Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
1 ಸಮುವೇಲನು 15:34-16:13

34 ನಂತರ ಸಮುವೇಲನು ಅಲ್ಲಿಂದ ಹೊರಟು ರಾಮಕ್ಕೆ ಹೋದನು. ಸೌಲನು ಗಿಬೆಯದ ತನ್ನ ಮನೆಗೆ ಹೋದನು. 35 ಅನಂತರ ಸಮುವೇಲನು ತನ್ನ ಜೀವಿತದ ಅವಧಿಯಲ್ಲಿ ಸೌಲನನ್ನು ನೋಡಲಿಲ್ಲ. ಸಮುವೇಲನು ಸೌಲನಿಗಾಗಿ ಬಹಳ ದುಃಖಪಟ್ಟನು. ಸೌಲನನ್ನು ಇಸ್ರೇಲರ ರಾಜನನ್ನಾಗಿ ಮಾಡಿದ್ದಕ್ಕೆ ಯೆಹೋವನು ಬಹಳ ಸಂತಾಪಪಟ್ಟನು.

ಸಮುವೇಲನು ಬೆತ್ಲೆಹೇಮಿಗೆ ಹೋಗುವನು

16 ಯೆಹೋವನು ಸಮುವೇಲನಿಗೆ, “ನೀನು ಸೌಲನಿಗಾಗಿ ಎಷ್ಟುಕಾಲ ಶೋಕಿಸುವೆ? ನಾನು ಸೌಲನನ್ನು ಇಸ್ರೇಲರ ರಾಜತ್ವದಿಂದ ತಿರಸ್ಕರಿಸಿರುತ್ತೇನೆ. ನೀನು ಕೊಂಬಿನಲ್ಲಿ ಎಣ್ಣೆಯನ್ನು ತುಂಬಿಕೊಂಡು ಬಾ. ನಾನು ನಿನ್ನನ್ನು ಇಷಯನೆಂಬ ಮನುಷ್ಯನ ಬಳಿಗೆ ಕಳುಹಿಸುತ್ತೇನೆ. ಇಷಯನು ಬೆತ್ಲೆಹೇಮಿನಲ್ಲಿ ವಾಸಿಸುತ್ತಿದ್ದನು. ನಾನು ಅವನ ಮಕ್ಕಳಲ್ಲಿ ಒಬ್ಬನನ್ನು ಹೊಸ ರಾಜನನ್ನಾಗಿ ಆರಿಸಿದ್ದೇನೆ” ಎಂದು ಹೇಳಿದನು.

ಅದಕ್ಕೆ ಸಮುವೇಲನು, “ನಾನು ಹೊರಟರೆ ಸೌಲನಿಗೆ ಈ ಸುದ್ದಿಯು ತಿಳಿಯುತ್ತದೆ. ಆಗ ಅವನು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಾನೆ” ಎಂದನು.

ಯೆಹೋವನು, “ಬೆತ್ಲೆಹೇಮಿಗೆ ಹೋಗು. ನಿನ್ನೊಡನೆ ಒಂದು ಎಳೆಕರುವನ್ನು ತೆಗೆದುಕೊಂಡು ಹೋಗು. ‘ನಾನು ಯೆಹೋವನಿಗೆ ಯಜ್ಞವನ್ನರ್ಪಿಸಲು ಬಂದಿದ್ದೇನೆ’ ಎಂದು ಹೇಳು. ಯಜ್ಞಕಾರ್ಯಕ್ಕೆ ಇಷಯನನ್ನು ಆಹ್ವಾನಿಸು. ಆ ಮೇಲೆ ನೀನು ಮಾಡಬೇಕಾದದ್ದನ್ನು ನಾನು ತೋರಿಸುತ್ತೇನೆ. ನಾನು ತೋರಿಸಿದ ಮನುಷ್ಯನಿಗೆ ನೀನು ಅಭಿಷೇಕವನ್ನು ಮಾಡಬೇಕು” ಎಂದು ಹೇಳಿದನು.

