Revised Common Lectionary (Semicontinuous)
24 ಇಗೋ, ದೇವರು ವಿಜಯದ ಮೆರವಣಿಗೆಯನ್ನು ನಡೆಸಿಕೊಂಡು ಹೋಗುತ್ತಿದ್ದಾನೆ.
ನನ್ನ ರಾಜನಾದ ಪರಿಶುದ್ಧ ದೇವರು ವಿಜಯದ ಮೆರವಣಿಗೆಯನ್ನು ನಡೆಸಿಕೊಂಡು ಹೋಗುತ್ತಿದ್ದಾನೆ.
25 ಮುಂಭಾಗದಲ್ಲಿ ಗಾಯಕರೂ ಹಿಂಭಾಗದಲ್ಲಿ ವಾದ್ಯ ಬಾರಿಸುವವರೂ
ಸುತ್ತಲು ದಮ್ಮಡಿ ಬಡಿಯುವ ಯುವತಿಯರೂ ಹೋಗುತ್ತಿದ್ದಾರೆ.
26 ಮಹಾಸಭೆಯಲ್ಲಿ ದೇವರಿಗೆ ಸ್ತೋತ್ರವಾಗಲಿ!
ಇಸ್ರೇಲ್ ಜನರೇ, ಯೆಹೋವನಿಗೆ ಸ್ತೋತ್ರಮಾಡಿರಿ!
27 ಅವರನ್ನು ಮುನ್ನಡೆಸಿಕೊಂಡು ಹೋಗುವವರಲ್ಲಿ ಮೊದಲನೆಯದಾಗಿ ಬೆನ್ಯಾಮೀನನ ಚಿಕ್ಕ ಕುಲವಿದೆ;
ಅದರ ನಂತರ ಯೆಹೂದನ ಮಹಾಕುಲವಿದೆ.
ಅದರ ನಂತರ ಜೆಬುಲೂನ್ ಮತ್ತು ನಫ್ತಾಲಿ ಕುಲಗಳ ನಾಯಕರು ಇದ್ದಾರೆ.
28 ದೇವರೇ, ನಿನ್ನ ಬಲವನ್ನು ನಮಗೆ ತೋರಿಸು!
ಹಿಂದಿನ ಕಾಲದಲ್ಲಿ ನಮಗಾಗಿ ಮಾಡಿದ ಬಲಪ್ರಯೋಗವನ್ನು ನಮಗೆ ತೋರಿಸು.
29 ರಾಜರುಗಳು ತಮ್ಮ ಕಾಣಿಕೆಗಳನ್ನು ತೆಗೆದುಕೊಂಡು
ಜೆರುಸಲೇಮಿನ ನಿನ್ನ ಆಲಯಕ್ಕೆ ಬರುವರು.
30 ಕೋಲಿನಿಂದ ಬಡಿದು ನಿನಗೆ ಬೇಕಾದದ್ದನ್ನೆಲ್ಲಾ ಆ ಪ್ರಾಣಿಗಳಿಂದ ಮಾಡಿಸು.
ಆ ಜನಾಂಗಗಳಲ್ಲಿರುವ “ಹೋರಿಗಳು” ಮತ್ತು “ಹಸುಗಳು” ನಿನಗೆ ವಿಧೇಯವಾಗಿರುವಂತೆ ಮಾಡು.
ನೀನು ಆ ಜನಾಂಗಗಳನ್ನು ಯುದ್ಧದಲ್ಲಿ ಸೋಲಿಸಿರುವುದರಿಂದ
ಅವರು ನಿನಗೆ ಬೆಳ್ಳಿಯನ್ನು ತಂದುಕೊಡುವಂತೆ ಮಾಡು.
31 ಅವರು ಈಜಿಪ್ಟಿನಿಂದ ಐಶ್ವರ್ಯವನ್ನು ನಿನಗೆ ತಂದುಕೊಡುವಂತೆ ಮಾಡು.
ದೇವರೇ, ಇಥಿಯೋಪಿಯದವರು ತಮ್ಮ ಐಶ್ವರ್ಯವನ್ನು ನಿನಗೆ ತಂದುಕೊಡುವಂತೆ ಮಾಡು.
32 ಭೂರಾಜರುಗಳೇ, ದೇವರಿಗೆ ಗಾಯನ ಮಾಡಿರಿ!
