Revised Common Lectionary (Semicontinuous)
ರಚನೆಗಾರ: ದಾವೀದ.
53 ಮೂಢರು ದೇವರಿಲ್ಲವೆಂದು ಮನಸ್ಸಿನಲ್ಲಿ ಅಂದುಕೊಳ್ಳುವರು.
ಅವರು ಕೆಟ್ಟುಹೋಗಿದ್ದಾರೆ; ದುಷ್ಕೃತ್ಯಗಳನ್ನು ನಡೆಸುವವರಾಗಿದ್ದಾರೆ.
ಅವರು ಒಳ್ಳೆಯದನ್ನು ಮಾಡುವುದೇ ಇಲ್ಲ.
2 ಮನುಷ್ಯರಲ್ಲಿ ತನಗೋಸ್ಕರ ಹುಡುಕುತ್ತಿರುವ ಬುದ್ಧಿವಂತರು ಇದ್ದಾರೋ
ಎಂದು ದೇವರು ಪರಲೋಕದಿಂದ ನೋಡುತ್ತಿದ್ದಾನೆ.
3 ಆದರೆ ಪ್ರತಿಯೊಬ್ಬರೂ ದೇವರಿಗೆ ವಿಮುಖರಾಗಿದ್ದಾರೆ.
ಪ್ರತಿಯೊಬ್ಬನೂ ಕೆಟ್ಟುಹೋಗಿದ್ದಾನೆ.
ಯಾವನೂ ಒಳ್ಳೆಯದನ್ನು ಮಾಡುತ್ತಿಲ್ಲ.
ಇಲ್ಲ, ಒಬ್ಬನಾದರೂ ಮಾಡುತ್ತಿಲ್ಲ!
4 ದೇವರು ಹೀಗೆನ್ನುತ್ತಾನೆ: “ಆ ದುಷ್ಟರಿಗೆ ಖಂಡಿತವಾಗಿ ಸತ್ಯವು ತಿಳಿದಿದೆ!
ಆದರೆ ಅವರು ನನ್ನಲ್ಲಿ ಪ್ರಾರ್ಥಿಸುತ್ತಿಲ್ಲ.
ಆಹಾರ ತಿನ್ನುವಂತೆ ಅವರು ನನ್ನ ಜನರನ್ನು ನಾಶಮಾಡಲು ಸಿದ್ಧರಾಗಿದ್ದಾರೆ.”
5 ಆ ದುಷ್ಟರು ಹಿಂದೆಂದೂ ಭಯಗೊಂಡಿಲ್ಲದ ರೀತಿಯಲ್ಲಿ ಭಯಭ್ರಾಂತರಾಗುವರು!
ಅವರು ಇಸ್ರೇಲರ ಶತ್ರುಗಳು.
ದೇವರು ಅವರನ್ನು ತಿರಸ್ಕರಿಸಿದ್ದಾನೆ.
ಆದ್ದರಿಂದ ದೇವಜನರು ಅವರನ್ನು ಸೋಲಿಸುವರು,
ದೇವರು ಆ ದುಷ್ಟರ ಎಲುಬುಗಳನ್ನು ಚದರಿಸಿಬಿಡುವನು.
6 ಚೀಯೋನ್ ಪರ್ವತದ ಮೇಲಿರುವಾತನು
ಇಸ್ರೇಲಿಗೆ ಜಯವನ್ನು ತರುವನು!
ಆಗ ದೇವರು ತನ್ನ ಜನರನ್ನು ಸೆರೆವಾಸದಿಂದ ಬರಮಾಡುವನು.
ಯಾಕೋಬನೇ ಉಲ್ಲಾಸಿಸು!
ಇಸ್ರೇಲೇ ಬಹು ಸಂತೋಷಪಡು.
23 ಫಿಲಿಷ್ಟಿಯರ ಸೈನ್ಯದ ಒಂದು ಗುಂಪು ಮಿಕ್ಮಾಷಿನ ಕಣಿವೆಗೆ ಕಾವಲಾಗಿತ್ತು.
