Revised Common Lectionary (Semicontinuous)
ರಚನೆಗಾರ: ದಾವೀದ.
61 ದೇವರೇ, ನನ್ನ ಮೊರೆಯನ್ನು ಕೇಳು.
ನನ್ನ ಪ್ರಾರ್ಥನೆಗೆ ಕಿವಿಗೊಡು.
2 ನಾನೆಲ್ಲೇ ಇದ್ದರೂ, ಎಷ್ಟೇ ಬಲಹೀನನಾಗಿದ್ದರೂ
ಸಹಾಯಕ್ಕಾಗಿ ನಿನಗೇ ಮೊರೆಯಿಡುವೆನು!
ಅತ್ಯುನ್ನತವಾದ ಆಶ್ರಯಗಿರಿಗೆ ನನ್ನನ್ನು ಹತ್ತಿಸು.
3 ನೀನೇ ನನ್ನ ಆಶ್ರಯಸ್ಥಾನ;
ಶತ್ರುಗಳಿಂದ ಕಾಪಾಡುವ ಭದ್ರವಾದ ಬುರುಜು.
4 ನಿನ್ನ ಗುಡಾರದಲ್ಲಿ ಸದಾಕಾಲ ವಾಸಿಸುವುದಕ್ಕೂ,
ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವುದಕ್ಕೂ ತವಕಪಡುತ್ತಿರುವೆ.
5 ದೇವರೇ, ನನ್ನ ಹರಕೆಗಳನ್ನೆಲ್ಲಾ ನೀನು ಕೇಳಿರುವೆ.
ನಿನ್ನಲ್ಲಿ ಭಯಭಕ್ತಿಯುಳ್ಳವರಿಗೆ ಬರುವ ಸ್ವಾಸ್ತ್ಯವನ್ನು ನೀನು ನನಗೆ ಕೊಟ್ಟಿರುವೆ.
6 ರಾಜನಿಗೆ ದೀರ್ಘಾಯುಷ್ಯವನ್ನು ದಯಪಾಲಿಸು.
ಅವನು ಸದಾಕಾಲ ಜೀವಿಸಲಿ!
7 ಅವನು ನಿನ್ನ ಸಾನಿಧ್ಯವನ್ನು ಪಡೆದು ಸದಾಕಾಲವೂ ರಾಜನಾಗಿರಲಿ!
ನಿನ್ನ ನಿಜಪ್ರೀತಿಯಿಂದ ಅವನನ್ನು ಸಂರಕ್ಷಿಸು.
8 ಆಗ ನಾನು ನಿನ್ನ ಹೆಸರನ್ನು ಸದಾಕಾಲ ಕೊಂಡಾಡುವೆನು.
ನನ್ನ ಹರಕೆಗಳನ್ನು ಪ್ರತಿದಿನವೂ ಸಲ್ಲಿಸುವೆನು.
ದಾವೀದನು ಅನೇಕ ಯುದ್ಧಗಳಲ್ಲಿ ಜಯಗಳಿಸಿದ್ದು
8 ತರುವಾಯ, ದಾವೀದನು ಫಿಲಿಷ್ಟಿಯರನ್ನು ಸೋಲಿಸಿ ಬಹುವಿಸ್ತಾರವಾದ ಪ್ರದೇಶವನ್ನು ಹತೋಟಿಯಲ್ಲಿಟ್ಟುಕೊಂಡಿದ್ದ ಅವರ ರಾಜಧಾನಿಯನ್ನು ಸ್ವಾಧೀನಪಡಿಸಿಕೊಂಡನು. 2 ಮೋವಾಬಿನ ಜನರನ್ನು ಸಹ ದಾವೀದನು ಸೋಲಿಸಿದನು. ಅವರನ್ನು ನೆಲದ ಮೇಲೆ ಬಲವಂತದಿಂದ ಮಲಗಿಸಿ ಹಗ್ಗದಿಂದ ಅವರನ್ನು ಸಾಲುಸಾಲಾಗಿ ವಿಂಗಡಿಸಿದನು. ಎರಡು ಸಾಲಿನ ಗಂಡಸರನ್ನು ಕೊಲ್ಲಿಸಿದನು; ಆದರೆ ಮೂರನೆಯ ಸಾಲಿನ ಗಂಡಸರನ್ನು ಜೀವಂತವಾಗಿ ಉಳಿಸಿದನು. ಮೋವಾಬಿನ ಜನರು ದಾವೀದನ ಸೇವಕರಾದರು. ಅವರು ಅವನಿಗೆ ಕಪ್ಪಕಾಣಿಕೆಗಳನ್ನು ಅರ್ಪಿಸಿದರು.
