Revised Common Lectionary (Semicontinuous)
ರಚನೆಗಾರರು: ಕೋರಹೀಯರು.
48 ಯೆಹೋವನೇ ಮಹೋನ್ನತನು.
ನಮ್ಮ ದೇವರನ್ನು ಆತನ ಪವಿತ್ರ ಪರ್ವತ ಪಟ್ಟಣದಲ್ಲಿ ಜನರು ಬಹಳವಾಗಿ ಕೊಂಡಾಡುವರು.
2 ದೇವರ ಪವಿತ್ರ ಪಟ್ಟಣವು ರಮ್ಯವಾಗಿದೆ.
ಭೂಲೋಕದಲ್ಲೆಲ್ಲಾ ಇರುವ ಜನರನ್ನು ಅದು ಸಂತೋಷಗೊಳಿಸುವುದು.
ಸಿಯೋನ್ ಪರ್ವತವೇ ದೇವರ ನಿಜವಾದ ಪರ್ವತ.
ಅದೇ ಆ ಮಹಾರಾಜನ ಪರ್ವತ.
3 ದೇವರು ಆ ಪಟ್ಟಣಗಳ ಅರಮನೆಗಳಲ್ಲಿ,
ತಾನೇ ಆಶ್ರಯದುರ್ಗವೆಂದು ಹೆಸರುವಾಸಿಯಾಗಿದ್ದಾನೆ.
4 ಒಮ್ಮೆ, ಕೆಲವು ರಾಜರು ಒಟ್ಟಾಗಿ ಸೇರಿಬಂದರು.
ಆ ಪಟ್ಟಣದ ಮೇಲೆ ದಾಳಿ ಮಾಡಲೆಂದು ಅವರೆಲ್ಲ ಅದರತ್ತ ನಡೆದರು.
5 ಆದರೆ ಅವರು ಅದನ್ನು ಕಂಡಾಗ ದಿಗ್ಭ್ರಮೆಗೊಂಡರು;
ಭಯದಿಂದ ಓಡಿಹೋದರು.
6 ಭಯವು ಅವರನ್ನು
ಪ್ರಸವವೇದನೆಯಂತೆ ಆವರಿಸಿಕೊಂಡಿತು.
7 ಪೂರ್ವದ ಬಿರುಗಾಳಿಯಿಂದ ಒಡೆದುಹೋದ ಹಡಗುಗಳಂತೆ
ನೀನು ಅವರನ್ನು ನಾಶಮಾಡಿದೆ.
8 ಹೌದು, ಆ ರಾಜರುಗಳಿಗೆ ಸಂಭವಿಸಿದ್ದನ್ನು ನಾವು ಕಿವಿಯಾರೆ ಕೇಳಿದಂತೆಯೇ ಕಣ್ಣಾರೆಯೂ ಕಂಡೆವು.
ನಮ್ಮ ದೇವರೂ ಸೇನಾಧೀಶ್ವರನೂ ಆಗಿರುವ ಯೆಹೋವನ ಪಟ್ಟಣದಲ್ಲಿ ನಾವು ಅದನ್ನು ನೋಡಿದ್ದೇವೆ.
ದೇವರು ಆ ಪಟ್ಟಣವನ್ನು ಶಾಶ್ವತವಾಗಿ ಭದ್ರಗೊಳಿಸುವನು.
9 ದೇವರೇ, ನಿನ್ನ ಆಲಯದಲ್ಲಿ ನಿನ್ನ ಶಾಶ್ವತ ಪ್ರೀತಿಯ ಕುರಿತು ಧ್ಯಾನಿಸುವೆವು.
10 ದೇವರೇ, ನೀನು ಪ್ರಖ್ಯಾತನಾಗಿರುವೆ.
ಭೂಮಿಯ ಮೇಲೆಲ್ಲಾ ಜನರು ನಿನ್ನನ್ನು ಕೊಂಡಾಡುವರು.
ನೀನು ಎಷ್ಟು ಒಳ್ಳೆಯವನೆಂಬುದು ಪ್ರತಿಯೊಬ್ಬರಿಗೂ ತಿಳಿದಿದೆ.
11 ನಿನ್ನ ನ್ಯಾಯನಿರ್ಣಯಗಳಿಂದ ಚೀಯೋನ್ ಪರ್ವತವು ಹರ್ಷಿಸಲಿ;
ಯೆಹೂದದ ಊರುಗಳು ಉಲ್ಲಾಸಿಸಲಿ.