ಯೋನಾತಾನನು ಮತ್ತು ಅವನ ಸಹಾಯಕನು ಫಿಲಿಷ್ಟಿಯರನ್ನು ಆಕ್ರಮಣ ಮಾಡುವರು
14 ಅಂದು ಸೌಲನ ಮಗನಾದ ಯೋನಾತಾನನು ತನ್ನ ಆಯುಧಗಳನ್ನು ಹೊತ್ತುತರುವ ಯುವಕನೊಂದಿಗೆ ಮಾತನಾಡುತ್ತಾ, “ಕಣಿವೆಯ ಆಚೆಗಿರುವ ಫಿಲಿಷ್ಟಿಯರ ಪಾಳೆಯಕ್ಕೆ ಹೋಗೋಣ” ಎಂದು ಹೇಳಿದನು. ಆದರೆ ಯೋನಾತಾನನು ತನ್ನ ತಂದೆಗೆ ಇದನ್ನು ತಿಳಿಸಲಿಲ್ಲ.
2 ಸೌಲನು ಮಿಗ್ರೋನಿನ ಬೆಟ್ಟದ ತುದಿಯಲ್ಲಿರುವ ಒಂದು ದಾಳಿಂಬೆ ಮರದ ಅಡಿಯಲ್ಲಿ ಕುಳಿತಿದ್ದನು. ಅದು ಆ ಸ್ಥಳದ ಕಣಕ್ಕೆ ಸಮೀಪವಾಗಿತ್ತು. ಸೌಲನ ಜೊತೆಯಲ್ಲಿ ಆರುನೂರು ಜನರಿದ್ದರು. 3 ಅವರಲ್ಲಿ ಅಹೀಯನೂ ಒಬ್ಬನು. ಶೀಲೋವಿನಲ್ಲಿ ಏಲಿಯು ಯೆಹೋವನ ಯಾಜಕನಾಗಿದ್ದನು. ಏಫೋದನ್ನು ಧರಿಸಿದ್ದ ಅಹೀಯನು ಆಗ ಅಲ್ಲಿ ಯಾಜಕನಾಗಿದ್ದನು. ಅಹೀಯನು ಈಕಾಬೋದನ ಸೋದರನಾದ ಅಹೀಟೂಬನ ಮಗ. ಈಕಾಬೋದನು ಫೀನೆಹಾಸನ ಮಗ. ಫೀನೆಹಾಸನು ಏಲಿಯ ಮಗ.
ಯೋನಾತಾನನು ಹೊರಟುಹೋದನೆಂಬುದು ಜನರಿಗೆ ಗೊತ್ತಿರಲಿಲ್ಲ. 4 ಆ ಮಾರ್ಗದ ಎರಡು ಕಡೆಗಳಲ್ಲೂ ದೊಡ್ಡದೊಡ್ಡ ಬಂಡೆಗಲ್ಲುಗಳಿದ್ದವು. ಯೋನಾತಾನನು ಫಿಲಿಷ್ಟಿಯರ ಪಾಳೆಯಕ್ಕೆ ಆ ಮಾರ್ಗದಲ್ಲಿ ಹೋಗಲು ಉಪಾಯ ಮಾಡಿದನು. ಆ ಮಾರ್ಗದ ಒಂದು ಕಡೆಗಿದ್ದ ಬಂಡೆಗಲ್ಲಿಗೆ ಬೋಚೇಚ್ ಎಂದು ಹೆಸರು; ಇನ್ನೊಂದು ಕಡೆಗಿದ್ದ ಬಂಡೆಗಲ್ಲಿಗೆ ಸೆನೆ ಎಂದು ಹೆಸರು. 5 ಒಂದು ಬಂಡೆಗಲ್ಲು ಉತ್ತರದಿಕ್ಕಿನ ಮಿಕ್ಮಾಷಿನ ಕಡೆಗೂ ಇನ್ನೊಂದು ಬಂಡೆಗಲ್ಲು ದಕ್ಷಿಣದಿಕ್ಕಿನ ಗೆಬದ ಕಡೆಗೂ ಇದ್ದವು.
6 ಯೋನಾತಾನನು ತನ್ನ ಆಯುಧಗಳನ್ನು ಹೊತ್ತುಕೊಂಡು ಬರುತ್ತಿದ್ದ ಯುವಸಹಾಯಕನಿಗೆ, “ಆ ಹೊರದೇಶಿಯರ ಪಾಳೆಯಕ್ಕೆ ಹೋಗೋಣ ಬಾ. ಈ ಜನರನ್ನು ಸೋಲಿಸಲು ಯೆಹೋವನು ಬಹುಶಃ ನಮ್ಮನ್ನು ಬಳಸಬಹುದು. ಯೆಹೋವನನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ನಮ್ಮಲ್ಲಿ ಅನೇಕ ಸೈನಿಕರಿದ್ದರೂ ಇಲ್ಲವೆ ಕೆಲವೇ ಸೈನಿಕರಿದ್ದರೂ ಅದು ಲೆಕ್ಕಕ್ಕೆ ಬರುವುದಿಲ್ಲ” ಎಂದು ಹೇಳಿದನು.