3 ಹದದೆಜೆರನು ರೆಹೋಬನ ಮಗ ಹಾಗೂ ಚೋಬದ ರಾಜ. ದಾವೀದನು ಯೂಫ್ರೇಟೀಸ್ ನದಿಯ ಸುತ್ತಲಿನ ಪ್ರದೇಶವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾಗ, ಹದದೆಜೆರನನ್ನು ಸೋಲಿಸಿದನು. 4 ಹದದೆಜೆರನಿಂದ ಒಂದು ಸಾವಿರ ರಥಗಳನ್ನೂ ಒಂದು ಸಾವಿರದ ಏಳುನೂರು ಅಶ್ವಪಡೆಗಳನ್ನೂ ದಾವೀದನು ತೆಗೆದುಕೊಂಡನು. ಅವನು ಇಪ್ಪತ್ತು ಸಾವಿರ ಕಾಲಾಳು ಸೈನಿಕರನ್ನು ಸಹ ಪಡೆದನು. ದಾವೀದನು ಒಂದು ನೂರು ರಥದ ಕುದುರೆಗಳನ್ನು ಇಟ್ಟುಕೊಂಡು ಉಳಿದವುಗಳನ್ನು ಕುಂಟುವಂತೆ ಮಾಡಿದನು.
5 ಚೋಬದ ರಾಜನಾದ ಹದದೆಜೆರನ ಸಹಾಯಕ್ಕೆ ದಮಸ್ಕದ ಅರಾಮ್ಯರು ಬಂದರು. ಆದರೆ ದಾವೀದನು ಆ ಇಪ್ಪತ್ತೆರಡು ಸಾವಿರ ಅರಾಮ್ಯರನ್ನು ಸಂಹರಿಸಿದನು. 6 ಬಳಿಕ ದಾವೀದನು ದಮಸ್ಕದ ಅರಾಮ್ ದೇಶದಲ್ಲಿ ಕಾವಲುದಂಡನ್ನು ಇರಿಸಿದನು. ಅರಾಮ್ಯರು ದಾವೀದನ ಸೇವಕರಾದರು ಮತ್ತು ಅವನಿಗೆ ಕಾಣಿಕೆಗಳನ್ನು ತಂದರು. ದಾವೀದನು ಹೋದ ಸ್ಥಳಗಳಲ್ಲೆಲ್ಲ ಯೆಹೋವನು ಜಯವನ್ನು ಉಂಟುಮಾಡಿದನು.
7 ಹದದೆಜೆರನ ಸೇವಕರಿಗೆ ಸೇರಿದ ಚಿನ್ನದ ಗುರಾಣಿಗಳನ್ನು ದಾವೀದನು ವಶಪಡಿಸಿಕೊಂಡನು. ದಾವೀದನು ಅವುಗಳನ್ನು ಜೆರುಸಲೇಮಿಗೆ ತಂದನು. 8 ಹದದೆಜೆರನಿಗೆ ಸೇರಿದ ನಗರಗಳಾದ ಬೆಟಹ ಮತ್ತು ಬೇರೋತೈಗಳಿಂದ ಹಿತ್ತಾಳೆಯ ಅನೇಕಾನೇಕ ವಸ್ತುಗಳನ್ನು ದಾವೀದನು ವಶಪಡಿಸಿಕೊಂಡನು.
