Revised Common Lectionary (Semicontinuous)
ರಚನೆಗಾರ: ದಾವೀದ.
21 ಯೆಹೋವನೇ, ನಿನ್ನ ಬಲವು ರಾಜನನ್ನು ಸಂತೋಷಗೊಳಿಸುವುದು.
ನಿನ್ನ ರಕ್ಷಣೆಯು ಅವನನ್ನು ಹರ್ಷಗೊಳಿಸುವುದು.
2 ರಾಜನು ನಿನ್ನಲ್ಲಿ ಪ್ರಾರ್ಥಿಸಿದಾಗ
ನೀನು ಅವನ ಕೋರಿಕೆಗಳನ್ನೆಲ್ಲಾ ಈಡೇರಿಸಿದೆ.
3 ನೀನು ರಾಜನನ್ನು ಬಹಳವಾಗಿ ಆಶೀರ್ವದಿಸಿರುವೆ.
ಅವನ ತಲೆಗೆ ಬಂಗಾರದ ಕಿರೀಟವನ್ನು ತೊಡಿಸಿರುವೆ.
4 ಅವನು ದೀರ್ಘಾಯುಷ್ಯವನ್ನು ಕೇಳಿಕೊಂಡಾಗ ನೀನು ದಯಪಾಲಿಸಿದೆ.
ದೇವರೇ, ನೀನು ರಾಜನಿಗೆ ಶಾಶ್ವತವಾದ ಜೀವಿತವನ್ನು ಅನುಗ್ರಹಿಸಿದೆ.
5 ನೀನು ರಾಜನಿಗೆ ಜಯವನ್ನು ದೊರಕಿಸಿ
ಅವನಿಗೆ ಗೌರವವನ್ನೂ ಹೊಗಳಿಕೆಯನ್ನೂ ಬರಮಾಡಿದೆ.
6 ನೀನು ರಾಜನಿಗೆ ಶಾಶ್ವತವಾದ ಆಶೀರ್ವಾದವನ್ನು ಕೊಟ್ಟಿರುವೆ.
ಅವನು ನಿನ್ನ ಸನ್ನಿಧಿಯಲ್ಲಿ ಅತ್ಯಾನಂದಪಡುವನು.
7 ರಾಜನು ಯೆಹೋವನಲ್ಲಿಯೇ ಭರವಸವಿಟ್ಟಿದ್ದಾನೆ;
ಮಹೋನ್ನತನಾದ ದೇವರು ಅವನನ್ನು ನಿರಾಶೆಗೊಳಿಸುವುದಿಲ್ಲ.
8 ದೇವರೇ, ನಿನ್ನ ಬಲಿಷ್ಠತನವನ್ನು ನಿನ್ನ ಶತ್ರುಗಳಿಗೆಲ್ಲ ನೀನು ತೋರಿಸುವೆ.
ನೀನು ದ್ವೇಷಿಸುವವರನ್ನು ನಿನ್ನ ಶಕ್ತಿಯು ಸೋಲಿಸುವುದು.
9 ಯೆಹೋವನೇ, ನೀನು ರಾಜನೊಂದಿರುವಾಗ
ಅವನು ಉರಿಯುವ ಕುಲಿಮೆಯಂತಿರುವನು.
ಅವನ ಕೋಪವು ಧಗಧಗಿಸುವ ಬೆಂಕಿಯಂತೆ ಸುಡುವುದು;
ಅವನು ಶತ್ರುಗಳನ್ನು ನಾಶಮಾಡುವನು.
10 ಅವನ ಶತ್ರುಗಳ ಕುಟುಂಬಗಳು ನಾಶವಾಗುತ್ತವೆ;
ಅವು ಭೂಮಿಯ ಮೇಲೆ ಇಲ್ಲವಾಗುತ್ತವೆ.
11 ಯಾಕೆಂದರೆ, ಅವರು ನಿನಗೆ ವಿರೋಧವಾಗಿ ದುರಾಲೋಚನೆಗಳನ್ನು ಮಾಡಿದರು.
