Revised Common Lectionary (Semicontinuous)
20 ನನ್ನ ಸೇವಕನಾದ ದಾವೀದನನ್ನು ಕಂಡುಕೊಂಡೆ.
ನನ್ನ ವಿಶೇಷವಾದ ಎಣ್ಣೆಯಿಂದ ಅವನನ್ನು ಅಭಿಷೇಕಿಸಿದೆ.
21 ನನ್ನ ಬಲಗೈಯಿಂದ ದಾವೀದನಿಗೆ ಬೆಂಬಲ ನೀಡಿದೆ,
ನನ್ನ ಶಕ್ತಿಯಿಂದ ಅವನನ್ನು ಬಲಗೊಳಿಸಿದೆ.
22 ನಾನು ಆರಿಸಿಕೊಂಡ ರಾಜನನ್ನು ಸೋಲಿಸಲು ಶತ್ರುವಿಗೆ ಆಗಲಿಲ್ಲ.
ಅವನನ್ನು ಸೋಲಿಸಲು ದುಷ್ಟಜನರಿಗೆ ಆಗಲಿಲ್ಲ.
23 ನಾನು ಅವನ ಶತ್ರುಗಳನ್ನು ಮುಗಿಸಿದೆನು.
ನಾನು ಆರಿಸಿಕೊಂಡ ರಾಜನ ಮೇಲೆ ದ್ವೇಷಕಾರಿದ ಜನರನ್ನು ಸೋಲಿಸಿದೆನು.
24 ನಾನು ಆರಿಸಿಕೊಂಡ ರಾಜನನ್ನು ಯಾವಾಗಲೂ ಪ್ರೀತಿಸುವೆನು; ಅವನಿಗೆ ಬೆಂಬಲ ನೀಡುವೆನು.
ನಾನು ಅವನನ್ನು ಯಾವಾಗಲೂ ಬಲಗೊಳಿಸುವೆನು.
25 ನಾನು ಆರಿಸಿಕೊಂಡ ರಾಜನನ್ನು ಸಮುದ್ರದ ಮೇಲೆ ಅಧಿಕಾರಿಯನ್ನಾಗಿ ನೇಮಿಸುವೆನು.
ಅವನು ನದಿಗಳನ್ನು ಹತೋಟಿಯಲ್ಲಿಡುವನು.
26 ಅವನು ನನಗೆ, ‘ನೀನೇ ನನ್ನ ತಂದೆ; ನೀನೇ ನನ್ನ ದೇವರು.
ನೀನೇ ನನ್ನ ಬಂಡೆ; ನೀನೇ ನನ್ನ ರಕ್ಷಕ’ ಎಂದು ಹೇಳುವನು.
27 ನಾನು ಅವನನ್ನು ನನ್ನ ಚೊಚ್ಚಲು ಮಗನನ್ನಾಗಿ ಮಾಡುವೆನು.
ಅವನು ಭೂಲೋಕದಲ್ಲಿ ಮಹಾರಾಜನಾಗಿರುವನು.
28 ನಾನು ಆರಿಸಿಕೊಂಡ ರಾಜನನ್ನು ನನ್ನ ಪ್ರೀತಿಯು ಸದಾಕಾಲ ಸಂರಕ್ಷಿಸುವುದು.
ನಾನು ಅವನೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯು ಎಂದಿಗೂ ಕೊನೆಯಾಗದು.
29 ಅವನ ಕುಟುಂಬವು ಶಾಶ್ವತವಾಗಿರುವುದು.
ಅವನ ರಾಜ್ಯವು ಆಕಾಶಗಳಿರುವವರೆಗೂ ಇರುವುದು.
30 ಅವನ ಸಂತತಿಯವರು ನನ್ನ ಧರ್ಮಶಾಸ್ತ್ರವನ್ನು ತೊರೆದುಬಿಟ್ಟು
ನನ್ನ ಆಜ್ಞೆಗಳಿಗೆ ಅವಿಧೇಯರಾದರೆ ಅವರನ್ನು ಶಿಕ್ಷಿಸುವೆನು.