ನಮ್ಮ ಯೆಹೋವನಿಗೆ ಸ್ತುತಿಗೀತೆಗಳನ್ನು ಹಾಡಿರಿ!
33 ದೇವರಿಗೆ ಗಾಯನ ಮಾಡಿರಿ!
ಅನಾದಿಕಾಲದಿಂದಿರುವ ಆತನು ಮಹೋನ್ನತವಾದ ಆಕಾಶದಲ್ಲಿ ರಥಾಶ್ವರೂಢನಾಗಿ ಸವಾರಿ ಮಾಡುವನು.
ಆತನ ಗರ್ಜನೆಗೆ ಕಿವಿಗೊಡಿರಿ!
34 ದೇವರ ಬಲವನ್ನು ಕೊಂಡಾಡಿರಿ.
ಆತನ ಗಾಂಭೀರ್ಯವು ಇಸ್ರೇಲರ ಆಶ್ರಯವಾಗಿದೆ.
ಆತನ ಶಕ್ತಿಯು ಆಕಾಶಗಳಲ್ಲಿ ವ್ಯಾಪಿಸಿದೆ.
35 ದೇವರೇ, ನಿನ್ನ ಪರಿಶುದ್ಧಾಲಯದಲ್ಲಿರುವ ನೀನು ಅದ್ಭುತಸ್ವರೂಪನಾಗಿರುವೆ.
ಇಸ್ರೇಲರ ದೇವರು ತನ್ನ ಜನರಿಗೆ ಬಲವನ್ನೂ ಶಕ್ತಿಯನ್ನೂ ದಯಪಾಲಿಸುವನು.
ದೇವರಿಗೆ ಸ್ತೋತ್ರ!
12 ಅಬ್ನೇರನು ದಾವೀದನ ಬಳಿಗೆ ಸಂದೇಶಕರನ್ನು ಕಳುಹಿಸಿ, “ಈ ದೇಶವನ್ನು ಯಾರು ಆಳಬೇಕೆಂಬದು ನಿನ್ನ ಅಭಿಪ್ರಾಯ? ನನ್ನೊಡನೆ ಒಂದು ಒಪ್ಪಂದವನ್ನು ಮಾಡಿಕೊಂಡರೆ, ಇಸ್ರೇಲಿನ ಜನರೆಲ್ಲರನ್ನು ನೀನು ಆಳುವಂತೆ ಮಾಡಲು ನಾನು ಸಹಾಯ ಮಾಡುತ್ತೇನೆ” ಎಂದು ಹೇಳಿದನು.
13 ಅದಕ್ಕೆ ದಾವೀದನು, “ಒಳ್ಳೆಯದು! ನಾನು ನಿನ್ನೊಡನೆ ಒಪ್ಪಂದ ಮಾಡಿಕೊಳ್ಳುತ್ತೇನೆ. ಆದರೆ ನೀನು ನನಗಾಗಿ ಒಂದು ಕೆಲಸ ಮಾಡಬೇಕು. ಸೌಲನ ಮಗಳಾದ ಮೀಕಲಳನ್ನು ನನ್ನ ಬಳಿಗೆ ಕರೆತರುವ ತನಕ ನಾನು ನಿನ್ನನ್ನು ಸಂಧಿಸುವುದಿಲ್ಲ” ಎಂದು ಹೇಳಿದನು.
14 ದಾವೀದನು ಸೌಲನ ಮಗನಾದ ಈಷ್ಬೋಶೆತನ ಬಳಿಗೆ ಸಂದೇಶಕರನ್ನು ಕಳುಹಿಸಿ, “ನನ್ನ ಹೆಂಡತಿಯಾದ ಮೀಕಲಳನ್ನು ನನ್ನ ಬಳಿಗೆ ಕಳುಹಿಸು. ಅವಳನ್ನು ನನಗೆ ಕೊಡುವುದಾಗಿ ಮಾತುಕತೆಯಾಗಿತ್ತು. ಅವಳನ್ನು ಪಡೆಯಲು ನಾನು ನೂರು ಜನ ಫಿಲಿಷ್ಟಿಯರನ್ನು ಕೊಂದಿದ್ದೇನೆ”[a] ಎಂದು ಹೇಳಿದನು.
