Revised Common Lectionary (Semicontinuous)
ಯೆಹೂದ್ಯರಲ್ಲದವರಿಗೆ ಪವಿತ್ರಾತ್ಮಧಾರೆ
44 ಪೇತ್ರನು ಇನ್ನೂ ಹೀಗೆ ಹೇಳುತ್ತಿರುವಾಗಲೇ, ಅವನ ಉಪದೇಶವನ್ನು ಕೇಳುತ್ತಿದ್ದವರ ಮೇಲೆ ಪವಿತ್ರಾತ್ಮನು ಇಳಿದು ಬಂದನು. 45 ಪೇತ್ರನೊಂದಿಗೆ ಬಂದಿದ್ದ ಯೆಹೂದ್ಯ ವಿಶ್ವಾಸಿಗಳು ವಿಸ್ಮಿತರಾದರು. ಯೆಹೂದ್ಯರಲ್ಲದ ಜನರಿಗೂ ಸಹ ಪವಿತ್ರಾತ್ಮಧಾರೆಯಾದದ್ದನ್ನು ಕಂಡು ಅವರು ಆಶ್ಚರ್ಯಪಟ್ಟರು. 46 ಅವರು ಬೇರಬೇರೆ ಭಾಷೆಗಳನ್ನು ಮಾತಾಡುತ್ತಾ ದೇವರಿಗೆ ಸ್ತೋತ್ರ ಸಲ್ಲಿಸುತ್ತಿರುವುದನ್ನು ಆ ಯೆಹೂದ್ಯ ವಿಶ್ವಾಸಿಗಳು ಕೇಳಿದರು. ಬಳಿಕ ಪೇತ್ರನು, 47 “ನೀರಿನಲ್ಲಿ ದೀಕ್ಷಾಸ್ನಾನ ತೆಗೆದುಕೊಳ್ಳದಂತೆ ನಾವು ಈ ಜನರಿಗೆ ಅಡ್ಡಿಮಾಡಲು ಸಾಧ್ಯವಿಲ್ಲ. ನಾವು ಹೊಂದಿಕೊಂಡಂತೆ ಇವರೂ ಪವಿತ್ರಾತ್ಮನನ್ನು ಹೊಂದಿಕೊಂಡರು!” ಎಂದು ಹೇಳಿ, 48 ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನ ತೆಗೆದುಕೊಳ್ಳಲು ಅವರಿಗೆ ಅಪ್ಪಣೆಕೊಟ್ಟನು. ಬಳಿಕ ಅವರು ತಮ್ಮೊಂದಿಗೆ ಕೆಲವು ದಿನಗಳವರೆಗೆ ಇರಬೇಕೆಂದು ಪೇತ್ರನನ್ನು ಕೇಳಿಕೊಂಡರು.
ಸ್ತುತಿಗೀತೆ.
98 ಯೆಹೋವನಿಗೆ ಹೊಸಹಾಡನ್ನು ಹಾಡಿರಿ.
ಆತನು ಅಮೋಘವಾದ ಕಾರ್ಯಗಳನ್ನು ಮಾಡಿದ್ದಾನೆ!
ಆತನ ಬಲಗೈಯೂ ಪರಿಶುದ್ಧ ಬಾಹುವೂ
ಆತನಿಗೆ ಜಯವನ್ನು ಉಂಟುಮಾಡಿವೆ.
2 ಯೆಹೋವನು ತನ್ನ ರಕ್ಷಣಾಶಕ್ತಿಯನ್ನು ಜನಾಂಗಗಳಿಗೆ ತೋರಿದನು.
ಆತನು ತನ್ನ ನೀತಿಯನ್ನು ಅವರಿಗೆ ಪ್ರಕಟಿಸಿದ್ದಾನೆ.
3 ಇಸ್ರೇಲರ ಕಡೆಗಿದ್ದ ಆತನ ಪ್ರೀತಿಸತ್ಯತೆಗಳನ್ನು ಆತನ ಜನರು ಜ್ಞಾಪಿಸಿಕೊಂಡಿದ್ದಾರೆ.
ದೂರದೇಶಗಳ ಜನರು ನಮ್ಮ ದೇವರ ರಕ್ಷಣಾಶಕ್ತಿಯನ್ನು ಕಂಡಿದ್ದಾರೆ.
4 ಭೂನಿವಾಸಿಗಳೆಲ್ಲರೇ, ಯೆಹೋವನಿಗೆ ಆನಂದ ಘೋಷಮಾಡಿರಿ.
ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ!
5 ಹಾರ್ಪ್ವಾದ್ಯಗಳೊಡನೆ, ಯೆಹೋವನನ್ನು ಕೊಂಡಾಡಿರಿ.