31 ನಾನು ಆರಿಸಿಕೊಂಡ ರಾಜನ ಸಂತತಿಯವರು
ನನ್ನ ಕಟ್ಟಳೆಗಳನ್ನು ಉಲ್ಲಂಘಿಸಿ ನನ್ನ ಆಜ್ಞೆಗಳನ್ನು ಅಲಕ್ಷಿಸಿದರೆ,
32 ನಾನು ಅವರನ್ನು ಅವರ ದ್ರೋಹಕ್ಕಾಗಿ ಬಹು ಕಠಿಣವಾಗಿ ಶಿಕ್ಷಿಸುವೆನು.
ಅವರ ಅಪರಾಧಕ್ಕಾಗಿ ಬೆತ್ತದಿಂದ ಹೊಡೆಯುವೆನು.
33 ಆದರೆ ಅವರ ಮೇಲೆ ನನಗಿರುವ ಪ್ರೀತಿಯು ಎಂದಿಗೂ ನಿಂತುಹೋಗುವುದಿಲ್ಲ.
ನಾನು ಅವರಿಗೆ ಯಾವಾಗಲೂ ನಂಬಿಗಸ್ತನಾಗಿರುವೆನು.
34 ನಾನು ದಾವೀದನೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯನ್ನು
ಮುರಿದುಹಾಕುವುದೂ ಇಲ್ಲ, ಬದಲಾಯಿಸುವುದೂ ಇಲ್ಲ.
35 ನನ್ನ ಪವಿತ್ರತ್ವದ ಮೇಲೆ ಆಣೆಯಿಟ್ಟು ದಾವೀದನಿಗೆ ವಿಶೇಷವಾದ ವಾಗ್ದಾನವನ್ನು ಮಾಡಿದೆನು.
ನಾನು ದಾವೀದನಿಗೆ ಸುಳ್ಳುಗಾರನಾಗುವುದಿಲ್ಲ.
36 ದಾವೀದನ ಕುಟುಂಬವು ಶಾಶ್ವತವಾಗಿರುವುದು.
ಅವನ ರಾಜ್ಯವು ಸೂರ್ಯನು ಇರುವವರೆಗೂ ಇರುವುದು.
37 ಅದು ಚಂದ್ರನಂತೆ ಶಾಶ್ವತವಾಗಿರುವುದು.
ಈ ಒಪ್ಪಂದಕ್ಕೆ ಆಕಾಶವೇ ಸಾಕ್ಷಿ.
ಈ ಒಪ್ಪಂದವು ನಂಬಿಕೆಗೆ ಯೋಗ್ಯವಾಗಿದೆ.”
15 ಒಂದು ಸಲ ದಾವೀದನು ಅದುಲ್ಲಾಮ್ ಗವಿಯೊಳಗಿದ್ದಾಗ, ರೆಫಾಯಿಮ್ ತಗ್ಗಿನಲ್ಲಿ ಫಿಲಿಷ್ಟಿಯರು ಪಾಳೆಯಮಾಡಿದ್ದರು. ಮೂವತ್ತು ಮಂದಿ ಪರಾಕ್ರಮಿಗಳಲ್ಲಿ ಈ ಮೂರು ಮಂದಿ ಗುಹೆಯಲ್ಲಿದ್ದ ದಾವೀದನೊಂದಿಗೆ ಸೇರಿಕೊಳ್ಳಲು ಹೊಟ್ಟೆಯ ಮೇಲೆ ತೆವಳಿಕೊಂಡೇ ಅವನ ಬಳಿಗೆ ಬಂದರು.
