Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 9:9-20

ಯೆಹೋವನು ಕುಗ್ಗಿಹೋದವರಿಗೆ ಆಶ್ರಯಸ್ಥಾನವೂ
    ಇಕ್ಕಟ್ಟಿನಲ್ಲಿರುವವರಿಗೆ ಆಶ್ರಯದುರ್ಗವೂ ಆಗಿದ್ದಾನೆ.

10 ಯೆಹೋವನೇ, ನಿನ್ನ ಹೆಸರನ್ನು ಬಲ್ಲವರು ನಿನ್ನಲ್ಲಿ ಭರವಸೆಯಿಡುವರು.
    ಯಾಕೆಂದರೆ ನಿನ್ನ ಸಹಾಯಕ್ಕಾಗಿ ಬರುವವರನ್ನು ನೀನು ತೊರೆದುಬಿಡುವುದಿಲ್ಲ.

11 ಚೀಯೋನಿನ ನಿವಾಸಿಗಳೇ, ಯೆಹೋವನನ್ನು ಸಂಕೀರ್ತಿಸಿರಿ.
    ಆತನ ಮಹತ್ಕಾರ್ಯಗಳನ್ನು ಜನಾಂಗಗಳಲ್ಲಿ ಪ್ರಕಟಿಸಿರಿ.
12 ಪ್ರಾಣಾಪರಾಧಕ್ಕೆ ಮುಯ್ಯಿತೀರಿಸುವ ಆತನು
    ಕುಗ್ಗಿಹೋದವರ ಮೊರೆಯನ್ನು ಮರೆಯದೆ ಅವರನ್ನು ಜ್ಞಾಪಿಸಿಕೊಂಡನು.

13 “ಯೆಹೋವನೇ, ನನ್ನನ್ನು ಕನಿಕರಿಸು.
    ಇಗೋ, ವೈರಿಗಳು ನನಗೆ ಕೇಡುಮಾಡುತ್ತಿದ್ದಾರೆ.
    ‘ಮರಣ ದ್ವಾರ’ದಿಂದ ತಪ್ಪಿಸಿ ಕಾಪಾಡು.”
14 ಆಗ ಜೆರುಸಲೇಮಿನ ದ್ವಾರಗಳ ಬಳಿಯಲ್ಲಿ ನಿನ್ನನ್ನು ಸಂಕೀರ್ತಿಸುವೆನು.
    ನೀನು ನನ್ನನ್ನು ರಕ್ಷಿಸಿದ್ದರಿಂದ ಹರ್ಷಿಸುವೆನು.

15 ಅನ್ಯಜನಾಂಗಗಳವರು ತಾವು ತೋಡಿದ ಕುಣಿಗಳಲ್ಲಿ ತಾವೇ ಬಿದ್ದುಹೋಗುವರು;
    ತಾವು ಹಾಸಿದ ಬಲೆಗಳಲ್ಲಿ ತಾವೇ ಸಿಕ್ಕಿಬೀಳುವರು.
16 ಯೆಹೋವನು ಅವರನ್ನು ಅವರ ಕುಯುಕ್ತಿಯಲ್ಲಿಯೇ ಸಿಕ್ಕಿಸಿದ್ದರಿಂದ
    ಆತನ ನೀತಿಯು ಪ್ರಖ್ಯಾತವಾಯಿತು.

17 ದೇವರನ್ನು ಅಲಕ್ಷ್ಯ ಮಾಡುವ ಜನರೆಲ್ಲ ಕೆಟ್ಟವರು.
    ಅವರು ಮರಣದ ಸ್ಥಳಕ್ಕೆ ಹೋಗುವರು.
18 ಕೆಲವೊಮ್ಮೆ, ಇಕ್ಕಟ್ಟಿನಲ್ಲಿರುವವರನ್ನು ದೇವರು ಮರೆತಿರುವಂತೆ ಕಾಣುತ್ತದೆ;
    ಕುಗ್ಗಿಹೋದ ಅವರಿಗೆ ನಿರೀಕ್ಷೆಯೇ ಇಲ್ಲದಂತೆ ಕಂಡರೂ
    ದೇವರು ಅವರನ್ನು ಮರೆತುಬಿಡುವುದಿಲ್ಲ.

