Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 20

ರಚನೆಗಾರ: ದಾವೀದ.

20 ಇಕ್ಕಟ್ಟಿನಲ್ಲಿ ಯೆಹೋವನು ನಿನ್ನ ಮೊರೆಯನ್ನು ಕೇಳಲಿ.
    ಯಾಕೋಬನ ದೇವರು ನಿನ್ನ ಹೆಸರನ್ನು ಪ್ರಖ್ಯಾತಿಪಡಿಸಲಿ.
ಆತನು ತನ್ನ ಪವಿತ್ರ ಸ್ಥಳದಿಂದ ನಿನಗೆ ಸಹಾಯಮಾಡಲಿ.
    ಚೀಯೋನಿನಿಂದ ನಿನಗೆ ಆಧಾರ ನೀಡಲಿ.
ನೀನು ಅರ್ಪಿಸಿದ ಕಾಣಿಕೆಗಳನ್ನೆಲ್ಲ ಆತನು ಜ್ಞಾಪಿಸಿಕೊಳ್ಳಲಿ.
    ನಿನ್ನ ಯಜ್ಞಗಳನ್ನೆಲ್ಲ ಆತನು ಸ್ವೀಕರಿಸಿಕೊಳ್ಳಲಿ.
ಆತನು ನಿನ್ನ ಬಯಕೆಗಳನ್ನು ಈಡೇರಿಸಲಿ.
    ನಿನ್ನ ಆಲೋಚನೆಗಳನ್ನೆಲ್ಲ ನೆರವೇರಿಸಲಿ.
ದೇವರು ನಿನಗೆ ಸಹಾಯಮಾಡುವಾಗ ಹರ್ಷಿಸುವೆವು.
    ಆತನ ಹೆಸರನ್ನು ಕೊಂಡಾಡೋಣ.
    ಯೆಹೋವನು ನಿನ್ನ ಕೋರಿಕೆಗಳನ್ನೆಲ್ಲ ನೆರವೇರಿಸಲಿ.

ಯೆಹೋವನು ತಾನು ಅಭಿಷೇಕಿಸಿದ ರಾಜನಿಗೆ ಸಹಾಯಮಾಡುತ್ತಾನೆಂದು ಈಗ ನನಗೆ ಗೊತ್ತಾಯಿತು.
    ದೇವರು ತಾನು ಆರಿಸಿಕೊಂಡ ರಾಜನಿಗೆ ಪರಲೋಕದಿಂದ ಉತ್ತರಿಸಿದನು;
    ತನ್ನ ಮಹಾಶಕ್ತಿಯಿಂದ ಅವನನ್ನು ರಕ್ಷಿಸಿದನು.
ಕೆಲವರು ತಮ್ಮ ರಥಗಳಲ್ಲಿ ಭರವಸವಿಡುವರು.
    ಕೆಲವರು ತಮ್ಮ ಸೈನಿಕರುಗಳಲ್ಲಿ ಭರವಸವಿಡುವರು.
    ನಾವಾದರೋ ನಮ್ಮ ದೇವರಾದ ಯೆಹೋವನನ್ನೇ ಜ್ಞಾಪಿಸಿಕೊಳ್ಳುವೆವು.
ಅವರು ಸೋತುಹೋದರು; ಯುದ್ಧದಲ್ಲಿ ಸತ್ತುಹೋದರು;
    ನಾವಾದರೋ ಜಯಗಳಿಸಿದೆವು! ನಾವು ಜಯಪ್ರದರಾಗಿ ನಿಂತುಕೊಳ್ಳುವೆವು!

ಯಾಕೆಂದರೆ ಯೆಹೋವನು ತಾನು ಅಭಿಷೇಕಿಸಿದ ರಾಜನನ್ನು ರಕ್ಷಿಸಿದನು!
    ನಾವು ಸಹಾಯಕ್ಕಾಗಿ ಮೊರೆಯಿಟ್ಟಾಗ ಆತನು ಸದುತ್ತರವನ್ನು ದಯಪಾಲಿಸಿದನು.