12 ಚೀಯೋನಿನ ಸುತ್ತಲೂ ಸಂಚರಿಸಿ, ಆ ಪಟ್ಟಣವನ್ನು ನೋಡಿರಿ.
ಅದರ ಬುರುಜುಗಳನ್ನು ಎಣಿಸಿರಿ.
13 ಅದರ ಕೋಟೆಗಳನ್ನು ನೋಡಿರಿ.
ಚೀಯೋನಿನ ಅರಮನೆಗಳನ್ನು ಹೊಗಳಿರಿ.
ಆಗ ನೀವು ನಿಮ್ಮ ಮುಂದಿನ ಸಂತತಿಯವರಿಗೆ ಅದರ ಬಗ್ಗೆ ಹೇಳಬಲ್ಲಿರಿ.
14 ಈ ದೇವರೇ ಎಂದೆಂದಿಗೂ ನಮ್ಮ ದೇವರು!
ನಮ್ಮನ್ನು ಶಾಶ್ವತವಾಗಿ ನಡೆಸುವಾತನು ಆತನೇ!
ಹೆಬ್ರೋನಿಗೆ ದಾವೀದನ ಆಗಮನ
2 ತರುವಾಯ ದಾವೀದನು ಯೆಹೋವನಲ್ಲಿ ಪ್ರಾರ್ಥಿಸಿ, “ಯೆಹೂದದ ಯಾವುದಾದರೂ ನಗರಕ್ಕೆ ನಾನು ಹೋಗಬಹುದೇ?” ಎಂದು ಕೇಳಿದನು.
“ಹೋಗು” ಎಂಬುದಾಗಿ ಯೆಹೋವನು ಹೇಳಿದನು.
“ನಾನು ಎಲ್ಲಿಗೆ ಹೋಗಲಿ?” ಎಂದು ದಾವೀದನು ಕೇಳಿದನು.
“ಹೆಬ್ರೋನಿಗೆ ಹೋಗು” ಎಂದು ಯೆಹೋವನು ಉತ್ತರಿಸಿದನು.
2 ಆದ್ದರಿಂದ ದಾವೀದನು ಅಲ್ಲಿಗೆ ಹೋದನು. ಅವನ ಇಬ್ಬರು ಹೆಂಡತಿಯರೂ ಅವನ ಜೊತೆಯಲ್ಲಿ ಹೋದರು. ಅವರು ಯಾರೆಂದರೆ: ಇಜ್ರೇಲಿನ ಅಹೀನೋವಮಳು ಮತ್ತು ಕರ್ಮೆಲಿನ ನಾಬಾಲನ ವಿಧವೆಯಾದ ಅಬೀಗೈಲಳು. 3 ದಾವೀದನು ತನ್ನ ಜನರನ್ನು ಮತ್ತು ಅವರ ಕುಟುಂಬಗಳನ್ನು ಸಹ ಕರೆತಂದನು. ಅವರೆಲ್ಲರೂ ಹೆಬ್ರೋನ್ ಮತ್ತು ಅದರ ಸಮೀಪದ ನಗರಗಳಲ್ಲಿ ನೆಲೆಸಿದರು.
4 ಯೆಹೂದದ ಜನರು ಬಂದು ದಾವೀದನನ್ನು ಯೆಹೂದದ ರಾಜನನ್ನಾಗಿ ಅಭಿಷೇಕಿಸಿದರು. ಬಳಿಕ ಅವರು ದಾವೀದನಿಗೆ, “ಸೌಲನ ಸಮಾಧಿ ಮಾಡಿದವರು ಯಾಬೇಷ್ ಗಿಲ್ಯಾದಿನವರೇ” ಎಂದು ಹೇಳಿದರು.
