Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 115

115 ಯೆಹೋವನೇ, ಘನಮಾನಗಳು ನಮ್ಮವಲ್ಲ!
    ಅವು ನಿನ್ನವೇ.
ನಿನ್ನ ಪ್ರೀತಿಯ ನಿಮಿತ್ತವಾಗಿಯೂ ನಂಬಿಗಸ್ತಿಕೆಯ ನಿಮಿತ್ತವಾಗಿಯೂ ಘನಮಾನಗಳು ನಿನಗೇ ಸಲ್ಲತಕ್ಕದ್ದು.
ಅವರ ದೇವರು ಎಲ್ಲಿದ್ದಾನೆಂದು ಜನಾಂಗಗಳು ಯಾಕೆ ಹೇಳಬೇಕು?
ನಮ್ಮ ದೇವರು ಪರಲೋಕದಲ್ಲಿದ್ದಾನೆ; ತಾನು ಬಯಸಿದ್ದನ್ನೆಲ್ಲಾ ಮಾಡುತ್ತಾನೆ.
ಅನ್ಯಜನಾಂಗಗಳ “ದೇವರುಗಳು” ಬೆಳ್ಳಿಬಂಗಾರಗಳಿಂದ ಮಾಡಿದ ವಿಗ್ರಹಗಳಷ್ಟೇ.
    ಅವುಗಳನ್ನು ಮಾಡಿದವರು ಮನುಷ್ಯರೇ.
ಆ ವಿಗ್ರಹಗಳಿಗೆ ಬಾಯಿಗಳಿವೆ, ಆದರೆ ಮಾತಾಡಲಾರವು.
    ಕಣ್ಣುಗಳಿವೆ, ಆದರೆ ನೋಡಲಾರವು.
ಕಿವಿಗಳಿವೆ, ಆದರೆ ಕೇಳಲಾರವು.
    ಮೂಗುಗಳಿವೆ, ಆದರೆ ಮೂಸಲಾರವು.
ಕೈಗಳಿವೆ, ಆದರೆ ಯಾವುದನ್ನೂ ಮುಟ್ಟಲಾರವು.
    ಕಾಲುಗಳಿವೆ, ಆದರೆ ನಡೆಯಲಾರವು.
    ಅವುಗಳ ಗಂಟಲುಗಳಿಂದ ಶಬ್ದವೇ ಹೊರಡದು.
ಅವುಗಳನ್ನು ಮಾಡುವವರೂ ಅವುಗಳಲ್ಲಿ ಭರವಸವಿಟ್ಟಿರುವವರೂ ಅವುಗಳಂತೆಯೇ.

ಇಸ್ರೇಲರೇ, ಯೆಹೋವನಲ್ಲಿ ಭರವಸವಿಡಿರಿ.
    ಆತನು ಅವರ ಬಲವೂ ಗುರಾಣಿಯೂ ಆಗಿದ್ದಾನೆ.
10 ಆರೋನನ ಮನೆತನದವರೇ, ಯೆಹೋವನಲ್ಲಿ ಭರವಸವಿಡಿರಿ.
    ಆತನು ಅವರ ಬಲವೂ ಗುರಾಣಿಯೂ ಆಗಿದ್ದಾನೆ.
11 ಯೆಹೋವನ ಭಕ್ತರು ಆತನಲ್ಲಿ ಭರವಸವಿಡುವರು.
    ಆತನು ಅವರ ಬಲವೂ ಗುರಾಣಿಯೂ ಆಗಿದ್ದಾನೆ.

12 ಯೆಹೋವನು ನಮ್ಮನ್ನು ಜ್ಞಾಪಕಮಾಡಿಕೊಂಡು ಆಶೀರ್ವದಿಸುವನು.
    ಆತನು ಇಸ್ರೇಲನ್ನೂ ಆರೋನನ ಮನೆತನವನ್ನೂ ಆಶೀರ್ವದಿಸುವನು.
13 ಆತನು ದೊಡ್ಡವರೂ ಚಿಕ್ಕವರೂ ಎಂದೆನ್ನದೆ ತನ್ನ ಭಕ್ತರನ್ನೆಲ್ಲಾ ಆಶೀರ್ವದಿಸುವನು.

