Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 115

115 ಯೆಹೋವನೇ, ಘನಮಾನಗಳು ನಮ್ಮವಲ್ಲ!
    ಅವು ನಿನ್ನವೇ.
ನಿನ್ನ ಪ್ರೀತಿಯ ನಿಮಿತ್ತವಾಗಿಯೂ ನಂಬಿಗಸ್ತಿಕೆಯ ನಿಮಿತ್ತವಾಗಿಯೂ ಘನಮಾನಗಳು ನಿನಗೇ ಸಲ್ಲತಕ್ಕದ್ದು.
ಅವರ ದೇವರು ಎಲ್ಲಿದ್ದಾನೆಂದು ಜನಾಂಗಗಳು ಯಾಕೆ ಹೇಳಬೇಕು?
ನಮ್ಮ ದೇವರು ಪರಲೋಕದಲ್ಲಿದ್ದಾನೆ; ತಾನು ಬಯಸಿದ್ದನ್ನೆಲ್ಲಾ ಮಾಡುತ್ತಾನೆ.
ಅನ್ಯಜನಾಂಗಗಳ “ದೇವರುಗಳು” ಬೆಳ್ಳಿಬಂಗಾರಗಳಿಂದ ಮಾಡಿದ ವಿಗ್ರಹಗಳಷ್ಟೇ.
    ಅವುಗಳನ್ನು ಮಾಡಿದವರು ಮನುಷ್ಯರೇ.
ಆ ವಿಗ್ರಹಗಳಿಗೆ ಬಾಯಿಗಳಿವೆ, ಆದರೆ ಮಾತಾಡಲಾರವು.
    ಕಣ್ಣುಗಳಿವೆ, ಆದರೆ ನೋಡಲಾರವು.
ಕಿವಿಗಳಿವೆ, ಆದರೆ ಕೇಳಲಾರವು.
    ಮೂಗುಗಳಿವೆ, ಆದರೆ ಮೂಸಲಾರವು.
ಕೈಗಳಿವೆ, ಆದರೆ ಯಾವುದನ್ನೂ ಮುಟ್ಟಲಾರವು.
    ಕಾಲುಗಳಿವೆ, ಆದರೆ ನಡೆಯಲಾರವು.
    ಅವುಗಳ ಗಂಟಲುಗಳಿಂದ ಶಬ್ದವೇ ಹೊರಡದು.
ಅವುಗಳನ್ನು ಮಾಡುವವರೂ ಅವುಗಳಲ್ಲಿ ಭರವಸವಿಟ್ಟಿರುವವರೂ ಅವುಗಳಂತೆಯೇ.

ಇಸ್ರೇಲರೇ, ಯೆಹೋವನಲ್ಲಿ ಭರವಸವಿಡಿರಿ.
    ಆತನು ಅವರ ಬಲವೂ ಗುರಾಣಿಯೂ ಆಗಿದ್ದಾನೆ.
10 ಆರೋನನ ಮನೆತನದವರೇ, ಯೆಹೋವನಲ್ಲಿ ಭರವಸವಿಡಿರಿ.
    ಆತನು ಅವರ ಬಲವೂ ಗುರಾಣಿಯೂ ಆಗಿದ್ದಾನೆ.
11 ಯೆಹೋವನ ಭಕ್ತರು ಆತನಲ್ಲಿ ಭರವಸವಿಡುವರು.
    ಆತನು ಅವರ ಬಲವೂ ಗುರಾಣಿಯೂ ಆಗಿದ್ದಾನೆ.

12 ಯೆಹೋವನು ನಮ್ಮನ್ನು ಜ್ಞಾಪಕಮಾಡಿಕೊಂಡು ಆಶೀರ್ವದಿಸುವನು.
    ಆತನು ಇಸ್ರೇಲನ್ನೂ ಆರೋನನ ಮನೆತನವನ್ನೂ ಆಶೀರ್ವದಿಸುವನು.
13 ಆತನು ದೊಡ್ಡವರೂ ಚಿಕ್ಕವರೂ ಎಂದೆನ್ನದೆ ತನ್ನ ಭಕ್ತರನ್ನೆಲ್ಲಾ ಆಶೀರ್ವದಿಸುವನು.

