Revised Common Lectionary (Semicontinuous)
99 ಯೆಹೋವನೇ ರಾಜನು!
ಜನಾಂಗಗಳು ಭಯದಿಂದ ನಡುಗಲಿ.
ಆತನು ಕೆರೂಬಿಗಳ ಮೇಲೆ ರಾಜನಂತೆ ಕುಳಿತುಕೊಂಡಿದ್ದಾನೆ.
ಭೂಮಿಯು ಭಯದಿಂದ ನಡುಗಲಿ.
2 ಚೀಯೋನಿನ ಯೆಹೋವನು ದೊಡ್ಡವನು!
ಆತನು ಜನಾಂಗಗಳಿಗೆಲ್ಲಾ ಮಹಾನಾಯಕನಾಗಿದ್ದಾನೆ.
3 ಅವರೆಲ್ಲರೂ ನಿನ್ನ ಭಯಂಕರವಾದ ಹೆಸರನ್ನು ಕೊಂಡಾಡಲಿ.
ಆತನೇ ಪರಿಶುದ್ಧನು.
4 ಶಕ್ತಿಪೂರ್ಣನಾದ ರಾಜನು ನ್ಯಾಯವನ್ನು ಪ್ರೀತಿಸುವನು.
ದೇವರೇ, ನೀತಿಯನ್ನು ಸೃಷ್ಟಿಸಿದಾತನು ನೀನೇ.
ಯಾಕೋಬ್ಯರಲ್ಲಿ ನ್ಯಾಯನೀತಿಗಳನ್ನು ಸ್ಥಾಪಿಸಿದವನು ನೀನೇ.
5 ನಮ್ಮ ದೇವರಾದ ಯೆಹೋವನನ್ನು ಕೊಂಡಾಡಿರಿ,
ಆತನ ಪವಿತ್ರ ಪಾದಪೀಠಕ್ಕೆ[a] ಅಡ್ಡಬೀಳಿರಿ.
6 ಮೋಶೆಯೂ ಆರೋನನೂ ದೇವರ ಯಾಜಕರುಗಳಾಗಿದ್ದರು.
ಸಮುವೇಲನೂ ಆತನ ಹೆಸರಿನಲ್ಲಿ ಪ್ರಾರ್ಥಿಸಿದನು.
ಆತನು ಅವರೆಲ್ಲರ ಪ್ರಾರ್ಥನೆಗಳಿಗೆ ಉತ್ತರಿಸಿದನು.
7 ಆತನು ಮೇಘಸ್ತಂಭದಿಂದ ಅವರೊಂದಿಗೆ ಮಾತಾಡಿದನು.
ಅವರು ಆಜ್ಞೆಗಳಿಗೆ ವಿಧೇಯರಾದರು.
ಆತನು ಅವರಿಗೆ ಧರ್ಮಶಾಸ್ತ್ರವನ್ನು ಕೊಟ್ಟನು.
8 ನಮ್ಮ ದೇವರಾದ ಯೆಹೋವನೇ, ನೀನು ಅವರ ಪ್ರಾರ್ಥನೆಗಳಿಗೆ ಉತ್ತರಿಸಿದೆ.
ನೀನು ಕ್ಷಮಿಸುವ ದೇವರೆಂದೂ
ದುಷ್ಕೃತ್ಯಗಳಿಗೆ ದಂಡಿಸುವವನೆಂದೂ ಅವರಿಗೆ ತೋರ್ಪಡಿಸಿದೆ.
9 ನಮ್ಮ ದೇವರಾದ ಯೆಹೋವನನ್ನು ಕೊಂಡಾಡಿರಿ.
ಆತನ ಪವಿತ್ರ ಪರ್ವತದ ಕಡೆಗೆ ಅಡ್ಡಬಿದ್ದು ಆತನನ್ನು ಆರಾಧಿಸಿರಿ.
ನಮ್ಮ ದೇವರಾದ ಯೆಹೋವನೇ ಪರಿಶುದ್ಧನು!
