Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 61

ರಚನೆಗಾರ: ದಾವೀದ.

61 ದೇವರೇ, ನನ್ನ ಮೊರೆಯನ್ನು ಕೇಳು.
    ನನ್ನ ಪ್ರಾರ್ಥನೆಗೆ ಕಿವಿಗೊಡು.
ನಾನೆಲ್ಲೇ ಇದ್ದರೂ, ಎಷ್ಟೇ ಬಲಹೀನನಾಗಿದ್ದರೂ
    ಸಹಾಯಕ್ಕಾಗಿ ನಿನಗೇ ಮೊರೆಯಿಡುವೆನು!
ಅತ್ಯುನ್ನತವಾದ ಆಶ್ರಯಗಿರಿಗೆ ನನ್ನನ್ನು ಹತ್ತಿಸು.
ನೀನೇ ನನ್ನ ಆಶ್ರಯಸ್ಥಾನ;
    ಶತ್ರುಗಳಿಂದ ಕಾಪಾಡುವ ಭದ್ರವಾದ ಬುರುಜು.
ನಿನ್ನ ಗುಡಾರದಲ್ಲಿ ಸದಾಕಾಲ ವಾಸಿಸುವುದಕ್ಕೂ,
    ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವುದಕ್ಕೂ ತವಕಪಡುತ್ತಿರುವೆ.

ದೇವರೇ, ನನ್ನ ಹರಕೆಗಳನ್ನೆಲ್ಲಾ ನೀನು ಕೇಳಿರುವೆ.
    ನಿನ್ನಲ್ಲಿ ಭಯಭಕ್ತಿಯುಳ್ಳವರಿಗೆ ಬರುವ ಸ್ವಾಸ್ತ್ಯವನ್ನು ನೀನು ನನಗೆ ಕೊಟ್ಟಿರುವೆ.
ರಾಜನಿಗೆ ದೀರ್ಘಾಯುಷ್ಯವನ್ನು ದಯಪಾಲಿಸು.
    ಅವನು ಸದಾಕಾಲ ಜೀವಿಸಲಿ!
ಅವನು ನಿನ್ನ ಸಾನಿಧ್ಯವನ್ನು ಪಡೆದು ಸದಾಕಾಲವೂ ರಾಜನಾಗಿರಲಿ!
    ನಿನ್ನ ನಿಜಪ್ರೀತಿಯಿಂದ ಅವನನ್ನು ಸಂರಕ್ಷಿಸು.
ಆಗ ನಾನು ನಿನ್ನ ಹೆಸರನ್ನು ಸದಾಕಾಲ ಕೊಂಡಾಡುವೆನು.
    ನನ್ನ ಹರಕೆಗಳನ್ನು ಪ್ರತಿದಿನವೂ ಸಲ್ಲಿಸುವೆನು.

2 ಸಮುವೇಲನು 9

ಸೌಲನ ಕುಟುಂಬಕ್ಕೆ ದಾವೀದನು ತೋರಿದ ಅನುಕಂಪ

ದಾವೀದನು, “ಸೌಲನ ಕುಟುಂಬದಲ್ಲಿ ಇನ್ನೂ ಯಾರಾದರೂ ಉಳಿದಿರುವರೇ? ಯೋನಾತಾನನಿಗೋಸ್ಕರ ನಾನು ಆ ವ್ಯಕ್ತಿಗೆ ದಯೆ ತೋರಿಸಬೇಕಾಗಿದೆ” ಎಂದು ಕೇಳಿದನು.

ಸೌಲನ ಮನೆಯಲ್ಲಿ ಸೇವಕನಾಗಿದ್ದ ಚೀಬ ಎಂಬವನೊಬ್ಬನಿದ್ದನು. ದಾವೀದನ ಸೇವಕರು ಚೀಬನನ್ನು ದಾವೀದನ ಬಳಿಗೆ ಕರೆತಂದರು. ರಾಜನಾದ ದಾವೀದನು ಅವನಿಗೆ, “ನೀನು ಚೀಬನೇ?” ಎಂದು ಕೇಳಿದನು.