7 ಯೋನಾತಾನನ ಆಯುಧಗಳನ್ನು ಹೊತ್ತುಕೊಂಡು ಬರುತ್ತಿದ್ದ ಯುವಕನು, “ನಿನಗೆ ಒಳ್ಳೆಯದೆಂದು ತೋಚಿದ್ದನ್ನು ಮಾಡು. ನಿನ್ನ ಕೆಲಸದಲ್ಲೆಲ್ಲಾ ನಾನು ನಿನ್ನೊಂದಿಗಿರುತ್ತೇನೆ” ಎಂದು ಹೇಳಿದನು.
8 ಯೋನಾತಾನನು, “ನಾವು ಕಣಿವೆಯನ್ನು ದಾಟಿ ಫಿಲಿಷ್ಟಿಯ ಕಾವಲುಗಾರರ ಕಡೆಗೆ ಹೋಗಿ ಅವರಿಗೆ ಕಾಣಿಸಿಕೊಳ್ಳೋಣ. 9 ಅವರು, ‘ನಾವು ಬರುವ ತನಕ ನೀವು ಅಲ್ಲೇ ನಿಲ್ಲಿ’ ಎಂದು ಹೇಳಿದರೆ, ನಾವು ನಿಂತಲ್ಲೇ ನಿಲ್ಲೋಣ. ನಾವು ಮೇಲೆ ಹತ್ತಿ ಅವರ ಹತ್ತಿರಕ್ಕೆ ಹೋಗುವುದು ಬೇಡ. 10 ಆದರೆ ಫಿಲಿಷ್ಟಿಯರು, ‘ನಮ್ಮ ಬಳಿಗೆ ಹತ್ತಿ ಬನ್ನಿ’ ಎಂದರೆ, ನಾವು ಅವರ ಬಳಿಗೆ ಹತ್ತಿ ಹೋಗೋಣ; ಯಾಕೆಂದರೆ ಅದು ದೇವರ ಗುರುತು. ದೇವರು ಅವರನ್ನು ಸೋಲಿಸಲು ನಮಗೆ ಅವಕಾಶ ಕಲ್ಪಿಸಿದ್ದಾನೆ ಎಂಬುದೇ ಅದರ ಅರ್ಥ” ಎಂದು ಹೇಳಿದನು.
11 ಹೀಗೆ ಯೋನಾತಾನ ಮತ್ತು ಅವನ ಸಹಾಯಕನು ಫಿಲಿಷ್ಟಿಯರಿಗೆ ಕಾಣಿಸಿಕೊಂಡರು. ಫಿಲಿಷ್ಟಿಯರ ಕಾವಲುಗಾರರು, “ಇಗೋ, ಇಬ್ರಿಯರು ತಾವು ಅಡಗಿಕೊಂಡಿದ್ದ ಗುಹೆಗಳಿಂದ ಹೊರಬರುತ್ತಿದ್ದಾರೆ” ಎಂದು ಹೇಳಿದರು. 12 ಆ ಕೋಟೆಯಲ್ಲಿದ್ದ ಫಿಲಿಷ್ಟಿಯರು ಯೋನಾತಾನ ಮತ್ತು ಅವನ ಸಹಾಯಕನಿಗೆ, “ನಮ್ಮ ಹತ್ತಿರಕ್ಕೆ ಬನ್ನಿ. ನಾವು ನಿಮಗೆ ಒಂದು ಪಾಠ ಕಲಿಸುತ್ತೇವೆ” ಎಂದು ಕೂಗಿ ಹೇಳಿದರು.
ಯೋನಾತಾನನು ತನ್ನ ಸಹಾಯಕನಿಗೆ, “ಬೆಟ್ಟದ ಮೇಲಿನವರೆಗೆ ನನ್ನನ್ನು ಹಿಂಬಾಲಿಸು. ಯೆಹೋವನು ಇಸ್ರೇಲರ ವಶಕ್ಕೆ ಫಿಲಿಷ್ಟಿಯರನ್ನು ಒಪ್ಪಿಸಿದ್ದಾನೆ” ಎಂದು ಹೇಳಿದನು.