11 ಎಲ್ಕಾನ ಮತ್ತು ಅವನ ಕುಟುಂಬದವರು ರಾಮಾತಯಿಮಿನಲ್ಲಿದ್ದ ತಮ್ಮ ಮನೆಗೆ ಹಿಂತಿರುಗಿದರು. ಬಾಲಕನು ಶೀಲೋವಿನಲ್ಲಿಯೇ ಉಳಿದುಕೊಂಡನು ಮತ್ತು ಯಾಜಕನಾದ ಏಲಿಯ ಮಾರ್ಗದರ್ಶನದಲ್ಲಿ ಯೆಹೋವನ ಸೇವೆಮಾಡಿದನು.
ಏಲಿಯ ದುಷ್ಟ ಮಕ್ಕಳು
12 ಏಲಿಯ ಮಕ್ಕಳು ದುಷ್ಟರಾಗಿದ್ದರು. ಅವರು ಯೆಹೋವನನ್ನು ಲಕ್ಷಿಸುತ್ತಿರಲಿಲ್ಲ. 13 ಯಾಜಕರು ಜನರೊಡನೆ ಯಾವ ರೀತಿ ವರ್ತಿಸಬೇಕು ಎಂಬುದನ್ನು ಅವರು ಲಕ್ಷಿಸುತ್ತಿರಲಿಲ್ಲ. ಯಾಜಕರು ಜನರಿಗಾಗಿ ಮಾಡಬೇಕಾದ ಕಾರ್ಯವೆಂದರೆ: ಒಬ್ಬ ವ್ಯಕ್ತಿಯು ಪ್ರತಿಸಲ ಯಜ್ಞವನ್ನರ್ಪಿಸಲು ಬಂದಾಗ ಯಾಜಕರು ಯಜ್ಞಮಾಂಸವನ್ನು ಒಂದು ಮಡಕೆಯಲ್ಲಿ ಬೇಯಿಸಬೇಕು. ಯಾಜಕರ ಸೇವಕನು ಕೈಯಲ್ಲಿ ತ್ರಿಶೂಲವನ್ನು ಹಿಡಿದುಕೊಂಡು ಬರಬೇಕು. 14 ಯಾಜಕರ ಸೇವಕನು ತ್ರಿಶೂಲವನ್ನು ಕೊಪ್ಪರಿಗೆಯಲ್ಲಾಗಲಿ ತಪ್ಪಲೆಯಲ್ಲಾಗಲಿ ಗಡಿಗೆಯಲ್ಲಾಗಲಿ ಭಾಂಡದಲ್ಲಾಗಲಿ ಚುಚ್ಚಿ ಹೊರ ತೆಗೆದಾಗ, ಅದರೊಂದಿಗೆ ಬರುವ ಮಾಂಸವನ್ನು ಮಾತ್ರ ಯಾಜಕನು ಸ್ವೀಕರಿಸಬೇಕು. ಶೀಲೋವಿಗೆ ಯಜ್ಞವನ್ನರ್ಪಿಸಲು ಬರುವ ಎಲ್ಲ ಇಸ್ರೇಲರೊಂದಿಗೆ ಇದೇ ರೀತಿ ಮಾಡಬೇಕಿತ್ತು. 15 ಆದರೆ ಏಲಿಯ ಮಕ್ಕಳು ಈ ರೀತಿ ಮಾಡುತ್ತಿರಲಿಲ್ಲ. ಯಜ್ಞವೇದಿಕೆಯ ಮೇಲೆ ಕೊಬ್ಬನ್ನು ಹೋಮ ಮಾಡುವುದಕ್ಕಿಂತ[a] ಮೊದಲೇ ಅವರ ಸೇವಕರು ಯಜ್ಞಗಳನ್ನು ಅರ್ಪಿಸುವ ಜನರ ಬಳಿಗೆ ಹೋಗುತ್ತಿದ್ದರು. ಯಾಜಕನ ಸೇವಕನು, “ಯಾಜಕನಿಗೆ ಕರಿದು ಕೊಡಲು ಸ್ವಲ್ಪ ಮಾಂಸವನ್ನು ಕೊಡಿ. ಬೇಯಿಸಿದ ಮಾಂಸವನ್ನು ಯಾಜಕನು ನಿಮ್ಮಿಂದ ಸ್ವೀಕರಿಸಿಕೊಳ್ಳುವುದಿಲ್ಲ” ಎಂದು ಹೇಳುತ್ತಿದ್ದನು.
