Revised Common Lectionary (Semicontinuous)
ರಚನೆಗಾರ: ದಾವೀದ.
24 ಭೂಮಿಯೂ ಅದರಲ್ಲಿರುವ ಸಮಸ್ತವೂ ಯೆಹೋವನದೇ.
ಲೋಕವೂ ಅದರ ನಿವಾಸಿಗಳೂ ಆತನವೇ.
2 ಅದರ ಅಸ್ತಿವಾರವನ್ನು ಸಾಗರದ ಮೇಲೆ ಹಾಕಿದವನು ಆತನೇ.
ಅದನ್ನು ಜಲರಾಶಿಗಳ ಮೇಲೆ ಕಟ್ಟಿದವನೂ ಆತನೇ.
3 ಯೆಹೋವನ ಪರ್ವತವನ್ನು ಹತ್ತುವವರು ಎಂಥವರಾಗಿರಬೇಕು?
ಆತನ ಪವಿತ್ರ ಆಲಯದಲ್ಲಿ ನಿಂತುಕೊಳ್ಳುವವರು ಎಂಥವರಾಗಿರಬೇಕು?
4 ಅವರು ದುಷ್ಕೃತ್ಯಗಳನ್ನು ಮಾಡಿಲ್ಲದವರೂ
ಶುದ್ಧ ಹೃದಯವುಳ್ಳವರೂ
ನನ್ನ ಹೆಸರಿನಲ್ಲಿ[a] ಮೋಸ ಪ್ರಮಾಣ ಮಾಡದವರೂ
ವಿಗ್ರಹಗಳನ್ನು ಆರಾಧಿಸದವರೂ ಆಗಿರಬೇಕು.
5 ಅವರನ್ನು ಯೆಹೋವನು ಆಶೀರ್ವದಿಸಿ ಕಾಪಾಡುವನು;
ದೇವರು ಅವರನ್ನು ನಿರಪರಾಧಿಗಳೆಂದು ಪ್ರಕಟಿಸುವನು.
6 ಆತನನ್ನು ಅನುಸರಿಸುವವರು ಇಂಥವರೇ.
ಸಹಾಯಕ್ಕಾಗಿ ಯಾಕೋಬನ ದೇವರ ಬಳಿಗೆ ಹೋಗುವವರು ಇಂಥವರೇ.
7 ಹೆಬ್ಬಾಗಿಲುಗಳೇ, ಉನ್ನತವಾಗಿರಿ!
ಪುರಾತನ ದ್ವಾರಗಳೇ, ತೆರದುಕೊಂಡಿರಿ.
ಮಹಿಮಾಸ್ವರೂಪನಾದ ರಾಜನು ಆಗಮಿಸುತ್ತಿದ್ದಾನೆ.
8 ಮಹಿಮಾಸ್ವರೂಪನಾದ ಈ ರಾಜನು ಯಾರು?
ಬಲಿಷ್ಠನೂ ಮಹಾಪರಾಕ್ರಮಿಯೂ ಆಗಿರುವ
ಯೆಹೋವನೇ ಆತನು.
9 ಹೆಬ್ಬಾಗಿಲುಗಳೇ, ಉನ್ನತವಾಗಿರಿ!
ಪುರಾತನ ದ್ವಾರಗಳೇ, ತೆರೆದುಕೊಂಡಿರಿ.
ಮಹಿಮಾಸ್ವರೂಪನಾದ ರಾಜನು ಆಗಮಿಸುತ್ತಿದ್ದಾನೆ.
10 ಮಹಿಮಾಸ್ವರೂಪನಾದ ಈ ರಾಜನು ಯಾರು?
ಸೇನಾಧೀಶ್ವರನಾದ ಯೆಹೋವನೇ ಆ ರಾಜನು.
ಮಹಿಮಾಸ್ವರೂಪನಾದ ರಾಜನು ಆತನೇ.