ಅವರು ಕುತಂತ್ರಗಳನ್ನು ಮಾಡಿದರೂ ಯಶಸ್ವಿಯಾಗಲಿಲ್ಲ.
12 ನಿನ್ನ ಬಿಲ್ಲುಗಳಿಂದ ಬಾಣಗಳನ್ನು ನೀನು ಎಸೆಯುವಾಗ
ಅವರು ಬೆನ್ನುಕೊಟ್ಟು ಓಡಿಹೋಗುವರು.
13 ಯೆಹೋವನೇ, ನಿನ್ನ ಪರಾಕ್ರಮಕ್ಕಾಗಿ ನಿನ್ನನ್ನು ಕೊಂಡಾಡುವೆನು.
ನಿನ್ನ ಮಹತ್ವದ ಬಗ್ಗೆ ವಾದ್ಯ ನುಡಿಸುತ್ತಾ ಹಾಡುವೆವು.
ಇಸ್ರೇಲರು ದಾವೀದನನ್ನು ರಾಜನನ್ನಾಗಿ ಮಾಡುವರು
5 ಆಗ ಇಸ್ರೇಲಿನ ಕುಲಗಳವರೆಲ್ಲಾ ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದು, “ನಾವೆಲ್ಲಾ ಒಂದೇ ಕುಲದವರಾಗಿದ್ದೇವೆ. 2 ಹಿಂದಿನ ದಿನಗಳಲ್ಲಿ, ಸೌಲನು ರಾಜನಾಗಿದ್ದಾಗಲೂ ನಮ್ಮನ್ನು ಯುದ್ಧದಲ್ಲಿ ಮುನ್ನಡೆಸಿದವನು ನೀನೇ. ಯೆಹೋವನು ನಿನ್ನನ್ನು ಕುರಿತು, ‘ನೀನು ನನ್ನ ಜನರಾದ ಇಸ್ರೇಲರ ನಾಯಕನೂ ಪಾಲಕನೂ ಆಗಿರುವೆ’ ಎಂದು ಹೇಳಿದ್ದಾನೆ” ಎಂದರು.
3 ರಾಜನಾದ ದಾವೀದನಿದ್ದ ಹೆಬ್ರೋನಿಗೆ ಇಸ್ರೇಲಿನ ಎಲ್ಲಾ ನಾಯಕರೂ ಬಂದರು. ಹೆಬ್ರೋನಿನಲ್ಲಿ ರಾಜನಾದ ದಾವೀದನು ಯೆಹೋವನ ಸನ್ನಿಧಿಯಲ್ಲಿ ಈ ನಾಯಕರೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡನು. ಆಗ ನಾಯಕರು ದಾವೀದನನ್ನು ಇಸ್ರೇಲಿನ ರಾಜನನ್ನಾಗಿ ಅಭಿಷೇಕಿಸಿದರು.
4 ದಾವೀದನು ಆಳುವುದಕ್ಕೆ ಪ್ರಾರಂಭಿಸಿದಾಗ ಅವನಿಗೆ ಮೂವತ್ತು ವರ್ಷ ವಯಸ್ಸಾಗಿತ್ತು. ಅವನು ನಲವತ್ತು ವರ್ಷಗಳ ಕಾಲ ಆಳಿದನು. 5 ಅವನು ಏಳು ವರ್ಷ ಆರು ತಿಂಗಳ ಕಾಲ ಹೆಬ್ರೋನಿನಲ್ಲಿದ್ದು ಯೆಹೂದ್ಯರನ್ನು ಆಳಿದನು. ಅವನು ಮೂವತ್ತಮೂರು ವರ್ಷ ಜೆರುಸಲೇಮಿನಲ್ಲಿದ್ದು ಸಮಸ್ತ ಇಸ್ರೇಲನ್ನು ಮತ್ತು ಯೆಹೂದವನ್ನು ಆಳಿದನು.
