Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 104:24-34

24 ಯೆಹೋವನೇ, ನೀನು ಅನೇಕ ಆಶ್ಚರ್ಯಕರವಾದ ಕಾರ್ಯಗಳನ್ನು ಮಾಡಿರುವೆ.
    ನೀನು ಸೃಷ್ಟಿಸಿದ ವಸ್ತುಗಳಿಂದ ಭೂಮಿಯು ತುಂಬಿಹೋಗಿದೆ.
    ನಿನ್ನ ಪ್ರತಿಯೊಂದು ಕಾರ್ಯದಲ್ಲೂ ನಿನ್ನ ಜ್ಞಾನವನ್ನು ಕಾಣಬಲ್ಲವು.
25 ಇಗೋ ವಿಶಾಲವಾದ ಸಮುದ್ರವನ್ನು ನೋಡು.
    ಅದರೊಳಗೆ ಅನೇಕ ಬಗೆಯ ದೊಡ್ಡ ಜೀವಿಗಳೂ
    ನಾನಾ ಬಗೆಯ ಚಿಕ್ಕ ಜೀವಿಗಳೂ ಅಸಂಖ್ಯಾತವಾಗಿವೆ.
26 ನೀನು ಸೃಷ್ಟಿಸಿದ ಲಿವ್ಯಾತಾನನು ಸಮುದ್ರದಲ್ಲಿ ಆಟವಾಡುತ್ತಿದ್ದರೂ
    ಹಡಗು ಸಮುದ್ರದ ಮೇಲೆ ಸಂಚರಿಸುವುದು.

27 ಈ ಜೀವಿಗಳೆಲ್ಲಾ ನಿನ್ನನ್ನು ಅವಲಂಭಿಸಿಕೊಂಡಿವೆ.
    ಅವುಗಳಿಗೆ ಸರಿಸಮಯದಲ್ಲಿ ಆಹಾರವನ್ನು ಕೊಡುವಾತನು ನೀನೇ.
28 ಸರ್ವಜೀವಿಗಳಿಗೆ ಆಹಾರವನ್ನು ಕೊಡುವಾತನು ನೀನೇ.
    ನೀನು ಕೈತೆರೆದು ಒಳ್ಳೆಯ ಆಹಾರವನ್ನು ಕೊಡಲು ಅವು ತಿಂದು ತೃಪ್ತಿಯಾಗುತ್ತವೆ.
29 ನೀನು ಅವುಗಳಿಗೆ ವಿಮುಖನಾದಾಗ
    ಅವು ಭಯಗೊಳ್ಳುತ್ತವೆ.
ಅವುಗಳ ಶ್ವಾಸವು ಹೋಗಿ
    ಬಲಹೀನತೆಯಿಂದ ಸತ್ತು ಮತ್ತೆ ಮಣ್ಣಾಗುತ್ತವೆ.
30 ನಿನ್ನ ಜೀವಶ್ವಾಸವನ್ನು ಊದುವಾಗ ಅವು ಸೃಷ್ಟಿಯಾಗುತ್ತವೆ.
    ನೀನು ಭೂಮಿಯನ್ನು ಮತ್ತೆ ನೂತನ ಪಡಿಸುವೆ.

31 ಯೆಹೋವನ ಮಹಿಮೆಯು ಶಾಶ್ವತವಾಗಿರಲಿ!
    ಯೆಹೋವನು ತಾನು ಸೃಷ್ಟಿಸಿದವುಗಳಲ್ಲಿ ಆನಂದಿಸಲಿ.
32 ಆತನು ಭೂಮಿಯ ಕಡೆಗೆ ನೋಡಿದರೆ ಸಾಕು,
    ಭೂಮಿಯು ನಡುಗುವುದು;
ಆತನು ಬೆಟ್ಟಗಳನ್ನು ಮುಟ್ಟಿದರೆ ಸಾಕು,
    ಅವು ಜ್ವಾಲಾಮುಖಿಗಳಾಗುತ್ತವೆ.

33 ನನ್ನ ಜೀವಮಾನವೆಲ್ಲಾ ನಾನು ಯೆಹೋವನಿಗೆ ಗಾನ ಮಾಡುವೆನು.
    ನಾನು ಬದುಕಿರುವವರೆಗೂ ಆತನನ್ನು ಸಂಕೀರ್ತಿಸುವೆನು.
34 ನಾನು ಹೇಳಿದ ಈ ವಿಷಯಗಳು ಆತನನ್ನು ಸಂತೋಷಗೊಳಿಸಲಿ.
    ನಾನಾದರೋ ಯೆಹೋವನಲ್ಲಿ ಸಂತೋಷಿಸುವೆನು.