16 ಯಜ್ಞವನ್ನರ್ಪಿಸುವವನು, “ಕೊಬ್ಬನ್ನು ಮೊದಲು ಹೋಮ ಮಾಡೋಣ. ಅನಂತರ ನಿಮಗೆ ಬೇಕಾದುದನ್ನು ತೆಗೆದುಕೊಳ್ಳಿ” ಎಂದು ಹೇಳಿದರೆ, ಯಾಜಕರ ಸೇವಕನು, “ಇಲ್ಲ, ಯಾಜಕನಿಗಾಗಿ ಕರಿಯಲು ಮಾಂಸವನ್ನು ಈಗಲೇ ಕೊಡು. ನೀನು ಕೊಡುವುದಿಲ್ಲವಾದರೆ, ನಾನೇ ತೆಗೆದುಕೊಳ್ಳುತ್ತೇನೆ” ಎಂದು ಹೇಳುತ್ತಿದ್ದನು.
17 ಯೆಹೋವನಿಗೆ ಅರ್ಪಿಸುವ ಯಜ್ಞವನ್ನು ಹೊಫ್ನಿ ಮತ್ತು ಫೀನೆಹಾಸರು ತುಚ್ಛೀಕರಿಸುತ್ತಿದ್ದರು. ಇದು ಯೆಹೋವನಿಗೆ ವಿರೋಧವಾದ ಮಹಾ ಪಾಪವಾಗಿತ್ತು.
19 “ನಾವು ಮಾಡುವ ಕಾರ್ಯಗಳು ದೇವರ ಹಿಡಿತಕ್ಕೆ ಒಳಗಾಗಿರುವುದಾದರೆ, ನಮ್ಮ ಪಾಪಗಳ ನಿಮಿತ್ತ ದೇವರು ನಮ್ಮನ್ನು ದೂಷಿಸುವುದೇಕೆ?” ಎಂದು ನಿಮ್ಮಲ್ಲಿ ಒಬ್ಬನು ಕೇಳಬಹುದು. 20 ಹಾಗೆ ಕೇಳಬೇಡಿ. ನೀವು ಕೇವಲ ಮನುಷ್ಯರು. ದೇವರನ್ನು ಪ್ರಶ್ನಿಸಲು ಮನುಷ್ಯರಿಗೆ ಯಾವ ಹಕ್ಕೂ ಇಲ್ಲ. ಮಡಕೆಯು ತನ್ನನ್ನು ತಯಾರಿಸಿದವನಿಗೆ, “ನೀನು ನನ್ನನ್ನು ಈ ರೀತಿ ತಯಾರಿಸಿದ್ದೇಕೆ” ಎಂದು ಕೇಳುವುದುಂಟೇ? 21 ಕುಂಬಾರನು ತನಗೆ ಇಷ್ಟಬಂದಂತೆ ಒಂದೇ ಮಣ್ಣಿನಿಂದ ವಿವಿಧ ವಸ್ತುಗಳನ್ನು ತಯಾರಿಸುವುದಿಲ್ಲವೇ? ಅವನು ಒಂದನ್ನು ವಿಶೇಷವಾದ ಬಳಕೆಗಾಗಿಯೂ ಮತ್ತೊಂದನ್ನು ದೈನಂದಿನ ಬಳಕೆಗಾಗಿಯೂ ತಯಾರಿಸುವನು.
