Revised Common Lectionary (Semicontinuous)
ರಚನೆಗಾರರು: ಕೋರಹೀಯರು.
48 ಯೆಹೋವನೇ ಮಹೋನ್ನತನು.
ನಮ್ಮ ದೇವರನ್ನು ಆತನ ಪವಿತ್ರ ಪರ್ವತ ಪಟ್ಟಣದಲ್ಲಿ ಜನರು ಬಹಳವಾಗಿ ಕೊಂಡಾಡುವರು.
2 ದೇವರ ಪವಿತ್ರ ಪಟ್ಟಣವು ರಮ್ಯವಾಗಿದೆ.
ಭೂಲೋಕದಲ್ಲೆಲ್ಲಾ ಇರುವ ಜನರನ್ನು ಅದು ಸಂತೋಷಗೊಳಿಸುವುದು.
ಸಿಯೋನ್ ಪರ್ವತವೇ ದೇವರ ನಿಜವಾದ ಪರ್ವತ.
ಅದೇ ಆ ಮಹಾರಾಜನ ಪರ್ವತ.
3 ದೇವರು ಆ ಪಟ್ಟಣಗಳ ಅರಮನೆಗಳಲ್ಲಿ,
ತಾನೇ ಆಶ್ರಯದುರ್ಗವೆಂದು ಹೆಸರುವಾಸಿಯಾಗಿದ್ದಾನೆ.
4 ಒಮ್ಮೆ, ಕೆಲವು ರಾಜರು ಒಟ್ಟಾಗಿ ಸೇರಿಬಂದರು.
ಆ ಪಟ್ಟಣದ ಮೇಲೆ ದಾಳಿ ಮಾಡಲೆಂದು ಅವರೆಲ್ಲ ಅದರತ್ತ ನಡೆದರು.
5 ಆದರೆ ಅವರು ಅದನ್ನು ಕಂಡಾಗ ದಿಗ್ಭ್ರಮೆಗೊಂಡರು;
ಭಯದಿಂದ ಓಡಿಹೋದರು.
6 ಭಯವು ಅವರನ್ನು
ಪ್ರಸವವೇದನೆಯಂತೆ ಆವರಿಸಿಕೊಂಡಿತು.
7 ಪೂರ್ವದ ಬಿರುಗಾಳಿಯಿಂದ ಒಡೆದುಹೋದ ಹಡಗುಗಳಂತೆ
ನೀನು ಅವರನ್ನು ನಾಶಮಾಡಿದೆ.
8 ಹೌದು, ಆ ರಾಜರುಗಳಿಗೆ ಸಂಭವಿಸಿದ್ದನ್ನು ನಾವು ಕಿವಿಯಾರೆ ಕೇಳಿದಂತೆಯೇ ಕಣ್ಣಾರೆಯೂ ಕಂಡೆವು.
ನಮ್ಮ ದೇವರೂ ಸೇನಾಧೀಶ್ವರನೂ ಆಗಿರುವ ಯೆಹೋವನ ಪಟ್ಟಣದಲ್ಲಿ ನಾವು ಅದನ್ನು ನೋಡಿದ್ದೇವೆ.
ದೇವರು ಆ ಪಟ್ಟಣವನ್ನು ಶಾಶ್ವತವಾಗಿ ಭದ್ರಗೊಳಿಸುವನು.
9 ದೇವರೇ, ನಿನ್ನ ಆಲಯದಲ್ಲಿ ನಿನ್ನ ಶಾಶ್ವತ ಪ್ರೀತಿಯ ಕುರಿತು ಧ್ಯಾನಿಸುವೆವು.
10 ದೇವರೇ, ನೀನು ಪ್ರಖ್ಯಾತನಾಗಿರುವೆ.
ಭೂಮಿಯ ಮೇಲೆಲ್ಲಾ ಜನರು ನಿನ್ನನ್ನು ಕೊಂಡಾಡುವರು.
ನೀನು ಎಷ್ಟು ಒಳ್ಳೆಯವನೆಂಬುದು ಪ್ರತಿಯೊಬ್ಬರಿಗೂ ತಿಳಿದಿದೆ.
11 ನಿನ್ನ ನ್ಯಾಯನಿರ್ಣಯಗಳಿಂದ ಚೀಯೋನ್ ಪರ್ವತವು ಹರ್ಷಿಸಲಿ;
ಯೆಹೂದದ ಊರುಗಳು ಉಲ್ಲಾಸಿಸಲಿ.