ಕೀರ್ತನೆಗಳು 104:35

35 ಪಾಪಾತ್ಮರು ಭೂಮಿಯಿಂದ ಕಾಣದೆಹೋಗಲಿ.
    ದುಷ್ಟರು ಎಂದೆಂದಿಗೂ ನಿರ್ಮೂಲವಾಗಲಿ.
ನನ್ನ ಆತ್ಮವೇ, ಯೆಹೋವನನ್ನು ಸ್ತುತಿಸು!

ಯೆಹೋವನನ್ನು ಕೊಂಡಾಡು!

ಯೋವೇಲ 2:18-29

ಯೆಹೋವನು ದೇಶವನ್ನು ಸುಸ್ಥಿತಿಗೆ ತರುವನು

18 ಆಗ ಯೆಹೋವನು ತನ್ನ ದೇಶದ ಬಗ್ಗೆ ಆಸಕ್ತಿ ತೋರಿಸಿದನು.
    ತನ್ನ ಜನರ ಬಗ್ಗೆ ದುಃಖಿಸಿದನು.
19 ಯೆಹೋವನು ತನ್ನ ಜನರೊಂದಿಗೆ ಮಾತನಾಡಿ ಹೀಗೆ ಹೇಳಿದನು:
“ನಾನು ನಿಮಗೆ ಧಾನ್ಯ, ದ್ರಾಕ್ಷಾರಸ, ಎಣ್ಣೆಯನ್ನು ಕಳುಹಿಸುವೆನು.
    ನಿಮಗೆ ಬೇಕಾದಷ್ಟು ಇರುವದು.
    ಅನ್ಯ ಜನಾಂಗದವರೆದುರು ನಿಮ್ಮನ್ನು ಇನ್ನು ಮುಂದೆ ನಾಚಿಕೆಗೆ ಗುರಿಪಡಿಸುವುದಿಲ್ಲ.
20 ಉತ್ತರದಿಂದ ಬಂದ ದಂಡನ್ನು ನಿಮ್ಮ ದೇಶದಿಂದ ಹೊರಡಿಸುವೆನು.
    ಅವರನ್ನು ಒಣ ಬೆಂಗಾಡಿಗೆ ಕಳುಹಿಸುವೆನು.
ಅವರಲ್ಲಿ ಕೆಲವರು ಪೂರ್ವದ ಸಮುದ್ರಕ್ಕೆ ಹೋಗುವರು,
    ಕೆಲವರು ಪಶ್ಚಿಮದ ಸಮುದ್ರಕ್ಕೆ ಹೋಗುವರು.
ಅವರು ಭಯಂಕರ ಕೃತ್ಯಗಳನ್ನು ಮಾಡಿದುದರಿಂದ
    ಸತ್ತು ಕೊಳೆಯುವ ಸ್ಥಿತಿಗೆ ಬರಮಾಡುವೆನು.
ಆಗ ಭಯಂಕರ ಹೊಲಸು ವಾಸನೆ ಇರುವದು.”

ದೇಶವು ಹೊಸತಾಗಿ ಮಾಡಲ್ಪಡುವದು

21 ದೇಶವೇ, ಭಯಪಡದಿರು.
    ಯೆಹೋವನು ಮಹತ್ಕಾರ್ಯವನ್ನು ಮಾಡಲಿರುವದರಿಂದ
    ಸಂತೋಷದಿಂದ ಆನಂದಿಸು.
22 ಅಡವಿಯಲ್ಲಿರುವ ಪ್ರಾಣಿಗಳೇ, ಭಯಪಡಬೇಡಿ.
    ಮರುಭೂಮಿಯು ಹುಲ್ಲುಗಾವಲಾಗುವದು.
ಮರಗಳು ಹಣ್ಣುಗಳನ್ನು ಬಿಡುವವು.
    ಅಂಜೂರದ ಮರಗಳೂ ದ್ರಾಕ್ಷಿಬಳ್ಳಿಗಳೂ ಬಹಳ ಹಣ್ಣುಗಳನ್ನು ಬಿಡುವವು.

