಸುವುದೂ ಇಲ್ಲ.
5-6 ಬಡವರ ಬುದ್ಧಿಮಾತನ್ನು ಆ ದುಷ್ಟರು ಕೇಳುವುದಿಲ್ಲ.
ಯಾಕೆಂದರೆ ಬಡವರು ಆಶ್ರಯಿಸಿಕೊಂಡಿರುವುದು ಯೆಹೋವನನ್ನೇ.
ಆದರೆ ದೇವರು ನೀತಿವಂತರೊಂದಿಗಿದ್ದಾನೆ.
ಆದ್ದರಿಂದ ದುಷ್ಟರು ಭಯಭ್ರಾಂತರಾಗುವರು.
7 ಚೀಯೋನ್ ಪರ್ವತದ ಮೇಲಿರುವಾತನು ಇಸ್ರೇಲನ್ನು ರಕ್ಷಿಸುವನೇ?
ಯೆಹೋವನ ಪ್ರಜೆಗಳು ಸೆರೆ ಒಯ್ಯಲ್ಪಟ್ಟು ಸೆರೆವಾಸದಲ್ಲಿದ್ದಾರೆ.
ಯೆಹೋವನಾದರೋ ತನ್ನ ಪ್ರಜೆಗಳನ್ನು ಬಿಡಿಸಿಕೊಂಡು ಬರುವನು;
ಆಗ ಯಾಕೋಬ್ಯರು ಉಲ್ಲಾಸಗೊಳ್ಳುವರು; ಇಸ್ರೇಲರು ಹರ್ಷಿಸುವರು.
ಕ್ರಿಸ್ತನ ಪ್ರೀತಿ
14 ಆದ್ದರಿಂದ ತಂದೆಯ ಮುಂದೆ ಮೊಣಕಾಲೂರಿ ಪ್ರಾರ್ಥಿಸುತ್ತೇನೆ. 15 ಭೂಪರಲೋಕಗಳಲ್ಲಿರುವ ಪ್ರತಿಯೊಂದು ಕುಟುಂಬವು ಆತನಿಂದ ತನ್ನ ನಿಜ ಹೆಸರನ್ನು ಪಡೆದುಕೊಳ್ಳುತ್ತದೆ. 16 ನೀವು ನಿಮ್ಮ ಆತ್ಮಗಳಲ್ಲಿ ಬಲವಾಗಿರಲು ಅಗತ್ಯವಾದ ಶಕ್ತಿಯನ್ನು ತನ್ನ ಮಹಿಮಾತಿಶಯದ ಪ್ರಕಾರ ಕೊಡಬೇಕೆಂದು ತಂದೆಯನ್ನು ಕೇಳಿಕೊಳ್ಳುತ್ತೇನೆ. ಆತನು ತನ್ನ ಆತ್ಮನ ಮೂಲಕವಾಗಿ ನಿಮಗೆ ಆ ಶಕ್ತಿಯನ್ನು ಕೊಡುತ್ತಾನೆ. 17 ನಿಮ್ಮ ನಂಬಿಕೆಯ ಮೂಲಕ ಕ್ರಿಸ್ತನು ನಿಮ್ಮ ಹೃದಯಗಳಲ್ಲಿ ವಾಸಿಸಬೇಕೆಂದು ಪ್ರಾರ್ಥಿಸುತ್ತೇನೆ. ನಿಮ್ಮ ಜೀವಿತವು ಪ್ರೀತಿಯಲ್ಲಿ ಬಲವಾಗಿ ಬೇರೂರಿರಬೇಕೆಂದು ಮತ್ತು ಪ್ರೀತಿಯ ಮೇಲೆ ಕಟ್ಟಲ್ಪಟ್ಟಿರಬೇಕೆಂದು ಪ್ರಾರ್ಥಿಸುತ್ತೇನೆ. 18 ನೀವು ಮತ್ತು ದೇವರ ಪರಿಶುದ್ಧ ಜನರೆಲ್ಲರೂ ಕ್ರಿಸ್ತನ ಪ್ರೀತಿಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ಬೇಕಾದ ಶಕ್ತಿಯನ್ನು ಹೊಂದಿದವರಾಗಿರಬೇಕೆಂದು ಪ್ರಾರ್ಥಿಸುತ್ತೇನೆ. ಕ್ರಿಸ್ತನ ಪ್ರೀತಿಯ ಉದ್ದಗಲಗಳನ್ನು ಮತ್ತು ಆಳ ಎತ್ತರಗಳನ್ನು ನೀವು ಅರ್ಥಮಾಡಿಕೊಳ್ಳಲೆಂದು ಪ್ರಾರ್ಥಿಸುತ್ತೇನೆ. 19 ಕ್ರಿಸ್ತನ ಪ್ರೀತಿಯನ್ನು ಮನುಷ್ಯನು ಗ್ರಹಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಆ ಪ್ರೀತಿಯನ್ನು ನೀವು ತಿಳಿದುಕೊಳ್ಳಶಕ್ತರಾಗಲೆಂದು ಪ್ರಾರ್ಥಿಸುತ್ತೇನೆ. ಆಗ ನೀವು ದೇವರ ಸಂಪೂರ್ಣತೆಯಿಂದ ತುಂಬಿದವರಾಗಲು ಸಾಧ್ಯವಾಗುತ್ತದೆ.
