Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 89:20-37

20 ನನ್ನ ಸೇವಕನಾದ ದಾವೀದನನ್ನು ಕಂಡುಕೊಂಡೆ.
    ನನ್ನ ವಿಶೇಷವಾದ ಎಣ್ಣೆಯಿಂದ ಅವನನ್ನು ಅಭಿಷೇಕಿಸಿದೆ.
21 ನನ್ನ ಬಲಗೈಯಿಂದ ದಾವೀದನಿಗೆ ಬೆಂಬಲ ನೀಡಿದೆ,
    ನನ್ನ ಶಕ್ತಿಯಿಂದ ಅವನನ್ನು ಬಲಗೊಳಿಸಿದೆ.
22 ನಾನು ಆರಿಸಿಕೊಂಡ ರಾಜನನ್ನು ಸೋಲಿಸಲು ಶತ್ರುವಿಗೆ ಆಗಲಿಲ್ಲ.
    ಅವನನ್ನು ಸೋಲಿಸಲು ದುಷ್ಟಜನರಿಗೆ ಆಗಲಿಲ್ಲ.
23 ನಾನು ಅವನ ಶತ್ರುಗಳನ್ನು ಮುಗಿಸಿದೆನು.
    ನಾನು ಆರಿಸಿಕೊಂಡ ರಾಜನ ಮೇಲೆ ದ್ವೇಷಕಾರಿದ ಜನರನ್ನು ಸೋಲಿಸಿದೆನು.
24 ನಾನು ಆರಿಸಿಕೊಂಡ ರಾಜನನ್ನು ಯಾವಾಗಲೂ ಪ್ರೀತಿಸುವೆನು; ಅವನಿಗೆ ಬೆಂಬಲ ನೀಡುವೆನು.
    ನಾನು ಅವನನ್ನು ಯಾವಾಗಲೂ ಬಲಗೊಳಿಸುವೆನು.
25 ನಾನು ಆರಿಸಿಕೊಂಡ ರಾಜನನ್ನು ಸಮುದ್ರದ ಮೇಲೆ ಅಧಿಕಾರಿಯನ್ನಾಗಿ ನೇಮಿಸುವೆನು.
    ಅವನು ನದಿಗಳನ್ನು ಹತೋಟಿಯಲ್ಲಿಡುವನು.
26 ಅವನು ನನಗೆ, ‘ನೀನೇ ನನ್ನ ತಂದೆ; ನೀನೇ ನನ್ನ ದೇವರು.
    ನೀನೇ ನನ್ನ ಬಂಡೆ; ನೀನೇ ನನ್ನ ರಕ್ಷಕ’ ಎಂದು ಹೇಳುವನು.
27 ನಾನು ಅವನನ್ನು ನನ್ನ ಚೊಚ್ಚಲು ಮಗನನ್ನಾಗಿ ಮಾಡುವೆನು.
    ಅವನು ಭೂಲೋಕದಲ್ಲಿ ಮಹಾರಾಜನಾಗಿರುವನು.
28 ನಾನು ಆರಿಸಿಕೊಂಡ ರಾಜನನ್ನು ನನ್ನ ಪ್ರೀತಿಯು ಸದಾಕಾಲ ಸಂರಕ್ಷಿಸುವುದು.
    ನಾನು ಅವನೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯು ಎಂದಿಗೂ ಕೊನೆಯಾಗದು.
