Revised Common Lectionary (Semicontinuous)
ಯೆಹೋವನು ದಾವೀದನನ್ನು ಸೌಲನಿಂದಲೂ ಎಲ್ಲಾ ಶತ್ರು ಸೈನ್ಯಗಳಿಂದಲೂ ರಕ್ಷಿಸಿದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.
18 ನನ್ನ ಬಲವಾಗಿರುವ ಯೆಹೋವನೇ,
ನಿನ್ನನ್ನೇ ಪ್ರೀತಿಸುವೆನು!
2 ಯೆಹೋವನು ನನ್ನ ಬಂಡೆಯೂ[a] ನನ್ನ ಕೋಟೆಯೂ
ನನ್ನ ಆಶ್ರಯಗಿರಿಯೂ ನನ್ನ ಗುರಾಣಿಯೂ
ನನ್ನ ರಕ್ಷಣಾಬಲವೂ ನನ್ನ ದುರ್ಗವೂ ಆಗಿದ್ದಾನೆ.
3 ಯೆಹೋವನಿಗೆ ಸ್ತೋತ್ರವಾಗಲಿ!
ನಾನು ಆತನಿಗೆ ಮೊರೆಯಿಟ್ಟಾಗ ನನ್ನನ್ನು ವೈರಿಗಳಿಂದ ರಕ್ಷಿಸಿದನು.
4 ಮರಣಕರವಾದ ಹಗ್ಗಗಳು ನನ್ನನ್ನು ಬಿಗಿದುಕೊಂಡವು.
ನಾಶಪ್ರವಾಹವು ನನ್ನನ್ನು ಪಾತಾಳಕ್ಕೆ ಕೊಚ್ಚಿಕೊಂಡು ಹೋಗುತ್ತಿತ್ತು.
5 ಪಾತಾಳದ ಹಗ್ಗಗಳು ನನ್ನನ್ನು ಬಿಗಿದುಕೊಂಡಿದ್ದವು.
ಮರಣಕರವಾದ ಉರುಲುಗಳು ನನ್ನೆದುರಿನಲ್ಲಿದ್ದವು.
6 ಆಗ ನಾನು ಸಹಾಯಕ್ಕಾಗಿ ಯೆಹೋವನನ್ನು ಕೂಗಿಕೊಂಡೆನು;
ನನ್ನ ದೇವರಿಗೆ ಮೊರೆಯಿಟ್ಟೆನು.
ಆತನು ತನ್ನ ಆಲಯದಲ್ಲಿ ನನ್ನ ಸ್ವರವನ್ನು ಕೇಳಿದನು;
ನನ್ನ ಮೊರೆಗೆ ಕಿವಿಗೊಟ್ಟನು.
43 ನನ್ನ ವಿರೋಧಿಗಳಿಂದ ನನ್ನನ್ನು ರಕ್ಷಿಸು.
ಆ ಜನಾಂಗಗಳಿಗೆ ನನ್ನನ್ನು ನಾಯಕನನ್ನಾಗಿ ಮಾಡು.
ನನಗೆ ಗೊತ್ತಿಲ್ಲದವರೂ ನನ್ನ ಸೇವೆಮಾಡುವರು.
44 ಅವರು ನನ್ನ ಕುರಿತಾಗಿ ಕೇಳಿದ ಕೂಡಲೇ ವಿಧೇಯರಾಗುವರು.
ಆ ವಿದೇಶಿಯರು ನನ್ನ ವಿಷಯದಲ್ಲಿ ಭಯದಿಂದಿರುವರು.
45 ಆ ವಿದೇಶಿಯರು ಧೈರ್ಯವಿಲ್ಲದವರಾಗಿ ನಡುಗುತ್ತಾ
ತಮ್ಮ ಕೋಟೆಗಳಿಂದ ಬರುವರು.
46 ಯೆಹೋವನು ಜೀವಸ್ವರೂಪನಾಗಿದ್ದಾನೆ.