14 ಯೆಹೋವನು ನಿಮ್ಮ ಕುಟುಂಬಗಳನ್ನೂ ನಿಮ್ಮ ಮಕ್ಕಳ ಕುಟುಂಬಗಳನ್ನೂ ಅಭಿವೃದ್ಧಿಪಡಿಸಲಿ.
15     ಯೆಹೋವನಿಂದ ನಿಮಗೆ ಆಶೀರ್ವಾದವಾಗಲಿ.
    ಪರಲೋಕವನ್ನೂ ಭೂಲೋಕವನ್ನೂ ಸೃಷ್ಟಿಮಾಡಿದಾತನು ಆತನೇ.
16 ಪರಲೋಕವು ಯೆಹೋವನದು.
    ಆತನು ಭೂಲೋಕವನ್ನು ಮನುಷ್ಯರಿಗೆ ಕೊಟ್ಟನು.
17 ಸತ್ತುಹೋದವರು ಯೆಹೋವನನ್ನು ಕೊಂಡಾಡುವುದಿಲ್ಲ.
    ಸಮಾಧಿಯೊಳಗಿರುವವರು ಆತನನ್ನು ಸ್ತುತಿಸುವುದಿಲ್ಲ.
18 ನಾವಾದರೋ ಯೆಹೋವನನ್ನು ಈಗಲೂ ಯಾವಾಗಲೂ ಸ್ತುತಿಸುವೆವು!

ಯೆಹೋವನಿಗೆ ಸ್ತೋತ್ರ!

ವಿಮೋಚನಕಾಂಡ 28:29-38

29 “ಆರೋನನು ಪವಿತ್ರಸ್ಥಳವನ್ನು ಪ್ರವೇಶಿಸುವಾಗ, ದೈವನಿರ್ಣಯದ ಪದಕವನ್ನು ಧರಿಸಿಕೊಳ್ಳಬೇಕು. ಈ ರೀತಿ ಎದೆಯ ಮೇಲೆ ಇಸ್ರೇಲನ ಗಂಡುಮಕ್ಕಳ ಹೆಸರುಗಳಿರಬೇಕು. ಅವನು ನ್ಯಾಯತೀರಿಸಲು ಧರಿಸಿಕೊಂಡಿರುವ ದೈವನಿರ್ಣಯದ ಪದಕದ ಮೇಲೆ ಈ ಹೆಸರುಗಳಿರುತ್ತವೆ. ಈ ರೀತಿಯಲ್ಲಿ ಇಸ್ರೇಲನ ಹನ್ನೆರಡು ಮಂದಿ ಗಂಡುಮಕ್ಕಳನ್ನು ಯೆಹೋವನಿಗೆ ಯಾವಾಗಲೂ ಜ್ಞಾಪಿಸಲಾಗುವುದು. 30 ದೈವನಿರ್ಣಯದ ಪದಕದೊಳಗೆ ಊರೀಮ್ ಮತ್ತು ತುಮ್ಮೀಮ್ ಎಂಬ ವಸ್ತುಗಳನ್ನು ಇಡು. ಆರೋನನು ಯೆಹೋವನ ಮುಂದೆ ಹೋಗುವಾಗ ಅವುಗಳು ಅವನ ಎದೆಯ ಮೇಲಿರುವವು. ಹೀಗೆ ಆರೋನನು ಯೆಹೋವನ ಮುಂದೆ ನಿಲ್ಲುವಾಗಲೆಲ್ಲಾ, ಜನರಿಗೆ ತೀರ್ಪು ನೀಡತಕ್ಕದ್ದನ್ನು ಯಾವಾಗಲೂ ತನ್ನ ಎದೆಯ ಮೇಲೆ ಹೊತ್ತುಕೊಂಡಿರುವನು.