20 ನಮ್ಮಲ್ಲಿ ಕಾರ್ಯಮಾಡುತ್ತಿರುವ ತನ್ನ ಶಕ್ತಿಯಿಂದ ನಾವು ಕೇಳುವುದಕ್ಕಿಂತಲೂ ಯೋಚಿಸುವುದಕ್ಕಿಂತಲೂ ಎಷ್ಟೋ ಹೆಚ್ಚೆಚ್ಚಾಗಿ ದೇವರು ಮಾಡಬಲ್ಲನು. 21 ಆತನಿಗೆ ಸಭೆಯಲ್ಲಿಯೂ ಕ್ರಿಸ್ತ ಯೇಸುವಿನಲ್ಲಿಯೂ ತಲತಲಾಂತರಕ್ಕೂ ಯುಗಯುಗಾಂತರಕ್ಕೂ ಸ್ತೋತ್ರವಾಗಲಿ. ಆಮೆನ್.
ಐದು ಸಾವಿರಕ್ಕಿಂತ ಹೆಚ್ಚು ಜನರಿಗೆ ಆಹಾರದಾನ
(ಮತ್ತಾಯ 14:13-21; ಮಾರ್ಕ 6:30-44; ಲೂಕ 9:10-17)
6 ತರುವಾಯ, ಯೇಸು ಗಲಿಲಾಯ ಸರೋವರವನ್ನು (ತಿಬೇರಿಯ ಸರೋವರ) ದಾಟಿ ಆಚೆಯ ದಡಕ್ಕೆ ಹೋದನು. 2 ಅನೇಕ ಜನರು ಯೇಸುವನ್ನು ಹಿಂಬಾಲಿಸಿದರು. ಏಕೆಂದರೆ ಯೇಸು ರೋಗಿಗಳನ್ನು ಗುಣಪಡಿಸುವುದರ ಮೂಲಕ ತನ್ನ ಅಧಿಕಾರವನ್ನು ತೋರಿಸಿದ್ದನು. ಅವರೆಲ್ಲರೂ ಅದನ್ನು ನೋಡಿದ್ದರು. 3 ಆಗ ಯೇಸು ಬೆಟ್ಟವನ್ನು ಹತ್ತಿ ತನ್ನ ಶಿಷ್ಯರ ಸಂಗಡ ಕುಳಿತುಕೊಂಡನು. 4 ಯೆಹೂದ್ಯರ ಪಸ್ಕಹಬ್ಬವೂ ಬಹು ಸಮೀಪವಾಗಿತ್ತು.
5 ಯೇಸು ಕಣ್ಣೆತ್ತಿ ನೋಡಿದಾಗ, ತನ್ನ ಬಳಿಗೆ ಬರುತ್ತಿದ್ದ ಜನಸಮೂಹವನ್ನು ಕಂಡು ಫಿಲಿಪ್ಪನಿಗೆ, “ಈ ಜನರಿಗೆಲ್ಲಾ ಸಾಕಾಗುವಷ್ಟು ರೊಟ್ಟಿಯನ್ನು ನಾವು ಎಲ್ಲಿ ಕೊಂಡುಕೊಳ್ಳೋಣ?” ಎಂದು ಕೇಳಿದನು. 6 (ಫಿಲಿಪ್ಪನನ್ನು ಪರೀಕ್ಷಿಸುವುದಕ್ಕಾಗಿ ಆತನು ಈ ಪ್ರಶ್ನೆಯನ್ನು ಕೇಳಿದನು. ತಾನು ಮಾಡಲಿದ್ದ ಕಾರ್ಯ ಯೇಸುವಿಗೆ ಮೊದಲೇ ತಿಳಿದಿತ್ತು.)