ಇಸ್ರೇಲರ ಪ್ರಯಾಣ
11 ಇಸ್ರೇಲರು ಈಜಿಪ್ಟನ್ನು ಬಿಟ್ಟ ನಂತರದ ಎರಡನೆಯ ವರ್ಷದ ಎರಡನೆಯ ತಿಂಗಳಿನ ಇಪ್ಪತ್ತನೆಯ ದಿನದಲ್ಲಿ ಮೇಘವು ಒಡಂಬಡಿಕೆಯ ಗುಡಾರದಿಂದ ಮೇಲೆ ಎದ್ದಿತು. 12 ಆದ್ದರಿಂದ, ಇಸ್ರೇಲರು ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಅವರು ಸೀನಾಯಿ ಮರುಭೂಮಿಯನ್ನು ಬಿಟ್ಟು ಮೇಘವು ಪಾರಾನ್ ಮರುಭೂಮಿಯಲ್ಲಿ ನಿಲ್ಲುವವರೆಗೆ ಪ್ರಯಾಣ ಮಾಡಿದರು. 13 ಯೆಹೋವನು ಮೋಶೆಯ ಮೂಲಕ ಕೊಟ್ಟ ಸೂಚನೆಯ ಪ್ರಕಾರ ಅವರು ಮೊಟ್ಟಮೊದಲನೆಯ ಸಲ ಪ್ರಯಾಣವನ್ನು ಆರಂಭಿಸಿದರು.
14 ಮೊದಲು ಯೆಹೂದ ಪಾಳೆಯದ ಮೂರು ದಂಡುಗಳು ಹೊರಟವು. ಅವರು ತಮ್ಮ ಧ್ವಜದೊಂದಿಗೆ ಪ್ರಯಾಣ ಮಾಡಿದರು. ಅಮ್ಮೀನಾದಾಬನ ಮಗನಾದ ನಹಶೋನನು ಯೆಹೂದ ಕುಲದ ಸೇನಾಧಿಪತಿಯಾಗಿದ್ದನು. 15 ಚೂವಾರನ ಮಗನಾದ ನೆತನೇಲನು ಇಸ್ಸಾಕಾರನ ಕುಲದ ಸೇನಾಧಿಪತಿ. 16 ಹೇಲೋನನ ಮಗನಾದ ಎಲೀಯಾಬನು ಜೆಬುಲೂನ್ ಕುಲದ ಸೇನಾಧಿಪತಿ.
17 ಬಳಿಕ ಪವಿತ್ರ ಗುಡಾರವನ್ನು ಕೆಳಗಿಳಿಸಲಾಯಿತು. ಗೇರ್ಷೋನ್ ಮತ್ತು ಮೆರಾರೀ ಕುಲಗಳ ಗಂಡಸರು ಪವಿತ್ರ ಗುಡಾರವನ್ನು ಹೊತ್ತುಕೊಂಡು ಅವರ ಹಿಂದೆ ಹೊರಟರು.
18 ಅವರ ತರುವಾಯ ರೂಬೇನ್ ಕುಲದಿಂದ ಮುನ್ನಡೆಸಲ್ಪಟ್ಟ ಮೂರು ಗುಂಪುಗಳು ಹೊರಟವು. ಅವರು ತಮ್ಮ ಧ್ವಜದೊಂದಿಗೆ ಹೊರಟರು. ಶೆದೇಯೂರನ ಮಗನಾದ ಎಲೀಚೂರನು ರೂಬೇನ್ ಕುಲದ ಸೇನಾಧಿಪತಿಯಾಗಿದ್ದನು. 19 ಚೂರೀಷದ್ದೈನ ಮಗನಾದ ಶೆಲುಮೀಯೇಲನು ಸಿಮೆಯೋನ್ ಕುಲದ ಸೇನಾಧಿಪತಿ. 20 ದೆಗೂವೇಲನ ಮಗನಾದ ಎಲ್ಯಾಸಾಫನು ಗಾದ್ ಕುಲದ ಸೇನಾಧಿಪತಿ. 21 ಬಳಿಕ ಕೆಹಾತನ ಕುಲದವರು ಹೊರಟರು. ಅವರು ದೇವಸ್ಥಾನದ ಪವಿತ್ರವಸ್ತುಗಳನ್ನು ಹೊತ್ತುಕೊಂಡಿದ್ದರು. ಕೆಹಾತ್ಯರು ಪವಿತ್ರವಸ್ತುಗಳೊಡನೆ ಬರುವಷ್ಟರೊಳಗೆ ಇತರ ಲೇವಿಯರು ದೇವದರ್ಶನಗುಡಾರವನ್ನು ಎತ್ತಿ ನಿಲ್ಲಿಸಿದರು.