ನನ್ನ ಬಂಡೆಯಾಗಿರುವ ಆತನನ್ನು ಸ್ತುತಿಸುವೆನು.
ನನ್ನನ್ನು ರಕ್ಷಿಸುವ ದೇವರು ಮಹೋನ್ನತನಾಗಿದ್ದಾನೆ.
47 ದೇವರು ನನ್ನ ವೈರಿಗಳನ್ನು ದಂಡಿಸಿ
ಅವರನ್ನು ನನಗೆ ಅಧೀನಪಡಿಸಿದ್ದಾನೆ.
48 ಯೆಹೋವನೇ, ಶತ್ರುಗಳಿಂದ ನೀನು ನನ್ನನ್ನು ಕಾಪಾಡಿದೆ.
ನನ್ನ ವಿರೋಧಿಗಳನ್ನು ಸೋಲಿಸಲು ನೀನು ನನಗೆ ಸಹಾಯಮಾಡಿದೆ;
ಕ್ರೂರಿಗಳಿಂದ ನನ್ನನ್ನು ರಕ್ಷಿಸಿದೆ.
49 ಯೆಹೋವನೇ, ಈ ಕಾರಣದಿಂದ ನಾನು ನಿನ್ನನ್ನು ಜನಾಂಗಗಳ ಮಧ್ಯದಲ್ಲಿ ಸ್ತುತಿಸುವೆನು;
ನಿನ್ನ ಹೆಸರನ್ನು ಕುರಿತು ಹಾಡುಗಳನ್ನು ಹಾಡುವೆನು.
50 ಆತನು ತಾನು ನೇಮಿಸಿದ ರಾಜನಿಗೆ ಅನೇಕ ಯುದ್ಧಗಳಲ್ಲಿ ಜಯವನ್ನು ದಯಪಾಲಿಸುವನು;
ತಾನು ಅಭಿಷೇಕಿಸಿದ ರಾಜನಿಗೆ ಶಾಶ್ವತವಾದ ಪ್ರೀತಿಯನ್ನು ತೋರುವನು.
ಆತನು ದಾವೀದನಿಗೂ ಅವನ ಸಂತತಿಯವರಿಗೂ ಎಂದೆಂದಿಗೂ ನಂಬಿಗಸ್ತನಾಗಿರುವನು.
ಸೌಲನ ಮರಣ
31 ಫಿಲಿಷ್ಟಿಯರು ಇಸ್ರೇಲರ ವಿರುದ್ಧ ಹೋರಾಡಿದರು. ಇಸ್ರೇಲರು ಫಿಲಿಷ್ಟಿಯರಿಂದ ಸೋತು ಓಡಿಹೋದರು. ಬಹಳ ಜನ ಇಸ್ರೇಲರು ಗಿಲ್ಬೋವ ಶಿಖರದಲ್ಲಿ ಹತರಾದರು. 2 ಫಿಲಿಷ್ಟಿಯರು ಸೌಲ ಮತ್ತು ಅವನ ಮಕ್ಕಳೊಂದಿಗೆ ಭೀಕರವಾಗಿ ಹೋರಾಡಿದರು. ಸೌಲನ ಮಕ್ಕಳಾದ ಯೋನಾತಾನ, ಅಬೀನಾದಾಬ ಮತ್ತು ಮಲ್ಕೀಷೂವ ಎಂಬವರನ್ನು ಫಿಲಿಷ್ಟಿಯರು ಕೊಂದರು.
