Revised Common Lectionary (Semicontinuous)
93 ಯೆಹೋವನೇ ರಾಜನು.
ಆತನು ವೈಭವವನ್ನೂ ಬಲವನ್ನೂ ವಸ್ತ್ರದಂತೆ ಧರಿಸಿಕೊಂಡಿದ್ದಾನೆ.
ಆತನು ಸಿದ್ಧನಾಗಿರುವುದರಿಂದ ಇಡೀ ಪ್ರಂಪಚವೇ ಸುರಕ್ಷಿತವಾಗಿರುವುದು.
ಅದು ಕದಲುವುದೇ ಇಲ್ಲ.
2 ದೇವರೇ, ಆದಿಯಿಂದಲೂ ನಿನ್ನ ರಾಜ್ಯವು ಶಾಶ್ವತವಾಗಿದೆ.
ಆದಿಯಿಂದಲೂ ಇರುವಾತನು ನೀನೊಬ್ಬನೇ!
3 ಯೆಹೋವನೇ, ನದಿಗಳ ಶಬ್ದವು ಮೊರೆಯುತ್ತಿದೆ.
ರಭಸದಿಂದ ಬಡಿಯುತ್ತಿರುವ ಅಲೆಗಳು ಭೋರ್ಗರೆಯುತ್ತಿವೆ.
4 ಬಿರುಸಾಗಿ ಬಡಿಯುತ್ತಿರುವ ಸಮುದ್ರದ ಅಲೆಗಳು ಭೋರ್ಗರೆಯುತ್ತಾ ಪ್ರಬಲವಾಗಿವೆ.
ಆದರೆ ಉನ್ನತದಲ್ಲಿರುವ ಯೆಹೋವನು ಅದಕ್ಕಿಂತ ಎಷ್ಟೋ ಬಲಿಷ್ಠನಾಗಿದ್ದಾನೆ.
5 ಯೆಹೋವನೇ, ನಿನ್ನ ಕಟ್ಟಳೆಗಳು ಶಾಶ್ವತವಾಗಿವೆ.
ನಿನ್ನ ಪವಿತ್ರಾಲಯವು ಬಹುಕಾಲದವರೆಗೆ ಇರುತ್ತದೆ.
ಯೆಹೋವನನ್ನು ಸ್ಮರಿಸಿರಿ
11 “ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿರಿ. ಆತನು ಹೇಳಿದವುಗಳನ್ನೆಲ್ಲ ಮಾಡಿರಿ. ನೀವು ಕಟ್ಟಳೆಗಳಿಗೆ, ನಿಯಮಗಳಿಗೆ ಮತ್ತು ಆಜ್ಞೆಗಳಿಗೆ ಯಾವಾಗಲೂ ವಿಧೇಯರಾಗಿರಬೇಕು. 2 ನಿಮಗೆ ಉಪದೇಶ ಮಾಡುವುದಕ್ಕಾಗಿ ನಿಮ್ಮ ದೇವರಾದ ಯೆಹೋವನು ಮಾಡಿದ ಮಹತ್ಕಾರ್ಯಗಳನ್ನು ನೆನಪುಮಾಡಿರಿ. ಆತನ ಕಾರ್ಯಗಳನ್ನು ನೋಡಿದವರು ನೀವೇ ಹೊರತು ನಿಮ್ಮ ಮಕ್ಕಳಲ್ಲ. ಆತನು ಎಂಥಾ ಶಕ್ತಿಶಾಲಿ ಎಂದು ನೀವು ತಿಳಿದಿದ್ದೀರಿ. 