ದಾವೀದನು ಜೆರುಸಲೇಮ್ ಪಟ್ಟಣವನ್ನು ಗೆಲ್ಲುವನು
6 ದಾವೀದನು ಯೆಬೂಸಿಯರಿಗೆ ವಿರುದ್ಧವಾಗಿ ಜೆರುಸಲೇಮಿಗೆ ತನ್ನ ಜನರೊಂದಿಗೆ ಹೋದನು. (ಯೆಬೂಸಿಯರು ಆ ದೇಶದ ಮೂಲನಿವಾಸಿಗಳು.) ಯೆಬೂಸಿಯರು ದಾವೀದನಿಗೆ, “ನೀನು ನಮ್ಮ ನಗರದೊಳಕ್ಕೆ ಬರಲಾಗದು.[a] ಕುರುಡರು ಮತ್ತು ಕುಂಟರು ಸಹ ನಿನ್ನನ್ನು ತಡೆಯಬಲ್ಲರು” ಎಂದು ಹೇಳಿದರು. (ದಾವೀದನು ಅವರ ನಗರದೊಳಕ್ಕೆ ಪ್ರವೇಶಿಸಲು ಸಮರ್ಥನಲ್ಲವೆಂದು ಅವರು ಈ ರೀತಿ ಹೇಳಿದರು. 7 ಆದರೆ ದಾವೀದನು ಚೀಯೋನ್ ಕೋಟೆಯನ್ನು ವಶಪಡಿಸಿಕೊಂಡನು. ಈ ಕೋಟೆಗೆ ದಾವೀದ ನಗರವೆಂದು ಹೆಸರಾಯಿತು.)
8 ದಾವೀದನು ತನ್ನ ಜನರಿಗೆ ಅಂದು, “ನೀವು ಯೆಬೂಸಿಯರನ್ನು ಸೋಲಿಸಬೇಕೆಂದಿದ್ದರೆ ಜಲಮಾರ್ಗದ ಮೂಲಕ[b] ಹೋಗಿ ಶತ್ರುಗಳಾದ ಕುಂಟರು ಮತ್ತು ಕುರುಡರನ್ನು ಎದುರಿಸಿ” ಎಂದು ಹೇಳಿದನು. ಆದ್ದರಿಂದಲೇ “ಕುರುಡರು ಮತ್ತು ಕುಂಟರು ಮನೆಯೊಳಕ್ಕೆ[c] ಬರಲಾಗದು” ಎಂಬ ನಾಣ್ಣುಡಿ ಉಂಟಾಯಿತು.
9 ದಾವೀದನು ಕೋಟೆಯಲ್ಲಿ ನೆಲೆಸಿದ್ದನು. ಅವನು ಆ ಕೋಟೆಗೆ “ದಾವೀದನ ನಗರ”ವೆಂದು ಕರೆದನು. ದಾವೀದನು ಮಿಲ್ಲೋವನ್ನು ಕಟ್ಟಿಸಿದನು. ಅವನು ನಗರದಲ್ಲಿ ಅನೇಕ ಕಟ್ಟಡಗಳನ್ನು ಕಟ್ಟಿಸಿದನು. 10 ಸರ್ವಶಕ್ತನಾದ ಯೆಹೋವನು ದಾವೀದನೊಂದಿಗೆ ಇದ್ದುದರಿಂದ ಅವನು ಬಲಶಾಲಿಯಾಗುತ್ತಲೇ ಇದ್ದನು.