3 ಸೌಲನ ವಿರುದ್ಧವಾದ ಈ ಯುದ್ಧವು ಬಹಳ ಘೋರವಾಗಿತ್ತು. ಬಿಲ್ಲುಗಾರರು ಸೌಲನ ಮೇಲೆ ಬಾಣಗಳನ್ನು ಬಿಟ್ಟಿದ್ದರಿಂದ ಸೌಲನು ಬಹಳವಾಗಿ ಗಾಯಗೊಂಡನು. 4 ಸೌಲನು ತನ್ನ ಅಯುಧವಾಹಕನಿಗೆ, “ನಿನ್ನ ಖಡ್ಗದಿಂದ ಇರಿದು ನನ್ನನ್ನು ಕೊಂದುಬಿಡು. ಆಗ, ಈ ಪರದೇಶೀಯರು ನನ್ನನ್ನು ಗಾಯಗೊಳಿಸುವುದಕ್ಕಾಗಲಿ ಅಪಹಾಸ್ಯ ಮಾಡುವುದಕ್ಕಾಗಲಿ ಸಾಧ್ಯವಾಗುವುದಿಲ್ಲ” ಎಂದನು. ಆದರೆ ಸೌಲನ ಆಯುಧವಾಹಕನು ನಿರಾಕರಿಸಿದನು. ಸೌಲನ ಸಹಾಯಕನು ಬಹಳ ಭಯಗೊಂಡಿದ್ದನು. ಆದ್ದರಿಂದ ಸೌಲನು ತನ್ನ ಸ್ವಂತ ಖಡ್ಗದಿಂದಲೇ ಇರಿದು ಆತ್ಮಹತ್ಯೆ ಮಾಡಿಕೊಂಡನು.
5 ಸೌಲನು ಸತ್ತುಹೋದದ್ದನ್ನು ಕಂಡ ಆಯುಧವಾಹಕನೂ ತನ್ನ ಖಡ್ಗದಿಂದ ತಾನೂ ಆತ್ಮಹತ್ಯೆ ಮಾಡಿಕೊಂಡನು. ಅವನು ಸೌಲನೊಂದಿಗೆ ಅಲ್ಲಿಯೇ ಸತ್ತುಹೋದನು. 6 ಹೀಗೆ ಸೌಲನು ಮತ್ತು ಅವನ ಮೂವರು ಗಂಡುಮಕ್ಕಳೂ ಮತ್ತು ಸೌಲನ ಆಯುಧವಾಹಕನೂ ಅದೇ ದಿನ ಸತ್ತುಹೋದರು.
ಸೌಲನ ದೇಹವು ಫಿಲಿಷ್ಟಿಯರಿಗೆ ಸಿಕ್ಕಿತು
7 ಇಸ್ರೇಲರ ಸೈನ್ಯವು ಓಡಿಹೋಗುತ್ತಿರುವುದನ್ನು ಕಣಿವೆಯ ಮತ್ತೊಂದು ಪಕ್ಕದಲ್ಲಿ ವಾಸಮಾಡುತ್ತಿದ್ದ ಇಸ್ರೇಲರು ನೋಡಿದರು. ಸೌಲನು ಮತ್ತು ಅವನ ಮಕ್ಕಳು ಸತ್ತದ್ದನ್ನೂ ಅವರು ನೋಡಿದರು. ಆದ್ದರಿಂದ ಆ ಇಸ್ರೇಲರು ತಮ್ಮ ನಗರಗಳನ್ನು ಬಿಟ್ಟು ಓಡಿಹೋದರು. ನಂತರ ಫಿಲಿಷ್ಟಿಯರು ಬಂದು ಆ ನಗರಗಳನ್ನು ವಶಪಡಿಸಿಕೊಂಡು ನೆಲೆಸಿದರು.