13-14 ಯೋನಾತಾನನು ತನ್ನ ಕೈಕಾಲುಗಳಿಂದ ಬೆಟ್ಟವನ್ನು ಹತ್ತಿದನು. ಅವನನ್ನು ಹಿಂಬಾಲಿಸಿಕೊಂಡು ಅವನ ಸಹಾಯಕನೂ ಬೆಟ್ಟವನ್ನು ಹತ್ತಿದನು. ಯೋನಾತಾನ ಮತ್ತು ಅವನ ಸಹಾಯಕನು ಫಿಲಿಷ್ಟಿಯರ ಮೇಲೆ ಆಕ್ರಮಣ ಮಾಡಿದರು ಅವರು ಮೊದಲ ಆಕ್ರಮಣದಲ್ಲಿ ಅರ್ಧಎಕರೆ ಸ್ಥಳದಲ್ಲಿದ್ದ ಇಪ್ಪತ್ತು ಮಂದಿ ಫಿಲಿಷ್ಟಿಯರನ್ನು ಕೊಂದರು. ಆಕ್ರಮಣಮಾಡಲು ಬಂದವರೊಡನೆ ಯೋನಾತಾನನು ಮುಖಾಮುಖಿಯಾಗಿ ಹೋರಾಡಿದನು. ಯೋನಾತಾನನ ಸಹಾಯಕನು ಅವನ ಹಿಂದೆ ಬರುತ್ತಾ ಗಾಯಾಳುಗಳನ್ನು ಕೊಂದನು.
15 ಹೊರವಲಯದ ಪಾಳೆಯದಲ್ಲಿದ್ದ ಮತ್ತು ಕೋಟೆಯಲ್ಲಿದ್ದ ಎಲ್ಲಾ ಫಿಲಿಷ್ಟಿಯ ಸೈನಿಕರು ಭಯದಿಂದ ನಡುಗಿದರು. ಹೊಲದಲ್ಲಿದ್ದ ಸೈನಿಕರು ಸಹ ಹೆದರಿಕೊಂಡಿದ್ದರು. ಅತ್ಯಂತ ಧೈರ್ಯವಂತರಾದ ಸೈನಿಕರು ಸಹ ಹೆದರಿಕೊಂಡಿದ್ದರು. ಭೂಮಿಯು ನಡುಗಿದ್ದರಿಂದ ಫಿಲಿಷ್ಟಿಯ ಸೈನಿಕರು ನಿಜವಾಗಿಯೂ ಹೆದರಿಕೊಂಡರು.
16 ಫಿಲಿಷ್ಟಿಯ ಸೈನಿಕರು ದಿಕ್ಕುಪಾಲಾಗಿ ಚದರಿ ಓಡಿಹೋಗುತ್ತಿರುವುದನ್ನು ಬೆನ್ಯಾಮೀನ್ ಪ್ರಾಂತ್ಯದ ಗಿಬೆಯದಲ್ಲಿದ್ದ ಸೌಲನ ಕಾವಲುಗಾರರು ನೋಡಿದರು. 17 ಸೌಲನು ತನ್ನೊಡನೆ ಇದ್ದ ಸೈನಿಕರಿಗೆ, “ಪಾಳೆಯದಲ್ಲಿರುವ ಜನರನ್ನು ಲೆಕ್ಕಹಾಕಿ. ಯಾರು ಪಾಳೆಯದಿಂದ ಹೊರಗೆ ಹೋಗಿದ್ದಾರೆ ಎಂಬುದನ್ನು ನಾನು ತಿಳಿಯಬೇಕು” ಎಂದು ಹೇಳಿದನು.
ಅವರು ಲೆಕ್ಕಹಾಕಿದಾಗ, ಯೋನಾತಾನನೂ ಅವನ ಸಹಾಯಕನೂ ಹೊರಗೆ ಹೋಗಿರುವುದು ತಿಳಿಯಿತು.