12 ಚೀಯೋನಿನ ಸುತ್ತಲೂ ಸಂಚರಿಸಿ, ಆ ಪಟ್ಟಣವನ್ನು ನೋಡಿರಿ.
ಅದರ ಬುರುಜುಗಳನ್ನು ಎಣಿಸಿರಿ.
13 ಅದರ ಕೋಟೆಗಳನ್ನು ನೋಡಿರಿ.
ಚೀಯೋನಿನ ಅರಮನೆಗಳನ್ನು ಹೊಗಳಿರಿ.
ಆಗ ನೀವು ನಿಮ್ಮ ಮುಂದಿನ ಸಂತತಿಯವರಿಗೆ ಅದರ ಬಗ್ಗೆ ಹೇಳಬಲ್ಲಿರಿ.
14 ಈ ದೇವರೇ ಎಂದೆಂದಿಗೂ ನಮ್ಮ ದೇವರು!
ನಮ್ಮನ್ನು ಶಾಶ್ವತವಾಗಿ ನಡೆಸುವಾತನು ಆತನೇ!
ಇಸ್ರೇಲರ ಮತ್ತು ಯೆಹೂದದವರ ಮಧ್ಯೆ ನಡೆದ ಯುದ್ಧ
3 ಸೌಲನ ವಂಶದವರ ಮತ್ತು ದಾವೀದನ ವಂಶದವರ ಮಧ್ಯೆ ಬಹಳ ಕಾಲದವರೆಗೆ ಯುದ್ಧವು ನಡೆಯಿತು. ದಾವೀದನು ಬಲಗೊಳ್ಳುತ್ತಲೇ ಇದ್ದನು. ಸೌಲನ ವಂಶವು ದುರ್ಬಲಗೊಳ್ಳುತ್ತಲೇ ಇದ್ದಿತು.
ದಾವೀದನಿಗೆ ಹೆಬ್ರೋನಿನಲ್ಲಿ ಹುಟ್ಟಿದ ಗಂಡುಮಕ್ಕಳು
2 ದಾವೀದನಿಗೆ ಹೆಬ್ರೋನಿನಲ್ಲಿ ಆರು ಮಂದಿ ಗಂಡುಮಕ್ಕಳು ಹುಟ್ಟಿದರು.
ಅಮ್ನೋನನು ಮೊದಲನೆಯ ಮಗ. ಇಜ್ರೇಲಿನವಳಾದ ಅಹೀನೋವಮಳು ಅಮ್ನೋನನ ತಾಯಿ.
3 ಕಿಲಾಬನು ಎರಡನೆಯ ಮಗ. ಕರ್ಮೆಲ್ಯನಾದ ನಾಬಾಲನ ವಿಧವೆಯಾದ ಅಬೀಗೈಲಳು ಕಿಲಾಬನ ತಾಯಿ.
ಅಬ್ಷಾಲೋಮನು ಮೂರನೆಯ ಮಗ. ಗೆಷೂರಿನ ರಾಜ ತಲ್ಮೈನ ಮಗಳಾದ ಮಾಕಳು ಅಬ್ಷಾಲೋಮನ ತಾಯಿ.
4 ಅದೋನೀಯನು ನಾಲ್ಕನೆಯ ಮಗ. ಹಗ್ಗೀತಳು ಅದೋನೀಯನ ತಾಯಿ. ಶೆಫಟ್ಯನು
ಐದನೆಯ ಮಗ. ಅಬೀಟಲಳು ಶೆಫಟ್ಯನ ತಾಯಿ.
5 ಇತ್ರಾಮನು ಆರನೆಯ ಮಗ. ದಾವೀದನ ಹೆಂಡತಿಯಾದ ಎಗ್ಲಳು ಇತ್ರಾಮನ ತಾಯಿ.
ದಾವೀದನಿಗೆ ಹೆಬ್ರೋನಿನಲ್ಲಿ ಆರುಮಂದಿ ಗಂಡುಮಕ್ಕಳಿದ್ದರು.