23 ಆದ್ದರಿಂದ ಚೀಯೋನಿನ ಜನರೇ, ಸಂತೋಷಪಡಿರಿ.
    ನಿಮ್ಮ ದೇವರಾದ ಯೆಹೋವನಲ್ಲಿ ಸಂತೋಷಿಸಿರಿ.
ಆತನು ನಿಮಗೆ ಮಳೆ ಸುರಿಸುವನು.
    ಹಿಂದಿನಂತೆ ನಿಮಗೆ ಮುಂಗಾರು, ಹಿಂಗಾರು ಮಳೆಗಳನ್ನು ಸುರಿಸುವನು.
24 ಕಣಜಗಳು ಗೋದಿಯಿಂದ ತುಂಬಿರುವವು.
    ಪಿಪಾಯಿಗಳು ಎಣ್ಣೆಯಿಂದಲೂ ದ್ರಾಕ್ಷಾರಸದಿಂದಲೂ ತುಂಬಿತುಳುಕುವವು.
25 “ಯೆಹೋವನಾದ ನಾನು ನಿಮಗೆ ವಿರುದ್ಧವಾಗಿ ನನ್ನ ಸೈನ್ಯವನ್ನು ಕಳುಹಿಸಿದೆನು.
    ಮಿಡತೆಗಳ ಗುಂಪು, ದೊಡ್ಡ ಮಿಡತೆ,
    ನಾಶಮಾಡುವ ಮಿಡತೆ, ಹಾರುವ ಮಿಡತೆ, ಚೂರಿ ಮಿಡತೆಗಳು ಬಂದು ನಿಮಗಿದ್ದದ್ದನ್ನೆಲ್ಲಾ ತಿಂದುಬಿಟ್ಟವು.
ಆದರೆ ಯೆಹೋವನಾದ ನಾನು ನಿಮ್ಮ ಸಂಕಟಕಾಲಕ್ಕೆ ಬದಲಾಗಿ
    ಸುಭಿಕ್ಷ ಕಾಲವನ್ನು ದಯಪಾಲಿಸುವೆನು.
26 ಆಗ ನಿಮಗೆ ತಿನ್ನಲು ಏನೂ ಕಡಿಮೆ ಇರುವುದಿಲ್ಲ.
    ನೀವು ಸಂತೃಪ್ತರಾಗುವಿರಿ.
ನಿಮ್ಮ ದೇವರಾದ ಯೆಹೋವನ ನಾಮವನ್ನು ಕೊಂಡಾಡುವಿರಿ.
    ಆತನು ನಿಮಗೆ ಆಶ್ಚರ್ಯವಾದ ಕಾರ್ಯವನ್ನು ಮಾಡಿದ್ದಾನೆ.
ನನ್ನ ಜನರು ಇನ್ನು ಮುಂದೆ ಎಂದೂ ನಾಚಿಕೆಗೆ ಗುರಿಯಾಗರು.
27 ಇಸ್ರೇಲರೊಂದಿಗೆ ನಾನು ಇದ್ದೇನೆ ಎಂದು ನೀವು ತಿಳಿಯುವಿರಿ.
    ನಿಮ್ಮ ದೇವರಾದ ಯೆಹೋವನು ನಾನೇ ಎಂದು ನೀವು ತಿಳಿಯುವಿರಿ.
    ನನ್ನ ಹೊರತು ಬೇರೆ ದೇವರುಗಳಿಲ್ಲ.
ನನ್ನ ಜನರು ಇನ್ನು ಮುಂದೆ ನಾಚಿಕೆಗೆ ಗುರಿಯಾಗುವುದಿಲ್ಲ.”

ದೇವರು ಎಲ್ಲಾ ಜನರ ಮೇಲೆ ತನ್ನ ಆತ್ಮವನ್ನು ಸುರಿಸುವನು

28 “ಆ ಬಳಿಕ ನಾನು
    ನನ್ನ ಆತ್ಮವನ್ನು ಎಲ್ಲಾ ತರದ ಜನರ ಮೇಲೆ ಸುರಿಸುವೆನು.
ನಿಮ್ಮ ಗಂಡುಹೆಣ್ಣು ಮಕ್ಕಳು ಪ್ರವಾದಿಸುವರು.
    ನಿಮ್ಮ ವೃದ್ಧರು ಕನಸು ಕಾಣುವರು.
    ನಿಮ್ಮ ಯುವಕರಿಗೆ ದರ್ಶನಗಳಾಗುವವು.
29 ಆ ಸಮಯದಲ್ಲಿ ಸೇವಕಸೇವಕಿಯರ ಮೇಲೆಯೂ
    ನನ್ನ ಆತ್ಮವನ್ನು ಸುರಿಸುವೆನು.

