Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 98

ಸ್ತುತಿಗೀತೆ.

98 ಯೆಹೋವನಿಗೆ ಹೊಸಹಾಡನ್ನು ಹಾಡಿರಿ.
    ಆತನು ಅಮೋಘವಾದ ಕಾರ್ಯಗಳನ್ನು ಮಾಡಿದ್ದಾನೆ!
ಆತನ ಬಲಗೈಯೂ ಪರಿಶುದ್ಧ ಬಾಹುವೂ
    ಆತನಿಗೆ ಜಯವನ್ನು ಉಂಟುಮಾಡಿವೆ.
ಯೆಹೋವನು ತನ್ನ ರಕ್ಷಣಾಶಕ್ತಿಯನ್ನು ಜನಾಂಗಗಳಿಗೆ ತೋರಿದನು.
    ಆತನು ತನ್ನ ನೀತಿಯನ್ನು ಅವರಿಗೆ ಪ್ರಕಟಿಸಿದ್ದಾನೆ.
ಇಸ್ರೇಲರ ಕಡೆಗಿದ್ದ ಆತನ ಪ್ರೀತಿಸತ್ಯತೆಗಳನ್ನು ಆತನ ಜನರು ಜ್ಞಾಪಿಸಿಕೊಂಡಿದ್ದಾರೆ.
    ದೂರದೇಶಗಳ ಜನರು ನಮ್ಮ ದೇವರ ರಕ್ಷಣಾಶಕ್ತಿಯನ್ನು ಕಂಡಿದ್ದಾರೆ.
ಭೂನಿವಾಸಿಗಳೆಲ್ಲರೇ, ಯೆಹೋವನಿಗೆ ಆನಂದ ಘೋಷಮಾಡಿರಿ.
    ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ!
ಹಾರ್ಪ್‌ವಾದ್ಯಗಳೊಡನೆ, ಯೆಹೋವನನ್ನು ಕೊಂಡಾಡಿರಿ.
    ಹಾರ್ಪ್‌ವಾದ್ಯಗಳನ್ನು ನುಡಿಸುತ್ತಾ ಆತನನ್ನು ಸುತ್ತಿಸಿರಿ.
ತುತ್ತೂರಿಗಳನ್ನೂ ಕೊಂಬುಗಳನ್ನೂ ಊದಿರಿ.
    ನಮ್ಮ ರಾಜನಾದ ಯೆಹೋವನಿಗೆ ಆನಂದಘೋಷ ಮಾಡಿರಿ!
ಸಮುದ್ರವೂ ಭೂಮಿಯೂ
    ಅವುಗಳಲ್ಲಿರುವ ಸಮಸ್ತವೂ ಗಟ್ಟಿಯಾಗಿ ಹಾಡಲಿ.
ನದಿಗಳೇ, ಚಪ್ಪಾಳೆ ತಟ್ಟಿರಿ!
    ಬೆಟ್ಟಗಳೇ, ಒಟ್ಟಾಗಿ ಹಾಡಿರಿ!
ಯೆಹೋವನ ಎದುರಿನಲ್ಲಿ ಹಾಡಿರಿ,
    ಯಾಕೆಂದರೆ ಆತನು ಭೂಲೋಕವನ್ನು ಆಳಲು[a] ಬರುತ್ತಿದ್ದಾನೆ.
ಆತನು ಪ್ರಪಂಚವನ್ನು ನ್ಯಾಯವಾಗಿ ಆಳುತ್ತಾನೆ.
    ಆತನು ಜನರನ್ನು ನೀತಿಯಿಂದ ಆಳುತ್ತಾನೆ.

ಯೆಶಾಯ 49:5-6

ನಾನು ಯೆಹೋವನ ಸೇವಕನಾಗಿರಬೇಕೆಂದು
    ಆತನು ನನ್ನನ್ನು ನನ್ನ ತಾಯಿಯ ಗರ್ಭದಲ್ಲಿಯೇ ರೂಪಿಸಿದನು.
ಇಸ್ರೇಲರನ್ನೂ ಯಾಕೋಬನನ್ನೂ ಆತನ ಬಳಿಗೆ ಮತ್ತೆ ಕರೆದುಕೊಂಡು ಬರಲು
    ಆತನು ನನ್ನನ್ನು ರೂಪಿಸಿದನು.
ಯೆಹೋವನು ನನ್ನನ್ನು ಸನ್ಮಾನಿಸುವನು.
    ನಾನು ಆತನಿಂದ ಬಲವನ್ನು ಹೊಂದುವೆನು.