29 ಅವನ ಕುಟುಂಬವು ಶಾಶ್ವತವಾಗಿರುವುದು.
    ಅವನ ರಾಜ್ಯವು ಆಕಾಶಗಳಿರುವವರೆಗೂ ಇರುವುದು.
30 ಅವನ ಸಂತತಿಯವರು ನನ್ನ ಧರ್ಮಶಾಸ್ತ್ರವನ್ನು ತೊರೆದುಬಿಟ್ಟು
    ನನ್ನ ಆಜ್ಞೆಗಳಿಗೆ ಅವಿಧೇಯರಾದರೆ ಅವರನ್ನು ಶಿಕ್ಷಿಸುವೆನು.
31 ನಾನು ಆರಿಸಿಕೊಂಡ ರಾಜನ ಸಂತತಿಯವರು
    ನನ್ನ ಕಟ್ಟಳೆಗಳನ್ನು ಉಲ್ಲಂಘಿಸಿ ನನ್ನ ಆಜ್ಞೆಗಳನ್ನು ಅಲಕ್ಷಿಸಿದರೆ,
32 ನಾನು ಅವರನ್ನು ಅವರ ದ್ರೋಹಕ್ಕಾಗಿ ಬಹು ಕಠಿಣವಾಗಿ ಶಿಕ್ಷಿಸುವೆನು.
    ಅವರ ಅಪರಾಧಕ್ಕಾಗಿ ಬೆತ್ತದಿಂದ ಹೊಡೆಯುವೆನು.
33 ಆದರೆ ಅವರ ಮೇಲೆ ನನಗಿರುವ ಪ್ರೀತಿಯು ಎಂದಿಗೂ ನಿಂತುಹೋಗುವುದಿಲ್ಲ.
    ನಾನು ಅವರಿಗೆ ಯಾವಾಗಲೂ ನಂಬಿಗಸ್ತನಾಗಿರುವೆನು.
34 ನಾನು ದಾವೀದನೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯನ್ನು
    ಮುರಿದುಹಾಕುವುದೂ ಇಲ್ಲ, ಬದಲಾಯಿಸುವುದೂ ಇಲ್ಲ.
35 ನನ್ನ ಪವಿತ್ರತ್ವದ ಮೇಲೆ ಆಣೆಯಿಟ್ಟು ದಾವೀದನಿಗೆ ವಿಶೇಷವಾದ ವಾಗ್ದಾನವನ್ನು ಮಾಡಿದೆನು.
    ನಾನು ದಾವೀದನಿಗೆ ಸುಳ್ಳುಗಾರನಾಗುವುದಿಲ್ಲ.
36 ದಾವೀದನ ಕುಟುಂಬವು ಶಾಶ್ವತವಾಗಿರುವುದು.
    ಅವನ ರಾಜ್ಯವು ಸೂರ್ಯನು ಇರುವವರೆಗೂ ಇರುವುದು.
37     ಅದು ಚಂದ್ರನಂತೆ ಶಾಶ್ವತವಾಗಿರುವುದು.
ಈ ಒಪ್ಪಂದಕ್ಕೆ ಆಕಾಶವೇ ಸಾಕ್ಷಿ.
    ಈ ಒಪ್ಪಂದವು ನಂಬಿಕೆಗೆ ಯೋಗ್ಯವಾಗಿದೆ.”