9 ಹದದೆಜೆರನ ಸೈನ್ಯವನ್ನೆಲ್ಲ ದಾವೀದನು ಸೋಲಿಸಿದನೆಂಬ ವರ್ತಮಾನವು ಹಮಾತಿನ ರಾಜನಾದ ತೋವಿಗೆ ತಿಳಿಯಿತು. 10 ಆಗ ತೋವಿಯು ತನ್ನ ಮಗನಾದ ಯೋರಾಮನನ್ನು ರಾಜನಾದ ದಾವೀದನ ಬಳಿಗೆ ಕಳುಹಿಸಿದನು. ದಾವೀದನು ಹದದೆಜೆರನ ವಿರುದ್ಧ ಹೋರಾಡಿ ಅವನನ್ನು ಸೋಲಿಸಿದ್ದಕ್ಕಾಗಿ ಯೋರಾಮನು ದಾವೀದನನ್ನು ಅಭಿನಂದಿಸಿದನು ಮತ್ತು ಆಶೀರ್ವದಿಸಿದನು. (ಈ ಮೊದಲು ಹದದೆಜೆರನು ತೋವಿಗೆ ವಿರುದ್ಧವಾಗಿ ಯುದ್ಧವನ್ನು ಮಾಡಿದನು.) ಯೋರಾಮನು ಚಿನ್ನ, ಬೆಳ್ಳಿ ಮತ್ತು ಹಿತ್ತಾಳೆಯಿಂದ ಮಾಡಿದ ವಸ್ತುಗಳನ್ನು ತಂದಿದ್ದನು. 11 ದಾವೀದನು ಆ ವಸ್ತುಗಳನ್ನು ತೆಗೆದುಕೊಂಡು ಯೆಹೋವನಿಗೆ ಸಮರ್ಪಿಸಿದನು. ಅವನು ಅನ್ಯದೇಶಗಳನ್ನು ಸೋಲಿಸಿದ್ದಾಗ ಯೆಹೋವನಿಗೆ ಸಮರ್ಪಿಸಿದ್ದ ಬೆಳ್ಳಿ ಮತ್ತು ಚಿನ್ನಗಳೊಂದಿಗೆ ಇವುಗಳನ್ನೂ ಸೇರಿಸಿದನು. 12 ಆತನು ಸೋಲಿಸಿದ ದೇಶಗಳು ಯಾವುವೆಂದರೆ: ಅರಾಮ್, ಮೋವಾಬ್, ಅಮ್ಮೋನಿಯ, ಫಿಲಿಷ್ಟಿಯ ಮತ್ತು ಅಮಾಲೇಕ್ಯ. ಚೋಬದ ರಾಜನಾದ ರೆಹೋಬನ ಮಗ ಹದದೆಜೆರನನ್ನು ಸಹ ದಾವೀದನು ಸೋಲಿಸಿದನು. 13 ದಾವೀದನು ಉಪ್ಪಿನ ಕಣಿವೆಯಲ್ಲಿ ಹದಿನೆಂಟು ಸಾವಿರ ಎದೋಮ್ಯರನ್ನು ಸೋಲಿಸಿದನು. ಅವನು ಮನೆಗೆ ಹಿಂದಿರುಗುವಷ್ಟರಲ್ಲಿ ಪ್ರಸಿದ್ಧನಾಗಿದ್ದನು. 14 ದಾವೀದನು ಎದೋಮಿನ ಎಲ್ಲಾ ಕಡೆಯಲ್ಲೂ ಕಾವಲುದಂಡನ್ನು ಇರಿಸಿದನು. ಎದೋಮಿನ ಜನರೆಲ್ಲರೂ ದಾವೀದನ ಸೇವಕರಾದರು. ದಾವೀದನು ಹೋದ ಕಡೆಗಳಲ್ಲೆಲ್ಲಾ ಯೆಹೋವನು ಜಯವನ್ನು ಉಂಟುಮಾಡಿದನು.