8 ಮಾರನೆಯ ದಿನ, ಸತ್ತದೇಹಗಳಿಂದ ವಸ್ತುಗಳನ್ನು ದೋಚಲು ಫಿಲಿಷ್ಟಿಯರು ಬಂದರು. ಸೌಲನು ಮತ್ತು ಅವನ ಮೂರು ಜನ ಮಕ್ಕಳು ಗಿಲ್ಬೋವ ಶಿಖರದಲ್ಲಿ ಸತ್ತಿರುವುದನ್ನು ಅವರು ನೋಡಿದರು. 9 ಸೌಲನ ತಲೆಯನ್ನು ಫಿಲಿಷ್ಟಿಯರು ಕಡಿದುಹಾಕಿದರು. ಮತ್ತು ಅವನ ಆಯುಧಗಳನ್ನು ತೆಗೆದುಕೊಂಡರು. ಫಿಲಿಷ್ಟಿಯ ಜನರಿಗೆ ಮತ್ತು ಅವರ ವಿಗ್ರಹಗಳ ಗುಡಿಗೆ ಈ ವಿಜಯದ ವಾರ್ತೆಯನ್ನು ಕಳುಹಿಸಿದರು. 10 ಅಷ್ಟೋರೆತಳ ದೇವಾಲಯದಲ್ಲಿ ಅವರು ಸೌಲನ ಆಯುಧಗಳನ್ನು ಇಟ್ಟರು. ಫಿಲಿಷ್ಟಿಯರು ಸೌಲನ ದೇಹವನ್ನು ಬೇತ್‌ಷೆಯಾನಿನ ಗೋಡೆಗೆ ನೇತುಹಾಕಿದರು.
11 ಫಿಲಿಷ್ಟಿಯರು ಸೌಲನಿಗೆ ಏನೇನು ಮಾಡಿದರೆಂಬುದನ್ನು ಯಾಬೆಷ್‌ಗಿಲ್ಯಾದಿನಲ್ಲಿ ವಾಸಿಸುತ್ತಿದ್ದ ಜನರೆಲ್ಲ ತಿಳಿದುಕೊಂಡರು. 12 ಆದ್ದರಿಂದ ಯಾಬೆಷಿನ ಸೈನಿಕರೆಲ್ಲ ಬೇತ್‌ಷೆಯಾನಿಗೆ ಹೋದರು. ಅವರು ರಾತ್ರಿಯೆಲ್ಲಾ ನಡೆದರು! ನಂತರ ಅವರು ಬೇತ್‌ಷೆಯಾನಿನ ಗೋಡೆಯಲ್ಲಿದ್ದ ಸೌಲನ ದೇಹವನ್ನು ಇಳಿಸಿದರು. ನಂತರ ಅವರು ಸೌಲನ ಗಂಡುಮಕ್ಕಳ ದೇಹಗಳನ್ನೂ ಇಳಿಸಿದರು. ನಂತರ ಅವರು ಆ ದೇಹಗಳನ್ನು ಯಾಬೇಷಿಗೆ ತೆಗೆದುಕೊಂಡು ಹೋದರು. ಸೌಲ ಮತ್ತು ಅವನ ಮೂವರು ಗಂಡುಮಕ್ಕಳ ದೇಹಗಳನ್ನು ಯಾಬೇಷಿನ ಜನರು ಅಲ್ಲಿ ದಹಿಸಿಬಿಟ್ಟರು. 13 ನಂತರ ಈ ಜನರು ಸೌಲ ಮತ್ತು ಅವನ ಮೂರು ಮಕ್ಕಳ ಮೂಳೆಗಳನ್ನು ತೆಗೆದುಕೊಂಡು, ಅವುಗಳನ್ನು ಯಾಬೇಷಿನ ಪಿಚುಲ ಮರದ ಕೆಳಗೆ ಸಮಾಧಿಮಾಡಿದರು. ನಂತರ ಯಾಬೇಷಿನ ಜನರು ದುಃಖದಿಂದ ಏಳು ದಿನಗಳ ಕಾಲ ಉಪವಾಸ ಮಾಡಿದರು.[a]
ಕ್ರೈಸ್ತರಿಗೆ ಸಹಾಯ ಮಾಡಿರಿ