15 ಆಗ ಈಷ್ಬೋಶೆತನು, ಲಯಿಷನ ಮಗನಾದ ಪಲ್ಟೀಯೇಲನ ಬಳಿಯಿಂದ ಮೀಕಲಳನ್ನು ಕರೆತರುವಂತೆ ತನ್ನ ಜನರಿಗೆ ಹೇಳಿದನು. 16 ಮೀಕಲಳ ಗಂಡನಾದ ಪಲ್ಟೀಯೇಲನೂ ಅವಳ ಜೊತೆಗೆ ಬಂದನು. ಮೀಕಲಳ ಜೊತೆಯಲ್ಲಿ ಬಹುರೀಮಿಗೆ ಬರುವಾಗ ಪಲ್ಟೀಯೇಲನು ಆಳುತ್ತಿದ್ದನು. ಆದರೆ ಅಬ್ನೇರನು, “ನಿನ್ನ ಮನೆಗೆ ಹಿಂದಿರುಗಿ ಹೋಗು” ಎಂದು ಪಲ್ಟೀಯೇಲನಿಗೆ ಹೇಳಿದನು. ಆದ್ದರಿಂದ ಪಲ್ಟೀಯೇಲನು ಮನೆಗೆ ಹಿಂದಿರುಗಿದನು.
ಪೌಲನನ್ನು ಕೊಲ್ಲಲು ಕೆಲವು ಯೆಹೂದ್ಯರ ಸಂಚು
12 ಮರುದಿನ ಮುಂಜಾನೆ ಯೆಹೂದ್ಯರಲ್ಲಿ ಕೆಲವರು, ತಾವು ಪೌಲನನ್ನು ಕೊಲ್ಲದ ಹೊರತು ಏನನ್ನೂ ತಿನ್ನುವುದಿಲ್ಲ ಮತ್ತು ಏನನ್ನೂ ಕುಡಿಯುವುದಿಲ್ಲ ಎಂಬುದಾಗಿ ಹರಕೆ ಮಾಡಿಕೊಂಡರು. 13 ಹೀಗೆ ಸುಮಾರು ನಲವತ್ತಕ್ಕಿಂತಲೂ ಹೆಚ್ಚು ಮಂದಿ ಹರಕೆ ಮಾಡಿಕೊಂಡಿದ್ದರು. 14 ಈ ಯೆಹೂದ್ಯರು ಮಹಾಯಾಜಕರ ಮತ್ತು ಯೆಹೂದ್ಯರ ಹಿರಿಯ ನಾಯಕರ ಬಳಿಗೆ ಹೋಗಿ, “ನಾವು ಪೌಲನನ್ನು ಕೊಲ್ಲುವ ತನಕ ತಿನ್ನುವುದೂ ಇಲ್ಲ ಕುಡಿಯುವುದೂ ಇಲ್ಲ ಎಂಬ ಕಠಿಣವಾದ ಹರಕೆ ಮಾಡಿಕೊಂಡಿದ್ದೇವೆ! 15 ಆದ್ದರಿಂದ ಈಗ ನೀವು ಮಾಡಬೇಕಾದದ್ದೇನೆಂದರೆ, ಸೇನಾಧಿಪತಿಗೂ ಎಲ್ಲಾ ಯೆಹೂದ್ಯ ನಾಯಕರಿಗೂ ಒಂದು ಸಂದೇಶವನ್ನು ಕಳುಹಿಸಿಕೊಡಿರಿ. ಪೌಲನಿಗೆ ಇನ್ನೂ ಹೆಚ್ಚು ಪ್ರಶ್ನೆಗಳನ್ನು ಕೇಳಬೇಕಾಗಿರುವುದರಿಂದ ಪೌಲನನ್ನು ನಮ್ಮ ಬಳಿಗೆ ಕರೆದುಕೊಂಡು ಬರಬೇಕೆಂದು ಸೇನಾಧಿಪತಿಗೆ ತಿಳಿಸಿರಿ. ಪೌಲನು ಇಲ್ಲಿಗೆ ಬರುತ್ತಿರುವಾಗಲೇ ನಾವು ಮಾರ್ಗದಲ್ಲಿ ಕಾದುಕೊಂಡಿದ್ದು ಅವನನ್ನು ಕೊಲ್ಲುತ್ತೇವೆ” ಎಂದು ಹೇಳಿದರು.