ಸಮುವೇಲನು ತನಗೆ ಯೆಹೋವನು ಹೇಳಿದಂತೆ ಮಾಡಿದನು. ಸಮುವೇಲನು ಬೆತ್ಲೆಹೇಮಿಗೆ ಹೋದನು. ಬೆತ್ಲೆಹೇಮಿನ ಹಿರಿಯರು ಭಯದಿಂದ ನಡುಗಿದರು. ಅವರು ಸಮುವೇಲನನ್ನು ಕಂಡು, “ನಿನ್ನ ಆಗಮನವು ಶುಭಕರವಾಗಿದೆಯೇ?” ಎಂದು ಕೇಳಿದರು.

ಸಮುವೇಲನು, “ಹೌದು, ಶುಭಕರವಾಗಿದೆ. ನಾನು ಯೆಹೋವನಿಗೆ ಯಜ್ಞವನ್ನು ಅರ್ಪಿಸಲು ಬಂದಿದ್ದೇನೆ. ನೀವೆಲ್ಲ ಸಿದ್ಧರಾಗಿ ಯಜ್ಞಕಾರ್ಯಕ್ಕಾಗಿ ನನ್ನೊಂದಿಗೆ ಬನ್ನಿ” ಎಂದು ಹೇಳಿದನು. ಸಮುವೇಲನು ಇಷಯನನ್ನೂ ಅವನ ಮಕ್ಕಳನ್ನೂ ಸಿದ್ಧಗೊಳಿಸಿದನು. ನಂತರ ಸಮುವೇಲನು ಅವರನ್ನು ಯಜ್ಞದಲ್ಲಿ ಭಾಗಿಗಳಾಗಲು ಆಹ್ವಾನಿಸಿದನು.

ಇಷಯನು ಮತ್ತು ಅವನ ಮಕ್ಕಳು ಬಂದಾಗ, ಸಮುವೇಲನು ಎಲೀಯಾಬನನ್ನು ನೋಡಿದನು. ಸಮುವೇಲನು ತನ್ನಲ್ಲೇ ಯೋಚಿಸುತ್ತಾ, “ಯೆಹೋವನು ಆಯ್ಕೆ ಮಾಡಿರುವವನು ನಿಜವಾಗಿಯೂ ಅವನೇ ಇರಬೇಕು” ಎಂದುಕೊಂಡನು.

ಆದರೆ ಯೆಹೋವನು ಸಮುವೇಲನಿಗೆ, “ಎಲೀಯಾಬನ ಎತ್ತರವನ್ನಾಗಲಿ ರೂಪವನ್ನಾಗಲಿ ಪರಿಗಣಿಸಬೇಡ. ಯಾಕೆಂದರೆ ನಾನು ಅವನನ್ನು ತಿರಸ್ಕರಿಸಿದ್ದೇನೆ. ಮನುಷ್ಯರಾದರೋ ಹೊರತೋರಿಕೆಯನ್ನು ಪರಿಗಣಿಸುತ್ತಾರೆ; ಯೆಹೋವನಾದರೋ ಹೊರತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ” ಎಂದು ಹೇಳಿದನು.

ನಂತರ ಇಷಯನು ಎರಡನೆಯ ಮಗನಾದ ಅಬೀನಾದಾಬನನ್ನು ಕರೆದನು. ಅಬೀನಾದಾಬನು ಸಮುವೇಲನ ಹತ್ತಿರಕ್ಕೆ ಬಂದನು. ಸಮುವೇಲನು, “ಯೆಹೋವನು ಆರಿಸಿಕೊಂಡಿರುವ ವ್ಯಕ್ತಿ ಇವನಲ್ಲ” ಎಂದು ಹೇಳಿದನು.

ಅನಂತರ ಇಷಯನು ಶಮ್ಮನನ್ನು ಸಮುವೇಲನ ಬಳಿಗೆ ಕಳುಹಿಸಿದನು. ಆದರೆ ಸಮುವೇಲನು, “ಯೆಹೋವನು ಇವನನ್ನೂ ಆರಿಸಲಿಲ್ಲ” ಎಂದನು.