14 ಯೆಹೋವನು ನಿಮ್ಮ ಕುಟುಂಬಗಳನ್ನೂ ನಿಮ್ಮ ಮಕ್ಕಳ ಕುಟುಂಬಗಳನ್ನೂ ಅಭಿವೃದ್ಧಿಪಡಿಸಲಿ.
15     ಯೆಹೋವನಿಂದ ನಿಮಗೆ ಆಶೀರ್ವಾದವಾಗಲಿ.
    ಪರಲೋಕವನ್ನೂ ಭೂಲೋಕವನ್ನೂ ಸೃಷ್ಟಿಮಾಡಿದಾತನು ಆತನೇ.
16 ಪರಲೋಕವು ಯೆಹೋವನದು.
    ಆತನು ಭೂಲೋಕವನ್ನು ಮನುಷ್ಯರಿಗೆ ಕೊಟ್ಟನು.
17 ಸತ್ತುಹೋದವರು ಯೆಹೋವನನ್ನು ಕೊಂಡಾಡುವುದಿಲ್ಲ.
    ಸಮಾಧಿಯೊಳಗಿರುವವರು ಆತನನ್ನು ಸ್ತುತಿಸುವುದಿಲ್ಲ.
18 ನಾವಾದರೋ ಯೆಹೋವನನ್ನು ಈಗಲೂ ಯಾವಾಗಲೂ ಸ್ತುತಿಸುವೆವು!

ಯೆಹೋವನಿಗೆ ಸ್ತೋತ್ರ!

ಎಜ್ರ 9:5-15

ಸಾಯಂಕಾಲದ ನೈವೇದ್ಯ ಸಮರ್ಪಣೆಯ ಸಮಯದಲ್ಲಿ ನಾನು ಕುಳಿತಲ್ಲಿಂದ ಎದ್ದೆನು. ನನ್ನ ಬಟ್ಟೆಗಳು ಹರಿದಿದ್ದವು. ನಾನು ಮೊಣಕಾಲೂರಿ ಕೈಗಳನ್ನು ದೇವರಾದ ಯೆಹೋವನ ಕಡೆಗೆ ಚಾಚಿ ಹೀಗೆ ಪ್ರಾರ್ಥಿಸಿದೆನು:

“ನನ್ನ ದೇವರೇ, ನಿನ್ನ ಕಡೆಗೆ ಮುಖವೆತ್ತಲು ನನಗೆ ನಾಚಿಕೆಯಾಗುತ್ತದೆ; ಯಾಕೆಂದರೆ ನಮ್ಮ ಪಾಪಗಳು ನಮ್ಮ ತಲೆಮೀರಿ ಬೆಳೆದಿದೆ. ನಮ್ಮ ಅಪರಾಧಗಳ ರಾಶಿಯು ಪರಲೋಕದವರೆಗೂ ಏರಿಹೋಗಿದೆ. ನಮ್ಮ ಪೂರ್ವಿಕರ ಕಾಲದಿಂದ ಈ ತನಕ ನಾವು ಮಹಾಪರಾಧಗಳನ್ನು ಮಾಡಿದ್ದೇವೆ. ನಮ್ಮ ಪಾಪಗಳಿಗಾಗಿ ನಮಗೂ ನಮ್ಮ ರಾಜರುಗಳಿಗೂ ನಮ್ಮ ಯಾಜಕರುಗಳಿಗೂ ಶಿಕ್ಷೆಯಾಯಿತು. ಅನ್ಯದೇಶದ ರಾಜರುಗಳು ನಮ್ಮ ದೇಶವನ್ನು ಆಕ್ರಮಿಸಿ ನಮ್ಮ ಜನರನ್ನು ಸೆರೆಯಾಳುಗಳಾಗಿ ಒಯ್ದರು; ನಮ್ಮ ಐಶ್ವರ್ಯವನ್ನು ಸೂರೆಗೈದು ನಮ್ಮನ್ನು ನಾಚಿಕೆಗೆ ಒಳಪಡಿಸಿದರು. ಈಗಲೂ ಅದೇ ಅನುಭವ ನಮಗಾಗಿದೆ!