ಚೀಬನು, “ಹೌದು, ನಿನ್ನ ಸೇವಕನಾದ ಚೀಬನು ನಾನೇ” ಎಂದನು.

ರಾಜನಾದ ದಾವೀದನು, “ಸೌಲನ ಕುಟುಂಬದಲ್ಲಿ ಯಾವ ವ್ಯಕ್ತಿಯಾದರೂ ಉಳಿದಿರುವನೇ? ನಾನು ಆ ವ್ಯಕ್ತಿಗೆ ದೇವರ ಕರುಣೆಯನ್ನು ತೋರಿಸಬೇಕಾಗಿದೆ” ಎಂದು ಹೇಳಿದನು.

ಚೀಬನು ರಾಜನಾದ ದಾವೀದನಿಗೆ, “ಯೋನಾತಾನನ ಮಗನೊಬ್ಬನು ಇನ್ನೂ ಇದ್ದಾನೆ. ಅವನ ಎರಡೂ ಕಾಲುಗಳು ಕುಂಟಾಗಿವೆ” ಎಂದನು.

ರಾಜನಾದ ದಾವೀದನು ಚೀಬನಿಗೆ, “ಅವನು ಎಲ್ಲಿದ್ದಾನೆ?” ಎಂದು ಕೇಳಿದನು.

ಚೀಬನು ರಾಜನಿಗೆ, “ಅವನು ಲೋದೆಬಾರಿನಲ್ಲಿರುವ ಅಮ್ಮೀಯೇಲನ ಮಗನಾದ ಮಾಕೀರನ ಮನೆಯಲ್ಲಿದ್ದಾನೆ” ಎಂದನು.

ಆಗ ರಾಜನಾದ ದಾವೀದನು ಲೋದೆಬಾರಿನಲ್ಲಿ ಅಮ್ಮೀಯೇಲನ ಮಗನಾದ ಮಾಕೀರನ ಮನೆಯಿಂದ ಯೋನಾತಾನನ ಮಗನನ್ನು ಕರೆತರಲು ಸೇವಕರನ್ನು ಕಳುಹಿಸಿದನು. ಯೋನಾತಾನನ ಮಗನಾದ ಮೆಫೀಬೋಶೆತನು ದಾವೀದನ ಬಳಿಗೆ ಬಂದು ಸಾಷ್ಟಾಂಗನಮಸ್ಕಾರ ಮಾಡಿದನು.

ದಾವೀದನು, “ಮೆಫೀಬೋಶೆತನೇ” ಎಂದನು.

ಮೆಫೀಬೋಶೆತನು, “ನಿನ್ನ ಸೇವಕನಾದ ನಾನು ಇಲ್ಲಿದ್ದೇನೆ” ಎಂದನು.

ದಾವೀದನು ಮೆಫೀಬೋಶೆತನಿಗೆ, “ಹೆದರಬೇಡ, ನಾನು ನಿನಗೆ ದಯತೋರಿಸುವೆ. ನಿನ್ನ ತಂದೆಯಾದ ಯೋನಾತಾನನ ಸಲುವಾಗಿ ನಾನು ಇದನ್ನು ಮಾಡುತ್ತೇನೆ. ನಿನ್ನ ಅಜ್ಜನಾದ ಸೌಲನ ಭೂಮಿಯನ್ನೆಲ್ಲಾ ನಾನು ಹಿಂದಕ್ಕೆ ಕೊಡುತ್ತೇನೆ. ನೀನು ಯಾವಾಗಲೂ ನನ್ನ ಪಂಕ್ತಿಯಲ್ಲಿ ಊಟಮಾಡಬೇಕು” ಎಂದು ಹೇಳಿದನು.

ಮೆಫೀಬೋಶೆತನು ದಾವೀದನಿಗೆ ಮತ್ತೆ ಸಾಷ್ಟಾಂಗನಮಸ್ಕಾರ ಮಾಡಿ, “ನೀನು ನಿನ್ನ ಸೇವಕನಾದ ನನಗೆ ಬಹಳ ದಯಾಪರನಾಗಿರುವೆ, ನಾನು ಸತ್ತ ನಾಯಿಗಿಂತ ಉತ್ತಮನೇನಲ್ಲ!” ಎಂದು ಹೇಳಿದನು.