ಹಾರ್ಪ್ವಾದ್ಯಗಳನ್ನು ನುಡಿಸುತ್ತಾ ಆತನನ್ನು ಸುತ್ತಿಸಿರಿ.
6 ತುತ್ತೂರಿಗಳನ್ನೂ ಕೊಂಬುಗಳನ್ನೂ ಊದಿರಿ.
ನಮ್ಮ ರಾಜನಾದ ಯೆಹೋವನಿಗೆ ಆನಂದಘೋಷ ಮಾಡಿರಿ!
7 ಸಮುದ್ರವೂ ಭೂಮಿಯೂ
ಅವುಗಳಲ್ಲಿರುವ ಸಮಸ್ತವೂ ಗಟ್ಟಿಯಾಗಿ ಹಾಡಲಿ.
8 ನದಿಗಳೇ, ಚಪ್ಪಾಳೆ ತಟ್ಟಿರಿ!
ಬೆಟ್ಟಗಳೇ, ಒಟ್ಟಾಗಿ ಹಾಡಿರಿ!
9 ಯೆಹೋವನ ಎದುರಿನಲ್ಲಿ ಹಾಡಿರಿ,
ಯಾಕೆಂದರೆ ಆತನು ಭೂಲೋಕವನ್ನು ಆಳಲು[a] ಬರುತ್ತಿದ್ದಾನೆ.
ಆತನು ಪ್ರಪಂಚವನ್ನು ನ್ಯಾಯವಾಗಿ ಆಳುತ್ತಾನೆ.
ಆತನು ಜನರನ್ನು ನೀತಿಯಿಂದ ಆಳುತ್ತಾನೆ.
ದೇವರ ಮಕ್ಕಳು ಲೋಕದ ವಿರುದ್ಧ ಜಯಗಳಿಸುವರು
5 ಯೇಸುವೇ ಕ್ರಿಸ್ತನೆಂದು ನಂಬುವವರು ದೇವರ ಮಕ್ಕಳಾಗಿದ್ದಾರೆ. ತಂದೆಯನ್ನು (ದೇವರನ್ನು) ಪ್ರೀತಿಸುವವನು ತಂದೆಯ ಮಕ್ಕಳನ್ನೂ ಪ್ರೀತಿಸುತ್ತಾನೆ. 2 ನಾವು ದೇವರ ಮಕ್ಕಳನ್ನು ಪ್ರೀತಿಸುತ್ತಿದ್ದೇವೆಂಬುದು ನಮಗೆ ಹೇಗೆ ತಿಳಿದಿದೆ? ನಾವು ದೇವರನ್ನು ಪ್ರೀತಿಸುತ್ತಿರುವುದರಿಂದ ಮತ್ತು ಆತನ ಆಜ್ಞೆಗಳಿಗೆ ವಿಧೇಯರಾಗಿರುವುದರಿಂದ ದೇವರ ಆಜ್ಞೆಗಳು ನಮಗೆ ತಿಳಿದಿವೆ. 3 ದೇವರನ್ನು ಪ್ರೀತಿಸುವುದು ಎಂದರೆ ಆತನ ಆಜ್ಞೆಗಳಿಗೆ ವಿಧೇಯರಾಗಿರುವುದು. ದೇವರ ಆಜ್ಞೆಗಳು ನಮಗೆ ಕಠಿಣವಾದವುಗಳಲ್ಲ. 4 ಏಕೆಂದರೆ ದೇವರಿಂದ ಹೊಸದಾಗಿ ಹುಟ್ಟಿರುವ ಪ್ರತಿಯೊಬ್ಬನೂ ಲೋಕದ ವಿರುದ್ಧ ಗೆಲ್ಲುವ ಶಕ್ತಿಯನ್ನು ಹೊಂದಿದ್ದಾನೆ. 5 ಲೋಕದ ವಿರುದ್ಧ ಜಯಗಳಿಸಿದ್ದು ನಮ್ಮ ನಂಬಿಕೆಯೇ. ಆದ್ದರಿಂದ ಲೋಕದ ವಿರುದ್ಧ ಜಯಗಳಿಸುವವನು ಯಾರು? ಯೇಸುವನ್ನು ದೇವರ ಮಗನೆಂದು ನಂಬುವ ವ್ಯಕ್ತಿಯು ಮಾತ್ರ ಜಯಗಳಿಸುತ್ತಾನೆ.
ದೇವರು ತನ್ನ ಮಗನನ್ನು ಕುರಿತು ನಮಗೆ ತಿಳಿಸಿದನು
6 ಬಂದಾತನೇ ಯೇಸು ಕ್ರಿಸ್ತನು. ಯೇಸು ನೀರಿನಿಂದ ಮಾತ್ರವಲ್ಲದೆ ರಕ್ತದಿಂದ ಬಂದನು. ಇದು ನಿಜವೆಂದು ನಮಗೆ ಆತ್ಮನು ತಿಳಿಸುತ್ತಾನೆ. ಏಕೆಂದರೆ ಆತ್ಮನು ಸತ್ಯಸ್ವರೂಪನಾಗಿದ್ದಾನೆ.