19 ಯೆಹೋವನೇ, ಎದ್ದೇಳು! ಜನಾಂಗಗಳಿಗೆ ನ್ಯಾಯತೀರಿಸು.
    ಅವರು ಬಲಿಷ್ಠರಾಗಕೂಡದು.
20 ಯೆಹೋವನೇ, ಅವರಿಗೆ ಭಯಹುಟ್ಟಿಸು;
    ತಾವು ಕೇವಲ ಮನುಷ್ಯರೆಂಬುದನ್ನು ಅವರು ಗ್ರಹಿಸಿಕೊಳ್ಳಲಿ.

1 ಸಮುವೇಲನು 17:55-18:5

ಸೌಲನು ದಾವೀದನ ಬಗ್ಗೆ ಹೆದರಲಾರಂಭಿಸಿದನು

55 ದಾವೀದನು ಗೊಲ್ಯಾತನೊಂದಿಗೆ ಯುದ್ಧಕ್ಕೆ ಹೊರಟಿದ್ದನ್ನು ಸೌಲನು ಗಮನಿಸುತ್ತಿದ್ದನು. ಸೌಲನು ತನ್ನ ಸೇನಾಧಿಪತಿಯಾದ ಅಬ್ನೇರನನ್ನು, “ಆ ಯುವಕನ ತಂದೆ ಯಾರು?” ಎಂದು ಪ್ರಶ್ನಿಸಿದನು.

ಅಬ್ನೇರನು, “ಅರಸನೇ, ನಿನ್ನ ಜೀವದಾಣೆ, ಅವನು ಯಾರೋ ನನಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟನು.

56 ಅದಕ್ಕೆ ಅರಸನು, “ಆ ಯುವಕನ ತಂದೆ ಯಾರೆಂಬುದನ್ನು ಪತ್ತೆಹಚ್ಚು” ಎಂದು ಹೇಳಿದನು.

57 ದಾವೀದನು ಗೊಲ್ಯಾತನನ್ನು ಕೊಂದು ಹಿಂದಿರುಗಿದಾಗ, ಅಬ್ನೇರನು ಅವನನ್ನು ಸೌಲನ ಹತ್ತಿರಕ್ಕೆ ಕರೆತಂದನು. ದಾವೀದನು ಫಿಲಿಷ್ಟಿಯನ ತಲೆಯನ್ನು ಕೈಯಲ್ಲಿ ಹಿಡಿದುಕೊಂಡೇ ಇದ್ದನು.

58 ಸೌಲನು, “ಯುವಕನೇ, ನಿನ್ನ ತಂದೆ ಯಾರು?” ಎಂದು ಪ್ರಶ್ನಿಸಿದನು.

ದಾವೀದನು, “ನಾನು ನಿಮ್ಮ ಸೇವಕನಾದ ಬೆತ್ಲೆಹೇಮಿನ ಇಷಯನ ಮಗ” ಎಂದು ಉತ್ತರಿಸಿದನು.

ದಾವೀದ ಮತ್ತು ಯೋನಾತಾನರು ಆತ್ಮೀಯ ಗೆಳೆಯರಾದರು

18 ದಾವೀದನು ಸೌಲನೊಂದಿಗೆ ಮಾತನಾಡಿದ ಬಳಿಕ ಯೋನಾತಾನನು ದಾವೀದನೊಂದಿಗೆ ಒಂದಾದನು. ಯೋನಾತಾನನು ತನ್ನನ್ನು ಪ್ರೀತಿಸುವಷ್ಟೇ ದಾವೀದನನ್ನು ಪ್ರೀತಿಸಲಾರಂಭಿಸಿದನು. ಸೌಲನು ಅಂದಿನಿಂದ ದಾವೀದನನ್ನು ತನ್ನ ಜೊತೆಯಲ್ಲಿಯೇ ಇರಿಸಿಕೊಂಡನು. ಸೌಲನು ದಾವೀದನನ್ನು ಅವನ ತಂದೆಯ ಮನೆಗೆ ಹೋಗಲು ಬಿಡಲಿಲ್ಲ. ಯೋನಾತಾನನು ದಾವೀದನನ್ನು ಬಹಳವಾಗಿ ಪ್ರೀತಿಸುತ್ತಿದ್ದನು. ಅವನು ದಾವೀದನೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡನು. ಯೋನಾತಾನನು ತಾನು ಧರಿಸಿದ್ದ ಮೇಲಂಗಿಯನ್ನೂ ತನ್ನ ಸಮವಸ್ತ್ರಗಳನ್ನೂ ತನ್ನ ಬಿಲ್ಲನ್ನೂ ಕತ್ತಿಯನ್ನೂ ಸೊಂಟಪಟ್ಟಿಯನ್ನೂ ದಾವೀದನಿಗೆ ಕೊಟ್ಟನು.