3 ಆ ಮಹತ್ಕಾರ್ಯಗಳನ್ನು ನೋಡಿದವರು ನೀವೇ ಹೊರತು ನಿಮ್ಮ ಮಕ್ಕಳಲ್ಲ. ಈಜಿಪ್ಟಿನಲ್ಲಿ ಫರೋಹನಿಗೂ ಅವನ ಸಮಸ್ತ ಪ್ರಜೆಗಳಿಗೂ ಮಾಡಿದ್ದನ್ನು ನೀವು ನೋಡಿದ್ದೀರಿ. 4 ಯೆಹೋವನು ಈಜಿಪ್ಟಿನ ಸೈನಿಕರಿಗೂ ಅವರ ಕುದುರೆ ರಥಗಳಿಗೂ ಮಾಡಿದ್ದನ್ನು ನೋಡಿದವರು ನೀವೇ ಹೊರತು ನಿಮ್ಮ ಮಕ್ಕಳಲ್ಲ. ಅವರು ನಿಮ್ಮನ್ನು ಓಡಿಸಿಕೊಂಡು ಬರುತ್ತಿದ್ದರು. ಆದರೆ ಯೆಹೋವನು ಅವರನ್ನು ಸಮುದ್ರದ ನೀರಿನಲ್ಲಿ ಮುಳುಗಿಹೋಗುವಂತೆ ಮಾಡಿದುದ್ದನ್ನು ನೋಡಿದ್ದೀರಿ ಮತ್ತು ಅವರು ಸಂಪೂರ್ಣವಾಗಿ ನಾಶವಾಗುವುದನ್ನು ನೋಡಿದ್ದೀರಿ. 5 ನೀವು ಈ ಸ್ಥಳಕ್ಕೆ ಬರುವತನಕ ನಿಮ್ಮ ದೇವರಾದ ಯೆಹೋವನು ನಿಮಗೋಸ್ಕರ ಮರುಭೂಮಿಯಲ್ಲಿ ಮಾಡಿದ ಎಲ್ಲಾ ಅದ್ಭುತಕಾರ್ಯಗಳನ್ನು ನೋಡಿದವರು, ನೀವೇ ಹೊರತು ನಿಮ್ಮ ಮಕ್ಕಳಲ್ಲ. 6 ರೂಬೇನ್ ಕುಲದ ಎಲೀಯಾಬನ ಮಕ್ಕಳಾದ ದಾತಾನನಿಗೆ ಮತ್ತು ಅಬೀರಾಮನಿಗೆ ಯೆಹೋವನು ಮಾಡಿದ್ದನ್ನು ನೀವೇ ನೋಡಿದ್ದೀರಿ. ನಿಮ್ಮ ಕಣ್ಣಮುಂದೆಯೇ ಭೂಮಿಯು ಬಾಯಿ ತೆರೆದು ಅವರನ್ನು, ಅವರ ಹೆಂಡತಿಮಕ್ಕಳನ್ನು, ಅವರ ಗುಡಾರವನ್ನು, ಸೇವಕರನ್ನು, ಅವರ ಪಶುಗಳನ್ನು ನುಂಗಿದ್ದನ್ನು ನೋಡಿದವರು ನೀವೇ ಹೊರತು ನಿಮ್ಮ ಮಕ್ಕಳಲ್ಲ. 7 ಆತನು ಮಾಡಿದ ಎಲ್ಲಾ ಮಹಾಕೃತ್ಯಗಳನ್ನು ನೋಡಿದವರು ನೀವೇ.
