Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 18:1-6

ಯೆಹೋವನು ದಾವೀದನನ್ನು ಸೌಲನಿಂದಲೂ ಎಲ್ಲಾ ಶತ್ರು ಸೈನ್ಯಗಳಿಂದಲೂ ರಕ್ಷಿಸಿದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

18 ನನ್ನ ಬಲವಾಗಿರುವ ಯೆಹೋವನೇ,
    ನಿನ್ನನ್ನೇ ಪ್ರೀತಿಸುವೆನು!

ಯೆಹೋವನು ನನ್ನ ಬಂಡೆಯೂ[a] ನನ್ನ ಕೋಟೆಯೂ
    ನನ್ನ ಆಶ್ರಯಗಿರಿಯೂ ನನ್ನ ಗುರಾಣಿಯೂ
    ನನ್ನ ರಕ್ಷಣಾಬಲವೂ ನನ್ನ ದುರ್ಗವೂ ಆಗಿದ್ದಾನೆ.

ಯೆಹೋವನಿಗೆ ಸ್ತೋತ್ರವಾಗಲಿ!
    ನಾನು ಆತನಿಗೆ ಮೊರೆಯಿಟ್ಟಾಗ ನನ್ನನ್ನು ವೈರಿಗಳಿಂದ ರಕ್ಷಿಸಿದನು.
ಮರಣಕರವಾದ ಹಗ್ಗಗಳು ನನ್ನನ್ನು ಬಿಗಿದುಕೊಂಡವು.
    ನಾಶಪ್ರವಾಹವು ನನ್ನನ್ನು ಪಾತಾಳಕ್ಕೆ ಕೊಚ್ಚಿಕೊಂಡು ಹೋಗುತ್ತಿತ್ತು.
ಪಾತಾಳದ ಹಗ್ಗಗಳು ನನ್ನನ್ನು ಬಿಗಿದುಕೊಂಡಿದ್ದವು.
    ಮರಣಕರವಾದ ಉರುಲುಗಳು ನನ್ನೆದುರಿನಲ್ಲಿದ್ದವು.
ಆಗ ನಾನು ಸಹಾಯಕ್ಕಾಗಿ ಯೆಹೋವನನ್ನು ಕೂಗಿಕೊಂಡೆನು;
    ನನ್ನ ದೇವರಿಗೆ ಮೊರೆಯಿಟ್ಟೆನು.
ಆತನು ತನ್ನ ಆಲಯದಲ್ಲಿ ನನ್ನ ಸ್ವರವನ್ನು ಕೇಳಿದನು;
    ನನ್ನ ಮೊರೆಗೆ ಕಿವಿಗೊಟ್ಟನು.

ಕೀರ್ತನೆಗಳು 18:43-50

43 ನನ್ನ ವಿರೋಧಿಗಳಿಂದ ನನ್ನನ್ನು ರಕ್ಷಿಸು.
    ಆ ಜನಾಂಗಗಳಿಗೆ ನನ್ನನ್ನು ನಾಯಕನನ್ನಾಗಿ ಮಾಡು.
    ನನಗೆ ಗೊತ್ತಿಲ್ಲದವರೂ ನನ್ನ ಸೇವೆಮಾಡುವರು.
44 ಅವರು ನನ್ನ ಕುರಿತಾಗಿ ಕೇಳಿದ ಕೂಡಲೇ ವಿಧೇಯರಾಗುವರು.
    ಆ ವಿದೇಶಿಯರು ನನ್ನ ವಿಷಯದಲ್ಲಿ ಭಯದಿಂದಿರುವರು.
45 ಆ ವಿದೇಶಿಯರು ಧೈರ್ಯವಿಲ್ಲದವರಾಗಿ ನಡುಗುತ್ತಾ
    ತಮ್ಮ ಕೋಟೆಗಳಿಂದ ಬರುವರು.