ಸೌಲನು ದಾವೀದನ ಯಶಸ್ಸನ್ನು ಗಮನಿಸಿದನು

ಸೌಲನು ದಾವೀದನನ್ನು ಬೇರೆಬೇರೆ ಯುದ್ಧಗಳಲ್ಲಿ ಹೋರಾಡಲು ಕಳುಹಿಸಿದನು. ದಾವೀದನು ಆ ಯುದ್ಧಗಳಲ್ಲೆಲ್ಲಾ ಯಶ್ವಸಿಯಾದನು. ಆದ್ದರಿಂದ ಸೌಲನು ದಾವೀದನನ್ನು ಸೈನ್ಯಾಧಿಪತಿಯನ್ನಾಗಿ ನೇಮಿಸಿದನು. ಇದು ಸೌಲನ ಅಧಿಕಾರಿಗಳಿಗೂ ಇತರರಿಗೂ ಸಂತಸವನ್ನು ಉಂಟುಮಾಡಿತು!

ಅಪೊಸ್ತಲರ ಕಾರ್ಯಗಳು 21:1-16

ಪೌಲನು ಜೆರುಸಲೇಮಿಗೆ ಹೋಗುವನು

21 ನಾವೆಲ್ಲರೂ ಹಿರಿಯರನ್ನು ಬೀಳ್ಕೊಟ್ಟ ಬಳಿಕ ನೌಕಾಯಾನ ಮಾಡಿ ನೇರವಾಗಿ ಕೋಸ್ ದ್ವೀಪಕ್ಕೆ ಹೋದೆವು. ಮರುದಿನ ರೋದ ದ್ವೀಪಕ್ಕೆ ಹೋದೆವು ಮತ್ತು ಅಲ್ಲಿಂದ ಪತಾರಕ್ಕೆ ಹೋದೆವು. ಫೆನಿಷ್ಯಕ್ಕೆ ಹೋಗುವ ಹಡಗನ್ನು ನಾವು ಅಲ್ಲಿ ಕಂಡೆವು. ನಾವು ಆ ಹಡಗನ್ನೇರಿ ಪ್ರಯಾಣ ಮಾಡಿದೆವು.