ಪೌಲನು ತನಗಾದ ಹಿಂಸೆಯ ಬಗ್ಗೆ ತಿಳಿಸುವನು
16 ನಾನು ನಿಮಗೆ ಮತ್ತೆ ಹೇಳುವುದೇನೆಂದರೆ, ನನ್ನನ್ನು ಬುದ್ಧಿಹೀನನೆಂದು ಯಾರೂ ಯೋಚಿಸಕೂಡದು. ಬುದ್ಧಿಹೀನನೆಂದು ನೀವು ಯೋಚಿಸುವುದಾಗಿದ್ದರೆ, ನೀವು ಬದ್ಧಿಹೀನನನ್ನು ಸ್ವೀಕರಿಸಿಕೊಳ್ಳುವಂತೆ ನನ್ನನ್ನು ಸ್ವೀಕರಿಸಿಕೊಳ್ಳಿರಿ. ಆಗ ನಾನು ಸ್ವಲ್ಪ ಹೆಮ್ಮೆಪಡಲು ಸಾಧ್ಯವಾಗುವುದು. 17 ನನಗೆ ನನ್ನ ವಿಷಯದಲ್ಲಿ ಭರವಸೆ ಇರುವುದರಿಂದ ನಾನು ಹೊಗಳಿಕೊಳ್ಳುತ್ತೇನೆ. ಆದರೆ ಪ್ರಭು ಮಾತಾಡುವಂತೆ ನಾನು ಮಾತಾಡುತ್ತಿಲ್ಲ. ನಾನು ಬುದ್ಧಿಹೀನನೆಂದು ಹೊಗಳಿಕೊಳ್ಳುತ್ತಿದ್ದೇನೆ. 18 ಅನೇಕ ಜನರು ತಮ್ಮ ಪ್ರಾಪಂಚಿಕ ಜೀವನದ ಬಗ್ಗೆ ಹೊಗಳಿಕೊಳ್ಳುತ್ತಿದ್ದಾರೆ. ಆದ್ದರಿಂದ ನಾನು ಸಹ ಹೊಗಳಿಕೊಳ್ಳುತ್ತೇನೆ. 19 ನೀವು ಬುದ್ಧಿವಂತರಾಗಿರುವುದರಿಂದ ಬುದ್ಧಿಹೀನರ ವಿಷಯದಲ್ಲಿ ಸಂತೋಷದಿಂದ ತಾಳ್ಮೆಯಿಂದಿರುತ್ತೀರಿ. 20 ಏಕೆಂದರೆ ನಿಮ್ಮಿಂದ ಬಲವಂತವಾಗಿ ಕೆಲಸ ಮಾಡಿಸಿಕೊಳ್ಳುವವನ ಮತ್ತು ನಿಮ್ಮನ್ನು ಉಪಯೋಗಿಸಿಕೊಳ್ಳುವವನ ವಿಷಯದಲ್ಲಿಯೂ ಸಹ ತಾಳ್ಮೆಯಿಂದಿರುತ್ತೀರಿ. ನಿಮ್ಮನ್ನು ಮೋಸಗೊಳಿಸುವವರ, ತಮ್ಮನ್ನು ನಿಮಗಿಂಥ ಉತ್ತಮರೆಂದು ಭಾವಿಸಿಕೊಂಡಿರುವವರ ಮತ್ತು ನಿಮ್ಮ ಮುಖದ ಮೇಲೆ ಹೊಡೆಯುವವರ ವಿಷಯದಲ್ಲಿಯೂ ನೀವು ತಾಳ್ಮೆಯಿಂದಿರುತ್ತೀರಿ. 21 ಇದನ್ನು ಹೇಳುವುದಕ್ಕೇ ನಾಚಿಕೆಯಾಗುತ್ತದೆ. ಆದರೆ, ನಿಮ್ಮೊಂದಿಗೆ ಆ ರೀತಿ ನಡೆದುಕೊಳ್ಳುವಷ್ಟು “ಬಲ” ನಮಗಿರಲಿಲ್ಲ!