46 ಯೆಹೋವನು ಜೀವಸ್ವರೂಪನಾಗಿದ್ದಾನೆ.
    ನನ್ನ ಬಂಡೆಯಾಗಿರುವ ಆತನನ್ನು ಸ್ತುತಿಸುವೆನು.
    ನನ್ನನ್ನು ರಕ್ಷಿಸುವ ದೇವರು ಮಹೋನ್ನತನಾಗಿದ್ದಾನೆ.
47 ದೇವರು ನನ್ನ ವೈರಿಗಳನ್ನು ದಂಡಿಸಿ
    ಅವರನ್ನು ನನಗೆ ಅಧೀನಪಡಿಸಿದ್ದಾನೆ.
48     ಯೆಹೋವನೇ, ಶತ್ರುಗಳಿಂದ ನೀನು ನನ್ನನ್ನು ಕಾಪಾಡಿದೆ.

ನನ್ನ ವಿರೋಧಿಗಳನ್ನು ಸೋಲಿಸಲು ನೀನು ನನಗೆ ಸಹಾಯಮಾಡಿದೆ;
    ಕ್ರೂರಿಗಳಿಂದ ನನ್ನನ್ನು ರಕ್ಷಿಸಿದೆ.
49 ಯೆಹೋವನೇ, ಈ ಕಾರಣದಿಂದ ನಾನು ನಿನ್ನನ್ನು ಜನಾಂಗಗಳ ಮಧ್ಯದಲ್ಲಿ ಸ್ತುತಿಸುವೆನು;
    ನಿನ್ನ ಹೆಸರನ್ನು ಕುರಿತು ಹಾಡುಗಳನ್ನು ಹಾಡುವೆನು.

50 ಆತನು ತಾನು ನೇಮಿಸಿದ ರಾಜನಿಗೆ ಅನೇಕ ಯುದ್ಧಗಳಲ್ಲಿ ಜಯವನ್ನು ದಯಪಾಲಿಸುವನು;
    ತಾನು ಅಭಿಷೇಕಿಸಿದ ರಾಜನಿಗೆ ಶಾಶ್ವತವಾದ ಪ್ರೀತಿಯನ್ನು ತೋರುವನು.
    ಆತನು ದಾವೀದನಿಗೂ ಅವನ ಸಂತತಿಯವರಿಗೂ ಎಂದೆಂದಿಗೂ ನಂಬಿಗಸ್ತನಾಗಿರುವನು.

1 ಸಮುವೇಲನು 23:14-18

ಸೌಲನು ದಾವೀದನನ್ನು ಅಟ್ಟಿಸಿಕೊಂಡು ಹೋಗುವನು

14 ದಾವೀದನು ಜೀಫ್ ಅರಣ್ಯದಲ್ಲಿರುವ ಬೆಟ್ಟಪ್ರದೇಶವಾದ ಆಶ್ರಯಗಿರಿಗಳಲ್ಲಿ ಅಡಗಿಕೊಂಡಿದ್ದನು. ಸೌಲನು ಪ್ರತಿದಿನವೂ ದಾವೀದನಿಗಾಗಿ ಹುಡುಕುತ್ತಿದ್ದನು, ಆದರೆ ದಾವೀದನನ್ನು ಹಿಡಿಯಲು ಯೆಹೋವನು ಸೌಲನಿಗೆ ಅವಕಾಶ ಕೊಡಲಿಲ್ಲ.