ದಾವೀದನ ರಾಜ್ಯಾಡಳಿತ
15 ದಾವೀದನು ಸಮಸ್ತ ಇಸ್ರೇಲರನ್ನು ಆಳಿದನು. ದಾವೀದನು ಜನರಿಗೆ ನ್ಯಾಯವಾದ ಮತ್ತು ಸರಿಯಾದ ತೀರ್ಪುಗಳನ್ನು ಕೊಡುತ್ತಿದ್ದನು. 16 ಚೆರೂಯಳ ಮಗನಾದ ಯೋವಾಬನು ಅವನ ಸೈನ್ಯದ ಅಧಿಕಾರಿಯಾಗಿದ್ದನು. ಅಹೀಲೂದನ ಮಗನಾದ ಯೆಹೋಷಾಫಾಟನು ಇತಿಹಾಸಕಾರನಾಗಿದ್ದನು. 17 ಅಹೀಟೂಬನ ಮಗನಾದ ಚಾದೋಕನೂ ಎಬ್ಯಾತಾರನ ಮಗನಾದ ಅಹೀಮೆಲೆಕನೂ ಯಾಜಕರಾಗಿದ್ದರು. ಸೆರಾಯನು ಕಾರ್ಯದರ್ಶಿಯಾಗಿದ್ದನು. 18 ಯೆಹೋಯಾದಾವನ ಮಗ ಬೆನಾಯನು ಕೆರೇತ್ಯರು ಮತ್ತು ಪೆಲೇತ್ಯರು ಎಂಬ ಕಾವಲು ದಂಡುಗಳ ಅಧಿಪತಿಯಾಗಿದ್ದನು. ದಾವೀದನ ಮಕ್ಕಳೆಲ್ಲರೂ ಮುಖ್ಯಾಧಿಕಾರಿಗಳಾಗಿದ್ದರು.[a]
ಎಫೆಸದ ಹಿರಿಯರಿಗೆ ಪೌಲನ ಬುದ್ಧಿಮಾತು
17 ಪೌಲನು ಮಿಲೇತದಿಂದ ಒಂದು ಸಂದೇಶವನ್ನು ಎಫೆಸಕ್ಕೆ ಕಳುಹಿಸಿ ಅಲ್ಲಿನ ಸಭೆಯ ಹಿರಿಯರನ್ನು ತನ್ನ ಬಳಿಗೆ ಬರಮಾಡಿಕೊಂಡನು.
18 ಆ ಹಿರಿಯರು ಬಂದಾಗ ಪೌಲನು ಅವರಿಗೆ, “ನಾನು ಏಷ್ಯಾ ಪ್ರಾಂತ್ಯಕ್ಕೆ ಬಂದ ಮೊದಲನೆಯ ದಿನದಿಂದಲೂ ನೀವು ನನ್ನ ಜೀವಿತದ ಬಗ್ಗೆ ತಿಳಿದಿದ್ದೀರಿ. ನಾನು ನಿಮ್ಮೊಂದಿಗೆ ಇದ್ದ ಕಾಲದಲ್ಲೆಲ್ಲಾ ನಾನು ಯಾವ ರೀತಿಯಲ್ಲಿ ಜೀವಿಸಿದೆನೆಂಬುದು ನಿಮಗೆ ಗೊತ್ತಿದೆ. 