ಆದರೆ ಹೊಗಳಿಕೊಳ್ಳಲು ಯಾರಿಗಾದರೂ ಸಾಕಷ್ಟು ಧೈರ್ಯವಿದ್ದರೆ ನಾನು ಸಹ ಧೈರ್ಯದಿಂದ ಹೊಗಳಿಕೊಳ್ಳುತ್ತೇನೆ. (ನಾನು ಬದ್ಧಿಹೀನನಂತೆ ಮಾತಾಡುತ್ತಿದ್ದೇನೆ.) 22 ಆ ಜನರು ಇಬ್ರಿಯರೇ? ನಾನು ಸಹ ಇಬ್ರಿಯನು. ಅವರು ಇಸ್ರೇಲರೇ? ನಾನು ಸಹ ಇಸ್ರೇಲನು. ಅವರು ಅಬ್ರಹಾಮನ ಕುಟುಂಬಕ್ಕೆ ಸೇರಿದವರೇ? ನಾನು ಸಹ ಅಬ್ರಹಾಮನ ಕುಟುಂಬಕ್ಕೆ ಸೇರಿದವನು. 23 ಅವರು ಕ್ರಿಸ್ತನ ಸೇವೆಮಾಡುತ್ತಿದ್ದಾರೋ? ನಾನು ಸಹ ಅವರಿಗಿಂತಲೂ ಹೆಚ್ಚಾಗಿ ಸೇವೆಮಾಡುತ್ತಿದ್ದೇನೆ. (ನಾನು ಹುಚ್ಚನಂತೆ ಹೀಗೆ ಮಾತಾಡುತ್ತಿದ್ದೇನೆ.) ನಾನು ಅವರಿಗಿಂತಲೂ ಹೆಚ್ಚು ಕಷ್ಟಪಟ್ಟು ದುಡಿದಿದ್ದೇನೆ; ಹೆಚ್ಚು ಸಲ ಸೆರೆಮನೆಯಲ್ಲಿದ್ದೆನು. ಹೆಚ್ಚು ಏಟುಗಳನ್ನು ತಿಂದಿದ್ದೇನೆ, ನಾನು ಅನೇಕ ಸಲ ಮರಣದ ಸಮೀಪದಲ್ಲಿದ್ದೆನು.
24 ಚಾವಟಿಯಿಂದ ಮೂವತ್ತೊಂಭತ್ತು ಏಟುಗಳನ್ನು ಹೊಡೆಯಿಸಿಕೊಳ್ಳುವ ಶಿಕ್ಷೆಯನ್ನು ಯೆಹೂದಿಯರು ನನಗೆ ಐದು ಸಲ ವಿಧಿಸಿದರು. 25 ಮೂರು ಸಲ ಕಬ್ಬಿಣದ ಸರಳುಗಳಿಂದ ಏಟನ್ನು ತಿಂದಿದ್ದೇನೆ. ಒಂದು ಸಲ ಕಲ್ಲೆಸೆದು ನನ್ನನ್ನು ಅರೆಜೀವ ಮಾಡಿದರು. ಮೂರು ಸಲ ನಾನಿದ್ದ ಹಡಗುಗಳು ಒಡೆದುಹೋದವು. ಒಮ್ಮೆ, ಒಂದು ರಾತ್ರಿ ಒಂದು ಹಗಲು ಸಮುದ್ರದ ನೀರಿನಲ್ಲಿರಬೇಕಾಯಿತು. 26 ಅನೇಕ ಪ್ರಯಾಣಗಳನ್ನು ಮಾಡಿದೆನು. ನದಿಗಳಿಂದಲೂ ಕಳ್ಳರಿಂದಲೂ ನನ್ನ ಸ್ವಂತ ಜನರಾದ ಯೆಹೂದ್ಯರಿಂದಲೂ ಮತ್ತು ಯೆಹೂದ್ಯರಲ್ಲದವರಿಂದಲೂ ಅಪಾಯಕ್ಕೀಡಾಗಿದ್ದೆನು. ಪಟ್ಟಣಗಳಲ್ಲಿಯೂ ಜನರು ವಾಸವಾಗಿಲ್ಲದ ಸ್ಥಳಗಳಲ್ಲಿಯೂ ಸಮುದ್ರಗಳಲ್ಲಿಯೂ ಸುಳ್ಳುಸಹೋದರರ ಮಧ್ಯದಲ್ಲಿಯೂ ಅಪಾಯಕ್ಕೀಡಾಗಿದ್ದೆನು.