10 ಇಷಯನು ತನ್ನ ಏಳು ಜನ ಮಕ್ಕಳನ್ನು ಸಮುವೇಲನಿಗೆ ತೋರಿಸಿದನು. ಆದರೆ ಸಮುವೇಲನು, “ಯೆಹೋವನು ಇವರಲ್ಲಿ ಯಾರೊಬ್ಬನನ್ನೂ ಆರಿಸಿಕೊಳ್ಳಲಿಲ್ಲ” ಎಂದನು.

11 ನಂತರ ಸಮುವೇಲನು ಇಷಯನನ್ನು, “ನಿನಗೆ ಇರುವ ಮಕ್ಕಳು ಇಷ್ಟೆಯೋ?” ಎಂದು ಕೇಳಿದನು.

ಇಷಯನು, “ಇಲ್ಲ, ನನಗೆ ಇನ್ನೊಬ್ಬ ಕಿರಿಯ ಮಗನಿದ್ದಾನೆ. ಅವನು ಕುರಿಮೇಯಿಸುವದಕ್ಕೆ ಹೋಗಿದ್ದಾನೆ” ಎಂದು ಉತ್ತರಕೊಟ್ಟನು.

ಆಗ ಸಮುವೇಲನು, “ಅವನನ್ನು ಕರೆಕಳುಹಿಸು. ಅವನನ್ನು ಇಲ್ಲಿಗೆ ಬರಹೇಳು. ಅವನು ಬರುವತನಕ ನಾವು ಊಟಕ್ಕೆ ಕುಳಿತುಕೊಳ್ಳುವುದು ಬೇಡ” ಎಂದು ಹೇಳಿದನು.

12 ಇಷಯನು ಕಿರಿಯ ಮಗನನ್ನು ಕರೆತರಲು ಒಬ್ಬನನ್ನು ಕಳುಹಿಸಿದನು. ಇವನಾದರೋ ಕೆಂಬಣ್ಣದವನೂ ಸುಂದರನೇತ್ರನೂ ನೋಟಕ್ಕೆ ರಮಣೀಯನೂ ಆಗಿದ್ದನು.

ಯೆಹೋವನು ಸಮುವೇಲನಿಗೆ, “ಮೇಲೆದ್ದು ನಿಲ್ಲು, ಅವನನ್ನು ಅಭಿಷೇಕಿಸು. ಇವನನ್ನೇ ನಾನು ಆರಿಸಿದ್ದು” ಎಂದು ಆಜ್ಞಾಪಿಸಿದನು.

13 ಸಮುವೇಲನು ಎಣ್ಣೆಯಿದ್ದ ಕೊಂಬನ್ನು ತೆಗೆದುಕೊಂಡು, ಅದರಲ್ಲಿದ್ದ ವಿಶೇಷವಾದ ಎಣ್ಣೆಯನ್ನು ಇಷಯನ ಕಿರಿಮಗನ ಮೇಲೆ, ಅವನ ಸೋದರರ ಎದುರಿನಲ್ಲೇ ಸುರಿದನು. ಆ ದಿನದಿಂದ ಯೆಹೋವನ ಆತ್ಮವು ಮಹಾಶಕ್ತಿಯೊಡನೆ ದಾವೀದನಲ್ಲಿ ನೆಲೆಸಿತು. ಅನಂತರ ಸಮುವೇಲನು ರಾಮಕ್ಕೆ ಹಿಂದಿರುಗಿದನು.

ಕೀರ್ತನೆಗಳು 20

ರಚನೆಗಾರ: ದಾವೀದ.