ಯೆಹೋವನು ನನಗೆ ಹೇಳಿದ್ದೇನೆಂದರೆ:
    “ನನ್ನ ಸೇವಕನಾದ ಯಾಕೋಬನ ಕುಲಗಳನ್ನು ಮೇಲೆತ್ತಿ
    ಇಸ್ರೇಲಿನ ಅಳಿದುಳಿದವರನ್ನು ಪುನಃಸ್ಥಾಪಿಸುವೆ.
ಆದರೆ ನಿನಗೆ ಇನ್ನೊಂದು ಕೆಲಸವಿದೆ. ಅದು ಇದಕ್ಕಿಂತಲೂ ಮಹತ್ತಾದದ್ದು.
    ನಾನು ನಿನ್ನನ್ನು ಎಲ್ಲಾ ಜನಾಂಗಗಳಿಗೆ ಬೆಳಕನ್ನಾಗಿ ಮಾಡುವೆನು.
    ಲೋಕದ ಎಲ್ಲಾ ಜನರನ್ನು ರಕ್ಷಿಸಲು ನೀನು ನನ್ನ ಮಾರ್ಗವಾಗುವೆ.”

ಅಪೊಸ್ತಲರ ಕಾರ್ಯಗಳು 10:1-34

ಪೇತ್ರ ಮತ್ತು ಕೊರ್ನೇಲಿಯ

10 ಸೆಜರೇಯ ಪಟ್ಟಣದಲ್ಲಿ ಕೊರ್ನೇಲಿಯ ಎಂಬವನಿದ್ದನು. ರೋಮಿನ ಸೈನ್ಯಕ್ಕೆ ಸೇರಿದ “ಇಟಲಿಯ ದಳ”ದಲ್ಲಿ ಅವನು ಅಧಿಕಾರಿಯಾಗಿದ್ದನು. ಕೊರ್ನೇಲಿಯನು ದೈವಭಕ್ತನಾಗಿದ್ದನು. ಅವನು ಮತ್ತು ಅವನ ಕುಟುಂಬದಲ್ಲಿ ವಾಸವಾಗಿದ್ದ ಇತರ ಎಲ್ಲಾ ಜನರು ನಿಜದೇವರನ್ನು ಆರಾಧಿಸುತ್ತಿದ್ದರು. ಅವನು ಬಡವರಿಗೆ ಧಾರಾಳವಾಗಿ ಹಣವನ್ನು ಕೊಡುತ್ತಿದ್ದನು. ಯಾವಾಗಲೂ ದೇವರಲ್ಲಿ ಪ್ರಾರ್ಥಿಸುತ್ತಿದ್ದನು. ಒಂದು ಮಧ್ಯಾಹ್ನ ಸುಮಾರು ಮೂರು ಗಂಟೆಯಲ್ಲಿ ಕೊರ್ನೇಲಿಯನಿಗೆ ಒಂದು ದರ್ಶನವಾಯಿತು. ಅವನು ಅದನ್ನು ಸ್ಪಷ್ಟವಾಗಿ ಕಂಡನು. ಆ ದರ್ಶನದಲ್ಲಿ ದೇವದೂತನೊಬ್ಬನು ಅವನ ಬಳಿಗೆ ಬಂದು, “ಕೊರ್ನೇಲಿಯನೇ” ಎಂದು ಕರೆದನು.

ಕೊರ್ನೇಲಿಯನು ದೇವದೂತನನ್ನು ಕಂಡು ಭಯದಿಂದ “ಸ್ವಾಮೀ, ನಿಮಗೇನು ಬೇಕು?” ಎಂದು ಕೇಳಿದನು.