22 ಬಳಿಕ ಎಫ್ರಾಯೀಮ್ ಪಾಳೆಯದಿಂದ ಮೂರು ಗುಂಪುಗಳು ಹೊರಟವು. ಅವರು ತಮ್ಮ ಧ್ವಜದೊಂದಿಗೆ ಪ್ರಯಾಣ ಮಾಡಿದರು. ಅಮ್ಮೀಹೂದನ ಮಗನಾದ ಎಲೀಷಾಮನು ಎಫ್ರಾಯೀಮ್ ಕುಲದ ಸೇನಾಧಿಪತಿ. 23 ಪೆದಾಚೂರನ ಮಗನಾದ ಗಮ್ಲೀಯೇಲನು ಮನಸ್ಸೆ ಕುಲದ ಸೇನಾಧಿಪತಿ. 24 ಗಿದ್ಯೋನಿಯ ಮಗನಾದ ಅಬೀದಾನನು ಬೆನ್ಯಾಮೀನ್ ಕುಲದ ಸೇನಾಧಿಪತಿ.
25 ಆಮೇಲೆ ಎಲ್ಲಾ ಕುಲಗಳ ಹಿಂಭಾಗದಲ್ಲಿ ದಾನ್ ಕುಲದಿಂದ ಮುನ್ನಡೆಸಲ್ಪಟ್ಟ ಗುಂಪುಗಳು ಹೊರಟವು. ಅವರು ತಮ್ಮ ಧ್ವಜದೊಂದಿಗೆ ಪ್ರಯಾಣ ಮಾಡಿದರು. ಅಮ್ಮೀಷದ್ದೈನ ಮಗನಾದ ಅಹೀಗೆಜೆರನು ದಾನ್ ಕುಲದ ಸೇನಾಧಿಪತಿ. 26 ಆಶೇರನ ಕುಲಕ್ಕೆ ಒಕ್ರಾನನ ಮಗನಾದ ಪಗೀಯೇಲನು ಸೇನಾಧಿಪತಿಯಾಗಿದ್ದನು. 27 ನಫ್ತಾಲಿ ಕುಲಕ್ಕೆ ಏನಾನನ ಮಗನಾದ ಅಹೀರನು ಸೇನಾಧಿಪತಿಯಾಗಿದ್ದನು. 28 ಈ ರೀತಿಯಾಗಿ ಇಸ್ರೇಲರು ತಮ್ಮ ಗುಂಪುಗಳಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ಮಾಡಿದರು.
29 ಹೋಬಾಬನು ಮಿದ್ಯಾನ್ಯನಾದ ರೆಗೂವೇಲನ ಮಗನು. ರೆಗೂವೇಲನು ಮೋಶೆಯ ಮಾವ. ಮೋಶೆಯು ಹೋಬಾಬನಿಗೆ, “ದೇವರು ನಮಗೆ ಕೊಡುತ್ತೇನೆಂದು ವಾಗ್ದಾನ ಮಾಡಿದ ದೇಶಕ್ಕೆ ನಾವು ಪ್ರಯಾಣ ಮಾಡುತ್ತಿದ್ದೇವೆ. ನಮ್ಮೊಂದಿಗೆ ಬಾ. ನೀನು ನಮ್ಮೊಂದಿಗೆ ಉದ್ದಾರವಾಗುವೆ; ಯಾಕೆಂದರೆ ಯೆಹೋವನು ಇಸ್ರೇಲರಿಗೆ ಒಳ್ಳೆಯವುಗಳನ್ನು ವಾಗ್ದಾನ ಮಾಡಿದ್ದಾನೆ.”
30 ಆದರೆ ಹೋಬಾಬನು, “ಇಲ್ಲ. ನಾನು ನಿಮ್ಮೊಂದಿಗೆ ಬರುವುದಿಲ್ಲ. ನಾನು ನನ್ನ ದೇಶಕ್ಕೂ ನನ್ನ ಜನರ ಬಳಿಗೂ ಹೋಗುವೆನು” ಎಂದು ಉತ್ತರಕೊಟ್ಟನು.