5 ಯಾಬೇಷ್ ಗಿಲ್ಯಾದಿನ ಜನರಿಗೆ ದಾವೀದನು ಸಂದೇಶಕರನ್ನು ಕಳುಹಿಸಿ, “ಸೌಲನ ದೇಹದ ಬೂದಿಯನ್ನು[a] ಸಮಾಧಿಮಾಡುವುದರ ಮೂಲಕ ನೀವು ನಿಮ್ಮ ಒಡೆಯನಾದ ಸೌಲನಿಗೆ ಕರುಣೆ ತೋರಿದ್ದೀರಿ. ಅದಕ್ಕಾಗಿ ಯೆಹೋವನು ನಿಮ್ಮನ್ನು ಆಶೀರ್ವದಿಸಲಿ. 6 ಆತನು ನಿಮಗೆ ಕೃಪಾಳುವೂ ನಂಬಿಗಸ್ತನೂ ಆಗಿರಲಿ. ನೀವು ಸೌಲನ ಬೂದಿಯನ್ನು ಸಮಾಧಿಮಾಡಿದ್ದರಿಂದ ನಾನೂ ನಿಮಗೆ ಕರುಣೆ ತೋರಿಸುವೆನು. 7 ನಿಮ್ಮ ಒಡೆಯನಾದ ಸೌಲನು ಮರಣ ಹೊಂದಿರುವುದರಿಂದ, ಯೆಹೂದ ಕುಲದವರು ನನ್ನನ್ನು ತಮ್ಮ ರಾಜನನ್ನಾಗಿ ಅಭಿಷೇಕಿಸಿದ್ದಾರೆ. ಆದ್ದರಿಂದ ನೀವು ಬಲಿಷ್ಠರಾಗಿರಿ ಮತ್ತು ಧೈರ್ಯದಿಂದಿರಿ” ಎಂದು ಹೇಳಿಸಿದನು.
ಈಷ್ಬೋಶೆತನು ರಾಜನಾದನು
8 ಸೌಲನ ಸೈನ್ಯದಲ್ಲಿ ನೇರನ ಮಗನಾದ ಅಬ್ನೇರನು ಸೇನಾಧಿಪತಿಯಾಗಿದ್ದನು. ಸೌಲನ ಮಗನಾದ ಈಷ್ಬೋಶೆತನನ್ನು ಅಬ್ನೇರನು ಮಹನಯಿಮಿಗೆ ಕರೆದೊಯ್ದನು. 9 ಆ ಸ್ಥಳದಲ್ಲಿ ಅಬ್ನೇರನು ಈಷ್ಬೋಶೆತನನ್ನು ಗಿಲ್ಯಾದ್, ಆಶೇರ್, ಇಜ್ರೇಲ್, ಎಫ್ರಾಯೀಮ್ ಮತ್ತು ಬೆನ್ಯಾಮೀನ್ ಜನರ ಮೇಲೆಯೂ ಮತ್ತು ಇಸ್ರೇಲಿಗೆಲ್ಲ ರಾಜನನ್ನಾಗಿ ಮಾಡಿದನು.
10 ಈಷ್ಬೋಶೆತನು ಸೌಲನ ಮಗ. ಈಷ್ಬೋಶೆತನು ಇಸ್ರೇಲನ್ನು ಆಳಲು ಆರಂಭಿಸಿದಾಗ ನಲವತ್ತು ವರ್ಷ ವಯಸ್ಸಿನವನಾಗಿದ್ದನು. ಅವನು ಎರಡು ವರ್ಷ ಆಳಿದನು. ಆದರೆ ಯೆಹೂದ ಕುಲದವರು ದಾವೀದನನ್ನು ಹಿಂಬಾಲಿಸಿದರು. 11 ದಾವೀದನು ಯೆಹೂದ ಕುಲದವರಿಗೆ ಹೆಬ್ರೋನಿನಲ್ಲಿ ಏಳು ವರ್ಷ ಆರು ತಿಂಗಳುಗಳ ಕಾಲ ರಾಜನಾಗಿದ್ದನು.