ವಿಮೋಚನಕಾಂಡ 25:1-22

ಪವಿತ್ರ ವಸ್ತುಗಳಿಗಾಗಿ ಕಾಣಿಕೆಗಳು

25 ಯೆಹೋವನು ಮೋಶೆಗೆ, “ಇಸ್ರೇಲರು ನನಗೆ ಕಾಣಿಕೆಗಳನ್ನು ತರಬೇಕೆಂದು ಅವರಿಗೆ ಹೇಳು. ಪ್ರತಿಯೊಬ್ಬನು ನನಗೆ ಕೊಡುವುದರ ಬಗ್ಗೆ ತನ್ನ ಹೃದಯದಲ್ಲಿ ತೀರ್ಮಾನಿಸಿಕೊಳ್ಳಬೇಕು. ಈ ಕಾಣಿಕೆಗಳನ್ನು ನನಗಾಗಿ ಸ್ವೀಕರಿಸು. ಜನರಿಂದ ನೀನು ಸ್ವೀಕರಿಸಬೇಕಾದ ವಸ್ತುಗಳ ಪಟ್ಟಿ ಇಲ್ಲಿದೆ: ಚಿನ್ನ, ಬೆಳ್ಳಿ, ತಾಮ್ರ, ನೀಲಿ, ನೇರಳೆ, ಕೆಂಪುದಾರ, ನಾರುಬಟ್ಟೆ, ಆಡು ಕೂದಲಿನ ಬಟ್ಟೆ, ಕೆಂಪುಬಣ್ಣದ ಕುರಿದೊಗಲು, ಉತ್ತಮ ತೊಗಲುಗಳು,[a] ಜಾಲೀಮರ, ದೀಪಗಳಿಗೆ ಬೇಕಾದ ಎಣ್ಣೆ, ಅಭಿಷೇಕತೈಲಕ್ಕೆ ಮತ್ತು ಪರಿಮಳಧೂಪಕ್ಕೆ ಬೇಕಾದ ಸುಗಂಧದ್ರವ್ಯಗಳು, ಏಪೋದಿಗೆ ದೈವನಿರ್ಣಯದ ಪದಕಚೀಲಕ್ಕೆ ಬೇಕಾದ ಗೋಮೇಧಕರತ್ನಗಳು ಮತ್ತು ಇತರ ರತ್ನಗಳು” ಎಂದು ಹೇಳಿದನು.

ಪವಿತ್ರ ಗುಡಾರ

ಇದಲ್ಲದೆ ದೇವರು ಮೋಶೆಗೆ, “ಜನರು ನನಗೋಸ್ಕರವಾಗಿ ಒಂದು ಪವಿತ್ರ ಗುಡಾರವನ್ನು ಕಟ್ಟಬೇಕು. ಆಗ ನಾನು ಅವರ ನಡುವೆ ಅದರಲ್ಲಿ ವಾಸಿಸುವೆನು. ಪವಿತ್ರ ಗುಡಾರ ಮತ್ತು ಅದರಲ್ಲಿರುವ ಪ್ರತಿಯೊಂದು ವಸ್ತುವೂ ಹೇಗಿರಬೇಕೆಂದು ನಾನು ನಿನಗೆ ತೋರಿಸುವೆನು. ನಾನು ನಿನಗೆ ತೋರಿಸುವ ಮಾದರಿಯ ಪ್ರಕಾರವೇ ಪ್ರತಿಯೊಂದನ್ನು ಮಾಡು.