18 ಸೌಲನು ಅಹೀಯನಿಗೆ, “ಯೆಹೋವನ ಪವಿತ್ರ ಪೆಟ್ಟಿಗೆಯನ್ನು ತೆಗೆದುಕೊಂಡು ಬಾ” ಎಂದು ಹೇಳಿದನು. (ಆ ಸಮಯದಲ್ಲಿ ದೇವರ ಪವಿತ್ರ ಪೆಟ್ಟಿಗೆಯು ಇಸ್ರೇಲರೊಂದಿಗೆ ಇತ್ತು.) 19 ಸೌಲನು ಯಾಜಕನಾದ ಅಹೀಯನ ಜೊತೆ ಮಾತನಾಡುತ್ತಿದ್ದನು. ಸೌಲನು ಯೆಹೋವನ ಸಲಹೆಗಾಗಿ ಕಾಯುತ್ತಿದ್ದನು. ಆದರೆ ಫಿಲಿಷ್ಟಿಯರ ಪಾಳೆಯದಲ್ಲಿ ಗದ್ದಲವೂ ಗಲಿಬಿಲಿಯೂ ಹೆಚ್ಚತೊಡಗಿದವು. ಸೌಲನು ತಾಳ್ಮೆಯಿಲ್ಲದಂತಾದನು. ಕೊನೆಯದಾಗಿ ಸೌಲನು ಯಾಜಕನಾದ ಅಹೀಯನಿಗೆ, “ಅಷ್ಟೇ ಸಾಕು, ಕೈಗಳನ್ನು ಕೆಳಗಿಳಿಸಿ ಪ್ರಾರ್ಥನೆಯನ್ನು ನಿಲ್ಲಿಸು” ಎಂದು ಹೇಳಿದನು.
20 ಸೌಲನು ಸೈನಿಕರನ್ನೆಲ್ಲ ಒಟ್ಟುಗೂಡಿಸಿಕೊಂಡು ಯುದ್ಧಕ್ಕೆ ಹೋದನು. ಫಿಲಿಷ್ಟಿಯ ಸೈನಿಕರಲ್ಲಿ ನಿಜವಾಗಿಯೂ ಗಲಿಬಿಲಿಯುಂಟಾಗಿತ್ತು. ಅವರು ತಮ್ಮತಮ್ಮಲ್ಲಿಯೇ ಕತ್ತಿಗಳಿಂದ ಹೋರಾಡುತ್ತಿದ್ದರು. 21 ಫಿಲಿಷ್ಟಿಯರ ಸೇವೆಯಲ್ಲಿ ಮೊದಲಿಂದಲೂ ಇದ್ದ ಇಬ್ರಿಯರು ಈಗಲೂ ಅವರ ಪಾಳೆಯದಲ್ಲಿದ್ದರು. ಆದರೆ ಆಗ ಈ ಇಬ್ರಿಯರು ಸೌಲ ಮತ್ತು ಯೋನಾತಾನರೊಂದಿಗೆ ಸೇರಿಕೊಂಡರು. 22 ಫಿಲಿಷ್ಟಿಯ ಸೈನಿಕರು ಓಡಿಹೋಗುತ್ತಿರುವುದನ್ನು ಎಫ್ರಾಯೀಮ್ ಬೆಟ್ಟಪ್ರದೇಶದಲ್ಲಿ ಅಡಗಿಕೊಂಡಿದ್ದ ಎಲ್ಲ ಇಸ್ರೇಲರೂ ಕೇಳಿದರು. ಆದ್ದರಿಂದ ಆ ಇಸ್ರೇಲರೂ ಯುದ್ಧದಲ್ಲಿ ಭಾಗಿಗಳಾಗಿ ಫಿಲಿಷ್ಟಿಯರನ್ನು ಅಟ್ಟಿಸಿಕೊಂಡು ಹೋದರು.
23 ಹೀಗೆ ಯೆಹೋವನು ಅಂದು ಇಸ್ರೇಲರನ್ನು ರಕ್ಷಿಸಿದನು. ಯುದ್ಧವು ಬೇತಾವೆನಿನ ಆಚೆಯ ತನಕ ನಡೆಯಿತು. ಸೌಲನ ಬಳಿ ಒಟ್ಟು ಹತ್ತು ಸಾವಿರ ಮಂದಿ ಸೈನಿಕರಿದ್ದರು. ಎಫ್ರಾಯೀಮ್ ಬೆಟ್ಟಪ್ರದೇಶದ ಎಲ್ಲಾ ನಗರಗಳಿಗೂ ಯುದ್ಧವು ಹಬ್ಬಿತು.