“ಈಗಲಾದರೋ ನೀನು ನಮ್ಮ ಮೇಲೆ ದಯೆ ತೋರಿಸಿರುವೆ. ಸೆರೆಯಲ್ಲಿದ್ದ ನಿನ್ನ ಜನರಲ್ಲಿ ಕೆಲವರು ಅಲ್ಲಿಂದ ತಪ್ಪಿಸಿಕೊಂಡು ನಿನ್ನ ಪರಿಶುದ್ಧ ದೇಶದಲ್ಲಿ ವಾಸಿಸುವಂತೆ ಮಾಡಿರುವೆ; ಗುಲಾಮತನದಿಂದ ನಮ್ಮನ್ನು ಬಿಡುಗಡೆ ಮಾಡಿ ಹೊಸಜೀವ ಕೊಟ್ಟಿರುವೆ. ಹೌದು, ನಾವು ಗುಲಾಮರಾಗಿದ್ದೆವು. ಆದರೆ ಸದಾಕಾಲ ಗುಲಾಮರಾಗಲು ನೀನು ನಮ್ಮನ್ನು ಬಿಡಲಿಲ್ಲ. ನಮ್ಮ ಮೇಲೆ ನೀನು ದಯೆ ತೋರಿಸಿರುವೆ. ಪರ್ಶಿಯ ರಾಜರು ನಮಗೆ ಕರುಣೆತೋರುವಂತೆ ಮಾಡಿದೆ. ನಿನ್ನ ಆಲಯವು ಹಾಳಾಗಿತ್ತು. ನಿನ್ನ ಆ ಆಲಯವನ್ನು ಮತ್ತೆ ಹೊಸದಾಗಿ ಕಟ್ಟಲು ನೀನು ನಮಗೆ ಹೊಸ ಜೀವವನ್ನು ಕೊಟ್ಟಿರುವೆ. ದೇವರೇ, ಯೆಹೂದ ಮತ್ತು ಜೆರುಸಲೇಮ್‌ಗಳ ಸಂರಕ್ಷಣೆಗಾಗಿ ಗೋಡೆಯನ್ನು ಕಟ್ಟಲು ನೀನು ನಮಗೆ ಸಹಾಯಮಾಡಿದೆ.

10 “ದೇವರೇ, ಈಗ ನಾವು ನಿನಗೆ ಏನು ಹೇಳೋಣ? ನಾವು ನಿನಗೆ ವಿಧೇಯರಾಗುವುದನ್ನು ನಿಲ್ಲಿಸಿದ್ದೇವೆ. 11 ದೇವರೇ, ನೀನು ನಿನ್ನ ಸೇವಕರಾದ ಪ್ರವಾದಿಗಳ ಮೂಲಕ ನಮಗೆ ಆ ಆಜ್ಞೆಗಳನ್ನು ಕೊಟ್ಟಿರುವೆ. ನೀನು ಹೀಗೆ ಹೇಳಿದೆ: ‘ನೀವು ವಾಸಿಸಲಿರುವ ಮತ್ತು ನಿಮ್ಮದನ್ನಾಗಿಸಿಕೊಳ್ಳುವ ನಾಡು ಪಾಳಾಗಿರುವ ನಾಡಾಗಿದೆ. ಅಲ್ಲಿಯ ಜನರು ಎಲ್ಲೆಲ್ಲಿಯೂ ಮಾಡಿರುವ ಕೆಟ್ಟಕೃತ್ಯಗಳಿಂದ ಅದು ಹಾಳಾಗಿದೆ; ಅವರು ತಮ್ಮ ಪಾಪಗಳಿಂದ ಆ ನಾಡನ್ನು ಹೊಲಸು ಮಾಡಿದ್ದಾರೆ. 12 ಆದ್ದರಿಂದ ಇಸ್ರೇಲ್ ಜನರೇ, ನಿಮ್ಮ ಮಕ್ಕಳು ಅವರ ಮಕ್ಕಳನ್ನು ಮದುವೆಯಾಗಲು ಬಿಡಬೇಡಿ. ಅವರ ಸಹವಾಸ ಮಾಡಬೇಡಿರಿ. ಅವರ ವಸ್ತುಗಳನ್ನು ಆಶಿಸಬೇಡಿರಿ. ನನ್ನ ಕಟ್ಟಳೆಗಳನ್ನು ಪಾಲಿಸಿರಿ; ಆಗ ನೀವು ಬಲಶಾಲಿಗಳಾಗಿ ಈ ದೇಶವನ್ನು ಅನುಭವಿಸುವಿರಿ. ಈ ದೇಶವನ್ನು ನೀನು ಇಟ್ಟುಕೊಂಡವರಾಗಿ ನಿಮ್ಮ ಮಕ್ಕಳಿಗೆ ಸ್ವಾಸ್ತ್ಯವಾಗಿ ಕೊಡುವಿರಿ.’