31 ಆಗ ಮೋಶೆ, “ದಯಮಾಡಿ ನಮ್ಮನ್ನು ಬಿಟ್ಟು ಹೋಗಬೇಡ. ನಾವು ಮರುಭೂಮಿಯಲ್ಲಿ ಎಲ್ಲಿ ಪಾಳೆಯ ಮಾಡಿಕೊಳ್ಳಬಹುದೆಂಬುದು ನಿನಗೆ ಗೊತ್ತಿದೆ. ನೀನು ನಮ್ಮ ಮಾರ್ಗದರ್ಶಕನಾಗಿರಬಹುದು. 32 ನೀನು ನಮ್ಮೊಂದಿಗೆ ಬಂದರೆ, ಯೆಹೋವನು ನಮಗೆ ಕೊಡುವ ಎಲ್ಲಾ ಒಳ್ಳೆಯ ವಸ್ತುಗಳಲ್ಲಿ ನಿನಗೆ ಪಾಲು ಕೊಡುವೆವು” ಎಂದು ಹೇಳಿದನು.
33 ಅವರು ಯೆಹೋವನ ಬೆಟ್ಟದಿಂದ ಹೊರಟು ಮೂರು ದಿನ ಪ್ರಯಾಣ ಮಾಡಿದರು. ಲೇವಿಯರು ಹೊತ್ತುಕೊಂಡಿದ್ದ ಯೆಹೋವನ ಒಡಂಬಡಿಕೆ ಪೆಟ್ಟಿಗೆಯು ಮತ್ತೆ ಪಾಳೆಯ ಹಾಕಲು ಯೋಗ್ಯವಾದ ಸ್ಥಳವನ್ನು ಎದುರು ನೋಡುತ್ತಾ ಜನರ ಮುಂದೆ ಮೂರು ದಿನಗಳವರೆಗೆ ಹೋಯಿತು. 34 ಅವರು ಪಾಳೆಯದೊಡನೆ ಹೊರಟಾಗ ಪ್ರತಿದಿನವೂ ಯೆಹೋವನ ಮೋಡವು ಅವರ ಮೇಲಿರುತ್ತಿತ್ತು.
35 ಜನರು ಪವಿತ್ರ ಪೆಟ್ಟಿಗೆಯನ್ನು ಎತ್ತಿಕೊಂಡು ಹೊರಡುವಾಗ, ಮೋಶೆಯು,
“ಯೆಹೋವನೇ, ಎದ್ದೇಳು!
ನಿನ್ನ ವೈರಿಗಳು ಚದರಿಹೋಗಲಿ,
ನಿನ್ನ ಶತ್ರುಗಳು ಬೆನ್ನುಕೊಟ್ಟು ಓಡಿಹೋಗಲಿ”
ಎಂದು ಹೇಳುತ್ತಿದ್ದನು.
36 ಪವಿತ್ರ ಪೆಟ್ಟಿಗೆಯು ಕೆಳಗಿಳಿಸಲ್ಪಟ್ಟಾಗ, ಮೋಶೆಯು,
“ಯೆಹೋವನೇ ಇಸ್ರೇಲರ ಲಕ್ಷಾಂತರ ಕುಟುಂಬಗಳ
ಬಳಿಗೆ ಹಿಂತಿರುಗಿ ಬಾ”
ಎಂದು ಹೇಳುತ್ತಿದ್ದನು.
ಯೋಹಾನನ ಜನನ
57 ಎಲಿಜಬೇತಳಿಗೆ ಹೆರಿಗೆ ಕಾಲ ಬಂದಿತು. ಆಕೆಯಲ್ಲಿ ಒಬ್ಬ ಮಗನು ಹುಟ್ಟಿದನು. 58 ಪ್ರಭುವು ಆಕೆಗೆ ತೋರಿದ ಮಹಾಕರುಣೆಯು ಆಕೆಯ ನೆರೆಹೊರೆಯವರಿಗೆ ಮತ್ತು ಬಂಧುಗಳಿಗೆ ತಿಳಿಯಿತು. ಅವರು ಆಕೆಯ ವಿಷಯದಲ್ಲಿ ಸಂತೋಷಪಟ್ಟರು.