8 “ಆದ್ದರಿಂದ ನಾನು ನಿಮಗೆ ನೀವು ಎಲ್ಲಾ ಕಟ್ಟಳೆಗಳಿಗೆ ವಿಧೇಯರಾಗಿ ನಡೆಯಬೇಕು; ಆಗ ನೀವು ಬಲವನ್ನು ಹೊಂದುವಿರಿ; ಜೋರ್ಡನ್ ನದಿಯನ್ನು ದಾಟಿ ದೇವರು ನಿಮಗೆ ಕೊಟ್ಟಿರುವ ದೇಶವನ್ನು ಸ್ವಾಧೀನಪಡಿಸಿಕೊಳ್ಳುವಿರಿ. 9 ಆ ದೇಶದಲ್ಲಿ ನೀವು ಬಹುಕಾಲ ಬಾಳುವಿರಿ. ಆ ದೇಶವು ಎಲ್ಲಾ ಒಳ್ಳೆಯ ವಸ್ತುಗಳಿಂದ ತುಂಬಿದೆ. ಆ ದೇಶವನ್ನು ನಿಮ್ಮ ಪೂರ್ವಿಕರಿಗೆ ಕೊಡುವುದಾಗಿ ದೇವರು ವಾಗ್ದಾನ ಮಾಡಿದ್ದಾನೆ. 10 ನಿಮಗೆ ದೊರಕಲಿರುವ ದೇಶವು ನೀವು ಹೊರಟುಬಂದ ಈಜಿಪ್ಟ್ ದೇಶದಂತಿಲ್ಲ. ಈಜಿಪ್ಟಿನಲ್ಲಿ ನೀವು ಬಿತ್ತನೆ ಮಾಡಿದ ಮೇಲೆ ನೀರನ್ನು ಹಾಯಿಸಲು ನಿಮ್ಮ ಕಾಲುಗಳನ್ನು ಬಳಸುತ್ತಿದ್ದಿರಿ. ನಿಮ್ಮ ತರಕಾರಿ ತೋಟಗಳಿಗೆ ನೀರು ಹಾಯಿಸುವಂತೆಯೇ ನಿಮ್ಮ ಗದ್ದೆಗಳಿಗೂ ನೀರನ್ನು ಹಾಯಿಸುತ್ತಿದ್ದಿರಿ. 11 ನಿಮಗೆ ಶೀಘ್ರದಲ್ಲಿಯೇ ದೊರಕಲಿರುವ ಭೂಮಿ ಅಂಥದ್ದಲ್ಲ. ಅದು ಬೆಟ್ಟತಗ್ಗುಗಳ ಪ್ರಾಂತ್ಯ; ಮಳೆಯ ನೀರು ಭೂಮಿಯನ್ನು ತೊಯಿಸುತ್ತದೆ. 12 ನಿಮ್ಮ ದೇವರಾದ ಯೆಹೋವನು ಆ ಭೂಮಿಯನ್ನು ಕಾಯುತ್ತಾನೆ. ಆ ದೇಶವನ್ನು ವರ್ಷದ ಪ್ರಾರಂಭದಿಂದ ಕೊನೆಯ ತನಕ ಪರಿಪಾಲಿಸುತ್ತಾನೆ.
13 “ಯೆಹೋವನು ಹೀಗೆನ್ನುತ್ತಾನೆ: ‘ಇಂದು ನಾನು ನಿಮಗೆ ಕೊಟ್ಟ ಆಜ್ಞೆಗಳನ್ನೆಲ್ಲ ಗಮನವಿಟ್ಟು ಕೇಳಿರಿ: ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ, ನಿಮ್ಮ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಆತನ ಸೇವೆ ಮಾಡಬೇಕು. ಹೀಗೆ ಮಾಡಿದರೆ 14 ಕಾಲಕಾಲಕ್ಕೆ ಸರಿಯಾಗಿ ನಿಮ್ಮ ದೇಶಕ್ಕೆ ನಾನು ಮಳೆಯನ್ನು ಕಳುಹಿಸುತ್ತೇನೆ. ಹಿಂಗಾರು, ಮುಂಗಾರು ಮಳೆ ತಕ್ಕ ಸಮಯದಲ್ಲಿ ಬೀಳುವುದು. ಆಗ ನೀವು ನಿಮ್ಮ ಧಾನ್ಯಗಳನ್ನು, ಹೊಸ ದ್ರಾಕ್ಷಾರಸ ಮತ್ತು ಎಣ್ಣೆಗಳನ್ನು ಶೇಖರಿಸುವಿರಿ. 15 ನಿಮ್ಮ ಹೊಲಗಳಲ್ಲಿ ಮತ್ತು ನಿಮ್ಮ ಪಶುಗಳಿಗೆ ಹುಲ್ಲು ಹುಲುಸಾಗಿ ಬೆಳೆಯುವಂತೆ ಮಾಡುವೆನು. ನಿಮಗೆ ಆಹಾರವು ಸಮೃದ್ಧಿಕರವಾಗಿರುವುದು.’