13 “ನಮಗೆ ಒದಗಿದ ಕೆಡುಕು, ಸಂಕಟಗಳಿಗೆ ನಾವೇ ಕಾರಣರು. ನಾವು ಅನೀತಿ ಕೆಲಸಗಳನ್ನು ಮಾಡಿದ್ದೆವು. ಅದಕ್ಕೆ ಅನುಭವಿಸಬೇಕಾಗಿದ್ದ ಶಿಕ್ಷೆಯನ್ನು ನೀನು ನಮಗೆ ವಿಧಿಸಲಿಲ್ಲ. ನಾವು ಅತಿಘೋರವಾದ ಪಾಪಗಳನ್ನು ಮಾಡಿದ್ದಕ್ಕೆ ಅತ್ಯಂತ ಘೋರ ಶಿಕ್ಷೆಯು ನಮಗೆ ದೊರಕ ಬೇಕಿತ್ತು. ಆದರೂ ನೀನು ನಮ್ಮವರಲ್ಲಿ ಕೆಲವರನ್ನು ಸೆರೆಯಿಂದ ತಪ್ಪಿಸಿಕೊಳ್ಳುವಂತೆ ಮಾಡಿದೆ. 14 ನಿನ್ನ ಆಜ್ಞೆಗಳಿಗೆ ಅವಿಧೇಯರಾಗಬಾರದೆಂದು ಈಗ ನಮಗೆ ತಿಳಿಯುತ್ತದೆ. ಅನ್ಯಜನರನ್ನು ಮದುವೆ ಮಾಡಿಕೊಳ್ಳಬಾರದು. ಅವರು ಘೋರ ಪಾಪಿಗಳು. ನಾವು ಹೀಗೆಯೇ ಅವರೊಂದಿಗೆ ಮದುವೆಯಾದರೆ ನೀನು ನಮ್ಮನ್ನು ನಾಶಮಾಡುವೆ ಎಂದು ನಾವು ತಿಳಿದಿದ್ದೇವೆ. ಹೀಗಿರುವಲ್ಲಿ ಇಸ್ರೇಲ್ ಜನಾಂಗದಲ್ಲಿ ಯಾರೂ ಉಳಿಯಲಾರರು.

15 “ಇಸ್ರೇಲಿನ ದೇವರಾದ ಯೆಹೋವನೇ, ನೀನು ಒಳ್ಳೆಯವನಾಗಿರುವೆ. ನಮ್ಮ ಜನಾಂಗದ ಕೆಲವರನ್ನಾದರೂ ಉಳಿದುಕೊಳ್ಳುವಂತೆ ಮಾಡಿರುವೆ. ಹೌದು, ನಾವು ಪಾಪಿಗಳು. ನಮ್ಮ ಅಪರಾಧಗಳ ದೆಸೆಯಿಂದ ಯಾರೂ ನಿನ್ನ ಮುಂದೆ ನಿಲ್ಲಲು ಸಾಧ್ಯವಿಲ್ಲ.”

ಯೋಹಾನ 16:16-24

ದುಃಖವು ಸಂತೋಷವಾಗುವುದು

16 “ಸ್ವಲ್ಪಕಾಲವಾದ ಬಳಿಕ ನೀವು ನನ್ನನ್ನು ಕಾಣುವುದಿಲ್ಲ. ಅನಂತರ ಸ್ವಲ್ಪಕಾಲವಾದ ಮೇಲೆ ನೀವು ನನ್ನನ್ನು ಮತ್ತೆ ನೋಡುವಿರಿ.”