ಆ ದೇವದೂತನು ಅವನಿಗೆ, “ದೇವರು ನಿನ್ನ ಪ್ರಾರ್ಥನೆಗಳನ್ನು ಕೇಳಿದ್ದಾನೆ. ನೀನು ಬಡವರಿಗೆ ಕೊಟ್ಟವುಗಳನ್ನು ಆತನು ನೋಡಿದ್ದಾನೆ. ದೇವರು ನಿನ್ನನ್ನು ಮೆಚ್ಚಿಕೊಂಡಿದ್ದಾನೆ. ಈಗ ಸೀಮೋನ ಎಂಬ ವ್ಯಕ್ತಿಯನ್ನು ಕರೆದುಕೊಂಡು ಬರುವುದಕ್ಕಾಗಿ ನೀನು ಜನರನ್ನು ಜೊಪ್ಪ ಪಟ್ಟಣಕ್ಕೆ ಕಳುಹಿಸು. ಸೀಮೋನನನ್ನು ‘ಪೇತ್ರ’ ಎಂತಲೂ ಕರೆಯುತ್ತಾರೆ. ಸೀಮೋನನು ಚರ್ಮಕಾರನ ಮನೆಯಲ್ಲಿ ಇಳಿದುಕೊಂಡಿದ್ದಾನೆ. ಅವನ ಮನೆಯು ಸಮುದ್ರ ತೀರದಲ್ಲಿದೆ” ಎಂದು ಹೇಳಿದನು. ಕೊರ್ನೇಲಿಯನೊಂದಿಗೆ ಮಾತಾಡಿದ ದೇವದೂತನು ಹೊರಟುಹೋದನು. ಬಳಿಕ ಕೊರ್ನೇಲಿಯನು ತನ್ನ ಸೇವಕರಲ್ಲಿ ಇಬ್ಬರನ್ನೂ ಒಬ್ಬ ಸೈನಿಕನನ್ನೂ ಕರೆದನು. ಈ ಸೈನಿಕನು ದೈವಭಕ್ತನಾಗಿದ್ದನು. ಕೊರ್ನೇಲಿಯನ ಆಪ್ತಸಹಾಯಕರಲ್ಲಿ ಇವನೂ ಒಬ್ಬನಾಗಿದ್ದನು. ಕೊರ್ನೇಲಿಯನು ಈ ಮೂವರಿಗೆ ಪ್ರತಿಯೊಂದನ್ನೂ ವಿವರಿಸಿದನು. ಬಳಿಕ ಅವರನ್ನು ಜೊಪ್ಪಕ್ಕೆ ಕಳುಹಿಸಿದನು.

ಮರುದಿನ ಈ ಜನರು ಜೊಪ್ಪಕ್ಕೆ ಸಮೀಪಿಸಿದಾಗ ಮಧ್ಯಾಹ್ನದ ಸಮಯವಾಗಿತ್ತು. ಆ ಸಮಯದಲ್ಲಿ ಪೇತ್ರನು ಪ್ರಾರ್ಥಿಸುವುದಕ್ಕಾಗಿ ಮಾಳಿಗೆಯ ಮೇಲೆ ಹೋದನು. 10 ಪೇತ್ರನಿಗೆ ಹಸಿವೆಯಾಗಿ ಊಟಮಾಡಬೇಕೆನಿಸಿತು. ಅಲ್ಲಿ ಅವನಿಗಾಗಿ ಅಡಿಗೆ ಮಾಡುತ್ತಿದ್ದರು. ಇತ್ತ, ಪೇತ್ರನಿಗೊಂದು ದರ್ಶನವಾಯಿತು. 11 ತೆರೆದ ಆಕಾಶದಿಂದ ಯಾವುದೋ ಒಂದು ವಸ್ತು ಇಳಿದು ಬರುತ್ತಿರುವುದನ್ನು ಅವನು ಕಂಡನು. ಅದು ದೊಡ್ಡ ತಟ್ಟೆಯಂತಿತ್ತು. ಅದರ ನಾಲ್ಕು ಮೂಲೆಗಳಲ್ಲಿ ಹಗ್ಗಗಳನ್ನು ಕಟ್ಟಿ ಭೂಮಿಯ ಮೇಲೆ ಇಳಿಯಬಿಡಲಾಗಿತ್ತು. 12 ಅದರಲ್ಲಿ ಎಲ್ಲಾ ಬಗೆಯ ಪ್ರಾಣಿಗಳಿದ್ದವು. ಅಂದರೆ ನಡೆದಾಡುವ ಪ್ರಾಣಿಗಳು, ಹರಿದಾಡುವ ಕ್ರಿಮಿಕೀಟಗಳು ಮತ್ತು ಹಾರಾಡುವ ಪಕ್ಷಿಗಳು ಇದ್ದವು. 13 ಆಗ ವಾಣಿಯೊಂದು, “ಪೇತ್ರನೇ, ಎದ್ದೇಳು! ಕೊಯ್ದು ತಿನ್ನು” ಎಂದು ಹೇಳಿತು.

