Revised Common Lectionary (Semicontinuous)
ರಚನೆಗಾರ: ದಾವೀದ.
14 ಮೂಢರು ತಮ್ಮ ಹೃದಯದಲ್ಲಿ, “ದೇವರಿಲ್ಲ” ಎಂದುಕೊಳ್ಳುವರು.
ಮೂಢರು ಭಯಂಕರವಾದ ಅಸಹ್ಯಕೃತ್ಯಗಳನ್ನು ಮಾಡುವರು.
ಅವರಲ್ಲಿ ಒಳ್ಳೆಯದನ್ನು ಮಾಡುವವರು ಇಲ್ಲವೇ ಇಲ್ಲ.
2 ದೇವರಿಗಾಗಿ ಹುಡುಕುವ ಬುದ್ಧಿವಂತರು ಮನುಷ್ಯರಲ್ಲಿ ಇದ್ದಾರೋ
ಎಂದು ಯೆಹೋವನು ಪರಲೋಕದಿಂದ ಮನುಷ್ಯರನ್ನು ನೋಡುವನು.
3 ಆದರೆ ಪ್ರತಿಯೊಬ್ಬನೂ ದೇವರಿಗೆ ವಿಮುಖನಾಗಿದ್ದಾನೆ.
ಎಲ್ಲರೂ ಕೆಟ್ಟುಹೋಗಿದ್ದಾರೆ.
ಒಳ್ಳೆಯದನ್ನು ಮಾಡುವವನು ಇಲ್ಲ;
ಒಬ್ಬನಾದರೂ ಇಲ್ಲ.
4 ದುಷ್ಟರು ಅರ್ಥಮಾಡಿಕೊಳ್ಳುವುದಿಲ್ಲವೇ?
ಅವರು ನನ್ನ ಜನರನ್ನು ಆಹಾರವನ್ನೋ ಎಂಬಂತೆ ನುಂಗಿಬಿಡುತ್ತಾರೆ.
ಅವರು ಯೆಹೋವನನ್ನು ಆರಾಧಿಸುವುದೂ ಇಲ್ಲ.
5-6 ಬಡವರ ಬುದ್ಧಿಮಾತನ್ನು ಆ ದುಷ್ಟರು ಕೇಳುವುದಿಲ್ಲ.
ಯಾಕೆಂದರೆ ಬಡವರು ಆಶ್ರಯಿಸಿಕೊಂಡಿರುವುದು ಯೆಹೋವನನ್ನೇ.
ಆದರೆ ದೇವರು ನೀತಿವಂತರೊಂದಿಗಿದ್ದಾನೆ.
ಆದ್ದರಿಂದ ದುಷ್ಟರು ಭಯಭ್ರಾಂತರಾಗುವರು.
7 ಚೀಯೋನ್ ಪರ್ವತದ ಮೇಲಿರುವಾತನು ಇಸ್ರೇಲನ್ನು ರಕ್ಷಿಸುವನೇ?
ಯೆಹೋವನ ಪ್ರಜೆಗಳು ಸೆರೆ ಒಯ್ಯಲ್ಪಟ್ಟು ಸೆರೆವಾಸದಲ್ಲಿದ್ದಾರೆ.
ಯೆಹೋವನಾದರೋ ತನ್ನ ಪ್ರಜೆಗಳನ್ನು ಬಿಡಿಸಿಕೊಂಡು ಬರುವನು;
ಆಗ ಯಾಕೋಬ್ಯರು ಉಲ್ಲಾಸಗೊಳ್ಳುವರು; ಇಸ್ರೇಲರು ಹರ್ಷಿಸುವರು.