ಆಗ ರಾಜನಾದ ದಾವೀದನು ಸೌಲನ ಸೇವಕನಾದ ಚೀಬನನ್ನು ಕರೆದು, “ನಿನ್ನ ಒಡೆಯನಾದ ಸೌಲನ ಕುಟುಂಬಕ್ಕೆ ಸೇರಿದ ಎಲ್ಲವನ್ನೂ ಅವನ ಮೊಮ್ಮಗನಿಗೆ ಕೊಟ್ಟಿದ್ದೇನೆ. 10 ನೀನು ಮೆಫೀಬೋಶೆತನಿಗಾಗಿ ಭೂಮಿಯಲ್ಲಿ ವ್ಯವಸಾಯ ಮಾಡು. ನಿನ್ನ ಮಕ್ಕಳೂ ನಿನ್ನ ಸೇವಕರೂ ಮೆಫೀಬೋಶೆತನಿಗಾಗಿ ಇದನ್ನು ಮಾಡಲಿ. ನೀನು ಬೆಳೆಗಳನ್ನು ಕೊಯ್ದು ಸುಗ್ಗಿಮಾಡು. ಆಗ ನಿನ್ನ ಒಡೆಯನ ಮೊಮ್ಮಗನಿಗೆ ಬೇಕಾದಷ್ಟು ಆಹಾರವಿರುತ್ತದೆ. ಆದರೆ ನಿನ್ನ ಒಡೆಯನ ಮೊಮ್ಮಗನಾದ ಮೆಫೀಬೋಶೆತನು ಯಾವಾಗಲೂ ನನ್ನ ಪಂಕ್ತಿಯಲ್ಲಿ ಊಟ ಮಾಡಬೇಕು” ಎಂದನು.

ಚೀಬನಿಗೆ ಹದಿನೈದು ಮಂದಿ ಗಂಡುಮಕ್ಕಳೂ, ಇಪ್ಪತ್ತು ಮಂದಿ ಸೇವಕರೂ ಇದ್ದರೂ. 11 ಚೀಬನು ರಾಜನಾದ ದಾವೀದನಿಗೆ, “ನಾನು ನಿನ್ನ ಸೇವಕ. ರಾಜನಾದ ಒಡೆಯನು ನನಗೆ ಆಜ್ಞಾಪಿಸಿದ್ದೆಲ್ಲವನ್ನೂ ನಾನು ಮಾಡುತ್ತೇನೆ” ಎಂದನು.

ಆದ್ದರಿಂದ ಮೆಫೀಬೋಶೆತನು, ರಾಜನ ಗಂಡುಮಕ್ಕಳಲ್ಲಿ ಒಬ್ಬನಂತೆ, ದಾವೀದನ ಪಂಕ್ತಿಯಲ್ಲಿ ಊಟ ಮಾಡುತ್ತಿದ್ದನು. 12 ಮೆಫೀಬೋಶೆತನಿಗೆ ಮೀಕನೆಂಬ ಚಿಕ್ಕ ಮಗನಿದ್ದನು. ಚೀಬನ ಕುಟುಂಬದ ಜನರೆಲ್ಲರೂ ಮೆಫೀಬೋಶೆತನ ಸೇವಕರಾದರು. 13 ಮೆಫೀಬೋಶೆತನ ಎರಡೂ ಕಾಲುಗಳು ಕುಂಟಾಗಿದ್ದವು. ಮೆಫೀಬೋಶೆತನು ಜೆರುಸಲೇಮಿನಲ್ಲಿ ನೆಲೆಸಿದ್ದನು. ಅವನು ಪ್ರತಿದಿನವೂ ರಾಜನ ಪಂಕ್ತಿಯಲ್ಲಿ ಊಟಮಾಡುತ್ತಿದ್ದನು.