ಒಡಂಬಡಿಕೆಯ ಪೆಟ್ಟಿಗೆ

10 “ಜಾಲೀಮರದಿಂದ ಒಂದು ವಿಶೇಷ ಪೆಟ್ಟಿಗೆಯನ್ನು ಮಾಡಿಸು. ಈ ಪವಿತ್ರ ಪೆಟ್ಟಿಗೆಯು ಎರಡೂವರೆ ಮೊಳ ಉದ್ದ, ಒಂದೂವರೆ ಮೊಳ ಅಗಲ ಮತ್ತು ಒಂದೂವರೆ ಮೊಳ ಎತ್ತರ ಇರಬೇಕು. 11 ಅದರ ಹೊರಮೈಯನ್ನು ಮತ್ತು ಒಳಮೈಯನ್ನು ಅಪ್ಪಟ ಬಂಗಾರದಿಂದ ಹೊದಿಸಬೇಕು. ಪೆಟ್ಟಿಗೆಯ ಅಂಚುಗಳ ಸುತ್ತಲೂ ಚಿನ್ನದ ಗೋಟು ಕಟ್ಟಿಸಬೇಕು. 12 ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗಲು ಅನುಕೂಲವಾಗುವಂತೆ ನಾಲ್ಕು ಚಿನ್ನದ ಬಳೆಗಳನ್ನು ಎರಕಹೊಯ್ಯಬೇಕು. ನಾಲ್ಕು ಮೂಲೆಗಳಲ್ಲಿ ಅಂದರೆ ಒಂದೊಂದು ಕಡೆಯಲ್ಲಿ ಎರಡೆರಡು ಬಳೆಗಳನ್ನು ಇಡಬೇಕು. 13 ಬಳಿಕ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗಲು ಅನುಕೂಲವಾಗುವಂತೆ ಕಂಬಗಳನ್ನು ಮಾಡಬೇಕು. ಈ ಕಂಬಗಳನ್ನು ಜಾಲೀಮರದಿಂದ ಮಾಡಿ ಬಂಗಾರದಿಂದ ಹೊದಿಸಬೇಕು. 14 ಕಂಬಗಳನ್ನು ಪೆಟ್ಟಿಗೆ ಕೊನೆಗಳಲ್ಲಿರುವ ಬಳೆಗಳಲ್ಲಿ ಸೇರಿಸಿ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗಬೇಕು. 15 ಕಂಬಗಳು ಯಾವಾಗಲೂ ಪೆಟ್ಟಿಗೆಯ ಬಳೆಗಳಲ್ಲಿ ಇರಬೇಕು. ಕಂಬಗಳನ್ನು ಅವುಗಳಿಂದ ಹೊರಗೆ ತೆಗೆಯಬಾರದು.

16 “ನಾನು ನಿನಗೆ ಕೊಡುವ ಆಜ್ಞಾಶಾಸನವನ್ನು ಅದರೊಳಗೆ ಇಡು” ಎಂದು ಹೇಳಿದನು. 17 ಇದಲ್ಲದೆ ದೇವರು ಮೋಶೆಗೆ, “ಅಪ್ಪಟ ಬಂಗಾರದಿಂದ ಕೃಪಾಸನವನ್ನು ಮಾಡಿಸಬೇಕು. ಅದು ಎರಡೂವರೆ ಮೊಳ ಉದ್ದವಾಗಿರಬೇಕು. ಒಂದೂವರೆ ಮೊಳ ಅಗಲವಾಗಿರಬೇಕು. 18 ಬಳಿಕ ಕೆರೂಬಿಯರ ಎರಡು ಬಂಗಾರದ ಆಕಾರಗಳನ್ನು ಮಾಡಿಸಿ ಕೃಪಾಸನದ ಎರಡು ಕೊನೆಗಳಲ್ಲಿ ಇಡಬೇಕು. 19 ಕೃಪಾಸನದ ಒಂದು ಕೊನೆಯಲ್ಲಿ ಒಂದು ಕೆರೂಬಿಯನ್ನೂ ಇನ್ನೊಂದು ಕೊನೆಯಲ್ಲಿ ಇನ್ನೊಂದು ಕೆರೂಬಿಯನ್ನೂ ಜೋಡಿಸಬೇಕು. 20 ಅವುಗಳ ರೆಕ್ಕೆಗಳು ಆಕಾಶದ ಕಡೆಗೆ ಚಾಚಿರಬೇಕು; ಪೆಟ್ಟಿಗೆಯನ್ನು ಮುಚ್ಚಿಕೊಂಡಿರಬೇಕು. ಅವುಗಳ ಮುಖಗಳು ಎದುರುಬದುರಾಗಿ ಕೃಪಾಸನವನ್ನು ನೋಡುತ್ತಿರಬೇಕು.

