Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 20

ರಚನೆಗಾರ: ದಾವೀದ.

20 ಇಕ್ಕಟ್ಟಿನಲ್ಲಿ ಯೆಹೋವನು ನಿನ್ನ ಮೊರೆಯನ್ನು ಕೇಳಲಿ.
    ಯಾಕೋಬನ ದೇವರು ನಿನ್ನ ಹೆಸರನ್ನು ಪ್ರಖ್ಯಾತಿಪಡಿಸಲಿ.
ಆತನು ತನ್ನ ಪವಿತ್ರ ಸ್ಥಳದಿಂದ ನಿನಗೆ ಸಹಾಯಮಾಡಲಿ.
    ಚೀಯೋನಿನಿಂದ ನಿನಗೆ ಆಧಾರ ನೀಡಲಿ.
ನೀನು ಅರ್ಪಿಸಿದ ಕಾಣಿಕೆಗಳನ್ನೆಲ್ಲ ಆತನು ಜ್ಞಾಪಿಸಿಕೊಳ್ಳಲಿ.
    ನಿನ್ನ ಯಜ್ಞಗಳನ್ನೆಲ್ಲ ಆತನು ಸ್ವೀಕರಿಸಿಕೊಳ್ಳಲಿ.
ಆತನು ನಿನ್ನ ಬಯಕೆಗಳನ್ನು ಈಡೇರಿಸಲಿ.
    ನಿನ್ನ ಆಲೋಚನೆಗಳನ್ನೆಲ್ಲ ನೆರವೇರಿಸಲಿ.
ದೇವರು ನಿನಗೆ ಸಹಾಯಮಾಡುವಾಗ ಹರ್ಷಿಸುವೆವು.
    ಆತನ ಹೆಸರನ್ನು ಕೊಂಡಾಡೋಣ.
    ಯೆಹೋವನು ನಿನ್ನ ಕೋರಿಕೆಗಳನ್ನೆಲ್ಲ ನೆರವೇರಿಸಲಿ.

ಯೆಹೋವನು ತಾನು ಅಭಿಷೇಕಿಸಿದ ರಾಜನಿಗೆ ಸಹಾಯಮಾಡುತ್ತಾನೆಂದು ಈಗ ನನಗೆ ಗೊತ್ತಾಯಿತು.
    ದೇವರು ತಾನು ಆರಿಸಿಕೊಂಡ ರಾಜನಿಗೆ ಪರಲೋಕದಿಂದ ಉತ್ತರಿಸಿದನು;
    ತನ್ನ ಮಹಾಶಕ್ತಿಯಿಂದ ಅವನನ್ನು ರಕ್ಷಿಸಿದನು.
ಕೆಲವರು ತಮ್ಮ ರಥಗಳಲ್ಲಿ ಭರವಸವಿಡುವರು.
    ಕೆಲವರು ತಮ್ಮ ಸೈನಿಕರುಗಳಲ್ಲಿ ಭರವಸವಿಡುವರು.
    ನಾವಾದರೋ ನಮ್ಮ ದೇವರಾದ ಯೆಹೋವನನ್ನೇ ಜ್ಞಾಪಿಸಿಕೊಳ್ಳುವೆವು.
ಅವರು ಸೋತುಹೋದರು; ಯುದ್ಧದಲ್ಲಿ ಸತ್ತುಹೋದರು;
    ನಾವಾದರೋ ಜಯಗಳಿಸಿದೆವು! ನಾವು ಜಯಪ್ರದರಾಗಿ ನಿಂತುಕೊಳ್ಳುವೆವು!

ಯಾಕೆಂದರೆ ಯೆಹೋವನು ತಾನು ಅಭಿಷೇಕಿಸಿದ ರಾಜನನ್ನು ರಕ್ಷಿಸಿದನು!
    ನಾವು ಸಹಾಯಕ್ಕಾಗಿ ಮೊರೆಯಿಟ್ಟಾಗ ಆತನು ಸದುತ್ತರವನ್ನು ದಯಪಾಲಿಸಿದನು.