1 ಪೂರ್ವಕಾಲವೃತ್ತಾಂತ 15:1-2

ಜೆರುಸಲೇಮಿನಲ್ಲಿ ಒಡಂಬಡಿಕೆಯ ಮಂಜೂಷ

15 ದಾವೀದನಗರದಲ್ಲಿ ದಾವೀದನು ತನಗಾಗಿ ಮನೆಗಳನ್ನು ಕಟ್ಟಿಸಿದನು. ಆಮೇಲೆ ಅವನು ಒಡಂಬಡಿಕೆಯ ಪೆಟ್ಟಿಗೆಯನ್ನು ಇಡಲು ಒಂದು ಸ್ಥಳವನ್ನು ಏರ್ಪಡಿಸಿ ಗುಡಾರವನ್ನು ನಿರ್ಮಿಸಿದನು. “ಲೇವಿಯರು ಮಾತ್ರ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಬರಬೇಕು. ಯೆಹೋವನು ಅವರನ್ನೇ ತನ್ನ ನಿರಂತರವಾದ ಸೇವೆಗಾಗಿ ನೇಮಿಸಿದ್ದಾನೆ” ಎಂದು ದಾವೀದನು ಹೇಳಿದನು.

1 ಪೂರ್ವಕಾಲವೃತ್ತಾಂತ 16:4-13

ದಾವೀದನು ಕೆಲವು ಮಂದಿ ಯಾಜಕರನ್ನು ಒಡಂಬಡಿಕೆಯ ಪೆಟ್ಟಿಗೆಯ ಸೇವೆಮಾಡುವುದಕ್ಕಾಗಿ ನೇಮಿಸಿದನು. ಇಸ್ರೇಲರ ದೇವರಾದ ಯೆಹೋವನಿಗೆ ಸ್ತೋತ್ರ ಸಲ್ಲಿಸುವುದು ಮತ್ತು ಆತನನ್ನು ಕೊಂಡಾಡುವುದೇ ಇವರ ಕೆಲಸವಾಗಿತ್ತು. ಮೊದಲನೇ ಗುಂಪಿನ ಗಾಯಕರಿಗೆ ಆಸಾಫನು ಮುಖಂಡನಾಗಿದ್ದನು. ಆಸಾಫನ ಗುಂಪಿನವರು ತಾಳ ಬಾರಿಸಿದರು. ಜೆಕರ್ಯನು ಎರಡನೇ ಗುಂಪಿನ ನಾಯಕನು. ಬೇರೆ ಲೇವಿಯರು ಯಾರೆಂದರೆ: ಉಜ್ಜೀಯೇಲ್, ಶೆಮೀರಾಮೋತ್, ಯೆಹೀಯೇಲ್, ಮತ್ತಿತ್ಯ, ಎಲೀಯಾಬ್, ಬೆನಾಯ, ಓಬೇದೆದೋಮ್ ಮತ್ತು ಯೆಗೀಯೇಲ್. ಇವರು ಲೈರ್ ಮತ್ತು ಹಾರ್ಪ್ ವಾದ್ಯಗಳನ್ನು ಬಾರಿಸಿದರು. ಬೆನಾಯನೂ ಯೆಹಜೀಯೇಲನೂ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯ ಬಳಿಯಲ್ಲಿ ತುತ್ತೂರಿಗಳನ್ನು ಯಾವಾಗಲೂ ಊದುವ ಯಾಜಕರಾಗಿದ್ದರು. ಈ ವ್ಯವಸ್ಥೆಯನ್ನು ದಾವೀದನು ಪ್ರಥಮ ಬಾರಿಗೆ ಆಸಾಫನಿಗೂ ಅವನ ಸೋದರರಿಗೂ ಯೆಹೋವನ ಸ್ತೋತ್ರವನ್ನು ಹಾಡುವ ಕೆಲಸಕ್ಕಾಗಿ ನೇಮಿಸಿದನು.

ದಾವೀದನ ಕೃತಜ್ಞತಾಸ್ತುತಿ

ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ; ಆತನ ನಾಮದ ಮಹತ್ವವನ್ನು ವರ್ಣಿಸಿರಿ,
    ಆತನ ಮಹತ್ಕಾರ್ಯಗಳನ್ನು ಜನಾಂಗಗಳಲ್ಲಿ ಪ್ರಸಿದ್ಧಪಡಿಸಿರಿ.
ಯೆಹೋವನಿಗೆ ಗಾನ ಮಾಡಿರಿ, ಆತನಿಗೆ ಸ್ತುತಿಗೀತೆ ಹಾಡಿರಿ.
    ಆತನ ಅದ್ಭುತಕಾರ್ಯಗಳನ್ನು ಧ್ಯಾನಿಸಿರಿ.
10 ಯೆಹೋವನ ಪರಿಶುದ್ಧನಾಮದಲ್ಲಿ ಹಿಗ್ಗಿರಿ;
    ಆತನ ದರ್ಶನಕ್ಕಾಗಿ ಬರುವವರೇ, ಸಂತೋಷಪಡಿರಿ.
11 ಯೆಹೋವನನ್ನೂ ಆತನ ಬಲವನ್ನೂ ಆಶ್ರಯಿಸಿರಿ;
    ಯಾವಾಗಲೂ ಆತನ ದರ್ಶನವನ್ನು ಅಪೇಕ್ಷಿಸಿರಿ.
12 ಆತನ ಸೇವಕನಾದ ಇಸ್ರೇಲನ ಸಂತತಿಯವರೇ,
    ಆತನು ಆರಿಸಿಕೊಂಡ ಯಾಕೋಬನ ಸಂತತಿಯವರೇ,
13 ಆತನ ಅದ್ಭುತಕಾರ್ಯಗಳನ್ನೂ ಮಹತ್ಕಾರ್ಯಗಳನ್ನೂ
    ನ್ಯಾಯನಿರ್ಣಯಗಳನ್ನೂ ಜ್ಞಾಪಿಸಿಕೊಳ್ಳಿರಿ.