21 “ನಾನು ನಿನಗೆ ಕೊಡುವ ಆಜ್ಞಾಶಾಸನವನ್ನು ಪೆಟ್ಟಿಗೆಯಲ್ಲಿಡಬೇಕು; ಕೃಪಾಸನವನ್ನು ಆ ಪೆಟ್ಟಿಗೆಯ ಮೇಲಿಡಬೇಕು. 22 ನಾನು ನಿನಗೆ ದರ್ಶನ ಕೊಡುವಾಗ ಒಡಂಬಡಿಕೆ ಪೆಟ್ಟಿಗೆಯ ಮೇಲಿರುವ ಕೆರೂಬಿಗಳ ಮಧ್ಯದಿಂದ ನಿನ್ನ ಸಂಗಡ ಮಾತಾಡುವೆನು; ಇಸ್ರೇಲರಿಗೆ ಆಜ್ಞಾಪಿಸಬೇಕಾದವುಗಳನ್ನು ನಿನಗೆ ತಿಳಿಸುವೆನು.

1 ಕೊರಿಂಥದವರಿಗೆ 2:1-10

ಶಿಲುಬೆಗೆರಿಸಲ್ಪಟ್ಟ ಕ್ರಿಸ್ತನ ಕುರಿತಾದ ಸಂದೇಶ

ಪ್ರಿಯ ಸಹೋದರ ಸಹೋದರಿಯರೇ, ನಾನು ನಿಮ್ಮ ಬಳಿಗೆ ಬಂದಿದ್ದಾಗ, ನಾನು ನಿಮಗೆ ದೇವರ ಸತ್ಯವನ್ನು ತಿಳಿಸಿದೆನು. ಆದರೆ ನಾನು ನಾಜೂಕಾದ ಪದಗಳನ್ನಾಗಲಿ ಮಹಾ ಜ್ಞಾನವನ್ನಾಗಲಿ ಉಪಯೋಗಿಸಲಿಲ್ಲ. ನಾನು ನಿಮ್ಮೊಂದಿಗಿದ್ದಾಗ ಯೇಸು ಕ್ರಿಸ್ತನ ಮತ್ತು ಆತನ ಶಿಲುಬೆಯ ಮೇಲಿನ ಮರಣವನ್ನೇ ಹೊರತು ಬೇರೆಲ್ಲಾ ವಿಷಯಗಳನ್ನು ಮರೆತುಬಿಡಲು ನಿರ್ಧರಿಸಿದೆನು. ನಾನು ನಿಮ್ಮ ಬಳಿಗೆ ಬಂದಿದ್ದಾಗ ಬಲಹೀನನಾಗಿದ್ದೆನು; ಭಯದಿಂದ ನಡುಗುತ್ತಿದ್ದೆನು. ನನ್ನ ಉಪದೇಶವಾಗಲಿ ಮಾತುಕತೆಯಾಗಲಿ ಜನರನ್ನು ಒತ್ತಾಯಿಸುವಂಥ ಜ್ಞಾನವಾಕ್ಯಗಳನ್ನು ಒಳಗೊಂಡಿರಲಿಲ್ಲ. ಆದರೆ ಪವಿತ್ರಾತ್ಮನು ಕೊಡುವ ಶಕ್ತಿಯೇ ನನ್ನ ಉಪದೇಶಕ್ಕೆ ಆಧಾರವಾಗಿತ್ತು. ನಿಮ್ಮ ನಂಬಿಕೆಯು ಮನುಷ್ಯನ ಜ್ಞಾನದ ಮೇಲೆ ಆಧಾರಗೊಂಡಿರದೆ ದೇವರ ಶಕ್ತಿಯ ಮೇಲೆ ಆಧಾರಗೊಂಡಿರಬೇಕೆಂದು ನಾನು ಹೀಗೆ ಮಾಡಿದೆನು.