ಅಮ್ಮೋನಿಯರ ವಿರುದ್ಧ ಯುದ್ಧ
6 ಅಮ್ಮೋನಿಯರು ತಾವು ದಾವೀದನಿಗೆ ಶತ್ರುಗಳಾಗಿರುವುದಾಗಿ ತಿಳಿದುಕೊಂಡರು. ಆದ್ದರಿಂದ ಅಮ್ಮೋನಿಯರು ಹಣಕೊಟ್ಟು ಬೇತ್‌ರೆಹೋಬ್ ಮತ್ತು ಚೋಬಾಗಳಿಂದ ಅರಾಮ್ಯರ ಇಪ್ಪತ್ತುಸಾವಿರ ಮಂದಿ ಭೂದಳವನ್ನು ಬರಮಾಡಿಕೊಂಡರು. ಅಮ್ಮೋನಿಯರು ಮಾಕಾದ ರಾಜನನ್ನು ಮತ್ತು ಅವನ ಒಂದು ಸಾವಿರ ಸೈನಿಕರನ್ನು ಹಾಗೂ ಟೋಬ್‌ನಿಂದ ಹನ್ನೆರಡು ಸಾವಿರ ಮಂದಿ ಸೈನಿಕರನ್ನು ಬರಮಾಡಿಕೊಂಡರು.
7 ಇದು ದಾವೀದನಿಗೆ ತಿಳಿಯಿತು. ಆದ್ದರಿಂದ ಅವನು ಯೋವಾಬನನ್ನು ಎಲ್ಲಾ ಶೂರ ಸೈನಿಕರೊಂದಿಗೆ ಕಳುಹಿಸಿದನು. 8 ಅಮ್ಮೋನಿಯರು ಹೊರಗೆ ಬಂದು ಯುದ್ಧಕ್ಕೆ ಸಿದ್ಧರಾದರು. ಅವರು ನಗರದ ಬಾಗಿಲಿನಲ್ಲಿ ನಿಂತರು. ಚೋಬಾ ಮತ್ತು ರೆಹೋಬ್‌ಗಳ ಅರಾಮ್ಯರು, ಟೋಬ್ ಮತ್ತು ಮಾಕಾದ ಜನರು ಯುದ್ಧರಂಗದಲ್ಲಿ ಅಮ್ಮೋನಿಯರ ಜೊತೆಯಲ್ಲಿ ಒಟ್ಟಾಗಿ ನಿಲ್ಲಲಿಲ್ಲ.
9 ಅಮ್ಮೋನಿಯರು ತಮ್ಮ ವಿರುದ್ಧವಾಗಿ ಹಿಂದೆ ಮತ್ತು ಮುಂದೆ ನಿಂತಿರುವುದನ್ನು ನೋಡಿದ ಯೋವಾಬನು ಇಸ್ರೇಲರಲ್ಲಿ ಶ್ರೇಷ್ಠರಾದವರನ್ನು ಆರಿಸಿಕೊಂಡು ಅರಾಮ್ಯರ ವಿರುದ್ಧ ಯುದ್ಧಮಾಡಲು ಅವರನ್ನು ಸಾಲಾಗಿ ನಿಲ್ಲಿಸಿದನು. 10 ಬಳಿಕ ಯೋವಾಬನು ಉಳಿದ ಜನರನ್ನು ತನ್ನ ತಮ್ಮನಾದ ಅಬೀಷೈಯ ವಶಕ್ಕೆ ಕೊಟ್ಟು ಅಮ್ಮೋನಿಯರ ವಿರುದ್ಧ ಹೋರಾಡಲು ಕಳುಹಿಸಿದನು. 11 ಯೋವಾಬನು ಅಬೀಷೈಗೆ, “ಅರಾಮ್ಯರು ನನಗಿಂತ ಬಲಶಾಲಿಗಳೆಂದು ಕಂಡುಬಂದರೆ ನೀನು ನನಗೆ ಸಹಾಯಮಾಡು. ಅಮ್ಮೋನಿಯರು ನಿನಗೆ ಬಲಶಾಲಿಗಳೆಂದು ಕಂಡು ಬಂದರೆ ನಾನು ನಿನ್ನ ಸಹಾಯಕ್ಕೆ ಬರುತ್ತೇನೆ. 12 ನೀನು ಶಕ್ತನಾಗಿರು. ನಮ್ಮ ಜನರಿಗಾಗಿ ಮತ್ತು ನಮ್ಮ ದೇವರ ನಗರಗಳಿಗಾಗಿ ಧೈರ್ಯದಿಂದ ಹೋರಾಡೋಣ. ಯೆಹೋವನು ತನಗೆ ಸರಿಯೆನಿಸುವುದನ್ನು ಮಾಡಲಿ” ಎಂದು ಹೇಳಿದನು.