14 ಆದರೆ ಪೇತ್ರನು, “ಪ್ರಭುವೇ, ನಾನು ಹಾಗೆ ಮಾಡಲಾರೆ! ಅಪವಿತ್ರವಾದದ್ದನ್ನು ಮತ್ತು ಅಶುದ್ಧವಾದದ್ದನ್ನು ನಾನೆಂದೂ ತಿಂದವನಲ್ಲ” ಎಂದು ಹೇಳಿದನು.

15 ಆದರೆ ಆ ವಾಣಿಯು ಅವನಿಗೆ, “ದೇವರು ಇವುಗಳನ್ನು ಶುದ್ಧೀಕರಿಸಿದ್ದಾನೆ. ಇವುಗಳನ್ನು ‘ಅಪವಿತ್ರ’ವೆಂದು ಹೇಳಬೇಡ” ಎಂದು ಮತ್ತೆ ಹೇಳಿತು. 16 ಹೀಗೆ ಮೂರು ಸಾರಿ ಆಯಿತು. ಬಳಿಕ ಅವುಗಳನ್ನೆಲ್ಲ ಆಕಾಶಕ್ಕೆ ಹಿಂತೆಗೆದುಕೊಳ್ಳಲಾಯಿತು. 17 ಪೇತ್ರನು ತಾನು ಕಂಡ ಈ ದರ್ಶನದ ಅರ್ಥವೇನಿರಬಹುದೆಂದು ಆಶ್ಚರ್ಯಗೊಂಡನು.

ಅಷ್ಟರಲ್ಲಿಯೇ, ಕೊರ್ನೇಲಿಯನು ಕಳುಹಿಸಿದ್ದ ಜನರು ಸೀಮೋನನ ಮನೆಯನ್ನು ಕಂಡುಕೊಂಡಿದ್ದರು. ಅವರು ಬಾಗಿಲ ಬಳಿಯಲ್ಲಿ ನಿಂತುಕೊಂಡು, 18 “ಸೀಮೋನ್ ಪೇತ್ರನು ಇಲ್ಲಿ ವಾಸವಾಗಿರುವನೇ?” ಎಂದು ಕೇಳಿದರು.

19 ಈ ದರ್ಶನದ ಬಗ್ಗೆ ಪೇತ್ರನು ಇನ್ನೂ ಆಲೋಚಿಸುತ್ತಿದ್ದನು. ಆದರೆ ಪವಿತ್ರಾತ್ಮನು ಅವನಿಗೆ, “ಇಗೋ, ನಿನ್ನನ್ನು ಮೂರು ಜನರು ಹುಡುಕುತ್ತಾ ಬಂದಿದ್ದಾರೆ. 20 ನೀನೆದ್ದು ಕೆಳಗಿಳಿದು ಅವರೊಂದಿಗೆ ಹೋಗು. ಯಾವ ಪ್ರಶ್ನೆಗಳನ್ನೂ ಕೇಳಬೇಡ. ನಾನೇ ಅವರನ್ನು ನಿನ್ನ ಬಳಿಗೆ ಕಳುಹಿಸಿದ್ದೇನೆ” ಎಂದು ಹೇಳಿದನು. 21 ಆದ್ದರಿಂದ ಪೇತ್ರನು ಕೆಳಗಿಳಿದು ಆ ಜನರ ಬಳಿಗೆ ಹೋಗಿ, “ನೀವು ಹುಡುಕುತ್ತಿರುವ ವ್ಯಕ್ತಿ ನಾನೇ, ನೀವು ಇಲ್ಲಿಗೇಕೆ ಬಂದಿರಿ?” ಎಂದು ಕೇಳಿದನು.