ಯಾಜಕರ ಇತರ ಬಟ್ಟೆಗಳು

31 “ಏಫೋದಿನ ಒಳಗೆ ಹಾಕಿಕೊಳ್ಳಲು ಒಂದು ನಿಲುವಂಗಿಯನ್ನು ನೀಲಿಬಟ್ಟೆಯಿಂದ ಮಾಡಿಸಬೇಕು. 32 ತಲೆಯನ್ನು ತೂರಿಸುವುದಕ್ಕೆ ಮಧ್ಯದಲ್ಲಿ ಒಂದು ಸಂದು ಮಾಡಿಸು. ಈ ಸಂದಿನ ಸುತ್ತಲೂ ಹೆಣೆದ ಬಟ್ಟೆಯನ್ನು ಹೊಲಿಸು. ಈ ಬಟ್ಟೆಯು ಸಂದು ಹರಿದುಹೋಗದಂತೆ ಕಾಪಾಡುವುದು. 33 ಬಟ್ಟೆಯ ಅಂಚಿನ ಸುತ್ತಲೂ ದಾಳಿಂಬೆ ಹಣ್ಣುಗಳನ್ನು ಮಾಡಲು ನೀಲಿ, ನೇರಳೆ ಮತ್ತು ಕೆಂಪುದಾರಗಳನ್ನು ಉಪಯೋಗಿಸಬೇಕು. ಆ ದಾಳಿಂಬೆ ಹಣ್ಣಿನ ಚೆಂಡುಗಳನ್ನು ನಿಲುವಂಗಿಯ ಕೆಳಅಂಚಿನಲ್ಲಿ ಸುತ್ತಲೂ ನೇತಾಡುವಂತೆ ಸಿಕ್ಕಿಸಬೇಕು. ದಾಳಿಂಬೆ ಹಣ್ಣಿನ ಚೆಂಡುಗಳ ನಡುವೆ ಚಿನ್ನದ ಗೆಜ್ಜೆಗಳನ್ನು ಸಿಕ್ಕಿಸಬೇಕು. 34 ಹೀಗೆ ನಿಲುವಂಗಿಯ ಕೆಳಅಂಚಿನಲ್ಲಿ ಸುತ್ತಲೂ ಗೆಜ್ಜೆಗಳು ಮತ್ತು ದಾಳಿಂಬೆ ಹಣ್ಣುಗಳು ಇರಬೇಕು. ಪ್ರತಿ ಎರಡು ದಾಳಿಂಬೆ ಹಣ್ಣಿನ ನಡುವೆ ಗೆಜ್ಜೆ ಇರಬೇಕು. 35 ಆರೋನನು ಯಾಜಕನಾಗಿ ಸೇವೆಮಾಡುವಾಗ ಈ ನಿಲುವಂಗಿಯನ್ನು ಧರಿಸಿಕೊಂಡಿರುವನು. ಯೆಹೋವನ ಮುಂದೆ ನಿಲ್ಲುವುದಕ್ಕೆ ಆರೋನನು ಪವಿತ್ರಸ್ಥಳವನ್ನು ಪ್ರವೇಶಿಸುವಾಗ ಗೆಜ್ಜೆಗಳು ಶಬ್ದ ಮಾಡುತ್ತಿರುತ್ತವೆ. ಅವನು ಪವಿತ್ರಸ್ಥಳವನ್ನು ಬಿಡುವಾಗಲೂ ಗೆಜ್ಜೆಗಳು ಶಬ್ಧ ಮಾಡುತ್ತಿರುತ್ತವೆ. ಹೀಗಾಗಿ ಆರೋನನು ಸಾಯುವುದಿಲ್ಲ.

36 “ಶುದ್ಧಬಂಗಾರದ ಪಟ್ಟಿಯನ್ನು ಮಾಡಿಸಿ ಮುದ್ರೆಯನ್ನು ಕೆತ್ತುವ ರೀತಿಯಲ್ಲಿ “ಯೆಹೋವನಿಗೆ ಮೀಸಲು” ಎಂಬ ಮಾತುಗಳನ್ನು ಚಿನ್ನದಲ್ಲಿ ಕೆತ್ತಿಸಬೇಕು. 37 ಚಿನ್ನದ ಪಟ್ಟಿಯನ್ನು ನೀಲಿದಾರಕ್ಕೆ ಬಿಗಿಯಾಗಿ ಕಟ್ಟಿಸಬೇಕು. ನೀಲಿದಾರವನ್ನು ಮುಂಡಾಸದ ಸುತ್ತಲೂ ಅದರಲ್ಲಿ ಕೆತ್ತಿಸಬೇಕು. ಚಿನ್ನದ ಪಟ್ಟಿಯು ಮುಂಡಾಸದ ಮುಂಭಾಗದಲ್ಲಿರಬೇಕು. 38 ಆರೋನನು ಇದನ್ನು ತನ್ನ ಹಣೆಯ ಮೇಲೆ ಧರಿಸಿಕೊಳ್ಳುವನು. ಹೀಗೆ, ಇಸ್ರೇಲರು ಅರ್ಪಿಸಿದ ಕಾಣಿಕೆಗಳಲ್ಲಿ ದೋಷವೇನಾದರೂ ಇದ್ದರೆ ಅವನು ಅದನ್ನು ತನ್ನ ಮೇಲೆ ತೆಗೆದುಕೊಂಡು ತಾನೇ ಅದನ್ನು ವಹಿಸಿಕೊಳ್ಳುವನು. ಇವು ಜನರು ಯೆಹೋವನಿಗೆ ಸಮರ್ಪಿಸುವ ಕಾಣಿಕೆಗಳಾಗಿವೆ. ಜನರ ಕಾಣಿಕೆಗಳನ್ನು ಯೆಹೋವನು ಅಂಗೀಕರಿಸುವಂತೆ ಆರೋನನು ಇದನ್ನು ಯಾವಾಗಲೂ ತನ್ನ ಶಿರದಲ್ಲಿ ಧರಿಸಿಕೊಂಡಿರುವನು.