7 ಫಿಲಿಪ್ಪನು, “ಇಲ್ಲಿರುವ ಪ್ರತಿಯೊಬ್ಬರಿಗೆ ರೊಟ್ಟಿಯ ಒಂದು ತುಂಡನ್ನು ಕೊಡಬೇಕಾದರೆ, ಇನ್ನೂರು ದಿನಾರಿ ನಾಣ್ಯಗಳಾದರೂ[a] ಬೇಕು” ಎಂದು ಉತ್ತರಕೊಟ್ಟನು.
8 ಅಂದ್ರೆಯನೆಂಬ ಮತ್ತೊಬ್ಬ ಶಿಷ್ಯನು ಅಲ್ಲಿದ್ದನು. ಅಂದ್ರೆಯನು ಸೀಮೋನ್ ಪೇತ್ರನ ಸಹೋದರ. 9 ಅಂದ್ರೆಯನು, “ಇಲ್ಲಿರುವ ಒಬ್ಬ ಹುಡುಗನ ಬಳಿ ಜವೆಗೋಧಿಯ ಐದು ರೊಟ್ಟಿಗಳಿವೆ ಮತ್ತು ಎರಡು ಚಿಕ್ಕ ಮೀನುಗಳಿವೆ. ಆದರೆ ಅವು ಈ ಜನಸಮೂಹಕ್ಕೆ ಸಾಕಾಗುವುದಿಲ್ಲ” ಎಂದು ಹೇಳಿದನು.
10 ಯೇಸು, “ಜನರಿಗೆ ಕುಳಿತುಕೊಳ್ಳಲು ಹೇಳಿರಿ” ಎಂದು ತಿಳಿಸಿದನು. ಆ ಸ್ಥಳದಲ್ಲಿ ಹುಲ್ಲು ಹುಲುಸಾಗಿ ಬೆಳೆದಿತ್ತು. ಅಲ್ಲಿ ಕುಳಿತುಕೊಂಡವರಲ್ಲಿ ಸುಮಾರು ಐದುಸಾವಿರ ಮಂದಿ ಗಂಡಸರಿದ್ದರು. 11 ಬಳಿಕ ಯೇಸು ಆ ರೊಟ್ಟಿಗಳನ್ನು ತೆಗೆದುಕೊಂಡು ಅವುಗಳಿಗಾಗಿ ದೇವರಿಗೆ ಸ್ತೋತ್ರಸಲ್ಲಿಸಿ, ಕುಳಿತುಕೊಂಡಿದ್ದ ಜನರಿಗೆ ಕೊಟ್ಟನು. ಆತನು ಮೀನುಗಳನ್ನು ಕೊಡುವಾಗಲೂ ಅದೇ ರೀತಿ ಮಾಡಿದನು. ಎಲ್ಲರೂ ತಮಗೆ ಬೇಕಾದಷ್ಟು ತಿಂದರು.
12 ಅವರೆಲ್ಲರೂ ಊಟ ಮಾಡಿ ತೃಪ್ತರಾದ ಮೇಲೆ ಯೇಸು ತನ್ನ ಶಿಷ್ಯರಿಗೆ, “ಉಳಿದುಹೋದ ರೊಟ್ಟಿ ಮತ್ತು ಮೀನುಗಳ ತುಂಡುಗಳನ್ನು ಒಟ್ಟುಗೂಡಿಸಿರಿ. ಯಾವುದನ್ನೂ ಹಾಳುಮಾಡಬೇಡಿ” ಎಂದು ಹೇಳಿದನು. 13 ಆದ್ದರಿಂದ ಶಿಷ್ಯರು ಉಳಿದುಹೋಗಿದ್ದ ತುಂಡುಗಳನ್ನು ಒಟ್ಟುಗೂಡಿಸಿದರು. ಜನರು ತಿನ್ನಲು ಆರಂಭಿಸಿದಾಗ ಕೇವಲ ಐದು ಜವೆಗೋದಿಯ ರೊಟ್ಟಿಗಳಿದ್ದವು. ಆದರೆ ಶಿಷ್ಯರು ಉಳಿದುಹೋದ ಆಹಾರದ ತುಂಡುಗಳನ್ನು ಒಟ್ಟುಗೂಡಿಸಿದಾಗ ಹನ್ನೆರಡು ದೊಡ್ಡ ಬುಟ್ಟಿಗಳು ತುಂಬಿಹೋದವು.