ದೇವರ ಜ್ಞಾನ

ಪರಿಣತರಾದ ಜನರಿಗೆ ನಾವು ಜ್ಞಾನವನ್ನೇ ಉಪದೇಶಿಸುತ್ತೇವೆ. ಇದು ಇಹಲೋಕದ ಜ್ಞಾನವೂ ಅಲ್ಲ. ಅಧಿಪತಿಗಳ ಜ್ಞಾನವೂ ಅಲ್ಲ. ಈ ಲೋಕದ ಅಧಿಪತಿಗಳು ತಮ್ಮ ಅಧಿಕಾರವನ್ನು ಕಳೆದುಕೊಳ್ಳುವವರಾಗಿದ್ದಾರೆ. ನಾವಾದರೋ ದೇವರ ರಹಸ್ಯವಾದ ಜ್ಞಾನವನ್ನೇ ಹೇಳುತ್ತೇವೆ. ಈ ಜ್ಞಾನವನ್ನು ಜನರಿಗೆ ಮರೆಮಾಡಲಾಗಿದೆ. ದೇವರು ನಮ್ಮ ಮಹಿಮೆಗಾಗಿ ಈ ಜ್ಞಾನವನ್ನು ಲೋಕವು ಆರಂಭವಾಗುವುದಕ್ಕಿಂತ ಮೊದಲೇ ಯೋಜಿಸಿದ್ದನು. ಈ ಲೋಕದ ಯಾವ ಅಧಿಪತಿಗಳೂ ಈ ಜ್ಞಾನವನ್ನು ಅರ್ಥಮಾಡಿಕೊಳ್ಳಲಿಲ್ಲ. ಅವರು ಅರ್ಥಮಾಡಿಕೊಂಡಿದ್ದರೆ, ಮಹಿಮೆಯುಳ್ಳ ಪ್ರಭುವನ್ನು ಶಿಲುಬೆಗೇರಿಸುತ್ತಿರಲಿಲ್ಲ. ಪವಿತ್ರಗ್ರಂಥದಲ್ಲಿ ಬರೆದಿರುವಂತೆಯೇ ಇದಾಯಿತು:

“ದೇವರು ತನ್ನನ್ನು ಪ್ರೀತಿಸುವ ಜನರಿಗೆ ಸಿದ್ಧಪಡಿಸಿರುವುದನ್ನು
    ಯಾವ ಕಣ್ಣೂ ಕಾಣಲಿಲ್ಲ.
ಯಾವ ಕಿವಿಯೂ ಕೇಳಲಿಲ್ಲ.
    ಯಾವ ವ್ಯಕ್ತಿಯೂ ಊಹಿಸಿಕೊಳ್ಳಲಿಲ್ಲ.”(A)

10 ಆದರೆ ದೇವರು ತನ್ನ ಪವಿತ್ರಾತ್ಮನ ಮೂಲಕ ನಮಗೆ ಈ ಸಂಗತಿಗಳನ್ನು ಪ್ರಕಟಿಸಿದನು.

ಪವಿತ್ರಾತ್ಮನು ಸಕಲವನ್ನೂ ದೇವರ ಅಗಾಧವಾದ ರಹಸ್ಯಗಳನ್ನೂ ತಿಳಿದಿದ್ದಾನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International