9 “ತಂದೆಯು ನನ್ನನ್ನು ಪ್ರೀತಿಸಿದಂತೆ ನಾನೂ ನಿಮ್ಮನ್ನು ಪ್ರೀತಿಸಿದೆನು. ಈಗ ನನ್ನ ಪ್ರೀತಿಯಲ್ಲಿ ನೆಲೆಗೊಂಡಿರಿ. 10 ನಾನು ನನ್ನ ತಂದೆಯ ಆಜ್ಞೆಗಳಿಗೆ ವಿಧೇಯನಾಗಿದ್ದು ಆತನ ಪ್ರೀತಿಯಲ್ಲಿ ನೆಲೆಗೊಂಡಿದ್ದೇನೆ. ಅದೇ ರೀತಿಯಲ್ಲಿ, ನೀವು ನನ್ನ ಆಜ್ಞೆಗಳಿಗೆ ವಿಧೇಯರಾದರೆ, ನೀವು ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ. 11 ನನಗಿರುವ ಆನಂದವನ್ನು ನೀವೂ ಹೊಂದಿಕೊಳ್ಳಬೇಕೆಂದು ನಾನು ನಿಮಗೆ ಈ ಸಂಗತಿಗಳನ್ನು ಹೇಳಿದ್ದೇನೆ. ನಿಮ್ಮ ಆನಂದವು ಪರಿಪೂರ್ಣವಾದ ಆನಂದವಾಗಿರಬೇಕೆಂದು ನಾನು ಬಯಸುತ್ತೇನೆ. 12 ನಾನು ನಿಮ್ಮನ್ನು ಪ್ರೀತಿಸಿದಂತೆ ನೀವೂ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನಾನು ನಿಮಗೆ ಕೊಡುವ ಆಜ್ಞೆಯಾಗಿದೆ. 13 ಗೆಳೆಯರಿಗಾಗಿ ಸ್ವಂತ ಪ್ರಾಣವನ್ನೇ ಕೊಡುವ ಪ್ರೀತಿಗಿಂತ ಮಿಗಿಲಾದ ಪ್ರೀತಿ ಯಾರಲ್ಲೂ ಇಲ್ಲ. 14 ನಾನು ಹೇಳುವ ಕಾರ್ಯಗಳನ್ನು ನೀವು ಮಾಡಿದರೆ, ನೀವು ನನ್ನ ಸ್ನೇಹಿತರು. 15 ಈಗ ನಾನು ನಿಮ್ಮನ್ನು ನನ್ನ ಸೇವಕರುಗಳೆಂದು ಕರೆಯುವುದಿಲ್ಲ. ಯಜಮಾನನ ಕೆಲಸಕಾರ್ಯಗಳು ಸೇವಕನಿಗೆ ತಿಳಿದಿರುವುದಿಲ್ಲ. ಆದರೆ ಈಗ ನಾನು ನಿಮ್ಮನ್ನು ನನ್ನ ಗೆಳೆಯರೆಂದು ಕರೆಯುತ್ತೇನೆ. ಏಕೆಂದರೆ ನನ್ನ ತಂದೆಯಿಂದ ಕೇಳಿದ ಪ್ರತಿಯೊಂದನ್ನೂ ನಾನು ನಿಮಗೆ ಹೇಳಿದ್ದೇನೆ.
16 “ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ; ನಾನು ನಿಮ್ಮನ್ನು ಆರಿಸಿಕೊಂಡೆನು. ನೀವು ಹೊರಟುಹೋಗಿ ಫಲಕೊಡಬೇಕು. ಇದೇ ನಾನು ನಿಮಗೆ ಕೊಟ್ಟಿರುವ ಕೆಲಸ. ಈ ಫಲವು ನಿಮ್ಮ ಜೀವನದಲ್ಲಿ ಶಾಶ್ವತವಾಗಿರಲಿ ಎಂಬುದೇ ನನ್ನ ಬಯಕೆ. ಹೀಗಿರಲಾಗಿ, ನೀವು ನನ್ನ ಹೆಸರಿನಲ್ಲಿ ಏನು ಕೇಳಿಕೊಂಡರೂ ತಂದೆಯು ಅದನ್ನು ನಿಮಗೆ ಕೊಡುವನು. 17 ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನನ್ನ ಆಜ್ಞೆ.
Kannada Holy Bible: Easy-to-Read Version. All rights reserved. © 1997 Bible League International