1 ಕೊರಿಂಥದವರಿಗೆ 12:4-11

ಅನೇಕ ರೀತಿಯ ಆತ್ಮಿಕ ವರಗಳಿವೆ. ಆದರೆ ಅವುಗಳೆಲ್ಲ ಒಬ್ಬನೇ ಆತ್ಮನಿಂದ ಬಂದಂಥವುಗಳಾಗಿವೆ. ಸೇವೆಮಾಡಲು ವಿವಿಧ ಮಾರ್ಗಗಳಿವೆ, ಆದರೆ ಅವುಗಳೆಲ್ಲಾ ಒಬ್ಬನೇ ಆತ್ಮನಿಂದ ಬಂದಂಥವುಗಳಾಗಿವೆ. ದೇವರು ಜನರಲ್ಲಿ ಮಾಡುವ ಕಾರ್ಯಗಳಿಗೂ ವಿವಿಧ ಮಾರ್ಗಗಳಿವೆ. ಆದರೆ ಅವುಗಳೆಲ್ಲಾ ಒಬ್ಬನೇ ದೇವರಿಂದ ಬಂದಂಥವುಗಳಾಗಿವೆ.

ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಪವಿತ್ರಾತ್ಮನ ವರವು ಕಾಣಬಲ್ಲದು. ಇತರರಿಗೆ ಸಹಾಯ ಮಾಡಲೆಂದು ಪವಿತ್ರಾತ್ಮನು ವರವನ್ನು ಕೊಡುತ್ತಾನೆ. ಆತನು ಒಬ್ಬನಿಗೆ ಜ್ಞಾನದಿಂದ ಮಾತಾಡುವ ವರವನ್ನೂ ಮತ್ತೊಬ್ಬನಿಗೆ ತಿಳುವಳಿಕೆಯಿಂದ ಮಾತಾಡುವ ವರವನ್ನೂ ಕೊಡುತ್ತಾನೆ. ಒಬ್ಬನಿಗೆ ನಂಬಿಕೆಯನ್ನೂ ಮತ್ತೊಬ್ಬನಿಗೆ ಸ್ವಸ್ಥಪಡಿಸುವ ವರವನ್ನೂ ಕೊಡುತ್ತಾನೆ; 10 ಮತ್ತೊಬ್ಬನಿಗೆ ಅದ್ಭುತಕಾರ್ಯಗಳನ್ನು ಮಾಡುವ ಶಕ್ತಿಯನ್ನೂ ಇನ್ನೊಬ್ಬನಿಗೆ ಪ್ರವಾದಿಸುವ ಸಾಮರ್ಥ್ಯವನ್ನೂ ಇನ್ನೊಬ್ಬನಿಗೆ ಒಳ್ಳೆಯ ಮತ್ತು ಕೆಟ್ಟ ಆತ್ಮಗಳ ನಡುವೆ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳುವ ಸಾಮರ್ಥ್ಯವನ್ನೂ ಕೊಡುತ್ತಾನೆ; ಒಬ್ಬನಿಗೆ ಅನೇಕ ಭಾಷೆಗಳನ್ನು ಮಾತಾಡುವ ಸಾಮರ್ಥ್ಯವನ್ನೂ ಮತ್ತೊಬ್ಬನಿಗೆ ಆ ಭಾಷೆಗಳನ್ನು ಅನುವಾದಿಸುವ ಸಾಮರ್ಥ್ಯವನ್ನೂ ಕೊಡುತ್ತಾನೆ. 11 ಪವಿತ್ರಾತ್ಮನು ಒಬ್ಬನೇ. ಆತನೇ ಎಲ್ಲಾ ವರಗಳನ್ನು ತನ್ನ ಚಿತ್ತಕ್ಕನುಸಾರವಾಗಿ ಪ್ರತಿಯೊಬ್ಬನಿಗೂ ಹಂಚಿಕೊಟ್ಟು ನಡೆಸುತ್ತಾನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International