1 ಸಮುವೇಲನು 9:15-27

15 ಹಿಂದಿನ ದಿನ, ಯೆಹೋವನು ಸಮುವೇಲನಿಗೆ, 16 “ನಾಳೆ ಇದೇ ಸಮಯಕ್ಕೆ ನಾನು ನಿನ್ನ ಬಳಿಗೆ ಒಬ್ಬ ಮನುಷ್ಯನನ್ನು ಕಳುಹಿಸುತ್ತೇನೆ. ಅವನು ಬೆನ್ಯಾಮೀನ್ ಕುಟುಂಬಕ್ಕೆ ಸೇರಿದವನು. ನೀನು ಅವನನ್ನು ಅಭಿಷೇಕಿಸು. ನನ್ನ ಜನರಾದ ಇಸ್ರೇಲರಿಗೆ ಅವನು ರಾಜನಾಗುತ್ತಾನೆ. ಈ ಮನುಷ್ಯನು ನನ್ನ ಜನರನ್ನು ಫಿಲಿಷ್ಟಿಯರಿಂದ ರಕ್ಷಿಸುತ್ತಾನೆ. ನನ್ನ ಜನರ ಸಂಕಟವನ್ನು ನಾನು ನೋಡಿದ್ದೇನೆ; ನನ್ನ ಜನರ ಗೋಳನ್ನು ನಾನು ಆಲಿಸಿದ್ದೇನೆ” ಎಂದು ತಿಳಿಸಿದ್ದನು.

17 ಸಮುವೇಲನು ಸೌಲನನ್ನು ಕಂಡಾಗ ಯೆಹೋವನು ಅವನಿಗೆ, “ನಾನು ನಿನಗೆ ಹೇಳಿದ ಮನುಷ್ಯ ಇವನೇ. ಇವನು ನನ್ನ ಜನರನ್ನು ಆಳುತ್ತಾನೆ” ಎಂದು ಹೇಳಿದನು.

18 ಸೌಲನು ಹೊರಬಾಗಿಲಿನ ಬಳಿಯಿಂದ ಸಮುವೇಲನ ಬಳಿಗೆ ಬಂದನು. ಸೌಲನು ಸಮುವೇಲನನ್ನು, “ದರ್ಶಿಯ ಮನೆ ಎಲ್ಲಿದೆ ಎಂಬುದನ್ನು ದಯವಿಟ್ಟು ನನಗೆ ಹೇಳಿ” ಎಂದು ಕೇಳಿದನು.

19 ಸಮುವೇಲನು, “ನಾನೇ ಆ ದರ್ಶಿ. ನನ್ನೊಡನೆ ಆರಾಧನೆಯ ಸ್ಥಳಕ್ಕೆ ಬಾ. ನೀನು ಮತ್ತು ನಿನ್ನ ಸೇವಕ ಈ ದಿನ ನನ್ನ ಜೊತೆಯಲ್ಲಿ ಊಟಮಾಡಬೇಕು. ನಾನು ನಿಮ್ಮನ್ನು ನಾಳೆ ಬೆಳಿಗ್ಗೆ ನಿಮ್ಮ ಮನೆಗೆ ಕಳುಹಿಸುತ್ತೇನೆ. ನಿಮ್ಮ ಪ್ರಶ್ನೆಗಳಿಗೆಲ್ಲ ಉತ್ತರ ಕೊಡುತ್ತೇನೆ. 20 ಮೂರು ದಿನಗಳ ಹಿಂದೆ ಕಳೆದು ಹೋದ ನಿನ್ನ ಕತ್ತೆಗಳಿಗಾಗಿ ಚಿಂತಿಸಬೇಡ. ಅವುಗಳೆಲ್ಲ ಸಿಕ್ಕಿವೆ. ಈಗ ಇಸ್ರೇಲರಿಗೆಲ್ಲ ನೀನು ಬೇಕಾಗಿರುವೆ. ಅವರಿಗೆ ನೀನು ಮತ್ತು ನಿನ್ನ ತಂದೆಯ ಕುಟುಂಬದ ಜನರೆಲ್ಲ ಬೇಕಾಗಿದ್ದಾರೆ” ಎಂದು ಹೇಳಿದನು.

21 ಅದಕ್ಕೆ ಸೌಲನು, “ನಾನು ಬೆನ್ಯಾಮೀನ್ ಕುಲದವನು. ಅದು ಇಸ್ರೇಲರಲ್ಲಿ ಒಂದು ಚಿಕ್ಕ ಕುಲ. ನನ್ನ ಕುಟುಂಬವು ಬೆನ್ಯಾಮೀನ್ ಕುಲದಲ್ಲಿ ತೀರ ಕನಿಷ್ಠವಾದುದು. ಇಸ್ರೇಲರಿಗೆ ನಾನು ಬೇಕಾಗಿದ್ದೇನೆ ಎಂದು ಏಕೆ ಹೇಳುತ್ತಿರುವೆ?” ಎಂದು ಕೇಳಿದನು.