ಲೂಕ 18:35-43

ಯೇಸುವಿನಿಂದ ಕಣ್ಣುಪಡೆದ ಕುರುಡ

(ಮತ್ತಾಯ 20:29-34; ಮಾರ್ಕ 10:46-52)

35 ಯೇಸು ಜೆರಿಕೊ ಪಟ್ಟಣವನ್ನು ಸಮೀಪಿಸುತ್ತಿದ್ದಾಗ, ಆ ರಸ್ತೆಯ ಪಕ್ಕದಲ್ಲಿ ಒಬ್ಬ ಕುರುಡನು ಕುಳಿತುಕೊಂಡು ಭಿಕ್ಷೆಬೇಡುತ್ತಿದ್ದನು. 36 ಆ ರಸ್ತೆಯಲ್ಲಿ ಜನಸಮೂಹದ ಶಬ್ದವನ್ನು ಕೇಳಿ ಆ ಕುರುಡನು, “ಯಾವ ಸಮಾರಂಭ ನಡೆಯುತ್ತಿದೆ?” ಎಂದು ಕೇಳಿದನು.

37 ಜನರು ಅವನಿಗೆ, “ನಜರೇತಿನ ಯೇಸು ಬರುತ್ತಿದ್ದಾನೆ” ಎಂದು ತಿಳಿಸಿದರು.

38 ಆ ಕುರುಡನು ಗಟ್ಟಿಯಾಗಿ, “ಯೇಸುವೇ, ದಾವೀದನ ಕುಮಾರನೇ, ದಯಮಾಡಿ ನನಗೆ ಸಹಾಯಮಾಡು!” ಎಂದು ಕೂಗಿದನು.

39 ಜನಸಮೂಹದ ಮುಂದಿದ್ದ ಜನರು ಕುರುಡನನ್ನು ಗದರಿಸಿ, ಅವನಿಗೆ ಮಾತಾಡಕೂಡದೆಂದು ಹೇಳಿದರು. ಆದರೆ ಆ ಕುರುಡನು ಮತ್ತಷ್ಟು ಗಟ್ಟಿಯಾಗಿ, “ದಾವೀದನ ಕುಮಾರನೇ, ದಯಮಾಡಿ ನನಗೆ ಸಹಾಯಮಾಡು!” ಎಂದು ಕೂಗಿದನು.

40 ಯೇಸು ಅಲ್ಲೇ ನಿಂತು, “ಆ ಕುರುಡನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ” ಎಂದು ಹೇಳಿದನು. ಆ ಕುರುಡನು ಹತ್ತಿರಕ್ಕೆ ಬಂದಾಗ, ಯೇಸು ಅವನಿಗೆ 41 “ನಾನು ನಿನಗಾಗಿ ಏನು ಮಾಡಬೇಕು?” ಎಂದು ಕೇಳಿದನು.

ಕುರುಡನು, “ಪ್ರಭುವೇ, ನನಗೆ ಮತ್ತೆ ಕಣ್ಣು ಕಾಣುವಂತೆ ಮಾಡು” ಅಂದನು.

42 ಯೇಸು ಅವನಿಗೆ, “ನೀನು ನಂಬಿದ್ದರಿಂದಲೇ ನಿನಗೆ ವಾಸಿಯಾಯಿತು” ಎಂದು ಹೇಳಿದನು.

43 ಆಗ ಆ ಕುರುಡನಿಗೆ ದೃಷ್ಟಿ ಬಂದಿತು. ಅವನು ದೇವರನ್ನು ಸ್ತುತಿಸುತ್ತಾ ಯೇಸುವನ್ನು ಹಿಂಬಾಲಿಸಿದನು. ಇದನ್ನು ನೋಡಿದ ಜನರೆಲ್ಲರೂ ಈ ಮಹತ್ಕಾರ್ಯಕ್ಕಾಗಿ ದೇವರನ್ನು ಕೊಂಡಾಡಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International