20 ಇಕ್ಕಟ್ಟಿನಲ್ಲಿ ಯೆಹೋವನು ನಿನ್ನ ಮೊರೆಯನ್ನು ಕೇಳಲಿ.
    ಯಾಕೋಬನ ದೇವರು ನಿನ್ನ ಹೆಸರನ್ನು ಪ್ರಖ್ಯಾತಿಪಡಿಸಲಿ.
ಆತನು ತನ್ನ ಪವಿತ್ರ ಸ್ಥಳದಿಂದ ನಿನಗೆ ಸಹಾಯಮಾಡಲಿ.
    ಚೀಯೋನಿನಿಂದ ನಿನಗೆ ಆಧಾರ ನೀಡಲಿ.
ನೀನು ಅರ್ಪಿಸಿದ ಕಾಣಿಕೆಗಳನ್ನೆಲ್ಲ ಆತನು ಜ್ಞಾಪಿಸಿಕೊಳ್ಳಲಿ.
    ನಿನ್ನ ಯಜ್ಞಗಳನ್ನೆಲ್ಲ ಆತನು ಸ್ವೀಕರಿಸಿಕೊಳ್ಳಲಿ.
ಆತನು ನಿನ್ನ ಬಯಕೆಗಳನ್ನು ಈಡೇರಿಸಲಿ.
    ನಿನ್ನ ಆಲೋಚನೆಗಳನ್ನೆಲ್ಲ ನೆರವೇರಿಸಲಿ.
ದೇವರು ನಿನಗೆ ಸಹಾಯಮಾಡುವಾಗ ಹರ್ಷಿಸುವೆವು.
    ಆತನ ಹೆಸರನ್ನು ಕೊಂಡಾಡೋಣ.
    ಯೆಹೋವನು ನಿನ್ನ ಕೋರಿಕೆಗಳನ್ನೆಲ್ಲ ನೆರವೇರಿಸಲಿ.

ಯೆಹೋವನು ತಾನು ಅಭಿಷೇಕಿಸಿದ ರಾಜನಿಗೆ ಸಹಾಯಮಾಡುತ್ತಾನೆಂದು ಈಗ ನನಗೆ ಗೊತ್ತಾಯಿತು.
    ದೇವರು ತಾನು ಆರಿಸಿಕೊಂಡ ರಾಜನಿಗೆ ಪರಲೋಕದಿಂದ ಉತ್ತರಿಸಿದನು;
    ತನ್ನ ಮಹಾಶಕ್ತಿಯಿಂದ ಅವನನ್ನು ರಕ್ಷಿಸಿದನು.
ಕೆಲವರು ತಮ್ಮ ರಥಗಳಲ್ಲಿ ಭರವಸವಿಡುವರು.
    ಕೆಲವರು ತಮ್ಮ ಸೈನಿಕರುಗಳಲ್ಲಿ ಭರವಸವಿಡುವರು.
    ನಾವಾದರೋ ನಮ್ಮ ದೇವರಾದ ಯೆಹೋವನನ್ನೇ ಜ್ಞಾಪಿಸಿಕೊಳ್ಳುವೆವು.
ಅವರು ಸೋತುಹೋದರು; ಯುದ್ಧದಲ್ಲಿ ಸತ್ತುಹೋದರು;
    ನಾವಾದರೋ ಜಯಗಳಿಸಿದೆವು! ನಾವು ಜಯಪ್ರದರಾಗಿ ನಿಂತುಕೊಳ್ಳುವೆವು!

ಯಾಕೆಂದರೆ ಯೆಹೋವನು ತಾನು ಅಭಿಷೇಕಿಸಿದ ರಾಜನನ್ನು ರಕ್ಷಿಸಿದನು!
    ನಾವು ಸಹಾಯಕ್ಕಾಗಿ ಮೊರೆಯಿಟ್ಟಾಗ ಆತನು ಸದುತ್ತರವನ್ನು ದಯಪಾಲಿಸಿದನು.