9 ದೇವಜನರಿಗೋಸ್ಕರವಾದ ಈ ಸಹಾಯದ ಬಗ್ಗೆ ನಾನು ನಿಮಗೆ ಬರೆಯುವುದು ನಿಜವಾಗಿಯೂ ಅಗತ್ಯವಿಲ್ಲ. 2 ಸಹಾಯ ಮಾಡಬೇಕೆಂಬ ಬಯಕೆಯು ನಿಮಗಿದೆಯೆಂದು ನನಗೆ ಗೊತ್ತಿದೆ. ಮಕೆದೋನಿಯದಲ್ಲಿ ಜನರಿಗೆ ನಿಮ್ಮ ಈ ವಿಷಯದಲ್ಲಿ ಹೆಮ್ಮೆಯಿಂದ ಹೇಳುತ್ತಲೇ ಇದ್ದೇನೆ. ಅಖಾಯದಲ್ಲಿರುವ ನೀವು ಕಳೆದ ವರ್ಷದಿಂದಲೂ ಕೊಡಲು ಸಿದ್ಧರಾಗಿದ್ದೀರೆಂದು ಅವರಿಗೆ ಹೇಳಿದೆನು. ನಿಮ್ಮಲ್ಲಿರುವ ಕೊಡಬೇಕೆಂಬ ಬಯಕೆಯು ಇಲ್ಲಿರುವ ಅನೇಕ ಜನರಲ್ಲಿ ಕೊಡಬೇಕೆಂಬ ಬಯಕೆಯನ್ನು ಉಂಟುಮಾಡಿದೆ. 3 ನಾನು ಸಹೋದರರನ್ನು ನಿಮ್ಮಲ್ಲಿಗೆ ಕಳುಹಿಸಿಕೊಡುತ್ತಿದ್ದೇನೆ. ನಿಮ್ಮ ಬಗ್ಗೆ ಈ ವಿಷಯದಲ್ಲಿ ಹೊಗಳಿದ್ದು ವ್ಯರ್ಥವಾಗುವುದು ನನಗೆ ಇಷ್ಟವಿಲ್ಲ. ನಾನು ಹೇಳಿಕೊಂಡಂತೆ ನೀವು ಸಿದ್ಧರಾಗಿರಬೇಕೆಂದು ಆಶಿಸುತ್ತೇನೆ. 4 ಒಂದುವೇಳೆ ಮಕೆದೋನಿಯದ ಜನರಲ್ಲಿ ಯಾರಾದರೂ ನನ್ನೊಂದಿಗೆ ಬಂದಾಗ ನೀವು ಸಿದ್ಧರಾಗಿಲ್ಲದಿದ್ದರೆ ನಾವು ನಾಚಿಕೆಗೆ ಗುರಿಯಾಗುತ್ತೇವೆ. ನಿಮ್ಮ ವಿಷಯದಲ್ಲಿ ನಾವು ಬಹಳ ಭರವಸೆ ಇಟ್ಟಿದ್ದರಿಂದ ನಾವು ನಾಚಿಕೆಗೆ ಗುರಿಯಾಗುವೆವು (ಮತ್ತು ನೀವೂ ಸಹ ನಾಚಿಕೆಗೆ ಗುರಿಯಾಗುವಿರಿ.) 5 ಆದ್ದರಿಂದ ನಾನು ಬರುವುದಕ್ಕಿಂತ ಮೊದಲು ನಿಮ್ಮ ಬಳಿಗೆ ಹೋಗುವಂತೆ ಈ ಸಹೋದರರನ್ನು ಕೇಳಿಕೊಳ್ಳಬೇಕೆಂದು ನಾನು ಆಲೋಚಿಸಿದೆನು. ನೀವು ವಾಗ್ದಾನ ಮಾಡಿದ ಸಹಾಯಧನವನ್ನು ಇವರು ಸಂಗ್ರಹಿಸುವರು. ಆಗ, ನಾವು ಬರುವಷ್ಟರಲ್ಲಿ ನಿಮ್ಮ ಸಹಾಯಧನವು ಸಿದ್ಧವಾಗಿರುವುದು. ಈ ಸಹಾಯಧನವು ನಿಮ್ಮ ಹೃತ್ಪೂರ್ವಕವಾದ ದಾನವೇ ಹೊರತು ಸಂಕಟದಿಂದ ಕೊಟ್ಟ ದಾನವಲ್ಲ.
Kannada Holy Bible: Easy-to-Read Version. All rights reserved. © 1997 Bible League International