ಇತರರೊಂದಿಗೆ ನಿಮ್ಮ ಹೊಸ ಜೀವನ
12 ದೇವರು ನಿಮ್ಮನ್ನು ಆರಿಸಿಕೊಂಡಿದ್ದಾನೆ ಮತ್ತು ನಿಮ್ಮನ್ನು ತನ್ನ ಪವಿತ್ರ ಜನರನ್ನಾಗಿಸಿದ್ದಾನೆ. ಆತನು ನಿಮ್ಮನ್ನು ಪ್ರೀತಿಸುತ್ತಾನೆ. ಹೀಗಿರಲಾಗಿ ಕನಿಕರ, ದಯೆ, ದೀನತೆ, ವಿನಯಶೀಲತೆ, ಶಾಂತಿ, ಸಹನೆ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ. 13 ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ. ಬೇರೆಯವರ ಮೇಲೆ ಹೇಳುವಂಥ ದೂರುಗಳು ನಿಮ್ಮಲ್ಲಿದ್ದರೂ ಕ್ಷಮಿಸಿಬಿಡಿರಿ. ಪ್ರಭುವು ನಿಮ್ಮನ್ನು ಕ್ಷಮಿಸಿದ್ದರಿಂದ ನೀವೂ ಇತರರನ್ನು ಕ್ಷಮಿಸಿರಿ. 14 ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮಲ್ಲಿ ಪ್ರೀತಿಯಿರಲಿ. ಪ್ರೀತಿಯು ನಿಮ್ಮನ್ನೆಲ್ಲರನ್ನೂ ಸಂಪೂರ್ಣವಾದ ಒಗ್ಗಟ್ಟಿನಲ್ಲಿರಿಸುವುದು. 15 ಕ್ರಿಸ್ತನು ನೀಡುವ ಶಾಂತಿಯು ನಿಮ್ಮ ಆಲೋಚನಗಳನ್ನೆಲ್ಲ ತನ್ನ ಹತೋಟಿಯಲ್ಲಿಟ್ಟುಕೊಂಡಿರಲಿ. ನೀವೆಲ್ಲರೂ ಒಂದೇ ದೇಹಕ್ಕೆ ಸೇರಿದವರಾದ್ದರಿಂದ ಶಾಂತಿಯಿಂದಿರಲು ಕರೆಯಲ್ಪಟ್ಟಿದ್ದೀರಿ. ಯಾವಾಗಲು ಕೃತಜ್ಞರಾಗಿರಿ.
16 ಕ್ರಿಸ್ತನ ಉಪದೇಶವು ನಿಮ್ಮ ಅಂತರಂಗದಲ್ಲಿ ಸಮೃದ್ಧವಾಗಿ ನೆಲಸಿರಲಿ. ನೀವು ದೇವರಿಂದ ಕಲಿತುಕೊಂಡದ್ದನ್ನು ಉಪದೇಶಿಸುವುದಕ್ಕೂ ಒಬ್ಬರನ್ನೊಬ್ಬರು ಬಲಪಡಿಸುವುದಕ್ಕೂ ಉಪಯೋಗಿಸಿರಿ. ನಿಮ್ಮ ಹೃದಯದಲ್ಲಿ ದೇವರಿಗೆ ಕೃತಜ್ಞರಾಗಿದ್ದು ಹಾಡುಗಳನ್ನು, ಕೀರ್ತನೆಗಳನ್ನು, ಸಂಗೀತಗಳನ್ನು ಹಾಡಿರಿ. 17 ನೀವು ನುಡಿಯಿಂದಾಗಲಿ, ನಡೆಯಿಂದಾಗಲಿ ಏನು ಮಾಡಿದರೂ ಅದೆಲ್ಲವನ್ನೂ ನಿಮ್ಮ ಪ್ರಭುವಾದ ಯೇಸುವಿಗಾಗಿ ಮಾಡಿರಿ. ನೀವು ಏನು ಮಾಡಿದರೂ ಯೇಸುವಿನ ಮೂಲಕ ತಂದೆಯಾದ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿರಿ.
Kannada Holy Bible: Easy-to-Read Version. All rights reserved. © 1997 Bible League International