16 ಇನ್ನೊಂದು ಸಮಯದಲ್ಲಿ ದಾವೀದನು ಕೋಟೆಯೊಳಗಿದ್ದನು. ಫಿಲಿಷ್ಟಿಯರ ಸೈನ್ಯ ಬೆತ್ಲೆಹೇಮಿನಲ್ಲಿತ್ತು. 17 ದಾಹಗೊಂಡಿದ್ದ ದಾವೀದನು ತನ್ನ ಊರಿನ ನೀರು ಕುಡಿಯಲು ಬಯಸಿ, “ಬೆತ್ಲೆಹೇಮಿನ ನಗರದ್ವಾರದ ಬಳಿಯಲ್ಲಿರುವ ಬಾವಿಯಿಂದ ಯಾರಾದರೂ ನೀರು ತಂದುಕೊಡುವುದಾದರೆ ಎಷ್ಟೋ ಒಳ್ಳೆಯದು” ಎಂದು ಅವನು ತಿಳಿಸಿದನು. 18 ಆಗ ಆ ಮೂವರು ಪರಾಕ್ರಮಿಗಳು ಫಿಲಿಷ್ಟಿಯರ ಸೈನ್ಯದೊಂದಿಗೆ ಹೋರಾಡುತ್ತಾ ಬೆತ್ಲೆಹೇಮಿನ ಬಾಗಿಲ ಬಳಿಯಲ್ಲಿದ್ದ ಬಾವಿಯ ನೀರನ್ನು ಸೇದಿ ದಾವೀದನಿಗೆ ತಂದುಕೊಟ್ಟರು. ಆದರೆ ದಾವೀದನು ಆ ನೀರನ್ನು ಕುಡಿಯಲು ನಿರಾಕರಿಸಿದನು. ಆ ನೀರನ್ನು ಯೆಹೋವನಿಗೆ ಸಮರ್ಪಿಸಿ ನೆಲದ ಮೇಲೆ ಹೊಯಿದುಬಿಟ್ಟನು. 19 “ದೇವರೇ, ನಾನು ಈ ನೀರನ್ನು ಕುಡಿಯಲಾರೆನು. ಯಾಕೆಂದರೆ ನನಗಾಗಿ ತಮ್ಮ ಪ್ರಾಣ ಕೊಡಲು ಹೆದರದೆ ನೀರನ್ನು ತಂದವರ ರಕ್ತವಿದು” ಎಂದು ದಾವೀದನು ಅರಿಕೆಮಾಡಿ ಆ ನೀರನ್ನು ಕುಡಿಯಲು ನಿರಾಕರಿಸಿದನು. ಈ ರೀತಿಯಾಗಿ ಅನೇಕ ಪರಾಕ್ರಮದ ಕಾರ್ಯಗಳನ್ನು ಈ ಮೂರು ಮಂದಿ ವೀರರು ಮಾಡಿದರು.
ನಾವು ಕ್ರಿಸ್ತನ ಕಡೆಗೆ ನೋಡುವಾಗ ದೇವರನ್ನೇ ಕಾಣುತ್ತೇವೆ
15 ದೇವರನ್ನು ನೋಡಲು ಯಾವ ವ್ಯಕ್ತಿಗೂ ಸಾಧ್ಯವಿಲ್ಲ.
ಆದರೆ ಯೇಸುವು ದೇವರ ಪ್ರತಿರೂಪಿಯಾಗಿದ್ದಾನೆ.
ಸೃಷ್ಟಿಸಲ್ಪಟ್ಟವುಗಳಿಗೆಲ್ಲಾ ಯೇಸು ಅಧಿಪತಿಯಾಗಿದ್ದಾನೆ.
16 ಭೂಲೋಕ ಮತ್ತು ಪರಲೋಕಗಳಲ್ಲಿರುವ ಎಲ್ಲವುಗಳು,
ದೃಶ್ಯ ಮತ್ತು ಅದೃಶ್ಯವಾದವುಗಳು, ಆತ್ಮಿಕ ಶಕ್ತಿಗಳು,
ಪ್ರಭುತ್ವಗಳು ಆತನ ಶಕ್ತಿಯಿಂದ ನಿರ್ಮಿತವಾಗಿವೆ. ಅಧಿಪತಿಗಳು ಮತ್ತು ಅಧಿಕಾರಿಗಳು ಆತನ ಶಕ್ತಿಯಿಂದ ನಿರ್ಮಿತರಾದರು.
ಸಮಸ್ತವೂ ಕ್ರಿಸ್ತನ ಮೂಲಕವಾಗಿ ಆತನಿಗೋಸ್ಕರ ಸೃಷ್ಟಿಸಲ್ಪಟ್ಟವು.
17 ಅವುಗಳಿಗಿಂತ ಮೊದಲೇ ಕ್ರಿಸ್ತನಿದ್ದನು.
ಸಮಸ್ತಕ್ಕೂ ಆತನೇ ಆಧಾರಭೂತನಾಗಿದ್ದಾನೆ.