59 ಮಗುವಿಗೆ ಎಂಟು ದಿನವಾದಾಗ ಅವರು ಸುನ್ನತಿ ಮಾಡಿಸುವುದಕ್ಕಾಗಿ ಬಂದರು. ಅವರು ಆ ಮಗುವಿಗೆ “ಜಕರೀಯ” ಎಂಬ ಹೆಸರು ಇಡಬೇಕೆಂದಿದ್ದರು. ಏಕೆಂದರೆ ಅದು ಮಗುವಿನ ತಂದೆಯ ಹೆಸರಾಗಿತ್ತು. 60 ಆದರೆ ಮಗುವಿನ ತಾಯಿ, “ಇಲ್ಲ! ಆತನಿಗೆ ‘ಯೋಹಾನ’ ಎಂಬ ಹೆಸರಿಡಬೇಕು” ಎಂದು ಹೇಳಿದಳು.
61 ಜನರು ಎಲಿಜಬೇತಳಿಗೆ, “ನಿನ್ನ ಕುಟುಂಬದಲ್ಲಿ ಯಾರಿಗೂ ಈ ಹೆಸರು ಇಲ್ಲವಲ್ಲಾ!” ಎಂದು ಹೇಳಿದರು. 62 ಬಳಿಕ ಅವರು ಅವನ ತಂದೆಗೆ ಸನ್ನೆಮಾಡಿ, “ಆತನಿಗೆ ಯಾವ ಹೆಸರಿಡಬೇಕು?” ಎಂದು ಕೇಳಿದರು.
63 ಆಗ ಜಕರೀಯನು ಸನ್ನೆಮಾಡಿ, ಒಂದು ಹಲಗೆಯನ್ನು ತರಿಸಿಕೊಂಡು, “ಈತನ ಹೆಸರು ಯೋಹಾನ” ಎಂದು ಬರೆದನು. ಜನರೆಲ್ಲರಿಗೂ ಆಶ್ಚರ್ಯವಾಯಿತು. 64 ಆ ಕೂಡಲೇ ಜಕರೀಯನು ಮತ್ತೆ ಮಾತಾಡಬಲ್ಲವನಾಗಿ ದೇವರನ್ನು ಸ್ತುತಿಸತೊಡಗಿದನು. 65 ಇದನ್ನು ಕೇಳಿ ನೆರೆಹೊರೆಯವರಿಗೆಲ್ಲಾ ಭಯವಾಯಿತು. ಜುದೇಯದ ಗುಡ್ಡಪ್ರದೇಶದಲ್ಲೆಲ್ಲಾ ಈ ಸಂಗತಿಗಳ ಬಗ್ಗೆ ಜನರು ಮಾತನಾಡತೊಡಗಿದರು. 66 ಈ ಸಂಗತಿಗಳನ್ನು ಕೇಳಿದ ಜನರೆಲ್ಲರು ಆಶ್ಚರ್ಯಪಟ್ಟು “ಈ ಮಗು (ಯೋಹಾನ) ಬೆಳೆದು ದೊಡ್ಡವನಾದ ಮೇಲೆ ಎಂಥ ವ್ಯಕ್ತಿಯಾಗುವನೋ?” ಎಂದು ಯೋಚಿಸತೊಡಗಿದರು. ಏಕೆಂದರೆ ಪ್ರಭುವು ಈ ಮಗುವಿನ ಸಂಗಡವಿದ್ದನು.
ಜಕರೀಯನ ಪ್ರವಾದನೆ
67 ಬಳಿಕ ಯೋಹಾನನ ತಂದೆಯಾದ ಜಕರೀಯನು ಪವಿತ್ರಾತ್ಮಭರಿತನಾಗಿ ಹೀಗೆಂದು ಪ್ರವಾದಿಸಿದನು:
68 “ಇಸ್ರೇಲರ ಪ್ರಭುವಾದ ದೇವರಿಗೆ ಸ್ತೋತ್ರವಾಗಲಿ.
ಆತನು ಬಂದು ತನ್ನ ಜನರನ್ನು ಬಿಡುಗಡೆ ಮಾಡಿದ್ದಾನೆ.
69 ತನ್ನ ಸೇವಕನಾದ ದಾವೀದನ ಮನೆತನದಿಂದ
ದೇವರು ವೀರರಕ್ಷಕನನ್ನು ನಮಗೆ ಕೊಟ್ಟಿದ್ದಾನೆ.