8 ನಿಮಗೆ ಅಗತ್ಯವಾದ ಪ್ರತಿಯೊಂದೂ ನಿಮಗಿದೆಯೆಂದು ನೀವು ಭಾವಿಸಿಕೊಂಡಿದ್ದೀರಿ. ನೀವು ನಿಮ್ಮನ್ನು ಐಶ್ವರ್ಯವಂತರೆಂದೂ ರಾಜರುಗಳೆಂದೂ ಭಾವಿಸಿಕೊಂಡಿದ್ದೀರಿ. ನೀವು ನಿಜವಾಗಿಯೂ ರಾಜರುಗಳಾಗಿದ್ದರೆ ನನಗೆ ಎಷ್ಟೋ ಸಂತೋಷವಾಗುತ್ತಿತ್ತು. ಆಗ ನಾವೂ ನಿಮ್ಮೊಂದಿಗೆ ರಾಜರುಗಳಾಗುತ್ತಿದ್ದೆವು. 9 ಆದರೆ ದೇವರು ನನಗೂ ಉಳಿದ ಅಪೊಸ್ತಲರಿಗೂ ಕಡೆಯ ಸ್ಥಾನವನ್ನು ಕೊಟ್ಟಿದ್ದಾನೆಂದು ನನಗೆ ತೋರುತ್ತದೆ. ಜನರೆಲ್ಲರ ಎದುರಿನಲ್ಲಿ ನಾವು ಮರಣದಂಡನೆಗೆ ಗುರಿಯಾದಂಥವರಾಗಿದ್ದೇವೆ. ನಾವು ದೇವದೂತರಿಗೂ ಮನುಷ್ಯರಿಗೂ ಒಟ್ಟಿನಲ್ಲಿ ಇಡೀ ಜಗತ್ತಿಗೇ ನೋಟವಾಗಿದ್ದೇವೆ. 10 ನಾವು ಕ್ರಿಸ್ತನಿಗೋಸ್ಕರ ಮೂರ್ಖರಾಗಿದ್ದೇವೆ. ಆದರೆ ನೀವು ನಿಮ್ಮನ್ನು ಕ್ರಿಸ್ತನಲ್ಲಿ ಬಹು ಜ್ಞಾನಿಗಳೆಂದು ಭಾವಿಸಿಕೊಂಡಿದ್ದೀರಿ. ನಾವು ಬಲಹೀನರಾಗಿದ್ದೇವೆ, ಆದರೆ ನೀವು ನಿಮ್ಮನ್ನು ಬಲಿಷ್ಠರೆಂದು ಭಾವಿಸಿಕೊಂಡಿದ್ದೀರಿ. ಜನರು ನಿಮಗೆ ಗೌರವವನ್ನು ಕೊಡುತ್ತಾರೆ; ನಮಗಾದರೋ ಅವರು ಗೌರವವನ್ನು ಕೊಡುವುದಿಲ್ಲ. 11 ಈಗಲೂ ಸಹ ನಾವು ಹಸಿದವರಾಗಿದ್ದೇವೆ; ಬಾಯಾರಿದವರಾಗಿದ್ದೇವೆ; ಧರಿಸಿಕೊಳ್ಳಲು ಸಾಕಷ್ಟು ಬಟ್ಟೆಯಿಲ್ಲದವರಾಗಿದ್ದೇವೆ. ಆಗಾಗ್ಗೆ ನಮಗೆ ಪೆಟ್ಟುಗಳು ಬೀಳುತ್ತಿರುತ್ತವೆ; ನಮಗೆ ಮನೆಗಳೂ ಇಲ್ಲ. 12 ನಾವು ಊಟಕ್ಕಾಗಿ ನಮ್ಮ ಕೈಯಾರೆ ಕಷ್ಟಪಟ್ಟು ದುಡಿಯುತ್ತೇವೆ. ಜನರು ನಮ್ಮನ್ನು ಶಪಿಸುತ್ತಾರೆ, ನಾವಾದರೋ ಅವರನ್ನು ಆಶೀರ್ವದಿಸುತ್ತೇವೆ. ಜನರು ನಮಗೆ ಹಿಂಸೆ ಕೊಟ್ಟರೂ ತಾಳಿಕೊಳ್ಳುತ್ತೇವೆ. 13 ಜನರು ನಮ್ಮ ಬಗ್ಗೆ ಕೆಟ್ಟ ವಿಷಯಗಳನ್ನು ಮಾತಾಡುತ್ತಾರೆ. ನಾವಾದರೋ ಅವರಿಗೆ ಒಳ್ಳೆಯ ವಿಷಯಗಳನ್ನು ಹೇಳುತ್ತೇವೆ. ಇಂದಿನವರೆಗೂ ಜನರು ನಮ್ಮನ್ನು ಲೋಕದ ಕಸವೋ ಭೂಮಿಯ ಹೊಲಸೋ ಎಂಬಂತೆ ಪರಿಗಣಿಸಿದ್ದಾರೆ.
Kannada Holy Bible: Easy-to-Read Version. All rights reserved. © 1997 Bible League International