ಲೂಕ 15:1-7

ಸ್ವರ್ಗದಲ್ಲಿ ಆನಂದ

(ಮತ್ತಾಯ 18:12-14)

15 ಅನೇಕ ಸುಂಕವಸೂಲಿಗಾರರು ಮತ್ತು ಪಾಪಿಗಳು ಯೇಸುವಿನ ಉಪದೇಶವನ್ನು ಕೇಳಲು ಬಂದಿದ್ದರು. ಆಗ ಫರಿಸಾಯರು ಮತ್ತು ಧರ್ಮೋಪದೇಶಕರು, “ನೋಡಿರಿ! ಈ ಮನುಷ್ಯನು (ಯೇಸು) ಪಾಪಿಗಳನ್ನು ಬರಮಾಡಿಕೊಳ್ಳುತ್ತಾನೆ; ಅವರ ಜೊತೆಯಲ್ಲಿ ಊಟಮಾಡುತ್ತಾನೆ!” ಎಂದು ದೂರು ಹೇಳತೊಡಗಿದರು.

ಆಗ ಯೇಸು ಅವರಿಗೆ ಈ ಸಾಮ್ಯವನ್ನು ಹೇಳಿದನು: “ನಿಮ್ಮಲ್ಲಿ ಒಬ್ಬನಿಗೆ ನೂರು ಕುರಿಗಳಿವೆ ಎಂದು ತಿಳಿದುಕೊಳ್ಳೋಣ. ಆ ಕುರಿಗಳಲ್ಲಿ ಒಂದು ಕಳೆದುಹೋದರೆ, ಅವನು ಉಳಿದ ತೊಂಭತ್ತೊಂಭತ್ತು ಕುರಿಗಳನ್ನು ಅಲ್ಲೇ ಬಿಟ್ಟು ಕಳೆದುಹೋದ ಒಂದು ಕುರಿಗೋಸ್ಕರ ಹುಡುಕುತ್ತಾ ಹೋಗುವನು. ಆ ಕುರಿಯು ಸಿಕ್ಕುವ ತನಕ ಅವನು ಅದಕ್ಕಾಗಿ ಹುಡುಕುತ್ತಲೇ ಇರುವನು. ಅವನು ಆ ಕುರಿಯನ್ನು ಕಂಡುಕೊಂಡಾಗ ಬಹು ಸಂತೋಷಪಡುವನು. ಅವನು ಆ ಕುರಿಯನ್ನು ತನ್ನ ಮನೆಗೆ ಹೊತ್ತುಕೊಂಡು ಹೋಗುವನು. ಅವನು ತನ್ನ ಸ್ನೇಹಿತರ ಮತ್ತು ನೆರೆಹೊರೆಯವರ ಬಳಿಗೆ ಹೋಗಿ, ‘ನನ್ನೊಡನೆ ಸಂತೋಷಪಡಿರಿ, ಕಳೆದುಹೋದ ನನ್ನ ಕುರಿ ಸಿಕ್ಕಿತು’ ಎಂದು ಹೇಳುವನು. ಅದೇ ರೀತಿಯಲ್ಲಿ, ಒಬ್ಬ ಪಾಪಿ ತನ್ನ ಹೃದಯವನ್ನು ಪರಿವರ್ತಿಸಿಕೊಂಡಾಗ ಸ್ವರ್ಗದಲ್ಲಿ ಬಹಳ ಸಂತೋಷವಾಗುತ್ತದೆ ಎಂದು ನಾನು ನಿಮಗೆ ಹೇಳುತ್ತೇನೆ. ತಮ್ಮ ಹೃದಯಗಳನ್ನು ಪರಿವರ್ತಿಸಲು ಅವಶ್ಯವಿಲ್ಲದ ತೊಂಭತ್ತೊಂಭತ್ತು ಒಳ್ಳೆಯ ಜನರಿಗಿಂತ ಆ ಒಬ್ಬ ಪಾಪಿಯ ವಿಷಯದಲ್ಲಿ ಹೆಚ್ಚು ಸಂತೋಷವಾಗುತ್ತದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International