22 ಆ ಜನರು, “ಕೊರ್ನೇಲಿಯ ಎಂಬ ಒಬ್ಬ ಸೇನಾಧಿಕಾರಿ ಇದ್ದಾನೆ. ಅವನು ಧಾರ್ಮಿಕ ವ್ಯಕ್ತಿ. ಅವನು ದೇವರನ್ನು ಆರಾಧಿಸುತ್ತಾನೆ. ಯೆಹೂದ್ಯ ಜನರೆಲ್ಲರೂ ಅವನನ್ನು ಗೌರವಿಸುತ್ತಾರೆ. ನಿನ್ನನ್ನು ತನ್ನ ಮನೆಗೆ ಆಹ್ವಾನಿಸಿ ನೀನು ಹೇಳುವ ಸಂಗತಿಗಳನ್ನು ಕೇಳಬೇಕೆಂದು ದೇವದೂತನೊಬ್ಬನು ಕೊರ್ನೇಲಿಯನಿಗೆ ತಿಳಿಸಿದ್ದಾನೆ” ಎಂದು ಹೇಳಿದರು. 23 ಪೇತ್ರನು ಅವರನ್ನು ಒಳಗೆ ಕರೆದು, ಆ ರಾತ್ರಿ ಅಲ್ಲೇ ಇರಬೇಕೆಂದು ಕೇಳಿಕೊಂಡನು.

ಮರುದಿನ ಪೇತ್ರನು ಸಿದ್ಧನಾಗಿ, ಆ ಮೂವರೊಂದಿಗೆ ಹೊರಟನು. ಜೊಪ್ಪದ ವಿಶ್ವಾಸಿಗಳಲ್ಲಿ ಕೆಲವರು ಅವನೊಂದಿಗೆ ಹೋದರು. 24 ಮರುದಿನ ಅವರು ಸೆಜರೇಯ ಪಟ್ಟಣವನ್ನು ತಲುಪಿದರು. ಕೊರ್ನೇಲಿಯನು ಅವರಿಗೋಸ್ಕರ ಕಾಯುತ್ತಿದ್ದನು. ಅವನು ತನ್ನ ಸಂಬಂಧಿಕರನ್ನು ಮತ್ತು ಆಪ್ತಸ್ನೇಹಿತರನ್ನು ಆಗಲೇ ತನ್ನ ಮನೆಗೆ ಆಹ್ವಾನಿಸಿದ್ದನು.

25 ಪೇತ್ರನು ಮನೆಯನ್ನು ಪ್ರವೇಶಿಸುತ್ತಿರಲು ಕೊರ್ನೇಲಿಯನು ಅವನನ್ನು ಎದುರುಗೊಂಡನು. ಕೊರ್ನೇಲಿಯನು ಪೇತ್ರನ ಪಾದಕ್ಕೆ ಅಡ್ಡಬಿದ್ದು ನಮಸ್ಕಾರ ಮಾಡಿದನು. 26 ಆದರೆ ಪೇತ್ರನು ಅವನನ್ನು ಮೇಲಕ್ಕೆಬ್ಬಿಸಿ, “ಎದ್ದುನಿಲ್ಲು! ನಾನೂ ನಿನ್ನಂತೆಯೇ ಕೇವಲ ಒಬ್ಬ ಮನುಷ್ಯನು” ಎಂದು ಹೇಳಿದನು. 27 ಪೇತ್ರನು ಕೊರ್ನೇಲಿಯನೊಂದಿಗೆ ಮಾತನ್ನು ಮುಂದುವರಿಸಿದನು. ಬಳಿಕ ಪೇತ್ರನು ಒಳಗೆ ಹೋದಾಗ, ಅಲ್ಲಿ ನೆರೆದು ಬಂದಿದ್ದ ಜನರ ದೊಡ್ಡ ಗುಂಪನ್ನು ಕಂಡನು.

28 ಪೇತ್ರನು ಅವರಿಗೆ, “ಯೆಹೂದ್ಯನೊಬ್ಬನು ಅನ್ಯಜನರೊಂದಿಗೆ ಸಂಪರ್ಕವಿಟ್ಟುಕೊಳ್ಳುವುದಾಗಲಿ ಅವರನ್ನು ಭೇಟಿಮಾಡುವುದಾಗಲಿ ನಮ್ಮ ಯೆಹೂದ್ಯ ಧರ್ಮಶಾಸ್ತ್ರಕ್ಕೆ ವಿರುದ್ಧವಾದದ್ದು ಎಂಬುದು ನಿಮಗೆ ಗೊತ್ತೇ ಇದೆ. ಆದರೆ ಯಾವ ವ್ಯಕ್ತಿಯನ್ನೂ ಅಪವಿತ್ರನೆಂದಾಗಲಿ ಅಶುದ್ಧನೆಂದಾಗಲಿ ಕರೆಯಕೂಡದೆಂದು ದೇವರು ನನಗೆ ತೋರಿಸಿಕೊಟ್ಟಿದ್ದಾನೆ. 29 ಆದ್ದರಿಂದ, ನನ್ನನ್ನು ಇಲ್ಲಿಗೆ ಬರಬೇಕೆಂದು ಕರೆದ ಜನರೊಂದಿಗೆ ನಾನು ವಾದಮಾಡಲಿಲ್ಲ. ಆದರೆ ನೀವು ನನ್ನನ್ನು ಯಾಕೆ ಕರೆಸಿದಿರೆಂದು ದಯವಿಟ್ಟು ಈಗ ಹೇಳಿರಿ” ಎಂದನು.