16 ಆದರೆ ಈ ಯೋಜನೆಯ ಬಗ್ಗೆ ಪೌಲನ ಸೋದರಳಿಯನಿಗೆ ತಿಳಿಯಿತು. ಅವನು ಸೈನ್ಯದ ಕೋಟೆಯೊಳಗೆ ಹೋಗಿ ಈ ಯೋಜನೆಯ ಬಗ್ಗೆ ಪೌಲನಿಗೆ ತಿಳಿಸಿದನು. 17 ಆಗ ಪೌಲನು ಸೇನಾಧಿಕಾರಿಗಳಲ್ಲಿ ಒಬ್ಬನನ್ನು ಕರೆದು, “ಈ ಯೌವನಸ್ಥನನ್ನು ಸೇನಾಧಿಪತಿಯ ಬಳಿಗೆ ಕರೆದುಕೊಂಡು ಹೋಗು. ಇವನು ಒಂದು ಸಂದೇಶವನ್ನು ಅವನಿಗೆ ತಿಳಿಸಬೇಕಾಗಿದೆ” ಎಂದು ಹೇಳಿದನು. 18 ಆದ್ದರಿಂದ ಸೇನಾಧಿಕಾರಿಯು ಪೌಲನ ಸೋದರಳಿಯನನ್ನು ಸೇನಾಧಿಪತಿಯ ಬಳಿಗೆ ಕರೆದುಕೊಂಡು ಹೋದನು. ಆ ಅಧಿಕಾರಿಯು ಸೇನಾಧಿಪತಿಗೆ, “ಈ ಯೌವನಸ್ಥನನ್ನು ನಿನ್ನ ಬಳಿಗೆ ಕರೆದುಕೊಂಡು ಹೋಗಬೇಕೆಂದು ಸೆರೆವಾಸದಲ್ಲಿರುವ ಪೌಲನು ನನ್ನನ್ನು ಕೇಳಿಕೊಂಡನು ಇವನು ನಿನಗೊಂದು ಸಂದೇಶವನ್ನು ತಿಳಿಸಬೇಕೆಂದಿದ್ದಾನೆ” ಎಂದು ಹೇಳಿದನು.
19 ಸೇನಾಧಿಪತಿಯು ಆ ಯೌವನಸ್ಥನನ್ನು ಕೈಹಿಡಿದು ಏಕಾಂತವಾದ ಸ್ಥಳಕ್ಕೆ ಕರೆದುಕೊಂಡು ಹೋಗಿ, “ನೀನು ಏನು ತಿಳಿಸಬೇಕೆಂದಿರುವೆ?” ಎಂದು ಕೇಳಿದನು.
20 ಆ ಯೌವನಸ್ಥನು, “ಇನ್ನೂ ಹೆಚ್ಚಿನ ಪ್ರಶ್ನೆಗಳನ್ನು ಪೌಲನಿಗೆ ಕೇಳಬೇಕೆಂಬ ನೆವವನ್ನು ಹೇಳಿ ನಾಳೆಯ ಆಲೋಚನಾಸಭೆಗೆ ಪೌಲನನ್ನು ಕರೆದುಕೊಂಡುಬರಬೇಕೆಂದು ಯೆಹೂದ್ಯರು ನಿನ್ನನ್ನು ಕೇಳಿಕೊಳ್ಳಲು ನಿರ್ಧರಿಸಿದ್ದಾರೆ. 21 ಆದರೆ ಅವರನ್ನು ನಂಬಬೇಡ! ಪೌಲನನ್ನು ಕೊಲ್ಲುವುದಕ್ಕಾಗಿ ನಲವತ್ತಕ್ಕಿಂತಲೂ ಹೆಚ್ಚು ಮಂದಿ ಯೆಹೂದ್ಯರು ಅಡಗಿಕೊಂಡು ಕಾಯುತ್ತಿದ್ದಾರೆ. ಪೌಲನನ್ನು ಕೊಲ್ಲುವ ತನಕ ತಿನ್ನುವುದೂ ಇಲ್ಲ ಕುಡಿಯುವುದೂ ಇಲ್ಲ ಎಂದು ಅವರೆಲ್ಲರೂ ಹರಕೆ ಮಾಡಿಕೊಂಡಿದ್ದಾರೆ! ಈಗ ಅವರು ನಿನ್ನ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ” ಎಂದು ಹೇಳಿದನು.