2 ಕೊರಿಂಥದವರಿಗೆ 5:6-10

ಆದ್ದರಿಂದ ಯಾವಾಗಲೂ ಧೈರ್ಯದಿಂದಿದ್ದೇವೆ. ಈ ದೇಹದಲ್ಲಿ ವಾಸವಾಗಿರುವ ತನಕ ಪ್ರಭುವಿನಿಂದ ದೂರವಾಗಿರುತ್ತೇವೆಂಬುದು ನಮಗೆ ತಿಳಿದಿದೆ. ನಾವು ಯಾವುದನ್ನು ನೋಡುತ್ತಿದ್ದೇವೋ ಅದರಿಂದ ಜೀವಿಸುತ್ತಿಲ್ಲ. ಆದರೆ ಯಾವುದನ್ನು ನಂಬಿದ್ದೇವೋ ಅದರಿಂದ ಜೀವಿಸುತ್ತಿದ್ದೇವೆ. ಆದ್ದರಿಂದ ನಾವು ಧೈರ್ಯವುಳ್ಳವರಾಗಿದ್ದು ದೇಹವನ್ನು ಬಿಟ್ಟು ಪ್ರಭುವಿನೊಂದಿಗೆ ವಾಸಿಸುವುದನ್ನೇ ನಿಜವಾಗಿಯೂ ಅಪೇಕ್ಷಿಸುತ್ತೇವೆ. ದೇವರನ್ನು ಮೆಚ್ಚಿಸಬೇಕೆಂಬುದೊಂದೇ ನಮಗಿರುವ ಉದ್ದೇಶವಾಗಿದೆ. ನಾವು ನಮ್ಮ ದೇಹದಲ್ಲಿ ಇಲ್ಲಿ ವಾಸವಾಗಿರುವಾಗಲೂ ಪ್ರಭುವಿನೊಂದಿಗೆ ಅಲ್ಲಿ ವಾಸವಾಗಿರುವಾಗಲೂ ಆತನನ್ನು ಮೆಚ್ಚಿಸಬೇಕೆಂಬುದೊಂದೇ ನಮ್ಮ ಬಯಕೆಯಾಗಿದೆ. 10 ನಾವೆಲ್ಲರೂ ನ್ಯಾಯ ವಿಚಾರಣೆಗಾಗಿ ಕ್ರಿಸ್ತನ ಮುಂದೆ ನಿಂತುಕೊಳ್ಳಲೇಬೇಕು. ಪ್ರತಿಯೊಬ್ಬನು ಇಹಲೋಕದ ದೇಹದಲ್ಲಿ ವಾಸವಾಗಿದ್ದಾಗ ಮಾಡಿದ ಒಳ್ಳೆಯದಕ್ಕಾಗಲಿ ಕೆಟ್ಟದಕ್ಕಾಗಲಿ ಪ್ರತಿಫಲವನ್ನು ಹೊಂದುವನು.

2 ಕೊರಿಂಥದವರಿಗೆ 5:11-13

ಜನರನ್ನು ದೇವರ ಸ್ನೇಹಿತರನ್ನಾಗಿಸಲು ಮಾಡತಕ್ಕ ಸಹಾಯ

11 ಪ್ರಭುವಿನ ಭಯ ಎಂದರೇನೆಂಬುದು ನಮಗೆ ತಿಳಿದಿದೆ. ಆದ್ದರಿಂದ ಸತ್ಯವನ್ನು ಸ್ವೀಕರಿಸಿಕೊಳ್ಳುವಂತೆ ಜನರಿಗೆ ಸಹಾಯ ಮಾಡಲು ನಾವು ಪ್ರಯತ್ನಿಸುತ್ತೇವೆ. ನಾವು ಎಂಥವರೆಂದು ದೇವರು ಚೆನ್ನಾಗಿ ಬಲ್ಲನು. ನೀವು ಸಹ ನಿಮ್ಮ ಹೃದಯಗಳಲ್ಲಿ ನಮ್ಮನ್ನು ತಿಳಿದುಕೊಂಡಿದ್ದೀರೆಂದು ನಂಬುತ್ತೇವೆ. 12 ನಾವು ನಮ್ಮನ್ನು ನಿಮ್ಮ ಮುಂದೆ ಮತ್ತೊಮ್ಮೆ ನಿರೂಪಿಸಿಕೊಳ್ಳುತ್ತಿಲ್ಲ. ಆದರೆ ನಮ್ಮ ಬಗ್ಗೆ ನಿಮಗೆ ಹೇಳುತ್ತಿದ್ದೇವೆಯಷ್ಟೆ. ನೀವು ನಮ್ಮ ವಿಷಯದಲ್ಲಿ ಹೆಮ್ಮೆಪಡುವುದಕ್ಕೆ ನಿಮಗೆ ಕಾರಣಗಳನ್ನು ಕೊಡುತ್ತಿದ್ದೇವೆ. ಆಗ, ಕಣ್ಣಿಗೆ ಕಾಣುವ ಸಂಗತಿಗಳ ಬಗ್ಗೆ ಹೆಮ್ಮೆಪಡುವ ಜನರಿಗೆ ಕೊಡತಕ್ಕ ಉತ್ತರವು ನಿಮ್ಮಲಿರುವುದು. ಆ ಜನರು ಒಬ್ಬ ವ್ಯಕ್ತಿಯ ಹೃದಯದ ಸ್ಥಿತಿಯ ಬಗ್ಗೆ ಚಿಂತಿಸುವುದಿಲ್ಲ. 13 ನಾವು ಹುಚ್ಚರಾಗಿದ್ದರೆ ಅದು ದೇವರಿಗೋಸ್ಕರವಾಗಿಯೇ. ನಮಗೆ ಸ್ವಸ್ಥಬುದ್ಧಿಯಿದ್ದರೆ ಅದು ನಿಮಗೋಸ್ಕರವಾಗಿಯೇ.