ಅಬ್ನೇರನು ದಾವೀದನ ಜೊತೆ ಸೇರಲು ತೀರ್ಮಾನಿಸಿದನು
6 ಸೌಲನ ವಂಶದವರಿಗೂ ದಾವೀದನ ವಂಶದವರಿಗೂ ಯುದ್ಧವು ನಡೆಯುತ್ತಿದ್ದಾಗ ಸೌಲನ ಸೈನ್ಯದಲ್ಲಿ ಅಬ್ನೇರನೇ ಬಲಶಾಲಿಯಾದನು. 7 ಸೌಲನಿಗೆ ರಿಚ್ಪಳೆಂಬ ಹೆಸರಿನ ದಾಸಿಯಿದ್ದಳು. ಅವಳು ಅವನಿಗೆ ಹೆಂಡತಿಯಂತೆ ಇದ್ದಳು. ರಿಚ್ಪಳು ಅಯಾಹನ ಮಗಳು. ಈಷ್ಬೋಶೆತನು ಅಬ್ನೇರನಿಗೆ, “ನನ್ನ ತಂದೆಯ ಸೇವಕಿಯೊಡನೆ ಲೈಂಗಿಕ ಸಂಬಂಧವನ್ನು ಏಕೆ ಮಾಡುತ್ತಿರುವೆ?” ಎಂದು ಕೇಳಿದನು.
8 ಈಷ್ಬೋಶೆತನ ಮಾತುಗಳಿಂದ ಅಬ್ನೇರನು ಬಹಳ ಕೋಪಗೊಂಡನು. ಅಬ್ನೇರನು, “ನಾನು ಸೌಲನಿಗೂ ಅವನ ವಂಶದವರಿಗೂ ನಂಬಿಗಸ್ತನಾಗಿದ್ದೆನು. ನಾನು ನಿನ್ನನ್ನು ದಾವೀದನಿಗೆ ಒಪ್ಪಿಸಲಿಲ್ಲ ಹಾಗೂ ಅವನಿಂದ ನೀನು ಸೋಲುವಂತೆ ಮಾಡಲಿಲ್ಲ. ನಾನು ಯೆಹೂದಕ್ಕಾಗಿ ಕೆಲಸ ಮಾಡುವ ದ್ರೋಹಿಯಲ್ಲ. ಆದರೆ ಈಗ ನಾನು ಇಂತಹ ಕೆಟ್ಟ ಕೆಲಸವನ್ನು ಮಾಡಿದೆನೆಂದು ಹೇಳುತ್ತಿರುವೆ. 9-10 ಯೆಹೋವನು ಹೇಳಿರುವ ಸಂಗತಿಗಳು ನಿಜವಾಗಿಯೂ ಸಂಭವಿಸುತ್ತವೆ ಎಂದು ನಾನು ಪ್ರಮಾಣ ಮಾಡುತ್ತೇನೆ. ಸೌಲನ ವಂಶದವರಿಂದ ರಾಜ್ಯಾಧಿಕಾರವನ್ನು ಕಿತ್ತುಕೊಂಡು ದಾವೀದನಿಗೆ ಕೊಡುವುದಾಗಿ ಯೆಹೋವನು ಹೇಳಿದ್ದಾನೆ. ಯೆಹೋವನು ಇಸ್ರೇಲಿಗೂ ಯೆಹೂದಕ್ಕೂ ದಾವೀದನನ್ನು ರಾಜನನ್ನಾಗಿ ಮಾಡುತ್ತಾನೆ. ಅವನು ದಾನಿನಿಂದ ಬೇರ್ಷೆಬದವರೆಗೆ[a] ಆಳುತ್ತಾನೆ. ಈ ಸಂಗತಿಗಳು ನೆರವೇರುವುದಕ್ಕೆ ನಾನು ಸಹಾಯ ಮಾಡದಿದ್ದರೆ ದೇವರು ನನಗೆ ಕೆಟ್ಟದ್ದನ್ನು ಮಾಡಲಿ” ಎಂದು ಹೇಳಿದನು. 11 ಈಷ್ಬೋಶೆತನು ಅಬ್ನೇರನಿಗೆ ಏನನ್ನೂ ಹೇಳಿಲಿಲ್ಲ. ಈಷ್ಬೋಶೆತನು ಅವನಿಗೆ ಬಹಳ ಭಯಪಟ್ಟನು.