ನಾವು ಸೈಪ್ರಸ್ ದ್ವೀಪದ ಸಮೀಪದಲ್ಲಿ ನೌಕಾಯಾನ ಮಾಡಿದೆವು. ಅದು ನಮ್ಮ ಉತ್ತರದಿಕ್ಕಿನಲ್ಲಿ ಕಾಣುತ್ತಿತ್ತು. ಆದರೆ ನಾವು ಹಡಗನ್ನು ಅಲ್ಲಿ ನಿಲ್ಲಿಸದೆ ಸಿರಿಯ ದೇಶಕ್ಕೆ ಪ್ರಯಾಣ ಮಾಡಿ ಟೈರ್ ಪಟ್ಟಣದಲ್ಲಿ ಹಡಗನ್ನು ನಿಲ್ಲಿಸಿದೆವು. ಯಾಕೆಂದರೆ ಹಡಗಿನಿಂದ ಸರಕನ್ನು ಇಳಿಸಬೇಕಾಗಿತ್ತು. ನಾವು ಟೈರ್ ನಲ್ಲಿ ಯೇಸುವಿನಲ್ಲಿ ಕೆಲವು ಶಿಷ್ಯರನ್ನು ಕಂಡೆವು. ಅವರೊಂದಿಗೆ ಏಳು ದಿನ ತಂಗಿದ್ದೆವು. ಅವರು ಪವಿತ್ರಾತ್ಮನ ಪ್ರೇರಣೆಯಿಂದ ಪೌಲನಿಗೆ, “ನೀನು ಜೆರುಸಲೇಮಿಗೆ ಹೋಗಬಾರದು” ಎಂದು ಎಚ್ಚರಿಕೆ ಕೊಟ್ಟರು. ಆದರೆ ನಮ್ಮ ಸಂದರ್ಶನವು ಮುಗಿದ ಮೇಲೆ ನಾವು ಅಲ್ಲಿಂದ ಹೊರಟು ಪ್ರಯಾಣವನ್ನು ಮುಂದುವರಿಸಿದೆವು. ಯೇಸುವಿನ ಎಲ್ಲಾ ಶಿಷ್ಯರು, ಸ್ತ್ರೀಯರು ಮತ್ತು ಮಕ್ಕಳು ಸಹ ನಮ್ಮನ್ನು ಬೀಳ್ಕೊಡುವುದಕ್ಕಾಗಿ ನಮ್ಮೊಂದಿಗೆ ಪಟ್ಟಣದಿಂದ ಹೊರಗೆ ಬಂದರು. ನಾವೆಲ್ಲರೂ ಸಮುದ್ರ ತೀರದಲ್ಲಿ ಮೊಣಕಾಲೂರಿ ಪ್ರಾರ್ಥಿಸಿದೆವು. ಬಳಿಕ ನಾವು ಒಬ್ಬರಿಗೊಬ್ಬರು ಅಂತಿಮ ವಂದನೆಗಳನ್ನು ಸಲ್ಲಿಸಿ ಹಡಗನ್ನು ಹತ್ತಿದೆವು. ಶಿಷ್ಯರು ತಮ್ಮ ಮನೆಗಳಿಗೆ ಹಿಂತಿರುಗಿದರು.

ನಾವು ಟೈರ್ ನಿಂದ ನಮ್ಮ ಪ್ರಯಾಣವನ್ನು ಮುಂದುವರೆಸಿ ಪ್ಟೊಲೊಮಾಯ ಎಂಬಲ್ಲಿಗೆ ಹೋದೆವು. ಅಲ್ಲಿಯ ಸಹೋದರರನ್ನು (ವಿಶ್ವಾಸಿಗಳು) ವಂದಿಸಿ ಅವರೊಂದಿಗೆ ಒಂದು ದಿನ ಇದ್ದೆವು. ಮರುದಿನ ನಾವು ಪ್ಟೊಲೊಮಾಯದಿಂದ ಹೊರಟು ಸೆಜರೇಯ ಪಟ್ಟಣಕ್ಕೆ ಹೋದೆವು. ಅಲ್ಲಿ ನಾವು ಫಿಲಿಪ್ಪನ ಮನೆಗೆ ಹೋಗಿ ಅವನೊಂದಿಗೆ ತಂಗಿದೆವು. ಸುವಾರ್ತೆಯನ್ನು ತಿಳಿಸುವುದೇ ಫಿಲಿಪ್ಪನ ಕೆಲಸವಾಗಿತ್ತು. ಏಳುಮಂದಿ ಸಹಾಯಕರುಗಳಲ್ಲಿ[a] ಅವನೂ ಒಬ್ಬನಾಗಿದ್ದನು. ಮದುವೆಯಾಗಿಲ್ಲದ ನಾಲ್ಕುಮಂದಿ ಹೆಣ್ಣುಮಕ್ಕಳು ಅವನಿಗಿದ್ದರು. ಅವರೆಲ್ಲರಿಗೂ ಪ್ರವಾದಿಸುವ ವರವಿತ್ತು.