22 ಸೇನಾಧಿಪತಿಯು ಯೌವನಸ್ಥನಿಗೆ, “ಅವರ ಯೋಜನೆಯ ಬಗ್ಗೆ ನೀನು ನನಗೆ ಹೇಳಿರುವುದಾಗಿ ಯಾರಿಗೂ ತಿಳಿಸಬೇಡ” ಎಂದು ಹೇಳಿ ಅವನನ್ನು ಕಳುಹಿಸಿಬಿಟ್ಟನು.
ಪೌಲನನ್ನು ಸೆಜರೇಯಕ್ಕೆ ಕಳುಹಿಸಲಾಯಿತು
23 ಬಳಿಕ ಸೇನಾಧಿಪತಿಯು ಇಬ್ಬರು ಸೇನಾಧಿಕಾರಿಗಳನ್ನು ಕರೆದು ಅವರಿಗೆ, “ಸೆಜರೇಯಕ್ಕೆ ಕಳುಹಿಸಿಕೊಡಲು ಇನ್ನೂರು ಮಂದಿ ಸೈನಿಕರನ್ನು ಸಿದ್ಧಪಡಿಸು. ಅಲ್ಲದೆ ಎಪ್ಪತ್ತು ಮಂದಿಯ ಅಶ್ವದಳವನ್ನೂ ಇನ್ನೂರು ಮಂದಿ ಭಲ್ಲೆಯವರನ್ನೂ ಸಿದ್ಧಪಡಿಸು. ಈ ರಾತ್ರಿ ಒಂಭತ್ತು ಗಂಟೆಗೆ ಇಲ್ಲಿಂದ ಹೊರಡಲು ನೀವು ಸಿದ್ಧರಾಗಿರಬೇಕು. 24 ಪೌಲನ ಪ್ರಯಾಣಕ್ಕಾಗಿ ಕೆಲವು ಕುದುರೆಗಳನ್ನು ತೆಗೆದುಕೊ. ರಾಜ್ಯಪಾಲನಾದ ಫೇಲಿಕ್ಸನ ಬಳಿಗೆ ಅವನನ್ನು ಸುರಕ್ಷಿತವಾಗಿ ಕೊಂಡೊಯ್ಯಲೇಬೇಕು” ಎಂದು ಹೇಳಿದನು. 25 ಸೇನಾಧಿಪತಿಯು ಒಂದು ಪತ್ರವನ್ನೂ ಬರೆದನು. ಅದರಲ್ಲಿ ಹೀಗೆ ತಿಳಿಸಲಾಗಿತ್ತು:
26 ಕ್ಲಾಡಿಯ ಲೂಸಿಯನಿಂದ ಮಹಾರಾಜಶ್ರೀಗಳಾದ ರಾಜ್ಯಪಾಲ ಫೇಲಿಕ್ಸನಿಗೆ,
ವಂದನೆಗಳು.
27 ಯೆಹೂದ್ಯರು ಈ ಮನುಷ್ಯನನ್ನು ಹಿಡಿದು ಕೊಲ್ಲುವುದರಲ್ಲಿದ್ದರು. ಆದರೆ ಇವನು ರೋಮ್ನ ಪ್ರಜೆಯೆಂಬುದು ನನಗೆ ತಿಳಿಯಿತು. ಆದ್ದರಿಂದ ನಾನು ಸೈನಿಕರೊಂದಿಗೆ ಹೋಗಿ ಇವನನ್ನು ಕಾಪಾಡಿದೆನು. 28 ಅವರು ಇವನ ಮೇಲೆ ಹೊರಿಸುತ್ತಿರುವ ಆಪಾದನೆಗಳಿಗೆ ಕಾರಣವನ್ನು ತಿಳಿದುಕೊಳ್ಳಲು ನಾನು ನ್ಯಾಯಸಭೆಯ ಮುಂದೆ ನಿಲ್ಲಿಸಿದೆ. 