18 ಕ್ರಿಸ್ತನು ದೇಹಕ್ಕೆ (ಸಭೆಯ) ಶಿರಸ್ಸಾಗಿದ್ದಾನೆ.
ಪ್ರತಿಯೊಂದೂ ಆತನಿಂದಲೇ ಬರುತ್ತದೆ.
ಮರಣದಿಂದ ಪ್ರಥಮವಾಗಿ ಎದ್ದುಬಂದವನು ಆತನೇ.
ಆದ್ದರಿಂದ ಎಲ್ಲಾದರಲ್ಲಿಯೂ ಯೇಸುವೇ ಅತ್ಯಂತ ಪ್ರಾಮುಖ್ಯನಾಗಿದ್ದಾನೆ.
19 ಆತನಲ್ಲಿ ತನ್ನ ಸರ್ವಸಂಪೂರ್ಣತೆಯು ನೆಲಸಿರಬೇಕೆಂಬುದೂ,
20 ಆತನು ಶಿಲುಬೆಯ ಮೇಲೆ ಸುರಿಸಿದ ರಕ್ತದಿಂದ ಸಮಾಧಾನವನ್ನು ಉಂಟುಮಾಡಿ
ಭೂಪರಲೋಕಗಳಲ್ಲಿರುವ ಸಮಸ್ತವನ್ನು
ತನಗೆ ಸಂಧಾನಪಡಿಸಿಕೊಳ್ಳಬೇಕೆಂಬುದೂ ದೇವರ ಚಿತ್ತವಾಗಿತ್ತು.
21 ಒಂದು ಕಾಲದಲ್ಲಿ ನೀವು ದೇವರಿಂದ ಬೇರ್ಪಟ್ಟಿದ್ದಿರಿ, ದುಷ್ಕೃತ್ಯಗಳನ್ನು ಮಾಡುತ್ತಾ ನಿಮ್ಮ ಮನಸ್ಸುಗಳಲ್ಲಿ ದೇವರಿಗೆ ಶತ್ರುಗಳಾಗಿದ್ದಿರಿ. 22 ಈಗಲಾದರೋ ಕ್ರಿಸ್ತನು ಶರೀರಧಾರಿಯಾಗಿ ಈ ಲೋಕದಲ್ಲಿದ್ದಾಗ ತನ್ನ ಪ್ರಾಣವನ್ನೇ ಕೊಡುವುದರ ಮೂಲಕ ನಿಮಗೂ ದೇವರಿಗೂ ಸಂಧಾನ ಮಾಡಿದ್ದಾನೆ. ನಿಮ್ಮನ್ನು ಪರಿಶುದ್ಧರನ್ನಾಗಿಯೂ ನಿಷ್ಕಳಂಕರನ್ನಾಗಿಯೂ ನಿರ್ದೋಷಿಗಳನ್ನಾಗಿಯೂ ದೇವರ ಸನ್ನಿಧಿಯಲ್ಲಿ ನಿಲ್ಲಿಸಬೇಕೆಂಬುದೇ ಕ್ರಿಸ್ತನ ಉದ್ದೇಶವಾಗಿತ್ತು. 23 ನೀವು ಕೇಳಿದ ಸುವಾರ್ತೆಯ ಮೇಲೆ ನಿಮಗಿರುವ ನಂಬಿಕೆಯಲ್ಲಿ ದೃಢವಾಗಿ ನೆಲೆಗೊಂಡಿದ್ದು ಅದರಿಂದುಂಟಾಗುವ ನಿರೀಕ್ಷೆಯನ್ನು ಬಿಟ್ಟು ಹೋಗದಿದ್ದರೆ ಇದು ಸಾಧ್ಯ. ಈ ಸುವಾರ್ತೆಯನ್ನು ಪ್ರಪಂಚದ ಜನರಿಗೆಲ್ಲ ಸಾರಲಾಗಿದೆ. ಪೌಲನಾದ ನಾನು ಈ ಸುವಾರ್ತೆಯನ್ನು ಸಾರುವ ಸೇವಕನಾದೆನು.
Kannada Holy Bible: Easy-to-Read Version. All rights reserved. © 1997 Bible League International