15 ದಾವೀದನು ಜೀಫ್ ಅರಣ್ಯದ ಹೋರೆಷದಲ್ಲಿ ಅಡಗಿಕೊಂಡಿದ್ದನು. ಸೌಲನು ತನ್ನನ್ನು ಕೊಲ್ಲಲು ಬರುತ್ತಾನೆಂದು ದಾವೀದನು ಹೆದರಿದ್ದನು. 16 ಆದರೆ ಸೌಲನ ಮಗನಾದ ಯೋನಾತಾನನು ಹೋರೆಷಿಗೆ ಹೋಗಿ ದಾವೀದನನ್ನು ಸಂಧಿಸಿ ದೇವರಲ್ಲಿ ಹೆಚ್ಚು ನಂಬಿಕೆಯನ್ನಿಡುವಂತೆ ಅವನನ್ನು ಪ್ರೋತ್ಸಾಹಿಸಿ, 17 “ಹೆದರಬೇಡ, ನನ್ನ ತಂದೆಯಾದ ಸೌಲನು ನಿನಗೆ ತೊಂದರೆ ಮಾಡುವುದಿಲ್ಲ. ನೀನು ಇಸ್ರೇಲಿನ ರಾಜನಾಗುವೆ! ನಾನು ನಿನಗೆ ಎರಡನೆಯವನಾಗುತ್ತೇನೆ. ಇದು ನನ್ನ ತಂದೆಗೂ ಸಹ ತಿಳಿದಿದೆ” ಎಂದು ಹೇಳಿದನು.

18 ಯೋನಾತಾನನು ಮತ್ತು ದಾವೀದನು ಯೆಹೋವನ ಸನ್ನಿಧಿಯಲ್ಲಿ ಒಂದು ಒಪ್ಪಂದವನ್ನು ಮಾಡಿಕೊಂಡರು. ನಂತರ ಯೋನಾತಾನನು ಮನೆಗೆ ಹೋದನು. ದಾವೀದನು ಹೋರೆಷಿನಲ್ಲಿ ನೆಲೆಸಿದನು.

2 ಕೊರಿಂಥದವರಿಗೆ 8:16-24

ತೀತನು ಮತ್ತು ಅವನ ಸಂಗಡಿಗರು

16 ನಿಮ್ಮ ಮೇಲೆ ನನಗಿರುವ ಪ್ರೀತಿಯನ್ನು ದೇವರು ತೀತನಿಗೂ ಕೊಟ್ಟದ್ದಕ್ಕಾಗಿ ದೇವರನ್ನು ಸ್ತುತಿಸುತ್ತೇನೆ. 17 ನಾವು ಕೇಳಿಕೊಂಡ ಕಾರ್ಯಗಳನ್ನು ಮಾಡಲು ತೀತನು ಒಪ್ಪಿಕೊಂಡನು. ನಿಮ್ಮ ಬಳಿಗೆ ಬರಲು ಅವನು ಅತ್ಯಾಸಕ್ತನಾಗಿದ್ದನು. ಇದು ಅವನ ಸ್ವಂತ ಆಲೋಚನೆ. 18 ಎಲ್ಲಾ ಸಭೆಗಳಲ್ಲಿ ಹೊಗಳಿಕೆಗೆ ಪಾತ್ರನಾಗಿರುವ ಒಬ್ಬ ಸಹೋದರನನ್ನು ತೀತನೊಡನೆ ಕಳುಹಿಸುತ್ತಿದ್ದೇವೆ. ಈ ಸಹೋದರನು ಸುವಾರ್ತಾಸೇವೆಯ ವಿಷಯದಲ್ಲಿ ಕೀರ್ತಿಪಡೆದಿದ್ದಾನೆ. 19 ಇದಲ್ಲದೆ, ನಾವು ಈ ಸಹಾಯಧನವನ್ನು ತೆಗೆದುಕೊಂಡು ಹೋಗುವಾಗ ನಮ್ಮ ಸಂಗಡವಿರುವುದಕ್ಕಾಗಿ ಸಭೆಗಳವರು ಈ ಸಹೋದರನನ್ನು ಆಯ್ಕೆಮಾಡಿದ್ದಾರೆ. ದೇವರ ಮಹಿಮೆಗಾಗಿಯೂ ಮತ್ತು ಸಹಾಯ ಮಾಡಲು ನಿಜವಾಗಿ ಬಯಸುತ್ತೇವೆ ಎಂಬುದನ್ನು ತೋರಿಸುವುದಕ್ಕಾಗಿಯೂ ಈ ಸೇವಾಕಾರ್ಯವನ್ನು ಮಾಡುತ್ತಿದ್ದೇವೆ.