19 ಯೆಹೂದ್ಯರು ನನಗೆ ವಿರೋಧವಾಗಿ ಮಾಡಿದ ಒಳಸಂಚುಗಳಿಂದ ನಾನು ಬಹಳ ಕಷ್ಟಪಡಬೇಕಾಯಿತು. ಅನೇಕ ಸಲ ಕಣ್ಣೀರಿಡಬೇಕಾಯಿತು. ಆದರೆ ನಾನು ಯಾವಾಗಲೂ ಪ್ರಭುವಿನ ಸೇವೆ ಮಾಡಿದೆನೆಂಬುದು ನಿಮಗೆ ಗೊತ್ತಿದೆ. ನಾನು ನನ್ನ ಬಗ್ಗೆ ಚಿಂತಿಸದೆ, 20 ನಿಮಗೆ ಒಳ್ಳೆಯದನ್ನೇ ಯಾವಾಗಲೂ ಮಾಡಿದೆನು. ನಾನು ನಿಮಗೆ ಯೇಸುವಿನ ಕುರಿತಾದ ಸುವಾರ್ತೆಯನ್ನು ಬಹಿರಂಗವಾಗಿ ಜನರೆದುರಿನಲ್ಲಿ ತಿಳಿಸಿದೆನು ಮತ್ತು ನಿಮ್ಮ ಮನೆಗಳಲ್ಲಿಯೂ ಸಹ ಬೋಧಿಸಿದೆನು. 21 ನಿಮ್ಮ ಹೃದಯಗಳನ್ನು ಮಾರ್ಪಡಿಸಿಕೊಂಡು ದೇವರ ಕಡೆಗೆ ತಿರುಗಿಕೊಳ್ಳಬೇಕೆಂದು ನಾನು ಎಲ್ಲಾ ಜನಾಂಗಗಳವರಿಗೆ ಅಂದರೆ ಯೆಹೂದ್ಯರಿಗೂ ಮತ್ತು ಗ್ರೀಕರಿಗೂ ತಿಳಿಸಿದೆನು. ನಮ್ಮ ಪ್ರಭುವಾದ ಯೇಸುವಿನಲ್ಲಿ ನಂಬಿಕೆ ಇಡಬೇಕೆಂದು ನಾನು ಅವರೆಲ್ಲರಿಗೂ ತಿಳಿಸಿದೆನು.
22 “ಆದರೆ ಈಗ ನಾನು ಪವಿತ್ರಾತ್ಮನಿಗೆ ವಿಧೇಯನಾಗಿ ಜೆರುಸಲೇಮಿಗೆ ಹೋಗಬೇಕು. ಅಲ್ಲಿ ನನಗೆ ಏನು ಸಂಭವಿಸುವುದೋ ತಿಳಿಯದು. 23 ಜೆರುಸಲೇಮಿನಲ್ಲಿ ತೊಂದರೆಗಳು ಮತ್ತು ಸೆರೆವಾಸವು ನನಗಾಗಿ ಕಾದಿವೆಯೆಂದು ಪವಿತ್ರಾತ್ಮನು ಪ್ರತಿಯೊಂದು ಪಟ್ಟಣದಲ್ಲಿಯೂ ನನಗೆ ಹೇಳುತ್ತಿರುವುದು ಮಾತ್ರ ಸ್ಪಷ್ಟವಾಗಿದೆ. 24 ನಾನು ನನ್ನ ಸ್ವಂತ ಪ್ರಾಣದ ಬಗ್ಗೆ ಚಿಂತಿಸುವುದಿಲ್ಲ. ಪ್ರಭುವಾದ ಯೇಸು ನನಗೆ ಕೊಟ್ಟಿರುವ ಕೆಲಸವನ್ನು ಪೂರೈಸುವುದೇ ನನಗೆ ಅತ್ಯಂತ ಮುಖ್ಯವಾಗಿದೆ. ದೇವರ ಕೃಪೆಯ ವಿಷಯವಾದ ಸುವಾರ್ತೆಯ ಬಗ್ಗೆ ಸಾಕ್ಷಿ ನೀಡುವುದೇ ನನ್ನ ಕೆಲಸವಾಗಿದೆ. ಆ ಕೆಲಸವನ್ನು ಮಾಡಿ ಪೂರೈಸುವುದೇ ನನ್ನ ಅಪೇಕ್ಷೆಯಾಗಿದೆ.