22 ಆಗ ಸಮುವೇಲನು ಸೌಲನನ್ನು ಮತ್ತು ಅವನ ಸೇವಕನನ್ನು ಊಟದ ಸ್ಥಳಕ್ಕೆ ಕರೆದುಕೊಂಡು ಹೋದನು. ಒಟ್ಟಿಗೆ ಊಟ ಮಾಡಲು ಮತ್ತು ಯಜ್ಞವಸ್ತುಗಳನ್ನು ಹಂಚಿಕೊಳ್ಳಲು ಸುಮಾರು ಮೂವತ್ತು ಜನರನ್ನು ಆಹ್ವಾನಿಸಲಾಗಿತ್ತು. ಸಮುವೇಲನು ಸೌಲನಿಗೆ ಮತ್ತು ಅವನ ಸೇವಕನಿಗೆ ಊಟದ ಮೇಜಿನಲ್ಲಿ ಅತೀ ಮುಖ್ಯವಾದ ಸ್ಥಳವನ್ನು ನೀಡಿದನು. 23 ಸಮುವೇಲನು ಅಡಿಗೆಯವನಿಗೆ, “ನಾನು ನಿನಗೆ ಕೊಟ್ಟಿದ್ದ ಮಾಂಸವನ್ನು ತೆಗೆದುಕೊಂಡು ಬಾ; ಪ್ರತ್ಯೇಕವಾಗಿಡಬೇಕೆಂದು ನಾನು ನಿನಗೆ ಹೇಳಿದ್ದ ಭಾಗವೇ ಅದು” ಎಂದು ಹೇಳಿದನು.

24 ಅಡಿಗೆಯವನು ತೊಡೆಯ ಮಾಂಸವನ್ನು ತೆಗೆದುಕೊಂಡು ಬಂದು ಸೌಲನ ಎದುರಿಗೆ ಮೇಜಿನ ಮೇಲಿಟ್ಟನು. ಸಮುವೇಲನು, “ನಾನು ನಿನಗಾಗಿ ಈ ಮಾಂಸವನ್ನು ಪ್ರತ್ಯೇಕವಾಗಿರಿಸಿದ್ದೇನೆ. ಇದನ್ನು ತಿನ್ನು, ಏಕೆಂದರೆ ಇದನ್ನು ಈ ವಿಶೇಷವಾದ ಸಂದರ್ಭದಲ್ಲಿ ನಿನಗೆ ಕೊಡುವುದಕ್ಕಾಗಿಯೇ ಪ್ರತ್ಯೇಕಿಸಲಾಗಿತ್ತು” ಎಂದು ಹೇಳಿದನು. ಆದ್ದರಿಂದ ಸೌಲನು ಸಮುವೇಲನ ಜೊತೆಯಲ್ಲಿ ಆ ದಿನ ಊಟಮಾಡಿದನು.

25 ಅವರು ಊಟಮಾಡಿದ ನಂತರ, ಆರಾಧನಾ ಸ್ಥಳದಿಂದ ಇಳಿದುಬಂದು, ಪಟ್ಟಣಕ್ಕೆ ಹಿಂದಿರುಗಿದರು. ಸಮುವೇಲನು ಮಲಗಲು ಸೌಲನಿಗಾಗಿ ಮಾಳಿಗೆಯ ಮೇಲೆ ಹಾಸಿಗೆಯನ್ನು ಸಿದ್ಧಪಡಿಸಿದನು. ಸೌಲನು ಅಲ್ಲಿ ಮಲಗಿಕೊಂಡನು.

26 ಮಾರನೆಯ ದಿನ ಬೆಳಗಿನ ಜಾವ, ಸಮುವೇಲನು ಮಾಳಿಗೆಯ ಮೇಲೆ ಮಲಗಿದ್ದ ಸೌಲನನ್ನು ಎಬ್ಬಿಸಿ, “ಎದ್ದೇಳು, ನಿನ್ನನ್ನು ಕಳುಹಿಸಿಕೊಡುತ್ತೇನೆ” ಎಂದು ಹೇಳಿದನು. ಸೌಲನು ಮೇಲೆದ್ದನು ಮತ್ತು ಸಮುವೇಲನೊಂದಿಗೆ ಮನೆಯಿಂದ ಹೊರಗೆ ಹೊರಟನು.