27 ಕಷ್ಟಕರವಾದ ಮತ್ತು ಅಪಾಯಕರವಾದ ಕೆಲಸಗಳನ್ನು ಮಾಡಿದ್ದೇನೆ. ಕೆಲವು ಸಲ ನಿದ್ರಿಸಲೂ ಇಲ್ಲ. ಹಸಿವೆ ಬಾಯಾರಿಕೆಗಳಿಂದ ಕಷ್ಟಪಟ್ಟಿದ್ದೇನೆ. ಅನೇಕಸಲ ನನಗೆ ಊಟ ಇರಲಿಲ್ಲ. ಚಳಿಯಿಂದ ನಡುಗುತ್ತಿದ್ದರೂ ಬಟ್ಟೆಯಿರಲಿಲ್ಲ. 28 ಹೀಗೆ ನಾನು ಇನ್ನೂ ಅನೇಕ ಸಮಸ್ಯೆಗಳನ್ನು ಎದುರಿಸಿದ್ದೇನೆ. ಎಲ್ಲಾ ಸಭೆಗಳ ಮೇಲೆ ನನಗಿರುವ ಚಿಂತೆಯೂ ಇವುಗಳಲ್ಲಿ ಒಂದು. ನಾನು ಪ್ರತಿನಿತ್ಯ ಅವುಗಳ ಬಗ್ಗೆ ಚಿಂತಿಸುತ್ತೇನೆ. 29 ಯಾವನಾದರೂ ಬಲಹೀನನಾಗಿರುವಾಗ ನಾನೂ ಬಲಹೀನನಾಗಿರುತ್ತೇನೆ. ಯಾವನಾದರೂ ಪಾಪದಲ್ಲಿ ನಡೆಸಲ್ಪಟ್ಟರೆ ನನ್ನೊಳಗೆ ಕೋಪಗೊಳ್ಳುತ್ತೇನೆ.
30 ಹೊಗಳಿಕೊಳ್ಳಬೇಕಾದರೆ, ನನ್ನನ್ನು ಬಲಹೀನನೆಂದು ತೋರಿಸುವ ಸಂಗತಿಗಳ ಬಗ್ಗೆ ಹೊಗಳಿಕೊಳ್ಳುತ್ತೇನೆ. 31 ನಾನು ಸುಳ್ಳು ಹೇಳುತ್ತಿಲ್ಲವೆಂದು ದೇವರಿಗೆ ಗೊತ್ತಿದೆ. ಆತನು ಪ್ರಭು ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿದ್ದಾನೆ. ಆತನಿಗೆ ಸದಾಕಾಲ ಸ್ತೋತ್ರ ಸಲ್ಲಿಸಬೇಕು. 32 ನಾನು ದಮಸ್ಕದಲ್ಲಿದ್ದಾಗ ರಾಜನಾದ ಅರೇತನ ಅಧೀನದಲ್ಲಿದ್ದ ರಾಜ್ಯಪಾಲನು ನನ್ನನ್ನು ಬಂಧಿಸಬೇಕೆಂದಿದ್ದನು. ಅವನು ಪಟ್ಟಣದ ಸುತ್ತಲೂ ಕಾವಲುಗಾರರನ್ನು ನಿಲ್ಲಿಸಿದನು. 33 ಆದರೆ ನನ್ನ ಕೆಲವು ಸ್ನೇಹಿತರು ನನ್ನನ್ನು ಬುಟ್ಟಿಯೊಳಗೆ ಕುಳ್ಳಿರಿಸಿ, ಗೋಡೆಯ ಕಿಟಕಿಯೊಳಗಿಂದ ಕೆಳಗಿಳಿಸಿದರು. ಹೀಗೆ ನಾನು ರಾಜ್ಯಪಾಲನಿಂದ ತಪ್ಪಿಸಿಕೊಂಡೆನು.
Kannada Holy Bible: Easy-to-Read Version. All rights reserved. © 1997 Bible League International