25 “ಈಗ ನನಗೆ ಕಿವಿಗೊಡಿ. ನಿಮ್ಮಲ್ಲಿ ಒಬ್ಬರಾಗಲಿ ನನ್ನನ್ನು ಮತ್ತೆಂದಿಗೂ ನೋಡುವುದಿಲ್ಲವೆಂದು ನನಗೆ ಗೊತ್ತಿದೆ. ನಿಮ್ಮೊಂದಿಗೆ ಇದ್ದ ಸಮಯದಲ್ಲೆಲ್ಲಾ ದೇವರ ರಾಜ್ಯದ ವಿಷಯವಾದ ಸುವಾರ್ತೆಯನ್ನು ನಾನು ನಿಮಗೆ ತಿಳಿಸಿದೆನು. 26 ಆದ್ದರಿಂದ ಇಂದು ನಾನು ನಿಮಗೆ ದೃಢವಾಗಿ ಹೇಳಬಹುದಾದ ಒಂದು ಸಂಗತಿಯೇನೆಂದರೆ, ನಿಮ್ಮಲ್ಲಿ ಯಾರಾದರೂ ರಕ್ಷಣೆ ಹೊಂದಿಲ್ಲದಿದ್ದರೆ ಅದಕ್ಕೆ ನಾನು ಹೊಣೆಯಲ್ಲ. 27 ಯಾಕೆಂದರೆ ದೇವರ ಅಪೇಕ್ಷೆಗನುಸಾರವಾಗಿ ನೀವು ತಿಳಿದುಕೊಳ್ಳಬೇಕಾದ ಪ್ರತಿಯೊಂದನ್ನೂ ನಾನು ನಿಮಗೆ ನಿಶ್ಚಯವಾಗಿ ತಿಳಿಸಿದ್ದೇನೆ. 28 ಆದ್ದರಿಂದ ನಿಮ್ಮ ವಿಷಯದಲ್ಲಿಯೂ ಪವಿತ್ರಾತ್ಮನು ನಿಮ್ಮ ಪಾಲನೆಗೆ ವಹಿಸಿರುವ ಮಂದೆಯ ವಿಷಯದಲ್ಲಿಯೂ ಎಚ್ಚರಿಕೆಯಿಂದಿರಿ. ದೇವರು ತನ್ನ ಸ್ವಂತ ರಕ್ತದಿಂದ ಕೊಂಡುಕೊಂಡಿರುವ ಸಭೆಗೆ ನೀವು ಕುರುಬರಾಗಿದ್ದೀರಿ. 29 ನಾನು ಹೊರಟುಹೋದ ಮೇಲೆ ಬೇರೆಯವರು ನಿಮ್ಮ ಸಭೆಗೆ ಬರುತ್ತಾರೆಂದು ನನಗೆ ಗೊತ್ತಿದೆ. ಕ್ರೂರವಾದ ತೋಳಗಳಂತಿರುವ ಅವರು ಮಂದೆಯನ್ನು ನಾಶಮಾಡಲು ಪ್ರಯತ್ನಿಸುವರು. 30 ಅಲ್ಲದೆ, ನಿಮ್ಮ ಸಭೆಯ ಕೆಲವು ಜನರೇ ದುರ್ಬೋಧಕರಾಗಿ ಯೇಸುವಿನ ಶಿಷ್ಯರಲ್ಲಿ ಕೆಲವರನ್ನು ಸತ್ಯದಿಂದ ದೂರಕ್ಕೆ ನಡೆಸುವರು. 31 ಆದ್ದರಿಂದ ಎಚ್ಚರಿಕೆಯಿಂದಿರಿ! ನಾನು ಮೂರು ವರ್ಷಗಳ ಕಾಲ ನಿಮ್ಮೊಂದಿಗೆ ಇದ್ದೆನು. ಈ ಕಾಲಾವಧಿಯಲ್ಲಿ ನಾನು ನಿಮಗೆ ಹಗಲಿರುಳು ಉಪದೇಶಿಸುತ್ತಾ ನಿಮಗಾಗಿ ಕಣ್ಣೀರಿಡುತ್ತಾ ನಿಮ್ಮನ್ನು ಎಚ್ಚರಿಸಿದ್ದನ್ನು ಮರೆಯದಿರಿ.