17 ಶಿಷ್ಯರಲ್ಲಿ ಕೆಲವರು, “‘ಸ್ವಲ್ಪಕಾಲದ ಬಳಿಕ ನೀವು ನನ್ನನ್ನು ಕಾಣುವುದಿಲ್ಲ. ಆದರೆ ಅನಂತರ ಸ್ಪಲ್ಪಕಾಲವಾದ ಬಳಿಕ ನನ್ನನ್ನು ಮತ್ತೆ ನೋಡುವಿರಿ. ಏಕೆಂದರೆ ನಾನು ತಂದೆಯ ಬಳಿಗೆ ಹೋಗುತ್ತಿದ್ದೇನೆ’ ಎಂದು ಆತನು ಹೇಳಿದ್ದರ ಅರ್ಥವೇನು?” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು. 18 ಶಿಷ್ಯರು, “‘ಸ್ವಲ್ಪಕಾಲ’ ಎಂದರೇನು? ಆತನ ಮಾತೇ ನಮಗೆ ಅರ್ಥವಾಗುತ್ತಿಲ್ಲ” ಎಂದು ಒಬ್ಬರನ್ನೊಬ್ಬರು ಕೇಳತೊಡಗಿದರು.

19 ಶಿಷ್ಯರು ಇದರ ಬಗ್ಗೆ ತನ್ನನ್ನು ಕೇಳಬೇಕೆಂದಿದ್ದಾರೆ ಎಂಬುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು, “‘ಸ್ವಲ್ಪಕಾಲವಾದ ಬಳಿಕ ನೀವು ನನ್ನನ್ನು ಕಾಣುವುದಿಲ್ಲ. ಆದರೆ ಅನಂತರ ಸ್ವಲ್ಪಕಾಲವಾದ ಬಳಿಕ ನನ್ನನ್ನು ನೋಡುವಿರಿ’ ಎಂದು ನಾನು ಹೇಳಿದ್ದರ ಅರ್ಥವೇನೆಂದು ನೀವು ಒಬ್ಬರನ್ನೊಬ್ಬರು ಕೇಳುತ್ತಿದ್ದೀರಾ? 20 ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಅಳುವಿರಿ, ದುಃಖಪಡುವಿರಿ. ಆದರೆ ಲೋಕವು ಸಂತೋಷಪಡುವುದು. ನೀವು ದುಃಖಪಡುವಿರಿ, ಆದರೆ ನಿಮ್ಮ ದುಃಖವು ಆನಂದವಾಗುವುದು.

21 “ಗರ್ಭಿಣಿ ಸ್ತ್ರೀಯು ಪ್ರಸವಿಸುವ ಗಳಿಗೆ ಬಂದಾಗ ವೇದನೆಪಡುತ್ತಾಳೆ. ಮಗುವು ಜನಿಸಿದಾಗ, ಲೋಕದಲ್ಲಿ ಮಗುವೊಂದು ಜನಿಸಿತೆಂಬ ಸಂತೋಷದಿಂದ ಆಕೆ ಆ ವೇದನೆಯನ್ನು ಮರೆತುಬಿಡುತ್ತಾಳೆ. 22 ಇದು ನಿಮಗೂ ಅನ್ವಯಿಸುತ್ತದೆ. ಈಗ ನೀವು ದುಃಖದಿಂದಿದ್ದೀರಿ. ಆದರೆ ನಾನು ನಿಮ್ಮನ್ನು ಮತ್ತೆ ನೋಡಿದಾಗ ಹರ್ಷಿಸುವಿರಿ. ಆ ಹರ್ಷವನ್ನು ಯಾರೂ ನಿಮ್ಮಿಂದ ಕಸಿದುಕೊಳ್ಳಲಾರರು. 23 ಆ ದಿನದಲ್ಲಿ ನೀವು ನನಗೆ ಯಾವ ಪ್ರಶ್ನೆಯನ್ನೂ ಕೇಳುವುದಿಲ್ಲ. ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ನನ್ನ ಹೆಸರಿನಲ್ಲಿ ಏನು ಕೇಳಿಕೊಂಡರೂ ತಂದೆಯು ಅದನ್ನು ನಿಮಗೆ ಕೊಡುವನು. 24 ನೀವು ನನ್ನ ಹೆಸರಿನಲ್ಲಿ ಏನೂ ಕೇಳಿಕೊಳ್ಳಲಿಲ್ಲ. ಕೇಳಿರಿ, ಆಗ ನಿಮಗೆ ದೊರೆಯುವುದು ಮತ್ತು ನಿಮ್ಮ ಆನಂದವು ಪರಿಪೂರ್ಣವಾಗುವುದು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International