22 ದೇವರು ಮಾಡಿರುವುದು ಸಹ ಹೀಗೆಯೇ. ಆತನು ತನ್ನ ಕೋಪವನ್ನು ತೋರಿಸಿ, ತನ್ನ ಶಕ್ತಿಯನ್ನು ಜನರಿಗೆ ಪ್ರಸಿದ್ಧಿಪಡಿಸಬೇಕೆಂದಿದ್ದನು. ಆದರೂ ಆತನು ತನ್ನ ಕೋಪಕ್ಕೆ ಗುರಿಯಾಗಿ ನಾಶವಾಗಲಿದ್ದ ಜನರನ್ನು ಬಹು ಸಹನೆಯಿಂದ ಸಹಿಸಿಕೊಂಡನು. 23 ದೇವರು ತನ್ನ ಅತಿಶಯವಾದ ಮಹಿಮೆಯನ್ನು ತೋರ್ಪಡಿಸಬೇಕೆಂದು ತಾಳ್ಮೆಯಿಂದ ಕಾದುಕೊಂಡಿದ್ದನು. ತನ್ನ ಕರುಣೆಯನ್ನು ಹೊಂದಿಕೊಳ್ಳುವ ಜನರಿಗೆ ದೇವರು ಆ ಮಹಿಮೆಯನ್ನು ಕೊಡಬೇಕೆಂದಿದ್ದನು. ತನ್ನ ಮಹಿಮೆಯನ್ನು ಹೊಂದಿಕೊಳ್ಳಲೆಂದು ದೇವರು ಆ ಜನರನ್ನು ಸಿದ್ಧಪಡಿಸಿದನು. 24 ನಾವೇ ಆ ಜನರು. ದೇವರಿಂದ ಕರೆಯಲ್ಪಟ್ಟ ಜನರು ನಾವೇ. ದೇವರು ನಮ್ಮನ್ನು ಯೆಹೂದ್ಯರೊಳಗಿಂದ ಮತ್ತು ಯೆಹೂದ್ಯರಲ್ಲದವರೊಳಗಿಂದ ಕರೆದನು. 25 ಪವಿತ್ರ ಗ್ರಂಥದ ಹೋಶೇಯನ ಪುಸ್ತಕದಲ್ಲಿ ಈ ರೀತಿ ಬರೆಯಲ್ಪಟ್ಟಿದೆ:
“ನನ್ನವರಲ್ಲದ ಜನರನ್ನು
ನನ್ನ ಜನರೆಂದು ಹೇಳುವೆನು.
ನನಗೆ ಪ್ರಿಯರಲ್ಲದವರನ್ನು
ನನಗೆ ಪ್ರಿಯರೆಂದು ಹೇಳುವೆನು.”(A)
26 ಮತ್ತು
“ಯಾವ ಸ್ಥಳದಲ್ಲಿ ದೇವರು,
‘ನೀವು ನನ್ನ ಜನರಲ್ಲ’ ಎಂದು ಹೇಳಿದ್ದನೋ
ಅದೇ ಸ್ಥಳದಲ್ಲಿ ಅವರನ್ನು ಜೀವವುಳ್ಳ ದೇವರ ಮಕ್ಕಳೆಂದು ಕರೆಯಲಾಗುವುದು.”(B)
27 ಇದಲ್ಲದೆ ಯೆಶಾಯನು ಇಸ್ರೇಲಿನ ಬಗ್ಗೆ ಕೂಗಿ ಹೇಳಿದ್ದಾನೆ:
“ಸಮುದ್ರ ತೀರದ ಮರಳಿನಂತೆ ಇಸ್ರೇಲರು ಅಸಂಖ್ಯಾತವಾಗಿರುವರು.
ಆದರೆ ಆ ಜನರಲ್ಲಿ ಕೆಲವರು ಮಾತ್ರ ರಕ್ಷಣೆ ಹೊಂದುವರು.
28 ಹೌದು, ಪ್ರಭುವು ಭೂಮಿಯ ಮೇಲಿನ ಜನರಿಗೆ ಬಹುಬೇಗನೆ ತೀರ್ಪನ್ನು ಪೂರ್ಣವಾಗಿ ತೀರಿಸುವನು.”(C)
29 ಯೆಶಾಯನು ಹೇಳಿರುವುದೇನೆಂದರೆ:
“ಪ್ರಭುವು ಸರ್ವಶಕ್ತನಾಗಿದ್ದಾನೆ. ಪ್ರಭುವು ತನ್ನ ಜನರಲ್ಲಿ ಕೆಲವರನ್ನು ನಮಗೋಸ್ಕರವಾಗಿ ರಕ್ಷಿಸಿದ್ದಾನೆ.
ಆತನು ಹೀಗೆ ಮಾಡಿಲ್ಲದಿದ್ದರೆ,
ಈಗ ನಾವು ಸೊದೋಮಿನಂತೆಯೂ
ಗೊಮೋರದಂತೆಯೂ ಇರುತ್ತಿದ್ದೆವು.”(D)
Kannada Holy Bible: Easy-to-Read Version. All rights reserved. © 1997 Bible League International