32 “ಈಗ ನಾನು ನಿಮ್ಮನ್ನು ದೇವರಿಗೂ ಆತನ ಕೃಪಾವಾಕ್ಯಕ್ಕೂ ಒಪ್ಪಿಸಿಕೊಡುತ್ತಿದ್ದೇನೆ. ಆತನ ಕೃಪಾವಾಕ್ಯವು ನಿಮ್ಮ ಭಕ್ತಿಯನ್ನು ವೃದ್ಧಿಪಡಿಸಿ ಪರಿಶುದ್ಧರ ಬಾಧ್ಯತೆಯಲ್ಲಿ ಪಾಲುಗಾರರನ್ನಾಗಿ ಮಾಡುವುದು. 33 ನಾನು ನಿಮ್ಮೊಂದಿಗೆ ಇದ್ದಾಗ, ಯಾರ ಹಣವನ್ನಾಗಲಿ ಒಳ್ಳೆಯ ಬಟ್ಟೆಗಳನ್ನಾಗಲಿ ಎಂದೂ ಬಯಸಲಿಲ್ಲ. 34 ನಾನು ಯಾವಾಗಲೂ ನನ್ನ ಅಗತ್ಯತೆಗಳನ್ನು ಮತ್ತು ನನ್ನೊಂದಿಗಿರುವವರ ಅಗತ್ಯತೆಗಳನ್ನು ಪೂರೈಸುವುದಕ್ಕಾಗಿ ದುಡಿಯುತ್ತಿದ್ದೆನು ಎಂಬುದು ನಿಮಗೆ ಗೊತ್ತಿದೆ. 35 ಕಷ್ಟಪಟ್ಟು ದುಡಿದು ದುರ್ಬಲರಿಗೆ ನೆರವಾಗಬೇಕೆಂದು ನಾನೇ ನಿಮಗೆ ಮಾದರಿಯಾಗಿ ತೋರಿಸಿಕೊಟ್ಟಿದ್ದೇನೆ. ‘ತೆಗೆದುಕೊಳ್ಳುವುದಕ್ಕಿಂತ ಕೊಡುವುದರಲ್ಲೇ ಹೆಚ್ಚು ಸಂತೋಷ’ ಎಂಬ ಯೇಸುವಿನ ಮಾತನ್ನು ನಾವು ಮರೆಯಕೂಡದೆಂದು ನಿಮಗೆ ಉಪದೇಶಿಸಿದೆನು” ಎಂದು ಹೇಳಿದನು.
36 ಪೌಲನು ಈ ಸಂಗತಿಗಳನ್ನು ಹೇಳಿ ಮುಗಿಸಿದ ಮೇಲೆ ಮೊಣಕಾಲೂರಿ ಅವರೆಲ್ಲರೊಡನೆ ಪ್ರಾರ್ಥಿಸಿದನು. 37-38 ಅವರೆಲ್ಲರೂ ಬಹಳವಾಗಿ ಅತ್ತರು. “ನೀವು ನನ್ನನ್ನು ಮತ್ತೆಂದಿಗೂ ನೋಡುವುದಿಲ್ಲ”ವೆಂದು ಪೌಲನು ಹೇಳಿದ್ದರಿಂದ ಅವರು ಬಹಳ ದುಃಖಗೊಂಡಿದ್ದರು. ಅವರು ಪೌಲನನ್ನು ಅಪ್ಪಿಕೊಂಡು ಮುದ್ದಿಟ್ಟರು. ಅವರು ಹಡಗಿನವರೆಗೂ ಹೋಗಿ ಅವನನ್ನು ಬೀಳ್ಕೊಟ್ಟರು.
Kannada Holy Bible: Easy-to-Read Version. All rights reserved. © 1997 Bible League International