16 “ಆದ್ದರಿಂದ ಜಾಗರೂಕರಾಗಿರಿ. ಬೇರೆ ದೇವರುಗಳನ್ನು ಸೇವೆಮಾಡಿ ಆರಾಧಿಸಬೇಡಿ. 17 ಇಲ್ಲವಾದರೆ, ಯೆಹೋವನು ನಿಮ್ಮ ಮೇಲೆ ಬಹಳ ಕೋಪಗೊಳ್ಳುವನು; ಆಕಾಶವನ್ನು ಮುಚ್ಚಿ ಮಳೆಬೀಳದಂತೆ ಮಾಡುವನು. ಆಗ ಹೊಲದಲ್ಲಿ ಧಾನ್ಯ ಬೆಳೆಯುವುದಿಲ್ಲ. ಆಗ ಆತನು ಕೊಡುವ ಒಳ್ಳೆಯ ದೇಶದಲ್ಲಿಯೇ ಊಟಕ್ಕಿಲ್ಲದೆ ಸಾಯುವಿರಿ.
13 ಪೊಂತ್ಯ ಪಿಲಾತನ ಮುಂದೆ ಸಾಕ್ಷಿ ನೀಡಿದ ಕ್ರಿಸ್ತ ಯೇಸುವಿನ ಸನ್ನಿಧಿಯಲ್ಲಿಯೂ ಸರ್ವಸೃಷ್ಟಿಗೆ ಜೀವದಾಯಕನಾದ ದೇವರ ಸನ್ನಿಧಿಯಲ್ಲಿಯೂ ನಾನು ನಿನಗೆ ಆಜ್ಞಾಪಿಸುವುದೇನೆಂದರೆ, 14 ನಮ್ಮ ಪ್ರಭುವಾದ ಯೇಸುಕ್ರಿಸ್ತನು ಮತ್ತೆ ಪ್ರತ್ಯಕ್ಷನಾಗುವ ಕಾಲದವರೆಗೆ ನೀನು ಆ ಕಾರ್ಯಗಳನ್ನು ತಪ್ಪಿಲ್ಲದೆ, ನಿಂದಾರಹಿತನಾಗಿ ಮಾಡುತ್ತಿರು. 15 ದೇವರು ತಕ್ಕ ಸಮಯದಲ್ಲಿ ಅದನ್ನು ನೆರವೇರಿಸುವನು. ಆತನು ಭಾಗ್ಯವಂತನಾದ ಏಕಾಧಿಪತಿಯೂ ರಾಜಾಧಿರಾಜನೂ ಪ್ರಭುಗಳಿಗೆ ಪ್ರಭುವೂ ಆಗಿದ್ದಾನೆ. 16 ಸಾವಿಲ್ಲದವನು ಆತನೊಬ್ಬನೇ. ಆತನು ಉಜ್ವಲ ಬೆಳಕಿನಲ್ಲಿ ವಾಸವಾಗಿರುವುದರಿಂದ ಆತನ ಹತ್ತಿರಕ್ಕೆ ಜನರು ಹೋಗಲು ಸಾಧ್ಯವಿಲ್ಲ. ಆತನನ್ನು ಇದುವರೆಗೆ ಯಾರು ನೋಡಿಲ್ಲ; ನೋಡಲು ಸಾಧ್ಯವೂ ಇಲ್ಲ. ಆತನಿಗೆ ಗೌರವವೂ ಅಧಿಪತ್ಯವೂ ಸದಾಕಾಲವಿರಲಿ. ಆಮೆನ್.
Kannada Holy Bible: Easy-to-Read Version. All rights reserved. © 1997 Bible League International