2 ಕೊರಿಂಥದವರಿಗೆ 5:14-17

14 ಕ್ರಿಸ್ತನ ಪ್ರೀತಿಯು ನಮ್ಮನ್ನು ಒತ್ತಾಯಿಸುತ್ತದೆ. ಏಕೆಂದರೆ, ಎಲ್ಲಾ ಜನರಿಗೋಸ್ಕರವಾಗಿ ಆತನು ಸತ್ತನೆಂಬುದು ನಮಗೆ ಗೊತ್ತಿದೆ. ಆದ್ದರಿಂದ ಎಲ್ಲರೂ ಸತ್ತುಹೋದರು. 15 ಜೀವಿಸುವವರು ಇನ್ನು ಮೇಲೆ ತಮಗೋಸ್ಕರ ಜೀವಿಸಬಾರದೆಂದು ಕ್ರಿಸ್ತನು ಎಲ್ಲಾ ಜನರಿಗಾಗಿ ಸತ್ತನು. ಆ ಜನರು ತನಗೋಸ್ಕರ ಜೀವಿಸಲೆಂದು ಆತನು ಅವರಿಗೋಸ್ಕರ ಸತ್ತನು ಮತ್ತು ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದನು.

16 ಹೀಗಿರಲಾಗಿ, ಲೋಕವು ಜನರ ವಿಷಯವಾಗಿ ಯೋಚಿಸುವಂತೆ ಇಂದಿನಿಂದ ನಾವು ಯಾರ ಬಗ್ಗೆಯೂ ಯೋಚಿಸುವುದಿಲ್ಲ. ಲೋಕವು ಯೋಚಿಸುವಂತೆ ಹಿಂದಿನ ಕಾಲದಲ್ಲಿ ನಾವು ಕ್ರಿಸ್ತನ ಬಗ್ಗೆ ಯೋಚಿಸಿಕೊಂಡಿದ್ದೆವು. ಆದರೆ ಈಗ ನಾವು ಆ ರೀತಿಯಲ್ಲಿ ಯೋಚಿಸುವುದಿಲ್ಲ. 17 ಯಾವನಾದರೂ ಕ್ರಿಸ್ತನಲ್ಲಿದ್ದರೆ, ಅವನು ಹೊಸ ಸೃಷ್ಟಿಯಾಗಿದ್ದಾನೆ. ಹಳೆಯ ಸಂಗತಿಗಳೆಲ್ಲಾ ಅಳಿದು ಹೋದವು; ಪ್ರತಿಯೊಂದೂ ಹೊಸದಾಯಿತು.