20 ಹೇರಳವಾದ ಈ ಸಹಾಯಧನವನ್ನು ನಾವು ನೋಡಿಕೊಳ್ಳುವ ಬಗ್ಗೆ ಟೀಕಿಸಲು ಯಾರಿಗೂ ಅವಕಾಶ ಕೊಡಬಾರದೆಂದು ಎಚ್ಚರಿಕೆಯಿಂದಿದ್ದೇವೆ. 21 ಪ್ರಭುವು ಯಾವುದನ್ನು ಸರಿಯಾದದ್ದೆಂದು ಸ್ವೀಕರಿಸಿಕೊಳ್ಳುವನೋ ಮತ್ತು ಜನರು ಯಾವುದನ್ನು ಸರಿಯಾದದ್ದೆಂದು ಯೋಚಿಸುವರೋ ಅದನ್ನೇ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ.

22 ಇದಲ್ಲದೆ, ಸಹಾಯ ಮಾಡಲು ಯಾವಾಗಲೂ ಸಿದ್ಧನಾಗಿರುವ ನಮ್ಮ ಸಹೋದರನನ್ನು ಅವರೊಂದಿಗೆ ಕಳುಹಿಸಿಕೊಡುತ್ತಿದ್ದೇವೆ. ಅವನು ಅನೇಕ ವಿಧದಲ್ಲಿ ತನ್ನನ್ನು ನಿರೂಪಿಸಿದ್ದಾನೆ. ಈಗ ಅವನಿಗೆ ನಿಮ್ಮಲ್ಲಿ ಹೆಚ್ಚು ಭರವಸೆ ಇರುವುದರಿಂದ ಮತ್ತಷ್ಟು ಸಹಾಯ ಮಾಡಲು ಬಯಸುತ್ತಾನೆ.

23 ನಾನು ತೀತನ ಬಗ್ಗೆ ಹೇಳುವುದೇನೆಂದರೆ, ಅವನು ನನ್ನ ಜೊತೆಕೆಲಸಗಾರನಾಗಿದ್ದಾನೆ. ನಿಮಗೆ ಸಹಾಯ ಮಾಡಲು ಅವನು ನನ್ನೊಂದಿಗೆ ಕೆಲಸ ಮಾಡುತ್ತಿದ್ದಾನೆ. ಇತರ ಸಹೋದರರ ಬಗ್ಗೆ ನಾನು ಹೇಳುವುದೇನೆಂದರೆ, ಅವರು ಸಭೆಗಳಿಂದ ಕುಳುಹಿಸಲ್ಪಟ್ಟವರಾಗಿದ್ದಾರೆ ಮತ್ತು ಕ್ರಿಸ್ತನಿಗೆ ಮಹಿಮೆಯನ್ನು ಉಂಟುಮಾಡುವಂಥವರಾಗಿದ್ದಾರೆ. 24 ಆದ್ದರಿಂದ ನಿಮ್ಮಲ್ಲಿ ನಿಜವಾಗಿಯೂ ಪ್ರೀತಿಯಿದೆ ಎಂಬುದನ್ನು ಈ ಜನರಿಗೆ ತೋರಿಸಿಕೊಡಿರಿ. ನಾವು ನಿಮ್ಮ ವಿಷಯದಲ್ಲಿ ಯಾಕೆ ಹೆಮ್ಮೆಪಡುತ್ತೇವೆಂಬುದನ್ನು ಇವರಿಗೆ ತೋರಿಸಿಕೊಡಿರಿ. ಆಗ ಎಲ್ಲಾ ಸಭೆಗಳವರು ಅದನ್ನು ನೋಡಲು ಸಾಧ್ಯವಾಗುವುದು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International