70 ಇದನ್ನು ಆತನು ಪೂರ್ವಕಾಲದ
ತನ್ನ ಪವಿತ್ರ ಪ್ರವಾದಿಗಳ ಮೂಲಕ ತಿಳಿಸಿದ್ದಾನೆ.
71 ದೇವರು ನಮ್ಮನ್ನು ನಮ್ಮ ವೈರಿಗಳಿಂದಲೂ
ದ್ವೇಷಿಗಳ ಹಿಡಿತದಿಂದಲೂ ರಕ್ಷಿಸಿದ್ದಾನೆ.
72 ಕರುಣೆ ತೋರುವುದಾಗಿ ನಮ್ಮ ಪಿತೃಗಳಿಗೆ ನೀಡಿದ
ತನ್ನ ಪವಿತ್ರ ವಾಗ್ದಾನವನ್ನು ಆತನು ಜ್ಞಾಪಿಸಿಕೊಂಡಿದ್ದಾನೆ.
73 ನಮ್ಮ ವೈರಿಗಳ ಹಿಡಿತದಿಂದ ನಮ್ಮನ್ನು ಬಿಡಿಸುವುದಾಗಿ ದೇವರು ನಮ್ಮ ಪಿತೃವಾದ ಅಬ್ರಹಾಮನಿಗೆ ವಾಗ್ದಾನ ಮಾಡಿದ್ದಾನೆ.
74-75 ಏಕೆಂದರೆ ನಮ್ಮ ಜೀವಮಾನವೆಲ್ಲಾ ನಾವು ಆತನ ಸನ್ನಿಧಿಯಲ್ಲಿ ನೀತಿವಂತರೂ ಪರಿಶುದ್ಧರೂ ಆಗಿದ್ದು
ಭಯವಿಲ್ಲದೆ ಆತನ ಸೇವೆ ಮಾಡಬೇಕೆಂಬುದೇ ಆತನ ಉದ್ದೇಶವಾಗಿತ್ತು.
76 “ಮಗುವೇ, ನೀನು ಮಹೋನ್ನತನ ಪ್ರವಾದಿ ಎನಿಸಿಕೊಳ್ಳುವೆ.
ಪ್ರಭುವಿನ ಮುಂದೆ ಹೋಗಿ ಆತನ ಬರುವಿಕೆಗಾಗಿ ಜನರನ್ನು ಸಿದ್ಧಮಾಡುವೆ.
77 ಪಾಪಕ್ಷಮೆಯ ಮೂಲಕವಾಗಿ ರಕ್ಷಣೆಯಾಗುವುದೆಂಬ ತಿಳುವಳಿಕೆಯನ್ನು ನೀನು ಜನರಿಗೆ ಕೊಡುವೆ.
78 “ನಮ್ಮ ದೇವರ ಮಹಾಕರುಣೆಯಿಂದ
ಪರಲೋಕದಿಂದ ಹೊಸ ದಿನವೊಂದು ನಮಗಾಗಿ ಉದಯಿಸುವುದು.
79 ಅಂಧಕಾರದಲ್ಲಿ ಜೀವಿಸುತ್ತಾ ಮರಣಭಯದಲ್ಲಿರುವ ಜನರಿಗೆ ದೇವರು ಸಹಾಯ ಮಾಡುವನು.
ಆತನು ನಮ್ಮನ್ನು ಸಮಾಧಾನದ ಮಾರ್ಗದಲ್ಲಿ ನಡೆಸುವನು.”
80 ಆ ಮಗುವು (ಯೋಹಾನನು) ಬೆಳೆದು ದೊಡ್ಡವನಾಗಿ ಆತ್ಮದಲ್ಲಿ ಬಲವುಳ್ಳವನಾದನು. ಇಸ್ರೇಲರಿಗೆ ತನ್ನ ಉಪದೇಶವನ್ನು ಆರಂಭಿಸುವ ತನಕ ಯೋಹಾನನು ಅಡವಿಯಲ್ಲಿ ವಾಸವಾಗಿದ್ದನು.
Kannada Holy Bible: Easy-to-Read Version. All rights reserved. © 1997 Bible League International