ಮಾರ್ಕ 4:26-34

ಬಿತ್ತಲ್ಪಟ್ಟ ಬೀಜವನ್ನು ಕುರಿತು ಯೇಸು ಹೇಳಿದ ಸಾಮ್ಯ

26 ನಂತರ ಯೇಸು, “ದೇವರ ರಾಜ್ಯವು ಭೂಮಿಯಲ್ಲಿ ಬೀಜ ಬಿತ್ತಿದ ಮನುಷ್ಯನಂತಿದೆ. 27 ಬೀಜವು ಹಗಲಿರುಳು ಬೆಳೆಯುತ್ತದೆ. ರೈತನು ಮಲಗಿರುವಾಗಲೂ ಎಚ್ಚರದಿಂದಿರುವಾಗಲೂ ಬೀಜ ಬೆಳೆಯುತ್ತಲೇ ಇರುವುದು. ಬೀಜ ಹೇಗೆ ಬೆಳೆಯುತ್ತದೆಂಬುದು ರೈತನಿಗೆ ತಿಳಿಯುವುದಿಲ್ಲ. 28 ಭೂಮಿಯು ಮೊದಲು ಸಸಿಯನ್ನೂ ಅನಂತರ ಹೊಡೆಯನ್ನೂ ತರುವಾಯ ತೆನೆತುಂಬ ಕಾಳನ್ನೂ ತನ್ನಷ್ಟಕ್ಕೇ ತಾನೇ ಉತ್ಪತ್ತಿಮಾಡುತ್ತದೆ. 29 ತೆನೆಯು ಬಲಿತಾಗ ರೈತನು ಗಿಡವನ್ನು ಕೊಯ್ಯುವನು. ಇದನ್ನೇ ಸುಗ್ಗಿಕಾಲ ಎನ್ನುವರು” ಎಂದು ಹೇಳಿದನು.

ದೇವರ ರಾಜ್ಯವು ಸಾಸಿವೆ ಕಾಳಿನಂತಿದೆ

(ಮತ್ತಾಯ 13:31-32,34-35; ಲೂಕ 13:18-19)

30 ನಂತರ ಯೇಸು, “ದೇವರ ರಾಜ್ಯದ ಬಗ್ಗೆ ವಿವರಿಸಲು ನಾನು ನಿಮಗೆ ಯಾವ ಸಾಮ್ಯವನ್ನು ಹೇಳಲಿ? 31 ದೇವರ ರಾಜ್ಯವು ಸಾಸಿವೆ ಕಾಳಿನಂತಿರುತ್ತದೆ. ನೀವು ಭೂಮಿಯಲ್ಲಿ ಬಿತ್ತುವ ಕಾಳುಗಳಲ್ಲಿ ಸಾಸಿವೆ ಕಾಳು ಅತ್ಯಂತ ಸಣ್ಣದಾಗಿದೆ. 32 ಆದರೆ ನೀವು ಈ ಕಾಳನ್ನು ಬಿತ್ತಿದಾಗ, ಅದು ಬೆಳೆದು, ನಿಮ್ಮ ತೋಟದ ಇತರ ಗಿಡಗಳಿಗಿಂತ ಅತಿ ದೊಡ್ಡದಾಗುತ್ತದೆ. ಅದಕ್ಕೆ ದೊಡ್ಡದೊಡ್ಡ ರೆಂಬೆಗಳಿರುತ್ತವೆ. ಕಾಡಿನ ಹಕ್ಕಿಗಳು ಬಂದು, ಅಲ್ಲಿ ಗೂಡುಗಳನ್ನು ಕಟ್ಟಿಕೊಂಡು ಸೂರ್ಯನ ತಾಪದಿಂದ ತಪ್ಪಿಸಿಕೊಳ್ಳುತ್ತವೆ” ಎಂದು ಹೇಳಿದನು.

33 ಯೇಸು ಇಂಥ ಅನೇಕ ಸಾಮ್ಯಗಳ ಮೂಲಕ ಜನರಿಗೆ ಅರ್ಥವಾಗುವಂತೆ ಉಪದೇಶಿಸಿದನು. 34 ಯೇಸುವು ಜನರಿಗೆ ಯಾವಾಗಲೂ ಸಾಮ್ಯಗಳ ಮೂಲಕ ಉಪದೇಶಿಸಿದನು. ಆದರೆ ತನ್ನ ಶಿಷ್ಯರು ಮಾತ್ರ ಇರುವಾಗ ಎಲ್ಲವನ್ನೂ ಅವರಿಗೆ ವಿವರಿಸಿ ತಿಳಿಸುತ್ತಿದ್ದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International