29 ಅಲ್ಲಿ ನನಗೆ ತಿಳಿದುಬಂದದ್ದೇನೆಂದರೆ, ಪೌಲನು ದುಷ್ಕೃತ್ಯಗಳನ್ನು ಮಾಡಿದ್ದಾನೆಂದು ಯೆಹೂದ್ಯರು ಹೇಳಿದರೂ ಅವರ ಆಪಾದನೆಗಳು ಅವರ ಸ್ವಂತ ಯೆಹೂದ್ಯ ಧರ್ಮಶಾಸ್ತ್ರಕ್ಕೆ ಸಂಬಂಧಪಟ್ಟದ್ದಾಗಿದ್ದವು. ಅಲ್ಲದೆ ಇವನನ್ನು ಸೆರೆಮನೆಗಾಗಲಿ ಮರಣದಂಡನೆಗಾಗಲಿ ಗುರಿಪಡಿಸಬಹುದಾದ ಯಾವ ಅಪರಾಧವೂ ಇರಲಿಲ್ಲ. 30 ಆದರೆ ಯೆಹೂದ್ಯರಲ್ಲಿ ಕೆಲವರು ಪೌಲನನ್ನು ಕೊಲ್ಲಲು ಯೋಜನೆ ಮಾಡುತ್ತಿರುವುದು ನನಗೆ ತಿಳಿಯಿತು. ಆದ್ದರಿಂದ ನಾನು ಅವನನ್ನು ನಿನ್ನ ಬಳಿಗೆ ಕಳುಹಿಸಿದ್ದೇನೆ. ಅಲ್ಲದೆ ಅವನ ಮೇಲಿರುವ ದೂರುಗಳನ್ನು ನಿನಗೆ ತಿಳಿಸಬೇಕೆಂದು ನಾನು ಆಪಾದಕರಿಗೂ ಸಹ ತಿಳಿಸಿದ್ದೇನೆ.
31 ಸೇನಾಧಿಪತಿಯ ಆಜ್ಞೆಗನುಸಾರವಾಗಿ ಸೈನಿಕರು ಕಾರ್ಯವೆಸಗಿದರು. ಆ ರಾತ್ರಿ ಸೈನಿಕರು ಪೌಲನನ್ನು ಅಂತಿಪತ್ರಿಯ ಎಂಬ ಪಟ್ಟಣಕ್ಕೆ ಕರೆದುಕೊಂಡು ಹೋದರು. 32 ಮರುದಿನ ಅಶ್ವದಳದವರು ಪೌಲನೊಂದಿಗೆ ಸೆಜರೇಯ ಪಟ್ಟಣಕ್ಕೆ ಹೋದರು. ಆದರೆ ಉಳಿದ ಸೈನಿಕರು ಮತ್ತು ಭರ್ಜಿದಾರರು ಜೆರುಸಲೇಮಿನ ಸೈನ್ಯದ ಕೋಟೆಗೆ ಹಿಂತಿರುಗಿದರು. 33 ಅಶ್ವದಳದವರು ಸೆಜರೇಯ ಪಟ್ಟಣವನ್ನು ಪ್ರವೇಶಿಸಿ, ರಾಜ್ಯಪಾಲನಾದ ಫೇಲಿಕ್ಸನಿಗೆ ಪತ್ರವನ್ನು ಕೊಟ್ಟರು. ಬಳಿಕ ಅವರು ಪೌಲನನ್ನು ಅವನಿಗೆ ಒಪ್ಪಿಸಿದರು.
34 ರಾಜ್ಯಪಾಲನು ಪತ್ರವನ್ನು ಓದಿದನು. ಬಳಿಕ ಅವನು ಪೌಲನಿಗೆ, “ನೀನು ಯಾವ ದೇಶದವನು?” ಎಂದು ಕೇಳಿದಾಗ, ಸಿಲಿಸಿಯದವನೆಂಬುದು ತಿಳಿಯಿತು. 35 ರಾಜ್ಯಪಾಲನು, “ನಿನಗೆ ವಿರೋಧವಾಗಿರುವ ಯೆಹೂದ್ಯರು ಇಲ್ಲಿಗೆ ಬಂದಾಗ, ನಾನು ನಿನ್ನ ವಿಚಾರಣೆ ಮಾಡುತ್ತೇನೆ” ಎಂದು ಹೇಳಿದನು. ಬಳಿಕ ರಾಜ್ಯಪಾಲನು ಪೌಲನನ್ನು ಅರಮನೆಯೊಳಗೆ ಇರಿಸಬೇಕೆಂದು ಆಜ್ಞಾಪಿಸಿದನು. (ಈ ಕಟ್ಟಡವನ್ನು ಹೆರೋದನು ಕಟ್ಟಿಸಿದ್ದನು.)
Kannada Holy Bible: Easy-to-Read Version. All rights reserved. © 1997 Bible League International