10 ನಾವು ಅಲ್ಲಿಗೆ ಹೋಗಿ ಅನೇಕ ದಿನಗಳಾದ ಮೇಲೆ, ಅಗಬ ಎಂಬ ಪ್ರವಾದಿಯು ಜುದೇಯದಿಂದ ಬಂದನು. 11 ಅವನು ನಮ್ಮ ಬಳಿಗೆ ಬಂದು ಪೌಲನ ನಡುಪಟ್ಟಿಯನ್ನು ತೆಗೆದುಕೊಂಡು ಅದರಿಂದ ತನ್ನ ಕೈಕಾಲುಗಳನ್ನು ಕಟ್ಟಿಕೊಂಡು, “ಪವಿತ್ರಾತ್ಮನು ನನಗೆ ಹೇಳುವುದೇನೆಂದರೆ, ‘ಈ ನಡುಪಟ್ಟಿಯನ್ನು ಕಟ್ಟಿಕೊಳ್ಳುವ ವ್ಯಕ್ತಿಯನ್ನು ಜೆರುಸಲೇಮಿನ ಯೆಹೂದ್ಯರು ಇದೇ ರೀತಿ ಕಟ್ಟಿಹಾಕುವರು. ಬಳಿಕ ಅವರು ಅವನನ್ನು ಯೆಹೂದ್ಯರಲ್ಲದ ಜನರಿಗೆ ಒಪ್ಪಿಸಿಕೊಡುವರು’” ಎಂದು ಹೇಳಿದನು.

12 ನಾವೆಲ್ಲರೂ ಈ ಮಾತುಗಳನ್ನು ಕೇಳಿದೆವು. ಆದ್ದರಿಂದ ನಾವು ಮತ್ತು ಯೇಸುವಿನ ಇತರ ಶಿಷ್ಯರು ಪೌಲನಿಗೆ, “ನೀನು ಜೆರುಸಲೇಮಿಗೆ ಹೋಗಬಾರದು” ಎಂದು ಬೇಡಿಕೊಂಡೆವು. 13 ಆದರೆ ಪೌಲನು, “ನೀವು ಯಾಕೆ ಅಳುತ್ತಿರುವಿರಿ? ನೀವು ನನಗೆ ಬಹು ದುಃಖವನ್ನು ಯಾಕೆ ಉಂಟು ಮಾಡುತ್ತಿದ್ದೀರಿ? ನಾನು ಜೆರುಸಲೇಮಿನಲ್ಲಿ ಬಂಧಿಸಲ್ಪಡುವುದಕ್ಕಲ್ಲದೆ ಪ್ರಭು ಯೇಸುವಿನ ಹೆಸರಿಗಾಗಿ ಸಾಯುವುದಕ್ಕೂ ಸಿದ್ಧನಾಗಿದ್ದೇನೆ!” ಎಂದು ಹೇಳಿದನು.

14 ಜೆರುಸಲೇಮಿಗೆ ಹೋಗದಂತೆ ನಾವು ಅವನನ್ನು ಒಪ್ಪಿಸಲಾಗಲಿಲ್ಲ. ಆದ್ದರಿಂದ ಬೇಡಿಕೊಳ್ಳುವುದನ್ನು ನಿಲ್ಲಿಸಿ, “ಪ್ರಭುವಿನ ಚಿತ್ತವು ನೆರವೇರಲೆಂದು ಪ್ರಾರ್ಥಿಸುತ್ತೇವೆ” ಎಂದೆವು.

15 ಬಳಿಕ ನಾವು ಸಿದ್ಧರಾಗಿ ಜೆರುಸಲೇಮಿಗೆ ಹೊರಟೆವು. 16 ಸೆಜರೇಯ ಪಟ್ಟಣದಿಂದ ಯೇಸುವಿನ ಶಿಷ್ಯರಲ್ಲಿ ಕೆಲವರು ನಮ್ಮೊಂದಿಗೆ ಬಂದರು. ಈ ಶಿಷ್ಯರು ನಾವು ಇಳಿದುಕೊಳ್ಳಬೇಕಾಗಿದ್ದ ಸೈಪ್ರಸಿನ ಮ್ನಾಸೋನ ಎಂಬವನ ಮನೆಗೆ ನಮ್ಮನ್ನು ಕರೆದೊಯ್ದರು. ಯೇಸುವಿನ ಆದಿ ಶಿಷ್ಯರಲ್ಲಿ ಮ್ನಾಸೋನನು ಒಬ್ಬನಾಗಿದ್ದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International