ಪೌಲನ ಕಡೇ ಮಾತುಗಳು
11 ಇದನ್ನು ನಾನೇ ಕೈಯಾರೆ ಬರೆಯುತ್ತಿದ್ದೇನೆ. ನಾನು ಎಷ್ಟು ದೊಡ್ಡ ಅಕ್ಷರಗಳಲ್ಲಿ ಬರೆಯುತ್ತಿದ್ದೇನೆಂಬುದನ್ನು ನೋಡಿರಿ. 12 ನೀವು ಸುನ್ನತಿ ಮಾಡಿಸಿಕೊಳ್ಳಬೇಕೆಂದು ಕೆಲವರು ನಿಮ್ಮನ್ನು ಒತ್ತಾಯಿಸುತ್ತಿದ್ದಾರೆ. ತಮ್ಮನ್ನು (ಯೆಹೂದ್ಯರು) ಸ್ವೀಕರಿಸಿಕೊಳ್ಳಲಿ ಎಂಬುದೇ ಅವರ ಉದ್ದೇಶ. ಕ್ರಿಸ್ತನ ಶಿಲುಬೆಯ ದೆಸೆಯಿಂದ ತಾವು ಹಿಂಸೆಗೆ ಒಳಗಾಗಬಹುದೆಂಬ ಭಯದಿಂದ ಅವರು ಹೀಗೆ ಮಾಡುತ್ತಾರೆ. 13 ಸುನ್ನತಿ ಮಾಡಿಸಿಕೊಂಡಿರುವ ಅವರೇ ಧರ್ಮಶಾಸ್ತ್ರಕ್ಕೆ ವಿಧೇಯರಾಗುತ್ತಿಲ್ಲ. ಆದರೆ ನಿಮಗೂ ಸುನ್ನತಿ ಮಾಡಿಸಿ ಅದರ ಬಗ್ಗೆ ಹೆಚ್ಚಳಪಡಬೇಕೆಂಬುದೇ ಅವರ ಆಸೆ.
14 ಅಂಥ ವಿಷಯಗಳ ಬಗ್ಗೆ ನಾನು ಹೆಚ್ಚಳಪಡುವುದೇ ಇಲ್ಲ. ನಾನು ಹೆಮ್ಮೆಪಡಲು ನನಗಿರುವ ಒಂದೇ ಕಾರಣವೇನೆಂದರೆ ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಶಿಲುಬೆಯೊಂದೇ. ಶಿಲುಬೆಯ ಮೇಲೆ ಯೇಸುವಿಗಾದ ಮರಣದ ಮೂಲಕ ಲೋಕವು ನನ್ನ ಪಾಲಿಗೆ ಸತ್ತುಹೋಯಿತು. ನಾನು ಸಹ ಲೋಕದ ಪಾಲಿಗೆ ಸತ್ತುಹೋದೆನು. 15 ಒಬ್ಬನಿಗೆ ಸುನ್ನತಿಯಾಗಿದೆಯೋ ಸುನ್ನತಿಯಾಗಿಲ್ಲವೋ ಎಂಬುದು ಮುಖ್ಯವಲ್ಲ. ಆದರೆ ದೇವರಿಂದ ಹೊಸ ಸೃಷ್ಟಿಯಾಗಿರುವುದೇ ಮುಖ್ಯವಾದದ್ದು.[a] 16 ಈ ನಿಯಮವನ್ನು ಅನುಸರಿಸುವವರಿಗೆಲ್ಲ, ಅಂದರೆ ನಿಜ ಇಸ್ರೇಲರಾದ ದೇವ ಜನರಿಗೆಲ್ಲ ಶಾಂತಿಯೂ ಕರುಣೆಯೂ ಆಗಲಿ.
17 ಆದ್ದರಿಂದ ಇನ್ನು ಮೇಲೆ ನನಗೆ ತೊಂದರೆ ಕೊಡಬೇಡಿ. ನನ್ನ ದೇಹದ ಮೇಲೆ ಬಾಸುಂಡೆಯ ಗುರುತುಗಳಿವೆ. ನಾನು ಕ್ರಿಸ್ತನವನೆಂಬುದಕ್ಕೆ ಈ ಗುರುತುಗಳೇ ಸಾಕ್ಷಿ.
18 ನನ್ನ ಸಹೋದರ ಸಹೋದರಿಯರೇ, ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮ ಆತ್ಮದೊಂದಿಗಿರಲೆಂದು ಪ್ರಾರ್ಥಿಸುತ್ತೇನೆ. ಆಮೆನ್.
Kannada Holy Bible: Easy-to-Read Version. All rights reserved. © 1997 Bible League International