ಫಿಲಿಪ್ಪಿಯವರಿಗೆ 1:3-11

ಪೌಲನ ಪ್ರಾರ್ಥನೆ

ನಾನು ನಿಮ್ಮನ್ನು ಜ್ಞಾಪಿಸಿಕೊಂಡಾಗಲೆಲ್ಲಾ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. ನಾನು ನಿಮ್ಮೆಲ್ಲರಿಗಾಗಿ ಯಾವಾಗಲೂ ಆನಂದದಿಂದ ಪ್ರಾರ್ಥಿಸುತ್ತೇನೆ. ನನ್ನ ಸುವಾರ್ತಾಸೇವೆಯಲ್ಲಿ ನೀವು ಪಾಲುಗಾರರಾದ ಕಾರಣ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. ನೀವು ನಂಬಿಕೊಂಡಂದಿನಿಂದ ಇಲ್ಲಿಯವರೆಗೂ ನನಗೆ ಸಹಾಯ ಮಾಡಿದಿರಿ. ದೇವರು ನಿಮ್ಮಲ್ಲಿ ಒಳ್ಳೆಯ ಕಾರ್ಯವನ್ನು ಆರಂಭಿಸಿ ನಡೆಸಿಕೊಂಡು ಬರುತ್ತಿದ್ದಾನೆ. ಯೇಸು ಕ್ರಿಸ್ತನು ಮತ್ತೆ ಬಂದಾಗ ದೇವರು ಆ ಕಾರ್ಯವನ್ನು ಸಂಪೂರ್ಣಗೊಳಿಸುವನೆಂದು ನನಗೆ ಭರವಸೆ ಇದೆ.

ನಿಮ್ಮೆಲ್ಲರ ವಿಷಯದಲ್ಲಿ ಈ ರೀತಿ ಆಲೋಚಿಸುವುದು ನ್ಯಾಯಬದ್ಧವಾದದ್ದೆಂದು ನನಗೆ ಗೊತ್ತಿದೆ. ನೀವು ನನ್ನ ಹೃದಯದಲ್ಲಿರುವುದರಿಂದ, ನಾನು ನಿಮಗೆ ತುಂಬ ಸಮೀಪಸ್ಥನಾಗಿದ್ದೇನೆಂದು ಭಾವಿಸುತ್ತೇನೆ. ನೀವೆಲ್ಲರೂ ನನ್ನೊಂದಿಗೆ ದೇವರ ಕೃಪೆಯಲ್ಲಿ ಪಾಲುಗಾರರಾದ ಕಾರಣ ನೀವು ನನಗೆ ಸಮೀಪರಾಗಿದ್ದೀರಿ. ನಾನು ಸೆರೆಯಲ್ಲಿರುವಾಗಲೂ ಸುವಾರ್ತೆಯನ್ನು ಪ್ರತಿಪಾದಿಸುವಾಗಲೂ ನಿರೂಪಿಸುವಾಗಲೂ ನೀವು ನನ್ನೊಂದಿಗೆ ದೇವರ ಕೃಪೆಯಲ್ಲಿ ಪಾಲುಗಾರರಾಗಿದ್ದೀರಿ. ನಾನು ನಿಮ್ಮನ್ನು ನೋಡಲು ಬಹು ತವಕಪಡುತ್ತಿದ್ದೇನೆಂಬುದು ದೇವರಿಗೆ ಗೊತ್ತಿದೆ. ಯೇಸು ಕ್ರಿಸ್ತನಿಂದ ತೋರಿಬಂದ ಪ್ರೀತಿಯಿಂದ ನಾನು ನಿಮ್ಮೆಲ್ಲರನ್ನು ಪ್ರೀತಿಸುತ್ತೇನೆ.

ನಿಮಗಾಗಿ ನಾನು ಪ್ರಾರ್ಥಿಸುವುದೇನೆಂದರೆ:

ನೀವು ಪ್ರೀತಿಯಲ್ಲಿ ವೃದ್ಧಿಯಾಗುತ್ತಾ ಜ್ಞಾನವಂತರೂ ತಿಳುವಳಿಕೆಯುಳ್ಳವರೂ ಆಗಬೇಕು. 10 ಒಳಿತುಕೆಡಕುಗಳಿಗಿರುವ ವ್ಯತ್ಯಾಸವನ್ನು ಅರಿತುಕೊಂಡು ಒಳ್ಳೆಯದನ್ನೇ ಆರಿಸಿಕೊಳ್ಳುವಂಥವರಾಗಬೇಕು; ಕ್ರಿಸ್ತನ ಬರುವಿಕೆಯಲ್ಲಿ ನೀವು ಪರಿಶುದ್ಧರಾಗಿಯೂ ನಿರ್ದೋಷಿಗಳಾಗಿಯೂ ಇರಬೇಕು. 11 ಕ್ರಿಸ್ತನ ಸಹಾಯದಿಂದ ದೇವರಿಗೆ ಘನತೆಯನ್ನೂ ಸ್ತೋತ್ರವನ್ನೂ ಉಂಟುಮಾಡುವುದಕ್ಕಾಗಿ ನೀವು ಅನೇಕ ಕಾರ್ಯಗಳನ್ನು ಮಾಡುವಂಥವರಾಗಬೇಕು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International