30 ಆಗ ಕೊರ್ನೇಲಿಯನು, “ನಾಲ್ಕು ದಿನಗಳ ಹಿಂದೆ, ನಾನು ನನ್ನ ಮನೆಯಲ್ಲಿ ಪ್ರಾರ್ಥಿಸುತ್ತಿದ್ದೆನು. ಆಗ ಮಧ್ಯಾಹ್ನದ ಸುಮಾರು ಮೂರು ಗಂಟೆ ಸಮಯವಾಗಿತ್ತು. ಇದ್ದಕ್ಕಿದ್ದಂತೆ ಒಬ್ಬ ಮನುಷ್ಯನು ನನ್ನ ಮುಂದೆ ನಿಂತನು. ಅವನು ಧರಿಸಿಕೊಂಡಿದ್ದ ಬಟ್ಟೆಗಳು ಪ್ರಕಾಶಮಾನವಾಗಿ ಹೊಳೆಯುತ್ತಿದ್ದವು. 31 ಆ ಮನುಷ್ಯನು, ‘ಕೊರ್ನೇಲಿಯನೇ! ದೇವರು ನಿನ್ನ ಪ್ರಾರ್ಥನೆಯನ್ನು ಕೇಳಿದ್ದಾನೆ. ನೀನು ಬಡಜನರಿಗೆ ಕೊಡುವಂಥವುಗಳನ್ನು ನೋಡಿದ್ದಾನೆ. ದೇವರು ನಿನ್ನನ್ನು ಮೆಚ್ಚಿಕೊಂಡಿದ್ದಾನೆ. 32 ಆದ್ದರಿಂದ ಕೆಲವು ಜನರನ್ನು ಜೊಪ್ಪಪಟ್ಟಣಕ್ಕೆ ಕಳುಹಿಸಿ ಸೀಮೋನ್ ಪೇತ್ರನನ್ನು ಬರಬೇಕೆಂದು ಕೇಳಿಕೊ. ಪೇತ್ರನು ಚರ್ಮಕಾರನಾದ ಸೀಮೋನ ಎಂಬವನ ಮನೆಯಲ್ಲಿ ಇಳಿದುಕೊಂಡಿದ್ದಾನೆ. ಅವನ ಮನೆಯು ಸಮುದ್ರ ತೀರದಲ್ಲಿದೆ’ ಎಂದನು. 33 ಆದ್ದರಿಂದ, ನಾನು ತಕ್ಷಣ ನಿನಗೆ ಕರೆಕಳುಹಿಸಿದೆ. ನೀನು ಇಲ್ಲಿಗೆ ಬಂದದ್ದು ಉಪಕಾರವಾಯಿತು. ನಮಗೆ ತಿಳಿಸಬೇಕೆಂದು ಪ್ರಭುವು ನಿನಗೆ ಆಜ್ಞಾಪಿಸಿರುವ ಪ್ರತಿಯೊಂದನ್ನು ಕೇಳಲು ನಾವೆಲ್ಲರು ದೇವರ ಸನ್ನಿಧಿಯಲ್ಲಿ ಸೇರಿದ್ದೇವೆ” ಎಂದು ಹೇಳಿದನು.

ಕೊರ್ನೇಲಿಯನ ಮನೆಯಲ್ಲಿ ಪೇತ್ರನ ಪ್ರಸಂಗ

34 ಪೇತ್ರನು ಮಾತಾಡಲಾರಂಭಿಸಿ ಹೀಗೆಂದನು: “ದೇವರಿಗೆ ಎಲ್ಲರೂ ಒಂದೇ ಎಂಬುದು ನನಗೆ ಈಗ ಅರ್ಥವಾಯಿತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International