14 ಯೇಸು ಮಾಡಿದ ಈ ಸೂಚಕಕಾರ್ಯವನ್ನು ಕಂಡ ಜನರು, “ಈ ಲೋಕಕ್ಕೆ ಬರಲಿರುವ ಪ್ರವಾದಿ ನಿಜವಾಗಿಯೂ ಈತನೇ ಇರಬೇಕು” ಎಂದು ಹೇಳತೊಡಗಿದರು.
15 ತನ್ನನ್ನು ಬಲವಂತದಿಂದ ರಾಜನನ್ನಾಗಿ ಮಾಡಲು ಜನರು ಯೋಚಿಸುತ್ತಿದ್ದಾರೆಂಬುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು ಅಲ್ಲಿಂದ ತಾನೊಬ್ಬನೇ ಬೆಟ್ಟಕ್ಕೆ ಮತ್ತೆ ಹೋದನು.
ನೀರಿನ ಮೇಲೆ ಕಾಲ್ನಡಿಗೆ
(ಮತ್ತಾಯ 14:22-27; ಮಾರ್ಕ 6:45-52)
16 ಆ ಸಾಯಂಕಾಲ ಯೇಸುವಿನ ಶಿಷ್ಯರು ಸರೋವರಕ್ಕೆ (ಗಲಿಲಾಯ) ಹೋದರು. 17 ಆಗಲೇ ಕತ್ತಲಾಗಿತ್ತು. ಯೇಸು ಅವರ ಬಳಿಗೆ ಇನ್ನೂ ಬಂದಿರಲಿಲ್ಲ. ಆದ್ದರಿಂದ ಶಿಷ್ಯರು ದೋಣಿಯನ್ನು ಹತ್ತಿ ಸರೋವರದ ಆಚೆಯ ಕಡೆಯಿದ್ದ ಕಪೆರ್ನೌಮಿಗೆ ಹೊರಟರು. 18 ಗಾಳಿಯು ಬಹು ರಭಸವಾಗಿ ಬೀಸುತ್ತಿತ್ತು. ಸರೋವರದ ಅಲೆಗಳು ದೊಡ್ಡದಾಗುತ್ತಿದ್ದವು. 19 ಅವರು ಹುಟ್ಟುಹಾಕುತ್ತಾ ಸುಮಾರು ಮೂರು ಅಥವಾ ನಾಲ್ಕು ಮೈಲಿಗಳವರೆಗೆ ದೋಣಿಯನ್ನು ನಡೆಸಿದ ನಂತರ ಯೇಸುವನ್ನು ಕಂಡರು. ಆತನು ನೀರಿನ ಮೇಲೆ ನಡೆಯುತ್ತಾ ದೋಣಿಯ ಸಮೀಪಕ್ಕೆ ಬರುತ್ತಿರುವುದನ್ನು ಕಂಡು ಅವರಿಗೆ ಭಯವಾಯಿತು. 20 ಯೇಸು ಅವರಿಗೆ, “ಹೆದರಬೇಡಿರಿ, ನಾನೇ” ಎಂದು ಹೇಳಿದನು. 21 ಆಗ ಅವರು ಯೇಸುವನ್ನು ದೋಣಿಯೊಳಗೆ ಬರಮಾಡಿಕೊಳ್ಳಬೇಕೆಂದಿದ್ದರು. ಅಷ್ಟರಲ್ಲೇ, ಅವರು ಹೋಗಬೇಕೆಂದಿದ್ದ ಸ್ಥಳದ ದಡಕ್ಕೆ ದೋಣಿಯು ತಲುಪಿತು.
Kannada Holy Bible: Easy-to-Read Version. All rights reserved. © 1997 Bible League International