12 ಅಬ್ನೇರನು ದಾವೀದನ ಬಳಿಗೆ ಸಂದೇಶಕರನ್ನು ಕಳುಹಿಸಿ, “ಈ ದೇಶವನ್ನು ಯಾರು ಆಳಬೇಕೆಂಬದು ನಿನ್ನ ಅಭಿಪ್ರಾಯ? ನನ್ನೊಡನೆ ಒಂದು ಒಪ್ಪಂದವನ್ನು ಮಾಡಿಕೊಂಡರೆ, ಇಸ್ರೇಲಿನ ಜನರೆಲ್ಲರನ್ನು ನೀನು ಆಳುವಂತೆ ಮಾಡಲು ನಾನು ಸಹಾಯ ಮಾಡುತ್ತೇನೆ” ಎಂದು ಹೇಳಿದನು.
7 ನಿಮ್ಮ ಮುಂದಿರುವ ನಿಜಾಂಶಗಳನ್ನು ನೀವು ಗಮನಿಸಬೇಕು. ಒಬ್ಬ ವ್ಯಕ್ತಿಯು ತಾನು ನಿಜವಾಗಿಯೂ ಕ್ರಿಸ್ತನವನೆಂದು ತಿಳಿದುಕೊಂಡಿದ್ದರೆ ಅವನಂತೆಯೇ ನಾವೂ ಕ್ರಿಸ್ತನವರೆಂಬುದನ್ನು ಅವನು ತಿಳಿದುಕೊಳ್ಳಬೇಕು. 8 ಪ್ರಭುವು ನಮಗೆ ಕೊಟ್ಟಿರುವ ಅಧಿಕಾರದ ಬಗ್ಗೆ ನಾವು ಹೆಚ್ಚು ಹೆಮ್ಮೆಪಡುತ್ತೇವೆ ಎಂಬುದೇನೋ ಸತ್ಯ. ಆದರೆ ಆತನು ನಮಗೆ ಈ ಅಧಿಕಾರವನ್ನು ಕೊಟ್ಟಿರುವುದು ನಿಮ್ಮನ್ನು ಬಲಪಡಿಸುವುದಕ್ಕಾಗಿಯೇ ಹೊರತು ನಿಮಗೆ ನೋವನ್ನು ಉಂಟುಮಾಡುವುದಕ್ಕಾಗಿಯಲ್ಲ. ಆದ್ದರಿಂದ ಅದರ ಬಗ್ಗೆ ಹೆಮ್ಮೆಪಡುವುದರಲ್ಲಿ ನಾನು ನಾಚಿಕೊಳ್ಳುವುದಿಲ್ಲ. 9 ನನ್ನ ಪತ್ರಗಳ ಮೂಲಕ ನಿಮ್ಮನ್ನು ಭಯಪಡಿಸಲು ಪ್ರಯತ್ನಿಸುತ್ತಿದ್ದೇನೆಂದು ನೀವು ಯೋಚಿಸಬೇಕೆಂಬುದು ನನ್ನ ಅಪೇಕ್ಷೆಯಲ್ಲ. 10 “ಪೌಲನ ಪತ್ರಗಳು ಬಲಯುತವಾಗಿವೆ ಮತ್ತು ಪ್ರಾಮುಖ್ಯವಾಗಿವೆ, ಆದರೆ ಅವನು ನಮ್ಮೊಂದಿಗಿರುವಾಗ ಬಲಹೀನನಾಗಿರುತ್ತಾನೆ, ಅವನ ಮಾತುಗಳು ನಿಸ್ಸಾರವಾಗಿರುತ್ತವೆ” ಎಂದು ಕೆಲವರು ಹೇಳುತ್ತಾರೆ. 11 ಆ ಜನರಿಗೆ ಈ ವಿಷಯ ತಿಳಿದಿರಬೇಕು. ಅದೇನೆಂದರೆ, ಈಗ ನಾವು ನಿಮ್ಮೊಂದಿಗಿಲ್ಲ. ಆದ್ದರಿಂದ ಈ ಸಂಗತಿಗಳನ್ನು ಪತ್ರಗಳ ಮೂಲಕ ಹೇಳುತ್ತಿದ್ದೇವೆ. ಆದರೆ ನಾವು ನಿಮ್ಮೊಂದಿಗಿರುವಾಗ ನಮ್ಮ ಪತ್ರಗಳಲ್ಲಿ ತೋರಿದ ಅಧಿಕಾರವನ್ನೇ ತೋರಿಸುತ್ತೇವೆ.
Kannada Holy Bible: Easy-to-Read Version. All rights reserved. © 1997 Bible League International