27 ಸೌಲನೂ ಅವನ ಸೇವಕನೂ ಸಮುವೇಲನೂ ಪಟ್ಟಣದ ಅಂಚಿನಲ್ಲಿ ಒಟ್ಟಾಗಿ ನಡೆಯುತ್ತಿದ್ದಾಗ, ಸಮುವೇಲನು ಸೌಲನಿಗೆ, “ನಿನ್ನ ಸೇವಕನಿಗೆ ನಮ್ಮಿಂದ ಮುಂದೆ ಹೋಗಲು ತಿಳಿಸು. ನಾನು ದೇವರ ಸಂದೇಶವನ್ನು ನಿನಗೆ ತಿಳಿಸಬೇಕಾಗಿದೆ” ಎಂದು ಹೇಳಿದನು. ಆದಕಾರಣ ಸೇವಕನು ಅವರಿಂದ ಮುಂದೆ ನಡೆದನು.

ಇಬ್ರಿಯರಿಗೆ 2:5-9

ಜನರನ್ನು ರಕ್ಷಿಸಲು ಕ್ರಿಸ್ತನು ಜನರಂತೆಯೇ ಆದನು

ಮುಂದೆ ಬರುವ ನೂತನ ಲೋಕವನ್ನು ಆಳಲು ದೇವರು ದೇವದೂತರನ್ನು ಆರಿಸಲಿಲ್ಲ. ಈಗ ನಾವು ನಿಮಗೆ ಹೇಳುತ್ತಿರುವುದು ಆ ಲೋಕದ ಕುರಿತಾಗಿಯೇ. ಅದನ್ನು ಪವಿತ್ರ ಗ್ರಂಥದಲ್ಲಿ ಬರೆಯಲಾಗಿದೆ:

“ದೇವರೇ, ನೀನು ಮಾನವರನ್ನು ಏಕೆ ನೆನಪುಮಾಡಿಕೊಳ್ಳಬೇಕು?
ನೀನು ಮನುಷ್ಯನಿಗೋಸ್ಕರ ಏಕೆ ಚಿಂತಿಸಬೇಕು?
    ಅವನು ಅಷ್ಟೊಂದು ಮುಖ್ಯನಾದವನೇ?
ಕೇವಲ ಸ್ವಲ್ಪಕಾಲದವರೆಗೆ ನೀನು ಅವನನ್ನು ದೇವದೂತರಿಗಿಂತ ಸ್ವಲ್ಪವೇ ಕಡಿಮೆ ಮಾಡಿದೆ.
    ನೀನು ಅವನಿಗೆ ವೈಭವವನ್ನೂ ಗೌರವವನ್ನೂ ಕಿರೀಟವಾಗಿ ಇಟ್ಟಿರುವೆ.
ನೀನು ಎಲ್ಲವನ್ನು ಅವನಿಗೆ ಅಧೀನಗೊಳಿಸಿರುವೆ.”(A)

ದೇವರು ಎಲ್ಲವನ್ನೂ ಆತನಿಗೆ ಅಧೀನಗೊಳಿಸಿದ್ದರೆ, ಆತನು ಆಳದೆ ಇರುವಂಥದ್ದು ಒಂದಾದರೂ ಇಲ್ಲ. ಆದರೆ ಸಮಸ್ತದ ಮೇಲೆ ಅವನು ಆಳ್ವಿಕೆ ಮಾಡುತ್ತಿರುವುದು ನಮಗಿನ್ನೂ ಕಾಣುತ್ತಿಲ್ಲ. ಕೇವಲ ಸ್ವಲ್ಪಕಾಲದವರೆಗೆ ಯೇಸುವು ದೇವದೂತರಿಗಿಂತ ಸ್ವಲ್ಪವೇ ಕಡಿಮೆಯಾಗಿ ಮಾಡಲ್ಪಟ್ಟನು. ಆದರೆ ನಾವೀಗ ವೈಭವ, ಗೌರವಗಳೆಂಬ ಕಿರೀಟ ಧರಿಸಿರುವ ಆತನನ್ನು ನೋಡುತ್ತೇವೆ. ಏಕೆಂದರೆ ದೇವರ ಕೃಪೆಯ ನಿಮಿತ್ತ ಆತನು ಎಲ್ಲರಿಗೋಸ್ಕರ ಸಂಕಟ ಅನುಭವಿಸಿ ಮರಣಹೊಂದಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International